Kodagu
ವಿರಾಜಪೇಟೆಯಲ್ಲಿ ’ಕಲ್ಲು ಬಾಯ್ಸ್’ ವತಿಯಿಂದ ೪ನೇ ವರ್ಷದ ಅಂತರರಾಜ್ಯ ಹೊನಲು ಬೆಳಕಿನ ಫುಟ್ಬಾಲ್ ಪಂದ್ಯಾಟ
ವಿರಾಜಪೇಟೆ: ವಿರಾಜಪೇಟೆಯ ಆರ್ಜಿ ಗ್ರಾಮದ ಕಲ್ಲುಬಾಣೆಯ ’ಕಲ್ಲುಬಾಯ್ಸ್’ ವತಿಯಿಂದ ಆಯೋಜಿಸಲಾಗಿರುವ ನಾಲ್ಕನೇ ವರ್ಷದ ಅಂತರರಾಜ್ಯ ೫-ಎ-ಸೈಡ್) ಹೊನಲು ಬೆಳಕಿನ ಫುಟ್ಬಾಲ್ ಪಂದ್ಯಾಟಕ್ಕೆ ವಿರಾಜಪೇಟೆ ತಾಲೂಕು ಮೈದಾನದಲ್ಲಿ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ವಿರಾಜಪೇಟೆ ತಾಲ್ಲೂಕು ಅಕ್ರಮ-ಸಕ್ರಮ ಸಮಿತಿಯ ಅಧ್ಯಕ್ಷರಾದ ಆರ್.ಕೆ. ಅಬ್ದುಲ್ ಸಲಾಂ ಮಾತನಾಡಿ, ಯುವಕರು ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿರುವುದು ಶ್ಲಾಘನೀಯ. ನಾಲ್ಕು ದಿನಗಳ ಕಾಲ ನಡೆಯುವ ಈ ಫುಟ್ಬಾಲ್ ಪಂದ್ಯಾಟವು ಯಾವುದೇ ಅಡೆತಡೆಯಿಲ್ಲದೆ ಅತ್ಯಂತ ಯಶಸ್ವಿಯಾಗಿ ನೆರವೇರಲಿ ಎಂದು ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಾಹಿತಿಗಳಾದ ರಜಿತಾ ಕಾರ್ಯಪ್ಪ ಮಾತನಾಡಿ, ಇಂತಹ ಪಂದ್ಯಾಟಗಳು ಗ್ರಾಮೀಣ ಭಾಗದ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಹೊರತರುವ ಉತ್ತಮ ವೇದಿಕೆಯಾಗಿದೆ. ಇದು ಕೇವಲ ಕ್ರೀಡೆಯಷ್ಟೇ ಅಲ್ಲದೆ, ಜನರ ನಡುವೆ ಪರಸ್ಪರ ಬೆರೆಯುವ, ಪ್ರೀತಿ ಹಾಗೂ ಸಾಂಸ್ಕೃತಿಕ ಸೌಹಾರ್ದತೆಯನ್ನು ಬೆಳೆಸುವ ಒಂದು ದೊಡ್ಡ ಹಬ್ಬವಾಗಿದೆ. ವಿರಾಜಪೇಟೆಯಲ್ಲಿ ಸುಸಜ್ಜಿತ ಮೈದಾನದ ಕೊರತೆಯಿದ್ದು, ಇರುವ ಈ ತಾಲ್ಲೂಕು ಮೈದಾನದ ಸುತ್ತಲೂ ಶಾಶ್ವತ ಗ್ಯಾಲರಿ ನಿರ್ಮಾಣ ಮಾಡಿ ಉತ್ತಮ ರೀತಿಯಲ್ಲಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಆಯೋಜಕರು ಸರಕಾರದ ಗಮನ ಸೆಳೆಯುವ ಕೆಲಸ ಮಾಡಬೇಕು ಎಂದು ಸಲಹೆ ನೀಡುವುದರ ಜೊತೆಗೆ ಎಲ್ಲಾ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.
ಪುರಸಭೆ ಮಾಜಿ ಸದಸ್ಯರಾದ ಸಿ.ಕೆ. ಪೃಥ್ವಿನಾಥ್ ಹಾಗೂ ಎಸ್.ಎಚ್. ಮತೀನ್ ಅವರು ಮಾತನಾಡಿ, ಕಲ್ಲು ಬಾಯ್ಸ್ ತಂಡದ ಕ್ರೀಡಾ ಪ್ರೇಮವನ್ನು ಪ್ರಶಂಸಿಸಿ, ಪಂದ್ಯಾಟದ ಯಶಸ್ಸಿಗೆ ಶುಭಾಶಯ ಕೋರಿದರು.
ಉದ್ಘಾಟನಾ ಪಂದ್ಯದಲ್ಲಿ ಫಿಫಾ ಪೆರಂಬಾಡಿ ತಂಡಕ್ಕೆ ಭರ್ಜರಿ ಜಯ:
ಪಂದ್ಯಾಟದ ಮೊದಲ ದಿನದ ಆರಂಭಿಕ ಪಂದ್ಯದಲ್ಲಿ ಫಿಫಾ ಪೆರಂಬಾಡಿ ತಂಡವು ಸಿವೈಸಿ ಒಂಟಿಯಂಗಡಿ ತಂಡದ ವಿರುದ್ಧ ಭರ್ಜರಿ ಪ್ರದರ್ಶನ ನೀಡಿತು. ಎದುರಾಳಿ ತಂಡದ ವಿರುದ್ಧ ಬರೋಬ್ಬರಿ ೬ ಗೋಲುಗಳನ್ನು ಬಾರಿಸುವ ಮೂಲಕ ಫಿಫಾ ಪೆರಂಬಾಡಿ ತಂಡವು ಭರ್ಜರಿ ಗೆಲುವು ಸಾಧಿಸಿ ಮುಂದಿನ ಹಂತಕ್ಕೆ ಲಗ್ಗೆಯಿಟ್ಟಿತು.
ಕಾರ್ಯಕ್ರಮದಲ್ಲಿ ಕಲ್ಲುಬಾಣೆಯ ಚೇಕು, ಜಾಫರ್, ಹಿರಿಯ ಫುಟ್ಬಾಲ್ ಆಟಗಾರರಾದ ಮರ್ವಿಲ್ ಲೋಬೋ, ರಾಜೇಶ್ ಸೇರಿದಂತೆ ಕಲ್ಲು ಬಾಯ್ಸ್ ತಂಡದ ಅಧ್ಯಕ್ಷ ರಹೀಮ್ ಇಚ್ಚಿಪ್ಪ, ಎಲ್ಲಾ ಸದಸ್ಯರು ಹಾಗೂ ನೂರಾರು ಕ್ರೀಡಾಭಿಮಾನಿಗಳು ಹಾಜರಿದ್ದರು.
Kodagu
ರಾಜ್ಯ ಸರಕಾರದ ಜನವಿರೋಧಿ ಬೆಲೆ ಏರಿಕೆ ನೀತಿಯನ್ನು ಖಂಡಿಸಿ ಪ್ರತಿಭಟನೆ
ವಿರಾಜಪೇಟೆ: ರಾಜ್ಯ ಸರಕಾರದ ಜನವಿರೋಧಿ ಬೆಲೆ ಏರಿಕೆ ನೀತಿಯನ್ನು ಖಂಡಿಸಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ವಿರಾಜಪೇಟೆ ಶಾಖೆಯ ವತಿಯಿಂದ ಪಟ್ಟಣದ ಗಡಿಯಾರ ಕಂಬದ ಬಳಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ’ಭರವಸೆಗಳ ಸುರಿಮಳೆ ಬರೀ ಬೊಗಳೆ..! ಸಿಕ್ಕಿದೆ ಬೆಲೆ ಏರಿಕೆಯ ಬರೆಗಳ ಮಾಲೆ..!’ ಎಂಬ ಘೋಷವಾಕ್ಯದ ಬ್ಯಾನರ್ ಹಿಡಿದು ಪಕ್ಷದ ಮುಖಂಡರು, ವಿವಿಧ ಸಂಘಟನೆಯ ಪದಾಧಿಕಾರಿಗಳು ಹಾಗೂ ನೂರಾರು ಕಾರ್ಯಕರ್ತರು ರಾಜ್ಯ ಸರಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಘೋಷಣೆಗಳನ್ನು ಕೂಗಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಿಪಿಐ(ಎಂ) ಜಿಲ್ಲಾ ಸಂಘಟನಾ ಸಮಿತಿ ಸದಸ್ಯ ಎ.ಸಿ. ಸಾಬು, ರಾಜ್ಯದ ಎಲ್ಲೆಡೆ ಸಿಪಿಐ(ಎಂ) ವತಿಯಿಂದ ಬೆಲೆ ಏರಿಕೆ ವಿರುದ್ಧ ನಿರಂತರ ಹೋರಾಟಗಳು ನಡೆಯುತ್ತಿವೆ. ಚುನಾವಣೆಗೂ ಮುನ್ನ ಜನತೆಗೆ ಆಕರ್ಷಕ ಭರವಸೆಗಳ ಸುರಿಮಳೆಗೈದ ರಾಜ್ಯ ಸರಕಾರ, ಅಧಿಕಾರಕ್ಕೆ ಬಂದ ನಂತರ ಅಗತ್ಯ ವಸ್ತುಗಳ ಬೆಲೆಯನ್ನು ಗಗನಕ್ಕೇರಿಸುವ ಮೂಲಕ ಜನಸಾಮಾನ್ಯರ ಬದುಕಿನ ಮೇಲೆ ಬರೆ ಎಳೆದಿದೆ. ಒಂದು ಕೈಯಲ್ಲಿ ಗ್ಯಾರಂಟಿ ಯೋಜನೆಗಳನ್ನು ನೀಡಿ, ಮತ್ತೊಂದು ಕೈಯಲ್ಲಿ ದಿನನಿತ್ಯದ ವಸ್ತುಗಳ ಬೆಲೆ, ವಿದ್ಯುತ್ ದರ, ಇಂಧನ, ಬಸ್ ಪ್ರಯಾಣ ದರ ಹಾಗೂ ವಿವಿಧ ತೆರಿಗೆಗಳನ್ನು ಹೆಚ್ಚಿಸುವ ಮೂಲಕ ಬಡ ಹಾಗೂ ಮಧ್ಯಮ ವರ್ಗದವರ ಜೇಬಿಗೆ ಕತ್ತರಿ ಹಾಕುತ್ತಿದೆ. ಸರಕಾರದ ಈ ದ್ವಂದ್ವ ನೀತಿಯಿಂದಾಗಿ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ ಎಂದು ಕಿಡಿಕಾರಿದರು.
ಸಿಪಿಐ(ಎಂ) ಜಿಲ್ಲಾ ಸಮಿತಿ ಸದಸ್ಯಖಚಿಆ ಪದ್ಮಿನಿ ಶ್ರೀಧರ್ ಮಾತನಾಡಿ, ಬೆಲೆ ಏರಿಕೆಯ ನೇರ ಹೊಡೆತ ಮಹಿಳೆಯರು ಮತ್ತು ಕುಟುಂಬ ನಿರ್ವಹಣೆ ಮಾಡುವ ಗೃಹಿಣಿಯರ ಮೇಲೆ ಬಿದ್ದಿದೆ. ಅಡುಗೆ ಅನಿಲ, ಅಡುಗೆ ಎಣ್ಣೆ, ಬೇಳೆಕಾಳುಗಳು, ತರಕಾರಿ ಸೇರಿದಂತೆ ನಿತ್ಯೋಪಯೋಗಿ ವಸ್ತುಗಳ ಬೆಲೆ ಗಗನಕ್ಕೇರಿರುವುದರಿಂದ ಬಡ ಕುಟುಂಬಗಳು ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಹಿಳೆಯರ ಸಬಲೀಕರಣದ ಮಾತನಾಡುವ ಸರ್ಕಾರ, ಬೆಲೆ ಏರಿಕೆಯ ಮೂಲಕ ಮಹಿಳೆಯರ ಆರ್ಥಿಕ ಸ್ವಾವಲಂಬನೆಯನ್ನು ಕಸಿದುಕೊಳ್ಳುತ್ತಿದೆ. ಕೂಡಲೇ ಸರ್ಕಾರ ಬೆಲೆ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿದ್ದಲ್ಲಿ ಮಹಿಳಾ ಸಂಘಟನೆಗಳ ನೇತೃತ್ವದಲ್ಲಿ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.
ಸಿಪಿಐಎಂ ವಿರಾಜಪೇಟೆ ಶಾಖಾ ಕಾರ್ಯದರ್ಶಿ ಕೆ.ಎಸ್. ರಮೇಶ್ (ಸಾಜಿ) ಮಾತನಾಡಿ, ದಿನನಿತ್ಯದ ಆಹಾರ ಪದಾರ್ಥಗಳು, ಇಂಧನ ಹಾಗೂ ವಿದ್ಯುತ್ ದರ ಏರಿಕೆಯಿಂದ ಸಾಮಾನ್ಯ ಜನರು, ರೈತರು ಮತ್ತು ಕೂಲಿ ಕಾರ್ಮಿಕರು ಜೀವನ ನಡೆಸುವುದೇ ಅಪಾರ ಸಂಕಷ್ಟಕರವಾಗಿದೆ. ಜನಸಾಮಾನ್ಯರ ಹಿತಾಸಕ್ತಿಯನ್ನು ಸಂಪೂರ್ಣವಾಗಿ ಕಡೆಗಣಿಸಿರುವ ಸರಕಾರದ ಧೋರಣೆ ಖಂಡನೀಯವಾಗಿದ್ದು, ಬಡವರ ಪರವಾಗಿ ನಿಲ್ಲಬೇಕಿದ್ದ ಆಡಳಿತ ವ್ಯವಸ್ಥೆಯೇ ಕಾರ್ಪೊರೇಟ್ ಶಕ್ತಿಗಳ ಪರವಾಗಿ ನಿಂತಿದೆ. ಸರಕಾರ ಕೂಡಲೇ ಬೆಲೆ ಏರಿಕೆಯನ್ನು ಹಿಂಪಡೆಯದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದರು.
ಮತ್ತೋರ್ವ ಮುಖಂಡರಾದ ರದೀಶ್ ಮಾತನಾಡಿ, ರಾಜ್ಯಾದ್ಯಂತ ಬೆಲೆ ಏರಿಕೆ ವಿರುದ್ಧ ಜನಾಕ್ರೋಶ ಭುಗಿಲೆದ್ದಿದ್ದು, ಬಡ ಮತ್ತು ಮಧ್ಯಮ ವರ್ಗದ ಜನರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜನವಿರೋಧಿ ನೀತಿಗಳನ್ನು ಕೈಬಿಟ್ಟು, ಅಗತ್ಯ ವಸ್ತುಗಳ ಬೆಲೆ ಇಳಿಕೆಗೆ ಸರಕಾರ ತಕ್ಷಣ ಮುಂದಾಗಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಿಪಿಐ(ಎಂ) ಮುಖಂಡರು ಹಾಗೂ ಕಾರ್ಯಕರ್ತರಾದ ಕೆ.ಕೆ. ಹರಿದಾಸ್, ಖಾಲಿದ್, ಹಮೀದ್, ಸಾಧಿಕ್, ಸೇರಿದಂತೆ ಹಲವಾರು ಮಂದಿ ಪಾಲ್ಗೊಂಡಿದ್ದರು.
Kodagu
ನ.26ರಂದು 36ನೇ ವಾರ್ಷಿಕ ಕೊಡವ ನ್ಯಾಷನಲ್ ಡೇ ಆಚರಣೆ
ಮಡಿಕೇರಿ : ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಭಾರತದ ಸಂವಿಧಾನ ದಿನದ ಅಂಗವಾಗಿ ೩೬ನೇ ವಾರ್ಷಿಕ ಕೊಡವ ನ್ಯಾಷನಲ್ ಡೇ ಕಾರ್ಯಕ್ರಮವನ್ನು ನ.೨೬ರಂದು ಮಡಿಕೇರಿಯ ಹೊರವಲಯದಲ್ಲಿರುವ ಕ್ಯಾಪಿಟಲ್ ವಿಲೇಜ್ನಲ್ಲಿ ಆಯೋಜಿಸಲಾಗಿದೆ.
ಅಂದು ಬೆಳಿಗ್ಗೆ ೧೦.೩೦ ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ವಿಶ್ವವಿಖ್ಯಾತ ಮಾನವ ಶಾಸ್ತ್ರ ವಿಜ್ಞಾನಿ ಪ್ರೊ. ಡಾ.ಎಂ.ಎ.ಕಲಾಂ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಸಿಎನ್ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.
ಕಲಾಂ ಅವರು ಕೊಡವರ ವಂಶಾವಳಿ, ಕುಟುಂಬ ರಚನೆ ಮತ್ತು ವಿಶಿಷ್ಟ ಭೂ ಹಿಡುವಳಿ ಕುರಿತಂತೆ ಸಂಶೋಧನೆ ನಡೆಸಿ ಪಿಎಚ್.ಡಿ ಪದವಿ ಪಡೆದಿದ್ದು, ಮಾನವಶಾಸ್ತ್ರ ಕ್ಷೇತ್ರದಲ್ಲಿ ಮೂರು ದಶಕಗಳಿಗೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಮದ್ರಾಸ್ ವಿಶ್ವವಿದ್ಯಾಲಯ ಸೇರಿದಂತೆ ದೇಶದ ವಿವಿಧ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರಾಗಿ ಹಾಗೂ ಉನ್ನತ ಆಡಳಿತಾತ್ಮಕ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಮಾನವ ವಲಸೆ, ಜನಾಂಗೀಯತೆ, ಅಲ್ಪಸಂಖ್ಯಾತರ ಹಕ್ಕುಗಳು, ಧಾರ್ಮಿಕ ಮತಾಂತರಗಳು, ಅರಣ್ಯ ನೀತಿಗಳು ಮತ್ತು ದೇವರ ಕಾಡುಗಳ ಕುರಿತ ಸಂಶೋಧನೆಯಲ್ಲಿ ವಿಶೇಷ ಪರಿಣತಿ ಹೊಂದಿರುವ ಅವರು, ಕೊಡವರ ವಿಶಿಷ ಜನಾಂಗೀಯ ಗುರುತು ಮತ್ತು ಆದಿಮಸಂಜಾತ ಪ್ರಕೃತಿ ಆರಾಧಕ ಪರಂಪರೆಯ ಕುರಿತು ಅಧ್ಯಯನ ನಡೆಸಿದ್ದಾರೆ.
ಕೊಡವರು ಏಕ ಜನಾಂಗೀಯ ಸಮುದಾಯವಾಗಿದ್ದು, ಅವರಿಗೆ ರಾಷ್ಟ್ರೀಯ ಜನಗಣತಿಯಲ್ಲಿ ಪ್ರತ್ಯೇಕ ಕೋಡ್ ಮತ್ತು ಕಾಲಂ ನೀಡಬೇಕು ಎಂಬ ನಿಲುವನ್ನು ಪ್ರೊ. ಡಾ.ಎಂ.ಎ.ಕಲಾಂ ಪ್ರತಿಪಾದಿಸಿದ್ದಾರೆ. ಕೊಡವರ ವಿಶಿಷ್ಟ ಜನಾಂಗೀಯ, ಸಾಂಸ್ಕೃತಿಕ ಮತ್ತು ಪ್ರಕೃತಿ ಆರಾಧಕ ಪರಂಪರೆಯನ್ನು ಸಂವಿಧಾನದ ಅಡಿಯಲ್ಲಿ ಗುರುತಿಸಿ ರಕ್ಷಿಸಬೇಕೆಂಬ ಆಶಯವನ್ನು ಅವರು ಹೊಂದಿದ್ದಾರೆ. ಆದ್ದರಿಂದ ಕೊಡವ ಸಮಾಜ ಬಾಂಧವರು ಅವರ ವಿಚಾರಧಾರೆ ಮತ್ತು ಬೌದ್ಧಿಕ ಪ್ರಖರತೆಯನ್ನು ಆಲಿಸಬೇಕೆಂದು ಎನ್.ಯು.ನಾಚಪ್ಪ ಮನವಿ ಮಾಡಿದ್ದಾರೆ.

ಭಾರತದ ಸಂವಿಧಾನದ ಆಶಯಗಳ ಅಡಿಯಲ್ಲಿ ಕೊಡವಲ್ಯಾಂಡ್ ಭೌಗೋಳಿಕ ರಾಜಕೀಯ ಸ್ವಾಯತ್ತತೆ, ಸ್ವಯಂ ಆಡಳಿತ ಮತ್ತು ಸ್ವಯಂ ನಿರ್ಣಯದ ಹಕ್ಕುಗಳಿಗಾಗಿ ಸಿಎನ್ಸಿ ದೀರ್ಘಕಾಲದಿಂದ ಹೋರಾಟ ನಡೆಸುತ್ತಾ ಬಂದಿದೆ. ಈ ಹಿನ್ನೆಲೆಯಲ್ಲಿ ಕೊಡವರ ಹತ್ತು ನ್ಯಾಯಸಮ್ಮತ ಆಕಾಂಕ್ಷೆಗಳು ಹಾಗೂ ಗೌರವಾನ್ವಿತ ಗುರಿಗಳನ್ನು ಪುನರುಚ್ಚರಿಸುವ ಉದ್ದೇಶದಿಂದ ಸಂವಿಧಾನ ದಿನದಂದೇ ಕೊಡವ ನ್ಯಾಷನಲ್ ಡೇ ಆಚರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಈಗಾಗಲೇ ಕರ್ನಾಟಕ ಹೈಕೋರ್ಟ್ ’ಕೊಡವ’ ಎಂಬ ನಾಮಕರಣದ ಮಹತ್ವವನ್ನು ಎತ್ತಿಹಿಡಿದಿದೆ. ಈ ವಿಚಾರವು ಭವಿಷ್ಯ ದಲ್ಲಿ ರಾಷ್ಟ್ರೀಯ ಜನಗಣತಿಯಲ್ಲಿ ಪ್ರತ್ಯೇಕ ಗುರುತಿನ ದಾಖಲಾತಿ, ಯುಎನ್ಡಿಆರ್ಐಪಿ ಹಾಗೂ ಸಂವಿಧಾನದ ಐದನೇ ಮತ್ತು ಆರನೇ ಅನುಸೂಚಿಗಳ ಅಡಿಯಲ್ಲಿ ರಕ್ಷಣೆ ಹಾಗೂ ಕೊಡವಲ್ಯಾಂಡ್ ಸ್ವಾಯತ್ತತೆಯ ಹಕ್ಕೊತ್ತಾಯಕ್ಕೆ ಆಧಾರವಾಗಲಿದೆ. ಕೊಡವರ ಇತಿಹಾಸ ಮತ್ತು ಸಂಸ್ಕೃತಿಯ ಕುರಿತು ಲಭ್ಯವಿರುವ ಐತಿಹಾಸಿಕ ದಾಖಲೆಗಳು, ಸಂಶೋಧನಾ ಕೃತಿಗಳು ಹಾಗೂ ಸಾಹಿತ್ಯಿಕ ಉಲ್ಲೇಖಗಳ ಸಮಗ್ರ ಅಧ್ಯಯನ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.
೩೬ನೇ ಕೊಡವ ನ್ಯಾಷನಲ್ ಡೇ ಕಾರ್ಯಕ್ರಮದಲ್ಲಿ ಕೊಡವರ ಇತಿಹಾಸ, ಜನಾಂಗೀಯ ಅಸ್ಮಿತೆ, ಸಂವಿಧಾನಾತ್ಮಕ ಹಕ್ಕುಗಳು ಮತ್ತು ಸ್ವಾಯತ್ತತೆಯ ಬೇಡಿಕೆಗಳು ಸೇರಿದಂತೆ ಪ್ರಮುಖ ವಿಚಾರಗಳು ಚರ್ಚೆಯಾಗಲಿವೆ ಎಂದು ಎನ್.ಯು.ನಾಚಪ್ಪ ಕೊಡವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Kodagu
ದೇವಣಗೇರಿ ಪ್ರೌಢಶಾಲೆಗೆ ಅಮ್ಮತ್ತಿ ಲಯನ್ಸ್ ಸಂಸ್ಥೆಯಿಂದ ಉಚಿತ ಕಂಪ್ಯೂಟರ್ ವಿತರಣೆ
ಪೊನ್ನಂಪೇಟೆ : ದೇವಣಗೇರಿ ಬಿ.ಸಿ. ಪ್ರೌಢಶಾಲೆಯ ವಿದ್ಯಾರ್ಥಿಗಳ ಕಲಿಕಾ ಪ್ರಗತಿಗೆ ಉತ್ತೇಜನ ನೀಡುವ ಉದ್ದೇಶದಿಂದ ಅಮ್ಮತ್ತಿ ಲಯನ್ಸ್ ಸಂಸ್ಥೆಯ ವತಿಯಿಂದ ಶಾಲೆಗೆ ಉಚಿತ ಕಂಪ್ಯೂಟರ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷ ಚೇಂದಂಡ ಜಿ. ಪೊನ್ನಪ್ಪ, ಅಮ್ಮತ್ತಿ ಲಯನ್ಸ್ ಸಂಸ್ಥೆಯ ಅಧ್ಯಕ್ಷ ಪೊರ್ಕೊಂಡ ಬೋಪಣ್ಣ, ಶಾಲೆಯ ಮುಖ್ಯ ಶಿಕ್ಷಕ ಎಚ್.ಡಿ. ಲೋಕೇಶ್, ಶಿಕ್ಷಕರಾದ ಸಂದೀಪ್ ಹಾಗೂ ಪ್ರಮೀಳಾಕುಮಾರಿ ವೈ. ಉಪಸ್ಥಿತರಿದ್ದರು.

ಶಾಲಾ ಆಡಳಿತ ಮಂಡಳಿಯ ನಿರ್ದೇಶಕ ಮುಕೊಂಡ ಶಶಿ ಸುಬ್ರಮಣಿ ಮಾತನಾಡಿ, ಬೆಂಗಳೂರಿನ ಸ್ಪೋರ್ಟ್ಸ್ ಅವಿನ್ಯೂ ಸಂಸ್ಥೆಯ ವತಿಯಿಂದ ಶಾಲೆಗೆ ಸುಮಾರು 40 ಸಾವಿರ ರೂ. ಮೌಲ್ಯದ ಕ್ರೀಡಾ ಪರಿಕರಗಳ ಕಿಟ್ ನೀಡಿರುವುದು ಸಂತಸದ ವಿಚಾರವಾಗಿದೆ. ಇಂತಹ ಸಹಕಾರಗಳು ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಕ್ರೀಡಾ ಚಟುವಟಿಕೆಗಳ ಬೆಳವಣಿಗೆಗೆ ಸಹಕಾರಿಯಾಗಲಿವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಲಯನ್ಸ್ ಸಂಸ್ಥೆಯ ಪದಾಧಿಕಾರಿಗಳು, ಶಾಲಾ ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
-
Chamarajanagar20 hours agoನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕರ ಹುದ್ದೆಗೆ ಅರ್ಜಿ ಆಹ್ವಾನ
-
Kodagu23 hours agoಖಾಯಂ ಹುದ್ದೆಗಾಗಿ ಅರ್ಜಿ ಆಹ್ವಾನ
-
Hassan22 hours agoಬೇಲೂರಿನಿಂದ 56 ಕಾಡಾನೆಗಳ ಸ್ಥಳಾಂತರಕ್ಕೆ ಸರ್ಕಾರದ ಆದೇಶ: ಸಚಿವ ಕೆ.ಎಂ. ಶಿವಲಿಂಗೇಗೌಡ ಘೋಷಣೆ
-
Mandya22 hours agoಖಾಸಗಿ ಶಿಕ್ಷಣ ಸಂಸ್ಥೆಯಿಂದ ಸರ್ಕಾರಿ ಜಮೀನು ಒತ್ತುವರಿ : ಅಧಿಕಾರಿಗಳಿಂದ ತೆರವು ಕಾರ್ಯ
-
Kodagu23 hours agoಸೆಂಟ್ರಲ್ ಕ್ಲಸ್ಟರ್ ಕಿಚನ್ ಪ್ರಸ್ತಾವನೆ ಕೈಬಿಡಿ: ಬಿಸಿಯೂಟ ನೌಕರರ ಪ್ರತಿಭಟನೆ
-
Mandya3 hours agoಅಭಿವೃದ್ಧಿ ಕಾಮಗಾರಿಗಳನ್ನು ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳಿಸಿ: ಮನೋಜ್ ಕುಮಾರ್ ಮೀನಾ
-
Chikmagalur24 hours agoಜಿಂಕೆ ಮಾಂಸ ಮಾರಾಟ ಇಬ್ಬರ ಬಂಧನ
-
Manglore7 hours agoಧರ್ಮಸ್ಥಳ, ಸೌತಡ್ಕ ಮಹಾಗಣಪತಿ ಕ್ಷೇತ್ರಕ್ಕೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಭೇಟಿ
