Chikmagalur
ಕಾಂಗ್ರೆಸ್ ವಿರುದ್ಧ ದಲಿತ ಪ್ರಗತಿಪರ ಸಂಘಟನೆಗಳ ಆಕ್ರೋಶ
ಚಿಕ್ಕಮಗಳೂರು: ದಲಿತರು, ಅಲ್ಪಸಂಖ್ಯಾತರು ಹಾಗೂ ದುಡಿಯುವ ವರ್ಗದ ಜನರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ, ಚಿಕ್ಕಮಗಳೂರು ದಲಿತ ಪ್ರಗತಿಪರ ಸಂಘಟನೆಗಳ ಒಕ್ಕೂಟ ನವೆಂಬರ್ 19ರಂದು ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರು ಧರಣಿ ನಡೆಸಲು ನಿರ್ಧರಿಸಿದೆ. ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಮುಖಂಡರು, 2023ರ ವಿಧಾನಸಭೆ ಚುನಾವಣೆಯಲ್ಲಿ ಸಂವಿಧಾನದ ರಕ್ಷಣೆ, ಸಾಮಾಜಿಕ ಸಮಾನತೆ ಹಾಗೂ ಕೋಮು ಸೌಹಾರ್ದತೆಯ ಆಶಯದೊಂದಿಗೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಅಧಿಕಾರಕ್ಕೆ ತರಲು ಶ್ರಮಿಸಿದ ದಲಿತರು ಮತ್ತು ಅಲ್ಪಸಂಖ್ಯಾತರಿಗೆ ಈಗ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದರು.
ಎಸ್‌ಸಿಎಸ್‌ಪಿ, ಟಿಎಸ್‌ಪಿ ಅನುದಾನದ ದುರ್ಬಳಕೆ, ಸರ್ಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ ದಲಿತರಿಗೆ ಅವಕಾಶ ನಿರಾಕರಣೆ, ನಿಗಮ ಮಂಡಳಿಗಳಲ್ಲಿ ಸೂಕ್ತ ಪ್ರಾತಿನಿಧ್ಯ ನೀಡದಿರುವುದು, ಸ್ಮಶಾನ ಭೂಮಿ ಮಂಜೂರಾತಿ ವಿಳಂಬ ಸೇರಿದಂತೆ ಹಲವು ಸಮಸ್ಯೆಗಳನ್ನು ಸರ್ಕಾರ ನಿರ್ಲಕ್ಷಿಸಿದೆ ಎಂದು ದೂರಿದರು. ಅಲ್ಲದೆ, 53ರ ಅರ್ಜಿಗಳಡಿ ಭೂಮಿ, ಮನೆ ಮತ್ತು ನಿವೇಶನ ಮಂಜೂರು ಮಾಡದಿರುವುದು ಹಾಗೂ ಅಂಬೇಡ್ಕರ್ ಅಧ್ಯಯನ ಸಂಸ್ಥೆಗೆ ಭೂಮಿ ನೀಡದಿರುವುದಕ್ಕೂ ಆಕ್ರೋಶ ವ್ಯಕ್ತಪಡಿಸಿದರು.

ಶ್ರೀನಿವಾಸ್ ದಂಟರಮಕ್ಕಿ ಮಾತನಾಡಿ, ನವೆಂಬರ್ 19ರಂದು ಆಗಮಿಸುವ ರಾಜ್ಯ ಕಾಂಗ್ರೆಸ್ ಅಧ್ಯಕ್ಷರು ನಮ್ಮ ಪ್ರಶ್ನೆಗಳಿಗೆ ಉತ್ತರ ನೀಡಬೇಕು. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಹೊರತುಪಡಿಸಿ ಇತರ ಪಕ್ಷಗಳೊಂದಿಗೆ ಪರ್ಯಾಯ ರಾಜಕೀಯ ಒಗ್ಗಟ್ಟಿನ ಕುರಿತು ಚರ್ಚಿಸಿ ಮುಂಬರುವ ಚುನಾವಣೆಯಲ್ಲಿ ತಕ್ಕ ಉತ್ತರ ನೀಡುತ್ತೇವೆ ಎಂದು ಹೇಳಿದರು. ಈ ಸುದ್ದಿಗೋಷ್ಠಿಯಲ್ಲಿ ಮರ್ಲೆ ಅಣ್ಣಯ್ಯ ಆರ್. ಶೇಖರ್, ಹೊನ್ನಪ್ಪ ದಂಟರಮಕ್ಕಿ, ಛಲವಾದಿ ರಘು, ಪುಟ್ಟಸ್ವಾಮಿ ಮತ್ತಿತರರು ಇದ್ದರು.
Chikmagalur
ಬಾಲ್ಯವಿವಾಹದ ಬಳಿಕ ಅಪ್ರಾಪ್ತ ಬಾಲಕಿ ಗರ್ಭಿಣಿ: ಯುವಕನ ವಿರುದ್ಧ ಪ್ರಕರಣ ದಾಖಲು
ಕಡೂರು: ಅಪ್ರಾಪ್ತ ಬಾಲಕಿಗೆ ಬಾಲ್ಯವಿವಾಹ ಮಾಡಿಸಿ, ಆಕೆ ಐದು ತಿಂಗಳ ಗರ್ಭಿಣಿಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಡೂರು ಪೊಲೀಸ್ ಠಾಣೆಯಲ್ಲಿ ಬಾಲ್ಯವಿವಾಹ ನಿಷೇಧ ಕಾಯ್ದೆ ಹಾಗೂ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಎಸ್. ಬಿದರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಪ್ರಾಪ್ತ ಬಾಲಕಿಯನ್ನು ಬಿ. ಗೊಲ್ಲರಹಟ್ಟಿ ಗ್ರಾಮದ ದೇವೇಂದ್ರ ಎಂಬ ಯುವಕನೊಂದಿಗೆ ಬಾಲ್ಯವಿವಾಹ ಮಾಡಲಾಗಿತ್ತು. ಸದ್ಯ ಬಾಲಕಿ ಐದು ತಿಂಗಳ ಗರ್ಭಿಣಿಯಾಗಿರುವುದಾಗಿ ಮಕ್ಕಳ ಸಹಾಯವಾಣಿಗೆ ಮಾಹಿತಿ ಬಂದಿತ್ತು.
ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಬಾಲಕಿಯ ಮನೆಗೆ ಭೇಟಿ ನೀಡಿ ಪರಿಶೀಲಿಸಿದಾಗ ಬಾಲ್ಯವಿವಾಹ ನಡೆದಿರುವುದು ಹಾಗೂ ಬಾಲಕಿ ಗರ್ಭಿಣಿಯಾಗಿರುವುದು ದೃಢಪಟ್ಟಿತ್ತು. ಬಳಿಕ ಅಕ್ಟೋಬರ್ 14ರಂದು ಶಿಶು ಅಭಿವೃದ್ಧಿ ಯೋಜನಾ ಇಲಾಖೆಯ ಅಂಗನವಾಡಿ ಮೇಲ್ವಿಚಾರಕರು ಹಾಗೂ ಮಕ್ಕಳ ಸಹಾಯವಾಣಿ ಸಿಬ್ಬಂದಿ ಬಾಲಕಿ ಮತ್ತು ಯುವಕನ ಮನೆಗೆ ಭೇಟಿ ನೀಡಿದಾಗ ಯಾರೂ ಮನೆಯಲ್ಲಿ ಇರಲಿಲ್ಲ.

ಬಾಲ್ಯವಿವಾಹ ಹಾಗೂ ಬಾಲಕಿ ಗರ್ಭಿಣಿಯಾಗಿರುವುದಕ್ಕೆ ಸಂಬಂಧಿಸಿದ ಪೂರಕ ದಾಖಲೆಗಳ ಆಧಾರದ ಮೇಲೆ ನೊಂದ ಬಾಲಕಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ನವೆಂಬರ್ 16ರಂದು ಕಡೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಮೇರೆಗೆ ಪೊಲೀಸರು ಬಾಲ್ಯವಿವಾಹ ನಿಷೇಧ ಕಾಯ್ದೆ ಹಾಗೂ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ನೊಂದ ಬಾಲಕಿಯ ಗುರುತು ಬಹಿರಂಗವಾಗದಂತೆ ಪೊಲೀಸ್ ವರದಿಯಲ್ಲಿ ಆಕೆಯ ಹೆಸರಿನ ಬದಲಿಗೆ MINOR-178 ಎಂದು ನಮೂದಿಸಲಾಗಿದೆ.
Chikmagalur
ಕಡೂರಿನಲ್ಲಿ ರಸ್ತೆ ಅಪಘಾ*ತ: ಚಿಕಿತ್ಸೆ ಫಲಿಸದೆ ವೃದ್ಧ ಸಾ*ವು
ಕಡೂರು: ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವೃದ್ಧರೊಬ್ಬರು ಸುದೀರ್ಘ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ನಡೆದಿದೆ. ಚಿಕ್ಕಮಗಳೂರು ತಾಲ್ಲೂಕಿನ ಲಕ್ಯಾ ಗ್ರಾಮದ ಅಣ್ಣಯ್ಯ (ತಂದೆಯ ಹೆಸರು ಲಭ್ಯವಿಲ್ಲ) ಮೃತಪಟ್ಟವರು.
ಘಟನೆಯ ವಿವರ: ಅಕ್ಟೋಬರ್ 29ರಂದು ಮಧ್ಯಾಹ್ನ 3.30ರ ಸುಮಾರಿಗೆ ಕಡೂರು ಪಟ್ಟಣದ ಎಂ.ಎಸ್.ಆರ್. ಸರ್ಕಲ್ ಬಳಿ ಅಣ್ಣಯ್ಯ ಅವರು ತಮ್ಮ ಟಿವಿಎಸ್ ಎಕ್ಸ್‌ಎಲ್ (KA-18 EC-8881) ವಾಹನದಲ್ಲಿ ತೆರಳುತ್ತಿದ್ದಾಗ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದಿದ್ದಾರೆ. ಪರಿಣಾಮ ತಲೆಗೆ ಹಾಗೂ ಮುಖಕ್ಕೆ ಗಂಭೀರ ಗಾಯಗಳಾಗಿದ್ದು, ಕೈಕಾಲುಗಳಿಗೂ ತರಚಿದ ಗಾಯಗಳಾಗಿದ್ದವು.

ಅಪಘಾತದ ಬಳಿಕ ಸಂಬಂಧಿಕರು ಹಾಗೂ ಸಾರ್ವಜನಿಕರು ಅವರನ್ನು ಕಡೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕಡೂರಿನ ಕೆ.ಎಂ.ಎಚ್. ಆಸ್ಪತ್ರೆ, ಚಿಕ್ಕಮಗಳೂರಿನ ಕೆ.ಆರ್.ಎಸ್. ಆಸ್ಪತ್ರೆ ಹಾಗೂ ಮಂಗಳೂರಿನ ಯೂನಿಟಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿತ್ತು. ನಂತರ ಹಾಸನದ ಸರ್ಕಾರಿ ಹಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನವೆಂಬರ್ 15ರಂದು ಸಂಜೆ 7.50ರ ಸುಮಾರಿಗೆ ಅಣ್ಣಯ್ಯ ಮೃತಪಟ್ಟಿದ್ದಾರೆ. ಈ ಸಂಬಂಧ ಮೃತರ ಪುತ್ರಿ ಉಷಾ ಅವರು ನವೆಂಬರ್ 16ರಂದು ಕಡೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅಪಘಾತದ ಬಗ್ಗೆ ಪ್ರಕರಣ ದಾಖಲಾಗಿದೆ.
Chikmagalur
ಜಿಂಕೆ ಮಾಂಸ ಮಾರಾಟ ಇಬ್ಬರ ಬಂಧನ
ಚಿಕ್ಕಮಗಳೂರು: ಪ್ರಾದೇಶಿಕ ವಲಯದ ಅಧಿಕಾರಿಗಳು ಮಾಗಡಿ ಹ್ಯಾಂಡ್ ಪೋಸ್ಟ್ ಸಮೀಪದ ರಾಜು ಅಲಿಯಾಸ್ ದೇವರಾಜು ಎಂಬುವವರ ಮನೆಯಲ್ಲಿ ಜಿಂಕೆ ಮಾಂಸ ಮಾರಾಟ ಮತ್ತು ಹಂಚಿಕೊಳ್ಳುವ ಬಗ್ಗೆ ಖಚಿತ ಮಾಹಿತಿ ದೊರೆತ ಮೇರೆಗೆ ದಾಳಿ ನಡೆಸಿ,ಸ್ಥಳದಲ್ಲಿ ಬೇಹಿಸಿದ ಜಿಂಕೆ ಮಾಂಸ ಹಾಗೂ ರಾಜು ಅಲಿಯಾಸ್ ದೇವರಾಜ್ ಎಂಬ ವ್ಯಕ್ತಿಯನ್ನು ವಶಕ್ಕೆ ಪಡೆದು ತನಿಖೆಗೆ ಒಳಪಡಿಸಿದಾಗ ಈ ಕಾಡು ಪ್ರಾಣಿಗಳ ಮಾಂಸವನ್ನು ನನಗೆ ಮಾರಾಟ ಮಾಡಿದ್ದು ಚಿಕ್ಕಮಗಳೂರು ಟಿಪ್ಪುನಗರದ ವಾಸಿ ಕುಮಾರ್ ಪಿ ಎಂದು ತಿಳಿದುಬಂದಿದ್ದು ಇವರೆಲ್ಲಾ ಸೇರಿ ಜಿಂಕೆ ಮಾಂಸ ಮಾರಾಟ ದಂಧೆಯಲ್ಲಿ ತೊಡಗಿದ್ದರೂ ಎಂದು ತಿಳಿದುಬಂದಿದೆ.ಕುಮಾರನನ್ನು ವಶಕ್ಕೆ ಪಡೆದು ಹೆಚ್ಚಿನ ತನಿಖೆಗೆ ಒಳಪಡಿಸಲಾಗಿದೆ.

ಜಿಂಕೆ ಮಾಂಸ ಸರಬರಾಜು ಮಾಡುತಿದ್ದ ಬೇಲೂರಿನ ಕಿಂಗ್ ಪಿನ್ ಅಲಿ ತಲೆಮರೆಸಿಕೊಂಡಿದ್ದಾನೆ,ಇನ್ನೋರ್ವ ಪ್ರಮುಖ ಆರೋಪಿ ಯೋಗಿ ಗೌಡ ಕರ್ತಿಕೆರೆ ಕೂಡ ತಲೆಮರೆಸಿಕೊಂಡಿದ್ದಾನೆ. ಒಂದು ಕೆಜಿ ಬೇಹಿಸಿದ ಜಿಂಕೆ ಮಾಂಸ ವಶಕ್ಕೆ ಪಡೆದು ರಾಜು, ಕುಮಾರ್ ಪಿ ಬಂಧಿಸಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ .ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್ ಕ್ಷೀರಸಾಗರ, ಉಪ ಅರಣ್ಯ ಸಂರಕ್ಷಣಾಧಿಕಾರಿ ಬೋರಯ್ಯ ಮಾರ್ಗದರ್ಶದಲ್ಲಿ ಕಾರ್ಯಾಚರಣೆ ನಡೆಸಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಚರಣ್,ವಲಯ ಅರಣ್ಯಾಧಿಕಾರಿ ಹರೀಶ್, ಉಪ ವಲಯ ಅರಣ್ಯಾಧಿಕಾರಿಗಳಾದ ಸಂತೋಷ್, ದಿನೇಶ್,ನಾರಾಯಣ, ಪ್ರದೇಪ,ಮಂಜುನಾಥ್,ಪ್ರವೀಣ್ ಕಾರ್ಯಚರಣೆಯಲ್ಲಿ ಇದ್ದರು.
-
Chamarajanagar17 hours agoನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕರ ಹುದ್ದೆಗೆ ಅರ್ಜಿ ಆಹ್ವಾನ
-
Kodagu20 hours agoಖಾಯಂ ಹುದ್ದೆಗಾಗಿ ಅರ್ಜಿ ಆಹ್ವಾನ
-
Hassan19 hours agoಬೇಲೂರಿನಿಂದ 56 ಕಾಡಾನೆಗಳ ಸ್ಥಳಾಂತರಕ್ಕೆ ಸರ್ಕಾರದ ಆದೇಶ: ಸಚಿವ ಕೆ.ಎಂ. ಶಿವಲಿಂಗೇಗೌಡ ಘೋಷಣೆ
-
Mandya20 hours agoಖಾಸಗಿ ಶಿಕ್ಷಣ ಸಂಸ್ಥೆಯಿಂದ ಸರ್ಕಾರಿ ಜಮೀನು ಒತ್ತುವರಿ : ಅಧಿಕಾರಿಗಳಿಂದ ತೆರವು ಕಾರ್ಯ
-
Kodagu20 hours agoಸೆಂಟ್ರಲ್ ಕ್ಲಸ್ಟರ್ ಕಿಚನ್ ಪ್ರಸ್ತಾವನೆ ಕೈಬಿಡಿ: ಬಿಸಿಯೂಟ ನೌಕರರ ಪ್ರತಿಭಟನೆ
-
Chamarajanagar1 hour agoಹುಲಿ ದಾಳಿಗೆ ಹಸು ಬ*ಲಿ: ಸಂಕಷ್ಟದಲ್ಲಿ ರೈತ
-
State23 hours agoಹಿರಿಯೂರು ಟಿಕೆಟ್ ವಿಚಾರದಲ್ಲಿ ಹೈಕಮಾಂಡ್ ನಿರ್ಧಾರವೇ ಅಂತಿಮ: ಆರ್. ಅಶೋಕ್
-
Chikmagalur21 hours agoಜಿಂಕೆ ಮಾಂಸ ಮಾರಾಟ ಇಬ್ಬರ ಬಂಧನ
