Mandya
ರಾಶಿ ಚಿತ್ರವನ್ನು ಹರಸಿ, ಹಾರೈಸಿ : ನಟ ಶಶಿಕುಮಾರ
ಮಂಡ್ಯ : ರಾಶಿ ಚಿತ್ರವನ್ನು ಥಿಯೇಟರ್ ನಲ್ಲಿ ವೀಕ್ಷಿಸಿ, ಚಿತ್ರ ಹಾಗೂ ಚಿತ್ರ ತಂಡವನ್ನು ಹರಸಿ, ಹಾರೈಸುವಂತೆ ಖ್ಯಾತ ನಟ ಶಶಿಕುಮಾರ ಮನವಿ ಮಾಡಿದರು.
ನಗರದ ಮಹಾವೀರ ಚಿತ್ರಮಂದಿರಕ್ಕೆ ಭೇಟಿ ನೀಡಿ ಚಿತ್ರತಂಡದವರೊಂದಿಗೆ ಚಿತ್ರ ವೀಕ್ಷಣಡ ಮಾಡಿದ ಅವರು, ‘ರಾಶಿ’ ಚಿತ್ರವು ವಿಭಿನ್ನ ಕಥಾಹಂದರ ಹೊಂದಿರುವ ಕೌಟುಂಬಿಕ ಪ್ರೇಮಕಥೆಯಾಗಿದೆ. ಇಂದಿನ ಯುವಜನತೆಗೆ ಇಷ್ಟವಾಗುವ ಅಂಶಗಳ ಜೊತೆಗೆ ಕುಟುಂಬ ಸಂಬಂಧಗಳ ಮೌಲ್ಯ, ಪ್ರೀತಿ, ಭಾವನೆಗಳಿಗೆ ಚಿತ್ರದಲ್ಲಿ ಆದ್ಯತೆ ನೀಡಲಾಗಿದೆ.

ನನ್ನ ಪುತ್ರ ಆದಿತ್ಯ ಶಶಿಕುಮಾರ್ ವಿಭಿನ್ನ ಪಾತ್ರದಲ್ಲಿ ಕಾಣಿಸಿ ಕೊಂಡಿದ್ದು, ಉತ್ತಮವಾಗಿ ಅಭಿನಯಿಸಿದ್ದಾನೆ. ಚಿತ್ರತಂಡದ ಪರಿಶ್ರಮ ತೆರೆಮೇಲೆ ಮೂಡಿಬಂದಿದೆ. ಪ್ರೇಕ್ಷಕರು ಚಿತ್ರವನ್ನು ಚಿತ್ರಮಂದಿರಗಳಲ್ಲಿ ವೀಕ್ಷಿಸಿ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.
ನಾಯಕ ನಟ ಆದಿತ್ಯ ಶಶಿಕುಮಾರ್ ಮಾತನಾಡಿ, ‘ರಾಶಿ’ ಚಿತ್ರದಲ್ಲಿ ನಟಿಸಿರು ವುದು ಸಂತಸ ತಂದಿದೆ. ಕಥೆ ಹಾಗೂ ಪಾತ್ರದ ವಿಭಿನ್ನತೆ ಯೇ ಈ ಚಿತ್ರದಲ್ಲಿ ನಟಿಸಲು ಪ್ರಮುಖ ಕಾರಣ. ಪ್ರೀತಿ, ಕುಟುಂಬದ ಬಾಂಧವ್ಯ ಮತ್ತು ಭಾವನಾತ್ಮಕ ಸನ್ನಿವೇಶಗಳು ಚಿತ್ರದ ಪ್ರಮುಖ ಆಕರ್ಷಣೆ ಯಾಗಿವೆ. ನಿರ್ದೇಶಕ ವಿಜಯ್ ಪಾಳೇಗಾರ್, ನಿರ್ಮಾಪಕ ಅಖಿಲೇಶ್ ಸೇರಿದಂತೆ ಇಡೀ ಚಿತ್ರತಂಡ ಉತ್ತಮ ಸಹಕಾರ ನೀಡಿದೆ. ಪ್ರೇಕ್ಷಕರು ಚಿತ್ರವನ್ನು ನೋಡಿ ತಮ್ಮ ಅಭಿಪ್ರಾಯ ಹಾಗೂ ಆಶೀರ್ವಾದ ನೀಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಂ.ಎಸ್.ಚಿದಂಬರ್, ಚನ್ನಯ್ಯ, ಅಮರಾವತಿ ನಾಗರಾಜ್, ಯೋಗಾನಂದ ಗೌಡಗೆರೆ, ಸೇರಿದಂತೆ ಮತ್ತಿತರರು ಇದ್ದರು
Mandya
ಗುರುದೇವ್ ಅಕಾಡೆಮಿ ವತಿಯಿಂದ ಭರತನಾಟ್ಯ ಪರೀಕ್ಷೆ ಯಶಸ್ವಿ
ಮಂಡ್ಯ : ಗುರುದೇವ್ ಅಕಾಡೆಮಿ ಆಫ್ ಫೈನ್ ಆರ್ಟ್ಸ್ ಸಂಸ್ಥೆಯ ವತಿಯಿಂದ ಗಂಧರ್ವ ಮಹಾವಿದ್ಯಾಲಯ, ಪುಣೆ ಇದರ ಮಾನ್ಯತೆಯೊಂದಿಗೆ ಭರತನಾಟ್ಯ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಯಿತು.
ಗುರುದೇವ್ ಲಲಿತಕಲಾ ಅಕಾಡೆಮಿಯ ಮುಖ್ಯಸ್ಥರು ಹಾಗೂ ನಾಟ್ಯ ವಿದುಷಿ ಡಾ. ಚೇತನಾ ಪಿ.ಎಂ. ರಾಧಾಕೃಷ್ಣ ಅವರು ಮಾತನಾಡಿ, ಪರೀಕ್ಷೆಯ ಅಂಗವಾಗಿ ಪ್ರಾರಂಭಿಕ ಹಂತದ ಪ್ರಾಯೋಗಿಕ ಪರೀಕ್ಷೆಗಳನ್ನು ಗುರುದೇವ ಕುಟೀರದಲ್ಲಿ ನಡೆಸಲಾಯಿತು. ಲಿಖಿತ ಪರೀಕ್ಷೆಗಳನ್ನು ಗುರುದೇವ ಕುಟೀರದ ಜತೆಗೆ ನಗರದ ಡ್ಯಾಫೋಡಿಲ್ಸ್ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನ ಸಹಕಾರದೊಂದಿಗೆ ಶಾಲಾ ಆವರಣದಲ್ಲಿಯೂ ಆಯೋಜಿಸಲಾಗಿತ್ತು ಎಂದು ತಿಳಿಸಿದರು.

ಪರೀಕ್ಷೆಯಲ್ಲಿ 257ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು. ಲಿಖಿತ ಪರೀಕ್ಷೆಗೆ ಸುಮಾರು 137 ಅಭ್ಯರ್ಥಿಗಳು ಹಾಗೂ ಪ್ರಾರಂಭಿಕ ಹಂತದ ಪ್ರಾಯೋಗಿಕ ಪರೀಕ್ಷೆಗೆ 120 ಅಭ್ಯರ್ಥಿಗಳು ಹಾಜರಾಗಿ ತಮ್ಮ ಕಲಿಕಾ ಸಾಮರ್ಥ್ಯ ಮತ್ತು ಪ್ರತಿಭೆಯನ್ನು ಪ್ರದರ್ಶಿಸಿದರು.
ಗಂಧರ್ವ ಮಹಾವಿದ್ಯಾಲಯದ ಮಾನ್ಯತೆಯಡಿ ಕಳೆದ ಏಳು ವರ್ಷಗಳಿಂದ ಅಕಾಡೆಮಿಯು ವಿವಿಧ ಹಂತಗಳ ಭರತನಾಟ್ಯ ಪರೀಕ್ಷೆಗಳನ್ನು ನಿರಂತರವಾಗಿ ಆಯೋಜಿಸುತ್ತಿದೆ. ಪ್ರಾಥಮಿಕ, ಪ್ರವೇಶಿಕಾ, ಪ್ರಥಮ ವಿಶಾರದ ಹಾಗೂ ಪೂರ್ಣ ವಿಶಾರದ ಸೇರಿದಂತೆ ವಿವಿಧ ಹಂತಗಳಲ್ಲಿ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ.
ಅಕಾಡೆಮಿಯ ವಿದ್ಯಾರ್ಥಿಗಳಷ್ಟೇ ಅಲ್ಲದೆ, ವಿವಿಧ ಊರುಗಳು ಹಾಗೂ ಇತರ ನೃತ್ಯ ಸಂಸ್ಥೆಗಳ ವಿದ್ಯಾರ್ಥಿಗಳೂ ಪರೀಕ್ಷೆಯಲ್ಲಿ ಭಾಗವಹಿಸುತ್ತಿರುವುದು ವಿಶೇಷವಾಗಿದೆ. ಮಂಡ್ಯ, ಮೈಸೂರು, ಕುಣಿಗಲ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಂದ ವಿದ್ಯಾರ್ಥಿಗಳು ಆಗಮಿಸುತ್ತಿದ್ದಾರೆ. ಮಂಡ್ಯದಲ್ಲಿಯೇ ಪರೀಕ್ಷೆ ಬರೆಯುವ ಅವಕಾಶ ಕಲ್ಪಿಸಿರುವುದರಿಂದ ವಿದ್ಯಾರ್ಥಿಗಳು ಬೆಂಗಳೂರಿಗೆ ತೆರಳುವ ಅನಿವಾರ್ಯತೆ ತಪ್ಪಿದ್ದು, ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಅನುಕೂಲವಾಗಿದೆ.
ಪ್ರಾಥಮಿಕ ಮತ್ತು ಪ್ರವೇಶಿಕಾ ಹಂತದ ಪರೀಕ್ಷೆಗಳಲ್ಲಿ ನೃತ್ಯ ಪ್ರದರ್ಶನ ಹಾಗೂ ಮೌಖಿಕ ಪರೀಕ್ಷೆಗಳಿಗೆ ಆದ್ಯತೆ ನೀಡಲಾಗುತ್ತದೆ. ಪ್ರಥಮ ವಿಶಾರದ ಮತ್ತು ಪೂರ್ಣ ವಿಶಾರದ ಹಂತಗಳಲ್ಲಿ ಲಿಖಿತ ಹಾಗೂ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಲಿಖಿತ ಪರೀಕ್ಷೆಗಳು ಡ್ಯಾಫೋಡಿಲ್ಸ್ ಶಾಲೆಯಲ್ಲಿ ಹಾಗೂ ಪ್ರಾಯೋಗಿಕ ಪರೀಕ್ಷೆಗಳು ಗುರುದೇವ್ ಅಕಾಡೆಮಿಯಲ್ಲಿ ನಡೆಯುತ್ತವೆ.
ಪ್ರತಿ ವರ್ಷ ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಪರೀಕ್ಷೆಗಳನ್ನು ಆಯೋಜಿಸಲಾಗುತ್ತಿದ್ದು, ವಿದ್ಯಾರ್ಥಿಗಳು ವಿವಿಧ ಹಂತಗಳಲ್ಲಿ ಪಾಲ್ಗೊಂಡು ತಮ್ಮ ನೃತ್ಯಕಲೆಯ ಪ್ರೌಢಿಮೆಯನ್ನು ಪ್ರದರ್ಶಿಸುತ್ತಿದ್ದಾರೆ.
ಶಾಸ್ತ್ರೀಯ ನೃತ್ಯಕಲೆಯಾದ ಭರತನಾಟ್ಯವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದರ ಜತೆಗೆ ವಿದ್ಯಾರ್ಥಿಗಳಲ್ಲಿ ಕಲಾಸಕ್ತಿ ಬೆಳೆಸುವುದು ಹಾಗೂ ಕ್ರಮಬದ್ಧ ಪರೀಕ್ಷಾ ವ್ಯವಸ್ಥೆಯ ಮೂಲಕ ಅವರ ಕಲಿಕಾ ಪ್ರಗತಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಗುರುದೇವ್ ಅಕಾಡೆಮಿ ಆಫ್ ಫೈನ್ ಆರ್ಟ್ಸ್ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ನಾಟ್ಯ ವಿದುಷಿ ಹಾಗೂ ಪರೀಕ್ಷೆಯ ಮುಖ್ಯಸ್ಥೆ ಡಿಂಪಲ್ ರವರು ಉಪಸ್ಥಿತರಿದ್ದರು.
Mandya
ಮಕ್ಕಳಲ್ಲಿನ ಸುಪ್ತ ಪ್ರತಿಭೆ ಅನಾವರಣಕ್ಕೆ ಕಲೋತ್ಸವ ಅಗತ್ಯ: ಶಿವಕುಮಾರ್
ನಾಗಮಂಗಲ: ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸುವುದರ ಜೊತೆಗೆ ಅವರ ಸೃಜನಶೀಲತೆ, ಆತ್ಮವಿಶ್ವಾಸ ಹಾಗೂ ಕಲಾತ್ಮಕ ಅಭಿವ್ಯಕ್ತಿಗೆ ಕಲೋತ್ಸವ ಅತ್ಯುತ್ತಮ ವೇದಿಕೆಯಾಗಿದೆ ಎಂದು ಕರಡಹಳ್ಳಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎನ್.ಸಿ. ಶಿವಕುಮಾರ್ ಅಭಿಪ್ರಾಯಪಟ್ಟರು.
ತಾಲೂಕಿನ ದೇವಲಾಪುರ ಹೋಬಳಿ ಮಟ್ಟದ ಪ್ರೌಢಶಾಲಾ ವಿಭಾಗದ ಕಲೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ದೇವಲಾಪುರದ ಕೆಪಿಎಸ್ಸಿ ಶಾಲೆಯ ಆವರಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿಕ್ಷಣವೆಂದರೆ ಕೇವಲ ಪಠ್ಯಪುಸ್ತಕಗಳ ಕಲಿಕೆಗೆ ಸೀಮಿತವಾಗಿರದೆ, ಪಠ್ಯೇತರ ಚಟುವಟಿಕೆಗಳಲ್ಲಿಯೂ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಇಂತಹ ಚಟುವಟಿಕೆಗಳು ಮಕ್ಕಳಲ್ಲಿ ನಾಯಕತ್ವ ಗುಣ, ಶಿಸ್ತು, ಸಹಕಾರ ಮನೋಭಾವ ಹಾಗೂ ಸ್ಪರ್ಧಾತ್ಮಕ ಮನೋಭಾವ ಬೆಳೆಸಲು ಸಹಕಾರಿಯಾಗುತ್ತವೆ ಎಂದು ತಿಳಿಸಿದರು.
ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ತನ್ನದೇ ಆದ ವಿಶಿಷ್ಟ ಪ್ರತಿಭೆ ಮತ್ತು ಸಾಮರ್ಥ್ಯ ಅಡಗಿರುತ್ತದೆ. ಅದನ್ನು ಗುರುತಿಸಿ ಹೊರತರುವ ಜವಾಬ್ದಾರಿ ಶಿಕ್ಷಕರು ಹಾಗೂ ಪೋಷಕರ ಮೇಲಿದೆ. ಇಂತಹ ಕಲೋತ್ಸವಗಳು ಮಕ್ಕಳ ಪ್ರತಿಭೆ ಪ್ರದರ್ಶಿಸಲು ಮತ್ತು ಅವರಲ್ಲಿ ಆತ್ಮವಿಶ್ವಾಸ ಬೆಳೆಸಲು ಉತ್ತಮ ಅವಕಾಶ ಕಲ್ಪಿಸುತ್ತವೆ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷ ಜವರೇಗೌಡ ತಿಳಿಸಿದರು.

ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ:
ಕಲೋತ್ಸವದಲ್ಲಿ ದೇವಲಾಪುರ ಹೋಬಳಿಯ ವಿವಿಧ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ತಮ್ಮಲ್ಲಿನ ಕಲಾ ಪ್ರತಿಭೆಯನ್ನು ಅನಾವರಣಗೊಳಿಸಿದರು. ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು ಹಾಗೂ ಕಲಾ ಪ್ರದರ್ಶನಗಳ ಮೂಲಕ ವಿದ್ಯಾರ್ಥಿಗಳು ಗಮನ ಸೆಳೆದರು. ಶಾಲಾ ಆವರಣದಲ್ಲಿ ಮಕ್ಕಳ ಕಲರವ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಸಂಭ್ರಮದ ವಾತಾವರಣ ಮೂಡಿಸಿದವು.
ಕಾರ್ಯಕ್ರಮದಲ್ಲಿ ಬ್ರಿಲಿಯಂಟ್ ಶಾಲೆಯ ಮುಖ್ಯ ಶಿಕ್ಷಕ ಶ್ರೀನಿವಾಸ್, ದೇವಲಾಪುರ ಹೋಬಳಿಯ ವಿವಿಧ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ಕೆಪಿಎಸ್ಸಿ ಶಾಲೆಯ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ವಾಸು, ಪತ್ರಕರ್ತ ಜಗದೀಶ್ ಹಾಗೂ ಶಾಲಾ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.
ಸಮಾರಂಭದ ಗಣ್ಯರನ್ನು ಶಾಲಾ ಹಿರಿಯ ಮುಖ್ಯ ಶಿಕ್ಷಕರಾದ ತೋಂಟರಾಧ್ಯ ಸ್ವಾಗತಿಸಿ ಬಿ ಆರ್ ಸಿ ನೋಡಲ್ ಅಧಿಕಾರಿ ವಿರೂಪಾಕ್ಷ ರವರು ವಂದಿಸಿದರು.
Mandya
ರೈತರಿಗೆ ಸುಲಭವಾಗಿ ರಸಗೊಬ್ಬರ ವಿತರಣೆ: ಡಿ. 1ರಿಂದ ಎಫ್‌ಎಫ್‌ಎಸ್ ಆ್ಯಪ್ ಜಾರಿ : ಡಾ. ಕುಮಾರ
ಮಂಡ್ಯ: ರೈತರಿಗೆ ಅಗತ್ಯವಿರುವ ರಸಗೊಬ್ಬರಗಳು ಸುಲಭವಾಗಿ, ಪಾರದರ್ಶಕವಾಗಿ ಹಾಗೂ ಸರ್ಕಾರ ನಿಗದಿಪಡಿಸಿರುವ ದರದಲ್ಲಿ ಲಭ್ಯವಾಗುವಂತೆ ರೂಪಿಸಿರುವ ಫ್ರೇಮ್‌ವರ್ಕ್ ಫಾರ್ ಫರ್ಟಿಲೈಸರ್ ಸೇಲ್ಸ್ (FFS) ಮೊಬೈಲ್ ಆ್ಯಪ್ ಕುರಿತು ಜಿಲ್ಲೆಯ ರೈತರಿಗೆ ಹೆಚ್ಚಿನ ಅರಿವು ಮೂಡಿಸಬೇಕು. ಹೊಸ ವ್ಯವಸ್ಥೆಯ ಅನುಷ್ಠಾನಕ್ಕೆ ಅಗತ್ಯ ಸಿದ್ಧತೆಗಳನ್ನು ಕೈಗೊಂಡು, ರೈತರಿಗೆ ಯಾವುದೇ ತೊಂದರೆಯಾಗದಂತೆ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ. ಕುಮಾರ ರವರು ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಮಿನಿ ಸಭಾಂಗಣದಲ್ಲಿ ರಸಗೊಬ್ಬರ ವಿತರಣೆ ಮತ್ತು ಮಾರಾಟ ವ್ಯವಸ್ಥೆಗೆ ಸಂಬಂಧಿಸಿದಂತೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರದ ಅಗ್ರಿ ಸ್ಟ್ಯಾಕ್ ಹಾಗೂ ರಾಜ್ಯ ಸರ್ಕಾರದ ಫ್ರೂಟ್ಸ್ (FRUITS) ರೈತರ ದತ್ತಾಂಶವನ್ನು ಸಮಗ್ರ ರಸಗೊಬ್ಬರ ನಿರ್ವಹಣಾ ವ್ಯವಸ್ಥೆ (IFMS) ಯೊಂದಿಗೆ ಸಂಯೋಜಿಸಿ ಎಫ್‌ಎಫ್‌ಎಸ್ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ರಾಜ್ಯದಲ್ಲಿ ಎರಡನೇ ಹಂತದ ಅನುಷ್ಠಾನದ ಭಾಗವಾಗಿ ಮಂಡ್ಯ ಜಿಲ್ಲೆಯಲ್ಲಿ ಡಿಸೆಂಬರ್ 1, 2026ರಿಂದ ಈ ವ್ಯವಸ್ಥೆ ಜಾರಿಗೆ ಬರಲಿದೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು, ರಸಗೊಬ್ಬರ ವಿತರಕರು ಹಾಗೂ ಇತರ ಪಾಲುದಾರರಿಗೆ ಸಮರ್ಪಕ ತರಬೇತಿ ನೀಡಿ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದರು.
ಎಫ್‌ಎಫ್‌ಎಸ್ ಆ್ಯಪ್ ಮೂಲಕ ರೈತರು ತಮ್ಮ ಅಗತ್ಯಕ್ಕೆ ಅನುಗುಣವಾಗಿ ಮುಂಗಡವಾಗಿ ರಸಗೊಬ್ಬರ ಕಾಯ್ದಿರಿಸಿಕೊಳ್ಳಬಹುದು. ಕಾಯ್ದಿರಿಸಿದ ರಸಗೊಬ್ಬರವನ್ನು ಮಾರಾಟಗಾರರು ಮೂರು ದಿನಗಳವರೆಗೆ ಮೀಸಲಿಡಲಿದ್ದು, ಸೃಜನೆಯಾದ ಕ್ಯೂಆರ್ ಕೋಡ್ ಮುಂದಿನ ಎರಡು ದಿನಗಳವರೆಗೆ ಮಾನ್ಯವಾಗಿರುತ್ತದೆ. ಇದರಿಂದ ರೈತರು ತಮಗೆ ಅಗತ್ಯವಿರುವ ರಸಗೊಬ್ಬರವನ್ನು ಸುಲಭವಾಗಿ ಪಡೆಯಲು ಅನುಕೂಲವಾಗಲಿದೆ ಎಂದು ತಿಳಿಸಿದರು.
ಸರ್ಕಾರ ನಿಗದಿಪಡಿಸಿರುವ ಗರಿಷ್ಠ ಮಾರಾಟ ದರದಲ್ಲಿಯೇ ರಸಗೊಬ್ಬರ ಮಾರಾಟವಾಗುವುದರಿಂದ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದನ್ನು ತಡೆಯಲು ಸಾಧ್ಯವಾಗಲಿದೆ. ರೈತರು ತಾವು ಆಯ್ಕೆ ಮಾಡಿಕೊಂಡಿರುವ ಬೆಳೆಗಳಿಗೆ ವೈಜ್ಞಾನಿಕ ಶಿಫಾರಸಿನಂತೆ ಸಮತೋಲಿತ ರಸಗೊಬ್ಬರಗಳನ್ನು ಪಡೆಯಬಹುದು. ಅಲ್ಲದೆ, ರಸಗೊಬ್ಬರದೊಂದಿಗೆ ಇತರೆ ಕೃಷಿ ಪರಿಕರಗಳನ್ನು ಕಡ್ಡಾಯವಾಗಿ ಖರೀದಿಸುವಂತೆ ಒತ್ತಾಯಿಸುವುದಕ್ಕೂ ಕಡಿವಾಣ ಬೀಳಲಿದೆ ಎಂದು ಹೇಳಿದರು.
ರೈತರು ಸ್ವತಃ ಮೊಬೈಲ್ ಆ್ಯಪ್ ಮೂಲಕ ರಸಗೊಬ್ಬರಕ್ಕಾಗಿ ಅರ್ಜಿ ಸಲ್ಲಿಸಬಹುದು. ಆ್ಯಪ್ ಬಳಕೆಯಲ್ಲಿ ತೊಂದರೆಯಾದಲ್ಲಿ ಸಾಮಾನ್ಯ ಸೇವಾ ಕೇಂದ್ರಗಳು (CSC), ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು (PACS), ಸಹಕಾರ ಸಂಘಗಳು, ರಸಗೊಬ್ಬರ ಚಿಲ್ಲರೆ ಮಾರಾಟ ಕೇಂದ್ರಗಳು, ಕೃಷಿ ವಿಸ್ತರಣಾ ಸಿಬ್ಬಂದಿ ಹಾಗೂ ಸರ್ಕಾರ ಗುರುತಿಸಿರುವ ಅಧಿಕೃತ ಸೇವಾ ಕೇಂದ್ರಗಳ ನೆರವು ಪಡೆಯಬಹುದು. ವಯೋವೃದ್ಧರು ಹಾಗೂ ಅಂಗವಿಕಲ ರೈತರು ತಮ್ಮ ಪರವಾಗಿ ರಸಗೊಬ್ಬರ ಪಡೆಯಲು ಪ್ರತಿನಿಧಿಯನ್ನು ನೇಮಿಸಿಕೊಳ್ಳುವ ಸೌಲಭ್ಯವೂ ಇದೆ ಎಂದರು.
ಹೊಸ ವ್ಯವಸ್ಥೆಯ ಕುರಿತು ಗ್ರಾಮೀಣ ಪ್ರದೇಶಗಳಲ್ಲಿ ವ್ಯಾಪಕ ಪ್ರಚಾರ ಕೈಗೊಂಡು ರೈತರಿಗೆ ಆ್ಯಪ್ ಬಳಕೆ, ರಸಗೊಬ್ಬರ ಕಾಯ್ದಿರಿಸುವ ವಿಧಾನ ಹಾಗೂ ವಿತರಣಾ ಪ್ರಕ್ರಿಯೆಯ ಬಗ್ಗೆ ಸರಳವಾಗಿ ತಿಳಿಸಬೇಕು. ಜನಪ್ರತಿನಿಧಿಗಳು, ರೈತ ಮುಖಂಡರು ಹಾಗೂ ರೈತ ಸಂಘಟನೆಗಳ ಸಹಕಾರದೊಂದಿಗೆ ಅರಿವು ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಸ್ಥಳೀಯ ಮಟ್ಟದಲ್ಲಿ ತರಬೇತಿ ಶಿಬಿರಗಳನ್ನು ನಡೆಸಿ, ಅನುಷ್ಠಾನದ ಸಂದರ್ಭದಲ್ಲಿ ಎದುರಾಗುವ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು ಸಹಾಯವಾಣಿ ಹಾಗೂ ದೂರು ಪರಿಹಾರ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಸೂಚಿಸಿದರು.
ರಸಗೊಬ್ಬರ ವಿತರಣಾ ವ್ಯವಸ್ಥೆಯಲ್ಲಿ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ರೈತರಿಗೆ ಪಾರದರ್ಶಕ ಸೇವೆ ಒದಗಿಸುವುದು ಸರ್ಕಾರದ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಪಾಲುದಾರರು ಸಮನ್ವಯದಿಂದ ಕಾರ್ಯನಿರ್ವಹಿಸಿ, ಹೊಸ ವ್ಯವಸ್ಥೆಯ ಬಗ್ಗೆ ರೈತರಲ್ಲಿ ವಿಶ್ವಾಸ ಮೂಡಿಸುವ ಮೂಲಕ ಯೋಜನೆಯ ಯಶಸ್ವಿ ಅನುಷ್ಠಾನಕ್ಕೆ ಸಹಕರಿಸಬೇಕು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಜಂಟಿ ಕೃಷಿ ನಿರ್ದೇಶಕರಾದ ಜಯಸ್ವಾಮಿ, ಉಪ ಕೃಷಿ ನಿರ್ದೇಶಕಿ ಮಾಲತಿ ಹಾಗೂ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು ಉಪಸ್ಥಿತರಿದ್ದರು.
-
Kodagu21 hours agoಕೊಡಗು ಮುಸ್ಲಿಂ ಅಸೋಸಿಯೇಷನ್ ಸಂಘಟನೆ ಅಸ್ತಿತ್ವಕ್ಕೆ – ನೂತನ ಪದಾಧಿಕಾರಿಗಳ ಆಯ್ಕೆ
-
Kodagu23 hours agoಕೊಡವ ಮುಸ್ಲಿಮರ ಇತಿಹಾಸ ಸಂಶೋಧನಾ ವಿಷಯವಾಗಬೇಕು,ರಾಷ್ಟ್ರಪತಿ ಪದಕ ಪುರಸ್ಕೃತ ಪೊಲೀಸ್ ಇನ್ಸ್ಪೆಕ್ಟರ್ ಎಂ.ಎ. ಮಹಮ್ಮದ್ ಅಭಿಮತ
-
Special23 hours agoರಾಮಾಯಣ ಭಾಗ 1ರ ಬಜೆಟ್ ₹800 ಕೋಟಿಗೂ ಕಡಿಮೆ: ರಾಮ್ ಗೋಪಾಲ್ ವರ್ಮಾ
-
State3 hours agoಕರ್ನಾಟಕ ವಾಯು ಗುಣಮಟ್ಟ ವರದಿ:ಕೊಡಗಿನಲ್ಲಿ ಅತ್ಯುತ್ತಮ ಶುದ್ಧಗಾಳಿ
-
State5 hours agoಮೂರು ಎಫ್ಐಆರ್ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ ನಟ ಧನ್ವೀರ್
-
Hassan6 hours agoಬೇಲೂರಿನಲ್ಲಿ ಕಾಡಾನೆ ದಾಳಿಗೆ ಮತ್ತೊಂದು ಬ*ಲಿ: ಕಾಫಿ ತೋಟಕ್ಕೆ ತೆರಳುತ್ತಿದ್ದ ಕಾರ್ಮಿಕ ಸಾ*ವು
-
Hassan2 hours agoಸರಕ್ಕೆ ಕೊಂಡಿ ಹಾಕುವ ನೆಪದಲ್ಲಿ ಚಿನ್ನಕ್ಕೆ ಕತ್ತರಿ: ಜ್ಯೂಯಲರಿ ಕೆಲಸಗಾರನ ವಿರುದ್ಧ ದೂರು
-
Chamarajanagar20 hours agoಚಿರತೆ ದಾಳಿಗೆ ಹಸು ಬ*ಲಿ: ಮೂರು ಹಸುಗಳು ಪಾರು!
