Connect with us

Mandya

ರೈತರಿಗೆ ಸುಲಭವಾಗಿ ರಸಗೊಬ್ಬರ ವಿತರಣೆ: ಡಿ. 1ರಿಂದ ಎಫ್‌ಎಫ್‌ಎಸ್ ಆ್ಯಪ್ ಜಾರಿ : ಡಾ. ಕುಮಾರ

Published

on

ಮಂಡ್ಯ: ರೈತರಿಗೆ ಅಗತ್ಯವಿರುವ ರಸಗೊಬ್ಬರಗಳು ಸುಲಭವಾಗಿ, ಪಾರದರ್ಶಕವಾಗಿ ಹಾಗೂ ಸರ್ಕಾರ ನಿಗದಿಪಡಿಸಿರುವ ದರದಲ್ಲಿ ಲಭ್ಯವಾಗುವಂತೆ ರೂಪಿಸಿರುವ ಫ್ರೇಮ್‌ವರ್ಕ್ ಫಾರ್ ಫರ್ಟಿಲೈಸರ್ ಸೇಲ್ಸ್ (FFS) ಮೊಬೈಲ್ ಆ್ಯಪ್ ಕುರಿತು ಜಿಲ್ಲೆಯ ರೈತರಿಗೆ ಹೆಚ್ಚಿನ ಅರಿವು ಮೂಡಿಸಬೇಕು. ಹೊಸ ವ್ಯವಸ್ಥೆಯ ಅನುಷ್ಠಾನಕ್ಕೆ ಅಗತ್ಯ ಸಿದ್ಧತೆಗಳನ್ನು ಕೈಗೊಂಡು, ರೈತರಿಗೆ ಯಾವುದೇ ತೊಂದರೆಯಾಗದಂತೆ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ. ಕುಮಾರ ರವರು ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಮಿನಿ ಸಭಾಂಗಣದಲ್ಲಿ ರಸಗೊಬ್ಬರ ವಿತರಣೆ ಮತ್ತು ಮಾರಾಟ ವ್ಯವಸ್ಥೆಗೆ ಸಂಬಂಧಿಸಿದಂತೆ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರದ ಅಗ್ರಿ ಸ್ಟ್ಯಾಕ್ ಹಾಗೂ ರಾಜ್ಯ ಸರ್ಕಾರದ ಫ್ರೂಟ್ಸ್ (FRUITS) ರೈತರ ದತ್ತಾಂಶವನ್ನು ಸಮಗ್ರ ರಸಗೊಬ್ಬರ ನಿರ್ವಹಣಾ ವ್ಯವಸ್ಥೆ (IFMS) ಯೊಂದಿಗೆ ಸಂಯೋಜಿಸಿ ಎಫ್‌ಎಫ್‌ಎಸ್ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ರಾಜ್ಯದಲ್ಲಿ ಎರಡನೇ ಹಂತದ ಅನುಷ್ಠಾನದ ಭಾಗವಾಗಿ ಮಂಡ್ಯ ಜಿಲ್ಲೆಯಲ್ಲಿ ಡಿಸೆಂಬರ್ 1, 2026ರಿಂದ ಈ ವ್ಯವಸ್ಥೆ ಜಾರಿಗೆ ಬರಲಿದೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು, ರಸಗೊಬ್ಬರ ವಿತರಕರು ಹಾಗೂ ಇತರ ಪಾಲುದಾರರಿಗೆ ಸಮರ್ಪಕ ತರಬೇತಿ ನೀಡಿ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದರು.

ಎಫ್‌ಎಫ್‌ಎಸ್ ಆ್ಯಪ್ ಮೂಲಕ ರೈತರು ತಮ್ಮ ಅಗತ್ಯಕ್ಕೆ ಅನುಗುಣವಾಗಿ ಮುಂಗಡವಾಗಿ ರಸಗೊಬ್ಬರ ಕಾಯ್ದಿರಿಸಿಕೊಳ್ಳಬಹುದು. ಕಾಯ್ದಿರಿಸಿದ ರಸಗೊಬ್ಬರವನ್ನು ಮಾರಾಟಗಾರರು ಮೂರು ದಿನಗಳವರೆಗೆ ಮೀಸಲಿಡಲಿದ್ದು, ಸೃಜನೆಯಾದ ಕ್ಯೂಆರ್ ಕೋಡ್ ಮುಂದಿನ ಎರಡು ದಿನಗಳವರೆಗೆ ಮಾನ್ಯವಾಗಿರುತ್ತದೆ. ಇದರಿಂದ ರೈತರು ತಮಗೆ ಅಗತ್ಯವಿರುವ ರಸಗೊಬ್ಬರವನ್ನು ಸುಲಭವಾಗಿ ಪಡೆಯಲು ಅನುಕೂಲವಾಗಲಿದೆ ಎಂದು ತಿಳಿಸಿದರು.

ಸರ್ಕಾರ ನಿಗದಿಪಡಿಸಿರುವ ಗರಿಷ್ಠ ಮಾರಾಟ ದರದಲ್ಲಿಯೇ ರಸಗೊಬ್ಬರ ಮಾರಾಟವಾಗುವುದರಿಂದ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದನ್ನು ತಡೆಯಲು ಸಾಧ್ಯವಾಗಲಿದೆ. ರೈತರು ತಾವು ಆಯ್ಕೆ ಮಾಡಿಕೊಂಡಿರುವ ಬೆಳೆಗಳಿಗೆ ವೈಜ್ಞಾನಿಕ ಶಿಫಾರಸಿನಂತೆ ಸಮತೋಲಿತ ರಸಗೊಬ್ಬರಗಳನ್ನು ಪಡೆಯಬಹುದು. ಅಲ್ಲದೆ, ರಸಗೊಬ್ಬರದೊಂದಿಗೆ ಇತರೆ ಕೃಷಿ ಪರಿಕರಗಳನ್ನು ಕಡ್ಡಾಯವಾಗಿ ಖರೀದಿಸುವಂತೆ ಒತ್ತಾಯಿಸುವುದಕ್ಕೂ ಕಡಿವಾಣ ಬೀಳಲಿದೆ ಎಂದು ಹೇಳಿದರು.

ರೈತರು ಸ್ವತಃ ಮೊಬೈಲ್ ಆ್ಯಪ್ ಮೂಲಕ ರಸಗೊಬ್ಬರಕ್ಕಾಗಿ ಅರ್ಜಿ ಸಲ್ಲಿಸಬಹುದು. ಆ್ಯಪ್ ಬಳಕೆಯಲ್ಲಿ ತೊಂದರೆಯಾದಲ್ಲಿ ಸಾಮಾನ್ಯ ಸೇವಾ ಕೇಂದ್ರಗಳು (CSC), ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು (PACS), ಸಹಕಾರ ಸಂಘಗಳು, ರಸಗೊಬ್ಬರ ಚಿಲ್ಲರೆ ಮಾರಾಟ ಕೇಂದ್ರಗಳು, ಕೃಷಿ ವಿಸ್ತರಣಾ ಸಿಬ್ಬಂದಿ ಹಾಗೂ ಸರ್ಕಾರ ಗುರುತಿಸಿರುವ ಅಧಿಕೃತ ಸೇವಾ ಕೇಂದ್ರಗಳ ನೆರವು ಪಡೆಯಬಹುದು. ವಯೋವೃದ್ಧರು ಹಾಗೂ ಅಂಗವಿಕಲ ರೈತರು ತಮ್ಮ ಪರವಾಗಿ ರಸಗೊಬ್ಬರ ಪಡೆಯಲು ಪ್ರತಿನಿಧಿಯನ್ನು ನೇಮಿಸಿಕೊಳ್ಳುವ ಸೌಲಭ್ಯವೂ ಇದೆ ಎಂದರು.

ಹೊಸ ವ್ಯವಸ್ಥೆಯ ಕುರಿತು ಗ್ರಾಮೀಣ ಪ್ರದೇಶಗಳಲ್ಲಿ ವ್ಯಾಪಕ ಪ್ರಚಾರ ಕೈಗೊಂಡು ರೈತರಿಗೆ ಆ್ಯಪ್ ಬಳಕೆ, ರಸಗೊಬ್ಬರ ಕಾಯ್ದಿರಿಸುವ ವಿಧಾನ ಹಾಗೂ ವಿತರಣಾ ಪ್ರಕ್ರಿಯೆಯ ಬಗ್ಗೆ ಸರಳವಾಗಿ ತಿಳಿಸಬೇಕು. ಜನಪ್ರತಿನಿಧಿಗಳು, ರೈತ ಮುಖಂಡರು ಹಾಗೂ ರೈತ ಸಂಘಟನೆಗಳ ಸಹಕಾರದೊಂದಿಗೆ ಅರಿವು ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಸ್ಥಳೀಯ ಮಟ್ಟದಲ್ಲಿ ತರಬೇತಿ ಶಿಬಿರಗಳನ್ನು ನಡೆಸಿ, ಅನುಷ್ಠಾನದ ಸಂದರ್ಭದಲ್ಲಿ ಎದುರಾಗುವ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು ಸಹಾಯವಾಣಿ ಹಾಗೂ ದೂರು ಪರಿಹಾರ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಸೂಚಿಸಿದರು.

ರಸಗೊಬ್ಬರ ವಿತರಣಾ ವ್ಯವಸ್ಥೆಯಲ್ಲಿ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ರೈತರಿಗೆ ಪಾರದರ್ಶಕ ಸೇವೆ ಒದಗಿಸುವುದು ಸರ್ಕಾರದ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಪಾಲುದಾರರು ಸಮನ್ವಯದಿಂದ ಕಾರ್ಯನಿರ್ವಹಿಸಿ, ಹೊಸ ವ್ಯವಸ್ಥೆಯ ಬಗ್ಗೆ ರೈತರಲ್ಲಿ ವಿಶ್ವಾಸ ಮೂಡಿಸುವ ಮೂಲಕ ಯೋಜನೆಯ ಯಶಸ್ವಿ ಅನುಷ್ಠಾನಕ್ಕೆ ಸಹಕರಿಸಬೇಕು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಜಂಟಿ ಕೃಷಿ ನಿರ್ದೇಶಕರಾದ ಜಯಸ್ವಾಮಿ, ಉಪ ಕೃಷಿ ನಿರ್ದೇಶಕಿ ಮಾಲತಿ ಹಾಗೂ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು ಉಪಸ್ಥಿತರಿದ್ದರು.

Continue Reading

Mandya

ಕರುನಾಡಿನಲ್ಲಿ ಉದ್ಯೋಗ ಮತ್ತು ವ್ಯಾಪಾರ ಅನ್ಯ ರಾಜ್ಯದವರ ಪಾಲಾಗುತ್ತಿರುವುದನ್ನ ಸಹಿಸಲಾಗದು.

Published

on

ಮದ್ದೂರು: ಕರುನಾಡಿನಲ್ಲಿ ಉದ್ಯೋಗ ಮತ್ತು ವ್ಯಾಪಾರ ಕ್ಷೇತ್ರಗಳು ಅನ್ಯ ರಾಜ್ಯದವರ ಪಾಲಾಗುತ್ತಿರುವುದನ್ನು ಕನ್ನಡಿಗರು ಸಹಿಸಲು ಅಸಾಧ್ಯ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ. ಉಮಾಶಂಕರ ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನ ವಳಗೆರೆಹಳ್ಳಿ ಗ್ರಾಮದಲ್ಲಿ ಎಸ್. ಡಿ. ಜಯರಾಮ ಯುವಕರ ಬಳಗ ವತಿಯಿಂದ ಭಾನುವಾರ ಆಯೋಜಿಸಿದ್ದ 71ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ನಾಡಿನ ವಿವಿಧ ಇಲಾಖೆಗಳಲ್ಲಿ ಸುಮಾರು 3 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿಯಿದ್ದು, ಸರ್ಕಾರಗಳು ಭರ್ತಿ ಮಾಡಲು ಮೀನಾ ಮೇಷ ಎಣಿಸುತ್ತಿವೆ. ಇದರಿಂದ ನಾಡಿನಲ್ಲಿ ನಿರುದ್ಯೋಗಿ ಪದವೀಧರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವುದು ಆಘಾತಕಾರಿ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು.


ಅಂಚೆ, ರೈಲ್ವೆ ಇಲಾಖೆ ಹಾಗೂ ರಾಷ್ಟ್ರೀಯ ಬ್ಯಾಂಕುಗಳಲ್ಲಿ ಕನ್ನಡ ಭಾಷೆ ಬಾರದ ಅನ್ಯ ರಾಜ್ಯದ ಭಾಷಿಕರು ಉದ್ಯೋಗ ಗಿಟ್ಟಿಸಿಕೊಂಡಿರುವುದು ವಿಷಾದನಿಯ. ಆದ್ದರಿಂದ ಆಳುವ ಸರ್ಕಾರಗಳು ಕನ್ನಡ ನೆಲದ ಮಕ್ಕಳಿಗೆ ಉದ್ಯೋಗ ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿ ಮೊದಲಾದ್ಯತೆ ಕೊಡಬೇಕು ಎಂದರು. ರಾಜ್ಯಕ್ಕೆ ಬೇರೆ ರಾಜ್ಯಗಳಿಂದ ಬರುತ್ತಿರುವ ವಲಸಿಗರ ದಾಳಿ ತಡೆಯಲು ಮುಂದಾಗಬೇಕು.

ಕನ್ನಡ ಭಾಷೆಯ ಅಭಿವೃದ್ಧಿಗೆ ಸರ್ಕಾರ ಹೆಚ್ಚು ಗಮನಹರಿಸಿ ವಿಶೇಷ ಅನುದಾನ ಘೋಷಿಸಬೇಕು ಶೇಕಡ 90ರಷ್ಟು ಮಾತನಾಡುವ ಮಂಡ್ಯ ಜಿಲ್ಲೆಯಲ್ಲಿ ಆದಷ್ಟು ಶೀಘ್ರ ಕನ್ನಡ ಭವನ ಸ್ಥಾಪಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು. ಶಿವಶಕ್ತಿ ಕಲಾ ಬಳಗ ಗಾಯಕರಾದ ಗೌತಮ್ ಮತ್ತು ಪ್ರದೀಪ್ ರವರಿಂದ ಕನ್ನಡ ಗೀತೆಗಳನ್ನು ಹಾಡಿ ಮನರಂಜಿಸಿದರು.


ಎಸ್ ಡಿ ಜಯರಾಮ್ ಯುವಕರ ಸಂಘದ ಅಧ್ಯಕ್ಷ ಅರುಣ್, ಉಪಾಧ್ಯಕ್ಷ ಸಚಿನ್, ಗೌರವಾಧ್ಯಕ್ಷ ಸುನಿಲ್, ಪದಾಧಿಕಾರಿಗಳಾದ ಮಂಜು, ಕಾರ್ತಿಕ್, ಅನಿಲ್, ದಿವಾಕರ್, ಪಟೇಲ್, ಸಚಿನ್, ವಿನಯ್, ಚೇತನ್, ಪ್ರಸನ್ನ, ಮುಖಂಡರಾದ ಸೀನಪ್ಪ, ಗೋಪಾಲಕೃಷ್ಣ, ಅಂಬಿ ಶೇಖರ್, ಅಂಗಡಿ ಪ್ರಕಾಶ್, ಕ ಕ ಜ ವೇ ಯುವ ಘಟಕ ಅಧ್ಯಕ್ಷ ವಿಶ್ವಾಸ್ ಹಾಜರಿದ್ದರು.

Continue Reading

Mandya

ಇತ್ತೀಚಿನ ದಿನಗಳಲ್ಲಿ ಸಮಾಜಘಾತುಕ ಸಾಹಿತಿಗಳ ಪ್ರಚೋಧನಕಾರಿ ಧ್ವನಿ ಹುಟ್ಟಡಗಿದೆ : ಎಚ್.ಆರ್.ಅರವಿಂದ್

Published

on

ಮಂಡ್ಯ: ಇತ್ತೀಚಿನ ದಿನಗಳಲ್ಲಿ ಸಮಾಜಘಾತುಕ ಸಾಹಿತಿಗಳ ಪ್ರಚೋಧನಕಾರಿ ಧ್ವನಿ ಹುಟ್ಟಡಗಿದೆ ಎಂದು ಜಿಲ್ಲಾ ಬಿಜೆಪಿ ಮುಖಂಡ ಎಚ್.ಆರ್.ಅರವಿಂದ್ ಅಭಿಪ್ರಾಯಪಟ್ಟರು.

ನಗರದ ಗಾಂಧಿಭವನದಲ್ಲಿ ಕಸ್ತೂರಿ ಸಿರಿಗನ್ನಡ ವೇದಿಕೆ ರಾಜ್ಯಘಟಕ ಆಯೋಜಿಸಿದ್ದ ರಾಜ್ಯಮಟ್ಟದ ಕವಿ ಕಾವ್ಯಮೇಳ ಹಾಗೂ ಕ್ರಾಂತಿ ಕವನ ಸಂಕಲನ ಬಿಡುಗಡೆ ವಿವಿಧ ಕ್ಷೇತ್ರಗಳಲ್ಲಿನ ಸಾಧಕರಿಗೆ ೭೧ನೇ ಕನ್ನಡ ರಾಜ್ಯೋತ್ಸವ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿ, ಸಮಾಜತಿದ್ದುವ ಸಾಹಿತ್ಯ-ಸಾಹಿತಿಗಳ ನಡುವೆ ಸಮಾಜಘಾತುಕ ಸಾಹಿತಿಗಳ ಪ್ರಚೋಧನಕಾರಿ ಧ್ವನಿ ಅಬ್ಬರಿಸುತ್ತಿತ್ತು, ವಿರೋಧವ್ಯಕ್ತವಾದ ಮೇಲೆ ಹುಟ್ಟಡಗಿದೆ, ಸಮಾಜ ಪ್ರಶಾಂತತೆಯತ್ತ ಸಾಗುತ್ತಿದೆ, ಸಾಹಿತಿ ಅಳಿದರೂ ಸಾಹಿತ್ಯ ಸದಾ ಉಳಿದಿರುತ್ತದೆ ಎಂದು ನುಡಿದರು.

ಸಮಾಜದ ಸ್ವಾಸ್ತ್ಯವನ್ನು ಕಾಪಾಡುವುದು, ಸತ್ಯವನ್ನು ಬಿಂಬಿಸುವಂತಹ ಸಾಹಿತ್ಯ ಬೇಕಾಗಿದೆ, ಒಳ್ಳೆತನ ಸೋಲುತ್ತಿದೆ, ಈಗೀಗ ಮಕ್ಕಳಿಗೆ ಅಪ್ಪ-ಅಮ್ಮ ಎಟಿಯಂ ಮಿಷಿನ್ ಆಗಿಬಿಟ್ಟಿದ್ದಾರೆ, ತಂದೆ ತಾಯಿಯನ್ನು ಕಳಕೊಂಡ ಮೇಲೆ ಮೌಲ್ಯ ಗೊತ್ತಾಗುತ್ತದೆ, ಇರುವಾಗಲೇ ಗೌರವದಿಂದ ಪ್ರೀತಿಸುವುದು ಮುಖ್ಯ ಎಂದು ಕಿವಿಮಾತೇಳಿದರು.

ಬಳಿಕ ಮಾತನಾಡಿದ ವೈದ್ಯ ಡಾ. ಆನಂದ್, ನಗು ಮನಷ್ಯನಿಗೆ ಆರೋಗ್ಯ, ಆಯುಸ್ಸು ಹೆಚ್ಚಿಸುತ್ತದೆ, ಯಾರು ಸದಾ ಉಲ್ಲಾಸದಿಂದ ಇರುತ್ತಾರೋ ಅವರಿಗೆ ರೋಗಗಳು ಕಡಿಮೆ, ಪುಸ್ತಕ ಓದುವುದು, ಸದಾ ಚಟುವಟಿಕೆಯಿಂದ ಇರುವುದು ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗಿದೆ, ರೋಗಗಳು ಹೆಚ್ಚಾಗಿವೆ ಎಂದು ಎಚ್ಚರಿಸಿದರು.

ನಂತರ ಮಾತನಾಡಿದ ರಾಷ್ಟ್ರೀಯ ಮಾನವ ಹಕ್ಕುಗಳ ಸಲಹೆಗಾರ ಎಂ.ಗುರುಪ್ರಸಾದ್, ಮೊದಲ ಕವಿಯತ್ರಿ ಅಕ್ಕಮಹಾದೇವಿ, ವಚನಸಾಹಿತ್ಯ ಸಮಾಜವನ್ನು ತಿದ್ದುತ್ತವೆ, ಜ್ಞಾನವನ್ನು ಹೆಚ್ಚಿಸುತ್ತವೆ, ಹೊಸ ಸಾಹಿತಿಗಳು ವಚನಗಳನ್ನು ಓದಿದರೆ ಮತ್ತಷ್ಟು ಕೊಡುಗೆ ನೀಡಬಹುದು ಎಂದು ತಿಳಿಸಿದರು.ಇದೇ ಸಂಧರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವವರಿಗೆ ೭೧ನೇ ಕನ್ನಡ ರಾಜ್ಯೋತ್ಸವ ಪುರಸ್ಕಾರ ನೀಡಲಾಯಿತು. ಪ್ರಜ್ವಲ ಎಂ.ಜಿ.ಅಸ್ಕಿ ಕಲಾಕುಟೀರ ತಂಡದಿಂದ ಸಾಂಸ್ಕೃತಿಕ ನೃತ್ಯರೂಪಕ ನಡೆಯಿತು. ವಿವಿಧ ಕವಿಗಳು ಕವನ ವಾಚಿಸಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಧ್ಯಪಕ ರಘುಪತಿ ತಾಮ್ಹನ್‌ಕರ್, ಕಸಿವೇ ರಾಜ್ಯಾಧ್ಯಕ್ಷ ಪೋತೇರ ಮಹದೇವು, ರಾಜ್ಯ ಉಪಾಧ್ಯಕ್ಷೆ ಮಂಜುಳಾರಮೇಶ್, ಹಾವೇರಿ ಜಿಲ್ಲಾಧ್ಯಕ್ಷ ನಾಗರಾಜು, ರಾಜ್ಯ ಸಂಚಾಲಕಿ ಲೀಲಾವತಿ, ಜನಪದ ಸಾಹಿತಿ ಕೆ.ಪಿ.ವೀರಪ್ಪ, ಎನ್.ವೈಕೆ ನಿವೃತ್ತ ಅಧಿಕಾರಿ ಎಚ್.ಎಂ.ಬಸವರಾಜು, ರೈತ ಹೋರಾಟಗಾರ್ತಿ ರೂಪನಿತಿನ್, ಪತ್ರಕರ್ತ ಆನಂದ್ ಸಿ.ತಿರುಮಲ, ರೈತರ ಸೊಸೈಟಿ ನಿರ್ದೇಶಕ ಉದಯ್‌ಕುಮಾರ್, ಎಚ್.ಈ.ರಮೇಶ್, ಮಲ್ಲಿಕಾರ್ಜುನಯ್ಯ, ಪಾಪಣ್ಣ, ಶಿಕ್ಷಕಿ ಶ್ಯಾಮಲತಾ ಮತ್ತಿತರರಿದ್ದರು

Continue Reading

Mandya

ಯುವತಿಯ ಎಡವಟ್ಟು : ರೈಲ್ವೆ ಹಳಿ ದಾಟುವ ವೇಳೆ ರೈಲಿಗೆ ಸಿಲುಕಿ ಸಾ*ವು

Published

on

ವರದಿ : ಅಲ್ಲಾಪಟ್ಟಣ ಸತೀಶ್

ಶ್ರೀರಂಗಪಟ್ಟಣ : ರೈಲು ಹಳಿ ದಾಟುವ ವೇಳೆ ಯುವತಿಯೋರ್ವಳ ಎಡವಟ್ಟಿನಿಂದಾಗಿ ಆಕೆಯ ಪ್ರಾಣ ಪಕ್ಷಿಯೇ ಹಾರಿ ಹೋದ ಧಾರುಣ ಘಟನೆ ತಾಲ್ಲೂಕಿನ ಚಂದಗಿರಿಕೊಪ್ಪಲು ಬಳಿಯ ರೈಲ್ವೆ ಹಳಿಯಲ್ಲಿ ಸಂಭವಿಸಿದೆ. ಗ್ರಾಮದ ಲಿಖಿತಾ(18) ಎಂಬ ಯುವತಿಯೇ ಆ ನತದೃಷ್ಟೆಯಾಗಿದ್ದು, ಆಕೆ ಚಿನಕುರುಳಿಯ ಎಸ್.ಟಿ.ಜೆ ಕಾಲೇಜಿನಲ್ಲಿ ಬಿಸಿಎ ಓದುತ್ತಿದ್ದ ವಿದ್ಯಾರ್ಥಿನಿಯಾಗಿದ್ದಾಳೆ.

ಆಕೆ ತನ್ನ ತಾಯಿಯೊಂದಿಗೆ ಸ್ಕೂಟರ್ ನಲ್ಲಿ ಬಂದಿದ್ದ ವೇಳೆ ರೈಲು ಬರುತ್ತಿದ್ದ ಕಾರಣ ರೈಲ್ವೆ ಹಳಿಯ ಗೇಟ್ ಹಾಕಲಾಗಿದೆ. ರೈಲನ್ನು ಹತ್ತಿರದಿಂದ ನೋಡುವ ಸಲುವಾಗಿ ಗೇಟ್ ದಾಟಿ ಬಂದಿದ್ದ ಯುವತಿ, ರೈಲಿನ ಸೆಳೆತಕ್ಕೆ ಸಿಲಿಕಿ ಸಾವನ್ನಪ್ಪಿರುವುದಾಗಿ ಹೇಳಲಾಗುತ್ತಿದೆ. ಸ್ಥಳಕ್ಕೆ ರೈಲ್ವೆ ಪೊಲೀಸರ ಭೇಟಿ,ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Continue Reading

Trending

error: Content is protected !!