Chikmagalur
53ನೇ ವರ್ಗದ ಅಯ್ಯಪ್ಪ ಸ್ವಾಮಿ ಉತ್ಸವಕ್ಕೆ ಚಾಲನೆ
ಚಿಕ್ಕಮಗಳೂರು: ನಗರದ ಶ್ರೀ ಬೋಳರಾಮೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀ ಅಯ್ಯಪ್ಪಸ್ವಾಮಿ ಪೂಜಾ ಸಮಿತಿಯ ವತಿಯಿಂದ ಆಯೋಜಿಸಿರುವ 53ನೇ ವರ್ಗದ ವಾರ್ಷಿಕೋತ್ಸವ ಹಾಗೂ ಅಯ್ಯಪ್ಪ ಸ್ವಾಮಿ ಉತ್ಸವಕ್ಕೆ ಸೋಮವಾರ ಧಾರ್ಮಿಕ ವಿಧಿವಿಧಾನಗಳೊಂದಿಗೆ ಚಾಲನೆ ನೀಡಲಾಯಿತು.
ಸಮಿತಿಯ ಅಧ್ಯಕ್ಷ ಅಶೋಕ್ ಸಚ್ಚಿದೇವ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಣಹೋಮ ನೆರವೇರಿಸಿ, ಶ್ರೀ ಅಯ್ಯಪ್ಪ ಸ್ವಾಮಿಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಶಬರಿಮಲೆ ಶ್ರೀ ಸನ್ನಿಧಾನದ ಗರ್ಭಗುಡಿಯ ಬಾಗಿಲು ನವೆಂಬರ್ 19ರಂದು ತೆರೆಯುವ ಪವಿತ್ರ ಸಂದರ್ಭದಲ್ಲಿ ಚಿಕ್ಕಮಗಳೂರಿನಲ್ಲಿಯೂ ಸ್ವಾಮಿಯ ಪ್ರತಿಷ್ಠಾಪನೆ ನೆರವೇರಿಸಿರುವುದು ಭಕ್ತರಲ್ಲಿ ವಿಶೇಷ ಭಕ್ತಿಭಾವ ಮೂಡಿಸಿತು.
ಸಮಿತಿಯ ಮಾಜಿ ಅಧ್ಯಕ್ಷ ದೇವರಾಜ್ ಶೆಟ್ಟಿ ಮಾತನಾಡಿ, 53ನೇ ವರ್ಗದ ಉತ್ಸವವನ್ನು ಯಶಸ್ವಿಯಾಗಿ ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯ ಅಯ್ಯಪ್ಪ ಸ್ವಾಮಿ ಭಕ್ತರಿಗೆ ಅನುಕೂಲವಾಗುವಂತೆ ಪ್ರತಿವರ್ಗದಂತೆ ಈ ಬಾರಿಯೂ ಎರಡು ತಿಂಗಳ ಕಾಲ ಸ್ವಾಮಿಯ ಪ್ರತಿಷ್ಠಾಪನೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸಮಿತಿಯ ಅಧ್ಯಕ್ಷ ಅಶೋಕ್ ಸಚ್ಚಿದೇವ್ ಮಾತನಾಡಿ, ಡಿಸೆಂಬರ್ 26ರಿಂದ 30ರವರೆಗೆ ಐದು ದಿನಗಳ ಕಾಲ ವಿಶೇಷ ಉತ್ಸವ ನಡೆಯಲಿದ್ದು, ಡಿಸೆಂಬರ್ 27ರಂದು ಸಾರ್ವಜನಿಕ ಅನ್ನಸಂತರ್ಪಣೆ ಆಯೋಜಿಸಲಾಗಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಉತ್ಸವದ ಯಶಸ್ಸಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಸಮಿತಿಯ ಖಜಾಂಚಿ ಮುಖೇಶ್ ಸಿಂಗ್ ಮಾತನಾಡಿ, ಡಿಸೆಂಬರ್ 26ರಂದು ಗಣಹೋಮ, 27ರಂದು ಸಾರ್ವಜನಿಕ ಅನ್ನಸಂತರ್ಪಣೆ ಹಾಗೂ ಡಿಸೆಂಬರ್ 30ರಂದು ಸ್ವಾಮಿಯ ಮೂರ್ತಿಯನ್ನು ರಾಜಬೀದಿಗಳಲ್ಲಿ ಮೆರವಣಿಗೆ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಶ್ರೀ ಅಯ್ಯಪ್ಪ ಸ್ವಾಮಿಯ ಆಶೀರ್ವಾದ ಜಿಲ್ಲೆಯ ಸಮಸ್ತ ಜನತೆ ಹಾಗೂ ರಾಜ್ಯದ ಜನತೆಗೆ ಲಭಿಸಲಿ. ಎಲ್ಲರಿಗೂ ಸುಖ, ಶಾಂತಿ, ನೆಮ್ಮದಿ ದೊರೆಯಲಿ ಹಾಗೂ ಉತ್ಸವದ ಕಾರ್ಯಕ್ರಮಗಳು ಯಾವುದೇ ವಿಘ್ನಗಳಿಲ್ಲದೆ ನೆರವೇರಲಿ ಎಂದು ಪ್ರಾರ್ಥಿಸಿದರು.
ಈ ಕಾರ್ಯಕ್ರಮದಲ್ಲಿ ಸಮಿತಿಯ ಗೌರವ ಅಧ್ಯಕ್ಷ ನಾರಾಯಣಗೌಡ, ಕಾರ್ಯದರ್ಶಿ ದಿಲೀಪ್ ರಾಜ್, ಉಪಾಧ್ಯಕ್ಷರಾದ ಸಿ.ಪಿ ರವಿಶಂಕರ್, ಮಂಜುನಾಥ್, ಜೀವನ್ ಕೆ. ಶೆಟ್ಟಿ, ಅಣ್ಣಯ್ಯ ಜಿ, ವೆಂಕಟೇಶ್, ಮಹಾದೇವ್, ಸದಸ್ಯರುಗಳಾದ ಉಮೇಶ್, ಲಕ್ಷ್ಮೀ ಕಾಂತ್, ನಟರಾಜ್, ಕೋಟೆ ಸತೀಶ್, ಧರ್ಮಪಾಲ್, ರಮೇಶ್ ಕುಮಾರ್, ಚೆನ್ನಕೇಶವ, ಮನೋಹರ್, ಮೂರ್ತಿ, ಯಶ್ವಂತ್ ರಾವ್, ಎಸ್‌ಡಿಎಂ ಮಂಜು, ಚೇತನ್, ರಂಗನಾಥ್, ಪ್ರಶಾಂತ್, ಮಹಾದೇವ, ಕಿರಣ್, ಗಿರೀಶ್ ಗೋಪಿ, ಬಸವಣ್ಣ ರಾಮಚಂದ್ರ, ಭಕ್ತಾದಿಗಳು ಇದ್ದರು.
Chikmagalur
ಬಾಳೆಮನೆ ನಟರಾಜ್ ಅವರಿಗೆ “ಸಹಕಾರ ರತ್ನ” ಪ್ರಶಸ್ತಿ
ಜಯಪುರ : ಸಹಕಾರ ಕ್ಷೇತ್ರದಲ್ಲಿ ಸುಧೀರ್ಘ ನಲವತ್ತು ವರ್ಷಗಳ ಕಾಲ ಸೇವೆ ಸಲ್ಲಿಸುತ್ತ ಬಂದಿರುವ ಬಾಳೆಮನೆ ನಟರಾಜ್ ರವರಿಗೆ ರಾಜ್ಯ ಸಹಕಾರ ಮಹಾಮಂಡಳಿ ಈ ಬಾರಿಯ “ಸಹಕಾರ ರತ್ನ” ಪ್ರಶಸ್ತಿಯನ್ನು ಶನಿವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಪ್ರಧಾನ ಮಾಡಿದರು.
ಕೊಪ್ಪ ತಾಲೂಕಿನ ಅಗಳಗಂಡಿ ಸಮೀಪದ ಬಾಳೆಮನೆಯಲ್ಲಿ ಕೃಷಿ ಕುಟುಂಬ ಇವರದಾಗಿದ್ದು, ದಶಕಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ತೊಡಗಿಸಿಕೊಂಡಿದ್ದಾರೆ. ಅದರ ಜತೆಗೆ ಸಹಕಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಇವರು 1991ರಲ್ಲಿ ಕರಿಮನೆಯ ಶ್ರೀ ರಾಮಸೇವಾ ಪಿಕಾರ್ಡ್ ಬ್ಯಾಂಕ್‌ಗೆ ನಿರ್ದೇಶಕರಾಗಿ ಮೊದಲು ಆಯ್ಕೆಗೊಳ್ಳುತ್ತಾರೆ. ನಂತರದ ದಿನಗಳಲ್ಲಿ ಸಹಕಾರ ಕ್ಷೇತ್ರದಲ್ಲಿ ವಿವಿಧ ಹಂತಗಳಲ್ಲಿ ಜಿಲ್ಲಾ ನಿರ್ದೇಶಕರಾಗಿ, ಸರ್ಕಾರದ ನಾಮ ನಿರ್ದೇಶಿತ ನಿರ್ದೇಶಕರಾಗಿ, ವಿಷಯ ಪರಿಣಿತ ನಿರ್ದೇಶಕರಾಗಿ ಹುದ್ದೆಗಳನ್ನು ಅಲಂಕರಿಸಿ ಜನರಿಗೆ ಸಹಕಾರ ಕ್ಷೇತ್ರದ ಮೂಲಕ ಸೇವೆ ಸಲ್ಲಿಸುತ್ತಿದ್ದಾರೆ.

ಕರಿಮನೆಯ ಶ್ರೀ ರಾಮಸೇವಾ ಪಿಕಾರ್ಡ್ ಬ್ಯಾಂಕ್‌ಗೆ ನಿರ್ದೇಶಕರಾಗಿ ಆಯ್ಕೆಯಾದ ನಂತರ ಸಹಕಾರ ಕ್ಷೇತ್ರದಿಂದ ರೈತರಿಗೆ, ಶೇರುದಾರರಿಗೆ ಬ್ಯಾಂಕ್‌ನ ಯೋಜನೆ ಸವಲತ್ತುಗಳನ್ನು ತಲುಪಿಸುವಲ್ಲಿ ಯಶಸ್ವಿಯಾದರು. ಸಣ್ಣ, ಮಧ್ಯಮ ವರ್ಗದ ರೈತರಿಗೆ ಹೆಚ್ಚು ಅನುಕೂಲವನ್ನು ಮಾಡಿಕೊಟ್ಟಿದ್ದಾರೆ. 1994ರಲ್ಲಿ ಇವರು ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದರು.
ಕರಿಮನೆಯ ಶ್ರೀ ರಾಮಸೇವಾ ಪಿಕಾರ್ಡ್ ಬ್ಯಾಂಕ್, ಬೆಂಗಳೂರಿನ ಕಾಸ್ಕಾರ್ಡ್ ಬ್ಯಾಂಕ್, ಕೊಪ್ಪ ಸೌಹಾರ್ದ ಸಹಕಾರಿ ಸಂಘದ ಮೂಲಕ ಸಾರ್ವಜನಿಕರಿಗೆ ಸಹಕಾರಿಗಳ ಏಳಿಗೆಗೆ ದುಡಿದಿದ್ದಾರೆ.
ವರದಿ :- ಎಂ.ಪಿ.ಪ್ರದೀಪ್ ಹೆಬ್ಬಾರ್, ಜಯಪುರ.
Chikmagalur
ಶ್ರೀ ಕಲಶೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಗಿರಿಜಾ ಕಲ್ಯಾಣೋತ್ಸವ
ಕಳಸ: ತಾಲೂಕಿನ ಅಗಸ್ತ್ಯ ಕ್ಷೇತ್ರ, ಭಾರತದ ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ಕಳಸದ ಶ್ರೀ ಕಲಶೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಇಂದಿನಿಂದ 8 ದಿನಗಳ ಕಾಲ ಗಿರಿಜಾ ಕಲ್ಯಾಣೋತ್ಸವ ಕಾರ್ಯಕ್ರಮವು ಜರುಗಲಿದೆ ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳಾದ ಮಂಜುನಾಥ ಅವರು ತಿಳಿಸಿದ್ದಾರೆ.
ನವೆಂಬರ್ 20ರಂದು ಶ್ರೀ ಕಲಶೇಶ್ವರ ಸ್ವಾಮಿಯವರಿಗೆ ರಾತ್ರಿ 3ಗಂಟೆಗೆ ಸರಿಯಾಗಿ ಶ್ರೀ ಗಿರಿಜಾ ಕಲ್ಯಾಣ ಮಹೋತ್ಸವವು ಸಡಗರ ಸಂಭ್ರಮದಿಂದ ನಡೆಯಲಿದೆ. ಗಿರಿಜಾ ಕಲ್ಯಾಣೋತ್ಸವದ ಅಂಗವಾಗಿ ನವೆಂಬರ್ 17 ರಿಂದ 24ರ ವರೆಗೆ ವಿವಿಧ ಪೂಜಾ ಕಾರ್ಯಕ್ರಮಗಳು ಜರುಗಲಿದೆ.

ನ.17ರಂದು ರಾತ್ರಿ ಶ್ರೀ ಗಣಪತಿ ಪೂಜೆ ಹಾಗೂ ಅಂಕುರಾರ್ಪಣೆ ನ.18ರಂದು ರಾತ್ರಿ ಕೌತುಕೋತ್ಸವ
ನ.19ರಂದು ಹಗಲು ಧ್ವಜಾರೋಹಣ, ಗ್ರಾಮಸ್ಥರಿಂದ ಹಸಿರುವಾಣಿ ಸಮರ್ಪಣೆ ರಾತ್ರಿ ಕಾರ್ತಿಕ ದೀಪೋತ್ಸವ ಮತ್ತು ಸುಪ್ರದಕ್ಷಿಣೆ ಪೂಜೆ ನಡೆಯಲಿದೆ. ನ.21ರಂದು ಹಗಲು ಮಹಾಪೂಜೆ, ಪ್ರಸಾದ ವಿನಿಯೋಗ ರಾತ್ರಿ ಕ್ಷೀರಾಬ್ಧಿ ಮತ್ತು ತುಳಸಿಪೂಜೆ ಹಾಗೂ ಚಿಕ್ಕ ರಥೋತ್ಸವ ಜರುಗಲಿದೆ.
ನ.22ರಂದು ಬಿಂದುಮಾಧವ ದೇವರ ಆಗಮನ ಹಾಗೂ ರಾತ್ರಿ ಡೋಲೋತ್ಸವ ನೆರವೇರಲಿದೆ.
ನ.23ರಂದು ಕುಂಕುಮಾರ್ಚನೆ, ರುದ್ರತೀರ್ಥದಲ್ಲಿ ಅವಭೃತ ಸ್ನಾನ ಮತ್ತು ರಾತ್ರಿ ಧ್ವಜಾರೋಹಣ ನಡೆಯಲಿದೆ.
ನ.24ರಂದು ಮಹಾಸಂಪ್ರೋಕ್ಷಣೆ, ಧಾತ್ರೀ ಹೋಮ, ವಸಿಷ್ಠಾಶ್ರಮಕ್ಕೆ ಆಗಮನ, ತ್ರಿಪುರೋತ್ಸವ, ಹರಿಹರ ಸಮಾಗಮ ಹಾಗೂ ರಾತ್ರಿ ಕೃತ್ತಿಕಾ ದೀಪೋತ್ಸವ ನೆರವೇರಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ. ಗಿರಿಜಾ ಕಲ್ಯಾಣೋತ್ಸವ ಅಂಗವಾಗಿ ನವೆಂಬರ್ 20ರಂದು ಶ್ರೀ ಕುಮಾರ ಸಾಂಸ್ಕೃತಿಕ ಪ್ರತಿಷ್ಠಾನ ಹಳುವಳ್ಳಿ ಇವರ ವತಿಯಿಂದ ಪಂಚವಟಿ – ಇಂದ್ರಜಿತು ಎಂಬ ಯಕ್ಷಗಾನವು ನಡೆಯಲಿದ್ದು ಡಿಸೆಂಬರ್ 8ರಂದು ಶ್ರೀ ಕ್ಷೇತ್ರದಲ್ಲಿ ಲಕ್ಷ ದೀಪೋತ್ಸವ ನೆರವೇರಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.
ವರದಿ: ಪ್ರೀತಮ್ ಹೆಬ್ಬಾರ್
Chikmagalur
ಇಂದಿರಾಗಾಂಧಿ ಜನ್ಮದಿನಾಚರಣೆ ಪ್ರಯುಕ್ತ ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭ
ಚಿಕ್ಕಮಗಳೂರು: ಮಾಜಿ ಪ್ರಧಾನಿ, ಉಕ್ಕಿನ ಮಹಿಳೆ ಎಂದೇ ಖ್ಯಾತಿ ಪಡೆದಿದ್ದ ಇಂದಿರಾಗಾಂಧಿಯವರ ಜನ್ಮದಿನಾಚರಣೆ ಹಾಗೂ ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಹೆಚ್.ಪಿ. ಮಂಜೇಗೌಡ ಅವರ ಜವಾಬ್ದಾರಿ ಸ್ವೀಕಾರ ಸಮಾರಂಭವನ್ನು ನವೆಂಬರ್ 19ರಂದು ನಗರದ ಗಾಯತ್ರಿದೇವಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ.

ಗುರುವಾರ ಬೆಳಿಗ್ಗೆ 10.30ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ಇಂದಿರಾಗಾಂಧಿಯವರ 110ನೇ ಜನ್ಮದಿನವನ್ನು ಆಚರಿಸುವುದರ ಜೊತೆಗೆ, ಜಿಲ್ಲಾ ಕಾಂಗ್ರೆಸ್‌ನ ನೂತನ ಅಧ್ಯಕ್ಷರಾಗಿ ಹೆಚ್.ಪಿ. ಮಂಜೇಗೌಡ ಅವರು ಅಧಿಕೃತವಾಗಿ ಜವಾಬ್ದಾರಿ ಸ್ವೀಕರಿಸಲಿದ್ದಾರೆ.
ಹಂಪಾಪುರ ಗ್ರಾಮದ ಕೃಷಿ ಕುಟುಂಬದವರಾದ ಹೆಚ್.ಪಿ. ಮಂಜೇಗೌಡ ಅವರು ಚಿಕ್ಕ ವಯಸ್ಸಿನಿಂದಲೇ ಸಾರ್ವಜನಿಕ ಹಾಗೂ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ, ಕಾಂಗ್ರೆಸ್ ಪಕ್ಷದ ಬೂತ್ ಅಧ್ಯಕ್ಷರಾಗಿ ಹಾಗೂ ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವ ಅವರು, ಪಕ್ಷ ಸಂಘಟನೆ ಮತ್ತು ಹಲವು ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಪಕ್ಷದ ಈ ಹಿಂದಿನ ಸೇವೆ ಹಾಗೂ ಸಂಘಟನಾ ಅನುಭವವನ್ನು ಪರಿಗಣಿಸಿ ಅವರನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಇದೇ ಸಂದರ್ಭದಲ್ಲಿ 2019ರಿಂದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ. ಕೆ.ಪಿ. ಅಂಶುಮಂತ್ ಅವರು ನೂತನ ಅಧ್ಯಕ್ಷರಿಗೆ ಜವಾಬ್ದಾರಿ ಹಸ್ತಾಂತರಿಸಲಿದ್ದಾರೆ. ವೃತ್ತಿಯಲ್ಲಿ ವೈದ್ಯರಾಗಿರುವ ಅಂಶುಮಂತ್ ಅವರು ವಿದ್ಯಾರ್ಥಿ ದೆಸೆಯಿಂದಲೇ ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದು, ಕಳೆದ ಹಲವು ವರ್ಷಗಳಿಂದ ಪಕ್ಷದ ಸಂಘಟನೆಗೆ ಶ್ರಮಿಸಿದ್ದಾರೆ.
ಇಂದಿರಾಗಾಂಧಿಯವರು ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಪುತ್ರಿಯಾಗಿದ್ದು, ಸ್ವಾತಂತ್ರ್ಯ ಹೋರಾಟದ ದಿನಗಳಿಂದಲೇ ಸಾರ್ವಜನಿಕ ಜೀವನದಲ್ಲಿ ಗುರುತಿಸಿಕೊಂಡಿದ್ದರು. ಪ್ರಧಾನಮಂತ್ರಿಯಾಗಿ ದೇಶದ ಆಡಳಿತದಲ್ಲಿ ಮಹತ್ವದ ಪಾತ್ರ ವಹಿಸಿದ್ದ ಅವರು, ಬಡವರು ಹಾಗೂ ಸಾಮಾನ್ಯ ಜನರ ಕಲ್ಯಾಣಕ್ಕಾಗಿ ಕೈಗೊಂಡ ಹಲವು ಕಾರ್ಯಗಳ ಮೂಲಕ ದೇಶದ ರಾಜಕೀಯ ಇತಿಹಾಸದಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದಾರೆ. ಅವರ ಜನ್ಮದಿನವನ್ನು ಸ್ಮರಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಬಿ.ಕೆ ಹರಿಪ್ರಸಾದ್, ಮಾಜಿ ಮುಖ್ಯಮಂತ್ರಿ ಹಾಗೂ ಎಐಸಿಸಿ ಕಾರ್ಯಕಾರಿ ಸಮಿತಿ ಸದಸ್ಯ ಸಿದ್ದರಾಮಯ್ಯ, ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಜ್ವಾನ್ ಅರ್ಷದ್ ಸೇರಿದಂತೆ ಜಿಲ್ಲೆಯ ಶಾಸಕರಾದ ಟಿ.ಡಿ ರಾಜೇಗೌಡ, ಜಿ.ಹೆಚ್ ಶ್ರೀನಿವಾಸ್, ಹೆಚ್.ಡಿ ತಮ್ಮಯ್ಯ, ಕೆ.ಎಸ್. ಆನಂದ್, ನಯನಾ ಮೋಟಮ್ಮ, ವಿಧಾನ ಪರಿಷತ್ ಸದಸ್ಯರಾದ ವಿ.ವಿ ಗಾಯತ್ರಿ ಶಾಂತೇಗೌಡ, ಡಾ. ಆರತಿ ಕೃಷ್ಣ ಹಾಗೂ ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರು ಭಾಗವಹಿಸಲಿದ್ದಾರೆ.
-
Kodagu21 hours agoಕೊಡಗು ಮುಸ್ಲಿಂ ಅಸೋಸಿಯೇಷನ್ ಸಂಘಟನೆ ಅಸ್ತಿತ್ವಕ್ಕೆ – ನೂತನ ಪದಾಧಿಕಾರಿಗಳ ಆಯ್ಕೆ
-
Kodagu23 hours agoಕೊಡವ ಮುಸ್ಲಿಮರ ಇತಿಹಾಸ ಸಂಶೋಧನಾ ವಿಷಯವಾಗಬೇಕು,ರಾಷ್ಟ್ರಪತಿ ಪದಕ ಪುರಸ್ಕೃತ ಪೊಲೀಸ್ ಇನ್ಸ್ಪೆಕ್ಟರ್ ಎಂ.ಎ. ಮಹಮ್ಮದ್ ಅಭಿಮತ
-
Special23 hours agoರಾಮಾಯಣ ಭಾಗ 1ರ ಬಜೆಟ್ ₹800 ಕೋಟಿಗೂ ಕಡಿಮೆ: ರಾಮ್ ಗೋಪಾಲ್ ವರ್ಮಾ
-
State3 hours agoಕರ್ನಾಟಕ ವಾಯು ಗುಣಮಟ್ಟ ವರದಿ:ಕೊಡಗಿನಲ್ಲಿ ಅತ್ಯುತ್ತಮ ಶುದ್ಧಗಾಳಿ
-
Hassan6 hours agoಬೇಲೂರಿನಲ್ಲಿ ಕಾಡಾನೆ ದಾಳಿಗೆ ಮತ್ತೊಂದು ಬ*ಲಿ: ಕಾಫಿ ತೋಟಕ್ಕೆ ತೆರಳುತ್ತಿದ್ದ ಕಾರ್ಮಿಕ ಸಾ*ವು
-
State4 hours agoಮೂರು ಎಫ್ಐಆರ್ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ ನಟ ಧನ್ವೀರ್
-
Hassan2 hours agoಸರಕ್ಕೆ ಕೊಂಡಿ ಹಾಕುವ ನೆಪದಲ್ಲಿ ಚಿನ್ನಕ್ಕೆ ಕತ್ತರಿ: ಜ್ಯೂಯಲರಿ ಕೆಲಸಗಾರನ ವಿರುದ್ಧ ದೂರು
-
Chamarajanagar20 hours agoಚಿರತೆ ದಾಳಿಗೆ ಹಸು ಬ*ಲಿ: ಮೂರು ಹಸುಗಳು ಪಾರು!
