Chikmagalur
ಬಾಲ್ಯವಿವಾಹದ ಬಳಿಕ ಅಪ್ರಾಪ್ತ ಬಾಲಕಿ ಗರ್ಭಿಣಿ: ಯುವಕನ ವಿರುದ್ಧ ಪ್ರಕರಣ ದಾಖಲು
ಕಡೂರು: ಅಪ್ರಾಪ್ತ ಬಾಲಕಿಗೆ ಬಾಲ್ಯವಿವಾಹ ಮಾಡಿಸಿ, ಆಕೆ ಐದು ತಿಂಗಳ ಗರ್ಭಿಣಿಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಡೂರು ಪೊಲೀಸ್ ಠಾಣೆಯಲ್ಲಿ ಬಾಲ್ಯವಿವಾಹ ನಿಷೇಧ ಕಾಯ್ದೆ ಹಾಗೂ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಎಸ್. ಬಿದರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಪ್ರಾಪ್ತ ಬಾಲಕಿಯನ್ನು ಬಿ. ಗೊಲ್ಲರಹಟ್ಟಿ ಗ್ರಾಮದ ದೇವೇಂದ್ರ ಎಂಬ ಯುವಕನೊಂದಿಗೆ ಬಾಲ್ಯವಿವಾಹ ಮಾಡಲಾಗಿತ್ತು. ಸದ್ಯ ಬಾಲಕಿ ಐದು ತಿಂಗಳ ಗರ್ಭಿಣಿಯಾಗಿರುವುದಾಗಿ ಮಕ್ಕಳ ಸಹಾಯವಾಣಿಗೆ ಮಾಹಿತಿ ಬಂದಿತ್ತು.
ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಬಾಲಕಿಯ ಮನೆಗೆ ಭೇಟಿ ನೀಡಿ ಪರಿಶೀಲಿಸಿದಾಗ ಬಾಲ್ಯವಿವಾಹ ನಡೆದಿರುವುದು ಹಾಗೂ ಬಾಲಕಿ ಗರ್ಭಿಣಿಯಾಗಿರುವುದು ದೃಢಪಟ್ಟಿತ್ತು. ಬಳಿಕ ಅಕ್ಟೋಬರ್ 14ರಂದು ಶಿಶು ಅಭಿವೃದ್ಧಿ ಯೋಜನಾ ಇಲಾಖೆಯ ಅಂಗನವಾಡಿ ಮೇಲ್ವಿಚಾರಕರು ಹಾಗೂ ಮಕ್ಕಳ ಸಹಾಯವಾಣಿ ಸಿಬ್ಬಂದಿ ಬಾಲಕಿ ಮತ್ತು ಯುವಕನ ಮನೆಗೆ ಭೇಟಿ ನೀಡಿದಾಗ ಯಾರೂ ಮನೆಯಲ್ಲಿ ಇರಲಿಲ್ಲ.

ಬಾಲ್ಯವಿವಾಹ ಹಾಗೂ ಬಾಲಕಿ ಗರ್ಭಿಣಿಯಾಗಿರುವುದಕ್ಕೆ ಸಂಬಂಧಿಸಿದ ಪೂರಕ ದಾಖಲೆಗಳ ಆಧಾರದ ಮೇಲೆ ನೊಂದ ಬಾಲಕಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ನವೆಂಬರ್ 16ರಂದು ಕಡೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಮೇರೆಗೆ ಪೊಲೀಸರು ಬಾಲ್ಯವಿವಾಹ ನಿಷೇಧ ಕಾಯ್ದೆ ಹಾಗೂ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ನೊಂದ ಬಾಲಕಿಯ ಗುರುತು ಬಹಿರಂಗವಾಗದಂತೆ ಪೊಲೀಸ್ ವರದಿಯಲ್ಲಿ ಆಕೆಯ ಹೆಸರಿನ ಬದಲಿಗೆ MINOR-178 ಎಂದು ನಮೂದಿಸಲಾಗಿದೆ.
Chikmagalur
ಕಡೂರಿನಲ್ಲಿ ರಸ್ತೆ ಅಪಘಾ*ತ: ಚಿಕಿತ್ಸೆ ಫಲಿಸದೆ ವೃದ್ಧ ಸಾ*ವು
ಕಡೂರು: ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವೃದ್ಧರೊಬ್ಬರು ಸುದೀರ್ಘ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ನಡೆದಿದೆ. ಚಿಕ್ಕಮಗಳೂರು ತಾಲ್ಲೂಕಿನ ಲಕ್ಯಾ ಗ್ರಾಮದ ಅಣ್ಣಯ್ಯ (ತಂದೆಯ ಹೆಸರು ಲಭ್ಯವಿಲ್ಲ) ಮೃತಪಟ್ಟವರು.
ಘಟನೆಯ ವಿವರ: ಅಕ್ಟೋಬರ್ 29ರಂದು ಮಧ್ಯಾಹ್ನ 3.30ರ ಸುಮಾರಿಗೆ ಕಡೂರು ಪಟ್ಟಣದ ಎಂ.ಎಸ್.ಆರ್. ಸರ್ಕಲ್ ಬಳಿ ಅಣ್ಣಯ್ಯ ಅವರು ತಮ್ಮ ಟಿವಿಎಸ್ ಎಕ್ಸ್‌ಎಲ್ (KA-18 EC-8881) ವಾಹನದಲ್ಲಿ ತೆರಳುತ್ತಿದ್ದಾಗ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದಿದ್ದಾರೆ. ಪರಿಣಾಮ ತಲೆಗೆ ಹಾಗೂ ಮುಖಕ್ಕೆ ಗಂಭೀರ ಗಾಯಗಳಾಗಿದ್ದು, ಕೈಕಾಲುಗಳಿಗೂ ತರಚಿದ ಗಾಯಗಳಾಗಿದ್ದವು.

ಅಪಘಾತದ ಬಳಿಕ ಸಂಬಂಧಿಕರು ಹಾಗೂ ಸಾರ್ವಜನಿಕರು ಅವರನ್ನು ಕಡೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕಡೂರಿನ ಕೆ.ಎಂ.ಎಚ್. ಆಸ್ಪತ್ರೆ, ಚಿಕ್ಕಮಗಳೂರಿನ ಕೆ.ಆರ್.ಎಸ್. ಆಸ್ಪತ್ರೆ ಹಾಗೂ ಮಂಗಳೂರಿನ ಯೂನಿಟಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿತ್ತು. ನಂತರ ಹಾಸನದ ಸರ್ಕಾರಿ ಹಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನವೆಂಬರ್ 15ರಂದು ಸಂಜೆ 7.50ರ ಸುಮಾರಿಗೆ ಅಣ್ಣಯ್ಯ ಮೃತಪಟ್ಟಿದ್ದಾರೆ. ಈ ಸಂಬಂಧ ಮೃತರ ಪುತ್ರಿ ಉಷಾ ಅವರು ನವೆಂಬರ್ 16ರಂದು ಕಡೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅಪಘಾತದ ಬಗ್ಗೆ ಪ್ರಕರಣ ದಾಖಲಾಗಿದೆ.
Chikmagalur
ಜಿಂಕೆ ಮಾಂಸ ಮಾರಾಟ ಇಬ್ಬರ ಬಂಧನ
ಚಿಕ್ಕಮಗಳೂರು: ಪ್ರಾದೇಶಿಕ ವಲಯದ ಅಧಿಕಾರಿಗಳು ಮಾಗಡಿ ಹ್ಯಾಂಡ್ ಪೋಸ್ಟ್ ಸಮೀಪದ ರಾಜು ಅಲಿಯಾಸ್ ದೇವರಾಜು ಎಂಬುವವರ ಮನೆಯಲ್ಲಿ ಜಿಂಕೆ ಮಾಂಸ ಮಾರಾಟ ಮತ್ತು ಹಂಚಿಕೊಳ್ಳುವ ಬಗ್ಗೆ ಖಚಿತ ಮಾಹಿತಿ ದೊರೆತ ಮೇರೆಗೆ ದಾಳಿ ನಡೆಸಿ,ಸ್ಥಳದಲ್ಲಿ ಬೇಹಿಸಿದ ಜಿಂಕೆ ಮಾಂಸ ಹಾಗೂ ರಾಜು ಅಲಿಯಾಸ್ ದೇವರಾಜ್ ಎಂಬ ವ್ಯಕ್ತಿಯನ್ನು ವಶಕ್ಕೆ ಪಡೆದು ತನಿಖೆಗೆ ಒಳಪಡಿಸಿದಾಗ ಈ ಕಾಡು ಪ್ರಾಣಿಗಳ ಮಾಂಸವನ್ನು ನನಗೆ ಮಾರಾಟ ಮಾಡಿದ್ದು ಚಿಕ್ಕಮಗಳೂರು ಟಿಪ್ಪುನಗರದ ವಾಸಿ ಕುಮಾರ್ ಪಿ ಎಂದು ತಿಳಿದುಬಂದಿದ್ದು ಇವರೆಲ್ಲಾ ಸೇರಿ ಜಿಂಕೆ ಮಾಂಸ ಮಾರಾಟ ದಂಧೆಯಲ್ಲಿ ತೊಡಗಿದ್ದರೂ ಎಂದು ತಿಳಿದುಬಂದಿದೆ.ಕುಮಾರನನ್ನು ವಶಕ್ಕೆ ಪಡೆದು ಹೆಚ್ಚಿನ ತನಿಖೆಗೆ ಒಳಪಡಿಸಲಾಗಿದೆ.

ಜಿಂಕೆ ಮಾಂಸ ಸರಬರಾಜು ಮಾಡುತಿದ್ದ ಬೇಲೂರಿನ ಕಿಂಗ್ ಪಿನ್ ಅಲಿ ತಲೆಮರೆಸಿಕೊಂಡಿದ್ದಾನೆ,ಇನ್ನೋರ್ವ ಪ್ರಮುಖ ಆರೋಪಿ ಯೋಗಿ ಗೌಡ ಕರ್ತಿಕೆರೆ ಕೂಡ ತಲೆಮರೆಸಿಕೊಂಡಿದ್ದಾನೆ. ಒಂದು ಕೆಜಿ ಬೇಹಿಸಿದ ಜಿಂಕೆ ಮಾಂಸ ವಶಕ್ಕೆ ಪಡೆದು ರಾಜು, ಕುಮಾರ್ ಪಿ ಬಂಧಿಸಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ .ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್ ಕ್ಷೀರಸಾಗರ, ಉಪ ಅರಣ್ಯ ಸಂರಕ್ಷಣಾಧಿಕಾರಿ ಬೋರಯ್ಯ ಮಾರ್ಗದರ್ಶದಲ್ಲಿ ಕಾರ್ಯಾಚರಣೆ ನಡೆಸಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಚರಣ್,ವಲಯ ಅರಣ್ಯಾಧಿಕಾರಿ ಹರೀಶ್, ಉಪ ವಲಯ ಅರಣ್ಯಾಧಿಕಾರಿಗಳಾದ ಸಂತೋಷ್, ದಿನೇಶ್,ನಾರಾಯಣ, ಪ್ರದೇಪ,ಮಂಜುನಾಥ್,ಪ್ರವೀಣ್ ಕಾರ್ಯಚರಣೆಯಲ್ಲಿ ಇದ್ದರು.
Chikmagalur
ದೇವಿರಮ್ಮ ಬೆಟ್ಟದಲ್ಲಿ ಗಾಯಗೊಂಡ ಯುವಕನಿಗೆ 5 ಲಕ್ಷ ಪರಿಹಾರಕ್ಕೆ ಆಗ್ರಹ
ಚಿಕ್ಕಮಗಳೂರು: ಬಿಂಡಿಗ ದೇವೀರಮ್ಮ ದೇವಸ್ಥಾನದ ಬೆಟ್ಟ ಹತ್ತುವ ಸಂದರ್ಭದಲ್ಲಿ ಕಂಬಿ ಮುರಿದು ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಚೇತನ್ ಗೆ ಸರ್ಕಾರ ೫ ಲಕ್ಷ ಪರಿಹಾರ ನೀಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ.

ಈ ಸಂಭಂಧ ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಕಬ್ಬಿಗೆರೆ ಮೋಹನ್ ಚಿಕ್ಕಮಗಳೂರು ಉಪವಿಭಾಗಾಧಿಕಾರಿ ಗುರುರಾಜ್ ಸಿಂಗ್ ಸೋಲಂಕಿ ಅವರಿಗೆ ಮನವಿ ಸಲ್ಲಿಸಿದ್ದಾರೆ. ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಅರೇಹಳ್ಳಿ ಹೋಬಳಿಯ ಲಿಂಗಾಪುರ ಗ್ರಾಮದ ರಾಮಚಂದ್ರ ಅವರ ಪುತ್ರ ಚೇತನ್, ನವೆಂಬರ್ ೮ರಂದು ಚಿಕ್ಕಮಗಳೂರು ತಾಲ್ಲೂಕಿನ ಬಿಂಡಿಗ ದೇವೀರಮ್ಮ ದೇವಸ್ಥಾನದ ಬೆಟ್ಟ ಹತ್ತುವ ಸಂದರ್ಭದಲ್ಲಿ ಸೂಕ್ತ ಬಂದೋಬಸ್ತ್ ಇಲ್ಲದ ಕಂಬಿ ಮುರಿದು ಬಿದ್ದ ಪರಿಣಾಮ ಬಲಗಾಲಿನ ಮೂಳೆ ಮುರಿತಕ್ಕೊಳಗಾಗಿದ್ದಾರೆ. ಚಿಕ್ಕಮಗಳೂರಿನ ಮಲ್ಲೇಗೌಡ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತನ್ ಕುಟುಂಬ ಕಡುಬಡತನದಲ್ಲಿದ್ದು, ಯುವಕನ ಚಿಕಿತ್ಸಾ ವೆಚ್ಚ ಭರಿಸುವುದು ಕುಟುಂಬಕ್ಕೆ ಕಷ್ಟಕರವಾಗಿದೆ.
ಬೆಟ್ಟದ ಮಾರ್ಗದಲ್ಲಿ ಭಕ್ತರ ಸುರಕ್ಷತೆಗೆ ಅಗತ್ಯವಾದ ಮುನ್ನೆಚ್ಚರಿಕೆ ಹಾಗೂ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸದಿರುವುದೇ ಈ ಘಟನೆಗೆ ಕಾರಣವಾಗಿದೆ ಎಂದು ಆರೋಪಿಸಿದರು.
ಈ ಹಿನ್ನೆಲೆಯಲ್ಲಿ ಗಾಯಗೊಂಡ ಚೇತನ್‌ಗೆ ಮಾನವೀಯ ದೃಷ್ಟಿಯಿಂದ ಸರ್ಕಾರ ತಕ್ಷಣ ೫ ಲಕ್ಷ ಪರಿಹಾರ ಮಂಜೂರು ಮಾಡಬೇಕು ಹಾಗೂ ಅವರ ಚಿಕಿತ್ಸಾ ವೆಚ್ಚಕ್ಕೆ ನೆರವು ನೀಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕಬ್ಬಿಗೆರೆ ಮೋಹನ್ ಆಗ್ರಹಿಸಿದ್ದಾರೆ.
-
Chamarajanagar15 hours agoನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕರ ಹುದ್ದೆಗೆ ಅರ್ಜಿ ಆಹ್ವಾನ
-
Kodagu18 hours agoಖಾಯಂ ಹುದ್ದೆಗಾಗಿ ಅರ್ಜಿ ಆಹ್ವಾನ
-
Hassan17 hours agoಬೇಲೂರಿನಿಂದ 56 ಕಾಡಾನೆಗಳ ಸ್ಥಳಾಂತರಕ್ಕೆ ಸರ್ಕಾರದ ಆದೇಶ: ಸಚಿವ ಕೆ.ಎಂ. ಶಿವಲಿಂಗೇಗೌಡ ಘೋಷಣೆ
-
Mandya18 hours agoಖಾಸಗಿ ಶಿಕ್ಷಣ ಸಂಸ್ಥೆಯಿಂದ ಸರ್ಕಾರಿ ಜಮೀನು ಒತ್ತುವರಿ : ಅಧಿಕಾರಿಗಳಿಂದ ತೆರವು ಕಾರ್ಯ
-
State23 hours agoಕರ್ನಾಟಕ ವಾಯು ಗುಣಮಟ್ಟ ವರದಿ:ಕೊಡಗಿನಲ್ಲಿ ಅತ್ಯುತ್ತಮ ಶುದ್ಧಗಾಳಿ
-
State24 hours agoಮೂರು ಎಫ್ಐಆರ್ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ ನಟ ಧನ್ವೀರ್
-
Kodagu18 hours agoಸೆಂಟ್ರಲ್ ಕ್ಲಸ್ಟರ್ ಕಿಚನ್ ಪ್ರಸ್ತಾವನೆ ಕೈಬಿಡಿ: ಬಿಸಿಯೂಟ ನೌಕರರ ಪ್ರತಿಭಟನೆ
-
State3 hours agoಅಸಂಜ್ಞೆಯ ಅಪರಾಧಗಳ ತನಿಖೆಗೆ ಮ್ಯಾಜಿಸ್ಟ್ರೇಟ್ ಪೂರ್ವಾನುಮತಿ ಕಡ್ಡಾಯ: ಹೈಕೋರ್ಟ್ ಮಹತ್ವದ ಆದೇಶ
