Mysore
ಜೆನ್ ಜಿ ಹೋರಾಟಕ್ಕೆ ವ್ಯಂಗ್ಯ, ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ: ಚಕ್ರವರ್ತಿ ಸೂಲಿಬೆಲೆ
**ಮೈಸೂರು: ** ದೆಹಲಿಯಲ್ಲಿ ನಡೆದ ಜೆನ್ ಜಿ ಹೋರಾಟ ಹಾಗೂ ಕರ್ನಾಟಕದ ತಿರಂಗ ಯಾತ್ರೆಯನ್ನು ಉಲ್ಲೇಖಿಸಿ ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ವ್ಯಂಗ್ಯವಾಡಿದ್ದಾರೆ. ಬೆಂಗಳೂರಿನಲ್ಲಿ ತಾವು ಕರೆ ನೀಡಿದ್ದ ತಿರಂಗ ಯಾತ್ರೆಗೆ 5 ಸಾವಿರ ಯುವಕರು 6 ಕಿ.ಮೀ. ನಡೆದು ಬಂದಿದ್ದರು. ಆದರೆ ಪ್ರಕಾಶ್ ರಾಜ್ ಹಾಗೂ ಧ್ರುವ್ ರಾಠಿ ದೇಶವನ್ನು ಸರಿಪಡಿಸೋಣ ಎಂದು ಕರೆ ನೀಡಿದಾಗ 500 ಜನರೂ ಬರಲಿಲ್ಲ ಎಂದು ಟೀಕಿಸಿದ್ದಾರೆ.
ದೆಹಲಿಯಲ್ಲಿ ನಡೆದ ಹೋರಾಟದಲ್ಲಿ ಒಂದು ಲಕ್ಷ ಜನ ಸೇರಿದ್ದರೂ, ಅವರಲ್ಲಿ ಕೇವಲ 10 ಸಾವಿರ ಮಂದಿ ವಿದ್ಯಾರ್ಥಿಗಳಿದ್ದರು. ಉಳಿದವರು ವಿವಿಧ ಪಕ್ಷಗಳ ಕಾರ್ಯಕರ್ತರಾಗಿದ್ದರು. ಅಲ್ಲದೆ, 3 ಸಾವಿರ ರೌಡಿಶೀಟರ್‌ಗಳನ್ನು ಪೊಲೀಸರು ಗುರುತಿಸಿದ್ದಾರೆ ಎಂದು ಸೂಲಿಬೆಲೆ ಹೇಳಿಕೊಂಡಿದ್ದಾರೆ. ಕರ್ನಾಟಕದ ಜನರು ದೇಶದ ಪರವಾಗಿದ್ದಾರೆ ಎಂಬ ಸಂದೇಶವನ್ನು ತಿರಂಗ ಯಾತ್ರೆ ನೀಡಿದ್ದು, ಇದು ವಿರೋಧಿಗಳಿಗೆ ಕಪಾಳಮೋಕ್ಷ ಮಾಡಿದಂತಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.
ಮೈಸೂರಿನಿಂದ ರಾಜ್ಯಾದ್ಯಂತ ಸಂಚರಿಸಲಿರುವ ರಥಯಾತ್ರೆಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಂದೇ ಮಾತರಂ ಗೀತೆಯ 150ನೇ ವರ್ಷದ ಅಂಗವಾಗಿ ಗೀತೆಯ ಇತಿಹಾಸ ಹಾಗೂ ದೇಶದ ಪರಂಪರೆಯನ್ನು ಸಾರುವ ವಿಡಿಯೋಗಳನ್ನು ರಾಜ್ಯದ ಮೂಲೆ ಮೂಲೆಗಳಲ್ಲಿ ಪ್ರಸಾರ ಮಾಡುವುದಾಗಿ ತಿಳಿಸಿದರು. ವಂದೇ ಮಾತರಂ ಗೀತೆಯ ಮೂಲಕ ಪ್ರತಿಯೊಬ್ಬರೂ ದೇಶದ ಪರಂಪರೆಯನ್ನು ಸ್ಮರಿಸಬೇಕು ಎಂದರು. ಭಾರತದ ಇತಿಹಾಸದ ಕುರಿತು ಮಾತನಾಡಿದ ಅವರು, ಮೊಹಮ್ಮದ್ ಬಿನ್ ಕಾಸಿಂನಿಂದ ಹಿಡಿದು ಘಜ್ನಿ, ಘೋರಿ ಆಕ್ರಮಣಗಳವರೆಗಿನ ಇತಿಹಾಸವನ್ನು ಪ್ರಸ್ತಾಪಿಸಿದರು. ಶಿವಾಜಿ ಮಹಾರಾಜರು, ರಾಣಾ ಪ್ರತಾಪ್ ಸಿಂಗ್, ಸಿಖ್ ಗುರುಗಳು ಹಾಗೂ ವಿಜಯನಗರ ಸಾಮ್ರಾಜ್ಯದ ಶ್ರೀಕೃಷ್ಣದೇವರಾಯರು ದೇಶದ ರಕ್ಷಣೆಗೆ ನೀಡಿದ ಕೊಡುಗೆಯನ್ನು ಸ್ಮರಿಸಿದರು.

ಮೈಸೂರು ರಾಜರ ಸಾಧನೆಗೆ ಮೆಚ್ಚುಗೆ:
ಮೈಸೂರು ರಾಜಮನೆತನದ ಕುರಿತು ಶಾಸಕ ಯತೀಂದ್ರ ಸಿದ್ದರಾಮಯ್ಯ ನೀಡಿದ್ದ ಹೇಳಿಕೆಗೆ ಪರೋಕ್ಷವಾಗಿ ತಿರುಗೇಟು ನೀಡಿದ ಸೂಲಿಬೆಲೆ, ಮೈಸೂರು ಮಹಾರಾಜರು ರಾಷ್ಟ್ರಕ್ಕೆ ನೀಡಿರುವ ಕೊಡುಗೆ ಅಪಾರವಾಗಿದೆ. ಅವರ ಸಾಧನೆಗಳ ಬಗ್ಗೆ ತಿಳಿದುಕೊಂಡರೆ ಮೈ ರೋಮಾಂಚನವಾಗುತ್ತದೆ. ಮಹಾರಾಜರ ಬಗ್ಗೆ ತುಚ್ಛವಾಗಿ ಮಾತನಾಡುವವರು ಅವರ ಕೊಡುಗೆಗಳನ್ನು ಅರಿತುಕೊಳ್ಳಬೇಕು ಎಂದರು.
ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ:
ಬ್ರಿಟಿಷರು ದೇಶದ ಶಿಕ್ಷಣ, ನ್ಯಾಯಾಂಗ ಹಾಗೂ ರೈತ ವ್ಯವಸ್ಥೆಯನ್ನು ಹಾಳು ಮಾಡಿದರು. ಜಾತಿಯ ವಿಷಬೀಜ ಬಿತ್ತಿದವರೂ ಬ್ರಿಟಿಷರೇ. ರಿಸ್ಲೆ ನೇತೃತ್ವದಲ್ಲಿ ಜಾತಿ ಗಣತಿ ನಡೆಸಿ, ಜಾತಿಗಳ ನಡುವೆ ಮೇಲು-ಕೀಳು ಎಂಬ ವರ್ಗೀಕರಣ ಮಾಡಲಾಯಿತು. ಬ್ರಿಟಿಷರು ಆರಂಭಿಸಿದ ಈ ವಿಭಜನೆಯ ಮಾದರಿಯನ್ನು ಇಂದಿಗೂ ಮುಂದುವರಿಸಲಾಗುತ್ತಿದೆ ಎಂದು ಆರೋಪಿಸಿದರು.
ಸಿದ್ದರಾಮಯ್ಯ ಅವರು ನಾವೆಲ್ಲರೂ ದ್ರಾವಿಡರು ಎಂದು ಹೆಮ್ಮೆಯಿಂದ ಹೇಳುತ್ತಾರೆ. ಆದರೆ ಅಂಬೇಡ್ಕರ್ ಅವರು ಆರ್ಯ-ದ್ರಾವಿಡ ಎಂಬ ಭೇದವಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಅಹಿಂದ ನಾಯಕತ್ವ ವಹಿಸಿಕೊಂಡವರಿಗೆ ಅಂಬೇಡ್ಕರ್ ಅವರ ವಿಚಾರಗಳು ತಿಳಿದಿರಬೇಕಲ್ಲವೇ? ತಮ್ಮ ರಾಜಕೀಯ ಸಿದ್ಧಾಂತಕ್ಕೆ ಬೇಕಾದಷ್ಟನ್ನೇ ಅಂಬೇಡ್ಕರ್ ಅವರಿಗೆ ಸೀಮಿತಗೊಳಿಸಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಚಕ್ರವರ್ತಿ ಸೂಲಿಬೆಲೆ ವಾಗ್ದಾಳಿ ನಡೆಸಿದರು. ಅವಕಾಶವಾದಿ ರಾಜಕಾರಣವನ್ನು ಬ್ರಿಟಿಷರಿಗಿಂತ ನಮ್ಮವರೇ ಹೆಚ್ಚಾಗಿ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
Mysore
ನಂಜನಗೂಡು ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ : ಬಿಜೆಪಿ ಆಕ್ರೋಶ
ನಂಜನಗೂಡು: ತಾಲೂಕಿನಲ್ಲಿ ಆದಿವಾಸಿ ಮಹಿಳೆಯೊಬ್ಬರು ಸಾವನ್ನಪ್ಪಿದ ಪ್ರಕರಣದಲ್ಲಿ ಅರಣ್ಯ ಇಲಾಖೆ ನಿರ್ಲಕ್ಷ್ಯ ವಹಿಸಿದೆ ಹಾಗೂ ತಾಲೂಕಿನಲ್ಲಿ ಡ್ರಗ್ಸ್ ಹಾವಳಿ ಹೆಚ್ಚಾಗಿದೆ ಮತ್ತು ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ನಂಜನಗೂಡು ತಾಲೂಕಿನ ಬಿಜೆಪಿ ಮುಖಂಡರು ಆಕ್ರೋಶ ಹೊರಹಾಕಿದರು.
ಇಂದು ನಂಜನಗೂಡು ತಾಲೂಕು ಪತ್ರಕರ್ತರ ಸಂಘದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ತಾಲೂಕು ಬಿಜೆಪಿ ಅಧ್ಯಕ್ಷ ಕೆಂಡಗಣ್ಣಪ್ಪ, ನಂಜನಗೂಡು ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ತಾಲೂಕಿನಲ್ಲಿ ಜರುಗಿದ ಆದಿವಾಸಿ ಮಹಿಳೆ ಸಾವಿನ ಸುತ್ತ ನಾನಾ ಅನುಮಾನಗಳಿವೆ.
ಮಹಿಳೆ ಸಾವನ್ನಪ್ಪಿದಾಗ ಆಸ್ಪತ್ರೆಗೆ ಕರೆದೊಯ್ಯುವಲ್ಲಿ ವಿಳಂಬವಾಗಿದೆ. ಸರ್ಕಾರದ ನಿಯಮದ ಪ್ರಕಾರ 6 ಗಂಟೆಯೊಳಗೆ ಆಗಬೇಕಿದ್ದ ಪ್ರಕ್ರಿಯೆಗಳು ನಡೆದಿಲ್ಲ. ಇದಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದರು.

ತಹಸೀಲ್ದಾರ್ ಸ್ಮಿತಾ ರಾಮು ಕೂಡ ತಮ್ಮ ಕರ್ತವ್ಯ ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ. ತಾಲೂಕು ಆಡಳಿತ ಸಂಪೂರ್ಣ ನೆಲಕಚ್ಚಿದ್ದು, ಕ್ಷೇತ್ರದ ಶಾಸಕರು ಮತ್ತು ತಹಸೀಲ್ದಾರ್ ಅವರ ಕಾರ್ಯವೈಕರಿ ನಗೆ ಪಾಟಲಿಗೆ ಗುರಿಯಾಗಿದೆ ಎಂದು ಕಿಡಿ ಕಾರಿದರು.
ಅರಣ್ಯ ಇಲಾಖೆ ಅಧಿಕಾರಿಗಳು ರೈತರಿಗೆ, ಬಡವರಿಗೆ ಹಾಗೂ ಆದಿವಾಸಿಗಳಿಗೆ ಪದೇ ಪದೇ ತೊಂದರೆ ನೀಡುತ್ತಿದ್ದಾರೆ. ಆದರೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಸತ್ತ ಮಹಿಳೆಯ ಕುಟುಂಬಕ್ಕೆ ಇಲ್ಲಿಯವರೆಗೂ ನ್ಯಾಯ ಸಿಕ್ಕಿಲ್ಲ. ಸರ್ಕಾರ ಕೂಡಲೇ ಮಧ್ಯಪ್ರವೇಶ ಮಾಡಿ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಅವರು ಒತ್ತಾಯಿಸಿದರು.
ಇದೇ ವೇಳೆ ನಗರಸಭೆ ಸದಸ್ಯ ಕಪಿಲೇಶ್ ಮಾತನಾಡಿ, ನಂಜನಗೂಡು ತಾಲೂಕಿನಲ್ಲಿ ಹೆಚ್ಚಾಗುತ್ತಿರುವ ಮಾದಕ ವಸ್ತುಗಳ ಹಾವಳಿಯ ಬಗ್ಗೆಯೂ ಮುಖಂಡರು ಕಳವಳ ವ್ಯಕ್ತಪಡಿಸಿದರು. ಕಳೆದ 3 ರಿಂದ 4 ದಿನಗಳ ಹಿಂದೆ ಪೊಲೀಸರು ಎಂ.ಡಿ.ಎಂ.ಎ ಎಂಬ ಮಾದಕ ವಸ್ತುವನ್ನು ಪತ್ತೆ ಮಾಡಿದ್ದರು. ಆದರೆ ಅದರ ಬಗ್ಗೆ ಇಲ್ಲಿಯವರೆಗೂ ಯಾವುದೇ ಸಭೆ ನಡೆದಿಲ್ಲ, ಯಾವುದೇ ಹೇಳಿಕೆ ಬಂದಿಲ್ಲ ಎಂದು ಅವರು ಪ್ರಶ್ನಿಸಿದರು.
ಪೊಲೀಸ್ ಇಲಾಖೆ ಹಾಗೂ ತಾಲೂಕು ಆಡಳಿತ ಈ ಬಗ್ಗೆ ಗಂಭೀರವಾಗಿ ಕ್ರಮ ಕೈಗೊಳ್ಳಬೇಕು. ಮಹಿಳೆಯರ ಸುರಕ್ಷತೆ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಬಾರದು. ಇನ್ನು ಮುಂದೆ ಈ ರೀತಿಯ ಘಟನೆ ನಡೆದಾಗ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.
ಬಿಜೆಪಿ ನಗರಾಧ್ಯಕ್ಷ ಸಿದ್ದರಾಜು ಮಾತನಾಡಿದರು, ಪತ್ರಿಕಾಗೋಷ್ಠಿಯಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಚಿಕ್ಕ ರಂಗ ನಾಯಕ, ಶಿರಮಳ್ಳಿ ಮಹದೇವಸ್ವಾಮಿ, ವಳಗೆರೆ ಪುಟ್ಟಸ್ವಾಮಿ ಮರಳ್ಳಿ ಸಿದ್ದರಾಜು,
ಮುಖಂಡರು ಉಪಸ್ಥಿತರಿದ್ದರು.
ನಂಜನಗೂಡು ವರದಿ ಮಹದೇವಸ್ವಾಮಿ ಪಟೇಲ್
Mysore
ಟ್ರೋಲ್‌ನಲ್ಲಿ ಎಥನಾಲ್ ಮಿಶ್ರಣ: ಕೇಂದ್ರಕ್ಕೆ ನಾಳೆ ವರದಿ ಸಲ್ಲಿಕೆ – ಸಚಿವ ರಿಜ್ವಾನ್ ಅರ್ಷದ್
1. ಎಥನಾಲ್ ಮಿಶ್ರಣ ವಿಚಾರ: ಕೇಂದ್ರಕ್ಕೆ ನಾಳೆ ಅಧಿಕೃತ ವರದಿ ಸಲ್ಲಿಕೆ
ಮೈಸೂರು: ಪೆಟ್ರೋಲ್‌ನಲ್ಲಿ ಎಥನಾಲ್ ಹೆಚ್ಚಿನ ಪ್ರಮಾಣದಲ್ಲಿ ಮಿಶ್ರಣ ಮಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ನಾಳೆ ಕೇಂದ್ರ ಸರ್ಕಾರಕ್ಕೆ ಅಧಿಕೃತ ವರದಿ ಸಲ್ಲಿಸಲಿದೆ ಎಂದು ಸಚಿವ ರಿಜ್ವಾನ್ ಅರ್ಷದ್ ತಿಳಿಸಿದ್ದಾರೆ.
ರಾಜ್ಯದ 6 ಪೆಟ್ರೋಲಿಯಂ ಟರ್ಮಿನಲ್‌ಗಳಲ್ಲಿ ಹೆಚ್ಚಿನ ಪ್ರಮಾಣದ ಎಥನಾಲ್ ಮಿಶ್ರಣವಾಗುತ್ತಿರುವ ಬಗ್ಗೆ ತಾಂತ್ರಿಕ ಹಾಗೂ ಪ್ರಯೋಗಾಲಯ ವರದಿಗಳನ್ನು ಸಂಗ್ರಹಿಸಲಾಗಿದೆ. ಈ ಎಲ್ಲ ವರದಿಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು. ವರದಿ ಆಧರಿಸಿ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ರಾಜ್ಯ ಸರ್ಕಾರ ತನ್ನ ವ್ಯಾಪ್ತಿಯಲ್ಲಿ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಸಿದ್ದಾರೆ.
ಇದು ಪೆಟ್ರೋಲ್ ಬಂಕ್‌ಗಳ ಸಮಸ್ಯೆಯಲ್ಲ. ಪೆಟ್ರೋಲಿಯಂ ಟರ್ಮಿನಲ್‌ಗಳಿಂದಲೇ ಹೆಚ್ಚಿನ ಪ್ರಮಾಣದ ಎಥನಾಲ್ ಮಿಶ್ರಣವಾಗುತ್ತಿದೆ. ಇದರಿಂದ ವಾಹನ ಸವಾರರು ಹಾಗೂ ಪೆಟ್ರೋಲ್ ಬಂಕ್ ಮಾಲೀಕರಿಗೂ ಸಮಸ್ಯೆಯಾಗುತ್ತಿದೆ. ಈ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದರು.
ಇನ್ನು ಹಾಲು ಹಾಗೂ ಬಸ್ ಪ್ರಯಾಣ ದರ ಏರಿಕೆಗೂ ಎಥನಾಲ್ ವಿಚಾರಕ್ಕೂ ಯಾವುದೇ ಸಂಬಂಧವಿಲ್ಲ. ದರ ಏರಿಕೆಗೂ ಒಂದು ತಿಂಗಳ ಮೊದಲೇ ವರದಿಗಳನ್ನು ತರಿಸಿಕೊಂಡಿದ್ದೆ. ಎಲ್ಲ ವರದಿಗಳ ಸತ್ಯಾಸತ್ಯತೆ ತಿಳಿದ ಬಳಿಕ ಬಹಿರಂಗಪಡಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು.
2. ಅನ್ನ ಸೇವೆ ಆ್ಯಪ್ ಮೂಲಕ ಇ-ಕೆವೈಸಿ: ಹೊರರಾಜ್ಯದ ಕಾರ್ಮಿಕರಿಗೂ ಅನುಕೂಲ
ಮೈಸೂರು: ಅನ್ನ ಸೇವೆ ಆ್ಯಪ್ ಮೂಲಕ ಪಡಿತರ ಚೀಟಿದಾರರು ಇ-ಕೆವೈಸಿ ಮಾಡಿಸಿಕೊಳ್ಳುವ ವ್ಯವಸ್ಥೆಯಿಂದ ಲಕ್ಷಾಂತರ ಜನರಿಗೆ ಅನುಕೂಲವಾಗಿದೆ ಎಂದು ಸಚಿವ ರಿಜ್ವಾನ್ ಅರ್ಷದ್ ತಿಳಿಸಿದ್ದಾರೆ.
ಈ ಹಿಂದೆ ಆ್ಯಪ್ ಬಳಕೆಗೆ ರಾಜ್ಯದ ವ್ಯಾಪ್ತಿಯಲ್ಲಿ ಮಾತ್ರ ಅವಕಾಶವಿತ್ತು. ಇದೀಗ ದೇಶಾದ್ಯಂತ ವಿಸ್ತರಿಸಲಾಗಿದ್ದು, ಉದ್ಯೋಗದ ನಿಮಿತ್ತ ಬೇರೆ ರಾಜ್ಯಗಳಿಗೆ ತೆರಳಿರುವ ಕಾರ್ಮಿಕರಿಗೂ ಇ-ಕೆವೈಸಿ ಮಾಡಿಸಿಕೊಳ್ಳಲು ಅನುಕೂಲವಾಗಿದೆ ಎಂದರು.
ಇನ್ನು ಇ-ಕೆವೈಸಿ ಮಾಡಿಸಲು ಕೆಲವು ನ್ಯಾಯಬೆಲೆ ಅಂಗಡಿಗಳಲ್ಲಿ ಹಣ ಕೇಳುತ್ತಿರುವ ದೂರುಗಳು ಬಂದಿರುವುದು ಸತ್ಯ. ಈ ಸಂಬಂಧ ಹಣ ಕೇಳಿದ ಸುಮಾರು 12 ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಹಾಗೂ ವ್ಯವಸ್ಥೆಯಲ್ಲಿ ಲೋಪದೋಷಗಳು ಉಂಟಾಗದಂತೆ ಕ್ರಮ ವಹಿಸಲಾಗುತ್ತಿದೆ ಎಂದು ತಿಳಿಸಿದರು.
3. ಅನ್ನಭಾಗ್ಯ ಅಕ್ಕಿ ಕಾಳಸಂತೆಯಲ್ಲಿ ಮಾರಾಟ ಮಾಡಿದರೆ ಕಠಿಣ ಕ್ರಮ: ಸಚಿವರ ಎಚ್ಚರಿಕೆ
ಮೈಸೂರು: ಬರಗಾಲದ ಪರಿಣಾಮ ಭತ್ತದ ಇಳುವರಿ ಕುಂಠಿತವಾಗಿದ್ದು, ಅಕ್ಕಿ ದಾಸ್ತಾನಿನ ಮೇಲೂ ಪರಿಣಾಮ ಬೀರಿದೆ. ಈ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ರಿಜ್ವಾನ್ ಅರ್ಷದ್ ಎಚ್ಚರಿಕೆ ನೀಡಿದ್ದಾರೆ.
ಭತ್ತ ಬೆಳೆಯಲು ಹೆಚ್ಚಿನ ಪ್ರಮಾಣದ ನೀರು ಅಗತ್ಯವಿದ್ದು, ಬರಗಾಲದಿಂದ ಭತ್ತದ ಉತ್ಪಾದನೆ ಕುಂಠಿತವಾಗಿದೆ. ಇಂತಹ ಸಂದರ್ಭದಲ್ಲಿ ಅನ್ನಭಾಗ್ಯ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಅಕ್ರಮವಾಗಿ ಅಕ್ಕಿ ದಾಸ್ತಾನು ಮಾಡಿರುವ ಪ್ರಕರಣಗಳಲ್ಲಿ ಅಕ್ಕಿ ಮಾತ್ರವಲ್ಲದೆ, ಅಕ್ಕಿ ಸಾಗಿಸುತ್ತಿದ್ದ ಟ್ರಕ್‌ಗಳನ್ನೂ ವಶಪಡಿಸಿಕೊಳ್ಳಲಾಗಿದೆ. ಈವರೆಗೆ ಇಲಾಖೆಯ ಇತಿಹಾಸದಲ್ಲೇ ಕಂಡು ಕೇಳರಿಯದ ಪ್ರಮಾಣದಲ್ಲಿ ಅಕ್ಕಿ ಜಪ್ತಿ ಮಾಡಲಾಗಿದೆ. ಜಪ್ತಿಯಾಗಿರುವ ಅಕ್ಕಿ ಅನ್ನಭಾಗ್ಯ ಯೋಜನೆಗೆ ಸೇರಿದ್ದಾಗಿದೆ ಎಂದು ತಿಳಿಸಿದರು.
ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವುದು, ಅಕ್ರಮವಾಗಿ ದಾಸ್ತಾನು ಮಾಡುವುದು ಹಾಗೂ ಕೃತಕ ಅಭಾವ ಸೃಷ್ಟಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
Mysore
ಚೈನ್ ಕಳ್ಳ ಹಿಡಿದ ಯುವಕನ ಮೇಲೆಯೇ ಹ*ಲ್ಲೆ! ಮೈಸೂರಿನಲ್ಲಿ ಆ*ಕ್ರೋಶ
ಮೈಸೂರು: ಯುವತಿಯೊಬ್ಬರ ಚೈನ್ ಕದಿಯಲು ಯತ್ನಿಸಿದ ಯುವಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದ ಸ್ಥಳೀಯ ಯುವಕನ ಮೇಲೆಯೇ ಹಲ್ಲೆ ನಡೆಸಿರುವ ಆರೋಪ ಮೈಸೂರಿನಲ್ಲಿ ಕೇಳಿಬಂದಿದೆ. ಮೈಸೂರಿನ ಜೆ.ಪಿ. ನಗರದ ಕವಿತಾ ಬೇಕರಿ ಸರ್ಕಲ್‌ನಲ್ಲಿ ಈ ಘಟನೆ ನಡೆದಿದೆ. ಯುವತಿಯ ಚೈನ್ ಕದಿಯಲು ಯತ್ನಿಸಿದ ಯುವಕನನ್ನು ಸ್ಥಳೀಯ ನಿವಾಸಿ ಪುನೀತ್ ಎಂಬುವವರು ಹಿಡಿದು ವಿದ್ಯಾರಣ್ಯಪುರಂ ಪೊಲೀಸರಿಗೆ ಒಪ್ಪಿಸಿದ್ದರು. ಆದರೆ, ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಪೊಲೀಸರು ಬಿಟ್ಟು ಕಳುಹಿಸಿದ್ದಾರೆ ಎನ್ನಲಾಗಿದ್ದು, ಇದರಿಂದ ಆಕ್ರೋಶಗೊಂಡ ಆರೋಪಿಯ ತಂಡದವರು ಪುನೀತ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಘಟನೆಯನ್ನು ಖಂಡಿಸಿ ಹಲ್ಲೆಗೊಳಗಾದ ಪುನೀತ್ ಹಾಗೂ ಸ್ಥಳೀಯರು ರಸ್ತೆಗಿಳಿದು ಪ್ರತಿಭಟನೆ ನಡೆಸಿದರು. ಚೈನ್ ಕಳ್ಳತನಕ್ಕೆ ಯತ್ನಿಸಿದ ಆರೋಪಿಯನ್ನು ಬಂಧಿಸಬೇಕು ಹಾಗೂ ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದ ಸಾರ್ವಜನಿಕರು ಪೊಲೀಸರ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದರು.
ಇನ್ನು ಪ್ರಕರಣದ ಹಿನ್ನೆಲೆಯಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ವಿದ್ಯಾರಣ್ಯಪುರಂ ಪೊಲೀಸ್ ಠಾಣೆಗೆ ಭೇಟಿ ನೀಡಿ ಸ್ಥಳೀಯರಿಂದ ಮಾಹಿತಿ ಪಡೆದರು. ಪುನೀತ್ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಎಫ್‌ಐಆರ್ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಪೊಲೀಸರನ್ನು ಒತ್ತಾಯಿಸಿದರು.

ಎರಡು ಪ್ರತ್ಯೇಕ ಪ್ರಕರಣ ದಾಖಲು
ಈ ಘಟನೆಗೆ ಸಂಬಂಧಿಸಿದಂತೆ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಪುನೀತ್ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಅಪ್ರಾಪ್ತ ಯುವಕನ ವಿರುದ್ಧ ಒಂದು ಪ್ರಕರಣ ದಾಖಲಾಗಿದ್ದರೆ, ಮತ್ತೊಂದೆಡೆ ಹಲ್ಲೆಗೊಳಗಾದ ಪುನೀತ್ ಹಾಗೂ ಅವರ ಸ್ನೇಹಿತ ಸಂತೋಷ್ ವಿರುದ್ಧವೂ ಪ್ರಕರಣ ದಾಖಲಾಗಿದೆ. ಎರಡೂ ಕಡೆಯವರಿಂದ ದೂರು ಸ್ವೀಕರಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
-
Chamarajanagar13 hours agoನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕರ ಹುದ್ದೆಗೆ ಅರ್ಜಿ ಆಹ್ವಾನ
-
Kodagu16 hours agoಖಾಯಂ ಹುದ್ದೆಗಾಗಿ ಅರ್ಜಿ ಆಹ್ವಾನ
-
Hassan15 hours agoಬೇಲೂರಿನಿಂದ 56 ಕಾಡಾನೆಗಳ ಸ್ಥಳಾಂತರಕ್ಕೆ ಸರ್ಕಾರದ ಆದೇಶ: ಸಚಿವ ಕೆ.ಎಂ. ಶಿವಲಿಂಗೇಗೌಡ ಘೋಷಣೆ
-
Mandya15 hours agoಖಾಸಗಿ ಶಿಕ್ಷಣ ಸಂಸ್ಥೆಯಿಂದ ಸರ್ಕಾರಿ ಜಮೀನು ಒತ್ತುವರಿ : ಅಧಿಕಾರಿಗಳಿಂದ ತೆರವು ಕಾರ್ಯ
-
State20 hours agoಕರ್ನಾಟಕ ವಾಯು ಗುಣಮಟ್ಟ ವರದಿ:ಕೊಡಗಿನಲ್ಲಿ ಅತ್ಯುತ್ತಮ ಶುದ್ಧಗಾಳಿ
-
State22 hours agoಮೂರು ಎಫ್‌ಐಆರ್ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ ನಟ ಧನ್ವೀರ್
-
Hassan23 hours agoಬೇಲೂರಿನಲ್ಲಿ ಕಾಡಾನೆ ದಾಳಿಗೆ ಮತ್ತೊಂದು ಬ*ಲಿ: ಕಾಫಿ ತೋಟಕ್ಕೆ ತೆರಳುತ್ತಿದ್ದ ಕಾರ್ಮಿಕ ಸಾ*ವು
-
State1 hour agoಅಸಂಜ್ಞೆಯ ಅಪರಾಧಗಳ ತನಿಖೆಗೆ ಮ್ಯಾಜಿಸ್ಟ್ರೇಟ್ ಪೂರ್ವಾನುಮತಿ ಕಡ್ಡಾಯ: ಹೈಕೋರ್ಟ್ ಮಹತ್ವದ ಆದೇಶ
