State
ನಟ ಧನ್ವೀರ್‌ಗೆ ಹೈಕೋರ್ಟ್ ರಿಲೀಫ್: ಮೂರು ಎಫ್‌ಐಆರ್‌ಗಳ ತನಿಖೆಗೆ ಮಧ್ಯಂತರ ತಡೆ
ಬೆಂಗಳೂರು: ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ನಟ ಧನ್ವೀರ್ ನಡುವಿನ ವಾಗ್ವಾದ ಮತ್ತು ನಿಂದನೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಧನ್ವೀರ್‌ಗೆ ಕರ್ನಾಟಕ ಹೈಕೋರ್ಟ್‌ನಿಂದ ತಾತ್ಕಾಲಿಕ ರಿಲೀಫ್ ದೊರೆತಿದೆ. ಧನ್ವೀರ್ ವಿರುದ್ಧ ದಾಖಲಾಗಿರುವ ಮೂರು ಪ್ರತ್ಯೇಕ ಎಫ್‌ಐಆರ್‌ಗಳ ತನಿಖೆಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳನ್ನು ರದ್ದುಗೊಳಿಸುವಂತೆ ಕೋರಿ ನಟ ಧನ್ವೀರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಅನಂತ್ ರಮಾನಾಥ್ ಹೆಗ್ಡೆ ಅವರಿದ್ದ ಏಕಸದಸ್ಯ ಪೀಠ ನಡೆಸಿತು.
ವಿಚಾರಣೆ ವೇಳೆ ಧನ್ವೀರ್ ಪರ ಹಿರಿಯ ವಕೀಲ ಫಣೀಂದ್ರ ವಾದ ಮಂಡಿಸಿ, ದೂರಿನಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದಾಗಿ ಆರೋಪಿಸಲಾಗಿದೆಯಾದರೂ, ನಿರ್ದಿಷ್ಟವಾಗಿ ಯಾವ ಮಹಿಳೆಯನ್ನು ನಿಂದಿಸಲಾಗಿದೆ ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸಿಲ್ಲ ಎಂದು ವಾದಿಸಿದರು. ಕೇವಲ ಅವಾಚ್ಯ ಶಬ್ದಗಳ ಬಳಕೆಯಿಂದ ಸಾರ್ವಜನಿಕ ಶಾಂತಿಗೆ ಧಕ್ಕೆಯಾಗಿದೆ ಎಂದು ಹೇಳಲಾಗದು. ಹೀಗಾಗಿ ಪ್ರಕರಣಗಳ ತನಿಖೆಗೆ ತಡೆ ನೀಡಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಸರ್ಕಾರದ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿ, ತನಿಖೆಗೆ ತಡೆಯಾಜ್ಞೆ ನೀಡಬಾರದು ಎಂದು ವಾದಿಸಿದರು.
ಉಭಯ ಕಡೆಯ ವಾದಗಳನ್ನು ಆಲಿಸಿದ ನ್ಯಾಯಪೀಠವು ರಾಜಾಜಿನಗರ ಮತ್ತು ಬಸವೇಶ್ವರನಗರ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಎಫ್‌ಐಆರ್‌ಗಳ ತನಿಖೆಗೆ ಮಧ್ಯಂತರ ತಡೆಯಾಜ್ಞೆ ನೀಡಿತು. ಅಲ್ಲದೆ, ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಈ ಹಿಂದೆ ನೀಡಲಾಗಿದ್ದ ತಡೆಯಾಜ್ಞೆಯನ್ನೂ ಮುಂದುವರಿಸಿತು.
ಇದೇ ವೇಳೆ, ನಿಂದನೆ ಮಾಡಲಾಗಿದೆ ಎನ್ನಲಾದ ಆಡಿಯೋದ ಸಂಪೂರ್ಣ ವಿವರಣೆಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸೂಚಿಸಿದ ಹೈಕೋರ್ಟ್, ಪ್ರಕರಣದ ಮುಂದಿನ ವಿಚಾರಣೆಯನ್ನು ಶನಿವಾರಕ್ಕೆ ಮುಂದೂಡಿದೆ.
ಈ ಆದೇಶದಿಂದ ನಟ ಧನ್ವೀರ್‌ಗೆ ತಾತ್ಕಾಲಿಕ ಕಾನೂನು ರಿಲೀಫ್ ದೊರೆತಂತಾಗಿದೆ.
State
ಕಾವೇರಿ ನೀರಿನ ವಿಚಾರದಲ್ಲಿ ಕೇಂದ್ರದ ಮಧ್ಯಪ್ರವೇಶಕ್ಕೆ ದೇವೇಗೌಡರ ಮನವಿ
ಕಾವೇರಿ ಜಲಾನಯನ ಪ್ರದೇಶದಲ್ಲಿ ಉಂಟಾಗಿರುವ ನೀರಿನ ಕೊರತೆ, ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆ ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ಕಾರ್ಯವೈಖರಿ ಕುರಿತು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸುದೀರ್ಘ ಪತ್ರ ಬರೆದಿದ್ದಾರೆ. ಕಾವೇರಿ ನೀರಿನ ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಲು ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಮನವಿ ಮಾಡಿದ್ದಾರೆ.
ಕಳೆದ ಮುಂಗಾರಿನಲ್ಲಿ ರಾಜ್ಯದಲ್ಲಿ ಮಳೆ ಕೊರತೆ ಉಂಟಾದ ಪರಿಣಾಮ ಜಲಾಶಯಗಳು ಕೇವಲ ಶೇ.50ರಿಂದ 55ರಷ್ಟು ಮಾತ್ರ ಭರ್ತಿಯಾಗಿವೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿಯೂ ತಮಿಳುನಾಡಿಗೆ ನೀರು ಹರಿಸುವಂತೆ CWMA ಸೂಚನೆ ನೀಡುತ್ತಿರುವುದು ಕರ್ನಾಟಕದ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ದೇವೇಗೌಡರು ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಲಿ
ತಮಿಳುನಾಡು ಕೃಷಿ ಮತ್ತು ನೀರಾವರಿ ಉದ್ದೇಶಕ್ಕಾಗಿ ನೀರು ಕೇಳುತ್ತಿದ್ದರೆ, ಕರ್ನಾಟಕದಲ್ಲಿ ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ರಾಷ್ಟ್ರೀಯ ಜಲ ನೀತಿಯ ಪ್ರಕಾರ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕಿದೆ. ಆದರೆ, ಪ್ರಾಧಿಕಾರವು ತಮಿಳುನಾಡಿನ ಒತ್ತಡಕ್ಕೆ ಮಣಿದು ನೀರು ಬಿಡುಗಡೆಗೆ ಸೂಚನೆ ನೀಡುತ್ತಿದೆ ಎಂದು ದೇವೇಗೌಡರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
CWMA ಅಧಿಕಾರ ವ್ಯಾಪ್ತಿ ಮರುಪರಿಶೀಲನೆಗೆ ಆಗ್ರಹ
ನೀರಾವರಿ ಸಂವಿಧಾನದ ರಾಜ್ಯ ಪಟ್ಟಿಗೆ ಸೇರಿದ ವಿಷಯವಾಗಿದ್ದರೂ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಜಲಾಶಯಗಳ ನಿರ್ವಹಣೆ ಮತ್ತು ನಿಯಂತ್ರಣದಂತಹ ಅಧಿಕಾರಗಳನ್ನು ನೀಡಲಾಗಿದೆ. ಈ ಅಧಿಕಾರ ವ್ಯಾಪ್ತಿಯನ್ನು ಮರುಪರಿಶೀಲಿಸಿ, ಸುಪ್ರೀಂ ಕೋರ್ಟ್ ಆದೇಶಗಳಿಗೆ ಅನುಗುಣವಾಗಿ ಗಡಿಭಾಗದಲ್ಲಿ ನೀರು ಬಿಡುಗಡೆ ಮಾಡುವುದನ್ನು ಮೇಲ್ವಿಚಾರಣೆ ಮಾಡುವುದಕ್ಕೆ ಮಾತ್ರ ಸೀಮಿತಗೊಳಿಸಬೇಕು. ಈ ಸಂಬಂಧ ಜಲಶಕ್ತಿ ಸಚಿವಾಲಯಕ್ಕೆ ನಿರ್ದೇಶನ ನೀಡುವಂತೆ ಪ್ರಧಾನಿ ಅವರಿಗೆ ಮನವಿ ಮಾಡಿದ್ದಾರೆ.
ಮೇಕೆದಾಟು ಯೋಜನೆಗೆ ಶೀಘ್ರ ಅನುಮೋದನೆ ನೀಡಿ
ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ನಗರದ ಕುಡಿಯುವ ನೀರಿನ ಬೇಡಿಕೆ ಪೂರೈಸುವ ಉದ್ದೇಶದಿಂದ ರೂಪಿಸಿರುವ ಮೇಕೆದಾಟು ಸಮತೋಲನಾ ಜಲಾಶಯ ಯೋಜನೆಗೆ ಆದ್ಯತೆ ನೀಡಬೇಕು. ಕೇಂದ್ರ ಜಲ ಆಯೋಗದಿಂದ ಯೋಜನೆಗೆ ತ್ವರಿತ ಅನುಮೋದನೆ ದೊರಕಿಸಿಕೊಡುವಂತೆ ದೇವೇಗೌಡರು ಒತ್ತಾಯಿಸಿದ್ದಾರೆ.
ಕಾವೇರಿ ನ್ಯಾಯಮಂಡಳಿ ತೀರ್ಪಿನ ಮರುಪರಿಶೀಲನೆಗೆ ಒತ್ತಾಯ
ಕಾವೇರಿ ನ್ಯಾಯಮಂಡಳಿಯ ಅಂತಿಮ ತೀರ್ಪು ಪ್ರಕಟವಾಗಿ ಸುಮಾರು ಎರಡು ದಶಕಗಳು ಕಳೆದಿವೆ. 50 ವರ್ಷಗಳಿಗೂ ಹಿಂದಿನ ಹವಾಮಾನ ಹಾಗೂ ನೀರಿನ ಲಭ್ಯತೆಯ ಅಂಕಿಅಂಶಗಳನ್ನು ಆಧರಿಸಿ ತೀರ್ಪು ನೀಡಲಾಗಿದೆ. ಪ್ರಸ್ತುತ ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಕಾವೇರಿ ನೀರು ಹಂಚಿಕೆ ತೀರ್ಪಿನ ಸಮಗ್ರ ಮರುಪರಿಶೀಲನೆ ನಡೆಸುವ ಅಗತ್ಯವಿದೆ ಎಂದು ಅವರು ಪತ್ರದಲ್ಲಿ ಪ್ರತಿಪಾದಿಸಿದ್ದಾರೆ.
ನದಿ ಜೋಡಣೆ ಯೋಜನೆಯಲ್ಲೂ ಕರ್ನಾಟಕಕ್ಕೆ ಅನ್ಯಾಯ?
ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ ರೂಪಿಸಿರುವ ಗೋದಾವರಿ-ಕೃಷ್ಣಾ-ಕಾವೇರಿ ನದಿ ಜೋಡಣೆ ಯೋಜನೆಯಲ್ಲಿನ ನೀರಿನ ಹಂಚಿಕೆಯ ಬಗ್ಗೆಯೂ ದೇವೇಗೌಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಒಟ್ಟು 147.7 ಟಿಎಂಸಿ ನೀರಿನ ಯೋಜನೆಯಲ್ಲಿ ತೆಲಂಗಾಣಕ್ಕೆ 45 ಟಿಎಂಸಿ, ಆಂಧ್ರಪ್ರದೇಶಕ್ಕೆ 43.8 ಟಿಎಂಸಿ, ತಮಿಳುನಾಡಿಗೆ 40.9 ಟಿಎಂಸಿ ಹಾಗೂ ಕರ್ನಾಟಕಕ್ಕೆ ಕೇವಲ 15.9 ಟಿಎಂಸಿ ನೀರು ಹಂಚಿಕೆ ಮಾಡಲು ಪ್ರಸ್ತಾಪಿಸಲಾಗಿದೆ. ಈ ಹಂಚಿಕೆ ಕರ್ನಾಟಕಕ್ಕೆ ತಾರತಮ್ಯ ಮಾಡಿದಂತಾಗಿದ್ದು, ನೈಸರ್ಗಿಕ ನ್ಯಾಯ ಮತ್ತು ಸಮಾನತೆಯ ಆಧಾರದ ಮೇಲೆ ರಾಜ್ಯದ ಪಾಲನ್ನು ಹೆಚ್ಚಿಸಬೇಕು ಎಂದು ಪ್ರಧಾನಿ ಅವರನ್ನು ಕೋರಿದ್ದಾರೆ.
ಕಾವೇರಿ ಜಲಾನಯನ ಪ್ರದೇಶದ ರೈತರು, ಜನಸಾಮಾನ್ಯರು ಹಾಗೂ ಬೆಂಗಳೂರು ಸೇರಿದಂತೆ ರಾಜ್ಯದ ನಗರಗಳ ಕುಡಿಯುವ ನೀರಿನ ಹಿತದೃಷ್ಟಿಯಿಂದ ಜಲಶಕ್ತಿ ಸಚಿವಾಲಯಕ್ಕೆ ಸೂಕ್ತ ನಿರ್ದೇಶನ ನೀಡಬೇಕು. ಕಾವೇರಿ ನೀರಿನ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಎದುರಾಗಿರುವ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಪತ್ರದ ಮೂಲಕ ಆಗ್ರಹಿಸಿದ್ದಾರೆ.
Special
ಶಬರಿಮಲೆಯಲ್ಲಿ ಮಂಡಲ ಮಹೋತ್ಸವದ ಸಂಭ್ರಮ: ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಭಕ್ತರ ಕಾತರ
ಶಬರಿಮಲೆ: ಕೇರಳದ ಪ್ರಸಿದ್ಧ ಪುಣ್ಯಕ್ಷೇತ್ರ ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಾನದಲ್ಲಿ ಪವಿತ್ರ ಮಂಡಲ ಮಹೋತ್ಸವದ ಪೂಜಾ ವಿಧಿವಿಧಾನಗಳು ಆರಂಭವಾಗುವ ಶುಭ ಕ್ಷಣ ಸಮೀಪಿಸುತ್ತಿದೆ. ಈ ಹಿನ್ನೆಲೆಯಲ್ಲಿ ಶಬರಿಮಲೆ ಸನ್ನಿಧಾನದಲ್ಲಿ ಭಕ್ತಿಯ ವಾತಾವರಣ ಮನೆಮಾಡಿದ್ದು, ಅಯ್ಯಪ್ಪ ಸ್ವಾಮಿಯ ದಿವ್ಯ ದರ್ಶನ ಪಡೆಯಲು ಕೋಟ್ಯಂತರ ಭಕ್ತರು ಕಾತರದಿಂದ ಕಾಯುತ್ತಿದ್ದಾರೆ.

ಸ್ವರ್ಣ ಗೋಪುರದ ಗರ್ಭಗುಡಿಯ ಬಾಗಿಲು ತೆರೆಯುವ ಮಂಗಳಮಯ ಕ್ಷಣಕ್ಕಾಗಿ ಭಕ್ತರು ಎದುರು ನೋಡುತ್ತಿದ್ದಾರೆ. ವಿಶೇಷ ಪೂಜೆ, ಧಾರ್ಮಿಕ ವಿಧಿವಿಧಾನಗಳು ಹಾಗೂ ಭಕ್ತಿಗೀತೆಗಳೊಂದಿಗೆ ಶಬರಿಮಲೆ ಕ್ಷೇತ್ರ ಮತ್ತೊಮ್ಮೆ ಭಕ್ತಿಯ ಬೆಳಕಿನಲ್ಲಿ ಕಂಗೊಳಿಸಲು ಸಜ್ಜಾಗಿದೆ.
ಮಾಲಾಧಾರಣೆ ಮಾಡಿ ಕಠಿಣ ವ್ರತಾಚರಣೆ ಕೈಗೊಂಡಿರುವ ಅಯ್ಯಪ್ಪ ಭಕ್ತರು ಸ್ವಾಮಿಯ ದರ್ಶನಕ್ಕಾಗಿ ಶಬರಿಮಲೆಯತ್ತ ಪಯಣ ಬೆಳೆಸುತ್ತಿದ್ದಾರೆ. ‘ಸ್ವಾಮಿಯೇ ಶರಣಂ ಅಯ್ಯಪ್ಪ’ ಎಂಬ ನಾಮಸ್ಮರಣೆಯೊಂದಿಗೆ ಸನ್ನಿಧಾನದಲ್ಲಿ ಆಧ್ಯಾತ್ಮಿಕ ಸಂಭ್ರಮ ಮನೆಮಾಡಿದೆ.
State
ಕೆಪಿಎಸ್‌ಸಿ ಪಶುವೈದ್ಯಾಧಿಕಾರಿ ನೇಮಕಾತಿ ಹಗರಣ: ನಾಲ್ವರ ವಿರುದ್ಧ ಇ.ಡಿ ಚಾರ್ಜ್‌ಶೀಟ್ ಸಲ್ಲಿಕೆ
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) 400 ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ.) ಮಹತ್ವದ ಕ್ರಮ ಕೈಗೊಂಡಿದೆ. ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ಇ.ಡಿ. ಅಧಿಕಾರಿಗಳು ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಬಿ.ವಿ. ಗೀತಾ ಶಿವಮೂರ್ತಿ, ಮಾಜಿ ಪರೀಕ್ಷಾ ನಿಯಂತ್ರಕ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಹಾಗೂ ಮಧ್ಯವರ್ತಿ ಬಸವರಾಜ್ ಕನ್ನಾಳೆ ವಿರುದ್ಧ ಬೆಂಗಳೂರಿನ ಪಿಎಂಎಲ್‌ಎ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
2026ರ ಜನವರಿ 9ರಂದು ನಡೆದ 400 ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಭಾರೀ ಅಕ್ರಮ ನಡೆದಿರುವ ಆರೋಪದ ಹಿನ್ನೆಲೆಯಲ್ಲಿ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಮೂರು ಪ್ರಕರಣಗಳನ್ನು ಆಧರಿಸಿ ಇ.ಡಿ. ತನಿಖೆ ಆರಂಭಿಸಿತ್ತು. ತನಿಖೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ, ಉತ್ತರಗಳ ಕೀ ಒದಗಿಸುವಿಕೆ ಹಾಗೂ 1:3 ಅರ್ಹತಾ ಪಟ್ಟಿಯ ದುರುಪಯೋಗ ಸೇರಿದಂತೆ ಹಲವು ಅಕ್ರಮಗಳು ಬೆಳಕಿಗೆ ಬಂದಿವೆ.

3.20 ಕೋಟಿ ರೂ.ಗೆ ಪ್ರಶ್ನೆ ಪತ್ರಿಕೆ ಮಾರಾಟದ ಡೀಲ್!
ಪ್ರಕರಣದ ಪ್ರಮುಖ ಆರೋಪಿಯಾಗಿರುವ ಅಂದಿನ ಪರೀಕ್ಷಾ ನಿಯಂತ್ರಕ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರು ಪ್ರಶ್ನೆ ಪತ್ರಿಕೆಯನ್ನು ಪೆನ್‌ಡ್ರೈವ್‌ಗೆ ನಕಲು ಮಾಡಿ ಮಧ್ಯವರ್ತಿ ಬಸವರಾಜ್ ಕನ್ನಾಳೆಗೆ ನೀಡಿದ್ದರು ಎನ್ನಲಾಗಿದೆ. ಪರೀಕ್ಷೆಯ ಹಿಂದಿನ ದಿನ ಬೆಂಗಳೂರಿನ ಹೊರವಲಯದ ವಿಲ್ಲಾವೊಂದನ್ನು ಬಾಡಿಗೆಗೆ ಪಡೆದಿದ್ದ ಬಸವರಾಜ್, ಅಲ್ಲಿ ಅಭ್ಯರ್ಥಿಗಳಿಗೆ ಪ್ರಶ್ನೆ ಪತ್ರಿಕೆಯ ಪ್ರಿಂಟ್‌ಔಟ್ ತೋರಿಸಿದ್ದರು. ಬಳಿಕ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಪೆನ್‌ಡ್ರೈವ್ ಸುಟ್ಟು ಹಾಕಿದ್ದರು ಎಂದು ಇ.ಡಿ. ತನಿಖೆಯಲ್ಲಿ ತಿಳಿದುಬಂದಿದೆ.
ಈ ಡೀಲ್‌ಗಾಗಿ 10 ಅಭ್ಯರ್ಥಿಗಳಿಂದ ಒಟ್ಟು 3.20 ಕೋಟಿ ರೂ. ಬೇಡಿಕೆಯಿಟ್ಟಿದ್ದು, ಈ ಪೈಕಿ 1.52 ಕೋಟಿ ರೂ. ವಸೂಲಿ ಮಾಡಿರುವುದು ಪತ್ತೆಯಾಗಿದೆ. ಇದರಲ್ಲಿ 92 ಲಕ್ಷ ರೂ. ಬ್ಯಾಂಕ್ ಖಾತೆಗಳಿಗೆ ಜಮೆಯಾಗಿದ್ದರೆ, 60 ಲಕ್ಷ ರೂ. ನಗದು ರೂಪದಲ್ಲಿ ಪಡೆದಿರುವ ದಾಖಲೆಗಳು ಲಭ್ಯವಾಗಿವೆ. ಉಳಿದ ಹಣಕ್ಕೆ ಭದ್ರತೆಯಾಗಿ ಅಭ್ಯರ್ಥಿಗಳಿಂದ ಖಾಲಿ ಚೆಕ್ ಹಾಗೂ ಪ್ರಾಮಿಸರಿ ನೋಟ್‌ಗಳನ್ನು ಪಡೆಯಲಾಗಿತ್ತು ಎನ್ನಲಾಗಿದೆ.
ಕಾರಿನಲ್ಲೇ 20 ಲಕ್ಷ ರೂ. ಲಂಚ ಸ್ವೀಕಾರ!
ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಸೂಚನೆಯಂತೆ ಗಂಗ್ವಾರ್ ಅವರು ಆರು ಅಭ್ಯರ್ಥಿಗಳ ಸರಿಯಾದ ಉತ್ತರಗಳ ಕೀಯನ್ನು ಕೆಪಿಎಸ್‌ಸಿ ಸದಸ್ಯೆ ಗೀತಾ ಅವರಿಗೆ ನೀಡಿದ್ದರು. ಇದಕ್ಕೆ ಪ್ರತಿಯಾಗಿ ತಮಗೆ ಬೇಕಾದ ಅಭ್ಯರ್ಥಿಗೆ ಕೆಎಎಸ್ ಸಂದರ್ಶನದಲ್ಲಿ ಹೆಚ್ಚಿನ ಅಂಕ ಕೊಡಿಸುವ ಭರವಸೆಯನ್ನು ಗಂಗ್ವಾರ್ ಪಡೆದಿದ್ದರು ಎಂದು ಆರೋಪಿಸಲಾಗಿದೆ.
ಈ ಅಕ್ರಮ ವ್ಯವಹಾರದಲ್ಲಿ ಸಾಹುಕಾರ್ ಒಬ್ಬ ಅಭ್ಯರ್ಥಿಯಿಂದ 10 ಲಕ್ಷ ರೂ. ಪಡೆದಿದ್ದರೆ, ಜನವರಿ 8ರಂದು ಗೀತಾ ಅವರು ತಮ್ಮ ಕಾರಿನಲ್ಲೇ ಮತ್ತೊಬ್ಬ ಅಭ್ಯರ್ಥಿಯಿಂದ 20 ಲಕ್ಷ ರೂ. ನಗದು ಸ್ವೀಕರಿಸಿರುವುದನ್ನು ತನಿಖೆ ಬಹಿರಂಗಪಡಿಸಿದೆ.
ಚಿನ್ನಾಭರಣ, ರಿಯಲ್ ಎಸ್ಟೇಟ್‌ನಲ್ಲಿ ಅಕ್ರಮ ಹಣ ಹೂಡಿಕೆ
ಮಧ್ಯವರ್ತಿ ಬಸವರಾಜ್‌ನಿಂದ ಪಡೆದ 1.52 ಕೋಟಿ ರೂ. ಅಕ್ರಮ ಹಣದಲ್ಲಿ ಗಂಗ್ವಾರ್ ಅವರು ತಾವು ವಿವಾಹವಾಗಲಿರುವ ಯುವತಿಯ ಹೆಸರಿನಲ್ಲಿ 52.30 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ ವಜ್ರದ ಆಭರಣಗಳನ್ನು ಖರೀದಿಸಿದ್ದರು ಎನ್ನಲಾಗಿದೆ. ಅಲ್ಲದೆ, 13.31 ಲಕ್ಷ ರೂ.ಗಳನ್ನು ವಿಮಾನ ಪ್ರಯಾಣಕ್ಕಾಗಿ ಖರ್ಚು ಮಾಡಿರುವುದೂ ತನಿಖೆಯಲ್ಲಿ ಪತ್ತೆಯಾಗಿದೆ.
ಇನ್ನು ಹಗರಣದ ಮೂಲಕ 4.17 ಕೋಟಿ ರೂ. ಸಂಪಾದಿಸಿರುವ ಆರೋಪ ಎದುರಿಸುತ್ತಿರುವ ಶಿವಶಂಕರಪ್ಪ ಸಾಹುಕಾರ್, 2025ರ ಆಗಸ್ಟ್‌ನಿಂದ ಡಿಸೆಂಬರ್‌ವರೆಗಿನ ಅವಧಿಯಲ್ಲಿ 3.99 ಕೋಟಿ ರೂ.ಗಳನ್ನು ರಿಯಲ್ ಎಸ್ಟೇಟ್ ಡೆವಲಪರ್ ಒಬ್ಬರ ಬಳಿ ಇರಿಸಿದ್ದರು. ಇದಕ್ಕೂ ಮುನ್ನ 8ರಿಂದ 10 ಕೋಟಿ ರೂ. ಹೂಡಿಕೆ ಮಾಡಿದ್ದ ಮಾಹಿತಿಯೂ ತನಿಖೆಯಲ್ಲಿ ಲಭ್ಯವಾಗಿದೆ.
ಹಗರಣದ ಮೂಲಕ 1.48 ಕೋಟಿ ರೂ. ಗಳಿಸಿರುವ ಆರೋಪ ಎದುರಿಸುತ್ತಿರುವ ಗೀತಾ, ಸಾಹುಕಾರ್ ಅವರಿಂದ ಯಾವುದೇ ಒಪ್ಪಂದವಿಲ್ಲದೆ ಸಾಲದ ರೂಪದಲ್ಲಿ ಒಂದು ಕೋಟಿ ರೂ. ಪಡೆದಿದ್ದರು ಎನ್ನಲಾಗಿದೆ. ಈ ಹಣವನ್ನು ತಮ್ಮ ಹಾಗೂ ಪುತ್ರಿಯ ಹೆಸರಿನಲ್ಲಿ ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಮತ್ತು ಶಹಾಪುರದ ಮದ್ರಾಕಿಯಲ್ಲಿ ಶಾಲೆ, ಕನ್ವೆನ್ಷನ್ ಹಾಲ್ ಹಾಗೂ ಹೋಟೆಲ್ ನಿರ್ಮಾಣಕ್ಕೆ ಬಳಸಲು ಯೋಜಿಸಿದ್ದರು ಎಂದು ಇ.ಡಿ. ಆರೋಪಿಸಿದೆ.
ಮಧ್ಯವರ್ತಿ ಬಸವರಾಜ್ ಕನ್ನಾಳೆ ಕೂಡ 1.52 ಕೋಟಿ ರೂ. ಅಕ್ರಮ ಹಣ ಗಳಿಸಿದ್ದು, ಭಾಲ್ಕಿಯ ಓಂ ಲಕ್ಷ್ಮಿ ಸೌಹಾರ್ದ ಸಹಕಾರಿ ಸಂಘ, ಭಗವತಿ ಎಂಟರ್‌ಪ್ರೈಸಸ್ ಹಾಗೂ ಸಂಬಂಧಿಕರ ಬ್ಯಾಂಕ್ ಖಾತೆಗಳ ಮೂಲಕ ಹಣ ವರ್ಗಾಯಿಸಿ ಜಮೀನು ಖರೀದಿಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.
37 ಕಡೆ ಶೋಧ, ನಾಲ್ವರ ಬಂಧನ
ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ. ಅಧಿಕಾರಿಗಳು ರಾಜ್ಯದ ವಿವಿಧೆಡೆ ಒಟ್ಟು 37 ಸ್ಥಳಗಳಲ್ಲಿ ಶೋಧ ನಡೆಸಿದ್ದರು. ಸೆಪ್ಟೆಂಬರ್ 17ರಂದು ಬಸವರಾಜ್ ಕನ್ನಾಳೆ, ಸೆಪ್ಟೆಂಬರ್ 18ರಂದು ಗಂಗ್ವಾರ್ ಹಾಗೂ ಅಕ್ಟೋಬರ್ 6ರಂದು ಶಿವಶಂಕರಪ್ಪ ಸಾಹುಕಾರ್ ಮತ್ತು ಗೀತಾ ಅವರನ್ನು ಬಂಧಿಸಲಾಗಿತ್ತು.
ಇದೀಗ ಆರೋಪಿಗಳಿಗೆ ಸೇರಿದ 1.22 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿದ್ದು, ಹಗರಣದಲ್ಲಿ ಭಾಗಿಯಾಗಿರುವ ಇತರ ಕೆಪಿಎಸ್‌ಸಿ ಅಧಿಕಾರಿಗಳು ಹಾಗೂ ಮಧ್ಯವರ್ತಿಗಳ ಪಾತ್ರದ ಕುರಿತು ತನಿಖೆ ಮುಂದುವರಿದಿದೆ.
ಒಟ್ಟಾರೆ, ಸರ್ಕಾರಿ ಉದ್ಯೋಗದ ಕನಸು ಕಂಡಿದ್ದ ಅಭ್ಯರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡಿದ ಕೆಪಿಎಸ್‌ಸಿ ನೇಮಕಾತಿ ಅಕ್ರಮ ಪ್ರಕರಣ ಇದೀಗ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಇ.ಡಿ. ಸಲ್ಲಿಸಿರುವ ದೋಷಾರೋಪ ಪಟ್ಟಿಯಿಂದ ಹಗರಣದ ಹಲವು ಒಳಸುಳಿಗಳು ಬಹಿರಂಗವಾಗಿವೆ.
-
Kodagu23 hours agoಕೊಡಗು ಮುಸ್ಲಿಂ ಅಸೋಸಿಯೇಷನ್ ಸಂಘಟನೆ ಅಸ್ತಿತ್ವಕ್ಕೆ – ನೂತನ ಪದಾಧಿಕಾರಿಗಳ ಆಯ್ಕೆ
-
State5 hours agoಕರ್ನಾಟಕ ವಾಯು ಗುಣಮಟ್ಟ ವರದಿ:ಕೊಡಗಿನಲ್ಲಿ ಅತ್ಯುತ್ತಮ ಶುದ್ಧಗಾಳಿ
-
Hassan8 hours agoಬೇಲೂರಿನಲ್ಲಿ ಕಾಡಾನೆ ದಾಳಿಗೆ ಮತ್ತೊಂದು ಬ*ಲಿ: ಕಾಫಿ ತೋಟಕ್ಕೆ ತೆರಳುತ್ತಿದ್ದ ಕಾರ್ಮಿಕ ಸಾ*ವು
-
State7 hours agoಮೂರು ಎಫ್ಐಆರ್ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ ನಟ ಧನ್ವೀರ್
-
Chamarajanagar22 hours agoಚಿರತೆ ದಾಳಿಗೆ ಹಸು ಬ*ಲಿ: ಮೂರು ಹಸುಗಳು ಪಾರು!
-
Chamarajanagar22 hours agoಮೂರು ಚಿರತೆ ಮರಿಗಳು ಪ್ರತ್ಯಕ್ಷ: ಆತಂಕದಲ್ಲಿ ರೈತರು
-
Kodagu2 hours agoಕರಾಟೆಯಲ್ಲಿ ಅದ್ವೈತ್ಗೆ ದ್ವಿತೀಯ ಸ್ಥಾನ
-
State10 hours agoಕೈಗಾರಿಕಾ ಬೆಳವಣಿಗೆಯಲ್ಲಿ ಕರ್ನಾಟಕದ ಹೊಸ ಮೈಲಿಗಲ್ಲು: ₹2.63 ಲಕ್ಷ ಕೋಟಿ ಹೂಡಿಕೆ, 5.43 ಲಕ್ಷ ಉದ್ಯೋಗ ಸೃಷ್ಟಿ!!
