Hassan
ಹಾಸನದಲ್ಲಿ ಕಾಡಾನೆ ಸೆರೆ ಮತ್ತು ಸ್ಥಳಾಂತರ ಕಾರ್ಯಾಚರಣೆಗೆ ಚಾಲನೆ
ಹಾಸನ: ಜಿಲ್ಲೆಯಲ್ಲಿ ತೀವ್ರಗೊಂಡಿರುವ ಮಾನವ–ಕಾಡಾನೆ ಸಂಘರ್ಷಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಾಡಾನೆಗಳನ್ನು ಸೆರೆಹಿಡಿದು ಬೇರೆಡೆಗೆ ಸ್ಥಳಾಂತರಿಸುವ ಕಾರ್ಯಾಚರಣೆಗೆ ಚಾಲನೆ ನೀಡಲಾಗಿದೆ. 50ಕ್ಕೂ ಹೆಚ್ಚು ಕಾಡಾನೆಗಳ ಚಲನವಲನ ಪತ್ತೆ; 6 ತಂಡಗಳ ರಚನೆ, 300ಕ್ಕೂ ಹೆಚ್ಚು ಸಿಬ್ಬಂದಿ ನಿಯೋಜನೆ, ಬೇಲೂರು ತಾಲ್ಲೂಕಿನ ಬಿಕ್ಕೋಡು ಸಾಕಾನೆ ಶಿಬಿರದಲ್ಲಿ ಸಹಾಯಕ ಪ್ರಧಾನ ವನ್ಯಜೀವಿ ಸಂರಕ್ಷಣಾಧಿಕಾರಿ ಮನೋಜ್ ರಾಜನ್ ಅವರು ಸಾಕಾನೆಗಳಿಗೆ ಪೂಜೆ ಸಲ್ಲಿಸಿ, ಈಡುಗಾಯಿ ಒಡೆಯುವ ಮೂಲಕ ಕಾರ್ಯಾಚರಣೆಗೆ ಚಾಲನೆ ನೀಡಿದರು. ಕ್ಯಾಪ್ಟನ್ ಪ್ರಶಾಂತ್ ನೇತೃತ್ವದಲ್ಲಿ ಏಕಲವ್ಯ, ರೋಹಿತ್, ಅಯ್ಯಪ್ಪ, ಶ್ರೀಕಂಠ, ಮಾಣಿಕ್ಯ ಸೇರಿದಂತೆ ಏಳು ಸಾಕಾನೆಗಳೊಂದಿಗೆ ಕಾರ್ಯಾಚರಣೆ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಏಳರಿಂದ ಎಂಟು ಸಾಕಾನೆಗಳು ಕಾರ್ಯಾಚರಣೆಗೆ ಸೇರ್ಪಡೆಯಾಗಲಿವೆ. ಬಿಕ್ಕೋಡಿನ ತಾತ್ಕಾಲಿಕ ಶಿಬಿರದಲ್ಲಿ ಸುದ್ದಿಗೋಷ್ಠಿ ನಡೆಸಿದ ಮನೋಜ್ ರಾಜನ್, ಇದು ಅತ್ಯಂತ ಕ್ಲಿಷ್ಟಕರ ಕಾರ್ಯಾಚರಣೆಯಾಗಿದ್ದು, ವೈಜ್ಞಾನಿಕವಾಗಿ ಹಾಗೂ ಎಚ್ಚರಿಕೆಯಿಂದ ನಡೆಸಬೇಕಿದೆ ಎಂದು ತಿಳಿಸಿದರು.
ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಈ ಭಾಗದಲ್ಲಿ ಆರು ಗುಂಪುಗಳಲ್ಲಿ ಸುಮಾರು 50ಕ್ಕೂ ಹೆಚ್ಚು ಕಾಡಾನೆಗಳಿವೆ. ರೇಡಿಯೋ ಕಾಲರ್ ಅಳವಡಿಸಿರುವ ಆನೆಗಳು ಹಾಗೂ ಅವುಗಳ ಸಂಚಾರದ ಮಾರ್ಗಗಳನ್ನು ಗುರುತಿಸಲಾಗಿದೆ. ಆನೆಗಳ ಚಲನವಲನ ಮತ್ತು ವರ್ತನೆಯನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡು ಅವುಗಳನ್ನು ಸಹಜವಾಗಿ ಬೇರೆಡೆಗೆ ಸ್ಥಳಾಂತರಿಸುವ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.

ಈಗಾಗಲೇ ಚಿಕ್ಕಮಗಳೂರು ಹಾಗೂ ಹಾಸನ ಡಿಸಿಎಫ್‌ಗಳ ನೇತೃತ್ವದಲ್ಲಿ ಜಂಟಿ ಸಭೆ ನಡೆಸಲಾಗಿದೆ. ಪೊಲೀಸ್, ಕಂದಾಯ, ವಿದ್ಯುತ್, ಆರೋಗ್ಯ, ಆರ್‌ಡಿಪಿಆರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಅಗ್ನಿಶಾಮಕ ಇಲಾಖೆಗಳ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಯಲಿದೆ. ಒಬ್ಬ ಡಿವೈಎಸ್‌ಪಿ ಮತ್ತು ಒಬ್ಬ ಸಹಾಯಕ ಆಯುಕ್ತರನ್ನು ಒಳಗೊಂಡ ತಂಡವನ್ನೂ ರಚಿಸಲಾಗಿದೆ.
ಕಾರ್ಯಾಚರಣೆಗಾಗಿ ಆರು ತಂಡಗಳನ್ನು ರಚಿಸಲಾಗಿದ್ದು, ಎಸಿಎಫ್ ಮತ್ತು ಆರ್‌ಎಫ್‌ಒಗಳು ತಂಡಗಳ ನೇತೃತ್ವ ವಹಿಸಲಿದ್ದಾರೆ. ಪ್ರತಿ ತಂಡದಲ್ಲೂ ಥರ್ಮಲ್ ಡ್ರೋನ್, ಪಶುವೈದ್ಯಾಧಿಕಾರಿಗಳು ಹಾಗೂ ಕುಮ್ಕಿ ಆನೆಗಳು ಇರಲಿವೆ. ಸುಮಾರು 300ರಿಂದ 350 ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಲಿದ್ದಾರೆ.

ಜನರಿಗೆ ಮುನ್ನೆಚ್ಚರಿಕೆ ಮಾಹಿತಿ
ಆನೆಗಳನ್ನು ಸ್ಥಳಾಂತರಿಸುವ ಸಂದರ್ಭದಲ್ಲಿ ಅವುಗಳ ಸಂಚಾರದ ಬಗ್ಗೆ ಗ್ರಾಮಸ್ಥರಿಗೆ ಮುಂಚಿತವಾಗಿ ಮಾಹಿತಿ ನೀಡಲಾಗುವುದು. ಆನೆಗಳು ಚದುರಿದರೆ ಮತ್ತಷ್ಟು ಸಮಸ್ಯೆ ಉಂಟಾಗುವ ಸಾಧ್ಯತೆ ಇರುವುದರಿಂದ ಕಾರ್ಯಾಚರಣೆಯನ್ನು ಸಮನ್ವಯದಿಂದ ನಡೆಸಲಾಗುತ್ತದೆ. ಈ ರೀತಿಯ ದೊಡ್ಡ ಕಾರ್ಯಾಚರಣೆ ಈ ಹಿಂದೆ ನಡೆದಿಲ್ಲ. ಹೀಗಾಗಿ ಮಾಧ್ಯಮಗಳು ಕೂಡ ಜನರಿಗೆ ಸೂಕ್ತ ಮಾಹಿತಿ ನೀಡುವ ಮೂಲಕ ಸಹಕರಿಸಬೇಕು ಎಂದು ಮನೋಜ್ ರಾಜನ್ ಮನವಿ ಮಾಡಿದರು.

ಈಗಾಗಲೇ ಇಬ್ಬರ ಪ್ರಾಣ ಬಲಿ ಪಡೆದಿರುವ ಕಾಡಾನೆಗಳನ್ನು ಸೆರೆಹಿಡಿಯಲು ಮೊದಲ ಆದ್ಯತೆ ನೀಡಲಾಗಿದ್ದು, ಮತ್ತೊಂದು ಜೀವಹಾನಿ ಸಂಭವಿಸದಂತೆ ಅಗತ್ಯ ಮುನ್ನೆಚ್ಚರಿಕೆಗಳೊಂದಿಗೆ ಕಾರ್ಯಾಚರಣೆ ರೂಪಿಸಲಾಗಿದೆ ಎಂದು ತಿಳಿಸಿದರು.
Hassan
ಚಲ್ಲಾಪುರ ಈಡಿಗರಹಟ್ಟಿಯಲ್ಲಿ ದೇವಿಯರ ನೂತನ ವಿಗ್ರಹ ಪ್ರತಿಷ್ಠಾಪನೆ: ಸಚಿವ ಶಿವಲಿಂಗೇಗೌಡರಿಂದ ವಿಶೇಷ ಪೂಜೆ
ಅರಸೀಕೆರೆ: ತಾಲ್ಲೂಕಿನ ಚಲ್ಲಾಪುರ ಈಡಿಗರಹಟ್ಟಿಯಲ್ಲಿ ಶ್ರೀ ಅಂತರಘಟ್ಟಮ್ಮ ದೇವಿ ಹಾಗೂ ಶ್ರೀ ಚಿಕ್ಕಮ್ಮ ದೇವಿಯರ ನೂತನ ವಿಗ್ರಹ ಪ್ರತಿಷ್ಠಾಪನೆ ಮತ್ತು ಶಿಖರ ಕಳಸಾರೋಹಣ ಮಹೋತ್ಸವ ಭಕ್ತಿಭಾವದಿಂದ ನೆರವೇರಿತು. ಮಹೋತ್ಸವದಲ್ಲಿ ಅಬಕಾರಿ ಸಚಿವರು ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರು ಭಾಗವಹಿಸಿ ದೇವಿಯರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ನಾಡಿನ ಜನತೆಗೆ ಸುಖ, ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿ ಕರುಣಿಸುವಂತೆ ದೇವಿಯರಲ್ಲಿ ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ಗ್ರಾಮಸ್ಥರು, ಭಕ್ತಾದಿಗಳು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
Hassan
ಬೇಲೂರಿನಿಂದ 56 ಕಾಡಾನೆಗಳ ಸ್ಥಳಾಂತರಕ್ಕೆ ಸರ್ಕಾರದ ಆದೇಶ: ಸಚಿವ ಕೆ.ಎಂ. ಶಿವಲಿಂಗೇಗೌಡ ಘೋಷಣೆ
ಹಾಸನ: ಬೇಲೂರು ತಾಲ್ಲೂಕಿನಲ್ಲಿ ನಿರಂತರವಾಗಿ ಆತಂಕ ಸೃಷ್ಟಿಸುತ್ತಿರುವ ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಬೇಲೂರು ಭಾಗದಲ್ಲಿರುವ ಎಲ್ಲಾ 56 ಕಾಡಾನೆಗಳನ್ನು ಒಂದು ತಿಂಗಳೊಳಗೆ ಭದ್ರಾ ಅಭಯಾರಣ್ಯಕ್ಕೆ ಸ್ಥಳಾಂತರಿಸಲು ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಘೋಷಿಸಿದ್ದಾರೆ.

ಕಾಡಾನೆಗಳ ಸ್ಥಳಾಂತರಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ಜನರ ಎದುರೇ ಸಚಿವರು ಸರ್ಕಾರದ ಆದೇಶದ ಪ್ರತಿಯನ್ನು ಪ್ರದರ್ಶಿಸಿ ಈ ಮಹತ್ವದ ಘೋಷಣೆ ಮಾಡಿದರು.
ಮೊದಲಿಗೆ ಕೇವಲ 10 ಆನೆಗಳನ್ನು ಸ್ಥಳಾಂತರಿಸುವುದಾಗಿ ಹೇಳಲಾಗಿತ್ತು. ಆದರೆ ಇದಕ್ಕೆ ಪ್ರತಿಭಟನಾಕಾರರು ಒಪ್ಪಿಗೆ ನೀಡಿರಲಿಲ್ಲ. ಬೇಲೂರು ಭಾಗದಲ್ಲಿರುವ ಎಲ್ಲಾ ಕಾಡಾನೆಗಳನ್ನು ಸ್ಥಳಾಂತರಿಸಬೇಕೆಂದು ಪಟ್ಟು ಹಿಡಿದಿದ್ದರು.
ಇದೀಗ ಸರ್ಕಾರ 10 ಆನೆಗಳಲ್ಲ, ಒಟ್ಟು 56 ಕಾಡಾನೆಗಳನ್ನು ಸ್ಥಳಾಂತರಿಸಲು ನಿರ್ಧರಿಸಿದೆ. ಒಂದು ತಿಂಗಳೊಳಗೆ ಎಲ್ಲಾ ಆನೆಗಳನ್ನು ಬೇಲೂರು ಭಾಗದಿಂದ ಭದ್ರಾ ಅಭಯಾರಣ್ಯಕ್ಕೆ ಓಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು.
ಇನ್ನು 56 ಆನೆಗಳಷ್ಟೇ ಅಲ್ಲ, ಈ ಭಾಗದಲ್ಲಿ ಎಷ್ಟು ಕಾಡಾನೆಗಳಿವೆಯೋ ಅಷ್ಟೂ ಆನೆಗಳನ್ನು ಸ್ಥಳಾಂತರಿಸುವ ಭರವಸೆಯನ್ನು ಸಚಿವರು ನೀಡಿದ್ದಾರೆ.
ಸಚಿವರ ಈ ಘೋಷಣೆಯಿಂದ ಕಾಡಾನೆಗಳ ಹಾವಳಿಯಿಂದ ಕಂಗೆಟ್ಟಿರುವ ಬೇಲೂರು ಭಾಗದ ಜನರಲ್ಲಿ ನಿರೀಕ್ಷೆ ಮೂಡಿದೆ. ಸರ್ಕಾರದ ಆದೇಶದಂತೆ ನಿಗದಿತ ಅವಧಿಯಲ್ಲಿ ಸ್ಥಳಾಂತರ ಕಾರ್ಯಾಚರಣೆ ಪೂರ್ಣಗೊಳ್ಳುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.
Hassan
ಶ್ರೀ ಕಬ್ಬಳಿ ಬಸವೇಶ್ವರ ಸ್ವಾಮಿ ದೇವಸ್ಥಾನ ಲೋಕಾರ್ಪಣೆ ಹಾಗೂ ಮಹಾ ಕುಂಭಾಭಿಷೇಕ ನೆರವೇರಿಸಿದ ನಿರ್ಮಲಾನಂದನಾಥ ಸ್ವಾಮೀಜಿ
ಚನ್ನರಾಯಪಟ್ಟಣ: ಮನುಷ್ಯನಿಗಿರುವ ಅಹಂಕಾರ ದ್ವೇಷ ಕ್ಲೇಶ ಕೋಪ ತೊಳೆದುಕೊಳ್ಳಲು ಇರುವ ಜಾಗ ದೇವಸ್ಥಾನ ಆದ್ದರಿಂದ ಭಕ್ತಿಯಿಂದ ಎಲ್ಲರೂ ದೇವಸ್ಥಾನಕ್ಕೆ ಬರಬೇಕೆಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಪುರಾಣ ಪ್ರಸಿದ್ಧ ಶ್ರೀಕ್ಷೇತ್ರ ಕಬ್ಬಳಿಯಲ್ಲಿ ಜೀರ್ಣೋದ್ಧಾರಗೊಂಡಿರುವ ಶ್ರೀ ಬಸವೇಶ್ವರ ಸ್ವಾಮಿಯ ದೇಗುಲವನ್ನು ಲೋಕಾರ್ಪಣೆಗೊಳಿಸಿದ ನಂತರ ಧಾರ್ಮಿಕ ಸಭೆಯಲ್ಲಿ ಮಾತನಾಡಿ, ಕಾಯುವ ತಾಳ್ಮೆ ಹಾಗೂ ಧಾರ್ಮಿಕ ಮನೋಭಾವನೆ ಇರಬೇಕು ಎಂದು ಆಶೀರ್ವಚನ ನೀಡಿದರು.
ಪಂಚೇಂದ್ರಿಯಗಳನ್ನು ಮೀರಿ ನಡೆಯುವ ಘಟನೆಗಳಿಗೆ ಪವಾಡಗಳು ಎನ್ನುತ್ತಾರೆ ವಿಜ್ಞಾನ ಎಷ್ಟೇ ಮುಂದುವರಿದರು ಪವಾಡಗಳನ್ನು ಒಪ್ಪಲೇಬೇಕಾಗುತ್ತದೆ.
ಮನುಷ್ಯನು ಎಲ್ಲಿ ಬೇಕಾದರೂ ಅಹಂಕಾರವನ್ನು ಪ್ರದರ್ಶಿಸಬಹುದು, ಆದರೆ ಅದೆಲ್ಲವನ್ನು ಪಕ್ಕಕ್ಕೆ ಬಿಚ್ಚಿಡುವ ಜಾಗ ಎಂದರೆ ದೇಗುಲ ಹಾಗೂ ಮಠ-ಮಾನ್ಯಗಳು. ಅದೆಷ್ಟೇ ಅಹಂಕಾರವಿದ್ದರೂ ದೇಗುಲಗಳಿಗೆ ಪ್ರವೇಶಿಸುತ್ತಿದ್ದಂತೆಯೇ ಅಹಂಕಾರವು ಮೌನವಾಗಿ ಬಿಡುತ್ತದೆ ಎಂದು ತಿಳಿಸಿದರು.

ಸ್ನಾನ ಮಾಡಿದರೆ ದೇಹದ ಮೇಲಿನ ಕೊಳೆ ಹೋಗಬಹುದಷ್ಟೇ ಆದರೆ ಮನಸ್ಸಿನ ಕೊಳೆ ತೊಳೆಯಬೇಕೆಂದರೆ ಸನ್ಮಾರ್ಗದಲ್ಲಿ ನಡೆಯಬೇಕು. ಧರ್ಮ ಕಾರ್ಯಗಳಲ್ಲಿ ತೊಡಗಿ ದೇವರ ಸೇವೆ ಮಾಡಬೇಕು. ಮನುಷ್ಯನು ಭಕ್ತಿಯ ಪೂರಕವಾಗಿ ನಡೆದರೆ ದೇವರ ಪಾದದಲ್ಲಿ ಮುಕ್ತಿಯು ಸಿಗಲಿದೆ ಎಂದರು.
ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ಭೈರವೈಕ್ಯ ಜಗದ್ಗುರು ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ದಿವ್ಯ ಸಂಕಲ್ಪದಂತೆ ಭಕ್ತರ ಸಹಕಾರದೊಂದಿಗೆ ಶ್ರೀ ಸ್ವಾಮಿಯ ದೇಗುಲವು ಜೀರ್ಣೋದ್ಧಾರಗೊಂಡಿದ್ದು ಚುಂಚಶ್ರೀಗಳ ಅಮೃತಾಸ್ತದಿಂದ ಲೋಕಾರ್ಪಣೆಗೊಂಡು ಶ್ರೀ ಕ್ಷೇತ್ರವು ಎರಡನೇ ಚುಂಚನಗಿರಿಯಂತೆ ಕಂಗೊಳಿಸುತ್ತಿದೆ ಎಂದರು.
ಶ್ರೀಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ತಿಪಟೂರು, ತುರುವೇಕೆರೆ ಹಾಗೂ ಚನ್ನರಾಯಪಟ್ಟಣ ಮಾರ್ಗದ ಎಲ್ಲ ರಸ್ತೆಗಳನ್ನು ಅಭಿವೃದ್ಧಿಗೊಳಿಸಲಾಗಿದೆ. ಮಾಜಿ ಸಚಿವ ದಿ.ನಾಗೇಶ್ ಅವರ ಸಹಕಾರದಲ್ಲಿ ನಾಗಮಂಗಲ ನಾಲೆಯ ಹೊಂಗೇಲಕ್ಷ್ಮಿ ಕ್ಷೇತ್ರದ ಬಳಿಯಿಂದ ಪೈಪ್ ಲೈನ್ ಮೂಲಕ ಶ್ರೀಕ್ಷೇತ್ರಕ್ಕೆ ನೀರಾವರಿ ಯೋಜನೆಯ ವ್ಯವಸ್ಥೆ ಮಾಡಲಾಗಿದ್ದು ಕೆರೆ-ಕಟ್ಟೆಗಳನ್ನು ತುಂಬಿಸುವ ಕೆಲಸ ಮಾಡಲಾಗಿದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ ಮಾತನಾಡಿ, ಆದಿಚುಂಚನಗಿರಿ ಮಠವು ಕೇವಲ ಒಂದು ಸಮುದಾಯಕ್ಕೆ ಮೀಸಲಾಗಿಲ್ಲ. ಎಲ್ಲಾ ಸಮುದಾಯಗಳನ್ನು ಒಗ್ಗೂಡಿಸಿಕೊಂಡು ಶಿಕ್ಷಣ, ಆರೋಗ್ಯ ಹಾಗೂ ಧಾರ್ಮಿಕವಾಗಿ ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿರುವ ಹೆಗ್ಗಳಿಕೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠಕ್ಕೆ ಸಲ್ಲುತ್ತದೆ ಎಂದು ಶ್ಲಾಘಿಸಿದರು.
ಶ್ರೀ ಕ್ಷೇತ್ರ ಕಬ್ಬಳಿ ಶ್ರೀ ಬಸವೇಶ್ವರ ಸ್ವಾಮಿ ಎಂಬ ಪುಸ್ತಕವನ್ನು ಗುರು-ಹಿರಿಯರು ಹಾಗೂ ಗಣ್ಯರು ಬಿಡುಗಡೆ ಮಾಡಿದರು. ಚುಂಚಶ್ರೀಗಳಿಗೆ ಭಕ್ತರು ಪುಷ್ಪವೃಷ್ಠಿ ಕೈಗೊಂಡು ಮಹಾ ಮಂಗಳಾರತಿ ಬೆಳಗಿಸಿದರು. ಶ್ರೀ ಬಸವೇಶ್ವರ ಸ್ವಾಮಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಆದಿಚುಂಚನಗಿರಿ ಹಾಸನ-ಕೊಡಗು ಕಾರ್ಯದರ್ಶಿಗಳಾದ ಶ್ರೀ ಶಂಭುನಾಥ ಸ್ವಾಮೀಜಿಯವರು ಪ್ರಾಸ್ತಾವಿಕ ನುಡಿಗಳನಾಡಿ ಗುರು ಹಿರಿಯರು ಹಾಗೂ ಗಣ್ಯರನ್ನು ಸ್ವಾಗತಿಸಿ ಅಭಿನಂದಿಸಿದರು.
ಚಿತ್ರದುರ್ಗದ ಶ್ರೀ ಮಾದರ ಚೆನ್ನಯ್ಯ ಸ್ವಾಮೀಜಿ, ಚಿತ್ರದುರ್ಗ ಶಾಖಾ ಮಠದ ಶ್ರೀ ಶಿವಲಿಂಗನಾಥ ಸ್ವಾಮೀಜಿ, ಮಂಡ್ಯ ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ, ಶೃಂಗೇರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ, ಶ್ರೀ ಕೈಲಾಸಪತಿ ಮಹಾ ಸ್ವಾಮೀಜಿ, ಹಳೇಬೀಡು ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಶ್ರೀ ಪುರುಷೋತ್ತಾನಂದನಾಥ ಸ್ವಾಮೀಜಿ, ಶ್ರೀ ಸಾಯಿ ಮಂದಿರದ ಶ್ರೀ ಗುರುಮೂರ್ತಿ ಗುರೂಜಿ, ಶ್ರೀ ಯೋಗಾನಂದ ಗುರೂಜಿ, ಸಂಸದ ಶ್ರೇಯಸ್ ಎಂ. ಪಟೇಲ್, ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡ, ಅರಕಲಗೂಡು ಕ್ಷೇತ್ರದ ಶಾಸಕ ಎ.ಮಂಜು, ಒಕ್ಕಲಿಗರ ಸಂಘದ ಅಧ್ಯಕ್ಷ ಜಿ.ಎನ್.ಮುದ್ದೆಗೌಡ, ಖಜಾಂಚಿ ರಘು ಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಚ್.ಎಸ್.ವಿಜಯಕುಮಾರ್, ಗುಡಿಗೌಡ ಪ್ರಕಾಶ್, ಪ್ರಮುಖರಾದ ಜವರೇಗೌಡ, ಗಣೇಶ್ ಗೌಡ, ಎನ್.ಆರ್.ರತ್ನರಾಜ್, ಶಿವನಂಜೇಗೌಡ ಹಾಗೂ ಇತರರು ಪಾಲ್ಗೊಂಡಿದ್ದರು.
ವರದಿ ದಯಾನಂದ ಶೆಟ್ಟಿಹಳ್ಳಿ
-
Chamarajanagar17 hours agoನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕರ ಹುದ್ದೆಗೆ ಅರ್ಜಿ ಆಹ್ವಾನ
-
Kodagu20 hours agoಖಾಯಂ ಹುದ್ದೆಗಾಗಿ ಅರ್ಜಿ ಆಹ್ವಾನ
-
Hassan19 hours agoಬೇಲೂರಿನಿಂದ 56 ಕಾಡಾನೆಗಳ ಸ್ಥಳಾಂತರಕ್ಕೆ ಸರ್ಕಾರದ ಆದೇಶ: ಸಚಿವ ಕೆ.ಎಂ. ಶಿವಲಿಂಗೇಗೌಡ ಘೋಷಣೆ
-
Mandya19 hours agoಖಾಸಗಿ ಶಿಕ್ಷಣ ಸಂಸ್ಥೆಯಿಂದ ಸರ್ಕಾರಿ ಜಮೀನು ಒತ್ತುವರಿ : ಅಧಿಕಾರಿಗಳಿಂದ ತೆರವು ಕಾರ್ಯ
-
Kodagu20 hours agoಸೆಂಟ್ರಲ್ ಕ್ಲಸ್ಟರ್ ಕಿಚನ್ ಪ್ರಸ್ತಾವನೆ ಕೈಬಿಡಿ: ಬಿಸಿಯೂಟ ನೌಕರರ ಪ್ರತಿಭಟನೆ
-
Chamarajanagar1 hour agoಹುಲಿ ದಾಳಿಗೆ ಹಸು ಬ*ಲಿ: ಸಂಕಷ್ಟದಲ್ಲಿ ರೈತ
-
State23 hours agoಹಿರಿಯೂರು ಟಿಕೆಟ್ ವಿಚಾರದಲ್ಲಿ ಹೈಕಮಾಂಡ್ ನಿರ್ಧಾರವೇ ಅಂತಿಮ: ಆರ್. ಅಶೋಕ್
-
Chikmagalur21 hours agoಜಿಂಕೆ ಮಾಂಸ ಮಾರಾಟ ಇಬ್ಬರ ಬಂಧನ
