Connect with us

Mandya

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯುವಕರ ಸಕ್ರಿಯ ಪಾಲ್ಗೊಳ್ಳುವಿಕೆ ಅತ್ಯಂತ ಮಹತ್ವದ್ದು : ಕೆ.ಶಿವಚಿತ್ತಪ್ಪ

Published

on

ಮಂಡ್ಯ : ಇಂದಿನ ಸ್ಪರ್ಧಾತ್ಮಕ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಯುವಕರು ಯಾವುದೇ ಹಿಂಜರಿಕೆಯಿಲ್ಲದೆ ಎಲ್ಲಾ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ದೊರೆಯುವ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡು ತಮ್ಮ ಸಾಮರ್ಥ್ಯ, ಪ್ರತಿಭೆ ಹಾಗೂ ಕೌಶಲ್ಯಗಳನ್ನು ಪ್ರದರ್ಶಿಸಲು ಸ್ವಯಂ ಆಸಕ್ತಿಯಿಂದ ಮುಂದಾಗಬೇಕು ಎಂದು ಮಂಡ್ಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ. ಶಿವಚಿತ್ತಪ್ಪ ರವರು ತಿಳಿಸಿದರು.

ಮಂಡ್ಯ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭಾಂಗಣದಲ್ಲಿ ಇಂದು ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಂಡ್ಯ ವಿಶ್ವವಿದ್ಯಾಲಯ, ಮೈ ಭಾರತ್, ರಾಷ್ಟ್ರೀಯ ಸೇವಾ ಯೋಜನೆ ಕೋಶ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಆಯೋಜಿಸಿದ್ದ ‘ವಿಕಸಿತ ಭಾರತ ಯಂಗ್ ಲೀಡರ್ಸ್ ಡೈಲಾಗ್-2027’ರ ಪಿಪಿಟಿ ಜಿಲ್ಲಾಮಟ್ಟದ ಚಾಂಪಿಯನ್‌ಶಿಪ್ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಯುವಕರು ಸದಾ ಕ್ರಿಯಾಶೀಲರಾಗಿದ್ದು, ಹೊಸ ಸವಾಲುಗಳನ್ನು ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ನಾಯಕತ್ವದ ಗುಣಗಳು ಕೇವಲ ಮಾತಿನಿಂದ ರೂಪುಗೊಳ್ಳುವುದಿಲ್ಲ. ನಿರಂತರ ಪಾಲ್ಗೊಳ್ಳುವಿಕೆ, ಪರಿಶ್ರಮ ಮತ್ತು ಸಾಧನೆಯಿಂದ ಅವು ವಿಕಸನಗೊಳ್ಳುತ್ತವೆ. ಇಂದಿನ ಯುವಕರೇ ನಾಳಿನ ನಾಯಕರಾಗಿರುವುದರಿಂದ ಪ್ರತಿಯೊಂದು ವೇದಿಕೆಯನ್ನೂ ತಮ್ಮ ಪ್ರತಿಭೆ ಅನಾವರಣಗೊಳಿಸಲು ಹಾಗೂ ನಾಯಕತ್ವದ ಸಾಮರ್ಥ್ಯ ಬೆಳೆಸಿಕೊಳ್ಳಲು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಪ್ರಸ್ತುತ ಸಂದರ್ಭದಲ್ಲಿ ಯುವಕರ ಪಾಲ್ಗೊಳ್ಳುವಿಕೆಯೇ ಅತ್ಯಂತ ಮಹತ್ವದ ಅಂಶವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಪರಿಣಾಮಕಾರಿ ಅನುಷ್ಠಾನ ಮತ್ತು ಯಶಸ್ಸಿನಲ್ಲಿ ಯುವಜನರ ಪಾತ್ರ ನಿರ್ಣಾಯಕವಾಗಿದೆ. ಯುವಕರಿಗೆ ಸೂಕ್ತ ವೇದಿಕೆ ಹಾಗೂ ಅವಕಾಶಗಳನ್ನು ಕಲ್ಪಿಸಿದಾಗ ಮಾತ್ರ ಅವರಲ್ಲಿರುವ ಪ್ರತಿಭೆ, ನವೀನ ಆಲೋಚನೆಗಳು ಮತ್ತು ನಾಯಕತ್ವದ ಸಾಮರ್ಥ್ಯ ಹೊರಹೊಮ್ಮಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಯುವಕರು ದೊರೆಯುವ ಪ್ರತಿಯೊಂದು ಅವಕಾಶದಲ್ಲಿಯೂ ಸಕ್ರಿಯವಾಗಿ ಪಾಲ್ಗೊಂಡು ತಮ್ಮ ಅಭಿಪ್ರಾಯಗಳನ್ನು ಧೈರ್ಯದಿಂದ ಮಂಡಿಸಬೇಕು. ಸ್ಪರ್ಧೆಗಳಲ್ಲಿ ಹಿಂಜರಿಯದೆ ಭಾಗವಹಿಸುವ ಮೂಲಕ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ಗುರುತಿಸಿಕೊಳ್ಳಬೇಕು. ಈ ಮೂಲಕ ಜವಾಬ್ದಾರಿಯುತ ಹಾಗೂ ಸಮರ್ಥ ನಾಯಕರಾಗಿ ರೂಪುಗೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮಂಡ್ಯ ವಿಶ್ವವಿದ್ಯಾಲಯದ ಕುಲಸಚಿವ (ಆಡಳಿತ) ಎಂ.ಪಿ. ಕೃಷ್ಣಕುಮಾರ್, ಕುಲಸಚಿವ (ಮೌಲ್ಯಮಾಪನ) ಪ್ರೊ. ಜಿ.ವಿ. ವೆಂಕಟರಮಣ, ಮೈ ಭಾರತ್ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಶೃತಿ ಎಸ್., ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಮನುಜಶ್ರೀ ವೈ.ಸಿ., ರಾಷ್ಟ್ರೀಯ ಸೇವಾ ಯೋಜನೆಯ ಜಿಲ್ಲಾ ನೋಡಲ್ ಅಧಿಕಾರಿ ಕ್ಯಾತೇಗೌಡ ಹಾಗೂ ಕಾರ್ಯಕ್ರಮದ ಸಂಯೋಜನಾಧಿಕಾರಿ ಡಾ. ಪ್ರಮೀಳಾ ಎಂ.ಟಿ. ಉಪಸ್ಥಿತರಿದ್ದರು.

Continue Reading

Mandya

ಅಭಿವೃದ್ಧಿ ಕಾಮಗಾರಿಗಳನ್ನು ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳಿಸಿ: ಮನೋಜ್ ಕುಮಾರ್ ಮೀನಾ

Published

on

ಮಂಡ್ಯ: ಜಿಲ್ಲೆಯಲ್ಲಿ ವಿವಿಧ ಇಲಾಖೆಗಳ ವತಿಯಿಂದ ಕೈಗೆತ್ತಿಕೊಳ್ಳುವ ಅಭಿವೃದ್ಧಿ ಕಾಮಗಾರಿಗಳಲ್ಲಿ ವಿಳಂಬಕ್ಕೆ ಅವಕಾಶ ನೀಡದೆ, ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳು ವೈಯಕ್ತಿಕ ಜವಾಬ್ದಾರಿ ವಹಿಸಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್ ಕುಮಾರ್ ಮೀನಾ ಅವರು ಸೂಚಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಕಾವೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಧಿಕಾರಿಗಳು ಕಚೇರಿಗೆ ಸೀಮಿತವಾಗದೆ ಕಾಮಗಾರಿ ಸ್ಥಳಗಳಿಗೆ ಖುದ್ದು ಭೇಟಿ ನೀಡಿ ಪ್ರಗತಿ ಪರಿಶೀಲಿಸಬೇಕು. ಸ್ಥಳ ಪರಿಶೀಲನೆ, ತಾಂತ್ರಿಕ ಅನುಮೋದನೆ, ಭೂಸ್ವಾಧೀನ ಸೇರಿದಂತೆ ಅಗತ್ಯ ಪೂರ್ವಸಿದ್ಧತೆಗಳನ್ನು ಆರಂಭಿಕ ಹಂತದಲ್ಲಿಯೇ ಪೂರ್ಣಗೊಳಿಸಿ, ಟೆಂಡರ್ ಪ್ರಕ್ರಿಯೆ ಮುಗಿಸಿ ಕಾಮಗಾರಿಗಳಿಗೆ ಚಾಲನೆ ನೀಡಬೇಕು. ಆಗಸ್ಟ್‌ನಿಂದ ನವೆಂಬರ್‌ವರೆಗೆ ಕೆಲವು ಕಾಮಗಾರಿಗಳು ಆರಂಭವಾಗದಿರುವುದು ಗಂಭೀರ ವಿಚಾರವಾಗಿದ್ದು, ಸಣ್ಣಪುಟ್ಟ ತಾಂತ್ರಿಕ ಕಾರಣಗಳನ್ನು ಮುಂದಿಟ್ಟುಕೊಂಡು ವಿಳಂಬ ಮಾಡಬಾರದು ಎಂದು ಎಚ್ಚರಿಸಿದರು.

ಮುಂದಿನ ಜನವರಿಯೊಳಗೆ ಎಲ್ಲಾ ಕಾಮಗಾರಿಗಳ ಅಂದಾಜು ಪಟ್ಟಿ ಸಿದ್ಧಪಡಿಸಿ, ಅಗತ್ಯ ಪೂರ್ವಸಿದ್ಧತೆಗಳನ್ನು ಪೂರ್ಣಗೊಳಿಸಬೇಕು. ಕಾಮಗಾರಿಗಳ ಆದ್ಯತೆಗಳನ್ನು ಆರಂಭದಲ್ಲಿಯೇ ಅಂತಿಮಗೊಳಿಸಬೇಕು. ಆರು ತಿಂಗಳಿಗೊಮ್ಮೆ ಆದ್ಯತೆ ಬದಲಾಯಿಸುವುದರಿಂದ ಅನುಷ್ಠಾನದಲ್ಲಿ ಗೊಂದಲ ಉಂಟಾಗುತ್ತದೆ. ಅನುಮೋದಿತ ಕಾಮಗಾರಿಗಳ ಒಪ್ಪಂದ ಹಾಗೂ ಸಾಮಗ್ರಿಗಳ ಖರೀದಿ ಪ್ರಕ್ರಿಯೆಯನ್ನು ಜನವರಿ ಅಂತ್ಯದೊಳಗೆ ಪೂರ್ಣಗೊಳಿಸಿ ಕಾಮಗಾರಿಗಳ ಅನುಷ್ಠಾನಕ್ಕೆ ಸಿದ್ಧರಾಗಬೇಕು ಎಂದರು.

ಸರ್ಕಾರ ಹಾಗೂ ಜಿಲ್ಲಾ ಪಂಚಾಯಿತಿಯಿಂದ ಬಿಡುಗಡೆಯಾಗುವ ಅನುದಾನವನ್ನು ಆರ್ಥಿಕ ವರ್ಷದ ಕೊನೆಯಲ್ಲಿ ತರಾತುರಿಯಿಂದ ವೆಚ್ಚ ಮಾಡುವ ಬದಲು, ನಿಗದಿತ ಉದ್ದೇಶಕ್ಕೆ ಅನುಗುಣವಾಗಿ ಸಮರ್ಪಕವಾಗಿ ಬಳಸಿಕೊಳ್ಳಬೇಕು. ಅನುದಾನ ವೆಚ್ಚ ಮಾಡುವುದಷ್ಟೇ ಅಭಿವೃದ್ಧಿಯ ಮಾನದಂಡವಲ್ಲ; ಕಾಮಗಾರಿಗಳ ಗುಣಮಟ್ಟ ಹಾಗೂ ಸಾರ್ವಜನಿಕರಿಗೆ ದೊರೆಯುವ ನೈಜ ಪ್ರಯೋಜನ ಮುಖ್ಯವಾಗಬೇಕು. ಪ್ರತಿಯೊಬ್ಬ ಅಧಿಕಾರಿಯೂ ತಮ್ಮ ಇಲಾಖೆಯ ಜವಾಬ್ದಾರಿಯನ್ನು ವೈಯಕ್ತಿಕ ಹೊಣೆಗಾರಿಕೆಯಾಗಿ ಪರಿಗಣಿಸಬೇಕು ಎಂದು ತಿಳಿಸಿದರು.


ವಿದ್ಯಾರ್ಥಿನಿಲಯಗಳ ದುರಸ್ತಿ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಒದಗಿಸಿರುವ ಅನುದಾನವನ್ನು ಸಕಾಲದಲ್ಲಿ ಬಳಸಿಕೊಂಡು ವಿದ್ಯಾರ್ಥಿಗಳಿಗೆ ಉತ್ತಮ ವಸತಿ ಮತ್ತು ಕಲಿಕಾ ವಾತಾವರಣ ಕಲ್ಪಿಸಬೇಕು. ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡುವ ಸಾರ್ವಜನಿಕರಿಗೆ ಗುಣಮಟ್ಟದ ಆರೋಗ್ಯ ಸೇವೆ ಹಾಗೂ ಅಗತ್ಯ ಸೌಲಭ್ಯಗಳು ದೊರೆಯುವಂತೆ ಕ್ರಮವಹಿಸಬೇಕು. ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಕಾಮಗಾರಿಗಳ ಗುಣಮಟ್ಟಕ್ಕೆ ಆದ್ಯತೆ ನೀಡಬೇಕು ಎಂದು ಸೂಚಿಸಿದರು.

*ಅನುದಾನ ಬಳಕೆಗೆ ಆದ್ಯತೆ: ಕೆ.ಆರ್. ನಂದಿನಿ*

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್. ನಂದಿನಿ ಮಾತನಾಡಿ, ವಿವಿಧ ಇಲಾಖೆಗಳ ಕಾಮಗಾರಿಗಳು ಹಾಗೂ ಯೋಜನೆಗಳ ಅನುಷ್ಠಾನದಲ್ಲಿ ಸಾರ್ವಜನಿಕರ ನೈಜ ಅಗತ್ಯಗಳಿಗೆ ಆದ್ಯತೆ ನೀಡಲಾಗುತ್ತಿದೆ. ಒಂದೇ ಕಾಮಗಾರಿಗೆ ಎರಡು ಮೂಲಗಳಿಂದ ಅನುದಾನ ಬಳಕೆಯಾಗದಂತೆ ಎಚ್ಚರಿಕೆ ವಹಿಸಲಾಗಿದ್ದು, ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಜಂಟಿ ಸ್ಥಳ ಪರಿಶೀಲನೆ ನಡೆಸಿ ಕಾಮಗಾರಿಗಳ ಅಗತ್ಯತೆ, ಸ್ಥಳ ಲಭ್ಯತೆ ಹಾಗೂ ತಾಂತ್ರಿಕ ಅಂಶಗಳನ್ನು ಖಚಿತಪಡಿಸಿಕೊಳ್ಳಲು ಸೂಚಿಸಲಾಗಿದೆ ಎಂದರು.

ವೇತನ, ಪಿಂಚಣಿ, ಗ್ರಾಚ್ಯುಟಿ ಹಾಗೂ ಹೊರಗುತ್ತಿಗೆ ಸಿಬ್ಬಂದಿಯ ವೆಚ್ಚ ಸೇರಿದಂತೆ ಬದ್ಧ ವೆಚ್ಚಗಳಿಗೆ ಅಗತ್ಯವಿರುವ ಅನುದಾನದ ಕುರಿತು ಪರಿಶೀಲಿಸಿ, ಹೆಚ್ಚುವರಿ ಅನುದಾನದ ಪ್ರಸ್ತಾವನೆಗಳನ್ನು ಹಣಕಾಸು ಇಲಾಖೆಗೆ ಸಲ್ಲಿಸಲಾಗಿದೆ. ಖರೀದಿ ಪ್ರಕ್ರಿಯೆ ಹಾಗೂ ನಾಗರಿಕ ಕಾಮಗಾರಿಗಳನ್ನು ಕೆಟಿಪಿಪಿ ಕಾಯ್ದೆ ಮತ್ತು ನಿಯಮಗಳನ್ವಯ ಪಾರದರ್ಶಕವಾಗಿ ಪೂರ್ಣಗೊಳಿಸಲು ಕ್ರಮವಹಿಸಲಾಗಿದೆ ಎಂದು ತಿಳಿಸಿದರು.

ಶಾಲೆಗಳ ಉಪಕರಣ ಮತ್ತು ಸಾಮಗ್ರಿಗಳ ಖರೀದಿ, ಅನುದಾನ ಬಳಕೆ ಹಾಗೂ ಕಾಮಗಾರಿಗಳ ಪ್ರಗತಿಯ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗಳು ವರದಿ ಸಲ್ಲಿಸಬೇಕು. ಅನುದಾನದ ಕೊರತೆಯಿಂದ ಅಪೂರ್ಣಗೊಂಡಿರುವ ಕಾಮಗಾರಿಗಳು ಹಾಗೂ ಹೆಚ್ಚುವರಿ ಅನುದಾನದ ಅಗತ್ಯವಿರುವ ಯೋಜನೆಗಳ ಪ್ರಸ್ತಾವನೆಗಳನ್ನು ಮುಂದಿನ ಆರ್ಥಿಕ ವರ್ಷದ ಬಜೆಟ್‌ನಲ್ಲಿ ಪರಿಗಣಿಸುವಂತೆ ರಾಜ್ಯಮಟ್ಟಕ್ಕೆ ಸಲ್ಲಿಸಲಾಗುವುದು ಎಂದರು.

ಜಿಲ್ಲೆಯ ಹಾಲಿನ ಬ್ಯಾಂಕ್ ಕಾರ್ಯಾರಂಭಕ್ಕೆ ಅಗತ್ಯವಿರುವ ಬಹುತೇಕ ಮೂಲಸೌಕರ್ಯ ಕಾಮಗಾರಿಗಳು ಪೂರ್ಣಗೊಂಡಿವೆ. ಆದರೆ ಆಟೋಕ್ಲೇವ್ ಯಂತ್ರ, ಡೀಪ್ ಫ್ರೀಜರ್ ಸೇರಿದಂತೆ ಮೂರು ಪ್ರಮುಖ ಉಪಕರಣಗಳ ಕೊರತೆಯಿದ್ದು, ಅವುಗಳನ್ನು ಒದಗಿಸುವಂತೆ ಸಂಬಂಧಪಟ್ಟ ಇಲಾಖೆಯ ಕಾರ್ಯದರ್ಶಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಗತ್ಯ ಉಪಕರಣಗಳು ಲಭ್ಯವಾದಲ್ಲಿ ಹಾಲಿನ ಬ್ಯಾಂಕ್ ಸಂಪೂರ್ಣವಾಗಿ ಸಾರ್ವಜನಿಕರ ಬಳಕೆಗೆ ಸಿದ್ಧವಾಗಲಿದೆ ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಯೋಜನಾ ಕೋಶದ ಅಧಿಕಾರಿ ಧನುಷ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ (ದರ್ಜೆ-1) ಶಿವಲಿಂಗಯ್ಯ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Continue Reading

Mandya

ಖಾಸಗಿ ಶಿಕ್ಷಣ ಸಂಸ್ಥೆಯಿಂದ ಸರ್ಕಾರಿ ಜಮೀನು ಒತ್ತುವರಿ : ಅಧಿಕಾರಿಗಳಿಂದ ತೆರವು ಕಾರ್ಯ

Published

on

ಶ್ರೀರಂಗಪಟ್ಟಣ: ತಾಲ್ಲೂಕಿನ ಬೆಳಗೊಳ ಗ್ರಾಮದ ಬಳಿ ಖಾಸಗಿ ಶಿಕ್ಷಣ ಸಂಸ್ಥೆಯಿಂದ ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ನಿರ್ಮಿಸಲಾಗಿದ್ದ ಕಾಂಪೌಂಡ್ ಅನ್ನು ಕಂದಾಯ ಹಾಗೂ ಸರ್ವೆ ಅಧಿಕಾರಿಗಳ ನೇತೃತ್ವದಲ್ಲಿ ತೆರವು ಕಾರ್ಯ ನಡೆಸಲಾಯಿತು.

ಗ್ರಾಮದ ಬಳಿಯ ಸರ್ವಧರ್ಮ ಆಶ್ರಮಕ್ಕೆ ಹೋಗುವ ರಸ್ತೆಯಲ್ಲಿರುವ ಖಾಸಗಿ ಶಾಲೆ, ಆಡಳಿತ ಮಂಡಳಿ ಪಕ್ಕದಲ್ಲಿನ ನಾಲೆ ಜಾಗ ಹಾಗೂ ಸರ್ಕಾರಿ ಸರ್ವೇ ನಂಬರ್‍ ಜಾಗವನ್ನು ಒತ್ತುವರಿ ಮಾಡಿರುವುದಲ್ಲದೆ ಅಕ್ರವಾಗಿ ಕಾಂಪೌಂಡ್ ಹಾಗೂ ಕಟ್ಟಡ ನಿರ್ಮಿಸಿಕೊಂಡಿದ್ದರು. ಈ ಬಗ್ಗೆ ಕಂದಾಯ ಇಲಾಖೆ ಹಾಗೂ ಸರ್ವೇ ಅಧಿಕಾರಿಗಳ ಮೂಲಕ ಅಳತೆ ಮಾಡಿಸಿ ಹೆಚ್ಚುವರಿ ಸರ್ಕಾರಿ ಜಾಗವನ್ನು ತೆರವು ಮಾಡಿಸಲು ಈ ಹಿಂದೆ ಶ್ರೀರಂಗಪಟ್ಟಣ ತಹಶೀಲ್ದಾ‌ರ್ ನೋಟೀಸ್‍ ಜಾರಿ ಮಾಡಿ ಆದೇಶಿಸಿದ್ದರು.


ಬೆಳಗೊಳ ಗ್ರಾಮದ ಸರ್ವೆ ನಂಬರ್‍ 100 ಹಾಗೂ 102 ರ ಜಾಗದ ಒತ್ತುವರಿ ಜೊತೆಗೆ, ನಾಲಾ ಜಾಗವನ್ನೂ ಒತ್ತುವರಿ ಮಾಡಿ ಕಾಂಪೌಂಡ್‍ ನಿರ್ಮಿಸಿ ಖಾಸಗಿ ಶಿಕ್ಷಣ ಸಂಸ್ಥೆ ಯಿಂದ ಅತಿಕ್ರಮ ಪ್ರವೇಶ ಮಾಡಿರುವುದನ್ನು ಆರೋಪಿಸಿ ಮಾಹಿತಿ ಹಕ್ಕು ಕಾರ್ಯಕರ್ತ ಬೆಳಗೊಳ ಕುಮಾರ ಎಂಬುವರು ಜಿಲ್ಲಾಧಿಕಾರಿ ಹಾಗೂ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.

ದೂರಿನ ಮೇರೆಗೆ ಜಿಲ್ಲಾಡಳಿತ ಸರ್ವೇ ಕಾರ್ಯ ನಡೆಸಿ ಸರ್ಕಾರಿ ಜಾಗ ಒತ್ತುವರಿಯಾಗಿರುವ ಕುರಿತು ದಾಖಲೆ ಸಮೇತ ವರದಿ ಸಲ್ಲಿಸಿದ್ದರು.

ಈ ಹಿನ್ನೆಲೆಯಲ್ಲಿ ಶ್ರೀರಂಗಟ್ಟಣ ತಹಶೀಲ್ದಾ‌ರ್ ಚೇತನ ಯಾದವ್‍ ಅವರು ತೆರವು ಕಾರ್ಯ ಕೈಗೊಳ್ಳುವಂತೆ ಆದೇಶಿಸಿ, ತೆರವಿಗೆ ಬೇಕಾದ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಬೆಳಗೊಳ ಉಪ ತಹಶೀಲ್ದಾರ್ ವರುಣ್‍ , ರಾಜಸ್ವ ನಿರೀಕ್ಷಕ ಪುಟ್ಟಸ್ವಾಮಿ, ತಾಲೂಕು ಸರ್ವೇ ಅಧಿಕಾರಿ ನರೇಶ್‍ ಕುಮಾರ್‍, ನೀರಾವರಿ ಎಂಜಿನಿಯರ್‍ ವೇಣುಗೋಪಾಲ್‍, ಬೆಳಗೊಳ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕುಳ್ಳೇಗೌಡ , ಗ್ರಾಮಲೆಖ್ಖಿಗರು ಸೇರಿದಂತೆ ಇತರ ಅಧಿಕಾರಿಗಳು ಗ್ರಾಮಸ್ಥರ ನೆರವಿನೊಂದಿಗೆ ತೆರವು ಕಾರ್ಯ ಕೈಗೊಂಡರು.

ಮಾಹಿತಿ ಹಕ್ಕು ಕಾರ್ಯಕರ್ತ ಬೆಳಗೊಳ ಕುಮಾರ, ಗ್ರಾಪಂ ಮಾಜಿ ಅಧ್ಯಕ್ಷರಾದ ಬಿ.ವಿ. ಸುರೇಶ್‍, ಮಾಜಿ ಉಪಾಧ್ಯಕ್ಷ ಮಂಜುನಾಥ, ಪುಟ್ಟರಾಜು, ಗ್ರಾಪಂ ಮಾಜಿ ಸದಸ್ಯ ವಾಸು,ರಾಮೇಗೌಡ, ಹೇಮಂತ್‍ ಕುಮಾರ್‍, ಗ್ರಾಮದ ನವೀನ್‍,ರಘು, ಹರೀಶ್‍, ಕಿಶೋರ್‍ ಸೇರಿದಂತೆ ಇತರ ಗ್ರಾಮಸ್ಥರು ತೆರವು ಕಾರ್ಯದ ವೇಳೆ ಉಪಸ್ಥಿತರಿದ್ದರು.

Continue Reading

Mandya

ರಾಶಿ ಚಿತ್ರವನ್ನು ಹರಸಿ, ಹಾರೈಸಿ : ನಟ ಶಶಿಕುಮಾರ

Published

on

ಮಂಡ್ಯ : ರಾಶಿ ಚಿತ್ರವನ್ನು ಥಿಯೇಟರ್ ನಲ್ಲಿ ವೀಕ್ಷಿಸಿ, ಚಿತ್ರ ಹಾಗೂ ಚಿತ್ರ ತಂಡವನ್ನು ಹರಸಿ, ಹಾರೈಸುವಂತೆ ಖ್ಯಾತ ನಟ ಶಶಿಕುಮಾರ ಮನವಿ ಮಾಡಿದರು.

ನಗರದ ಮಹಾವೀರ ಚಿತ್ರಮಂದಿರಕ್ಕೆ ಭೇಟಿ ನೀಡಿ ಚಿತ್ರತಂಡದವರೊಂದಿಗೆ ಚಿತ್ರ ವೀಕ್ಷಣಡ ಮಾಡಿದ ಅವರು, ‘ರಾಶಿ’ ಚಿತ್ರವು ವಿಭಿನ್ನ ಕಥಾಹಂದರ ಹೊಂದಿರುವ ಕೌಟುಂಬಿಕ ಪ್ರೇಮಕಥೆಯಾಗಿದೆ. ಇಂದಿನ ಯುವಜನತೆಗೆ ಇಷ್ಟವಾಗುವ ಅಂಶಗಳ ಜೊತೆಗೆ ಕುಟುಂಬ ಸಂಬಂಧಗಳ ಮೌಲ್ಯ, ಪ್ರೀತಿ, ಭಾವನೆಗಳಿಗೆ ಚಿತ್ರದಲ್ಲಿ ಆದ್ಯತೆ ನೀಡಲಾಗಿದೆ.


ನನ್ನ ಪುತ್ರ ಆದಿತ್ಯ ಶಶಿಕುಮಾರ್ ವಿಭಿನ್ನ ಪಾತ್ರದಲ್ಲಿ ಕಾಣಿಸಿ ಕೊಂಡಿದ್ದು, ಉತ್ತಮವಾಗಿ ಅಭಿನಯಿಸಿದ್ದಾನೆ. ಚಿತ್ರತಂಡದ ಪರಿಶ್ರಮ ತೆರೆಮೇಲೆ ಮೂಡಿಬಂದಿದೆ. ಪ್ರೇಕ್ಷಕರು ಚಿತ್ರವನ್ನು ಚಿತ್ರಮಂದಿರಗಳಲ್ಲಿ ವೀಕ್ಷಿಸಿ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.

ನಾಯಕ ನಟ ಆದಿತ್ಯ ಶಶಿಕುಮಾರ್ ಮಾತನಾಡಿ, ‘ರಾಶಿ’ ಚಿತ್ರದಲ್ಲಿ ನಟಿಸಿರು ವುದು ಸಂತಸ ತಂದಿದೆ. ಕಥೆ ಹಾಗೂ ಪಾತ್ರದ ವಿಭಿನ್ನತೆ ಯೇ ಈ ಚಿತ್ರದಲ್ಲಿ ನಟಿಸಲು ಪ್ರಮುಖ ಕಾರಣ. ಪ್ರೀತಿ, ಕುಟುಂಬದ ಬಾಂಧವ್ಯ ಮತ್ತು ಭಾವನಾತ್ಮಕ ಸನ್ನಿವೇಶಗಳು ಚಿತ್ರದ ಪ್ರಮುಖ ಆಕರ್ಷಣೆ ಯಾಗಿವೆ. ನಿರ್ದೇಶಕ ವಿಜಯ್ ಪಾಳೇಗಾರ್, ನಿರ್ಮಾಪಕ ಅಖಿಲೇಶ್ ಸೇರಿದಂತೆ ಇಡೀ ಚಿತ್ರತಂಡ ಉತ್ತಮ ಸಹಕಾರ ನೀಡಿದೆ. ಪ್ರೇಕ್ಷಕರು ಚಿತ್ರವನ್ನು ನೋಡಿ ತಮ್ಮ ಅಭಿಪ್ರಾಯ ಹಾಗೂ ಆಶೀರ್ವಾದ ನೀಡಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಎಂ.ಎಸ್.ಚಿದಂಬರ್, ಚನ್ನಯ್ಯ, ಅಮರಾವತಿ ನಾಗರಾಜ್, ಯೋಗಾನಂದ ಗೌಡಗೆರೆ, ಸೇರಿದಂತೆ ಮತ್ತಿತರರು ಇದ್ದರು

Continue Reading

Trending

error: Content is protected !!