Chikmagalur
ಸಿದ್ದರಾಮಯ್ಯ, ಹರಿಪ್ರಸಾದ್ ಆಗಮನ: ಅದ್ಧೂರಿ ಸ್ವಾಗತಕ್ಕೆ ಮುಸ್ಲಿಂ ಒಕ್ಕೂಟ ಸಿದ್ಧತೆ
ಚಿಕ್ಕಮಗಳೂರು: ನವೆಂಬರ್ 19ರಂದು ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ 110ನೇ ಜನ್ಮದಿನಾಚರಣೆ ಹಾಗೂ ನೂತನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ. ಮಂಜೇಗೌಡ ಅವರ ಪದಗ್ರಹಣ ಸಮಾರಂಭಕ್ಕೆ ಆಗಮಿಸಲಿರುವ ಮಾಜಿಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹಾಗೂ ಸಚಿವ ರಿಜ್ವಾನ್ ಹರ್ಷದ್ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲು ಚಿಕ್ಕಮಗಳೂರು ಜಿಲ್ಲಾ ಮುಸ್ಲಿಂ ಒಕ್ಕೂಟ ನಿರ್ಧರಿಸಿದೆ.

ನಗರದಲ್ಲಿ ಸುದ್ದಿಗೋಷ್ಠಿಯ ಮೂಲಕ ಮಾಹಿತಿ ನೀಡಿದ ಒಕ್ಕೂಟದ ಮುಖಂಡರು, ಜಿಲ್ಲೆಯ ವಿವಿಧ ಭಾಗಗಳಿಂದ ಸಾವಿರಾರು ಮುಸ್ಲಿಂ ಬಾಂಧವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದರು.
ಅಂದು ಬೆಳಿಗ್ಗೆ 10.30ಕ್ಕೆ ಹನುಮಂತಪ್ಪ ವೃತ್ತದಿಂದ ಇಂದಿರಾಗಾಂಧಿ ಅವರ ಭಾವಚಿತ್ರದೊಂದಿಗೆ ವಿವಿಧ ವಾದ್ಯಗೋಷ್ಠಿಗಳ ಮೂಲಕ ತೆರೆದ ವಾಹನದಲ್ಲಿ ನಾಯಕರನ್ನು ಮೆರವಣಿಗೆಯಲ್ಲಿ ಕರೆತರಲಾಗುವುದು. ಕೆಇಬಿ ವೃತ್ತದಲ್ಲಿ ಗಣ್ಯರಿಗೆ ಸ್ವಾಗತ ಕೋರಿ, ಗಾಯತ್ರಿ ಕಲ್ಯಾಣ ಮಂಟಪದ ಎದುರಿನ ಮೈದಾನದಲ್ಲಿ ಸಮಾರಂಭ ನಡೆಯಲಿದೆ.
ಸಾಮಾನ್ಯ ಕಾರ್ಯಕರ್ತರಾಗಿ ಪಕ್ಷದಲ್ಲಿ ಬೆಳೆದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿರುವ ಎಚ್.ಪಿ. ಮಂಜೇಗೌಡ ಅವರ ಪದಗ್ರಹಣ ಕಾರ್ಯಕ್ರಮಕ್ಕೆ ಜಿಲ್ಲೆಯ ಎಲ್ಲಾ ಮುಸ್ಲಿಂ ಮುಖಂಡರು ಹಾಗೂ ಸಮುದಾಯದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಬೆಂಬಲ ನೀಡುವಂತೆ ಒಕ್ಕೂಟ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
Chikmagalur
ಜಿಲ್ಲಾಮಟ್ಟದಲ್ಲಿ ಬಿರ್ಸಾ ಮುಂಡಾ ಜಯಂತಿ ರದ್ದು: ಆದಿವಾಸಿಗಳಿಗೆ ಅವಮಾನ
ಚಿಕ್ಕಮಗಳೂರು: ಆದಿವಾಸಿ ಮೂಲ ಬುಡಕಟ್ಟು ಜನಜಾತಿಯ ಅಸ್ಮಿತೆಯ ಸಂಕೇತವಾಗಿರುವ ಭಗವಾನ್ ಬಿರ್ಸಾ ಮುಂಡಾ ಅವರ ಜಯಂತಿಯನ್ನು ಜಿಲ್ಲಾಮಟ್ಟದಲ್ಲಿ ಈ ಬಾರಿ ರದ್ದುಗೊಳಿಸಿರುವುದು ಆದಿವಾಸಿ ಸಮುದಾಯಕ್ಕೆ ಮಾಡಿರುವ ಅವಮಾನವಾಗಿದೆ ಎಂದು ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ಆರೋಪಿಸುದೆ
ಈ ಕುರಿತು ಹೇಳಿಕೆ ನೀಡಿರುವ ಜಂಟಿ ಹೇಳಿಕೆಯಲ್ಲಿ ಪರಿಷತ್ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೇಶ್ ಹಾಗೂ ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ರೀನಿವಾಸ್ ಗೌಡ 2021ರಿಂದ ಈವರೆಗೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಸಹಯೋಗದಲ್ಲಿ ಬಿರ್ಸಾ ಮುಂಡಾ ಜಯಂತಿಯನ್ನು ರಾಜ್ಯದ ವಿವಿಧೆಡೆ ಸಂಭ್ರಮದಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಅದರಂತೆ ಚಿಕ್ಕಮಗಳೂರು ಜಿಲ್ಲೆಯಲ್ಲಿಯೂ ಸಮಗ್ರ ಗಿರಿಜನ ಸಮನ್ವಯ ಇಲಾಖೆಯ ನೇತೃತ್ವದಲ್ಲಿ ಪ್ರತಿ ವರ್ಷ ಜಯಂತಿ ಆಚರಿಸಲಾಗುತ್ತಿತ್ತು. ಜಿಲ್ಲೆಯ ಗೌಡಲು, ಹಸಲರು, ಮೇದ, ಡೋಂಗ್ರಿ ಗರಾಸಿಯಾ ಸೇರಿದಂತೆ ವಿವಿಧ ಮೂಲ ಆದಿವಾಸಿ ಸಮುದಾಯಗಳ ನೂರಾರು ಮಂದಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುತ್ತಿದ್ದರು ಎಂದು ತಿಳಿಸಿದ್ದಾರೆ.

ಆದರೆ ಈ ಬಾರಿ ಜಿಲ್ಲಾಮಟ್ಟದಲ್ಲಿ ಬಿರ್ಸಾ ಮುಂಡಾ ಜಯಂತಿ ಆಚರಣೆಯನ್ನು ರದ್ದುಗೊಳಿಸಿರುವುದು ಆದಿವಾಸಿ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದೆ. ಜಿಲ್ಲೆಯ ಆದಿವಾಸಿಗಳು ಒಗ್ಗೂಡಿ ತಮ್ಮ ಸಂಸ್ಕೃತಿ, ಪರಂಪರೆ ಹಾಗೂ ಅಸ್ಮಿತೆಯನ್ನು ಅಭಿವ್ಯಕ್ತಪಡಿಸಲು ದೊರೆಯುವ ಏಕೈಕ ಪ್ರಮುಖ ವೇದಿಕೆಯಾಗಿದ್ದ ಬಿರ್ಸಾ ಮುಂಡಾ ಜಯಂತಿಯನ್ನೇ ರದ್ದುಗೊಳಿಸಿರುವುದರ ಹಿಂದಿನ ಉದ್ದೇಶವೇನು ಎಂಬ ಪ್ರಶ್ನೆ ಮೂಡಿದೆ ಎಂದು ಹೇಳಿದ್ದಾರೆ.
ಬಿರ್ಸಾ ಮುಂಡಾ ಅವರ ಹೋರಾಟದ ಬದುಕು, ಆದಿವಾಸಿಗಳ ಹಕ್ಕುಗಳಿಗಾಗಿ ಅವರು ನಡೆಸಿದ ಸಂಘರ್ಷ ಹಾಗೂ ಬುಡಕಟ್ಟು ಸಮುದಾಯದ ಸ್ವಾಭಿಮಾನದ ಸಂದೇಶವನ್ನು ಮನೆಮನೆಗೂ ತಲುಪಿಸುವುದು ಕೇಂದ್ರ ಸರ್ಕಾರದ ಆಶಯವಾಗಿದೆ. ಆದರೆ ಬುಡಕಟ್ಟು ಸಂಶೋಧನಾ ಸಂಸ್ಥೆಯ ಅಧಿಕಾರಿಗಳು ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಈ ಬಾರಿ ಮೈಸೂರಿನಲ್ಲಿ ಜಯಂತಿ ಆಚರಿಸುವ ಮೂಲಕ ಜಿಲ್ಲೆಯ ಆದಿವಾಸಿ ಸಮುದಾಯಗಳನ್ನು ಕಾರ್ಯಕ್ರಮದಿಂದ ದೂರವಿಟ್ಟಿದ್ದಾರೆ. ಇದರಿಂದ ಕೇಂದ್ರ ಸರ್ಕಾರದ ಮೂಲ ಆಶಯಕ್ಕೆ ಧಕ್ಕೆಯಾಗಿದೆ ಎಂದು ಆರೋಪಿಸಿದ್ದಾರೆ.
ಜಿಲ್ಲೆಯ ಆದಿವಾಸಿ ಸಮುದಾಯಗಳಿಗೆ ಕಾರ್ಯಕ್ರಮದ ಕುರಿತು ಯಾವುದೇ ಪೂರ್ವ ಮಾಹಿತಿ ನೀಡದೆ, ತಮಗೆ ಆಪ್ತರಾಗಿರುವ ಕೆಲವರನ್ನು ಮಾತ್ರ ಮೈಸೂರಿನ ಕಾರ್ಯಕ್ರಮಕ್ಕೆ ಕಳುಹಿಸುವ ಮೂಲಕ ಅಧಿಕಾರಿಗಳು ತಮ್ಮ ಜವಾಬ್ದಾರಿಯಿಂದ ನುಣುಚಿಕೊಂಡಿದ್ದಾರೆ. ಆದಿವಾಸಿಗಳಲ್ಲಿ ಜಾಗೃತಿ ಮೂಡಿಸಿ, ಭಗವಾನ್ ಬಿರ್ಸಾ ಮುಂಡಾ ಅವರ ಹೋರಾಟದ ಇತಿಹಾಸವನ್ನು ಪರಿಚಯಿಸಿ, ಸಮುದಾಯದ ಅಸ್ಮಿತೆಯನ್ನು ಬಲಪಡಿಸಬೇಕಾದ ಅಧಿಕಾರಿಗಳೇ ಈ ರೀತಿ ನಡೆದುಕೊಂಡಿರುವುದು ಖಂಡನೀಯ ಎಂದು ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಾದರೂ ಆದಿವಾಸಿ ಸಮುದಾಯಗಳ ಅಭಿಪ್ರಾಯ ಹಾಗೂ ಭಾಗವಹಿಸುವಿಕೆಗೆ ಆದ್ಯತೆ ನೀಡಿ ಜಿಲ್ಲಾಮಟ್ಟದಲ್ಲಿ ಬಿರ್ಸಾ ಮುಂಡಾ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
Chikmagalur
ಕಾಂಗ್ರೆಸ್ ವಿರುದ್ಧ ದಲಿತ ಪ್ರಗತಿಪರ ಸಂಘಟನೆಗಳ ಆಕ್ರೋಶ
ಚಿಕ್ಕಮಗಳೂರು: ದಲಿತರು, ಅಲ್ಪಸಂಖ್ಯಾತರು ಹಾಗೂ ದುಡಿಯುವ ವರ್ಗದ ಜನರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ, ಚಿಕ್ಕಮಗಳೂರು ದಲಿತ ಪ್ರಗತಿಪರ ಸಂಘಟನೆಗಳ ಒಕ್ಕೂಟ ನವೆಂಬರ್ 19ರಂದು ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರು ಧರಣಿ ನಡೆಸಲು ನಿರ್ಧರಿಸಿದೆ. ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಮುಖಂಡರು, 2023ರ ವಿಧಾನಸಭೆ ಚುನಾವಣೆಯಲ್ಲಿ ಸಂವಿಧಾನದ ರಕ್ಷಣೆ, ಸಾಮಾಜಿಕ ಸಮಾನತೆ ಹಾಗೂ ಕೋಮು ಸೌಹಾರ್ದತೆಯ ಆಶಯದೊಂದಿಗೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಅಧಿಕಾರಕ್ಕೆ ತರಲು ಶ್ರಮಿಸಿದ ದಲಿತರು ಮತ್ತು ಅಲ್ಪಸಂಖ್ಯಾತರಿಗೆ ಈಗ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದರು.
ಎಸ್‌ಸಿಎಸ್‌ಪಿ, ಟಿಎಸ್‌ಪಿ ಅನುದಾನದ ದುರ್ಬಳಕೆ, ಸರ್ಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ ದಲಿತರಿಗೆ ಅವಕಾಶ ನಿರಾಕರಣೆ, ನಿಗಮ ಮಂಡಳಿಗಳಲ್ಲಿ ಸೂಕ್ತ ಪ್ರಾತಿನಿಧ್ಯ ನೀಡದಿರುವುದು, ಸ್ಮಶಾನ ಭೂಮಿ ಮಂಜೂರಾತಿ ವಿಳಂಬ ಸೇರಿದಂತೆ ಹಲವು ಸಮಸ್ಯೆಗಳನ್ನು ಸರ್ಕಾರ ನಿರ್ಲಕ್ಷಿಸಿದೆ ಎಂದು ದೂರಿದರು. ಅಲ್ಲದೆ, 53ರ ಅರ್ಜಿಗಳಡಿ ಭೂಮಿ, ಮನೆ ಮತ್ತು ನಿವೇಶನ ಮಂಜೂರು ಮಾಡದಿರುವುದು ಹಾಗೂ ಅಂಬೇಡ್ಕರ್ ಅಧ್ಯಯನ ಸಂಸ್ಥೆಗೆ ಭೂಮಿ ನೀಡದಿರುವುದಕ್ಕೂ ಆಕ್ರೋಶ ವ್ಯಕ್ತಪಡಿಸಿದರು.

ಶ್ರೀನಿವಾಸ್ ದಂಟರಮಕ್ಕಿ ಮಾತನಾಡಿ, ನವೆಂಬರ್ 19ರಂದು ಆಗಮಿಸುವ ರಾಜ್ಯ ಕಾಂಗ್ರೆಸ್ ಅಧ್ಯಕ್ಷರು ನಮ್ಮ ಪ್ರಶ್ನೆಗಳಿಗೆ ಉತ್ತರ ನೀಡಬೇಕು. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಹೊರತುಪಡಿಸಿ ಇತರ ಪಕ್ಷಗಳೊಂದಿಗೆ ಪರ್ಯಾಯ ರಾಜಕೀಯ ಒಗ್ಗಟ್ಟಿನ ಕುರಿತು ಚರ್ಚಿಸಿ ಮುಂಬರುವ ಚುನಾವಣೆಯಲ್ಲಿ ತಕ್ಕ ಉತ್ತರ ನೀಡುತ್ತೇವೆ ಎಂದು ಹೇಳಿದರು. ಈ ಸುದ್ದಿಗೋಷ್ಠಿಯಲ್ಲಿ ಮರ್ಲೆ ಅಣ್ಣಯ್ಯ ಆರ್. ಶೇಖರ್, ಹೊನ್ನಪ್ಪ ದಂಟರಮಕ್ಕಿ, ಛಲವಾದಿ ರಘು, ಪುಟ್ಟಸ್ವಾಮಿ ಮತ್ತಿತರರು ಇದ್ದರು.
Chikmagalur
ಬಾಲ್ಯವಿವಾಹದ ಬಳಿಕ ಅಪ್ರಾಪ್ತ ಬಾಲಕಿ ಗರ್ಭಿಣಿ: ಯುವಕನ ವಿರುದ್ಧ ಪ್ರಕರಣ ದಾಖಲು
ಕಡೂರು: ಅಪ್ರಾಪ್ತ ಬಾಲಕಿಗೆ ಬಾಲ್ಯವಿವಾಹ ಮಾಡಿಸಿ, ಆಕೆ ಐದು ತಿಂಗಳ ಗರ್ಭಿಣಿಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಡೂರು ಪೊಲೀಸ್ ಠಾಣೆಯಲ್ಲಿ ಬಾಲ್ಯವಿವಾಹ ನಿಷೇಧ ಕಾಯ್ದೆ ಹಾಗೂ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಎಸ್. ಬಿದರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಪ್ರಾಪ್ತ ಬಾಲಕಿಯನ್ನು ಬಿ. ಗೊಲ್ಲರಹಟ್ಟಿ ಗ್ರಾಮದ ದೇವೇಂದ್ರ ಎಂಬ ಯುವಕನೊಂದಿಗೆ ಬಾಲ್ಯವಿವಾಹ ಮಾಡಲಾಗಿತ್ತು. ಸದ್ಯ ಬಾಲಕಿ ಐದು ತಿಂಗಳ ಗರ್ಭಿಣಿಯಾಗಿರುವುದಾಗಿ ಮಕ್ಕಳ ಸಹಾಯವಾಣಿಗೆ ಮಾಹಿತಿ ಬಂದಿತ್ತು.
ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಬಾಲಕಿಯ ಮನೆಗೆ ಭೇಟಿ ನೀಡಿ ಪರಿಶೀಲಿಸಿದಾಗ ಬಾಲ್ಯವಿವಾಹ ನಡೆದಿರುವುದು ಹಾಗೂ ಬಾಲಕಿ ಗರ್ಭಿಣಿಯಾಗಿರುವುದು ದೃಢಪಟ್ಟಿತ್ತು. ಬಳಿಕ ಅಕ್ಟೋಬರ್ 14ರಂದು ಶಿಶು ಅಭಿವೃದ್ಧಿ ಯೋಜನಾ ಇಲಾಖೆಯ ಅಂಗನವಾಡಿ ಮೇಲ್ವಿಚಾರಕರು ಹಾಗೂ ಮಕ್ಕಳ ಸಹಾಯವಾಣಿ ಸಿಬ್ಬಂದಿ ಬಾಲಕಿ ಮತ್ತು ಯುವಕನ ಮನೆಗೆ ಭೇಟಿ ನೀಡಿದಾಗ ಯಾರೂ ಮನೆಯಲ್ಲಿ ಇರಲಿಲ್ಲ.

ಬಾಲ್ಯವಿವಾಹ ಹಾಗೂ ಬಾಲಕಿ ಗರ್ಭಿಣಿಯಾಗಿರುವುದಕ್ಕೆ ಸಂಬಂಧಿಸಿದ ಪೂರಕ ದಾಖಲೆಗಳ ಆಧಾರದ ಮೇಲೆ ನೊಂದ ಬಾಲಕಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ನವೆಂಬರ್ 16ರಂದು ಕಡೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಮೇರೆಗೆ ಪೊಲೀಸರು ಬಾಲ್ಯವಿವಾಹ ನಿಷೇಧ ಕಾಯ್ದೆ ಹಾಗೂ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ನೊಂದ ಬಾಲಕಿಯ ಗುರುತು ಬಹಿರಂಗವಾಗದಂತೆ ಪೊಲೀಸ್ ವರದಿಯಲ್ಲಿ ಆಕೆಯ ಹೆಸರಿನ ಬದಲಿಗೆ MINOR-178 ಎಂದು ನಮೂದಿಸಲಾಗಿದೆ.
-
Chamarajanagar18 hours agoನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕರ ಹುದ್ದೆಗೆ ಅರ್ಜಿ ಆಹ್ವಾನ
-
Kodagu20 hours agoಖಾಯಂ ಹುದ್ದೆಗಾಗಿ ಅರ್ಜಿ ಆಹ್ವಾನ
-
Hassan20 hours agoಬೇಲೂರಿನಿಂದ 56 ಕಾಡಾನೆಗಳ ಸ್ಥಳಾಂತರಕ್ಕೆ ಸರ್ಕಾರದ ಆದೇಶ: ಸಚಿವ ಕೆ.ಎಂ. ಶಿವಲಿಂಗೇಗೌಡ ಘೋಷಣೆ
-
Mandya20 hours agoಖಾಸಗಿ ಶಿಕ್ಷಣ ಸಂಸ್ಥೆಯಿಂದ ಸರ್ಕಾರಿ ಜಮೀನು ಒತ್ತುವರಿ : ಅಧಿಕಾರಿಗಳಿಂದ ತೆರವು ಕಾರ್ಯ
-
Kodagu20 hours agoಸೆಂಟ್ರಲ್ ಕ್ಲಸ್ಟರ್ ಕಿಚನ್ ಪ್ರಸ್ತಾವನೆ ಕೈಬಿಡಿ: ಬಿಸಿಯೂಟ ನೌಕರರ ಪ್ರತಿಭಟನೆ
-
Chamarajanagar2 hours agoಹುಲಿ ದಾಳಿಗೆ ಹಸು ಬ*ಲಿ: ಸಂಕಷ್ಟದಲ್ಲಿ ರೈತ
-
Chikmagalur21 hours agoಜಿಂಕೆ ಮಾಂಸ ಮಾರಾಟ ಇಬ್ಬರ ಬಂಧನ
-
State24 hours agoಹಿರಿಯೂರು ಟಿಕೆಟ್ ವಿಚಾರದಲ್ಲಿ ಹೈಕಮಾಂಡ್ ನಿರ್ಧಾರವೇ ಅಂತಿಮ: ಆರ್. ಅಶೋಕ್
