Connect with us

Kodagu

ನವೆಂಬರ್ 26ರಂದು ಗುಧ್ರೋಡೆ ಕೋಲ್ ಮಂದ್ ನಮ್ಮೆ ಆಚರಣೆ

Published

on

ಪೊನ್ನಂಪೇಟೆ : ತಾಲೂಕಿನ ಚಿಕ್ಕಮಂಡೂರು ಗ್ರಾಮದಲ್ಲಿರುವ ಐತಿಹಾಸಿಕ ಗುಧ್ರೋಡೆ ಕೋಲ್ ಮಂದ್ ನಮ್ಮೆಯನ್ನು ನವೆಂಬರ್ 26ರಂದು ಆಚರಿಸಲು ನಿರ್ಧರಿಸಲಾಗಿದೆ.

ಈ ಸಂಬಂಧ ಮಂದ್ ಆವರಣದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ಮಂದ್ ಸಮಿತಿ ಅಧ್ಯಕ್ಷ ಕೋಳೆರ ನರೇಂದ್ರ ವಹಿಸಿದ್ದರು.


ಸುಮಾರು 70 ವರ್ಷಗಳ ಹಿಂದೆ ಪಾಳುಬಿದ್ದು ಜೀರ್ಣಾವಸ್ಥೆ ತಲುಪಿದ್ದ ಗುಧ್ರೋಡೆ ಕೋಲ್ ಮಂದ್ ಅನ್ನು ಮುಗುಟಗೇರಿ, ನಡಿಕೇರಿ, ಚಿಕ್ಕಮಂಡೂರು ಹಾಗೂ ತೂಚಮಕೇರಿ ಗ್ರಾಮಸ್ಥರು ದಾನಿಗಳ ಸಹಕಾರದೊಂದಿಗೆ 2025ರಲ್ಲಿ ಪುನರ್ನಿರ್ಮಿಸಿದ್ದರು. ಬಳಿಕ ಕಳೆದ ವರ್ಷ ಮೊದಲ ಬಾರಿಗೆ ಇಲ್ಲಿ ಪುತ್ತರಿ ಕೋಲ್ ಮಂದ್ ಆಚರಣೆಯನ್ನು ನಡೆಸಲಾಗಿತ್ತು.

ಕೊಡಗಿನ ಸಾಂಪ್ರದಾಯಿಕ ಪದ್ಧತಿಯಂತೆ ಪುತ್ತರಿ ಹಬ್ಬದ ಮರುದಿನ ಕೋಲ್ ಮಂದ್ ಆಚರಿಸುವ ಸಂಪ್ರದಾಯವಿದೆ. ಈ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷವೂ ಆಚರಣೆಯನ್ನು ಸಂಪ್ರದಾಯಬದ್ಧವಾಗಿ ಹಾಗೂ ಅರ್ಥಪೂರ್ಣವಾಗಿ ನಡೆಸುವ ಉದ್ದೇಶದಿಂದ ನಾಲ್ಕು ಗ್ರಾಮಗಳ ಮುಖಂಡರು ಹಾಗೂ ಪ್ರಮುಖರು ಸಭೆಯಲ್ಲಿ ಚರ್ಚಿಸಿದರು.

ಈ ಸಂದರ್ಭ ಮಾತನಾಡಿದ ಅಂಜಿಕೇರಿ ನಾಡ್ ತಕ್ಕಮುಖ್ಯಸ್ಥ ಅಜ್ಜಿಕುಟ್ಟೀರ ಪೃಥ್ವಿ ಸುಬ್ಬಯ್ಯ, ಪಟ್ಟೋಳೆ ಪಳಮೆಯಲ್ಲಿ ಉಲ್ಲೇಖಿಸಿರುವಂತೆ ಗುಧ್ರೋಡೆ ಮಂದ್ ನಾಲ್ಕು ಗ್ರಾಮಗಳಿಗೆ ಸೇರಿದ ನಾಡ್ ಮಂದ್ ಆಗಿದೆ. ಈ ಐತಿಹಾಸಿಕ ಮಂದ್ನ ಪರಂಪರೆ, ಸಂಸ್ಕೃತಿ ಹಾಗೂ ಸಂಪ್ರದಾಯವನ್ನು ಮುಂದಿನ ಪೀಳಿಗೆಗೂ ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ತಿಳಿಸಿದರು.

ಸಭೆಯಲ್ಲಿ ಪುತ್ತರಿ ಹಬ್ಬದ ಬಳಿಕ ಜ್ಯೋತಿಷಿಗಳನ್ನು ಆಹ್ವಾನಿಸಿ ಹೂ ಪ್ರಶ್ನೆ ಮೂಲಕ ಮಂದ್ಗೆ ಸಂಬಂಧಿಸಿದ ಐತಿಹಾಸಿಕ ಹಾಗೂ ಧಾರ್ಮಿಕ ವಿಚಾರಗಳನ್ನು ತಿಳಿದುಕೊಳ್ಳಲು ನಿರ್ಧರಿಸಲಾಯಿತು. ಅಲ್ಲದೆ, ನವೆಂಬರ್ 26ರಂದು ಗುಧ್ರೋಡೆ ಕೋಲ್ ಮಂದ್ ನಮ್ಮೆ ಆಚರಿಸುವುದರೊಂದಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ತೀರ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಅಂಜಿಕೇರಿ ನಾಡಿಗೆ ಸಂಬಂಧಿಸಿದ ಗ್ರಾಮಗಳ ಪುತ್ತರಿ ಹಬ್ಬದ ಕದಿರು ತೆಗೆಯುವ ಸಮಯವನ್ನೂ ನಿಗದಿಪಡಿಸಲಾಗಿದೆ. ನವೆಂಬರ್ 25ರಂದು ಬೆಳಿಗ್ಗೆ 7.30ಕ್ಕೆ ದೇವರ ಕದಿರು ತೆಗೆಯುವುದು, ಬೆಳಿಗ್ಗೆ 10 ಗಂಟೆಗೆ ಊರಿನ ದೇವಸ್ಥಾನಗಳಲ್ಲಿ ಹಾಗೂ ಮಧ್ಯಾಹ್ನ 12 ಗಂಟೆಯೊಳಗೆ ಮನೆಗಳಲ್ಲಿ ಕದಿರು ತೆಗೆಯುವಂತೆ ಹುದಿಕೇರಿ ಶ್ರೀ ಮಹಾದೇವರ ದೇವಸ್ಥಾನದಲ್ಲಿ ನಾಡ್ ತಕ್ಕ ಹಾಗೂ ಊರ್ ತಕ್ಕ ಮುಖ್ಯಸ್ಥರ ಸಮ್ಮುಖದಲ್ಲಿ ತೀರ್ಮಾನಿಸಲಾಗಿದೆ.

ಸಭೆಯಲ್ಲಿ ಸಮಿತಿ ಖಜಾಂಚಿ ಕಳ್ಳಿಚಂಡ ರಾಬಿನ್ ಸುಬ್ಬಯ್ಯ ಲೆಕ್ಕಪತ್ರ ಮಂಡಿಸಿದರು. ನಾಡ್ ತಕ್ಕ ಚೆಕ್ಕೇರ ರಾಜೇಶ್, ಊರ್ ತಕ್ಕರಾದ ಮಲಚೀರ ಬೋಜಪ್ಪ, ಪೆಮ್ಮಂಡ ಅರುಣ, ಕಳ್ಳಿಚಂಡ ನಂದಾ ನಂಜಪ್ಪ ಸೇರಿದಂತೆ ನಾಲ್ಕು ಗ್ರಾಮಗಳ ಪ್ರಮುಖರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Continue Reading

Kodagu

ಆಸ್ಪತ್ರೆಗಳಲ್ಲಿ ಮಾಹಿತಿ ಫಲಕ ಅಳವಡಿಸಲು ಎಸ್‌ಡಿಟಿಯು ಒತ್ತಾಯ

Published

on

ಮಡಿಕೇರಿ : ಬಿಪಿಎಲ್ ಕಾರ್ಡ್ ಹೊಂದಿರುವ ರೋಗಿಗಳಿಗೆ ಲಭ್ಯವಿರುವ ಉಚಿತ ಆರೋಗ್ಯ ಸೌಲಭ್ಯಗಳ ಕುರಿತು ಮಡಿಕೇರಿಯ ಜಿಲ್ಲಾಸ್ಪತ್ರೆ ಸೇರಿದಂತೆ ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ಮಾಹಿತಿ ಫಲಕ ಅಳವಡಿಸುವಂತೆ ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ ನ ಕೊಡಗು ಜಿಲ್ಲಾ ಘಟಕ ಒತ್ತಾಯಿಸಿದೆ.
ಇಂದು ಜಿಲ್ಲಾಸ್ಪತ್ರೆಯ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ ಎಸ್‌ಡಿಟಿಯು ನ ಜಿಲ್ಲಾ ಕಾರ್ಯದರ್ಶಿ ಪ್ರಧಾನ ಎಂ.ಎ.ಅಬ್ದುಲ್ ರಜಾಕ್ ಅವರು ಇತ್ತೀಚಿನ ದಿನಗಳಲ್ಲಿ ಬಿಪಿಎಲ್ ಕಾರ್ಡ್ ಇದ್ದರೂ ರೋಗಿಗಳಿಂದ ಶುಲ್ಕ ಪಡೆಯಲಾಗುತ್ತಿದೆ ಎನ್ನುವ ಆರೋಪಗಳಿವೆ ಎಂದು ಗಮನ ಸೆಳೆದರು.


ಬಿಪಿಎಲ್ ಕಾರ್ಡ್ ಹೊಂದಿರುವ ಬಡ ಕಾರ್ಮಿಕರೊಬ್ಬರು ಎಕ್ಸ್ -ರೇ ತೆಗೆಯಲು ಮತ್ತು ಬ್ಯಾಂಡೇಜ್ ಹಾಕಿಸಿಕೊಳ್ಳಲು ಒಟ್ಟು ೫೫೦ ರೂ.ಗಳನ್ನು ಜಿಲ್ಲಾಸ್ಪತ್ರೆಗೆ ಪಾವತಿಸಿದ್ದಾರೆ. ಈ ಶುಲ್ಕವನ್ನು ಯಾವ ನಿಯಮದಡಿ ವಸೂಲಿ ಮಾಡಲಾಗಿದೆ ಎನ್ನುವ ಬಗ್ಗೆ ಸ್ಪಷ್ಟತೆ ಬೇಕು. ಬಿಪಿಎಲ್ ಕಾರ್ಡ್ ಇದ್ದರೆ ಉಚಿತ ಆರೋಗ್ಯ ಸೌಲಭ್ಯ ದೊರೆಯುತ್ತದೆ ಎನ್ನುವ ನಿರೀಕ್ಷೆಯೊಂದಿಗೆ ಬಡ ರೋಗಿಗಳು ಆಸ್ಪತ್ರೆಗೆ ಬರುತ್ತಾರೆ. ಆದರೆ ಶುಲ್ಕ ಪಾವತಿಸಲೇಬೇಕು ಎನ್ನುವ ಅನಿವಾರ್ಯತೆ ಎದುರಾದಾಗ ಬಡವರು ಜೀವ ಉಳಿಸಿಕೊಳ್ಳಲು ಸಾಲ ಮಾಡಿ ಪಾವತಿಸಬೇಕಾದ ಪರಿಸ್ಥಿತಿ ಎದುರಾಗುತ್ತಿದೆ ಎಂದು ತಿಳಿಸಿದರು. ಆದ್ದರಿಂದ ಬಿಪಿಎಲ್ ಕಾರ್ಡ್ ಹೊಂದಿರುವ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಸ್ಪಷ್ಟ ಮಾಹಿತಿ ನೀಡಬೇಕು. ಉಚಿತ ಆರೋಗ್ಯ ಸೌಲಭ್ಯಗಳ ಕುರಿತು ಮಾಹಿತಿ ಫಲಕ ಅಳವಡಿಸಬೇಕು ಎಂದು ಒತ್ತಾಯಿಸಿದರು. ಮನವಿ ಸಲ್ಲಿಸುವ ಸಂದರ್ಭ ಎಸ್‌ಡಿಟಿಯು ನ ಜಿಲ್ಲಾ ಸಮಿತಿಯ ಸದಸ್ಯರಾದ ಹಸೀನ ಹಾಗೂ ಮೊಹಿದ್ದೀನ್ ಹಾಜರಿದ್ದರು.

Continue Reading

Kodagu

ನಾಪೋಕ್ಲು ಕೈಕಾಡು ಮುಖ್ಯ ರಸ್ತೆಯಲ್ಲಿ ಆಟೋ–ಸ್ಕೂಟಿ ನಡುವೆ ಅಪಘಾತ-ಸವಾರರಿಗೆ ಗಾಯ

Published

on

ನಾಪೋಕ್ಲು: ಆಟೋರಿಕ್ಷಾ ಹಾಗೂ ದ್ವಿಚಕ್ರ ವಾಹನದ ನಡುವೆ ಅಪಘಾತ ಸಂಭವಿಸಿ ಸವಾರರು ಗಾಯಗೊಂಡ ಘಟನೆ ನಾಪೋಕ್ಲು ವಿರಾಜಪೇಟೆ ಮುಖ್ಯ ರಸ್ತೆಯ ಕೈಕಾಡು ಗ್ರಾಮದಲ್ಲಿ ಸೋಮವಾರ ನಡೆದಿದೆ.


ನಾಪೋಕ್ಲು ಕಡೆಯಿಂದ ತೆರಳುತ್ತಿದ್ದ ಆಟೋರಿಕ್ಷಾಗೆ ಕೈಕಾಡು ಕಡೆಯಿಂದ ನಾಪೋಕ್ಲುವಿಗೆ ತೆರಳುತ್ತಿದ್ದ ದ್ವಿಚಕ್ರ ವಾಹನದ ನಡುವೆ ಕೈಕಾಡು ನಾಪೋಕ್ಲು ರಸ್ತೆಯ ತಿರುವಿನಲ್ಲಿ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಆಟೋರಿಕ್ಷಾ ಪಲ್ಟಿಯಾಗಿ ಜಖಂಗೊಂಡಿದ್ದು ದ್ವಿಚಕ್ರವಾಹನಕ್ಕೂ ಹಾನಿಯಾಗಿದೆ. ಅಪಘಾತದಿಂದ ಆಟೋ ಚಾಲಕ ಹಾಗೂ ದ್ವಿಚಕ್ರ ವಾಹನ ಸವಾರನಿಗೆ ಕಾಯಗಳಾಗಿದ್ದು ಗಾಯಾಳುವಿಗೆ ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ.
ಸ್ಥಳಕ್ಕೆ ನಾಪೋಕ್ಲು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ವರದಿ :ಝಕರಿಯ ನಾಪೋಕ್ಲು

Continue Reading

Kodagu

ಕಡಂಗ ಶಾಲೆಯಲ್ಲಿ ಯಶಸ್ವಿಯಾಗಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ

Published

on

ನಾಪೋಕ್ಲು : ಚೆಯ್ಯಂಡಾಣೆ ಕ್ಲಸ್ಟರ್ ಮಟ್ಟದ 2026-27ನೇ ಸಾಲಿನ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮವು ಕಡಂಗ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯಶಸ್ವಿಯಾಗಿ ಜರುಗಿತು.

ಶಾಲೆಯ ಸಭಾಂಗಣದಲ್ಲಿ ಆಯೋಜಿಸಲಾದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷೆ ಭವ್ಯ ವಹಿಸಿದ್ದರು.ಶಾಲಾ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ಹಾಗೂ ವೇದಿಕೆಯಲ್ಲಿದ್ದ ಗಣ್ಯರು ಉದ್ಘಾಟಿಸಿದರು.

ಸಮೂಹ ಸಂಪನ್ಮೂಲ ವ್ಯಕ್ತಿ (ಸಿಆರ್ ಪಿ)ಪವಿತ್ರ ಸರ್ವರನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಸೂಕ್ತ ವೇದಿಕೆ ಕಲ್ಪಿಸುವುದರೊಂದಿಗೆ ಅಗತ್ಯ ಪ್ರೋತ್ಸಾಹ ಹಾಗೂ ಮಾರ್ಗದರ್ಶನ ನೀಡುವ ಮೂಲಕ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಿ ಭವಿಷ್ಯದ ಸಾಧಕರನ್ನಾಗಿ ರೂಪಿಸುವಲ್ಲಿ ಪ್ರತಿಭಾ ಕಾರಂಜಿ ಮಹತ್ವದ ಪಾತ್ರ ವಹಿಸುತ್ತದೆ ಎಂದರು.


ಮುಖ್ಯ ಅತಿಥಿಯಾಗಿ ಪಾಲ್ಗೊಂಡ ನಿವೃತ್ತ ಸೈನಿಕ ಹಾಗೂ ಶಾಲೆಯ ಹಳೆ ವಿದ್ಯಾರ್ಥಿ ಅಬ್ದುಲ್ ಸಲಾಂ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಒಂದಲ್ಲೊಂದು ಪ್ರತಿಭೆ ಅಡಗಿರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಮಕ್ಕಳು ತೊಡಗಿಸಿಕೊಳ್ಳಲು ಅವಕಾಶ ಕಲ್ಪಿಸಬೇಕು ಎಂದು ಕರೆ ನೀಡಿದರು.

ಪಾರಾಣೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಕಿಶೋರ್ ಕುಮಾರ್ ಹಾಗೂ ಅತಿಥಿಗಳಾದ ಕಣಿಯರ ಪ್ರಕಾಶ್ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮಾತನಾಡಿದರು. ಕ್ಲಸ್ಟರ್ ವ್ಯಾಪ್ತಿಯ ವಿವಿಧ ಶಾಲೆಗಳಿಂದ ಆಗಮಿಸಿದ ವಿದ್ಯಾರ್ಥಿಗಳು ಹಲವು ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.

ಸ್ಪರ್ಧೆಗಳು ಪೂರ್ಣಗೊಂಡ ಬಳಿಕ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.ಈ ಸಂದರ್ಭ ಶಾಲೆಯ ಮುಖ್ಯ ಶಿಕ್ಷಕಿ ಹೇಮಾವತಿ,ಎಸ್ ಡಿಎಂ ಸಿ ಸದಸ್ಯ ಗಫೂರ್ ಕ್ಲಸ್ಟರ್ ವ್ಯಾಪ್ತಿಯ ಹಿರಿಯ,ಕಿರಿಯ ಹಾಗೂ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು, ಶಿಕ್ಷಕ ವೃಂದ, ಅತಿಥಿ ಶಿಕ್ಷಕರು,ವಿದ್ಯಾರ್ಥಿಗಳು, ಕಡಂಗ ಶಾಲೆಯ ಶಿಕ್ಷಕರು ಹಾಗೂ ಪೋಷಕರು ಉಪಸ್ಥಿತರಿದ್ದರು.

Continue Reading

Trending

error: Content is protected !!