Connect with us

Kodagu

ಕಾಡೆಮ್ಮೆ ಸಾವಿನ ಪ್ರಕರಣ: ಸೂಕ್ತ ತನಿಖೆಗೆ ರೈತ ಸಂಘ ಆಗ್ರಹ

Published

on

ಕುಶಾಲನಗರ: ಸುಂಟಿಕೊಪ್ಪ ಹೋಬಳಿಯ ಕೆದೆಕಲ್-ನೇಗದಾಳು ಗ್ರಾಮದ ಪುಲ್ಲೇರ ತಿಮ್ಮಯ್ಯನವರ ತೋಟದಲ್ಲಿ ಕಾಟಿ (ಕಾಡೆಮ್ಮೆ) ಮೃತಪಟ್ಟಿರುವ ವಿಷಯ ತಿಳಿದು ಸುಂಟಿಕೊಪ್ಪ ರೈತ ಸಂಘದ ವತಿಯಿಂದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು.

ಸ್ಥಳ ಪರಿಶೀಲನೆಯ ಸಂದರ್ಭದಲ್ಲಿ ಕಾಟಿಯನ್ನು ಯಾರೋ ಗುಂಡು ಹಾರಿಸಿ ಕೊಂದಿರುವ ಶಂಕೆ ವ್ಯಕ್ತವಾಗಿದ್ದು, ಈ ಘಟನೆ ಅತ್ಯಂತ ಗಂಭೀರವಾಗಿದೆ. ವನ್ಯಜೀವಿಗಳ ರಕ್ಷಣೆ ಹಾಗೂ ಇಂತಹ ಘಟನೆಗಳ ತಡೆಗಟ್ಟುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯು ತಕ್ಷಣವೇ ಸೂಕ್ತ ತನಿಖೆ ನಡೆಸಿ, ಸತ್ಯಾಸತ್ಯತೆಯನ್ನು ಹೊರತಂದು ತಪ್ಪಿತಸ್ಥರನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ರೈತ ಸಂಘದ ವತಿಯಿಂದ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಹೇರೂರು, ವನ್ಯಜೀವಿಗಳ ಹತ್ಯೆ ಯಾವುದೇ ಕಾರಣಕ್ಕೂ ಸಹಿಸಲಾಗದು. ಈ ಪ್ರಕರಣವನ್ನು ಅರಣ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿ, ಸಮಗ್ರ ತನಿಖೆ ನಡೆಸುವ ಮೂಲಕ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ರೈತ ಸಂಘದ ಅಧ್ಯಕ್ಷರಾದ ಕ್ಲೈವ್ ಪೊನ್ನಪ್ಪ ಮಾತನಾಡಿ, ಪ್ರಸ್ತುತ ಕಾಫಿ ಕೊಯ್ಲಿನ ಸಮಯವಾಗಿದ್ದು, ಪ್ರತಿನಿತ್ಯ ಕಾಟಿಗಳು ತೋಟಗಳಿಗೆ ಬರುತ್ತಿರುವುದರಿಂದ ರೈತರು ಹಾಗೂ ಕಾರ್ಮಿಕರಲ್ಲಿ ಆತಂಕ ಮತ್ತು ಭಯದ ವಾತಾವರಣ ನಿರ್ಮಾಣವಾಗಿದೆ. ಆದ್ದರಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ಕಾಡುಕೋಣಗಳು ತೋಟಗಳಿಗೆ ಬಾರದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಅವುಗಳನ್ನು ಕಾಡಿಗೆ ಮರಳಿಸುವ ಪ್ರಯತ್ನ ಮಾಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸುಂಟಿಕೊಪ್ಪ ರೈತ ಸಂಘದ ಪದಾಧಿಕಾರಿಗಳಾದ ದಾಸಂಡ ರಮೇಶ್ ಚೆಂಗಪ್ಪ, ಕುಂಜಿಲನ ಮಂಜುನಾಥ್, ಮಾಗಲು ವಸಂತ, ಉದಯ, ಸಂಜು ಪೊನ್ನಪ್ಪ, ಸೋಮಯ್ಯ, ಜಗದೀಶ್, ಗೋಪಿನಾಥ್, ಪುಲ್ಲೇರ ವಸಂತ, ವೆಂಕಪ್ಪ ಹಾಗೂ ಸತೀಶ್ ಉಪಸ್ಥಿತರಿದ್ದರು.

Continue Reading

Kodagu

ಬೀಟಿಕಾಡಿನಲ್ಲಿ ₹25 ಕೋಟಿ ವೆಚ್ಚದ ನೂತನ 66/11 ಕೆ.ವಿ. ವಿದ್ಯುತ್ ಪ್ರಸರಣ ಘಟಕಕ್ಕೆ ಭೂಮಿಪೂಜೆ

Published

on

ಸಿದ್ದಾಪುರ: ವಿರಾಜಪೇಟೆ ತಾಲೂಕು ಸಿದ್ದಾಪುರ ಭಾಗದ ಬೀಟಿಕಾಡು ಪ್ರದೇಶದಲ್ಲಿ ನೂತನ 66/11 ಕೆ.ವಿ. ವಿದ್ಯುತ್ ಪ್ರಸರಣ ಘಟಕದ ಸ್ಥಾಪನೆ ಹಾಗೂ ಹೊಸ ವಿದ್ಯುತ್ ಮಾರ್ಗದ ಅಳವಡಿಕೆ ಕಾಮಗಾರಿಗೆ ಒಟ್ಟು ₹25 ಕೋಟಿ ವೆಚ್ಚದಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಎ.ಎಸ್. ಪೊನ್ನಣ್ಣ ಅವರು ಭೂಮಿಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, 66/11 ಕೆ.ವಿ. ಸಾಮರ್ಥ್ಯದ ಈ ವಿದ್ಯುತ್ ಪ್ರಸರಣ ಘಟಕ ಕಾರ್ಯಾರಂಭಗೊಂಡ ಬಳಿಕ ಸಿದ್ದಾಪುರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಎದುರಾಗುತ್ತಿರುವ ವಿದ್ಯುತ್ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರೆಯಲಿದೆ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರವು ಗ್ರಾಮೀಣ ಭಾಗದ ಜನರಿಗೆ ಉತ್ತಮ ಹಾಗೂ ನಿರಂತರ ವಿದ್ಯುತ್ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಈ ಯೋಜನೆಗೆ ವಿಶೇಷ ಅನುದಾನ ಒದಗಿಸಿದೆ. ಇದರಿಂದ ಕೃಷಿಕರು, ಸಾರ್ವಜನಿಕರು ಹಾಗೂ ವ್ಯಾಪಾರಸ್ಥರಿಗೆ ಹೆಚ್ಚಿನ ಅನುಕೂಲವಾಗಲಿದೆ. ನೂತನ ವಿದ್ಯುತ್ ಮಾರ್ಗದ ಅಳವಡಿಕೆಯಿಂದ ವಿದ್ಯುತ್ ಪ್ರಸರಣದ ಗುಣಮಟ್ಟ ಸುಧಾರಣೆಯಾಗಲಿದ್ದು, ನಿರಂತರ ಮತ್ತು ಗುಣಮಟ್ಟದ ವಿದ್ಯುತ್ ಪೂರೈಕೆಯನ್ನು ಖಚಿತಪಡಿಸುವುದು ತಮ್ಮ ಉದ್ದೇಶವಾಗಿದೆ ಎಂದು ಹೇಳಿದರು.
ಈಗಾಗಲೇ ಕ್ಷೇತ್ರದಾದ್ಯಂತ ವಿದ್ಯುತ್ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿ ಅನುದಾನ ಒದಗಿಸಲಾಗಿದ್ದು, ಈ ಯೋಜನೆ ಪೂರ್ಣಗೊಂಡ ಬಳಿಕ ಕ್ಷೇತ್ರದ ಜನರು ಎದುರಿಸುತ್ತಿರುವ ವಿದ್ಯುತ್ ಸಮಸ್ಯೆಗಳು ಗಣನೀಯವಾಗಿ ಕಡಿಮೆಯಾಗಲಿವೆ ಎಂದು ಶಾಸಕರು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷರಾದ ಪಟ್ಟಡ ರಂಜಿ ಪೂಣಚ್ಚ, ಪ್ರಧಾನ ಕಾರ್ಯದರ್ಶಿ ಮಂಜುನಾಥ್, ವಲಯ ಅಧ್ಯಕ್ಷರಾದ ಪ್ರತೀಶ್, ಕಾವೇರಿ ಜಲಾನಯನ ಮಂಡಳಿಯ ನಿರ್ದೇಶಕರಾದ ಸೂರಜ್ ಹೊಸೂರು, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಪಿ.ವಿ. ಜಾನ್ಸನ್, ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರು ಹನೀಫ್, ತಾಲೂಕು ಘಟಕದ ಅಧ್ಯಕ್ಷರು ರಫೀಕ್, ತಾಲೂಕು ಪಂಚಾಯತ್ ಮಾಜಿ ಸದಸ್ಯರು ಬಿಜೋಯ್, ಪ್ರಮುಖರಾದ ಮೊಹಮ್ಮದ್ ಆಲಿ, ಅಬ್ದುಲ್ ಸುಕೂರ್, ಪಳನಿ, ಚಿನ್ನಮ್ಮ, ಸತೀಶ್, ಆಪ್ರು ರವೀಂದ್ರ, ಚೆಕು, ಅನಿಲ್, ವೆಂಕಟೇಶ್, ಕುಂಡಚ್ಚಿರ ಮಂಜು ದೇವಯ್ಯ, ಬಶೀರ್, ನೌಶಾದ್, ಜಾಫರ್, ರವಿ, ಪಕ್ಷದ ಮುಖಂಡರು, ಕಾರ್ಯಕರ್ತರು, ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.

Continue Reading

Kodagu

ನವೆಂಬರ್ 26ರಂದು ಗುಧ್ರೋಡೆ ಕೋಲ್ ಮಂದ್ ನಮ್ಮೆ ಆಚರಣೆ

Published

on

ಪೊನ್ನಂಪೇಟೆ : ತಾಲೂಕಿನ ಚಿಕ್ಕಮಂಡೂರು ಗ್ರಾಮದಲ್ಲಿರುವ ಐತಿಹಾಸಿಕ ಗುಧ್ರೋಡೆ ಕೋಲ್ ಮಂದ್ ನಮ್ಮೆಯನ್ನು ನವೆಂಬರ್ 26ರಂದು ಆಚರಿಸಲು ನಿರ್ಧರಿಸಲಾಗಿದೆ.

ಈ ಸಂಬಂಧ ಮಂದ್ ಆವರಣದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ಮಂದ್ ಸಮಿತಿ ಅಧ್ಯಕ್ಷ ಕೋಳೆರ ನರೇಂದ್ರ ವಹಿಸಿದ್ದರು.


ಸುಮಾರು 70 ವರ್ಷಗಳ ಹಿಂದೆ ಪಾಳುಬಿದ್ದು ಜೀರ್ಣಾವಸ್ಥೆ ತಲುಪಿದ್ದ ಗುಧ್ರೋಡೆ ಕೋಲ್ ಮಂದ್ ಅನ್ನು ಮುಗುಟಗೇರಿ, ನಡಿಕೇರಿ, ಚಿಕ್ಕಮಂಡೂರು ಹಾಗೂ ತೂಚಮಕೇರಿ ಗ್ರಾಮಸ್ಥರು ದಾನಿಗಳ ಸಹಕಾರದೊಂದಿಗೆ 2025ರಲ್ಲಿ ಪುನರ್ನಿರ್ಮಿಸಿದ್ದರು. ಬಳಿಕ ಕಳೆದ ವರ್ಷ ಮೊದಲ ಬಾರಿಗೆ ಇಲ್ಲಿ ಪುತ್ತರಿ ಕೋಲ್ ಮಂದ್ ಆಚರಣೆಯನ್ನು ನಡೆಸಲಾಗಿತ್ತು.

ಕೊಡಗಿನ ಸಾಂಪ್ರದಾಯಿಕ ಪದ್ಧತಿಯಂತೆ ಪುತ್ತರಿ ಹಬ್ಬದ ಮರುದಿನ ಕೋಲ್ ಮಂದ್ ಆಚರಿಸುವ ಸಂಪ್ರದಾಯವಿದೆ. ಈ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷವೂ ಆಚರಣೆಯನ್ನು ಸಂಪ್ರದಾಯಬದ್ಧವಾಗಿ ಹಾಗೂ ಅರ್ಥಪೂರ್ಣವಾಗಿ ನಡೆಸುವ ಉದ್ದೇಶದಿಂದ ನಾಲ್ಕು ಗ್ರಾಮಗಳ ಮುಖಂಡರು ಹಾಗೂ ಪ್ರಮುಖರು ಸಭೆಯಲ್ಲಿ ಚರ್ಚಿಸಿದರು.

ಈ ಸಂದರ್ಭ ಮಾತನಾಡಿದ ಅಂಜಿಕೇರಿ ನಾಡ್ ತಕ್ಕಮುಖ್ಯಸ್ಥ ಅಜ್ಜಿಕುಟ್ಟೀರ ಪೃಥ್ವಿ ಸುಬ್ಬಯ್ಯ, ಪಟ್ಟೋಳೆ ಪಳಮೆಯಲ್ಲಿ ಉಲ್ಲೇಖಿಸಿರುವಂತೆ ಗುಧ್ರೋಡೆ ಮಂದ್ ನಾಲ್ಕು ಗ್ರಾಮಗಳಿಗೆ ಸೇರಿದ ನಾಡ್ ಮಂದ್ ಆಗಿದೆ. ಈ ಐತಿಹಾಸಿಕ ಮಂದ್ನ ಪರಂಪರೆ, ಸಂಸ್ಕೃತಿ ಹಾಗೂ ಸಂಪ್ರದಾಯವನ್ನು ಮುಂದಿನ ಪೀಳಿಗೆಗೂ ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ತಿಳಿಸಿದರು.

ಸಭೆಯಲ್ಲಿ ಪುತ್ತರಿ ಹಬ್ಬದ ಬಳಿಕ ಜ್ಯೋತಿಷಿಗಳನ್ನು ಆಹ್ವಾನಿಸಿ ಹೂ ಪ್ರಶ್ನೆ ಮೂಲಕ ಮಂದ್ಗೆ ಸಂಬಂಧಿಸಿದ ಐತಿಹಾಸಿಕ ಹಾಗೂ ಧಾರ್ಮಿಕ ವಿಚಾರಗಳನ್ನು ತಿಳಿದುಕೊಳ್ಳಲು ನಿರ್ಧರಿಸಲಾಯಿತು. ಅಲ್ಲದೆ, ನವೆಂಬರ್ 26ರಂದು ಗುಧ್ರೋಡೆ ಕೋಲ್ ಮಂದ್ ನಮ್ಮೆ ಆಚರಿಸುವುದರೊಂದಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ತೀರ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಅಂಜಿಕೇರಿ ನಾಡಿಗೆ ಸಂಬಂಧಿಸಿದ ಗ್ರಾಮಗಳ ಪುತ್ತರಿ ಹಬ್ಬದ ಕದಿರು ತೆಗೆಯುವ ಸಮಯವನ್ನೂ ನಿಗದಿಪಡಿಸಲಾಗಿದೆ. ನವೆಂಬರ್ 25ರಂದು ಬೆಳಿಗ್ಗೆ 7.30ಕ್ಕೆ ದೇವರ ಕದಿರು ತೆಗೆಯುವುದು, ಬೆಳಿಗ್ಗೆ 10 ಗಂಟೆಗೆ ಊರಿನ ದೇವಸ್ಥಾನಗಳಲ್ಲಿ ಹಾಗೂ ಮಧ್ಯಾಹ್ನ 12 ಗಂಟೆಯೊಳಗೆ ಮನೆಗಳಲ್ಲಿ ಕದಿರು ತೆಗೆಯುವಂತೆ ಹುದಿಕೇರಿ ಶ್ರೀ ಮಹಾದೇವರ ದೇವಸ್ಥಾನದಲ್ಲಿ ನಾಡ್ ತಕ್ಕ ಹಾಗೂ ಊರ್ ತಕ್ಕ ಮುಖ್ಯಸ್ಥರ ಸಮ್ಮುಖದಲ್ಲಿ ತೀರ್ಮಾನಿಸಲಾಗಿದೆ.

ಸಭೆಯಲ್ಲಿ ಸಮಿತಿ ಖಜಾಂಚಿ ಕಳ್ಳಿಚಂಡ ರಾಬಿನ್ ಸುಬ್ಬಯ್ಯ ಲೆಕ್ಕಪತ್ರ ಮಂಡಿಸಿದರು. ನಾಡ್ ತಕ್ಕ ಚೆಕ್ಕೇರ ರಾಜೇಶ್, ಊರ್ ತಕ್ಕರಾದ ಮಲಚೀರ ಬೋಜಪ್ಪ, ಪೆಮ್ಮಂಡ ಅರುಣ, ಕಳ್ಳಿಚಂಡ ನಂದಾ ನಂಜಪ್ಪ ಸೇರಿದಂತೆ ನಾಲ್ಕು ಗ್ರಾಮಗಳ ಪ್ರಮುಖರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Continue Reading

Kodagu

ಆಸ್ಪತ್ರೆಗಳಲ್ಲಿ ಮಾಹಿತಿ ಫಲಕ ಅಳವಡಿಸಲು ಎಸ್‌ಡಿಟಿಯು ಒತ್ತಾಯ

Published

on

ಮಡಿಕೇರಿ : ಬಿಪಿಎಲ್ ಕಾರ್ಡ್ ಹೊಂದಿರುವ ರೋಗಿಗಳಿಗೆ ಲಭ್ಯವಿರುವ ಉಚಿತ ಆರೋಗ್ಯ ಸೌಲಭ್ಯಗಳ ಕುರಿತು ಮಡಿಕೇರಿಯ ಜಿಲ್ಲಾಸ್ಪತ್ರೆ ಸೇರಿದಂತೆ ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ಮಾಹಿತಿ ಫಲಕ ಅಳವಡಿಸುವಂತೆ ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ ನ ಕೊಡಗು ಜಿಲ್ಲಾ ಘಟಕ ಒತ್ತಾಯಿಸಿದೆ.
ಇಂದು ಜಿಲ್ಲಾಸ್ಪತ್ರೆಯ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ ಎಸ್‌ಡಿಟಿಯು ನ ಜಿಲ್ಲಾ ಕಾರ್ಯದರ್ಶಿ ಪ್ರಧಾನ ಎಂ.ಎ.ಅಬ್ದುಲ್ ರಜಾಕ್ ಅವರು ಇತ್ತೀಚಿನ ದಿನಗಳಲ್ಲಿ ಬಿಪಿಎಲ್ ಕಾರ್ಡ್ ಇದ್ದರೂ ರೋಗಿಗಳಿಂದ ಶುಲ್ಕ ಪಡೆಯಲಾಗುತ್ತಿದೆ ಎನ್ನುವ ಆರೋಪಗಳಿವೆ ಎಂದು ಗಮನ ಸೆಳೆದರು.


ಬಿಪಿಎಲ್ ಕಾರ್ಡ್ ಹೊಂದಿರುವ ಬಡ ಕಾರ್ಮಿಕರೊಬ್ಬರು ಎಕ್ಸ್ -ರೇ ತೆಗೆಯಲು ಮತ್ತು ಬ್ಯಾಂಡೇಜ್ ಹಾಕಿಸಿಕೊಳ್ಳಲು ಒಟ್ಟು ೫೫೦ ರೂ.ಗಳನ್ನು ಜಿಲ್ಲಾಸ್ಪತ್ರೆಗೆ ಪಾವತಿಸಿದ್ದಾರೆ. ಈ ಶುಲ್ಕವನ್ನು ಯಾವ ನಿಯಮದಡಿ ವಸೂಲಿ ಮಾಡಲಾಗಿದೆ ಎನ್ನುವ ಬಗ್ಗೆ ಸ್ಪಷ್ಟತೆ ಬೇಕು. ಬಿಪಿಎಲ್ ಕಾರ್ಡ್ ಇದ್ದರೆ ಉಚಿತ ಆರೋಗ್ಯ ಸೌಲಭ್ಯ ದೊರೆಯುತ್ತದೆ ಎನ್ನುವ ನಿರೀಕ್ಷೆಯೊಂದಿಗೆ ಬಡ ರೋಗಿಗಳು ಆಸ್ಪತ್ರೆಗೆ ಬರುತ್ತಾರೆ. ಆದರೆ ಶುಲ್ಕ ಪಾವತಿಸಲೇಬೇಕು ಎನ್ನುವ ಅನಿವಾರ್ಯತೆ ಎದುರಾದಾಗ ಬಡವರು ಜೀವ ಉಳಿಸಿಕೊಳ್ಳಲು ಸಾಲ ಮಾಡಿ ಪಾವತಿಸಬೇಕಾದ ಪರಿಸ್ಥಿತಿ ಎದುರಾಗುತ್ತಿದೆ ಎಂದು ತಿಳಿಸಿದರು. ಆದ್ದರಿಂದ ಬಿಪಿಎಲ್ ಕಾರ್ಡ್ ಹೊಂದಿರುವ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಸ್ಪಷ್ಟ ಮಾಹಿತಿ ನೀಡಬೇಕು. ಉಚಿತ ಆರೋಗ್ಯ ಸೌಲಭ್ಯಗಳ ಕುರಿತು ಮಾಹಿತಿ ಫಲಕ ಅಳವಡಿಸಬೇಕು ಎಂದು ಒತ್ತಾಯಿಸಿದರು. ಮನವಿ ಸಲ್ಲಿಸುವ ಸಂದರ್ಭ ಎಸ್‌ಡಿಟಿಯು ನ ಜಿಲ್ಲಾ ಸಮಿತಿಯ ಸದಸ್ಯರಾದ ಹಸೀನ ಹಾಗೂ ಮೊಹಿದ್ದೀನ್ ಹಾಜರಿದ್ದರು.

Continue Reading

Trending

error: Content is protected !!