Connect with us

Kodagu

ರಾಜ್ಯ ಸರಕಾರದ ಜನವಿರೋಧಿ ಬೆಲೆ ಏರಿಕೆ ನೀತಿಯನ್ನು ಖಂಡಿಸಿ ಪ್ರತಿಭಟನೆ

Published

on

ವಿರಾಜಪೇಟೆ: ರಾಜ್ಯ ಸರಕಾರದ ಜನವಿರೋಧಿ ಬೆಲೆ ಏರಿಕೆ ನೀತಿಯನ್ನು ಖಂಡಿಸಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ವಿರಾಜಪೇಟೆ ಶಾಖೆಯ ವತಿಯಿಂದ ಪಟ್ಟಣದ ಗಡಿಯಾರ ಕಂಬದ ಬಳಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ’ಭರವಸೆಗಳ ಸುರಿಮಳೆ ಬರೀ ಬೊಗಳೆ..! ಸಿಕ್ಕಿದೆ ಬೆಲೆ ಏರಿಕೆಯ ಬರೆಗಳ ಮಾಲೆ..!’ ಎಂಬ ಘೋಷವಾಕ್ಯದ ಬ್ಯಾನರ್ ಹಿಡಿದು ಪಕ್ಷದ ಮುಖಂಡರು, ವಿವಿಧ ಸಂಘಟನೆಯ ಪದಾಧಿಕಾರಿಗಳು ಹಾಗೂ ನೂರಾರು ಕಾರ್ಯಕರ್ತರು ರಾಜ್ಯ ಸರಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಘೋಷಣೆಗಳನ್ನು ಕೂಗಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಿಪಿಐ(ಎಂ) ಜಿಲ್ಲಾ ಸಂಘಟನಾ ಸಮಿತಿ ಸದಸ್ಯ ಎ.ಸಿ. ಸಾಬು, ರಾಜ್ಯದ ಎಲ್ಲೆಡೆ ಸಿಪಿಐ(ಎಂ) ವತಿಯಿಂದ ಬೆಲೆ ಏರಿಕೆ ವಿರುದ್ಧ ನಿರಂತರ ಹೋರಾಟಗಳು ನಡೆಯುತ್ತಿವೆ. ಚುನಾವಣೆಗೂ ಮುನ್ನ ಜನತೆಗೆ ಆಕರ್ಷಕ ಭರವಸೆಗಳ ಸುರಿಮಳೆಗೈದ ರಾಜ್ಯ ಸರಕಾರ, ಅಧಿಕಾರಕ್ಕೆ ಬಂದ ನಂತರ ಅಗತ್ಯ ವಸ್ತುಗಳ ಬೆಲೆಯನ್ನು ಗಗನಕ್ಕೇರಿಸುವ ಮೂಲಕ ಜನಸಾಮಾನ್ಯರ ಬದುಕಿನ ಮೇಲೆ ಬರೆ ಎಳೆದಿದೆ. ಒಂದು ಕೈಯಲ್ಲಿ ಗ್ಯಾರಂಟಿ ಯೋಜನೆಗಳನ್ನು ನೀಡಿ, ಮತ್ತೊಂದು ಕೈಯಲ್ಲಿ ದಿನನಿತ್ಯದ ವಸ್ತುಗಳ ಬೆಲೆ, ವಿದ್ಯುತ್ ದರ, ಇಂಧನ, ಬಸ್ ಪ್ರಯಾಣ ದರ ಹಾಗೂ ವಿವಿಧ ತೆರಿಗೆಗಳನ್ನು ಹೆಚ್ಚಿಸುವ ಮೂಲಕ ಬಡ ಹಾಗೂ ಮಧ್ಯಮ ವರ್ಗದವರ ಜೇಬಿಗೆ ಕತ್ತರಿ ಹಾಕುತ್ತಿದೆ. ಸರಕಾರದ ಈ ದ್ವಂದ್ವ ನೀತಿಯಿಂದಾಗಿ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ ಎಂದು ಕಿಡಿಕಾರಿದರು.

ಸಿಪಿಐ(ಎಂ) ಜಿಲ್ಲಾ ಸಮಿತಿ ಸದಸ್ಯಖಚಿಆ ಪದ್ಮಿನಿ ಶ್ರೀಧರ್ ಮಾತನಾಡಿ, ಬೆಲೆ ಏರಿಕೆಯ ನೇರ ಹೊಡೆತ ಮಹಿಳೆಯರು ಮತ್ತು ಕುಟುಂಬ ನಿರ್ವಹಣೆ ಮಾಡುವ ಗೃಹಿಣಿಯರ ಮೇಲೆ ಬಿದ್ದಿದೆ. ಅಡುಗೆ ಅನಿಲ, ಅಡುಗೆ ಎಣ್ಣೆ, ಬೇಳೆಕಾಳುಗಳು, ತರಕಾರಿ ಸೇರಿದಂತೆ ನಿತ್ಯೋಪಯೋಗಿ ವಸ್ತುಗಳ ಬೆಲೆ ಗಗನಕ್ಕೇರಿರುವುದರಿಂದ ಬಡ ಕುಟುಂಬಗಳು ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಹಿಳೆಯರ ಸಬಲೀಕರಣದ ಮಾತನಾಡುವ ಸರ್ಕಾರ, ಬೆಲೆ ಏರಿಕೆಯ ಮೂಲಕ ಮಹಿಳೆಯರ ಆರ್ಥಿಕ ಸ್ವಾವಲಂಬನೆಯನ್ನು ಕಸಿದುಕೊಳ್ಳುತ್ತಿದೆ. ಕೂಡಲೇ ಸರ್ಕಾರ ಬೆಲೆ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿದ್ದಲ್ಲಿ ಮಹಿಳಾ ಸಂಘಟನೆಗಳ ನೇತೃತ್ವದಲ್ಲಿ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.

ಸಿಪಿಐಎಂ ವಿರಾಜಪೇಟೆ ಶಾಖಾ ಕಾರ್ಯದರ್ಶಿ ಕೆ.ಎಸ್. ರಮೇಶ್ (ಸಾಜಿ) ಮಾತನಾಡಿ, ದಿನನಿತ್ಯದ ಆಹಾರ ಪದಾರ್ಥಗಳು, ಇಂಧನ ಹಾಗೂ ವಿದ್ಯುತ್ ದರ ಏರಿಕೆಯಿಂದ ಸಾಮಾನ್ಯ ಜನರು, ರೈತರು ಮತ್ತು ಕೂಲಿ ಕಾರ್ಮಿಕರು ಜೀವನ ನಡೆಸುವುದೇ ಅಪಾರ ಸಂಕಷ್ಟಕರವಾಗಿದೆ. ಜನಸಾಮಾನ್ಯರ ಹಿತಾಸಕ್ತಿಯನ್ನು ಸಂಪೂರ್ಣವಾಗಿ ಕಡೆಗಣಿಸಿರುವ ಸರಕಾರದ ಧೋರಣೆ ಖಂಡನೀಯವಾಗಿದ್ದು, ಬಡವರ ಪರವಾಗಿ ನಿಲ್ಲಬೇಕಿದ್ದ ಆಡಳಿತ ವ್ಯವಸ್ಥೆಯೇ ಕಾರ್ಪೊರೇಟ್ ಶಕ್ತಿಗಳ ಪರವಾಗಿ ನಿಂತಿದೆ. ಸರಕಾರ ಕೂಡಲೇ ಬೆಲೆ ಏರಿಕೆಯನ್ನು ಹಿಂಪಡೆಯದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದರು.

ಮತ್ತೋರ್ವ ಮುಖಂಡರಾದ ರದೀಶ್ ಮಾತನಾಡಿ, ರಾಜ್ಯಾದ್ಯಂತ ಬೆಲೆ ಏರಿಕೆ ವಿರುದ್ಧ ಜನಾಕ್ರೋಶ ಭುಗಿಲೆದ್ದಿದ್ದು, ಬಡ ಮತ್ತು ಮಧ್ಯಮ ವರ್ಗದ ಜನರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜನವಿರೋಧಿ ನೀತಿಗಳನ್ನು ಕೈಬಿಟ್ಟು, ಅಗತ್ಯ ವಸ್ತುಗಳ ಬೆಲೆ ಇಳಿಕೆಗೆ ಸರಕಾರ ತಕ್ಷಣ ಮುಂದಾಗಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಿಪಿಐ(ಎಂ) ಮುಖಂಡರು ಹಾಗೂ ಕಾರ್ಯಕರ್ತರಾದ ಕೆ.ಕೆ. ಹರಿದಾಸ್, ಖಾಲಿದ್, ಹಮೀದ್, ಸಾಧಿಕ್, ಸೇರಿದಂತೆ ಹಲವಾರು ಮಂದಿ ಪಾಲ್ಗೊಂಡಿದ್ದರು.

Continue Reading

Kodagu

ನ.26ರಂದು 36ನೇ ವಾರ್ಷಿಕ ಕೊಡವ ನ್ಯಾಷನಲ್ ಡೇ ಆಚರಣೆ

Published

on

ಮಡಿಕೇರಿ : ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಭಾರತದ ಸಂವಿಧಾನ ದಿನದ ಅಂಗವಾಗಿ ೩೬ನೇ ವಾರ್ಷಿಕ ಕೊಡವ ನ್ಯಾಷನಲ್ ಡೇ ಕಾರ್ಯಕ್ರಮವನ್ನು ನ.೨೬ರಂದು ಮಡಿಕೇರಿಯ ಹೊರವಲಯದಲ್ಲಿರುವ ಕ್ಯಾಪಿಟಲ್ ವಿಲೇಜ್‌ನಲ್ಲಿ ಆಯೋಜಿಸಲಾಗಿದೆ.

ಅಂದು ಬೆಳಿಗ್ಗೆ ೧೦.೩೦ ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ವಿಶ್ವವಿಖ್ಯಾತ ಮಾನವ ಶಾಸ್ತ್ರ ವಿಜ್ಞಾನಿ ಪ್ರೊ. ಡಾ.ಎಂ.ಎ.ಕಲಾಂ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.

ಕಲಾಂ ಅವರು ಕೊಡವರ ವಂಶಾವಳಿ, ಕುಟುಂಬ ರಚನೆ ಮತ್ತು ವಿಶಿಷ್ಟ ಭೂ ಹಿಡುವಳಿ ಕುರಿತಂತೆ ಸಂಶೋಧನೆ ನಡೆಸಿ ಪಿಎಚ್.ಡಿ ಪದವಿ ಪಡೆದಿದ್ದು, ಮಾನವಶಾಸ್ತ್ರ ಕ್ಷೇತ್ರದಲ್ಲಿ ಮೂರು ದಶಕಗಳಿಗೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಮದ್ರಾಸ್ ವಿಶ್ವವಿದ್ಯಾಲಯ ಸೇರಿದಂತೆ ದೇಶದ ವಿವಿಧ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರಾಗಿ ಹಾಗೂ ಉನ್ನತ ಆಡಳಿತಾತ್ಮಕ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಮಾನವ ವಲಸೆ, ಜನಾಂಗೀಯತೆ, ಅಲ್ಪಸಂಖ್ಯಾತರ ಹಕ್ಕುಗಳು, ಧಾರ್ಮಿಕ ಮತಾಂತರಗಳು, ಅರಣ್ಯ ನೀತಿಗಳು ಮತ್ತು ದೇವರ ಕಾಡುಗಳ ಕುರಿತ ಸಂಶೋಧನೆಯಲ್ಲಿ ವಿಶೇಷ ಪರಿಣತಿ ಹೊಂದಿರುವ ಅವರು, ಕೊಡವರ ವಿಶಿಷ ಜನಾಂಗೀಯ ಗುರುತು ಮತ್ತು ಆದಿಮಸಂಜಾತ ಪ್ರಕೃತಿ ಆರಾಧಕ ಪರಂಪರೆಯ ಕುರಿತು ಅಧ್ಯಯನ ನಡೆಸಿದ್ದಾರೆ.
ಕೊಡವರು ಏಕ ಜನಾಂಗೀಯ ಸಮುದಾಯವಾಗಿದ್ದು, ಅವರಿಗೆ ರಾಷ್ಟ್ರೀಯ ಜನಗಣತಿಯಲ್ಲಿ ಪ್ರತ್ಯೇಕ ಕೋಡ್ ಮತ್ತು ಕಾಲಂ ನೀಡಬೇಕು ಎಂಬ ನಿಲುವನ್ನು ಪ್ರೊ. ಡಾ.ಎಂ.ಎ.ಕಲಾಂ ಪ್ರತಿಪಾದಿಸಿದ್ದಾರೆ. ಕೊಡವರ ವಿಶಿಷ್ಟ ಜನಾಂಗೀಯ, ಸಾಂಸ್ಕೃತಿಕ ಮತ್ತು ಪ್ರಕೃತಿ ಆರಾಧಕ ಪರಂಪರೆಯನ್ನು ಸಂವಿಧಾನದ ಅಡಿಯಲ್ಲಿ ಗುರುತಿಸಿ ರಕ್ಷಿಸಬೇಕೆಂಬ ಆಶಯವನ್ನು ಅವರು ಹೊಂದಿದ್ದಾರೆ. ಆದ್ದರಿಂದ ಕೊಡವ ಸಮಾಜ ಬಾಂಧವರು ಅವರ ವಿಚಾರಧಾರೆ ಮತ್ತು ಬೌದ್ಧಿಕ ಪ್ರಖರತೆಯನ್ನು ಆಲಿಸಬೇಕೆಂದು ಎನ್.ಯು.ನಾಚಪ್ಪ ಮನವಿ ಮಾಡಿದ್ದಾರೆ.

ಭಾರತದ ಸಂವಿಧಾನದ ಆಶಯಗಳ ಅಡಿಯಲ್ಲಿ ಕೊಡವಲ್ಯಾಂಡ್ ಭೌಗೋಳಿಕ ರಾಜಕೀಯ ಸ್ವಾಯತ್ತತೆ, ಸ್ವಯಂ ಆಡಳಿತ ಮತ್ತು ಸ್ವಯಂ ನಿರ್ಣಯದ ಹಕ್ಕುಗಳಿಗಾಗಿ ಸಿಎನ್‌ಸಿ ದೀರ್ಘಕಾಲದಿಂದ ಹೋರಾಟ ನಡೆಸುತ್ತಾ ಬಂದಿದೆ. ಈ ಹಿನ್ನೆಲೆಯಲ್ಲಿ ಕೊಡವರ ಹತ್ತು ನ್ಯಾಯಸಮ್ಮತ ಆಕಾಂಕ್ಷೆಗಳು ಹಾಗೂ ಗೌರವಾನ್ವಿತ ಗುರಿಗಳನ್ನು ಪುನರುಚ್ಚರಿಸುವ ಉದ್ದೇಶದಿಂದ ಸಂವಿಧಾನ ದಿನದಂದೇ ಕೊಡವ ನ್ಯಾಷನಲ್ ಡೇ ಆಚರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಈಗಾಗಲೇ ಕರ್ನಾಟಕ ಹೈಕೋರ್ಟ್ ’ಕೊಡವ’ ಎಂಬ ನಾಮಕರಣದ ಮಹತ್ವವನ್ನು ಎತ್ತಿಹಿಡಿದಿದೆ. ಈ ವಿಚಾರವು ಭವಿಷ್ಯ  ದಲ್ಲಿ ರಾಷ್ಟ್ರೀಯ ಜನಗಣತಿಯಲ್ಲಿ ಪ್ರತ್ಯೇಕ ಗುರುತಿನ ದಾಖಲಾತಿ, ಯುಎನ್‌ಡಿಆರ್‌ಐಪಿ ಹಾಗೂ ಸಂವಿಧಾನದ ಐದನೇ ಮತ್ತು ಆರನೇ ಅನುಸೂಚಿಗಳ ಅಡಿಯಲ್ಲಿ ರಕ್ಷಣೆ ಹಾಗೂ ಕೊಡವಲ್ಯಾಂಡ್ ಸ್ವಾಯತ್ತತೆಯ ಹಕ್ಕೊತ್ತಾಯಕ್ಕೆ ಆಧಾರವಾಗಲಿದೆ. ಕೊಡವರ ಇತಿಹಾಸ ಮತ್ತು ಸಂಸ್ಕೃತಿಯ ಕುರಿತು ಲಭ್ಯವಿರುವ ಐತಿಹಾಸಿಕ ದಾಖಲೆಗಳು, ಸಂಶೋಧನಾ ಕೃತಿಗಳು ಹಾಗೂ ಸಾಹಿತ್ಯಿಕ ಉಲ್ಲೇಖಗಳ ಸಮಗ್ರ ಅಧ್ಯಯನ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.

೩೬ನೇ ಕೊಡವ ನ್ಯಾಷನಲ್ ಡೇ ಕಾರ್ಯಕ್ರಮದಲ್ಲಿ ಕೊಡವರ ಇತಿಹಾಸ, ಜನಾಂಗೀಯ ಅಸ್ಮಿತೆ, ಸಂವಿಧಾನಾತ್ಮಕ ಹಕ್ಕುಗಳು ಮತ್ತು ಸ್ವಾಯತ್ತತೆಯ ಬೇಡಿಕೆಗಳು ಸೇರಿದಂತೆ ಪ್ರಮುಖ ವಿಚಾರಗಳು ಚರ್ಚೆಯಾಗಲಿವೆ ಎಂದು ಎನ್.ಯು.ನಾಚಪ್ಪ ಕೊಡವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Continue Reading

Kodagu

ದೇವಣಗೇರಿ ಪ್ರೌಢಶಾಲೆಗೆ ಅಮ್ಮತ್ತಿ ಲಯನ್ಸ್ ಸಂಸ್ಥೆಯಿಂದ ಉಚಿತ ಕಂಪ್ಯೂಟರ್ ವಿತರಣೆ

Published

on

ಪೊನ್ನಂಪೇಟೆ : ದೇವಣಗೇರಿ ಬಿ.ಸಿ. ಪ್ರೌಢಶಾಲೆಯ ವಿದ್ಯಾರ್ಥಿಗಳ ಕಲಿಕಾ ಪ್ರಗತಿಗೆ ಉತ್ತೇಜನ ನೀಡುವ ಉದ್ದೇಶದಿಂದ ಅಮ್ಮತ್ತಿ ಲಯನ್ಸ್ ಸಂಸ್ಥೆಯ ವತಿಯಿಂದ ಶಾಲೆಗೆ ಉಚಿತ ಕಂಪ್ಯೂಟರ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷ ಚೇಂದಂಡ ಜಿ. ಪೊನ್ನಪ್ಪ, ಅಮ್ಮತ್ತಿ ಲಯನ್ಸ್ ಸಂಸ್ಥೆಯ ಅಧ್ಯಕ್ಷ ಪೊರ್ಕೊಂಡ ಬೋಪಣ್ಣ, ಶಾಲೆಯ ಮುಖ್ಯ ಶಿಕ್ಷಕ ಎಚ್.ಡಿ. ಲೋಕೇಶ್, ಶಿಕ್ಷಕರಾದ ಸಂದೀಪ್ ಹಾಗೂ ಪ್ರಮೀಳಾಕುಮಾರಿ ವೈ. ಉಪಸ್ಥಿತರಿದ್ದರು.


ಶಾಲಾ ಆಡಳಿತ ಮಂಡಳಿಯ ನಿರ್ದೇಶಕ ಮುಕೊಂಡ ಶಶಿ ಸುಬ್ರಮಣಿ ಮಾತನಾಡಿ, ಬೆಂಗಳೂರಿನ ಸ್ಪೋರ್ಟ್ಸ್ ಅವಿನ್ಯೂ ಸಂಸ್ಥೆಯ ವತಿಯಿಂದ ಶಾಲೆಗೆ ಸುಮಾರು 40 ಸಾವಿರ ರೂ. ಮೌಲ್ಯದ ಕ್ರೀಡಾ ಪರಿಕರಗಳ ಕಿಟ್ ನೀಡಿರುವುದು ಸಂತಸದ ವಿಚಾರವಾಗಿದೆ. ಇಂತಹ ಸಹಕಾರಗಳು ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಕ್ರೀಡಾ ಚಟುವಟಿಕೆಗಳ ಬೆಳವಣಿಗೆಗೆ ಸಹಕಾರಿಯಾಗಲಿವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಲಯನ್ಸ್ ಸಂಸ್ಥೆಯ ಪದಾಧಿಕಾರಿಗಳು, ಶಾಲಾ ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Continue Reading

Kodagu

ಮರ ಕಡಿಯದೆಯೇ ರಸ್ತೆ ಅಭಿವೃದ್ಧಿ ಸಾಧ್ಯ: ಡಿಸಿಎಫ್ ಅಭಿಷೇಕ್

Published

on

ಮಡಿಕೇರಿ : ನಗರದ ಗಾಂಧಿ ಮೈದಾನದ ಬದಿಯಲ್ಲಿನ ಅತ್ತಿ ಮರಗಳನ್ನು ಕಡಿಯದೆಯೇ ರಸ್ತೆ ಅಭಿವೃದ್ಧಿ ಕಾಮಗಾರಿ ಸಾಧ್ಯವಿದೆ. 12 ಮರಗಳ ಪೈಕಿ ಒಂದು ಮರ ರಸ್ತೆ ಬದಿಯ ಕಾಲುದಾರಿಗೆ ಬಾಗಿರುವ ಕಾರಣ ಇದರ ತೆರವಿಗೆ ನಗರಸಭೆಯು ಅರಣ್ಯ ಇಲಾಖೆ ಬಳಿ ಅನುಮತಿ ಕೇಳಿದೆ. ಇದರ ತೆರವು ಅವಶ್ಯವಿದೆಯೋ ಇಲ್ಲವೋ..?, ಎಂಬುದನ್ನು ನಗರಸಭೆ ಅಭಿಯಂತರರು ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ಪರಿಶೀಲಿಸಿ, ಚರ್ಚೆ ನಡೆದ ಬಳಿಕವಷ್ಟೆ ತೀರ್ಮಾನಕ್ಕೆ ಬರಲಾಗುವುದು” ಎಂದು ಮಡಿಕೇರಿ ವಿಭಾಗದ ಡಿ.ಸಿ.ಎಫ್ ಅಭಿಷೇಕ್ ಅವರು ಮಾಹಿತಿ ನೀಡಿದರು.

ಕಾವೇರಿ ಕಲಾಕ್ಷೇತ್ರ ಸ್ಥಳದಲ್ಲಿ ನಿಂತಿರುವ 100 ವರ್ಷಗಳಿಗೂ ಅಧಿಕ ವಯಸ್ಸಿನ ಸಂಪಿಗೆ ಮರವನ್ನು ಕಡಿಯುವುದಕ್ಕೂ ನಗರಸಭೆ ಅಭಿಯಂತರರಿಂದ ಅರಣ್ಯ ಇಲಾಖೆ ಬಳಿ ಅನುಮತಿ ಕೋರಲಾಗಿದೆ. ಈ ಸ್ಥಳದಲ್ಲಿ ಮಲ್ಟಿ-ಲೆವೆಲ್ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಉದ್ದೇಶಿಸಲಾಗಿದ್ದು, ಸಂಪಿಗೆ ಮರವನ್ನು ಕಡಿಯದೆಯೇ ಕಟ್ಟಡ ನಿರ್ಮಾಣಕ್ಕೆ ಹೊಸ ನೀಲನಕ್ಷೆ ತಯಾರಿಸಿ 1 ವಾರದೊಳಗೆ ಅರಣ್ಯ ಇಲಾಖೆಗೆ ಸಲ್ಲಿಸಲು ನಗರಸಭೆ ಅಭಿಯಂತರ ಹೇಮಕುಮಾರ್ ಅವರಿಗೆ ಅಭಿಷೇಕ್ ಅವರು ಸೂಚಿಸಿದರು.

ರಾಜಾಸೀಟು ರಸ್ತೆ ಅಭಿವೃದ್ಧಿ ಸಂಬಂಧ, ಗಾಂಧಿ ಮೈದಾನದ ಬಳಿಯ 12 ಅತ್ತಿ ಮರಗಳು ಹಾಗೂ ಕಾವೇರಿ ಕಲಾಕ್ಷೇತ್ರದಲ್ಲಿನ ಬೃಹತ್ ಸಂಪಿಗೆ ಮರ ಕಡಿತಲೆಗೆ ತೀವ್ರ ಆಕ್ಷೇಪ ವ್ಯಕ್ತವಾದ ಹಿನ್ನೆಲೆ ಅರಣ್ಯ ಭವನದಲ್ಲಿಂದು ಡಿ.ಸಿ.ಎಫ್ ಅಭಿಷೇಕ್ ಸಮ್ಮುಖದಲ್ಲಿ, ಆಕ್ಷೇಪ ವ್ಯಕ್ತಪಡಿಸಿದ ಸಾರ್ವಜನಿಕರು ಹಾಗೂ ನಗರಸಭೆ ಅಭಿಯಂತರರ ನಡುವೆ ಚರ್ಚೆಗಳು ನಡೆದು ಈ ನಿರ್ಧಾರಗಳನ್ನು ಕೈಗೊಳ್ಳಲಾಯಿತು.

ರಾಜಾಸೀಟು ರಸ್ತೆ ಅಭಿವೃದ್ಧಿ ನೆಪದಲ್ಲಿ ರಸ್ತೆಯ ಬದಿಯಲ್ಲಿ ದಶಕಗಳಿಂದ ನಿಂತಿದ್ದ 12 ಮರಗಳನ್ನು ಕಾಲುದಾರಿ ಸೌಂದರ್ಯಿಕರಣಕ್ಕೆಂದು ತೆರವು ಮಾಡುವಂತೆ ನಗರಸಭೆ ವತಿಯಿಂದ ಅನುಮತಿ ಕೋರಿ ಅರಣ್ಯ ಇಲಾಖೆಗೆ ಮನವಿ ಮಾಡಲಾಗಿತ್ತು. ರಸ್ತೆಯ ಅಭಿವೃದ್ಧಿಗೆ ಈ ಮರಗಳು ಯಾವುದೇ ಅಡಚಣೆಯಾಗದ ಹಿನ್ನೆಲೆ ಸಾರ್ವಜನಿಕರು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಕಾಲುದಾರಿಗೆ ಬಾಗಿರುವ ಒಂದು ಮರವನ್ನು ಮಾತ್ರ ತೆರವುಗೊಳಿಸುವಂತೆ ನಗರಸಭೆ ಅಭಿಯಂತರರು ಇಂದಿನ ಸಭೆಯಲ್ಲಿ ಮನವಿ ಮಾಡಿದರು.

ಈ ಸಂದರ್ಭ ಮಾತನಾಡಿದ ಸಾರ್ವಜನಿಕರು, ಈ ಮರವು ಕಾಲುದಾರಿಗೆ ಬಾಗಿರುವುದರಿಂದ ಕಾಲುದಾರಿಗೆ ಹೊಂದಿಕೊಂಡಿರುವ ಬೇಲಿಯನ್ನು ಸ್ವಲ್ಪ ಒಳಕ್ಕೆ ತಳ್ಳಿ ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುವು ಮಾಡಬಹುದಾಗಿದೆ. ಇದರ ಬಗ್ಗೆ ತಾ.18 ರಂದು ಸಾರ್ವಜನಿಕರ ಸಮ್ಮುಖದಲ್ಲಿ ಪರಿಶೀಲನೆ ನಡೆಸಬಹುದಾಗಿದೆ ಎಂದರು. ಈ ಸಂದರ್ಭ ಮಾತನಾಡಿದ ಡಿ.ಸಿ.ಎಫ್ ಅಭಿಷೇಕ್, ಸಾರ್ವಜನಿಕರ ಸಮ್ಮುಖದಲ್ಲಿ ಈ ಬಗ್ಗೆ ಪರಿಶೀಲಿಸಲು ಅಭಿಯಂತರ ಹೇಮಕುಮಾರ್ ಅವರಿಗೆ ಸೂಚಿಸಿದರು.

ಕಾವೇರಿ ಕಲಾಕ್ಷೇತ್ರದಲ್ಲಿ ನಿಂತಿರುವ ಸಂಪಿಗೆ ಮರ ಸುತ್ತ ಜೆ.ಸಿ.ಬಿ ಯಂತ್ರ ಬಳಿಸಿ ಮಣ್ಣು ತೆರವು ಮಾಡಲಾಗಿದೆ. ಇನ್ನಷ್ಟು ಬಗೆದರೆ ಅಪಾಯ ಕಂಡಿತ ಎಂದು ಸಾರ್ವಜನಿಕರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಈ ಸಂದರ್ಭ ಮಾತನಾಡಿದ ಅಭಿಷೇಕ್ ಅವರು, ಮರಕ್ಕೆ ಅಪಾಯ ಆಗದಂತೆ ಅದರ ಸುತ್ತ ಮಣ್ಣು ಹಾಕುವಂತೆ ಅಭಿಯಂತರರಿಗೆ ಸೂಚಿಸಿದರು.
ಆಕ್ಷೇಪ ವ್ಯಕ್ತಪಡಿಸಿದ ಸಾರ್ವಜನಿಕರಲ್ಲಿ ಒಬ್ಬರಾದ ಕರ್ನಲ್ ಸಿ.ಪಿ ಮುತ್ತಣ್ಣ ಮಾತನಾಡಿ, ಕಾವೇರಿ ಕಲಾಕ್ಷೇತ್ರದ ಸ್ಥಳದಲ್ಲಿ ಮಲ್ಟಿ ಲೆವೆಲ್ ಪಾರ್ಕಿಂಗ್ ನೆಪದಲ್ಲಿ ಮರವನ್ನು ಕಡಿಯುವುದು ಸರಿಯಾದ ಕ್ರಮವಲ್ಲ. ಯಾವುದೇ ಕಾರಣಕ್ಕೂ ಈ ಕಟ್ಟಡ ಬರಲು ಬಿಡುವುದಿಲ್ಲ. ಇದರ ನಿರ್ಮಾಣದ ವಿರುದ್ಧ ನ್ಯಾಯಾಲಯದಲ್ಲಿ ಧಾವೆ ಹೂಡುವುದಾಗಿ ಹೇಳಿದರು.

ಪ್ರಮುಖರಾದ ಅಭಿಷೇಕ್ ಜೈನ್ ಅವರು ಮಾತನಾಡಿ, ಅಭಿವೃದ್ಧಿ ನೆಪದಲ್ಲಿ ಮರ ಕಡಿದು ಇತರೆಡೆ ಗಿಡ ನಡೆವುದಕ್ಕಿಂತ ಮರವನ್ನು ಕಡಿಯದೆಯೇ ಅಭಿವೃದ್ಧಿ ನಡೆಸುವ ವೈಜ್ಞಾನಿಕ ಕ್ರಮವನ್ನು ಪಾಲಿಸುವಂತೆ ಒತ್ತಾಯಿಸಿದರು.

ಪ್ರಜ್ಞಾ ಜಿ.ಆರ್ ಮಾತನಾಡಿ, ಅತ್ತಿ ಮರಗಳು ಹಾಗೂ ಸಂಪಿಗೆ ಮರಗಳು ಕರ್ನಾಟಕ ಮರಗಳ ಸಂರಕ್ಷಣಾ ಕಾಯ್ದೆಯ ಸೆಕ್ಷನ್-8ರಡಿಯಲ್ಲಿ ಸಂರಕ್ಷಿತ ಎಂದು ಘೋಷಿತವಾಗಿವೆ. ಈ ಮರಗಳನ್ನು ಕಡಿಯುವುದಕ್ಕೂ ಮುನ್ನ ಪರ್ಯಾಯ ಅಭಿವೃದ್ಧಿ ಮಾರ್ಗಗಳನ್ನು ಪಾಲಿಸುವುದು ಕಡ್ಡಾಯ ಎಂದರು.
ಸಂಪತ್ ಕುಮಾರ್ ಸರಳಾಯ ಅವರು ಮಾತನಾಡಿ, 80ರ ದಶಕದಲ್ಲಿ ಅಂದಿನ ಡಿ.ಸಿ, ಅರಣ್ಯ ಅಧಿಕಾರಿ ಸಮ್ಮುಖದಲ್ಲಿಯೇ ಅತ್ತಿ ಮರಗಳನ್ನು ನೆಡಲಾಗಿತ್ತು. ಅನವಶ್ಯಕ ಇದರ ಹನನ ಮಾಡುವುದು ಸರಿಯಾದ ಕ್ರಮವಲ್ಲ ಎಂದರು.


ಪ್ರಜ್ವಲ್ ಜಿ.ಆರ್ ಅವರು ಮಾತನಾಡಿ, ಕಲಾಕ್ಷೇತ್ರ ಜಾಗದಲ್ಲಿ ಅಧಿಕ ಅಂತಸ್ತಿನ ಕಟ್ಟಡ ಕಟ್ಟಲು ಪುರಾತತ್ವ ಇಲಾಖೆ ವತಿಯಿಂದ ಇನ್ನೂ ಅನುಮತಿ ದೊರೆತಿಲ್ಲ ಎಂದರು.
ವಿಪಿನ್ ಬಾಳಿಗ ಹಾಗೂ ಅನಿಲ್ ಬೆಟ್ಟದಳ್ಳಿ ಅವರು ಮಾತನಾಡಿ, ಸಂಪಿಗೆ ಮರವನ್ನು ರಕ್ಷಿಸುವುದು ಅತ್ಯಗತ್ಯ. ಇದರ ಸುತ್ತ ಸೌಂದರ್ಯಿಕರಣ ಮಾಡಿ ಉದ್ಯಾನ ರೀತಿ ಮಾಡಬಹುದಾಗಿದೆ ಎಂದರು.
ಸಭೆಯಲ್ಲಿ ನೈಲ ಗಣೇಶ್, ಡಾ. ಶಾಂತಿ ಅಚ್ಚಪ್ಪ, ಆಂಟೊನಿ  ಫ್ರ್ಯಾಂ ಕ್ಲಿನ್, ಪ್ರಸನ್ನ ಕೆ.ಟಿ, ಡಾ. ಅನುಶಾ, ಪ್ರಯಾಗ್ ಗೌಡ, ಪುನೀತ್ ಕೆ.ಎಸ್, ಧನುಶ್ ಕಾವೇರಿಯಪ್ಪ, ಕರಣ್ ಸುಬ್ಬಯ್ಯ, ಸೋಮಣ್ಣ, ಚೆಂಗಪ್ಪ ಹಾಗೂ ಇತರರು ಹಾಜರಿದ್ದು ಮರ ಕಡಿತಲೆಗೆ ಆಕ್ಷೇಪ ವ್ಯಕ್ತಪಡಿಸಿದರು.

ಸಭೆಯ ಪ್ರಮುಖ ಅಂಶಗಳು
* ರಾಜದರ್ಶನ್ ಬಳಿ ಅಪಾಯಕಾರಿಯಾಗಿರುವ ಒಂದು ಸಿಲ್ವರ್ ಮರ ಕಡಿತಲೆಗೆ ಅನುಮತಿ
* ಗಾಂಧಿ ಮೈದಾನದ ಬಳಿಯ 12 ಅತ್ತಿ ಮರಗಳ ಪೈಕಿ 11 ಮರಗಳ ರಕ್ಷಣೆ – ಕಡಿತಲೆಗೆ ಅನುಮತಿ ಇಲ್ಲ
* ಕಾಲುದಾರಿಗೆ ಬಾಗಿರುವ ಒಂದು ಮರ ತೆರವು ಸಂಬAಧ ಇಂದು ಸಾರ್ವಜನಿಕರ ಸಮ್ಮುಖದಲ್ಲಿ ಚರ್ಚೆ, ಪರಿಶೀಲನೆ
* ಕಾವೇರಿ ಕಲಾಕ್ಷೇತ್ರದಲ್ಲಿನ ಐತಿಹಾಸಿಕ ಸಂಪಿಗೆ ಮರಕ್ಕೆ ಹಾನಿಯಾಗದಂತೆ ಮಲ್ಟಿ ಲೆವೆಲ್ ಪಾರ್ಕಿಂಗ್ ಕಟ್ಟಡ ನಿರ್ಮಾಣ ಸಂಬಂಧ ಹೊಸ ನೀಲನಕ್ಷೆ ತಯಾರಿಸಲು ಅಭಿಯಂತರರಿಗೆ ಡಿ.ಸಿ.ಎಫ್ ಸೂಚನೆ
* ಮಲ್ಟಿ ಲೆವೆಲ್ ಕಟ್ಟಡ ನಿರ್ಮಾಣಕ್ಕೆ ಪುರಾತತ್ವ ಇಲಾಖೆಗೆ ನಗರಸಭೆಯಿಂದ ಮನವಿ – ಇನ್ನೂ ದೊರಕದ ಅನುಮತಿ
* ಕಲಾಕ್ಷೇತ್ರದಲ್ಲಿನ ಸಂಪಿಗೆ ಮರಕ್ಕೆ ಹಾನಿಯಾಗದಂತೆ ಸುತ್ತಲು ಮಣ್ಣು ಹಾಕುವಂತೆ ಅಭಿಯಂತರರಿಗೆ ಡಿ.ಸಿ.ಎಫ್ ಸೂಚನೆ

Continue Reading

Trending

error: Content is protected !!