Connect with us

Hassan

ಬೇಲೂರು ತಾಲ್ಲೂಕಿನಲ್ಲಿ ಪುಂಡಾನೆ ಸೆರೆ ಕಾರ್ಯಾಚರಣೆ ಆರಂಭ

Published

on

ಬೇಲೂರು: ತಾಲ್ಲೂಕಿನ ನಾಗೇನಹಳ್ಳಿ ಭಾಗದಲ್ಲಿ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿರುವ ಪುಂಡಾನೆಗಳನ್ನು ಸೆರೆಹಿಡಿಯುವ ಕಾರ್ಯಾಚರಣೆಗೆ ಅರಣ್ಯ ಇಲಾಖೆ ಅಧಿಕೃತವಾಗಿ ಚಾಲನೆ ನೀಡಿದೆ.

ತಾಲ್ಲೂಕಿನ ಬಿಕ್ಕೋಡು ಆನೆ ಶಿಬಿರದಲ್ಲಿ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲಿರುವ ಕುಂಕಿ ಸಾಕಾನೆಗಳಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಕಾರ್ಯಾಚರಣೆಗೆ ಸಿದ್ಧತೆ ಮಾಡಿಕೊಳ್ಳಲಾಯಿತು.


ಎಪಿಸಿಸಿಎಫ್ ಮೋಹನ್ ರಾಜನ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಕಾರ್ಯಾಚರಣೆಯಲ್ಲಿ ಒಟ್ಟು ಏಳು ಸಾಕಾನೆಗಳನ್ನು ಬಳಸಿಕೊಳ್ಳಲಾಗುತ್ತಿದೆ. ನಾಗೇನಹಳ್ಳಿ ಸುತ್ತಮುತ್ತಲ ಪ್ರದೇಶಗಳಲ್ಲಿ ಸಂಚರಿಸುತ್ತಿರುವ ಎರಡು ಪುಂಡಾನೆಗಳನ್ನು ಸೆರೆಹಿಡಿಯುವುದು ಅರಣ್ಯ ಇಲಾಖೆಯ ಪ್ರಮುಖ ಗುರಿಯಾಗಿದೆ.

ಕಳೆದ ಮೂರು ದಿನಗಳ ಅವಧಿಯಲ್ಲಿ ಇಬ್ಬರು ವ್ಯಕ್ತಿಗಳ ಸಾವಿಗೆ ಕಾರಣವಾಗಿದ್ದ ಕಾಡಾನೆಗಳನ್ನು ಸೆರೆಹಿಡಿಯುವಂತೆ ಸ್ಥಳೀಯರು ತೀವ್ರ ಒತ್ತಾಯ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಕಾರ್ಯಾಚರಣೆಗೆ ಮುಂದಾಗಿದ್ದು, ಇಂದು ಪುಂಡಾನೆಗಳನ್ನು ಸೆರೆಹಿಡಿಯಲು ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗಿದೆ.

ಕಾರ್ಯಾಚರಣೆಯ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು, ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ. ಕಾರ್ಯಾಚರಣೆ ನಡೆಯುವ ಪ್ರದೇಶದ ಸುತ್ತಮುತ್ತಲ ಗ್ರಾಮಸ್ಥರು ಎಚ್ಚರಿಕೆಯಿಂದ ಇರುವಂತೆ ಅರಣ್ಯ ಇಲಾಖೆ ಸೂಚಿಸಿದೆ.

ನಾಗೇನಹಳ್ಳಿ ಭಾಗದಲ್ಲಿ ಕಾಡಾನೆಗಳ ಹಾವಳಿಯಿಂದ ಆತಂಕಕ್ಕೊಳಗಾಗಿರುವ ಗ್ರಾಮಸ್ಥರು, ಪುಂಡಾನೆಗಳನ್ನು ಶೀಘ್ರವಾಗಿ ಸೆರೆಹಿಡಿದು ಶಾಶ್ವತ ಪರಿಹಾರ ಕಲ್ಪಿಸುವಂತೆ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.

Continue Reading

Hassan

ಹರಿಹರಪುರದಲ್ಲಿ ಭೀಕರ ರಸ್ತೆ ಅಪಘಾ*ತ: ಕೆಪಿಟಿಸಿಎಲ್ ನೌಕರ ಸಾ*ವು

Published

on

ಹೊಳೆನರಸೀಪುರ: ನವೆಂಬರ್ 13ರಂದು ಹರಿಹರಪುರದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕೆಪಿಟಿಸಿಎಲ್ ನೌಕರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮೃತರನ್ನು ಚನ್ನರಾಯಪಟ್ಟಣದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ (ಕೆಪಿಟಿಸಿಎಲ್)ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರಾಕೇಶ್ ಎಂದು ಗುರುತಿಸಲಾಗಿದೆ.

ನವೆಂಬರ್ 13ರಂದು ಹರಿಹರಪುರದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ರಾಕೇಶ್ ಅವರು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ನವೆಂಬರ್ 15ರಂದು ಕೊನೆಯುಸಿರೆಳೆದಿದ್ದಾರೆ.

ಇನ್ನು ಅಪಘಾತದ ಭೀಕರ ದೃಶ್ಯಾವಳಿಗಳು ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

Continue Reading

Hassan

ಹಾಸನದಲ್ಲಿ ಆನೆ ಸೆರೆ ಕಾರ್ಯಾಚರಣೆಗೆ ಬೃಹತ್ ಸಿದ್ಧತೆ: 350ಕ್ಕೂ ಹೆಚ್ಚು ಸಿಬ್ಬಂದಿ ನಿಯೋಜನೆ

Published

on

ಹಾಸನ: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಆನೆ-ಮಾನವ ಸಂಘರ್ಷಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಆನೆಗಳನ್ನು ಸೆರೆಹಿಡಿಯುವ ಕಾರ್ಯಾಚರಣೆಗೆ ಅರಣ್ಯ ಇಲಾಖೆ ಬೃಹತ್ ಸಿದ್ಧತೆ ಮಾಡಿಕೊಂಡಿದೆ. ಈ ಕುರಿತು ರಾಜ್ಯ ಸಹಾಯಕ ವನ್ಯಜೀವಿ ವಾರ್ಡನ್ ಮನೋಜ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಕಾರ್ಯಾಚರಣೆಯ ರೂಪುರೇಷೆಗಳನ್ನು ವಿವರಿಸಿದರು.

ಕಳೆದ ಕೆಲವು ತಿಂಗಳುಗಳಿಂದ ಆನೆ-ಮಾನವ ಸಂಘರ್ಷ ತಡೆಗಟ್ಟುವ ಕುರಿತು ಸರ್ಕಾರ ಗಂಭೀರ ಚಿಂತನೆ ನಡೆಸಿದ್ದು, ಕಾರ್ಯಾಚರಣೆಯ ಹಿನ್ನೆಲೆಯಲ್ಲಿ ರಾತ್ರಿಯಿಂದಲೇ ಸುದೀರ್ಘ ಸಭೆ ನಡೆಸಲಾಗಿದೆ. ಆನೆಗಳನ್ನು ಓಡಿಸುವುದು ಸುಲಭದ ಕೆಲಸವಲ್ಲ. ಇದು ಅತ್ಯಂತ ಕಷ್ಟಕರವಾದ ಕಾರ್ಯಾಚರಣೆಯಾಗಿದ್ದು, ವೈಜ್ಞಾನಿಕವಾಗಿ ಯೋಜನೆ ರೂಪಿಸಿ ಕಾರ್ಯಗತಗೊಳಿಸಬೇಕಿದೆ ಎಂದು ತಿಳಿಸಿದರು.

ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಆರು ಗುಂಪುಗಳಾಗಿ 50ಕ್ಕೂ ಹೆಚ್ಚು ಆನೆಗಳಿದ್ದು, ಅವುಗಳ ಚಲನವಲನವನ್ನು ಸಂಪೂರ್ಣವಾಗಿ ಗ್ರಹಿಸಿ ಸಹಜವಾಗಿ ಬೇರೆ ಪ್ರದೇಶಗಳಿಗೆ ಸ್ಥಳಾಂತರಿಸುವುದು ಪ್ರಮುಖ ಉದ್ದೇಶವಾಗಿದೆ. ಆನೆಗಳು ಚದುರಿದರೆ ಮತ್ತಷ್ಟು ಸಮಸ್ಯೆಗಳು ಎದುರಾಗುವ ಸಾಧ್ಯತೆಯಿರುವುದರಿಂದ ಎಚ್ಚರಿಕೆಯಿಂದ ಕಾರ್ಯಾಚರಣೆ ನಡೆಸಲಾಗುವುದು ಎಂದರು.


ಹಾಸನ ಮತ್ತು ಚಿಕ್ಕಮಗಳೂರು ಡಿಸಿಎಫ್‌ಗಳ ಜಂಟಿ ಸಭೆ ನಡೆಸಿ ಕಾರ್ಯಾಚರಣೆಗೆ ಯೋಜನೆ ರೂಪಿಸಲಾಗಿದೆ. ಆರ್‌ಆರ್‌ಟಿ, ಇಟಿಎಫ್ ಸಿಬ್ಬಂದಿ ಹಾಗೂ ಸಾಕಾನೆಗಳ ಸಹಕಾರ ಪಡೆಯಲಾಗುವುದು. ಥರ್ಮಲ್ ಡ್ರೋನ್‌ಗಳು ಮತ್ತು ವಿಶೇಷ ವಾಹನಗಳ ಸಮನ್ವಯದೊಂದಿಗೆ ಕಾರ್ಯಾಚರಣೆ ನಡೆಯಲಿದೆ.

ಆರು ತಂಡಗಳ ರಚನೆ

ಕಾರ್ಯಾಚರಣೆಗೆ ಕನಿಷ್ಠ 350ಕ್ಕೂ ಹೆಚ್ಚು ಅರಣ್ಯ ಇಲಾಖೆ ಸಿಬ್ಬಂದಿ ಅಗತ್ಯವಿದ್ದು, ಆರು ಆನೆಗಳ ಗುಂಪುಗಳನ್ನು ಗಮನದಲ್ಲಿಟ್ಟುಕೊಂಡು ಆರು ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ. ಪ್ರತಿ ತಂಡಕ್ಕೆ ಒಂದು ಥರ್ಮಲ್ ಡ್ರೋನ್, ವನ್ಯಜೀವಿ ವೈದ್ಯರು ಹಾಗೂ ಪ್ರತ್ಯೇಕ ಸಾಕಾನೆಗಳನ್ನು ನಿಯೋಜಿಸಲಾಗುತ್ತದೆ.

ಪೊಲೀಸ್ ಮತ್ತು ಕಂದಾಯ ಇಲಾಖೆ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಯಲಿದ್ದು, ಪ್ರತಿ ತಂಡದಲ್ಲಿ ಒಬ್ಬ ಡಿವೈಎಸ್ಪಿ ಹಾಗೂ ಒಬ್ಬ ಸಹಾಯಕ ಆಯುಕ್ತರನ್ನು ಒಳಗೊಂಡ ಸಮನ್ವಯ ವ್ಯವಸ್ಥೆ ರೂಪಿಸಲಾಗಿದೆ. ಆನೆಗಳ ಚಲನವಲನ ಹಾಗೂ ಕಾರ್ಯಾಚರಣೆಯ ಸಂದರ್ಭದಲ್ಲಿ ಗ್ರಾಮಸ್ಥರಿಗೆ ಮುಂಚಿತವಾಗಿ ಮಾಹಿತಿ ನೀಡಲಾಗುವುದು ಎಂದು ಮನೋಜ್ ಕುಮಾರ್ ತಿಳಿಸಿದರು.

ಮೊದಲು ಜೀವಹಾನಿಗೆ ಕಾರಣವಾದ ಆನೆಗಳಿಗೆ ಟಾರ್ಗೆಟ್

ಇದುವರೆಗೆ ಇಂತಹ ಬೃಹತ್ ಪ್ರಮಾಣದ ಕಾರ್ಯಾಚರಣೆ ನಡೆದಿಲ್ಲ. ಹೀಗಾಗಿ ಸಾರ್ವಜನಿಕರು ಹಾಗೂ ಮಾಧ್ಯಮಗಳು ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಸಹಕರಿಸಬೇಕು. ಕಾರ್ಯಾಚರಣೆಯ ಪ್ರಮುಖ ಉದ್ದೇಶ ಮತ್ತೊಂದು ಜೀವಹಾನಿ ಸಂಭವಿಸದಂತೆ ತಡೆಯುವುದಾಗಿದೆ. ಈ ನಿಟ್ಟಿನಲ್ಲಿ ಮೊದಲು ಜನರ ಪ್ರಾಣಹಾನಿಗೆ ಕಾರಣವಾದ ಆನೆಗಳನ್ನು ಸೆರೆಹಿಡಿಯಲು ಯೋಜನೆ ರೂಪಿಸಲಾಗಿದೆ ಎಂದರು.

ಈಗಾಗಲೇ ಏಳು ಸಾಕಾನೆಗಳು ಆಗಮಿಸಿದ್ದು, ಇನ್ನೂ ಏಳರಿಂದ ಎಂಟು ಸಾಕಾನೆಗಳು ಕಾರ್ಯಾಚರಣೆಗೆ ಆಗಮಿಸಲಿವೆ. ಎಲ್ಲಾ ಇಲಾಖೆಗಳ ಸಮನ್ವಯದೊಂದಿಗೆ ವೈಜ್ಞಾನಿಕವಾಗಿ ಕಾರ್ಯಾಚರಣೆ ನಡೆಸಿ ಆನೆ-ಮಾನವ ಸಂಘರ್ಷವನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಸಹಾಯಕ ವನ್ಯಜೀವಿ ವಾರ್ಡನ್ ಮನೋಜ್ ಕುಮಾರ್ ತಿಳಿಸಿದರು.

Continue Reading

Hassan

ಸೆಕ್ಷನ್ 4 ವಿವಾದಕ್ಕೆ ಹೈಕೋರ್ಟ್‌ನಲ್ಲಿ ತಾತ್ಕಾಲಿಕ ಬ್ರೇಕ್‌: ಕಾಫಿ ಬೆಳೆಗಾರರಿಗೆ ಬಿಗ್ ರಿಲೀಫ್

Published

on

ಸಕಲೇಶಪುರ: ಹಲವು ವರ್ಷಗಳಿಂದ ಮಲೆನಾಡಿನ ಕಾಫಿ ಬೆಳೆಗಾರರನ್ನು ಆತಂಕಕ್ಕೆ ದೂಡಿದ್ದ ಸೆಕ್ಷನ್ 4 ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ನ್ಯಾಯಾಲಯದ ಈ ಬೆಳವಣಿಗೆಯಿಂದ ಅರಣ್ಯ ಇಲಾಖೆ ನೋಟಿಸ್ ಹಾಗೂ ಪ್ರಕರಣಗಳಿಂದ ಕಂಗಾಲಾಗಿದ್ದ ಕಾಫಿ ಬೆಳೆಗಾರರಿಗೆ ಸದ್ಯಕ್ಕೆ ತಾತ್ಕಾಲಿಕ ನೆಮ್ಮದಿ ಸಿಕ್ಕಂತಾಗಿದೆ.

ಸುಮಾರು 102 ವರ್ಷಗಳ ಹಿಂದಿನ ಆದೇಶದ ಆಧಾರದಲ್ಲಿ ಬೆಳೆಗಾರರ ಜಮೀನುಗಳನ್ನು ಸೆಕ್ಷನ್ 4 ವ್ಯಾಪ್ತಿಗೆ ಸೇರ್ಪಡೆಗೊಳಿಸುವ ವಿಚಾರವನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದೆ. ಅಂದಿನ ಆದೇಶದ ಆಧಾರದಲ್ಲಿ ಕ್ರಮ ಕೈಗೊಳ್ಳಬೇಕಿದ್ದರೆ ಅಂದೇ ಏಕೆ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ನ್ಯಾಯಾಲಯ ಪ್ರಶ್ನಿಸಿರುವುದು ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಹೈಕೋರ್ಟ್ ನ್ಯಾಯಾಧೀಶ ಸೂರಜ್ ಗೋವಿಂದರಾಜು ಅವರು ಈ ಆದೇಶ ನೀಡಿದ್ದಾರೆ.


ಬೆಳೆಗಾರರ ಜಮೀನು ಮತ್ತು ಬದುಕಿನ ಮೇಲೆ ಪರಿಣಾಮ ಬೀರುತ್ತಿದ್ದ ಈ ವಿವಾದದ ವಿರುದ್ಧ ಶಾಸಕ ಸಿಮೆಂಟ್ ಮಂಜು ನೇತೃತ್ವದಲ್ಲಿ ಕಾನೂನು ಹೋರಾಟಕ್ಕೆ ಚಾಲನೆ ನೀಡಲಾಗಿತ್ತು. ಕಾಡುಮನೆ ಗ್ರಾಮದಲ್ಲಿ ಬೆಳೆಗಾರರ ಸಭೆ ನಡೆಸಿ ಹೋರಾಟದ ರೂಪುರೇಷೆ ಸಿದ್ಧಪಡಿಸಲಾಗಿತ್ತು. ಸುಮಾರು 150 ಬೆಳೆಗಾರರ ಪೈಕಿ 85 ಮಂದಿ ನ್ಯಾಯಾಲಯದ ಮೊರೆ ಹೋಗಿ ತಮ್ಮ ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಿದ್ದರು.

ಇದಲ್ಲದೆ, ವಿಧಾನಸಭೆ ಅಧಿವೇಶನದಲ್ಲಿಯೂ ಶಾಸಕ ಸಿಮೆಂಟ್ ಮಂಜು ಹಲವು ಬಾರಿ ಈ ವಿಚಾರವನ್ನು ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆದಿದ್ದರು. ಬೆಳೆಗಾರರ ಪರವಾಗಿ ವಕೀಲ ಸುದೀಶ್ ಪರಮೇಶ್ ಅವರು ಹೈಕೋರ್ಟ್‌ನಲ್ಲಿ ಸಮರ್ಥವಾಗಿ ವಾದ ಮಂಡಿಸಿದ್ದಾರೆ. ಅಂದಿನ ಸಹಾಯಕ ಆಯುಕ್ತ ಪ್ರತೀಕ್ ಬಯಾಲ್ ಅವರಿಂದಲೂ ಅಗತ್ಯ ದಾಖಲೆಗಳ ನೆರವು ದೊರೆತಿದೆ.

ಕಾಡುಮನೆ, ಅಗ್ನಿ, ಅಚ್ಚನಹಳ್ಳಿ, ಮರಗುಂದ ಸೇರಿದಂತೆ ಹಲವು ಗ್ರಾಮಗಳ ಕಾಫಿ ಬೆಳೆಗಾರರಿಗೆ ಈ ಆದೇಶದಿಂದ ತಾತ್ಕಾಲಿಕ ನಿರಾಳತೆ ದೊರೆತಿದೆ. ಹಲವು ವರ್ಷಗಳಿಂದ ತಮ್ಮ ಕಾಫಿ ತೋಟಗಳ ಭವಿಷ್ಯದ ಬಗ್ಗೆ ಆತಂಕದಲ್ಲಿದ್ದ ಬೆಳೆಗಾರರಲ್ಲಿ ಸಂತಸ ಮನೆಮಾಡಿದೆ.

ರೈತರ ಜಮೀನು ಹಾಗೂ ಬದುಕಿನ ರಕ್ಷಣೆಗೆ ಮುಂದೆಯೂ ಕಾನೂನು ಹೋರಾಟ ಮುಂದುವರಿಸಲಾಗುವುದು. ಬೆಳೆಗಾರರಿಗೆ ನ್ಯಾಯ ದೊರಕಿಸುವವರೆಗೆ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಶಾಸಕ ಸಿಮೆಂಟ್ ಮಂಜು ತಿಳಿಸಿದ್ದಾರೆ.

ಒಟ್ಟಿನಲ್ಲಿ, ಸೆಕ್ಷನ್ 4 ವಿವಾದದಲ್ಲಿ ಹೈಕೋರ್ಟ್ ನೀಡಿರುವ ಈ ಮಹತ್ವದ ಆದೇಶ ಮಲೆನಾಡಿನ ಕಾಫಿ ಬೆಳೆಗಾರರ ಪಾಲಿಗೆ ದೊಡ್ಡ ನಿರಾಳತೆ ತಂದಿದ್ದು, ಮುಂದಿನ ಕಾನೂನು ಪ್ರಕ್ರಿಯೆಗಳ ಮೇಲೆ ಇದೀಗ ಎಲ್ಲರ ಗಮನ ನೆಟ್ಟಿದೆ.

Continue Reading

Trending

error: Content is protected !!