Mysore
ರೈತರಿಗೆ ಕೊಡಲು ದುಡ್ಡಿಲ್ಲ- ಭಾರತ್ ಜೋಡೋ ಸಂಘಗಳಿಗೆ ₹1000 ಕೋಟಿ: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ
ಮೈಸೂರು: ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದ್ದು, ಸಾರ್ವಜನಿಕರು ಕಟ್ಟುವ ತೆರಿಗೆ ಹಣವನ್ನು ಕೇವಲ ತಮ್ಮ ಪಕ್ಷದ ಕಾರ್ಯಕರ್ತರನ್ನು ಪೋಷಿಸಲು ಮತ್ತು ಗ್ಯಾರಂಟಿ ಯೋಜನೆಗಳ ಭ್ರಮೆ ಹುಟ್ಟಿಸಲು ಭಾರಿ ಪ್ರಮಾಣದಲ್ಲಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ತೀವ್ರ ವಾಗ್ದಾಳಿ ನಡೆಸಿದರು.
ಮೈಸೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಕೇಂದ್ರ ಸಚಿವರು; ಕಷ್ಟಪಟ್ಟು ರೈತರು ತೆರಿಗೆ ಕಟ್ಟುತ್ತಿದ್ದಾರೆ. ಅದರ ಜೊತೆಗೆ ಗ್ಯಾರಂಟಿಗಳನ್ನು ಕೊಟ್ಟ ಹಾಗೆ ಕೊಟ್ಟು ವಿಪರೀತ ತೆರಿಗೆಯ ಮೇಲೆ ತೆರಿಗೆ ವಿಧಿಸಿ, ಹತೋಟಿ ಮೀರಿದ ಪ್ರಮಾಣದಲ್ಲಿ ಬೆಲೆ ಏರಿಕೆ ಮಾಡಿ ಸಾರ್ವಜನಿಕರನ್ನು ಅಮಾನವೀಯವಾಗಿ ಸುಲಿಗೆ ಮಾಡಲಾಗುತ್ತಿದೆ. ಈ ಹಣವನ್ನು ಕಾಂಗ್ರೆಸ್ ಸರ್ಕಾರ ಮನಸೋಇಚ್ಛೆ ಫೋನು ಮಾಡುತ್ತಿದೆ ಎಂದು ಪ್ರಹಾರ ನಡೆಸಿದರು.
ರಾಜ್ಯದ ಜನರು ಅತ್ಯಂತ ಕೆಟ್ಟ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಸರ್ಕಾರದಲ್ಲಿ ಅಭಿವೃದ್ಧಿಪರ ಯೋಜನೆಗಳು ಸಂಪೂರ್ಣ ಕುಂಠಿತವಾಗಿವೆ. ಸಾರ್ವಜನಿಕರ ತೆರಿಗೆ ಹಣವನ್ನು ಕಂಡಕಂಡಲ್ಲಿ ಪೋಲು ಮಾಡಲಾಗುತ್ತಿದೆ. ‘ಭಾರತ್ ಜೋಡೋ’ ಸಂಘಗಳ ಹೆಸರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಪ್ರತಿ ಪಂಚಾಯತ್ ಮತ್ತು ವಾರ್ಡ್ ಮಟ್ಟದಲ್ಲಿ ತಲಾ ₹10 ಲಕ್ಷ ಅನುದಾನ ಘೋಷಿಸುವ ಅಗತ್ಯವೇನಿತ್ತು? ಎಂದು ಅವರು ಪ್ರಶ್ನಿಸಿದರು.
ರಾಜ್ಯವು ತೀವ್ರ ಬರಗಾಲ ಎದುರಿಸುತ್ತಿದೆ. ಅನೇಕ ಭಾಗಗಳಲ್ಲಿ ಜನ ಜಾನುವಾರುಗಳಿಗೆ ಕುಡಿಯಲು ನೀರು ಕೂಡ ಸಿಗುತ್ತಿಲ್ಲ. ಮೇವಿಗೆ ಹಾಹಾಕಾರ ಶುರುವಾಗಿದೆ. ಈ ಸರ್ಕಾರದಲ್ಲಿ ಹಣವಿಲ್ಲ ಎಂಬುದು ಅದರ ಕಾರ್ಯ ವೈಖರಿಯನ್ನು ನೋಡಿದರೆ ಅರ್ಥವಾಗುತ್ತಿದೆ. ಆದರೆ ಕಾರ್ಯಕರ್ತರನ್ನು ಸಾಕಲು ಜನರನ್ನೇ ಸುಲಿಗೆ ಮಾಡಿ ಹಣ ಸಂಗ್ರಹ ಮಾಡಲಾಗುತ್ತಿದೆ ಎಂದು ಸಚಿವರು ದೂರಿದರು.
ರಸ್ತೆ, ಕುಡಿಯುವ ನೀರು, ಚರಂಡಿ ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಕೊಡಿ ಎಂದು ಶಾಸಕರು ಬೇಡಿಕೊಂಡರೂ ಸರ್ಕಾರ ಕೊಡುತ್ತಿಲ್ಲ. ಆದರೆ ಭಾರತ ಜೋಡೋ ಸಂಘಗಳಿಗೆ ಕೊಡಲು ಸರ್ಕಾರದಲ್ಲಿ ಹಣವಿದೆ! ಇದೆಂತಹ ವಿಪರ್ಯಾಸ ಎಂದು ಸಚಿವರು ಪ್ರಶ್ನಿಸಿದರು.

ಸಾರ್ವಜನಿಕರ ತೆರಿಗೆ ಹಣವನ್ನು ರಾಜಕೀಯ ಲಾಭಕ್ಕಾಗಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದ ಸಚಿವ ಕುಮಾರಸ್ವಾಮಿ ಅವರು; ಸುಮಾರು ₹1000 ಕೋಟಿ ಮೊತ್ತವನ್ನು ಭಾರತ್ ಜೋಡೋ ಸಂಘಗಳಿಗೆ ಸುರಿದು ಪೋಲು ಮಾಡುವುದು ಎಷ್ಟು ಸರಿ? ಎಂದು ಅವರು ಖಾರವಾಗಿ ಕೇಳಿದರು.
ಬರಗಾಲ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲ:
ರಾಜ್ಯವು ಅತ್ಯಂತ ಭೀಕರ ಬರಗಾಲವನ್ನು ಎದುರಿಸುತ್ತಿರುವ ಈ ಸಂಕಷ್ಟದ ಸಮಯದಲ್ಲಿ ಸರ್ಕಾರದ ಆದ್ಯತೆಗಳು ಸಂಪೂರ್ಣವಾಗಿ ಹಾದಿ ತಪ್ಪಿವೆ ಎಂಬುದನ್ನು ಅಂಕಿ-ಅಂಶಗಳ ಸಮೇತ ಸಚಿವರು ಬಿಚ್ಚಿಟ್ಟರು.
ಪ್ರಧಾನಮಂತ್ರಿಗಳು ರಾಜ್ಯಕ್ಕೆ ಆಗಮಿಸಿದ ಸಂದರ್ಭದಲ್ಲಿ NDRF ನಿಯಮಾವಳಿಗಳ ಅಡಿಯಲ್ಲಿ ₹22,000 ಕೋಟಿಗಳ ಬರ ಪರಿಹಾರ ನಿಧಿಗಾಗಿ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೆ, ಬರ ನಿರ್ವಹಣೆಗೆ ದುಡ್ಡಿನ ಕೊರತೆ ಇದೆ ಎಂದು ಸಬೂಬು ಹೇಳುವ ರಾಜ್ಯ ಸರ್ಕಾರವು, ಸುಮಾರು 500 ರಿಂದ 600 ವಿವಿಧ ನಿಗಮ-ಮಂಡಳಿಗಳಿಗೆ ತಮ್ಮದೇ ಪಕ್ಷದ ಕಾರ್ಯಕರ್ತರನ್ನು ನಿರ್ದೇಶಕರನ್ನಾಗಿ ನೇಮಿಸುವ ಮೂಲಕ ದುಂದುವೆಚ್ಚದ ರಾಜಕೀಯ ಪುನರ್ವಸತಿಗೆ ಮುಂದಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಜನಸಾಮಾನ್ಯರ ಬದುಕಿಗೆ ಆರ್ಥಿಕ ಶಕ್ತಿ ತುಂಬುವ ಭ್ರಮೆ ಹುಟ್ಟಿಸಿ, ಪರೋಕ್ಷವಾಗಿ ಅವರ ಮೇಲೆಯೇ ಭಾರೀ ಆರ್ಥಿಕ ಹೊರೆ ಹೇರಲಾಗುತ್ತಿದೆ ಎಂದ ಅವರು; ‘ಉಚಿತ ಬಸ್ ಪ್ರಯಾಣ’ದ ಗ್ಯಾರಂಟಿ ಯೋಜನೆಯ ಬಗ್ಗೆ ಪ್ರಸ್ತಾಪಿಸಿ, ಸಾರಿಗೆ ಸಂಸ್ಥೆಗಳ ಬಸ್ ಪ್ರಯಾಣ ದರವನ್ನು ಗಣನೀಯವಾಗಿ ಏರಿಕೆ ಮಾಡಲಾಗುತ್ತಿದೆ ಎಂದು ದೂರಿದರು.
ಕಳೆದ ವರ್ಷ ಶೇ.33-34 ರಷ್ಟಿದ್ದ ಬಸ್ ದರ ಏರಿಕೆ, ಈ ಬಾರಿ ಶೇ.35-40ವರೆಗೆ ತಲುಪಿದ್ದು, ಜನಸಾಮಾನ್ಯರಿಗೆ ಭಾರೀ ಕಂಟಕವಾಗಿ ಪರಿಣಮಿಸಿದೆ. ಪರಿಣಾಮವಾಗಿ, ರಾಜ್ಯ ಸಾರಿಗೆ ಇಲಾಖೆಯ ನಾಲ್ಕು ನಿಗಮಗಳು ಆರ್ಥಿಕ ನಿರ್ವಹಣೆಯ ಕೊರತೆಯಿಂದಾಗಿ ಅಂದಾಜು ₹9,500 ದಿಂದ ₹10,000 ಕೋಟಿಗಳ ಬೃಹತ್ ಸಾಲದ ಸುಳಿಗೆ ಸಿಲುಕಿವೆ ಎಂಬ ವಾಸ್ತವವನ್ನು ಸಚಿವರು ಬಯಲಿಗೆ ತಂದರು.
ತನಿಖಾ ಸಂಸ್ಥೆಗಳ ದಿಕ್ಕುತಪ್ಪಿಸುವ ಯತ್ನ:
ವಿರೋಧ ಪಕ್ಷಗಳು ಮಾಡುವ ಗಂಭೀರ ಟೀಕೆಗಳನ್ನು ಸರ್ಕಾರ ಅತ್ಯಂತ ಹಗುರವಾಗಿ ಪರಿಗಣಿಸುತ್ತಿದ್ದು, ಭ್ರಷ್ಟಾಚಾರದ ಆರೋಪಗಳಿಗೆ ಸ್ಪಷ್ಟವಾದ ಉತ್ತರ ನೀಡುವ ನೈತಿಕತೆಯನ್ನು ಕಳೆದುಕೊಂಡಿದೆ ಎಂದು ಸಚಿವರು ಗುಡುಗಿದರು.
ಕೆಪಿಎಸ್ಸಿ (KPSC) ಮತ್ತು ಇತರ ಇಲಾಖೆಗಳಲ್ಲಿ ನಡೆದಿರುವ ನೇಮಕಾತಿ ಅಕ್ರಮಗಳ ಕುರಿತು ಜಾರಿ ನಿರ್ದೇಶನಾಲಯ (ED) ಈಗಾಗಲೇ ಆರೋಪ ಪಟ್ಟಿ ಸಲ್ಲಿಸಿದ್ದರೂ, ಸಿಐಡಿ (CID) ತನಿಖೆಯ ನೆಪವೊಡ್ಡಿ ಪ್ರಕರಣಗಳನ್ನು ಮುಚ್ಚಿಹಾಕುವ ಹಾಗೂ ತನಿಖೆಯನ್ನು ದಿಕ್ಕುತಪ್ಪಿಸುವ ವ್ಯವಸ್ಥಿತ ಯತ್ನಗಳು ನಡೆಯುತ್ತಿವೆ ಎಂದು ಅವರು ಆರೋಪಿಸಿದರು.
ರಾಜ್ಯದ ಪ್ರತಿಭಾವಂತ ಯುವಕ- ಯುವತಿಯರ ಭವಿಷ್ಯದ ಜೊತೆ ಈ ಸರ್ಕಾರ ಚೆಲ್ಲಾಟವಾಡುತ್ತಿದೆ ಹಾಗೂ ಸಾರ್ವಜನಿಕವಾಗಿ ಕೇಳಲಾಗುತ್ತಿರುವ ಹತ್ತು ಹಲವು ಪ್ರಶ್ನೆಗಳಿಗೆ ಉತ್ತರಿಸದೆ ಸರ್ಕಾರ ಮೌನ ವಹಿಸಿದೆ ಎಂದು ಅವರು ಕಿಡಿಕಾರಿದರು.
ದಲಿತ ನಾಯಕತ್ವ ಮತ್ತು ರಾಜಕೀಯ ತಾರತಮ್ಯ:
ಕಾಂಗ್ರೆಸ್ ಪಕ್ಷದಲ್ಲಿ ದಲಿತ ಸಮುದಾಯದ ನಾಯಕರಿಗೆ ಸಿಗುತ್ತಿರುವ ಸ್ಥಾನಮಾನ ಕೇವಲ ತೋರಿಕೆಯದ್ದಾಗಿದೆ ಎಂದು ಕಟುವಾಗಿ ಟೀಕಿಸಿದ ಸಚಿವರು; ದೇಶಕ್ಕೆ ಸ್ವಾತಂತ್ರ್ಯ ಬಂದು ಇಷ್ಟು ದಶಕಗಳೇ ಕಳೆದರೂ ದಲಿತರಿಗೆ ಒಮ್ಮೆಯೂ ಮುಖ್ಯಮಂತ್ರಿ ಸ್ಥಾನ ನೀಡದೆ ವಂಚಿಸಲಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ದಲಿತರನ್ನು ಕೇವಲ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲಾಗುತ್ತಿದೆಯೇ ಹೊರತು, ಅವರಿಗೆ ನೈಜ ಗೌರವ ನೀಡುವ ಇಚ್ಛಾಶಕ್ತಿ ಈ ಸರ್ಕಾರಕ್ಕೆ ಇಲ್ಲ. ನವದೆಹಲಿಯಲ್ಲಿ ನಡೆದ ಸೋನಿಯಾ ಗಾಂಧಿ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಹಿಂದುಳಿದ ನಾಯಕ ಸಿದ್ದರಾಮಯ್ಯ ಅವರನ್ನು 6ನೇ ಸಾಲಿನಲ್ಲಿ ಕೂರಿಸುವ ಮೂಲಕ ಹಿಂದುಳಿದ ನಾಯಕತ್ವವನ್ನು ನಿರ್ಲಕ್ಷಿಸಿ ಅವರಿಗೆ ಬಹಿರಂಗವಾಗಿ ಅಗೌರವ ತೋರಲಾಗಿದೆ ಎಂದು ಕುಮಾರಸ್ವಾಮಿ ಅವರು ಬೇಸರ ವ್ಯಕ್ತಪಡಿಸಿದರು.
ಹಿರಿಯೂರು ಅಭ್ಯರ್ಥಿ ವಿಚಾರದಲ್ಲಿ ಪ್ರತಿಷ್ಠೆ ಇಲ್ಲ:
ಹಿರಿಯೂರು ವಿಧಾನಸಭೆ ಉಪ ಚುನಾವಣೆಗೆ ಮೈತ್ರಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಬಗ್ಗೆ ಎರಡು ಪಕ್ಷಗಳ ನಾಯಕರು ತಮ್ಮ ತಮ್ಮ ಪ್ರತಿಷ್ಠೆಯನ್ನು ಪಕ್ಕಕ್ಕಿಟ್ಟು ಕಾಂಗ್ರೆಸ್ ಪಕ್ಷವನ್ನು ಸೋಲಿಸಲೇಬೇಕು ಎನ್ನುವ ದೃಢ ಸಂಕಲ್ಪದಿಂದ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುತ್ತೇವೆ ಎಂದು ಸಚಿವ ಕುಮಾರಸ್ವಾಮಿ ಅವರು ತಿಳಿಸಿದರು.
ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು; ನಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೆಂದು ನಮ್ಮ ಪಕ್ಷದ ಕಾರ್ಯಕರ್ತರು ಹೇಳುತ್ತಿದ್ದಾರೆ. ಅದೇ ರೀತಿ ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೆಂಬ ಅಭಿಪ್ರಾಯ ಅವರಲ್ಲಿಯೂ ಇದೆ. ಇದನ್ನು ತಪ್ಪು ಎನ್ನಲಾಗುವುದಿಲ್ಲ. ನಾಯಕರೆಲ್ಲರೂ ಸೇರಿ ಕುಳಿತು ಚರ್ಚಿಸಿ ಬಹುಮತದ ನಿರ್ಧಾರಕ್ಕೆ ಬರುತ್ತೇವೆ. ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಬೇಕು ಎಂಬುದೇ ಮೈತ್ರಿ ಪಕ್ಷಗಳ ಗುರಿಯಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ವಿರುದ್ಧ ಜನ ವಿರೋಧಿ ಅಲೆ ಎದ್ದಿದೆ. ಬೆಂಗಳೂರು ನಗರ ಮಾತ್ರವಲ್ಲದೆ ರಾಜ್ಯದ ಎಲ್ಲಾ ಪ್ರದೇಶಗಳಲ್ಲಿ ಸರ್ಕಾರದ ವಿರುದ್ಧ ಜನರು ತೀವ್ರ ಆಕ್ರೋಶಗೊಂಡಿದ್ದಾರೆ. ಬೆಲೆ ಏರಿಕೆ, ತೆರಿಗೆ ವಿಧಿಸುವಿಕೆ ಸೇರಿದಂತೆ ಪ್ರತಿಯೊಂದು ಅಗತ್ಯಕ್ಕೂ ಜನರನ್ನು ಸುಲಿಗೆ ಮಾಡುವುದನ್ನೇ ಸರ್ಕಾರ ನಿತ್ಯ ಕಾಯಕ ಮಾಡಿಕೊಂಡಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಾಡಿನ ಜನರು ಬುದ್ಧಿ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು
ಕಾಂಗ್ರೆಸ್ ಭ್ರಮೆಯಲ್ಲಿದೆ. ಮೈತ್ರಿಯ ಹೊಲದ ಬಗ್ಗೆ ಲಘುವಾಗಿ ಮಾತಾಡುತ್ತಿದೆ. ಈಗಾಗಲೇ ವಿಧಾನ ಪರಿಷತ್ ಚುನಾವಣೆಯಲ್ಲಿ ಮೈತ್ರಿಕೂಟ ಸ್ಪಷ್ಟ ಉತ್ತರ ನೀಡಿದೆ. ಬಹುಶಃ ಕಾಂಗ್ರೆಸ್ ಪಕ್ಷಕ್ಕೆ ಜನರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವ ಶಕ್ತಿ ನಶಿಸಿದೆ ಎನ್ನುವುದು ನನ್ನ ಅಭಿಪ್ರಾಯ ಎಂದರು ಸಚಿವರು.
Mysore
2 ಮಸೀದಿಗಳ ಮಳಿಗೆ ಬಾಡಿಗೆಯಲ್ಲಿ ಭಾರೀ ಅವ್ಯವಹಾರ : ಜಿಲ್ಲಾಧಿಕಾರಿ ಮಧ್ಯಪ್ರವೇಶಿಸುವಂತೆ ಆಗ್ರಹ
ನಂಜನಗೂಡು : ಐತಿಹಾಸಿಕ ನಂಜನಗೂಡು ನಗರಸಭೆಯಲ್ಲಿ ಎಲ್ಲವೂ ಸರಿಯಿಲ್ಲ, ಅಂಗಡಿ ಮಳಿಗೆಗಳ ಬಾಡಿಗೆ ನಿಗದಿ ಸೇರಿ ಲಕ್ಷ ಲಕ್ಷ ಹಣ ಪೋಲಾಗುತ್ತಿದೆ. ನಗರದ 2 ಮಸೀದಿಗಳ ವ್ಯಾಪ್ತಿಗೆ ಬರುವ ಮಳಿಗೆಗಳ ಬಾಡಿಗೆ ನಿಗದಿ ಮತ್ತು ವಸೂಲಾತಿಯಲ್ಲಿ ಭಾರೀ ಅವ್ಯವಹಾರ ನಡೆಯುತ್ತಿದ್ದು, ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಿ ಅಕ್ರಮ ತಡೆಯುವಂತೆ ಈದ್ಗಾ ಮಸೀದಿ ಸಮಿತಿ ಪದಾಧಿಕಾರಿಗಳು ಒತ್ತಾಯ ಮಾಡಿದರು
ಕರ್ನಾಟಕ ರಾಜ್ಯದಲ್ಲಿ ವಕ್ಫ್ ಇಲಾಖೆಯೇ ಅತ್ಯಂತ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿ ಇಲಾಖೆಯಾಗಿದ್ದು, ಈ ಅಧಿಕಾರಿಗಳನ್ನು ಕೇಳುವವರೇ ಇಲ್ಲ, ಹೇಳುವವರೇ ಇಲ್ಲ ಎಂದು ನಂಜನಗೂಡು ತಾಲೂಕು ಪತ್ರಕರ್ತರ ಸಂಘದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಲಾಯಿತು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೈಸೂರು ಜಿಲ್ಲಾ ಕಾರ್ಯ ಸಮಿತಿ ಸದಸ್ಯ ಮೊಹಮದ್ ಜಿಯಾ ಸೇರಿದಂತೆ ಇನ್ನೀತರೇ ಮುಖಂಡರು, 2014ರಲ್ಲಿ ಸಮಿತಿಯನ್ನು ವಜಾ ಮಾಡಲಾಗಿತ್ತು. ಅದಾದ ನಂತರ 2023ರಿಂದ 2026ರವರೆಗೆ ಅಂಗಡಿ ಮಳಿಗೆಗಳಿಂದ ಸುಮಾರು 20 ಲಕ್ಷ ರೂ. ಬಾಡಿಗೆ ಬಂದಿದೆ. ಆದರೆ ಕೋರ್ಟ್ ಪ್ರಕಾರ ಇನ್ನೂ 20 ಸಾವಿರ ರೂ. ಬಾಡಿಗೆ ಬಾಕಿ ಇದೆ ಎಂದು ಹೇಳಿದರು. ಸರ್ಕಾರದ ಪ್ರಕಾರ 1997ರಿಂದ 2026ರವರೆಗೂ ಮಾಲೀಕರಿಗೆ ಸಂಬಂಧಿಸಿದಂತೆ ಯಾವುದೇ ಸರಿಯಾದ ಮಾಹಿತಿಯೇ ಇಲ್ಲ ಎಂದು ಆರೋಪಿಸಿದರು.
ಒಕ್ಕೂಟದ ಅಧ್ಯಕ್ಷರು ಯಾರು ಎಂಬುದೇ ಇಲ್ಲಿಯವರೆಗೂ ಗೊತ್ತಿಲ್ಲ. ನಾವುಗಳು ಅವರನ್ನು ನೋಡೇ ಇಲ್ಲ. ಅವರಿಗೆ ಕ್ಯಾಬಿನೆಟ್ ದರ್ಜೆ ಸ್ಥಾನಮಾನ ನೀಡಲಾಗಿದೆ, ಆದರೆ ಕಾರ್ಯಕ್ರಮಗಳಲ್ಲಿ ಅಧಿಕಾರಿಗಳ ಯಾವುದೇ ಪ್ರವಾಸವೇ ಇಲ್ಲ ಎಂದು ಅವರು ದೂರಿದರು.
ನಂಜನಗೂಡಿನ ಎರಡು ಮಸೀದಿಗಳು ಇವೆ. ಜೀರೋ ಕ್ರಾಸ್ ಬಳಿ ಅಂಗಡಿಗಳು ಇವೆ. ಜಾಮಿಯಾ ಮಸೀದಿಯ ಗುರುಗಳಿಗೆ ತಿಂಗಳಿಗೆ ಕೇವಲ 11 ಸಾವಿರ ರೂ. ಸಂಬಳ ನೀಡಲಾಗುತ್ತಿದೆ. ಈ 11 ಸಾವಿರದಲ್ಲಿ ಅವರು ಜೀವನ ಹೇಗೆ ಮಾಡಬೇಕು ಎಂದು ಅವರು ಪ್ರಶ್ನಿಸಿದರು.
ಮಸೀದಿಯಲ್ಲಿ ನಮಾಜ್ ಮಾಡುವ ಸಮಯದಲ್ಲಿ ಸರಿಯಾದ ವ್ಯವಸ್ಥೆ ಇಲ್ಲ. ಹೊರ ರಾಜ್ಯದಿಂದ ಬರುವ ಪ್ರವಾಸಿಗರಿಗೆ ಮೂಲ ಸೌಕರ್ಯಗಳೇ ಇಲ್ಲ. ಮೈಸೂರು ಜಿಲ್ಲೆಯ ಬೇಡಿಕೆ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಿದ್ದರೂ ಇಲ್ಲಿಯವರೆಗೂ ಯಾವುದೇ ಇಲಾಖೆ, ಯಾವುದೇ ಅಧಿಕಾರಿ ಪ್ರಶ್ನೆ ಮಾಡಿಲ್ಲ ಎಂದು ಅವರು ಹೇಳಿದರು.
ನಂಜನಗೂಡಿನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಮತ್ತು ಅಧಿಕಾರಿಗಳ ಬೇಜವಾಬ್ದಾರಿ ಬಗ್ಗೆ ಜಿಲ್ಲಾಧಿಕಾರಿಗಳು ಇಲ್ಲಿಯವರೆಗೂ ಪ್ರಶ್ನೆಯನ್ನೇ ಮಾಡಿಲ್ಲ ಎಂದು ಅವರು ಆರೋಪಿಸಿದರು.
ಮುಸ್ಲಿಂ ಸಮುದಾಯದ ಅಂಗಡಿಗಳಿಗೆ ತಿಂಗಳಿಗೆ ಕೇವಲ ಮೂರೂವರೆ ಸಾವಿರ ರೂ. ಬಾಡಿಗೆ ನಿಗದಿ ಮಾಡಲಾಗಿದೆ. ಪ್ರತಿ ವರ್ಷ ಬಾಡಿಗೆ ಹೆಚ್ಚಳ ಮಾಡುತ್ತೇವೆ ಎಂದು ಹೇಳುತ್ತಾರೆಯೇ ಹೊರತು ಅಧಿಕಾರಿಗಳು ಇದರ ಬಗ್ಗೆ ಮಾತನಾಡುವುದೇ ಇಲ್ಲ ಎಂದು ಅವರು ಹೇಳಿದರು.
ವಕ್ಫ್ ಇಲಾಖೆಯಲ್ಲಿ ಬಹಳ ದೊಡ್ಡ ಬದಲಾವಣೆ ಆಗಬೇಕು. ಇದರ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಮಹಮ್ಮದ್ ಜಿಯಾ ಒತ್ತಾಯಿಸಲಾಯಿತು.
ಸುದ್ದಿಗೋಷ್ಠಿಯಲ್ಲಿ ಸೈಯದ್ ಆಸೀಫ್, ಮೊಹಮ್ಮದ್, ಸೈಯದ್ ಅಕ್ರಮ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.
ನಂಜನಗೂಡು ವರದಿ ಮಹದೇವಸ್ವಾಮಿ ಪಟೇಲ್
Mysore
ಬೋನಿನಿಂದ ತಪ್ಪಿಸಿಕೊಂಡ ಚಿರತೆ: ಅರಣ್ಯ ಸಿಬ್ಬಂದಿ ಮೇಲೆ ದಾ*ಳಿ
ಮೈಸೂರು: ಬೋನಿನಲ್ಲಿ ಸೆರೆ ಹಿಡಿದಿದ್ದ ಚಿರತೆಯನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ಬದಲು ಬೋನಿನ ಗೇಟ್ ತೆರೆಯಲು ಮುಂದಾದ ಅರಣ್ಯ ಇಲಾಖೆ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಚಿರತೆ ತಪ್ಪಿಸಿಕೊಂಡಿರುವ ಘಟನೆ ಮೈಸೂರು ತಾಲೂಕಿನ ಮರಸೆ ಗ್ರಾಮದಲ್ಲಿ ನಡೆದಿದೆ. ಬೋನಿನೊಳಗೆ ಉಗ್ರಾವತಾರ ತೋರಿದ್ದ ಚಿರತೆಗೆ ಅರವಳಿಕೆ ಮದ್ದು ನೀಡಿ ಸೆರೆ ಹಿಡಿಯುವ ಬದಲು ಸಿಬ್ಬಂದಿ ಗೇಟ್ ತೆರೆದಿದ್ದಾರೆ ಎನ್ನಲಾಗಿದೆ. ಈ ವೇಳೆ ಏಕಾಏಕಿ ಹೊರಬಂದ ಚಿರತೆ ಅರಣ್ಯ ಸಿಬ್ಬಂದಿಯ ಮುಖಕ್ಕೆ ಪಂಜದಿಂದ ಬಲವಾಗಿ ಹೊಡೆದು ಅಲ್ಲಿಂದ ಪರಾರಿಯಾಗಿದೆ.
ಚಿರತೆ ದಾಳಿಯಿಂದ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎನ್ನಲಾಗಿದೆ. ಇಡೀ ಘಟನೆ ಸ್ಥಳೀಯರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಚಿರತೆ ತಪ್ಪಿಸಿಕೊಂಡ ದೃಶ್ಯ ಹಾಗೂ ಸಿಬ್ಬಂದಿಗೆ ಗಾಯವಾಗಿರುವ ವಿಚಾರವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಗೌಪ್ಯವಾಗಿಟ್ಟಿದ್ದರು ಎಂಬ ಆರೋಪವೂ ಕೇಳಿಬಂದಿದೆ.

ಅರವಳಿಕೆ ನೀಡಿ ಸುರಕ್ಷಿತವಾಗಿ ಸೆರೆ ಹಿಡಿಯುವ ಕ್ರಮ ಕೈಗೊಳ್ಳದೆ ಬೋನಿನ ಬಾಗಿಲು ತೆರೆದಿದ್ದೇಕೆ? ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದೇಕೆ? ಎಂಬ ಪ್ರಶ್ನೆಗಳು ಇದೀಗ ಉದ್ಭವಿಸಿವೆ. ಚಿರತೆ ತಪ್ಪಿಸಿಕೊಂಡಿರುವ ಮೊಬೈಲ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅರಣ್ಯ ಇಲಾಖೆಯ ಕಾರ್ಯಾಚರಣೆಯ ಕ್ರಮಗಳ ಬಗ್ಗೆ ಚರ್ಚೆ ಆರಂಭವಾಗಿದೆ.
Mysore
ಸೋನಿಯಾ ಗಾಂಧಿ ಆತ್ಮಚರಿತ್ರೆಯಲ್ಲಿ ಅರ್ಧ ಸತ್ಯ, ಅರ್ಧ ಸುಳ್ಳು: ಯದುವೀರ್ ವ್ಯಂಗ್ಯ
ಮೈಸೂರು: ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ ಪುಸ್ತಕ ಬಿಡುಗಡೆ ವಿಚಾರವಾಗಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ವ್ಯಂಗ್ಯವಾಡಿದ್ದಾರೆ. “ನಾನು ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ ಪುಸ್ತಕ ಓದುವುದಿಲ್ಲ. ನನಗೆ ಓದಲು ಬೇರೆ ಪುಸ್ತಕಗಳಿವೆ. ಆ ಪುಸ್ತಕದಲ್ಲಿ ಅರ್ಧ ಸತ್ಯ, ಅರ್ಧ ಸುಳ್ಳುಗಳಿರುತ್ತವೆ. ಕಾಂಗ್ರೆಸ್ನ ಇತಿಹಾಸವೇ ಹಾಗೆ” ಎಂದು ಟೀಕಿಸಿದ್ದಾರೆ. ಕಾಂಗ್ರೆಸ್ ನಾಯಕರು ಸೋನಿಯಾ ಗಾಂಧಿ ಅವರ ಪುಸ್ತಕ ಹಾಗೂ ಕಾಂಗ್ರೆಸ್ನ ದಾಖಲೆಗಳನ್ನು ಓದುವುದನ್ನು ಬಿಟ್ಟು ಸುದ್ದಿ ವಾಹಿನಿಗಳನ್ನು ನೋಡಲಿ. ಆಗ ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಅವರಿಗೆ ತಿಳಿಯುತ್ತದೆ ಎಂದು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ಪ್ರಶ್ನೆಗೆ ತಬ್ಬಿಬ್ಬು
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಕ್ಷಣಕಾಲ ಅಚ್ಚರಿಗೊಂಡ ಯದುವೀರ್, “ನಾನೇ ರಾಜ್ಯಾಧ್ಯಕ್ಷನಾ?” ಎಂದು ಮರುಪ್ರಶ್ನಿಸಿದರು. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸೂಕ್ತ ಅರ್ಹತೆ ಹಾಗೂ ಸಾಮರ್ಥ್ಯ ಹೊಂದಿರುವವರನ್ನು ಆಯ್ಕೆ ಮಾಡಲಾಗುತ್ತದೆ. ಈ ಬಗ್ಗೆ ಪಕ್ಷದ ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದೆ ಎಂದರು.

ಪ್ರಸ್ತುತ ಅಧ್ಯಕ್ಷರೇ ಮುಂದುವರಿದರೂ ಸಂತೋಷ, ಬೇರೆಯವರು ಆಯ್ಕೆಯಾದರೂ ಸಂತೋಷ. ಯಾರೇ ಅಧ್ಯಕ್ಷರಾದರೂ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ನಮ್ಮ ಇತಿಮಿತಿಯಲ್ಲಿ ಪಕ್ಷ ಸಂಘಟನೆ ಮಾಡುತ್ತಿದ್ದೇವೆ. ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳಿಗೆ ಸಿದ್ಧತೆ ನಡೆಸುತ್ತಿದ್ದು, ಈ ಬಾರಿ ಬಿಜೆಪಿ ಮತ್ತಷ್ಟು ಬಲವರ್ಧನೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹಿರಿಯೂರು ಉಪಚುನಾವಣೆ ವಿಚಾರ
ಹಿರಿಯೂರು ಉಪಚುನಾವಣೆಯ ಟಿಕೆಟ್ ಹಂಚಿಕೆ ವಿಚಾರವಾಗಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ಪೈಪೋಟಿ ನಡೆಯುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಹಿರಿಯೂರಿನಲ್ಲಿ ಎನ್ಡಿಎ ಅಭ್ಯರ್ಥಿ ಕಣಕ್ಕಿಳಿಯಲಿದ್ದಾರೆ. ಅಭ್ಯರ್ಥಿ ಆಯ್ಕೆ ಕುರಿತು ಹೈಕಮಾಂಡ್ ತೀರ್ಮಾನವೇ ಅಂತಿಮ. ಚುನಾವಣೆಯಲ್ಲಿ ಗೆಲ್ಲುವುದೇ ನಮ್ಮ ಗುರಿ ಎಂದು ಸ್ಪಷ್ಟಪಡಿಸಿದರು.
ಮೈಸೂರಿನಲ್ಲಿ ವಿವಿಧ ರಾಜಕೀಯ ವಿಚಾರಗಳ ಕುರಿತು ಮಾತನಾಡಿದ ಸಂಸದ ಯದುವೀರ್ ಒಡೆಯರ್ ಕಾಂಗ್ರೆಸ್ ನಾಯಕರ ಟೀಕೆಗಳಿಗೆ ತಿರುಗೇಟು ನೀಡುವುದರ ಜೊತೆಗೆ ಬಿಜೆಪಿ ಸಂಘಟನೆ ಹಾಗೂ ಮುಂಬರುವ ಚುನಾವಣೆಗಳ ಸಿದ್ಧತೆ ಬಗ್ಗೆ ಮಾತನಾಡಿದರು.
-
Chamarajanagar22 hours agoನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕರ ಹುದ್ದೆಗೆ ಅರ್ಜಿ ಆಹ್ವಾನ
-
Mandya5 hours agoಅಭಿವೃದ್ಧಿ ಕಾಮಗಾರಿಗಳನ್ನು ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳಿಸಿ: ಮನೋಜ್ ಕುಮಾರ್ ಮೀನಾ
-
Manglore9 hours agoಧರ್ಮಸ್ಥಳ, ಸೌತಡ್ಕ ಮಹಾಗಣಪತಿ ಕ್ಷೇತ್ರಕ್ಕೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಭೇಟಿ
-
Hassan3 hours agoಹಾಸನದಲ್ಲಿ ಆನೆ ಸೆರೆ ಕಾರ್ಯಾಚರಣೆಗೆ ಬೃಹತ್ ಸಿದ್ಧತೆ: 350ಕ್ಕೂ ಹೆಚ್ಚು ಸಿಬ್ಬಂದಿ ನಿಯೋಜನೆ
-
Chamarajanagar6 hours agoಹುಲಿ ದಾಳಿಗೆ ಹಸು ಬ*ಲಿ: ಸಂಕಷ್ಟದಲ್ಲಿ ರೈತ
-
State10 hours agoಅಸಂಜ್ಞೆಯ ಅಪರಾಧಗಳ ತನಿಖೆಗೆ ಮ್ಯಾಜಿಸ್ಟ್ರೇಟ್ ಪೂರ್ವಾನುಮತಿ ಕಡ್ಡಾಯ: ಹೈಕೋರ್ಟ್ ಮಹತ್ವದ ಆದೇಶ
-
Kodagu22 hours agoಕಡಂಗ ಶಾಲೆಯಲ್ಲಿ ಯಶಸ್ವಿಯಾಗಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ
-
Kodagu5 hours agoಬೀಟಿಕಾಡಿನಲ್ಲಿ ₹25 ಕೋಟಿ ವೆಚ್ಚದ ನೂತನ 66/11 ಕೆ.ವಿ. ವಿದ್ಯುತ್ ಪ್ರಸರಣ ಘಟಕಕ್ಕೆ ಭೂಮಿಪೂಜೆ
