Hassan
ಬೇಲೂರಿನಲ್ಲಿ ಮೊದಲ ದಿನವೇ ಕಾಡಾನೆ ಕಾರ್ಯಾಚರಣೆಗೆ ಹಿನ್ನಡೆ
ಬೇಲೂರು: ಕಾಡಾನೆ-ಮಾನವ ಸಂಘರ್ಷ ತಡೆಗಟ್ಟುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಆರಂಭಿಸಿರುವ ಕಾಡಾನೆಗಳನ್ನು ಓಡಿಸುವ ಕಾರ್ಯಾಚರಣೆಗೆ ಮೊದಲ ದಿನವೇ ಹಿನ್ನಡೆಯಾಗಿದೆ. ಮೂರು ಗಂಟೆಗೂ ಹೆಚ್ಚು ಕಾಲ ಸಾಕಾನೆಗಳ ಸಹಾಯದಿಂದ ನಿರಂತರ ಕಾರ್ಯಾಚರಣೆ ನಡೆಸಿದರೂ ಬೀಟಮ್ಮ-1 ಗುಂಪಿನ ಕಾಡಾನೆಗಳನ್ನು ನಿಗದಿತ ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸಲು ಸಾಧ್ಯವಾಗಲಿಲ್ಲ.

ಕುಶಾವರ ಗ್ರಾಮದ ಬಳಿಯ ಅರಣ್ಯ ಪ್ರದೇಶದಲ್ಲಿದ್ದ ಕಾಡಾನೆಗಳನ್ನು ಜಗಬೋರನಹಳ್ಳಿ ಗ್ರಾಮದ ಸಮೀಪದ ಅರಣ್ಯಕ್ಕೆ ಓಡಿಸುವ ಉದ್ದೇಶದಿಂದ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದರು. ಸಾಕಾನೆಗಳೊಂದಿಗೆ ಅರಣ್ಯ ಸಿಬ್ಬಂದಿ ಪಟಾಕಿ ಸಿಡಿಸುತ್ತಾ ಕಾಡಾನೆಗಳನ್ನು ಓಡಿಸಲು ಹರಸಾಹಸಪಟ್ಟರು.
ಆದರೆ, ರಸ್ತೆ ಬದಿಗೆ ಬಂದ ಕಾಡಾನೆಗಳು ರಸ್ತೆ ದಾಟಿ ಜಗಬೋರನಹಳ್ಳಿ ಅರಣ್ಯ ಪ್ರದೇಶಕ್ಕೆ ತೆರಳುವ ಬದಲು ಮತ್ತೆ ತಾವು ಇದ್ದ ಸ್ಥಳಕ್ಕೇ ವಾಪಸ್ ತೆರಳಿ ನಿಂತವು. ಹಲವು ಬಾರಿ ಪ್ರಯತ್ನಿಸಿದರೂ ಆನೆಗಳನ್ನು ಮುಂದಕ್ಕೆ ಸಾಗಿಸಲು ಸಾಧ್ಯವಾಗಲಿಲ್ಲ.
ಬೇಲೂರು-ಸಕಲೇಶಪುರ ರಸ್ತೆ ಸಂಚಾರ ಬಂದ್
ಕಾಡಾನೆಗಳು ರಸ್ತೆ ದಾಟುವ ಸಾಧ್ಯತೆಯ ಹಿನ್ನೆಲೆಯಲ್ಲಿ ಪೊಲೀಸರು ಮೂರ್ನಾಲ್ಕು ಬಾರಿ ಬೇಲೂರು-ಸಕಲೇಶಪುರ ರಸ್ತೆಯಲ್ಲಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದರು. ಆದರೆ, ಕಾಡಾನೆಗಳು ಮತ್ತೆ ಅರಣ್ಯದತ್ತ ವಾಪಸ್ ತೆರಳಿದ ಹಿನ್ನೆಲೆಯಲ್ಲಿ ವಾಹನಗಳ ಸಂಚಾರಕ್ಕೆ ಪೊಲೀಸರು ಅವಕಾಶ ಮಾಡಿಕೊಟ್ಟರು.
ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ, ಸಾಕಾನೆಗಳು, ಕುಮ್ಕಿ ಆನೆಗಳು ಹಾಗೂ ವನ್ಯಜೀವಿ ವೈದ್ಯರು ಪಾಲ್ಗೊಂಡಿದ್ದರು. ಸತತ ಮೂರು ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿದರೂ ಬೀಟಮ್ಮ-1 ಗುಂಪಿನ ಆನೆಗಳನ್ನು ಸ್ಥಳಾಂತರಿಸುವ ಪ್ರಯತ್ನ ಮೊದಲ ದಿನ ಫಲ ನೀಡಲಿಲ್ಲ.
ಒಟ್ಟಿನಲ್ಲಿ, ಕಾಡಾನೆಗಳನ್ನು ಸುರಕ್ಷಿತವಾಗಿ ಬೇರೆ ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸಲು ಅರಣ್ಯ ಇಲಾಖೆ ನಡೆಸಿದ ಮೊದಲ ದಿನದ ಕಾರ್ಯಾಚರಣೆ ನಿರೀಕ್ಷಿತ ಫಲಿತಾಂಶ ನೀಡದೆ ಅಂತ್ಯಗೊಂಡಿದ್ದು, ಮುಂದಿನ ಕಾರ್ಯಾಚರಣೆಯತ್ತ ಎಲ್ಲರ ಗಮನ ನೆಟ್ಟಿದೆ.
Hassan
ಅರೇಹಳ್ಳಿ ಭಾಗದಲ್ಲಿ ಕಾಡಾನೆ ಹಾವಳಿಯ ನಡುವೆ ತಲೆ ಎತ್ತಿದ ಕಾಫಿ ಖದೀಮರು
ಅರೇಹಳ್ಳಿ: ಈ ಬಾರಿ ಸಮರ್ಪಕವಾಗಿ ಮಳೆಯಾಗದೆ ಬರಗಾಲದ ಛಾಯೆ ಆವರಿಸಿಕೊಂಡಿರುವ ಬೆನ್ನಲ್ಲೇ, ನಿತ್ಯ ಕಾಡಾನೆಗಳ ಹಾವಳಿಯಿಂದ ಸಂಕಷ್ಟ ಅನುಭವಿಸುತ್ತಿರುವ ರೈತರಿಗೆ ಇದೀಗ ಕಾಫಿ ಖದೀಮರ ಕಾಟವೂ ಎದುರಾಗಿದೆ. ವರ್ಷವಿಡೀ ಬೆವರು ಸುರಿಸಿ ಬೆಳೆದ ಕಾಫಿಯನ್ನು ಕೊಯ್ಲು ಮಾಡಿ ಮನೆಯ ಸಮೀಪದ ಗೋದಾಮಿನಲ್ಲಿ ಸುರಕ್ಷಿತವಾಗಿ ಶೇಖರಿಸಿಟ್ಟಿದ್ದ ಬೆಳೆಗಾರನ ಕಾಫಿಗೆ ಖದೀಮರು ಕನ್ನ ಹಾಕಿ ದೋಚಿರುವ ಘಟನೆ ಬೇಲೂರು ತಾಲೂಕಿನ ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ.
ಹೌದು, ಬೇಲೂರು ತಾಲೂಕಿನ ಅರೇಹಳ್ಳಿ ಹಾಗೂ ಬಿಕ್ಕೋಡು ಭಾಗಗಳಲ್ಲಿ ನಿತ್ಯ ಕಾಡಾನೆಗಳ ಹಾವಳಿಯ ನಡುವೆಯೇ ಜೀವದ ಹಂಗು ತೊರೆದು ಕೃಷಿ ಮಾಡುತ್ತಿರುವ ಬೆಳೆಗಾರರು ಒಂದೆಡೆ ಬೆಳೆ ನಷ್ಟ, ಮತ್ತೊಂದೆಡೆ ಬರಗಾಲದ ಆತಂಕದಿಂದ ಕಂಗಾಲಾಗಿದ್ದಾರೆ. ಇಂತಹ ಸಂಕಷ್ಟದ ನಡುವೆಯೂ ಕಷ್ಟಪಟ್ಟು ಬೆಳೆದ ಕಾಫಿಯನ್ನು ಕೊಯ್ಲು ಮಾಡಿ ಶೇಖರಿಸಿಟ್ಟಿದ್ದ ರೈತನಿಗೆ ಇದೀಗ ಕಳ್ಳರ ಕಾಟ ಎದುರಾಗಿದೆ.

ಬೇಲೂರು ತಾಲೂಕಿನ ಹಿರೇಹಸಡೆ ಗ್ರಾಮದ ಶಿವದೀಪ್ ಎಂಬುವವರಿಗೆ ಸೇರಿದ ಮನೆಯ ಸಮೀಪದ ಗೋದಾಮಿನಲ್ಲಿ ಶೇಖರಿಸಿಟ್ಟಿದ್ದ ಸುಮಾರು ಐದು ಚೀಲ ಕಾಫಿ ಪಾರ್ಚ್‌ಮೆಂಟ್ ಅನ್ನು ಖದೀಮರು ಗೋದಾಮಿನ ಬೀಗ ಮುರಿದು ದೋಚಿ ಪರಾರಿಯಾಗಿದ್ದಾರೆ. ಕಳುವಾದ ಕಾಫಿಯ ಮೌಲ್ಯ ಸುಮಾರು ಒಂದು ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.
ಕಳ್ಳತನದ ದೃಶ್ಯ ಗೋದಾಮಿನ ಸಮೀಪ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ಈ ದೃಶ್ಯಗಳ ಆಧಾರದ ಮೇಲೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಈ ಸಂಬಂಧ ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾ*ಖಲಾಗಿದ್ದು! ಕಾಫಿ ಕಳ್ಳತನ ಮಾಡಿರುವ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಲು ಪೊಲೀಸರು ಮುಂದಾಗಿದ್ದಾರೆ.
ಒಟ್ಟಿನಲ್ಲಿ ಒಂದೆಡೆ ಬರಗಾಲ, ಮತ್ತೊಂದೆಡೆ ಕಾಡಾನೆಗಳ ಹಾವಳಿ, ಇದರ ನಡುವೆ ಕಾಫಿ ಖದೀಮರ ಕಾಟದಿಂದಾಗಿ ಕಾಫಿ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ವರ್ಷವಿಡೀ ಕಷ್ಟಪಟ್ಟು ಬೆಳೆದ ಫಸಲನ್ನು ಕಟಾವು ಮಾಡಿ ಶೇಖರಿಸಿಟ್ಟರೂ ಅದಕ್ಕೂ ಭದ್ರತೆಯಿಲ್ಲದಂತಾಗಿರುವುದು ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ.
Hassan
ಬೇಲೂರು ತಾಲ್ಲೂಕಿನಲ್ಲಿ ಪುಂಡಾನೆ ಸೆರೆ ಕಾರ್ಯಾಚರಣೆ ಆರಂಭ
ಬೇಲೂರು: ತಾಲ್ಲೂಕಿನ ನಾಗೇನಹಳ್ಳಿ ಭಾಗದಲ್ಲಿ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿರುವ ಪುಂಡಾನೆಗಳನ್ನು ಸೆರೆಹಿಡಿಯುವ ಕಾರ್ಯಾಚರಣೆಗೆ ಅರಣ್ಯ ಇಲಾಖೆ ಅಧಿಕೃತವಾಗಿ ಚಾಲನೆ ನೀಡಿದೆ.
ತಾಲ್ಲೂಕಿನ ಬಿಕ್ಕೋಡು ಆನೆ ಶಿಬಿರದಲ್ಲಿ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲಿರುವ ಕುಂಕಿ ಸಾಕಾನೆಗಳಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಕಾರ್ಯಾಚರಣೆಗೆ ಸಿದ್ಧತೆ ಮಾಡಿಕೊಳ್ಳಲಾಯಿತು.

ಎಪಿಸಿಸಿಎಫ್ ಮೋಹನ್ ರಾಜನ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಕಾರ್ಯಾಚರಣೆಯಲ್ಲಿ ಒಟ್ಟು ಏಳು ಸಾಕಾನೆಗಳನ್ನು ಬಳಸಿಕೊಳ್ಳಲಾಗುತ್ತಿದೆ. ನಾಗೇನಹಳ್ಳಿ ಸುತ್ತಮುತ್ತಲ ಪ್ರದೇಶಗಳಲ್ಲಿ ಸಂಚರಿಸುತ್ತಿರುವ ಎರಡು ಪುಂಡಾನೆಗಳನ್ನು ಸೆರೆಹಿಡಿಯುವುದು ಅರಣ್ಯ ಇಲಾಖೆಯ ಪ್ರಮುಖ ಗುರಿಯಾಗಿದೆ.
ಕಳೆದ ಮೂರು ದಿನಗಳ ಅವಧಿಯಲ್ಲಿ ಇಬ್ಬರು ವ್ಯಕ್ತಿಗಳ ಸಾವಿಗೆ ಕಾರಣವಾಗಿದ್ದ ಕಾಡಾನೆಗಳನ್ನು ಸೆರೆಹಿಡಿಯುವಂತೆ ಸ್ಥಳೀಯರು ತೀವ್ರ ಒತ್ತಾಯ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಕಾರ್ಯಾಚರಣೆಗೆ ಮುಂದಾಗಿದ್ದು, ಇಂದು ಪುಂಡಾನೆಗಳನ್ನು ಸೆರೆಹಿಡಿಯಲು ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗಿದೆ.
ಕಾರ್ಯಾಚರಣೆಯ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು, ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ. ಕಾರ್ಯಾಚರಣೆ ನಡೆಯುವ ಪ್ರದೇಶದ ಸುತ್ತಮುತ್ತಲ ಗ್ರಾಮಸ್ಥರು ಎಚ್ಚರಿಕೆಯಿಂದ ಇರುವಂತೆ ಅರಣ್ಯ ಇಲಾಖೆ ಸೂಚಿಸಿದೆ.
ನಾಗೇನಹಳ್ಳಿ ಭಾಗದಲ್ಲಿ ಕಾಡಾನೆಗಳ ಹಾವಳಿಯಿಂದ ಆತಂಕಕ್ಕೊಳಗಾಗಿರುವ ಗ್ರಾಮಸ್ಥರು, ಪುಂಡಾನೆಗಳನ್ನು ಶೀಘ್ರವಾಗಿ ಸೆರೆಹಿಡಿದು ಶಾಶ್ವತ ಪರಿಹಾರ ಕಲ್ಪಿಸುವಂತೆ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.
Hassan
ಹರಿಹರಪುರದಲ್ಲಿ ಭೀಕರ ರಸ್ತೆ ಅಪಘಾ*ತ: ಕೆಪಿಟಿಸಿಎಲ್ ನೌಕರ ಸಾ*ವು
ಹೊಳೆನರಸೀಪುರ: ನವೆಂಬರ್ 13ರಂದು ಹರಿಹರಪುರದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕೆಪಿಟಿಸಿಎಲ್ ನೌಕರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮೃತರನ್ನು ಚನ್ನರಾಯಪಟ್ಟಣದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ (ಕೆಪಿಟಿಸಿಎಲ್)ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರಾಕೇಶ್ ಎಂದು ಗುರುತಿಸಲಾಗಿದೆ.

ನವೆಂಬರ್ 13ರಂದು ಹರಿಹರಪುರದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ರಾಕೇಶ್ ಅವರು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ನವೆಂಬರ್ 15ರಂದು ಕೊನೆಯುಸಿರೆಳೆದಿದ್ದಾರೆ.
ಇನ್ನು ಅಪಘಾತದ ಭೀಕರ ದೃಶ್ಯಾವಳಿಗಳು ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
-
Chamarajanagar22 hours agoನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕರ ಹುದ್ದೆಗೆ ಅರ್ಜಿ ಆಹ್ವಾನ
-
Mandya4 hours agoಅಭಿವೃದ್ಧಿ ಕಾಮಗಾರಿಗಳನ್ನು ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳಿಸಿ: ಮನೋಜ್ ಕುಮಾರ್ ಮೀನಾ
-
Manglore9 hours agoಧರ್ಮಸ್ಥಳ, ಸೌತಡ್ಕ ಮಹಾಗಣಪತಿ ಕ್ಷೇತ್ರಕ್ಕೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಭೇಟಿ
-
Hassan3 hours agoಹಾಸನದಲ್ಲಿ ಆನೆ ಸೆರೆ ಕಾರ್ಯಾಚರಣೆಗೆ ಬೃಹತ್ ಸಿದ್ಧತೆ: 350ಕ್ಕೂ ಹೆಚ್ಚು ಸಿಬ್ಬಂದಿ ನಿಯೋಜನೆ
-
Chamarajanagar6 hours agoಹುಲಿ ದಾಳಿಗೆ ಹಸು ಬ*ಲಿ: ಸಂಕಷ್ಟದಲ್ಲಿ ರೈತ
-
State10 hours agoಅಸಂಜ್ಞೆಯ ಅಪರಾಧಗಳ ತನಿಖೆಗೆ ಮ್ಯಾಜಿಸ್ಟ್ರೇಟ್ ಪೂರ್ವಾನುಮತಿ ಕಡ್ಡಾಯ: ಹೈಕೋರ್ಟ್ ಮಹತ್ವದ ಆದೇಶ
-
Kodagu4 hours agoಬೀಟಿಕಾಡಿನಲ್ಲಿ ₹25 ಕೋಟಿ ವೆಚ್ಚದ ನೂತನ 66/11 ಕೆ.ವಿ. ವಿದ್ಯುತ್ ಪ್ರಸರಣ ಘಟಕಕ್ಕೆ ಭೂಮಿಪೂಜೆ
-
Kodagu22 hours agoಕಡಂಗ ಶಾಲೆಯಲ್ಲಿ ಯಶಸ್ವಿಯಾಗಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ
