Connect with us

National

ಗೋಹತ್ಯೆ, ಮತಾಂತರ ನಿಷೇಧ ಕಾಯ್ದೆ ಹಿಂಪಡೆದರೆ ರಾಜ್ಯಾದ್ಯಂತ ಜನಾಂದೋಲನ: ವಿಹಿಂಪ ಎಚ್ಚರಿಕೆ

Published

on

ಮಂಗಳೂರು: ರಾಜ್ಯದಲ್ಲಿ ಜಾರಿಯಲ್ಲಿರುವ ಗೋಹತ್ಯೆ ನಿಷೇಧ ಕಾಯ್ದೆ ಹಾಗೂ ಮತಾಂತರ ನಿಷೇಧ ಕಾಯ್ದೆಗಳನ್ನು ಯಾವುದೇ ಕಾರಣಕ್ಕೂ ದುರ್ಬಲಗೊಳಿಸಬಾರದು ಅಥವಾ ಹಿಂಪಡೆಯಬಾರದು. ಒಂದು ವೇಳೆ ರಾಜ್ಯ ಸರ್ಕಾರ ಓಲೈಕೆ ರಾಜಕಾರಣಕ್ಕಾಗಿ ಈ ಕಾಯ್ದೆಗಳನ್ನು ಹಿಂಪಡೆಯುವ ಪ್ರಯತ್ನ ನಡೆಸಿದರೆ, ಕರ್ನಾಟಕದಾದ್ಯಂತ ಗ್ರಾಮ-ಗ್ರಾಮಗಳಲ್ಲಿ ತೀವ್ರ ಜನಾಂದೋಲನ ನಡೆಸಲಾಗುವುದು ಎಂದು ವಿಹಿಂಪ ಮುಖಂಡ ಪ್ರದೀಪ್ ಸರಿಪಳ್ಳ ಎಚ್ಚರಿಕೆ ನೀಡಿದ್ದಾರೆ.


ಮಂಗಳೂರಿನಲ್ಲಿ ಮಾತನಾಡಿದ ಅವರು,ಹಿಂದಿನ ಸರ್ಕಾರ 2020ರಲ್ಲಿ ಗೋಸಂರಕ್ಷಣಾ ಕಾಯ್ದೆ ಹಾಗೂ 2022ರಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತಂದ ಬಳಿಕ ಕರಾವಳಿ ಸೇರಿದಂತೆ ರಾಜ್ಯಾದ್ಯಂತ ಗೋಕಳ್ಳತನ, ಅಕ್ರಮ ಕಸಾಯಿಖಾನೆ ಮತ್ತು ಗೋದರೋಡೆ ಪ್ರಕರಣಗಳು ಗಣನೀಯವಾಗಿ ಇಳಿಕೆಯಾಗಿವೆ. ರೈತಾಪಿ ಜನರು ನೆಮ್ಮದಿಯಿಂದ ಹೈನುಗಾರಿಕೆ ನಡೆಸುತ್ತಿದ್ದರು. ಕರಾವಳಿಯಲ್ಲಿ ಶಾಂತಿ ನೆಲೆಸಿತ್ತು. ಆದರೆ, ಇತ್ತೀಚೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಪ್ರತಿಭಟನೆಗೆ ಮಣಿದು ಕೆಪಿಸಿಸಿ ಅಧ್ಯಕ್ಷರು ಈ ಕಾಯ್ದೆಗಳನ್ನು ವಾಪಸ್ ಪಡೆಯುವ ಹೇಳಿಕೆ ನೀಡಿರುವುದು ಖಂಡನೀಯ ಎಂದರು.

ಗೋದರೋಡೆಕೋರರು ಮತ್ತು ಮತಾಂತರ ಮಾಡುವವರಿಗೆ ಪರೋಕ್ಷ ಬೆಂಬಲ ನೀಡುವಂತಹ ಹಿಂದೂ ವಿರೋಧಿ ನಿಲುವನ್ನು ಸರ್ಕಾರ ಕೈಬಿಡಬೇಕು. ಈ ಎಲ್ಲಾ ವಿಚಾರಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಿ ರಾಜ್ಯಾದ್ಯಂತ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳು, ರಾಜ್ಯಪಾಲರು ಹಾಗೂ ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಲಾಗಿದೆ. ಸರ್ಕಾರ ಸ್ಪಂದಿಸದಿದ್ದರೆ ರಾಜ್ಯವ್ಯಾಪಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.

ಅಲ್ಪಸಂಖ್ಯಾತರ ಸೇನಾ ತರಬೇತಿ ಟೆಂಡರ್ ರದ್ದತಿಗೆ ಆಗ್ರಹ

ಅಲ್ಪಸಂಖ್ಯಾತರಿಗೆ 60 ದಿನಗಳ ಕಾಲ ಸೇನಾ ತರಬೇತಿ ನೀಡಲು ರಾಜ್ಯ ಸರ್ಕಾರದಿಂದ ಟೆಂಡರ್ ಕರೆಯಲಾಗಿದೆ. ಇದರಲ್ಲಿ ಸೇನೆಯ ಮೇಲ್ವಿಚಾರಣೆಯೇ ಇಲ್ಲ. ಶಾಲೆಗಳಲ್ಲಿ ಎನ್‌ಸಿಸಿ ಮೂಲಕ ಎಲ್ಲರಿಗೂ ಸಮಾನ ತರಬೇತಿ ನೀಡುವ ಬದಲು, ಸೇನಾ ಮೇಲ್ವಿಚಾರಣೆಯಿಲ್ಲದೆ ನಿರ್ದಿಷ್ಟ ಸಮುದಾಯಕ್ಕೆ ಮಾತ್ರ ತರಬೇತಿ ನೀಡುವುದು ಸಂವಿಧಾನದ ಸಮಾನತೆಯ ಹಕ್ಕಿಗೆ ವಿರುದ್ಧವಾಗಿದೆ ಮತ್ತು ದೇಶದ ಭದ್ರತೆಗೆ ಅಪಾಯಕಾರಿಯಾಗಿದೆ. ತಕ್ಷಣವೇ ಈ ಕಾನೂನುಬಾಹಿರ ಟೆಂಡರ್ ಅನ್ನು ಹಿಂಪಡೆಯಬೇಕು ಎಂದು ಪ್ರದೀಪ್ ಸರಿಪಳ್ಳ ಒತ್ತಾಯಿಸಿದರು.

Continue Reading

National

2027ರ ಯುಪಿ ಚುನಾವಣೆ: ಎಸ್‌ಪಿ–ಕಾಂಗ್ರೆಸ್ ಸೀಟು ಹಂಚಿಕೆ ಚರ್ಚೆ ಇಂದು

Published

on

ನವದೆಹಲಿ: 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳ ಸಿದ್ಧತೆ ಚುರುಕುಗೊಂಡಿದ್ದು, ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ಕಾಂಗ್ರೆಸ್ ನಡುವಿನ ಸೀಟು ಹಂಚಿಕೆ ಚರ್ಚೆ ಮಹತ್ವ ಪಡೆದುಕೊಂಡಿದೆ. ಇಂದು ಎರಡೂ ಪಕ್ಷಗಳ ನಡುವೆ ಕ್ಷೇತ್ರ ಹಂಚಿಕೆ ಕುರಿತು ಮಾತುಕತೆ ನಡೆಯಲಿದ್ದು, ಕಾಂಗ್ರೆಸ್ 181 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಆಸಕ್ತಿ ವ್ಯಕ್ತಪಡಿಸಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

ಉತ್ತರ ಪ್ರದೇಶದ ಒಟ್ಟು 403 ವಿಧಾನಸಭಾ ಕ್ಷೇತ್ರಗಳ ಪೈಕಿ 181 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಉದ್ದೇಶಿಸಿದ್ದು, ಈ ಸಂಬಂಧ ಕ್ಷೇತ್ರಗಳ ಪಟ್ಟಿಯನ್ನು ಸಮಾಜವಾದಿ ಪಕ್ಷಕ್ಕೆ ಸಲ್ಲಿಸಿದೆ. ಆದರೆ ಕಾಂಗ್ರೆಸ್ ಬೇಡಿಕೆಯಷ್ಟು ಕ್ಷೇತ್ರಗಳನ್ನು ಎಸ್‌ಪಿ ಬಿಟ್ಟುಕೊಡಲಿದೆಯೇ ಎಂಬುದು ಇದೀಗ ಪ್ರಮುಖ ಪ್ರಶ್ನೆಯಾಗಿದೆ.

ಡಿಸೆಂಬರ್‌ನಿಂದ ಕಾಂಗ್ರೆಸ್ ಪ್ರಚಾರ ಆರಂಭ

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಉತ್ತರ ಪ್ರದೇಶದ ಹಿರಿಯ ನಾಯಕರೊಂದಿಗೆ ಈಗಾಗಲೇ ಸಭೆ ನಡೆಸಿದ್ದಾರೆ. ಚುನಾವಣಾ ಸಿದ್ಧತೆ, ಪಕ್ಷ ಸಂಘಟನೆ ಹಾಗೂ ಪ್ರಚಾರ ಕಾರ್ಯತಂತ್ರದ ಕುರಿತು ಚರ್ಚೆ ನಡೆಸಲಾಗಿದೆ. ಡಿಸೆಂಬರ್ ಮೊದಲ ವಾರದಿಂದಲೇ ರಾಜ್ಯದಲ್ಲಿ ರ‍್ಯಾಲಿ ಮತ್ತು ಯಾತ್ರೆಗಳ ಮೂಲಕ ಪ್ರಚಾರ ಆರಂಭಿಸಲು ಕಾಂಗ್ರೆಸ್ ಯೋಜನೆ ರೂಪಿಸಿದೆ.

ಗೆಲ್ಲುವ ಸಾಮರ್ಥ್ಯಕ್ಕೆ ಆದ್ಯತೆ: ಅಖಿಲೇಶ್

ಸೀಟು ಹಂಚಿಕೆ ಕುರಿತು ಪ್ರತಿಕ್ರಿಯಿಸಿರುವ ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್, ಯಾವ ಕ್ಷೇತ್ರದಲ್ಲಿ ಯಾವ ಪಕ್ಷಕ್ಕೆ ಗೆಲ್ಲುವ ಅವಕಾಶ ಹೆಚ್ಚಿದೆಯೋ ಆ ಪಕ್ಷಕ್ಕೆ ಸ್ಥಾನ ನೀಡುವ ಕುರಿತು ಚರ್ಚಿಸಲಾಗುವುದು ಎಂದು ತಿಳಿಸಿದ್ದಾರೆ. ಕಾಂಗ್ರೆಸ್ ಜೊತೆಗಿನ ಮಾತುಕತೆ ಮುಂದುವರಿಯಲಿದ್ದು, ಪ್ರತಿಯೊಂದು ಕ್ಷೇತ್ರದ ಬಗ್ಗೆಯೂ ಸಮಗ್ರವಾಗಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದಿದ್ದಾರೆ.

ಇನ್ನೊಂದೆಡೆ, ಕಾಂಗ್ರೆಸ್ 181 ಸ್ಥಾನಗಳನ್ನು ಕೇಳಿರುವುದಕ್ಕೆ ಎಸ್‌ಪಿ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ ಎನ್ನಲಾಗಿದ್ದು, ಕಾಂಗ್ರೆಸ್ 60ರಿಂದ 70 ಸ್ಥಾನಗಳಿಗೆ ಸೀಮಿತವಾಗಬೇಕು ಎಂಬ ಅಭಿಪ್ರಾಯವೂ ಕೇಳಿಬಂದಿದೆ.

ಒಟ್ಟಿನಲ್ಲಿ, 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಮೈತ್ರಿಕೂಟವನ್ನು ಬಲಪಡಿಸುವ ಉದ್ದೇಶ ಹೊಂದಿರುವ ಎಸ್‌ಪಿ ಮತ್ತು ಕಾಂಗ್ರೆಸ್ ನಡುವೆ ಸೀಟು ಹಂಚಿಕೆ ಮಾತುಕತೆ ನಿರ್ಣಾಯಕವಾಗಲಿದೆ. ಅಂತಿಮವಾಗಿ ಯಾವ ಪಕ್ಷ ಎಷ್ಟು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎಂಬುದು ಮುಂದಿನ ಬೆಳವಣಿಗೆಗಳಿಂದ ಸ್ಪಷ್ಟವಾಗಲಿದೆ.

Continue Reading

National

SIR ಪ್ರಕ್ರಿಯೆ ಬಗ್ಗೆ ಉತ್ತರಿಸಿ: ಚುನಾವಣಾ ಆಯೋಗಕ್ಕೆ ವಿಪಕ್ಷಗಳ ಖಡಕ್ ಪ್ರಶ್ನೆ

Published

on

ನವದೆಹಲಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ಭಾರತೀಯ ಚುನಾವಣಾ ಆಯೋಗವನ್ನು ಔಪಚಾರಿಕವಾಗಿ ಪ್ರಶ್ನಿಸಲು ಅನುಮತಿ ನೀಡುವಂತೆ ಕೋರಿ INDIA ಮೈತ್ರಿಕೂಟದ ವಿರೋಧ ಪಕ್ಷಗಳು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿವೆ. ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತು ಅಧಿಕೃತ ದಾಖಲೆಗಳ ಸಮೇತ ಸ್ಪಷ್ಟನೆ ಪಡೆಯಲು 48 ಪ್ರಶ್ನೆಗಳ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.

SIR ಪ್ರಕ್ರಿಯೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳಿಗೆ ಚುನಾವಣಾ ಆಯೋಗ ನೀಡಿರುವ ಪ್ರತಿಕ್ರಿಯೆಯಲ್ಲಿ ಸೂಕ್ತ ದಾಖಲೆಗಳು ಮತ್ತು ವಾಸ್ತವಾಂಶಗಳನ್ನು ಒದಗಿಸದೆ ಕೇವಲ ಸಮರ್ಥನೆಗಳನ್ನು ಮಾಡಲಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ಹೀಗಾಗಿ ಆಯೋಗದ ನಿರ್ಧಾರಗಳು, ಆಡಳಿತಾತ್ಮಕ ಪ್ರಕ್ರಿಯೆಗಳು ಹಾಗೂ ಮತದಾರರ ಮಾಹಿತಿ ನಿರ್ವಹಣೆ ಕುರಿತು ನೇರವಾಗಿ ಪ್ರಶ್ನಿಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಚುನಾವಣಾ ಆಯೋಗಕ್ಕೆ 48 ಪ್ರಶ್ನೆಗಳು

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್, ಚುನಾವಣಾ ಆಯುಕ್ತರಾದ ಡಾ. ಸುಖ್‌ಬೀರ್ ಸಿಂಗ್ ಸಂಧು, ಡಾ. ವಿವೇಕ್ ಜೋಶಿ ಹಾಗೂ ಉಪ ಚುನಾವಣಾ ಆಯುಕ್ತ ಭಾನು ಪ್ರಕಾಶ್ ಯೇತೂರು ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಂದ ಉತ್ತರ ಪಡೆಯಲು ಅರ್ಜಿದಾರರು 48 ಪ್ರಶ್ನೆಗಳನ್ನು ಸಿದ್ಧಪಡಿಸಿದ್ದಾರೆ.

SIR ಪ್ರಕ್ರಿಯೆ ಮತ್ತು ECINET ವ್ಯವಸ್ಥೆಗೆ ಸಂಬಂಧಿಸಿದ ನಿರ್ಧಾರಗಳನ್ನು ಆಯೋಗ ಯಾವಾಗ ತೆಗೆದುಕೊಂಡಿತು? ಅವುಗಳಿಗೆ ಯಾರು ಅನುಮೋದನೆ ನೀಡಿದರು? ಆಯೋಗದ ಹೆಸರಿನಲ್ಲಿ ಹೊರಡಿಸಲಾದ ಆದೇಶಗಳ ಹಿಂದಿನ ಅಧಿಕೃತ ಪ್ರಕ್ರಿಯೆ ಏನು? ಎಂಬ ಪ್ರಮುಖ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.

ಆಯೋಗದ ನಿರ್ಧಾರಗಳ ಬಗ್ಗೆ ಸ್ಪಷ್ಟನೆಗೆ ಒತ್ತಾಯ

2025ರ ಫೆಬ್ರವರಿ 19ರಿಂದ 2026ರ ಅಕ್ಟೋಬರ್ 26ರವರೆಗೆ SIR, ECINET, ಫಾರ್ಮ್-6 ಹಾಗೂ ಮೇಲ್ಮನವಿಗಳಿಗೆ ಸಂಬಂಧಿಸಿದಂತೆ ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಅಥವಾ ವಿವೇಕ್ ಜೋಶಿ ಅವರು ಲಿಖಿತ ಆಕ್ಷೇಪಣೆ ಅಥವಾ ಭಿನ್ನಮತ ದಾಖಲಿಸಿದ್ದಾರೆಯೇ ಎಂಬ ಮಾಹಿತಿ ಕೇಳಲಾಗಿದೆ.

ಒಂದು ವೇಳೆ ಅಂತಹ ಆಕ್ಷೇಪಣೆಗಳಿದ್ದರೆ ಅವುಗಳ ದಿನಾಂಕ, ಕಡತ ಸಂಖ್ಯೆ ಹಾಗೂ ವಿಷಯವನ್ನು ಬಹಿರಂಗಪಡಿಸಬೇಕು. 2023ರ ಕಾಯ್ದೆಯ ಸೆಕ್ಷನ್ 18(2)ರ ಅಡಿಯಲ್ಲಿ ಬಹುಮತದ ಆಧಾರದ ಮೇಲೆ ನಿರ್ಧಾರ ಕೈಗೊಳ್ಳಲಾಗಿದೆಯೇ ಎಂಬುದನ್ನೂ ಸ್ಪಷ್ಟಪಡಿಸುವಂತೆ ಕೋರಲಾಗಿದೆ.

ದೇಶಾದ್ಯಂತ SIR ನಡೆಸುವ ನಿರ್ಧಾರವನ್ನು ಯಾವಾಗ ಮತ್ತು ಯಾವ ಅಧಿಕೃತ ಪ್ರಕ್ರಿಯೆಯ ಮೂಲಕ ಕೈಗೊಳ್ಳಲಾಯಿತು? ರಾಷ್ಟ್ರವ್ಯಾಪಿ SIR ಘೋಷಿಸಿದ ಆದೇಶಕ್ಕೂ, ನಂತರದ ಆರ್‌ಟಿಐ ಪ್ರತಿಕ್ರಿಯೆಯಲ್ಲಿ ಅಂತಹ ನಿರ್ಧಾರದ ಮಾಹಿತಿ ಲಭ್ಯವಿಲ್ಲ ಎಂದು ತಿಳಿಸಿರುವುದಕ್ಕೂ ಇರುವ ವ್ಯತ್ಯಾಸವೇನು? ತುರ್ತು ಅನುಮೋದನೆಗಳನ್ನು ವಾಟ್ಸ್‌ಆ್ಯಪ್ ಅಥವಾ ವೈಯಕ್ತಿಕ ಇಮೇಲ್ ಮೂಲಕ ಪಡೆಯಲಾಗಿತ್ತೇ ಎಂಬ ಪ್ರಶ್ನೆಗಳನ್ನೂ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಮತದಾರರ ಹೆಸರು ಅಳಿಸುವ ಅಧಿಕಾರ ಯಾರಿಗೆ?

ಮತದಾರರ ಪಟ್ಟಿಯ ಡೇಟಾಬೇಸ್‌ನಲ್ಲಿ ಹೆಸರು ಸೇರ್ಪಡೆ, ಅಳಿಸುವಿಕೆ ಹಾಗೂ ತಿದ್ದುಪಡಿ ಮಾಡಲು ಯಾರಿಗೆ ಅಧಿಕಾರ ನೀಡಲಾಗಿದೆ ಎಂಬುದರ ಕುರಿತು ಸ್ಪಷ್ಟನೆ ಕೇಳಲಾಗಿದೆ. ಖಾಸಗಿ ಗುತ್ತಿಗೆದಾರರು ಅಥವಾ ಅವರ ಉದ್ಯೋಗಿಗಳಿಗೆ ಡೇಟಾಬೇಸ್‌ನಲ್ಲಿ ನೇರವಾಗಿ ಬದಲಾವಣೆ ಮಾಡುವ ಅವಕಾಶ ನೀಡಲಾಗಿತ್ತೇ? ಚುನಾವಣಾ ನೋಂದಣಾಧಿಕಾರಿಗಳ (ERO) ಆದೇಶವಿಲ್ಲದೆ ಸಾಮೂಹಿಕವಾಗಿ ಮತದಾರರ ಹೆಸರುಗಳನ್ನು ಅಳಿಸಲಾಗಿದೆಯೇ ಎಂಬ ಪ್ರಶ್ನೆಗಳನ್ನೂ ಮುಂದಿಟ್ಟಿದ್ದಾರೆ.

ಚುನಾವಣಾ ಆಯೋಗದ ಐಟಿ ವಿಭಾಗದ ಮಹಾನಿರ್ದೇಶಕರಿಂದ ಈ ಕುರಿತು ಮಾಹಿತಿ ಕೇಳಲಾಗಿದ್ದು, ಡಾ. ವಿವೇಕ್ ಜೋಶಿ ಅವರು ಪ್ರಸ್ತಾಪಿಸಿದ್ದ ಆಕ್ಸೆಸ್ ಆಡಿಟ್ ಕುರಿತು ಕೈಗೊಂಡ ಕ್ರಮಗಳ ವಿವರಗಳನ್ನೂ ಒದಗಿಸುವಂತೆ ಕೋರಲಾಗಿದೆ.

ಫಾರ್ಮ್-6 ಮತ್ತು ಮತದಾರರ ಹೆಸರು ಕೈಬಿಟ್ಟಿದ್ದರ ಬಗ್ಗೆ ಮಾಹಿತಿ ಕೇಳಿಕೆ

ಆನ್‌ಲೈನ್ ಫಾರ್ಮ್-6ರಲ್ಲಿ ಹೊಸ ಘೋಷಣಾ ಪತ್ರ ಸೇರ್ಪಡೆ ಮಾಡಲು ಅನುಮತಿ ನೀಡಿದವರು ಯಾರು? ಈ ಘೋಷಣಾ ಪತ್ರ ಸಲ್ಲಿಸದ ಕಾರಣಕ್ಕೆ ಎಷ್ಟು ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಅಥವಾ ಬಾಕಿ ಉಳಿಸಿಕೊಳ್ಳಲಾಗಿದೆ? ಕರಡು ಹಾಗೂ ಅಂತಿಮ ಮತದಾರರ ಪಟ್ಟಿಯಿಂದ ಕೈಬಿಡಲಾದ ಮತದಾರರ ರಾಜ್ಯವಾರು ಅಂಕಿಅಂಶಗಳೇನು ಎಂಬ ಮಾಹಿತಿಯನ್ನು ನೀಡುವಂತೆ ಅರ್ಜಿದಾರರು ಒತ್ತಾಯಿಸಿದ್ದಾರೆ.

ಇದೇ ವೇಳೆ ಪಶ್ಚಿಮ ಬಂಗಾಳದಲ್ಲಿ ಮತದಾರರ ಸೇರ್ಪಡೆಗೆ ಸಂಬಂಧಿಸಿದಂತೆ ನ್ಯಾಯಾಂಗ ಅಧಿಕಾರಿಗಳು ಹೊರಡಿಸಿದ ಆದೇಶಗಳ ವಿರುದ್ಧ ಸಲ್ಲಿಸಲಾದ ಮೇಲ್ಮನವಿಗಳ ಸಂಖ್ಯೆ, ಅವುಗಳಿಗೆ ಅನುಮತಿ ನೀಡಿದ ಅಧಿಕಾರಿಗಳು ಹಾಗೂ ಪ್ರಕರಣಗಳ ಆಯ್ಕೆಗೆ ಅನುಸರಿಸಿದ ಮಾನದಂಡಗಳ ಬಗ್ಗೆಯೂ ಮಾಹಿತಿ ಕೇಳಲಾಗಿದೆ.

ಪ್ರಮುಖ ವಿರೋಧ ಪಕ್ಷಗಳ ನಾಯಕರು ಅರ್ಜಿದಾರರು

SIR ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಟಿಎಂಸಿ ನಾಯಕ ಸೌಗತ ರಾಯ್, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್, ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವತ್ ಸೇರಿದಂತೆ ವಿವಿಧ ವಿರೋಧ ಪಕ್ಷಗಳ ನಾಯಕರು ಅಕ್ಟೋಬರ್‌ನಲ್ಲಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಸಿಪಿಐ(ಎಂ) ನಾಯಕ ಎಂ.ಎ. ಬೇಬಿ, ಸಿಪಿಐ ನಾಯಕ ಡಿ. ರಾಜಾ, ಜೆಎಂಎಂನ ಮಹುವಾ ಮಾಜಿ, ಎನ್‌ಸಿಪಿ (ಶರದ್ ಪವಾರ್ ಬಣ) ನಾಯಕಿ ಸುಪ್ರಿಯಾ ಸುಳೆ ಹಾಗೂ ಐಯುಎಂಎಲ್ ನಾಯಕ ಮೊಹಮ್ಮದ್ ಬಶೀರ್ ಕೂಡ ಅರ್ಜಿದಾರರಲ್ಲಿ ಸೇರಿದ್ದಾರೆ.

ಅಕ್ಟೋಬರ್ 15ರಂದು ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿತ್ತು. ಇದಕ್ಕೆ ಪ್ರತಿಯಾಗಿ ಆಯೋಗ ಎರಡು ಅಫಿಡವಿಟ್‌ಗಳನ್ನು ಸಲ್ಲಿಸಿ, SIRಗೆ ಸಂಬಂಧಿಸಿದ ಮೂರು ಪ್ರಮುಖ ನಿರ್ಧಾರಗಳನ್ನು ಸರ್ವಾನುಮತದಿಂದ ಕೈಗೊಳ್ಳಲಾಗಿದೆ ಎಂದು ತಿಳಿಸಿತ್ತು.

ಅಕ್ಟೋಬರ್ 27ರಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ತ್ರಿಸದಸ್ಯ ಪೀಠವು ಆಯೋಗದ ಅಫಿಡವಿಟ್‌ಗೆ ಪ್ರತಿಕ್ರಿಯೆ ಸಲ್ಲಿಸಲು ಅರ್ಜಿದಾರರಿಗೆ 10 ದಿನಗಳ ಕಾಲಾವಕಾಶ ನೀಡಿತ್ತು. ಇದೀಗ ಆಯೋಗವನ್ನು ಔಪಚಾರಿಕವಾಗಿ ಪ್ರಶ್ನಿಸಲು ಅನುಮತಿ ಕೋರಿ ಮತ್ತೊಂದು ಅರ್ಜಿ ಸಲ್ಲಿಕೆಯಾಗಿದ್ದು, ಪ್ರಕರಣದ ಮುಂದಿನ ವಿಚಾರಣೆ ಮಂಗಳವಾರ ನಡೆಯಲಿದೆ.

Continue Reading

National

ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ಶೈಕ್ಷಣಿಕ ವಿಭಾಗದ ಉಪಕುಲಸಚಿವ ವಿಪಿನ್ ನಾಯ್ಕ್ ರಿಗೆ ಭೌತಶಾಸ್ತ್ರದಲ್ಲಿ ಪಿಎಚ್.ಡಿ. ಪದವಿ

Published

on

ಪುತ್ತೂರು: ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ಸ್ನಾತಕೋತ್ತರ ಭೌತಶಾಸ್ತ್ರ ವಿಭಾಗದ ಸಂಯೋಜಕರಾದ ವಿಪಿನ್ ನಾಯ್ಕ್ ಎನ್. ಎಸ್. ಅವರು ಮಂಗಳೂರು ವಿಶ್ವವಿದ್ಯಾನಿಲಯದಿಂದ ಭೌತಶಾಸ್ತ್ರ ವಿಷಯದಲ್ಲಿ ಡಾಕ್ಟರೇಟ್ (ಪಿಎಚ್.ಡಿ.) ಪದವಿ ಪಡೆದಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಅವರು ಸಲ್ಲಿಸಿದ ‘ಸ್ಟಡಿ ಆಫ್ ಹೆವಿ ಮೆಸಾನ್ ಸ್ಪೆಕ್ಟ್ರಮ್ ಅಂಡ್ ಡೀಕೇಸ್ ಇನ್ ದಿ ಫ್ರೇಮ್ವರ್ಕ್ ಆಫ್ ಕ್ವಾರ್ಕ್ ಮೋಡೆಲ್ಸ್’ ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಈ ಪದವಿ ಲಭಿಸಿದೆ.

ಕಾಲೇಜಿನ ಪ್ರಾಂಶುಪಾಲರಾದ ರೆ. ಡಾ. ಆಂಟನಿ ಪ್ರಕಾಶ್ ಮೊಂತೇರೊ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಭೌತಶಾಸ್ತ್ರ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ. ಕೆ. ಬಿ. ವಿಜಯಕುಮಾರ್ ಅವರ ಮಾರ್ಗದರ್ಶನದಲ್ಲಿ ಸೈದ್ಧಾಂತಿಕ ಸಂಶೋಧನೆ ನಡೆಸಿರುವ ಇವರು, ಭೌತಶಾಸ್ತ್ರ ವಿಷಯದಲ್ಲಿ NET ಹಾಗೂ KSET ಅರ್ಹತೆ ಕೂಡ ಪಡೆದಿದ್ದಾರೆ.

ಅಂತಾರಾಷ್ಟ್ರೀಯ ಸಂಶೋಧನಾ ನಿಯತಕಾಲಿಕೆಗಳಲ್ಲಿ 6 ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿರುವುದರ ಜೊತೆಗೆ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ 25ಕ್ಕೂ ಹೆಚ್ಚು ಪ್ರಬಂಧಗಳನ್ನು ಮಂಡಿಸಿದ್ದಾರೆ. ಬೆಳ್ತಂಗಡಿ ತಾಲೂಕಿನ ನಾಳದ ಸತೀಶ್ ನಾಯ್ಕ್ ಮತ್ತು ಉಷಾ ದಂಪತಿಯ ಪುತ್ರ.
ಪ್ರಸ್ತುತ ಡಾ.ವಿಪಿನ್ ನಾಯ್ಕ್ ಕಾಲೇಜಿನ ಶೈಕ್ಷಣಿಕ ವಿಭಾಗದ ಉಪಕುಲಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ಹಿತೈಷಿಗಳು ಅಭಿನಂದನೆ ಸಲ್ಲಿಸಿದ್ದಾರೆ.

Continue Reading

Trending

error: Content is protected !!