Mysore
ಆರ್ಥಿಕವಾಗಿ ಹಿಂದುಳಿದ ಅಲ್ಪಸಂಖ್ಯಾತರ ಸರಳ ವಿವಾಹಕ್ಕೆ ಸಹಾಯಧನ ಯೋಜನೆ: ತನ್ವೀರ್ ಸೇಠ್
ಮೈಸೂರು: ಆರ್ಥಿಕವಾಗಿ ಹಿಂದುಳಿದಿರುವ ಅಲ್ಪಸಂಖ್ಯಾತ ಸಮುದಾಯದವರ ಸರಳ ವಿವಾಹಕ್ಕೆ ಪ್ರತಿ ಜೋಡಿಗೆ 50,000 ರೂ. ಸಹಾಯಧನ ನೀಡಲಾಗುವುದು ಎಂದು ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸರಳ ವಿವಾಹದ ಪ್ರೋತ್ಸಾಹ ಧನ ಕಾರ್ಯಕ್ರಮದ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಮೈಸೂರು ಜಿಲ್ಲೆಗೆ 150 ಗುರಿ ನಿಗದಿ ಪಡಿಸಲಾಗಿದ್ದು, ಸರಳ ವಿವಾಹ ಯೋಜನೆಯನ್ನು ಅರ್ಹ ಫಲಾನುಭವಿಗಳನ್ನು ಗುರುತಿಸಬೇಕು ಎಂದರು.
ಅರ್ಜಿ ಸಲ್ಲಿಸುವ ಅಲ್ಪಸಂಖ್ಯಾತ ವಧುವಿಗೆ ಕನಿಷ್ಠ 18 ವರ್ಷದಿಂದ ಗರಿಷ್ಠ 42 ವರ್ಷಗಳು ಹಾಗೂ ವರನಿಗೆ ಕನಿಷ್ಠ 21 ವರ್ಷದಿಂದ ಗರಿಷ್ಠ 45 ವರ್ಷ ವಯಸ್ಸಾಗಿರಬೇಕು. ಯಾವುದೇ ಬಾಲ್ಯವಿವಾಹಕ್ಕೆ ಆಸ್ಪದ ಕೊಡದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಿ ಯೋಜನೆಯನ್ನು ಅನುಷ್ಠಾನಗೊಳಿಸಬೇಕು ಎಂದರು.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಈ ಯೋಜನೆಗಾಗಿ ಫಲಾನುಭವಿಗಳನ್ನು ಗುರುತಿಸಲು ಹೆಚ್ಚಿನ ಶ್ರಮ ವಹಿಸಿ ಕೆಲಸ ನಿರ್ವಹಿಸಬೇಕು. ತಂದೆ ಅಥವಾ ತಾಯಿ ಇಲ್ಲದ ವಧುವನ್ನು ಗುರುತಿಸಿ ಸರಳ ವಿವಾಹ ಯೋಜನೆಯ ಸವಲತ್ತು ಒದಗಿಸಿದರೆ ಯೋಜನೆ ಹೆಚ್ಚಿನ ಸಾರ್ಥಕತೆ ಪಡೆಯುತ್ತದೆ ಎಂದರು.
ಅಲ್ಪಸಂಖ್ಯಾತ ಸಮುದಾಯದಡಿ ಬರುವ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ದ, ಸಿಖ್ ಹಾಗೂ ಪಾರ್ಸಿ ಅವರಿಗೆ ಸರಳ ವಿವಾಹ ಯೋಜನೆಯಡಿ ಗುರಿ ನಿಗದಿ ಮಾಡಿ ಅರ್ಜಿ ಆಹ್ವಾನಿಸಿ ಹೆಚ್ಚಿನ ಪ್ರಚಾರ ನೀಡಿ ಕೆಲವು ಸಮುದಾಯದಿಂದ ಅರ್ಜಿ ಬರದೇ ಇದ್ದಲ್ಲಿ ನಂತರ ಬೇರೆ ಸಮುದಾಯಕ್ಕೆ ಹೆಚ್ಚುವರಿಯಾಗಿ ನೀಡುವುದು ಉತ್ತಮ ಎಂದರು.
ಸರಳ ವಿವಾಹ ಯೋಜನೆಯಡಿ ಅರ್ಜಿ ಸ್ವೀಕೃತಿಯಾದ ನಂತರ ವಧು ಹಾಗೂ ವರ ನೀಡಿರುವ ವಯಸ್ಸಿನ ದಾಖಲಾತಿಗಳನ್ನು ಪರಿಶೀಲಿಸಿ ಹಾಗೂ ಅವರು ವಾಸವಿರುವ ಸ್ಥಳ ಭೀಟಿ ಮಾಡಿ ವರನಿಗೆ ಜೀವಂತ ಪತ್ನಿ ಹಾಗೂ ವಧುವಿಗೆ ಜೀವಂತ ಪತಿ ಇಲ್ಲದಿರುವುದನ್ನು ಖಾತ್ರಿ ಪಡಿಸಿಕೊಂಡು ನಂತರ ಯೋಜನೆಯ ಸೌಲಭ್ಯ ಒದಗಿಸಿಕೊಡಿ ಎಂದರು.
ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಜಿ ಮಾತನಾಡಿ, ವಯೋಮಿತಿಯ ಬಗ್ಗೆ ಪರಿಶೀಲಿಸುವಾಗ ಕಡ್ಡಾಯವಾಗಿ ಎಸ್.ಎಸ್.ಎಲ್.ಸಿ ಅಂಕಪಟ್ಟಿ ಅಥವಾ ಜನನ ಪ್ರಮಾಣ ಪತ್ರದ ಮೂಲಕ ಮಾಡಿ. ವಿವಾಹದ ನೋಂದಣಿಗೆ ನೋಂದಣಾಧಿಕಾರಿಗಳ ಕಚೇರಿಯೊಂದಿಗೆ ಸಮನ್ವಯ ಸಾಧಿಸಿ ವಿವಾಹದ ಸಂದರ್ಭದಲ್ಲಿ ನೊಂದಣಿಗೆ ಕ್ರಮ ಕೈಗೊಳ್ಳಿ ಎಂದರು.
ಸಭೆಯಲ್ಲಿ ಮೈಸೂರು ಮಹಾನಗರ ಪಾಲಿಕೆಯ ಆಯುಕ್ತ ಶೇಖ್ ತನ್ವೀರ್ ಅಸೀಫ್, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಶಿಲ್ಪಾ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕಿ ಎಸ್.ಎಚ್ ನಿರ್ಮಲಾ ಸೇರಿದಂತೆ ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
Mysore
ಬ್ಯಾಳಾರು ಗ್ರಾಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ರವರ 69ನೇ ಪರಿನಿರ್ವಾಣ ದಿನಾಚರಣೆ
ವರದಿ: ಮಹದೇವಸ್ವಾಮಿ ಪಟೇಲ್
ನಂಜನಗೂಡು: ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಸಲಾಗುತ್ತದೆ ಇದನ್ನು ತಡೆಗಟ್ಟಲು ಸಂಘಟನೆ ಬಹು ಮುಖ್ಯ ಪಾತ್ರವಹಿಸುತ್ತದೆ ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಮಲ್ಲಹಳ್ಳಿ ನಾರಾಯಣ್ ಹೇಳಿದರು.
ನಂಜನಗೂಡು ತಾಲೂಕಿನ ಬ್ಯಾಳಾರು ಗ್ರಾಮದಲ್ಲಿ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಇವರ ವತಿಯಿಂದ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ರವರ 69ನೇ ಪರಿನಿರ್ವಾಣ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.
ಡಾ.ಬಿ.ಆರ್. ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಅವರು, ದಲಿತರ ಬೀದಿಗಳಲ್ಲಿ ಹಬ್ಬ ಹರಿ ದಿನಗಳು, ಜಾತ್ರೆಗಳು ಹೆಚ್ಚಾಗಿ ನಡೆಯುತ್ತಿವೆ. ಇದರಿಂದ ಕೋಮುವಾದ ಮನೆ ಮನಗಳಿಗೆ ಹೋಗುತ್ತಿದೆ. ಬಾಬಾ ಸಾಹೇಬರು ಹೇಳಿರುವ ಹಾಗೆ ನಮ್ಮ ಮಕ್ಕಳಿಗೆ ಶಿಕ್ಷಣ ನೀಡಿ, ವೈಚಾರಿಕ ಮನೋಭಾವನೆಯನ್ನು ಬೆಳೆಸಬೇಕು. ಆದರೆ ಮೂಢನಂಬಿಕೆ ಕಡೆ ನಾವು ಸಾಗುತ್ತಿದ್ದೇವೆ ಎಂದರು.

ಅಂಬೇಡ್ಕರ್ ಅವರಿಗೆ ನಾವು ದ್ರೋಹ ಮಾಡುತ್ತಿದ್ದೇವೆ. ನಾವು ಇಂದು ಬದುಕುತ್ತಿರುವ ಹೈಟೆಕ್ ಜೀವನ ಅಂಬೇಡ್ಕರ್ ಅವರ ಶ್ರಮ ಮತ್ತು ಅವರ ಮಕ್ಕಳ ಸಮಾಧಿಗಳ ಮೇಲೆ ನಾವು ಸುಂದರವಾದ ಬದುಕನ್ನು ಕಟ್ಟಿಕೊಂಡಿದ್ದೇವೆ ಹೊರತು ನಮ್ಮ ಶ್ರಮದಿಂದಲ್ಲ. ಅಂಬೇಡ್ಕರ್ ರವರ ಋಣದಲ್ಲಿ ಪ್ರತಿಯೊಂದು ಸಮಾಜವು ಬದುಕುತ್ತಿದೆ. ಸ್ವಾತಂತ್ರ್ಯ ಬಂದು 78 ವರ್ಷಗಳು ಕಳೆಯುತ್ತಿದ್ದರು ಶೋಷಿತರಿಗೆ ಉದ್ಯೋಗ, ಶಿಕ್ಷಣ ಗುಣಮಟ್ಟ ಸುಧಾರಣೆ ಕಂಡಿಲ್ಲ. ಈ ದೇಶದ ಸಂವಿಧಾನವನ್ನು ನಾಶ ಮಾಡುವ ಹುನ್ನಾರ ನಡೆಯುತ್ತಿದೆ. ಮೂರ್ತಿಗಳಿಂದ ಅಂಬೇಡ್ಕರ್ ಅವರು ಜೀವಂತವಾಗಿದ್ದಾರೆ. ನಮಗೆ ಅವರು ಸ್ಪೂರ್ತಿಯಾಗಬೇಕು ಎಂದು ತಿಳಿಸಿದರು.
ನಂತರ ದಸಂಸ ತಾಲ್ಲೂಕು ಸಂಚಾಲಕ ಗಟ್ಟವಾಡಿ ಮಹೇಶ್ ಮಾತನಾಡಿ, ಅಂಬೇಡ್ಕರ್ ಅವರ ಹೆಸರು ಹೇಳುವುದೇ ರೋಮಾಂಚನ ಉಂಟು ಮಾಡುತ್ತದೆ. ಸಮಾನತೆ ದೃಷ್ಟಿಯಲ್ಲಿ ಸಂವಿಧಾನ ರಚಿಸಿದ ಮಹಾನ್ ಚೇತನ. ನಾವೆಲ್ಲರೂ ಜೀವನದಲ್ಲಿ ಅವರ ಚಿಂತನೆ ಅಳವಡಿಸಿಕೊಳ್ಳಬೇಕಿದೆ.ಅಂಬೇಡ್ಕರ್ ಎಂದರೆ ಬರೀ ವ್ಯಕ್ತಿಯಲ್ಲ. ಅವರು ಮಹಾನ್ ಶಕ್ತಿ. ಧ್ಯೇಯ, ತತ್ವವೇ ಅಂಬೇಡ್ಕರ್ ಆಗಿದ್ದಾರೆ. ದೇಶದ ಅಖಂಡತೆಗೆ ಅವರ ಸೇವೆ ಅನನ್ಯವಾದುದು. ಅವರನ್ನು ಕೇವಲ ಶೋಷಿತ ವರ್ಗದ ನಾಯಕರು ಎಂದು ಭಾವಿಸುವಂತಿಲ್ಲ. ಅವರು ಸಮಾಜದ ಎಲ್ಲ ವರ್ಗಗಳ ನಾಯಕರಾಗಿದ್ದಾರೆ ಎಂದು ಹೇಳಿದರು.

ಇನ್ನೂ ದಸಂಸ ಅಂಬೇಡ್ಕರ್ ವಾದ ಸಂಘಟನೆಗೆ ನೊಂದಣಿ ಮಾಡಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ದಸಂಸ ಜಿಲ್ಲಾ ಸಂಚಾಲಕ ಮಲ್ಲಹಳ್ಳಿ ನಾರಾಯಣ್, ತಾಲ್ಲೂಕು ಸಂಚಾಲಕ ಗಟ್ಟವಾಡಿ ಮಹೇಶ್, ಉಪವಿಭಾಗೀಯ ಸಂಚಾಲಕ ಸಿದ್ದರಾಜು, ಕ್ರಾಂತಿಕಾರಿ ಹೋರಾಟಗಾರ ಮೂಡಹಳ್ಳಿ ಪ್ರಸಾದ್, ಮಲ್ಲಹಳ್ಳಿ ಆದರ್ಶ್, ಬಸವಟ್ಟಿಗೆ ಕೃಷ್ಣಮೂರ್ತಿ, ಹೂವಯ್ಯ, ಸುರೇಶ್, ಬ್ಯಾಳಾರು ಆನಂದ್, ಅನಿಲ್, ನಾರಾಯಣ ಸ್ವಾಮಿ, ಬಸವರಾಜು, ಶಾಂತಮ್ಮ, ಕಾವೇರಿ ಸೇರಿದಂತೆ ಹಲವರು ಭಾಗವಹಿಸಿದ್ದರು.
Mysore
ಅದ್ದೂರಿಯಾಗಿ ಜರುಗಿದ ಶ್ರೀ ಶ್ರೀಕಂಠೇಶ್ವರ ಸ್ವಾಮಿಯವರ ತೆಪ್ಪೋತ್ಸವ
ನಂಜನಗೂಡು: ದಕ್ಷಿಣ ಕಾಶಿ ಎಂದೇ ಹೆಸರುವಾಸಿಯಾಗಿರುವ ನಂಜನಗೂಡಿನ ಶ್ರೀ ಶ್ರೀಕಂಠೇಶ್ವರ ಸ್ವಾಮಿಯವರ ದೇವಾಲಯದಲ್ಲಿ ಡಿ. 4 ರಂದು ಗುರುವಾರ ನಡೆದ ಚಿಕ್ಕ ಜಾತ್ರಾ ಮಹೋತ್ಸವದ ಅಂಗವಾಗಿ ಇಂದು ಶನಿವಾರ ಶ್ರೀ ಶ್ರೀಕಂಠೇಶ್ವರ ಸ್ವಾಮಿಯವರ ತೆಪ್ಪೋತ್ಸವವು ಸಂಜೆ ಕಪಿಲಾ ನದಿಯಲ್ಲಿ ಸಡಗರ ಸಂಭ್ರಮ ಹಾಗೂ ಶ್ರದ್ದಾ ಭಕ್ತಿಯಿಂದ ನಡೆಯಿತು.

ಬಣ್ಣ ಬಣ್ಣದ ಹೂವು ಹಾಗೂ ಚಿನ್ನ ವಜ್ರಾಭರಣಗಳಿಂದ ಅಲಂಕೃತಗೊಂಡ ಶ್ರೀ ಪಾರ್ವತಿ ಸಮೇತ ಶ್ರೀ ಶ್ರೀಕಂಠೇಶ್ವರ ಸ್ವಾಮಿ ಅವರ ಉತ್ಸವ ಮೂರ್ತಿಯನ್ನು ದೇವಾಲಯದಿಂದ ಹೊರ ತಂದು ಕಪಿಲಾ ನದಿ ತೀರದ ಸ್ನಾನ ಘಟ್ಟದ ಬಳಿ ಇರುವ ಮಂಟಪದಲ್ಲಿರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಬಳಿಕ ಮಂಗಳವಾದ್ಯಗಳೊಂದಿಗೆ ಉತ್ಸವ ಮೂರ್ತಿಗಳನ್ನು ಬಣ್ಣ ಬಣ್ಣದ ಹೂವು ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾದ ತೇಲುವ ದೇವಾಲಯದ ಮಾದರಿಯಲ್ಲಿ ನಿರ್ಮಿಸಲಾದ ಯಾಂತ್ರಿಕ ದೋಣಿಯಲ್ಲಿ ಕೂರಿಸಿ ತೆಪ್ಪೋತ್ಸವ ನಡೆಸಲಾಯಿತು.

ಕಪಿಲಾ ನದಿಯಲ್ಲಿ ಪೂರ್ವ ಪಶ್ಚಿಮಾಭಿಮುಖವಾಗಿ ಮೂರು ಬಾರಿ ಚಲಿಸುವ ಮೂಲಕ ಭಕ್ತರಿಗೆ ದರ್ಶನ ನೀಡಿ ಭಕ್ತರ ಮನಸೂರೆಗೊಂಡಿತು. ತೆಪ್ಪೋತ್ಸವದ ಎಲ್ಲಾ ಧಾರ್ಮಿಕ ಕಾರ್ಯಗಳು ದೇವಾಲಯದ ಪ್ರಧಾನ ಆಗಮಿಕರಾದ ಶ್ರೀ ನಾಗಚಂದ್ರ ದೀಕ್ಷಿತ್ ಅವರ ಆಚಾರ್ಯತ್ವದಲ್ಲಿ ನಡೆಯಿತು.
ನಂಜನಗೂಡು ನಗರವು ಸೇರಿದಂತೆ ವಿವಿಧ ಕಡೆಯಿಂದ ಬಂದ ಸಾವಿರಾರು ಭಕ್ತರು ಶ್ರೀ ಶ್ರೀಕಂಠೇಶ್ವರ ಸ್ವಾಮಿ ಅವರ ತೆಪ್ಪೋತ್ಸವವನ್ನು ಕಣ್ತುಂಬಿಕೊಂಡು ತಮ್ಮ ಭಕ್ತಿ ನಮನ ಸಲ್ಲಿಸಿದರು.

ನಂತರ ತಪೋತ್ಸವದಿಂದ ಹೊರ ತಂದ ಶ್ರೀ ಅವರ ಉತ್ಸವ ಮೂರ್ತಿಯನ್ನು ಸಣ್ಣ ರಥದಲ್ಲಿ ಕೂರಿಸಿ ಪಟ್ಟಣದ ರಥ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಿಗಿ ಬಂದೋಬಸ್ತ್ ವಹಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್ ಕುಮಾರ್, ಸೇರಿದಂತೆ ದೇವಾಲಯದ ಅರ್ಚಕ ವೃಂದದವರು ಉಪಸ್ಥಿತರಿದ್ದರು.
Mysore
ಕಳಲೆ ಗ್ರಾಮದಲ್ಲಿ ನೂತನ ಗ್ರಾಮ ಪಂಚಾಯಿತಿ ಕಟ್ಟಡ ಉದ್ಘಾಟಿಸಿದ ಶಾಸಕ ದರ್ಶನ್ ಧ್ರುವನಾರಾಯಣ್
ವರದಿ: ಮಹದೇವಸ್ವಾಮಿ ಪಟೇಲ್
ನಂಜನಗೂಡು: ತಾಲೂಕಿನ ಕಳಲೆ ಗ್ರಾಮದಲ್ಲಿ 75 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಗ್ರಾಮ ಪಂಚಾಯತಿ ಕಾರ್ಯಾಲಯವನ್ನು ಇಂದು ಶಾಸಕ ದರ್ಶನ್ ಧ್ರುವನಾರಾಯಣ್ ಟೇಪ್ ಕತ್ತರಿಸುವ ಮೂಲಕ ಉದ್ಘಾಟಿಸಿದ್ದಾರೆ.

ನಂತರ ಶಾಸಕರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಅವರು, ಮೊದಲ ಬಾರಿಗೆ ಕ್ಷೇತ್ರಕ್ಕೆ ಬಂದಾಗ ಕಳಲೆ ಗ್ರಾಮದಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಅಂತಹ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನದ ಅಡಿಯಲ್ಲಿ ಗ್ರಾಮದ ಅಭಿವೃದ್ಧಿಗೆ ಎರಡು ಕೋಟಿ ರೂ. ಅನುದಾನವನ್ನು ನೀಡಿದ್ದರು.
ಈ ಗ್ರಾಮದಲ್ಲಿ ಹತ್ತು ಸಾವಿರ ಜನರು ವಾಸ ಇದ್ದೀರಾ. ಮೂಲಸೌಕರ್ಗಳನ್ನು ಆಗಬೇಕಾಗಿರುವುದನ್ನು ತಿಳಿಸಿದ್ದೀರಾ , ಹಂತ ಹಂತವಾಗಿ ಕೆಲಸಗಳನ್ನು ಮಾಡುತ್ತೇನೆ ಸಹಕಾರ ಕೊಡಿ ಅಂತ ತಿಳಿಸಿದರು.

ಗ್ರಾಮದಲ್ಲಿ ಗರಡಿ ಮನೆ ಪೂಜೆಯಾಗಿ ಕೆಲಸ ಪ್ರಾರಂಭ ಆಗಿಲ್ಲ ಅಂತ ತಿಳಿಸಿದ್ದೀರಾ, ಈಗಾಗಲೇ ಅಧ್ಯಕ್ಷರು ನನ್ನ ಬಳಿ ಮಾತನಾಡಿ ಗ್ರಾಮದ ಯಜಮಾನರು ಒಪ್ಪುತ್ತಿಲ್ಲ ಆದ್ದರಿಂದ ಲೇಟಾಗಿದೆ ಅಂತ ತಿಳಿಸಿದ್ರು, ಅಧ್ಯಕ್ಷರು ಒಂದು ವಾರ ಗಡುವು ಸಮಯ ತೆಗೆದುಕೊಂಡಿದ್ದಾರೆ. ಒಂದು ವಾರ ನಂತರ ಕೆಲಸ ಪ್ರಾರಂಭವಾಗಲಿಲ್ಲ ಅಂದರೆ ನನಗೆ ಫೋನ್ ಮಾಡಿ ಎಂದು ಕ್ರೀಡಾ ಪೈಲ್ವಾನ್ಗಳಿಗೆ ಕಿವಿ ಮಾತು ಹೇಳಿದರು.

ಗ್ರಾಮದಲ್ಲಿ ದೇವಸ್ಥಾನದ ಅಭಿವೃದ್ಧಿ, ಮತ್ತು ರಸ್ತೆ ಅಭಿವೃದ್ಧಿಗಳು, ವೈದ್ಯರ ಸಮಸ್ಯೆ , ಇತರೆ ಮೂಲ ಸೌಕರ್ಸೌಯ ಲಭ್ಯಗಳ ಬಗ್ಗೆ ತಿಳಿಸಿದ್ದೀರಾ. ಇವೆಲ್ಲ ಕೆಲಸಗಳನ್ನು ಮಾಡಿಸಿಕೊಡುತ್ತೇನೆ ಸಹಕಾರ ಸಮಯ ಕೊಡಿ ಎಂದರು.
ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಮ್ಮ ಕ್ಷೇತ್ರಕ್ಕೆ 50 ಕೋಟಿ ನೀಡುತ್ತಾರೆ. ನಿಮ್ಮ ಗ್ರಾಮಕ್ಕೂ ಅನುದಾನ ನೀಡಿ ಹಂತ ಹಂತವಾಗಿ ಕೆಲಸಗಳನ್ನು ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದರು.

ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಮಾತನಾಡಿ, ಕಳಲೆ ಗ್ರಾಮ ಒಂದು ಇತಿಹಾಸ ಇದೆ. ಶ್ರೀಕಂಠೇಶ್ವರ ಸ್ವಾಮಿಯ ದೇವಸ್ಥಾನಕ್ಕಿಂತ ಮುಂಚೆ ಕಳಲೆ ಗ್ರಾಮದಲ್ಲಿ ಚೋಳರ ಕಾಲದಲ್ಲಿ ದೇವಸ್ಥಾನ ಸ್ಥಾಪನೆಯಾಗಿದ್ದು, ಕಡಲೆಪುರಿ, ಮತ್ತು ಹಳೆಯ ಹೆಸರು ವೇಣುಪುರಿ ಎಂದು ಕರೆಯುತ್ತಿದ್ದರು. ಈ ಗ್ರಾಮದಲ್ಲಿ 19 ಸಮುದಾಯದ ಜನಾಂಗ ಸಮರಸ್ಯದಿಂದ ಇದ್ದಾರೆ. ಈ ಗ್ರಾಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೇವಸ್ಥಾನ ಉದ್ಘಾಟನೆ ಕಾರ್ಯಕ್ರಮದಲ್ಲಿ ಎರಡು ಕೋಟಿ ಅನುದಾನವನ್ನು ನೀಡಿದ್ದರೂ. ಅದರಲ್ಲಿ ಹಲವು ರಸ್ತೆಗಳು ಪೂರ್ಣಗೊಂಡಿವೆ. ಇನ್ನು ಅಭಿವೃದ್ಧಿ ಆಗುವ ಕೆಲಸಗಳನ್ನು ಮುಂದಿನ ತಿಂಗಳು ಜನವರಿ 26ರಂದು ಪಂಚಾಯಿತಿಯಲ್ಲಿ ಶಾಸಕರ ನೇತೃತ್ವದಲ್ಲಿ ಜನಸ್ಪಂದನ ಕಾರ್ಯಕ್ರಮ ಮಾಡಿ ಕೆಲವು ಅಭಿವೃದ್ಧಿಗಳಿಗೆ ಪೂಜೆ ಕಾರ್ಯಕ್ರಮವನ್ನು ನೆರವೇರಿಸಲಾಗಿದೆ ಅಂತ ಭರವಸೆ ನೀಡಿದರು.
ಗ್ರಾಮ ಪಂಚಾಯಿತಿ ಸದಸ್ಯ ಮಹೇಶ್ ಮಾತನಾಡಿ, ಈ ದಿವಸ ನಮ್ಮ ಗ್ರಾಮದಲ್ಲಿ ನೂತನ ಗ್ರಾಮ ಪಂಚಾಯಿತಿ ಕಾರ್ಯಾಲಯ ಉದ್ಘಾಟನೆ ಆಗಿರೋದು ತುಂಬಾ ಸಂತೋಷಕರ ವಿಷಯವಾಗಿದೆ. ಹಿಂದೆ ಕಟ್ಟಡ ಇಲ್ಲದೆ ಯಾವುದೇ ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ. ನಮ್ಮ ಪಕ್ಷದ ಯುವ ಶಾಸಕರ ಬಳಿ ಹೇಳಿದ ಮೇಲೆ 75 ಲಕ್ಷ ಅನುದಾನ ನೀಡಿದರು. ಈ ಕೆಲಸ ಆರೇ ತಿಂಗಳಲ್ಲಿ ಪೂರ್ಣಗೊಳಿಸಿ ಶಾಸಕ ಉದ್ಘಾಟನೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಗ್ರಾಮದ ಎಲ್ಲಾ ಕೆಲಸಗಳಿಗೂ ಸ್ಪಂದಿಸುತ್ತಾರೆ ಸಹಕಾರ ನೀಡಿ ಎಂದರು.

ಈ ವೇಳೆ ಮಾಜಿ ಶಾಸಕರಾದ ಕಳಲೆ ಕೇಶವಮೂರ್ತಿ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಲತಾ ಡಿ. ಮಹೇಶ್ , ಉಪಾಧ್ಯಕ್ಷರಾದ ಹರೀಶ್ , ಇಒ ಜೆರಾಲ್ಡ್ ರಾಜೇಶ್ , ಸದಸ್ಯರಾದ ಮಹೇಶ್, ಶಿವಣ್ಣ , ಸುಮಾ, ಲಕ್ಷ್ಮೀ , ಶಿವಕುಮಾರಿ, ರಾಜಮ್ಮ , ವಿಶಾಲಾಕ್ಷಮ್ಮ , ಶಾಂತಮ್ಮ , ರತ್ನಮ್ಮ, ಗೀತಾ, ಶಿವರಾಮ್, ಶಿವಕುಮಾರ್, ಮುಖಂಡರಾದ ಎನ್ ಮಹದೇವು, ಬೈರ ನಾಯಕ, ಕೆ. ಡಿ ಮಂಜು ರವರು, ದೊರೆಸ್ವಾಮಿ ನಾಯಕ , ಮಂಜುನಾಥ್, ಪ್ರದೀಪ್, ರಾಚ ನಾಯಕ, ಕಳಲೆ ರಾಜೇಶ್, ಸೇರಿದಂತೆ ಹಲವು ಮುಖಂಡರು, ಅಧಿಕಾರಿಗಳು, ಗ್ರಾಮಸ್ಥರು ಹಾಜರಿದ್ದರು.
-
State16 hours agoಡಿವೈಡರ್ಗೆ ಕಾರ್ ಡಿಕ್ಕಿ, ಹೊತ್ತಿ ಉರಿದ ಕಾರಿನೊಳಗೆ ಲೋಕಾಯುಕ್ತ ಇನ್ಸ್ಪೆಕ್ಟರ್ ಸಜೀವ ದಹನ
-
Hassan13 hours agoನಗರದ ಇಂಜಿನಿಯರ್ ಕಾಲೇಜು ಆವರಣದಲ್ಲಿ ಸರ್ಕಾರಿ ಸೇವೆಗಳ ಸಮರ್ಪಣ ಸಮಾವೇಶ
-
Hassan16 hours agoಅಂಬೇಡ್ಕರ್ ತತ್ತ್ವ, ಸಿದ್ಧಾಂತಗಳು ಶಾಶ್ವತ: ಸಂಸದ ಶ್ರೇಯಸ್ ಪಟೇಲ್
-
Mandya11 hours agoಡಾ.ಬಿ.ಆರ್.ಅಂಬೇಡ್ಕರ್ ರವರ 69ನೇ ಪರಿನಿರ್ವಾಣ ದಿನ: ಮಾಲಾರ್ಪಣೆ ಮಾಡಿದ ಕೇಂದ್ರ ಸಚಿವ ಎಚ್ಡಿಕೆ
-
Chikmagalur19 hours agoಬ್ಯಾನರ್ ತೆರವು ವಿಚಾರಕ್ಕೆ ಕಾಂಗ್ರೆಸ್ ಕಾರ್ಯಕರ್ತನ ಹ*ತ್ಯೆ
-
Hassan17 hours agoಸಿಎಂ, ಡಿಸಿಎಂ ಇಂದು ಹಾಸನ ಜಿಲ್ಲಾ ಪ್ರವಾಸ
-
Mysore16 hours agoಡ್ರೋನ್ ಕ್ಯಾಮರದ ರೆಕ್ಕೆ ತಗಲಿ ಶಾಸಕ ಅನಿಲ್ ಚಿಕ್ಕಮಾದು ಮುಖಕ್ಕೆ ಗಾಯ
-
Mysore10 hours agoಡಿ.14ರಂದು ‘ಮೈಸೂರು ಭವಿಷ್ಯದ ಅಭಿವೃದ್ಧಿ’ ಸಾರ್ವಜನಿಕ ಸಂವಾದ
