Connect with us

Mandya

ಡಾ.ಬಿ.ಆರ್.ಅಂಬೇಡ್ಕರ್ ರವರ 69ನೇ ಪರಿನಿರ್ವಾಣ ದಿನ: ಮಾಲಾರ್ಪಣೆ ಮಾಡಿದ ಕೇಂದ್ರ ಸಚಿವ ಎಚ್‌ಡಿಕೆ

Published

on

ಮಂಡ್ಯ : ಭಾರತ ರತ್ನ, ಸಂವಿಧಾನ ಶಿಲ್ಪಿ, ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ರವರ 69ನೇ ಪರಿನಿರ್ವಾಣ ದಿನದ ಅಂಗವಾಗಿ ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗದ ಉದ್ಯಾನವನದಲ್ಲಿರುವ ಡಾ. ಬಿ.ಆರ್.ಅಂಬೇಡ್ಕರ್ ರವರ ಪ್ರತಿಮೆಗೆ ಕೇಂದ್ರ ಸರ್ಕಾರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಸಚಿವ ಹೆಚ್. ಡಿ ಕುಮಾರಸ್ವಾಮಿ ಅವರು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್ ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಶ್ರೀನಿವಾಸ್, ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಕಾವ್ಯಶ್ರೀ, ಮಾಜಿ ಶಾಸಕರುಗಳಾದ ಡಾ.ಅನ್ನದಾನಿ, ಡಿ.ಸಿ.ತಮ್ಮಣ್ಣ, ಪಿ.ಇ.ಟಿ ಸಂಸ್ಥೆಯ ಅಧ್ಯಕ್ಷರಾದ ಕೆ.ಎಸ್ ವಿಜಯಾನಂದ, ಸುರೇಶ್ ಗೌಡ, ನಗರಸಭಾ ಆಯುಕ್ತರಾದ ಯು.ಪಿ ಪಂಪಶ್ರೀ, ಸಣ್ಣ ಕೈಗಾರಿಕೆಗಳ ರಾಜ್ಯ ಉಪಾಧ್ಯಕ್ಷರಾದ ವಿಜಯಲಕ್ಷ್ಮಿ ರಘುನಂದನ್, ಮಾಜಿ ವಿಧಾನ ಪರಿಷತ್ ಸದಸ್ಯರಾದ ಕೆ.ಟಿ ಶ್ರೀಕಂಠೇಗೌಡ, ಜೆ.ಡಿ.ಎಸ್ ಪಕ್ಷದ ಜಿಲ್ಲಾಧ್ಯಕ್ಷ ಡಿ.ರಮೇಶ, ನಗರ ಸಭೆಯ ಮಾಜಿ ಅಧ್ಯಕ್ಷ ಕೆ.ನಾಗೇಶ್, ಮುಖಂಡರುಗಳಾದ ಸುರೇಶ್, ಸಾತನೂರು ಜಯರಾಂ, ಪುಟ್ಟಸ್ವಾಮಿ, ನವೀನ್, ಹೆಚ್. ಎಂ ಬಸವರಾಜು ಪದ್ಮಾವತಿ, ವಿಜಯಕುಮಾರ್ ನಿರ್ಮಲ, ಸುಷ್ಮಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Continue Reading

Mandya

ಮಂಡ್ಯ ಇತಿಹಾಸದಲ್ಲಿ ಮೈಶುಗರ್‌ ಶಾಲೆಗೆ ವಿಶೇಷ ಸ್ಥಾನವಿದೆ : ಎಲ್ಲರೂ ಸೇರಿ ಶಾಲೆ ಉಳಿಸೋಣ – ಹೆಚ್‌ಡಿಕೆ

Published

on

ಮಂಡ್ಯ: ಸುಮಾರು ಹದಿನೈದು ತಿಂಗಳಿಂದ ವೇತನ ಸಿಗದೇ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಇಲ್ಲಿನ ಮೈಶುಗರ್‌ ಶಾಲೆಯ ಶಿಕ್ಷಕರ ಬಾಕಿ ವೇತನಕ್ಕಾಗಿ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು, ತಮ್ಮ ಸಂಸದರ ವೇತನವನ್ನೇ ನೀಡಿದರು.

ಈ ಮೊದಲು ನೀಡಿದ್ದ ಭರವಸೆಯಂತೆ ಶನಿವಾರ ಬೆಳಗ್ಗೆ ಶಾಲೆಗೆ ಭೇಟಿ ನೀಡಿದ ಸಚಿವರು, 19,94,200 ಮೊತ್ತದ ಚೆಕ್‌ ಅನ್ನು ಶಾಲೆಯ ಆಡಳಿತ ಮಂಡಳಿಗೆ ಹಸ್ತಾಂತರ ಮಾಡಿದರು.

ಈ ಸಂದರ್ಭದಲ್ಲಿ ಶಿಕ್ಷಕರು ಸಚಿವರಿಗೆ ಧನ್ಯವಾದ ಹೇಳಿದರು. ಇದಕ್ಕೆ ಸ್ಪಂದಿಸಿದ ಸಚಿವರು, ವೇತನವಿಲ್ಲದೆ ಕೆಲಸ ಮಾಡುವುದು ಕಷ್ಟ. ನೀವು ನೋವು ನನಗೆ ಅರ್ಥವಾಗಿದೆ. ಹೀಗಾಗಿ ನಿಮ್ಮ ಕಷ್ಟಕ್ಕೆ ಸ್ಪಂದಿಸುತ್ತೇನೆ ಎಂದು ಮಾತು ಕೊಟ್ಟಿದ್ದೆ. ನಿಮಗೆ ಕೊಟ್ಟ ಮಾತು ಉಳಿಸಿಕೊಂಡಿದ್ದೇನೆ ಎಂದು ತಿಳಿಸಿದರು.

 

ಇದು ಐತಿಹಾಸಿಕ ಶಾಲೆ. ಮಂಡ್ಯದ ಇತಿಹಾಸದಲ್ಲಿ ಈ ಶಾಲೆಗೂ ಒಂದು ಸ್ಥಾನವಿದೆ. ಹೀಗಾಗಿ ಶಾಲೆ ಸಂಕಷ್ಟಕ್ಕೆ ಸಿಲುವುದು ನನಗೆ ಇಷ್ಟವಿಲ್ಲ. ಈ ಶಾಲೆಯನ್ನು ಉಳಿಸುವ ಬಗ್ಗೆ ರಾಜ್ಯ ಸರ್ಕಾರಕ್ಕೂ ಮನವಿ ಮಾಡುತ್ತೇನೆ. ಪಿಯುಸಿವರೆಗೆ ಈ ಶಾಲೆಯಲ್ಲಿ ಶಿಕ್ಷಣ ದೊರೆಯಲಿ. ನಾನು ಕೂಡ ಶಾಲೆಯ ಉಳಿವಿಗೆ ಕೈ ಜೋಡಿಸುತ್ತೇನೆ. ಆದಿಚುಂಚನಗಿರಿ ಶ್ರೀಗಳೊಂದಿಗೂ ಈ ಬಗ್ಗೆ ಮಾತಾಡಿದ್ದೇನೆ. ಒಂದೇ ರಾತ್ರಿಯಲ್ಲಿ ಅಭಿವೃದ್ಧಿ ಮಾಡುತ್ತೇನೆ ಎಂದು ನಾನು ಹೇಳಲ್ಲ. ಹಂತ ಹಂತವಾಗಿ ಶಾಲೆಯ ಅಭಿವೃದ್ಧಿ ಮಾಡೋಣ. ಈ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡಲಿ ಎಂದು ಕೇಳುತ್ತೇನೆ. ಮಂಡ್ಯದಲ್ಲಿ ಮೈಶುಗರ್ ಶಾಲೆಯೇ ನಂಬರ್ ಓನ್ ಶಾಲೆ ಆಗಿರಬೇಕು ಎಂಬುದು ನನ್ನ ಆಶಯವಾಗಿದೆ ಎಂದು ಕೇಂದ್ರ ಸಚಿವರು ಹೇಳಿದರು.

ಶಿಕ್ಷಕರ ಕಷ್ಟ ತಿಳಿದು ನಾನು ಬಹಳ ನೊಂದಿದ್ದೆ. 15 ತಿಂಗಳಿಂದ ಸಂಬಳ ಇಲ್ಲದೇ ಕೆಲಸ ಮಾಡುವುದು ಎಂದರೆ ಸುಲಭವಲ್ಲ. ಆ ಸಂಕಷ್ಟದ ಕಾಲದಲ್ಲಿಯೂ ಅವರು ಮಕ್ಕಳಿಗೆ ವಿದ್ಯೆ ಕಲಿಸಿದ್ದಾರೆ. ಹೀಗಾಗಿ ಎಲ್ಲಾ ಶಿಕ್ಷಕರಿಗೆ ಅಭಿನಂದನೆ ಹೇಳುತ್ತೇನೆ ಎಂದು ಸಚಿವರು ಹೇಳಿದರು.

ಶಾಲೆ ಅಭಿವೃದ್ಧಿ ಎಲ್ಲರ ಕರ್ತವ್ಯ. ನನ್ನ ಕೈಲಾದದ್ದನ್ನು ನಾನು ಮಾಡುತ್ತೇನೆ. ಮಕ್ಕಳ ಅನುಕೂಲಕ್ಕೆ ಎರಡು ಶಾಲಾ ಬಸ್ ಬೇಕು ಎಂದು ಮನವಿ ಮಾಡಿದ್ದಾರೆ. ಮೈಶುಗರ್ ಶಾಲೆಯಲ್ಲಿ ಎಲ್‌ಕೆಜಿಯಿಂದ ಪಿಯುವರೆಗೆ ಉಚಿತ ಶಿಕ್ಷಣ ನೀಡಲು ಹೇಳಿದ್ದೇನೆ. ಈ ಬಗ್ಗೆ ಚುಂಚನಗಿರಿ ಶ್ರೀಗಳ ಬಳಿ ಮನವಿ ಮಾಡಿದ್ದೇನೆ. ಅವರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸಂಸತ್‌ ಕಲಾಪ ಮುಗಿದ ಬಳಿಕ ಶ್ರೀಗಳ ಮಾರ್ಗದರ್ಶನದಲ್ಲಿ ಚರ್ಚೆ ಮಾಡುತ್ತೇವೆ. ಕಾಂಗ್ರೆಸ್ ನಾಯಕರಿಗೂ ಈ ಬಗ್ಗೆ ಹೇಳುತ್ತೇನೆ. ಶಾಲೆ ವಿಷಯದಲ್ಲಿ ರಾಜಕೀಯ ಮಾಡುವ ಅವಶ್ಯಕತೆ ಇಲ್ಲ. ಮೈಶುಗರ್ ಶಾಲೆ ಉಳಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಕೇಂದ್ರ ಸಚಿವರು ಪ್ರತಿಪಾದಿಸಿದರು.

ರಾಜ್ಯ ಸರ್ಕಾರದ ಬಗ್ಗೆ ನಾನು ಚರ್ಚೆ ಮಾಡಲ್ಲ:

ರಾಜ್ಯ ಕಾಂಗ್ರೆಸ್‌ ಸರ್ಕಾರದ ಬಗ್ಗೆ ನಾನು ಈಗ ಚರ್ಚೆ ಮಾಡಲ್ಲ. ನೆರೆ ರಾಜ್ಯದ ರಾಜ್ಯಪಾಲರು ಕಾರ್ಕಳಕ್ಕೆ ಬಂದಿದ್ದರು. ಆಗ ವಕೀಲ ಹೆಣ್ಣುಮಕ್ಕಳು ಶೌಚಾಲಯ ಕಟ್ಟಲು ಒಂದು ಕೋಟಿ ಕೇಳಿದ್ದೆ. ರಾಜ್ಯ ಸರ್ಕಾರ ಒಂದು ವರ್ಷದಿಂದ ಹಣವನ್ನು ಕೊಟ್ಟಿಲ್ಲ. ನಿಮ್ಮ ಕಾಲದಲ್ಲಿ ಕೇಳಿದಾಗ ಎಲ್ಲಾ ಕೊಟ್ಟಿದ್ದೀರಾ ಎಂದರು. ಇಂದು ಹಾಸನದಲ್ಲಿ ದೊಡ್ಡ ಜಾಹಿರಾತು ಕೊಟ್ಟಿದ್ದಾರೆ. ನಮ್ಮ ಕಾಲದಲ್ಲಿ ಬಿಡುಗಡೆಯಾದ ಹಣದ ಕಾಮಗಾರಿಗೆ ಟೇಪ್ ಕಟ್ ಮಾಡಲು ಹೋಗಿದ್ದಾರೆ. ಈ‌ ಸರ್ಕಾರದ ಮೇಲೆ ಟೀಕೆ ಮಾಡಲು ಸರ್ಕಾರ ಜನರ ನಂಬಿಕೆಯನ್ನು ಉಳಿಸಿಕೊಂಡಿಲ್ಲ. ಕೇಂದ್ರ ಸರ್ಕಾರ ಮೇಲೆ ಕೇವಲ ರಾಜಕೀಯಕ್ಕಾಗಿ ಟೀಕೆ ಮಾಡುತ್ತಿದ್ದಾರೆ. ಅದು ಬೇಕಿಲ್ಲ. ನಮ್ಮನ್ನು ಪ್ರಧಾನಮಂತ್ರಿಗಳ ಮುಂದೆ ನಿಲ್ಲಬೇಕು ಅಂತಾರೆ. ಮೊದಲು ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ ಎಂದು ಕುಮಾರಸ್ವಾಮಿ ಅವರು ತರಾಟೆಗೆ ತೆಗೆದುಕೊಂಡರು.

ಎಂಎಸ್‌ಪಿ ಬೆಲೆ ನಿಗದಿ ವಿಚಾರದಲ್ಲಿ ಉಂಟಾಗಿರುವ ಸಮಸ್ಯೆಯನ್ನು ರಾಜ್ಯ ಸರಕಾರ ಬಗೆಹರಿಸಿಕೊಳ್ಳಲಿ. ಮೊದಲು ನೀವು ಖರೀದಿ ಕೇಂದ್ರ ತೆರೆಯಿರಿ. ಆ ಬಳಿಕ ಕೇಂದ್ರವನ್ನು ಕೇಳಿ. ಎಂಎಸ್‌ಪಿ ಬೆಲೆಯನ್ನು ಕಾರ್ಯರೂಪಕ್ಕೆ ತರುವುದು ರಾಜ್ಯದ ಕರ್ತವ್ಯ. ಇವರು ಕೇಂದ್ರ ಸರ್ಕಾರ ಅನುದಾನ ಪಡೆಯಲು ಕೋರ್ಟ್‌ಗೆ ಹೋಗಬೇಕು ಅಂತಾರೆ. ನಾನು ಸಿಎಂ ಆಗಿದ್ದಾಗ ಕೋರ್ಟ್‌ಗೆ ಹೋಗಲಿಲ್ಲ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ 4.5 ಸಾವಿರ ಕೋಟಿ ಸಾಲವನ್ನು ನಾನು ತೀರಿಸಿದ್ದೇನೆ. ನನ್ನ ಕಾಲದ ಸಾಲವನ್ನು ಇವರೇನು ತೀರಿಸಿಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.

ವಾಚ್ ಹೇಗೆ ಖರೀದಿ ಮಾಡಿದ್ದಾರೆ ಎನ್ನೋದೇ ಮುಖ್ಯ:

ಸಿಎಂ, ಡಿಸಿಎಂ ಅವರಿಬ್ಬರೂ ಎಷ್ಟು ಲಕ್ಷ ಬೆಲೆ ವಾಚ್ ಕಟ್ಟಿದ್ದಾರೆ ಎನ್ನೋದು ಮುಖ್ಯವಲ್ಲ. ವಾಚ್‌ನ್ನು ಹೇಗೆ ಖರೀದಿ ಮಾಡಿದ್ದಾರೆ ಎನ್ನೋದೇ ಮುಖ್ಯ. ಅವರ ದುಡಿಮೆ ದುಡ್ಡಿನಲ್ಲಿ ಖರೀದಿ ಮಾಡಿದ್ದಾರಾ ಹೇಗೆ ಎನ್ನೋದು ಮುಖ್ಯ ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಕೇಂದ್ರ ಸಚಿವರು ಉತ್ತರಿಸಿದರು.

ಉಪ ಲೋಕಾಯುಕ್ತರು ಹೇಳಿಕೆಗೆ ಸೀಮಿತವಾಗಿದ್ದಾರೆ:

ಸರಕಾರಿ ಇಲಾಖೆಗಳಲ್ಲಿ 63% ಭ್ರಷ್ಟಾಚಾರ ಆರೋಪ ಮಾಡಿರುವ ಉಪ ಲೋಕಾಯುಕ್ತರ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸಚಿವರು; ಉಪ ಲೋಕಾಯುಕ್ತರಿಗೆ ಒಂದ್ ನಮಸ್ಕಾರ. ಉಪ ಲೋಕಾಯುಕ್ತರಾಗಿ ಅವರು ಏನ್ ಕೆಲಸ ಮಾಡ್ತಿದ್ದಾರೆ? ಅವರ ಜವಬ್ದಾರಿ ಏನು? ಮಾಧ್ಯಮ ಮುಂದೆ ಹೇಳಿಕೆ ನೀಡಲಷ್ಟೇ ಅವರಿಗೆ ಅಧಿಕಾರ ನೀಡಲಾಗಿದೆಯಾ? ಇಲ್ಲಾ ದಾಖಲೆಗಳನ್ನ ಸಂಗ್ರಹಿಸಿ ಕ್ರಮ ತೆಗೆದುಕೊಳ್ಳಲಿಕ್ಕೆ ಅಧಿಕಾರ ನೀಡಲಾಗಿದೆಯಾ? ಯಾರ ಕಾಲದಲ್ಲಿ ಭ್ರಷ್ಟಾಚಾರ ನಡೆಯುತ್ತಿತ್ತು ಅನ್ನೋದು ಬೇರೆ ಚರ್ಚೆ. ಭ್ರಷ್ಟಾಚಾರ ಗೊತ್ತಿದ್ದೂ ಉಪ ಲೋಕಾಯುಕ್ತರು ಹೇಳಿಕೆಗೆ ಸೀಮಿತವಾಗಿದ್ದಾರೆ. ಹೀಗಾದರೆ ಪ್ರಯೋಜನವೇನು? ಎಂದು ಅಭಿಪ್ರಾಯಪಟ್ಟರು.

2019ರ ಭ್ರಷ್ಟಾಚಾರ ಬಗ್ಗೆ ಉಪ ಲೋಕಾಯುಕ್ತರು ಮಾತಾನಾಡಿದ್ದಾರೆಂದು ಸಿಎಂ ಟ್ವಿಟ್ ಮಾಡಿದ್ದಾರೆಂಬ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಅಧಿಕಾರಕ್ಕೆ ಬಂದು 3 ವರ್ಷ ಆಗಿದೆ. ಈ ಮೂರು ವರ್ಷದ ಆಡಳಿತ ಎಷ್ಟು ಪರಿಶುದ್ಧ, ಪಾರದರ್ಶಕವಾಗಿದೆ ಎಂಬ ಬಗ್ಗೆ ವರದಿ ಮಾಡಿಸಲಿ ಎಂದು ಒತ್ತಾಯಿಸಿದರು.

Continue Reading

Mandya

ತಂಬಾಕು ಮುಕ್ತ ಗ್ರಾಮಕ್ಕಾಗಿ ಸಂಕಲ್ಪ

Published

on

ಶ್ರೀರಂಗಪಟ್ಟಣ : ತಾಲೂಕಿನ ತರಿಪುರ ಗ್ರಾಮವನ್ನು ತಂಬಾಕು ಮುಕ್ತ ಗ್ರಾಮವನ್ನಾಗಿಸಲು ಆಯ್ಕೆ ಮಾಡಿದ್ದು, ಇದಕ್ಕಾಗಿ ಗ್ರಾಮದ ಮುಖಂಡರ ಹಾಗೂ ಸಾರ್ವಜನಿಕರ ಸಹಕಾರ ಅಗತ್ಯವಾಗಿ ಬೇಕು ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಬೆನ್ನೂರ್ ಹೇಳಿದರು.

ಅವರು ತಾಲೂಕಿನ ಮಹದೇವಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ತರಿಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆರೋಗ್ಯ ಇಲಾಖೆ ವತಿಯಿಂದ ತಂಬಾಕು ಮುಕ್ತ ಯುವ ಅಭಿಯಾನ 3.0 ಕಾರ್ಯಕ್ರಮಡಿಯಲ್ಲಿ ತರಿಪುರ ಗ್ರಾಮವನ್ನು ತಂಬಾಕು ಮುಕ್ತ ಗ್ರಾಮವನ್ನಾಗಿಸಲು ಆಯೋಜಿಸಿದ್ದ ಪೂರ್ವಭಾವಿ ಸಭೆ ಉದ್ದೇಶಿಸಿ ಮಾತನಾಡಿದರು.

ತಂಬಾಕು ಮುಕ್ತ ಹಳ್ಳಿ ಅಭಿಯಾನವು ಸಾರ್ವಜನಿಕರ ಆರೋಗ್ಯ ಸುಧಾರಣೆಗಾಗಿ, ಸಮುದಾಯದ ಸಹಭಾಗಿತ್ವದೊಂದಿಗೆ ತಂಬಾಕಿನಿಂದ ಮುಕ್ತವಾದ ವಾತಾವರಣ ನಿರ್ಮಿಸುವ ಗುರಿ ಹೊಂದಲಾಗಿದೆ ಜತೆಗೆ ತಂಬಾಕಿನಿಂದಾಗುವ ಕ್ಯಾನ್ಸರ್, ಹೃದಯ ಸಂಬಂಧಿ ರೋಗಗಳು ಮತ್ತು ಇತರ ಆರೋಗ್ಯ ಸಮಸ್ಯೆಗಳ ಬಗ್ಗೆ ಜನರಿಗೆ ತಿಳಿಸುವುದು ಸೇರಿದಂತೆ ಕೋಟ್ಪ ಕಾಯ್ದೆ ಜಾರಿ ಮತ್ತು ತಂಬಾಕು ವ್ಯಸನ ಮುಕ್ತ ಕೇಂದ್ರಗಳ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡುವುದು ಒಳಗೊಂಡಿದೆ ಇದಕ್ಕಾಗಿ ಗ್ರಾಮದ ಎಲ್ಲ ಮುಖಂಡರು,ಯುವಕ ಮಿತ್ರರರು, ಸಾರ್ವಜನಿಕರು ಸಹಕರಿಸಿ ತಂಬಾಕು ಮುಕ್ತ ಗ್ರಾಮವನ್ನಾಗಿಸಲು ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಬೇಕೆಂದು ಸಲಹೆ ನೀಡಿದರು.

ನಂತರ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಎನ್.ಕೃಷ್ಣೇಗೌಡ ಮಾತನಾಡಿ, ಗ್ರಾಮದಲ್ಲಿರುವ ಎಲ್ಲಾ ಅಂಗಡಿ ಮಾಲೀಕರು ತಂಬಾಕು ಮುಕ್ತ ಗ್ರಾಮವನ್ನು ಘೋಷಿಸಲು ಸಹಕರಿಸಬೇಕೆಂದರು. ಗ್ರಾ.ಪಂ. ಅಧ್ಯಕ್ಷರು ಹಾಗೂ ಸದಸ್ಯರು ಮುಕ್ತ ಮನಸ್ಸಿನಿಂದ ಈ ಕಾರ್ಯಕ್ರಮಕ್ಕೆ ಸಹಕರಿಸುವುದಾಗಿ ತಿಳಿಸಿದರು.

ನಂತರ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ಮೋಹನ್ ಪ್ರತಿಜ್ಞಾವಿಧಿ ಬೋಧಿಸಿದರು. ಸದರಿ ಪೂರ್ವ ಭಾವಿ ಸಭೆಯಲ್ಲಿ ಗ್ರಾ. ಪಂ. ಅಧ್ಯಕ್ಷೆ ಪ್ರೇಮ,ಸದಸ್ಯೆ ಸುಗುಣ, ಮಾಜಿ ಸದಸ್ಯೆ ರೂಪ,ಕಾರ್ಯದರ್ಶಿ ಕೃಷ್ಣಪ್ಪ ,ಬಿಲ್ ಕಲೆಕ್ಟರ್ ಸುಭಾಷ್, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶಶಿಕಲಾ,ಅಂಗನವಾಡಿ ಕಾರ್ಯಕರ್ತೆ ಯಶೋಧ,ಆಶಾ ಕಾರ್ಯಕರ್ತೆ ಲಕ್ಷ್ಮಿ, ನಂದಿನಿ,ಪೂರ್ಣಿಮಾ ಹಾಗೂ ಸ್ತ್ರೀಶಕ್ತಿ ಸಂಘದ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Continue Reading

Mandya

ಡಿ.7 ರಂದು ದೆಹಲಿಯಲ್ಲಿ ಕುವೆಂಪು ಅವರ ಸಾಧನೆ ಮತ್ತು ಕೊಡುಗೆ ವಿಚಾರ ಸಂಕಿರಣ: ಎಚ್.ಕೆ.ರಾಮು

Published

on

ಮಂಡ್ಯ: ಕುವೆಂಪು ವಿಶ್ವಮಾನವ ಕ್ಷೇಮಾಭಿವೃದ್ಧಿ ಟ್ರಸ್ಟ್-ಮೈಸೂರು ವತಿಯಿಂದ ದೆಹಲಿ ಕರ್ನಾಟಕ ಸಂಘ ದೆಹಲಿ ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರಕವಿ ಕುವೆಂಪು ಅವರ ‘ಸಾಧನೆ ಮತ್ತು ಕೊಡುಗೆ ‘ಕುರಿತ ವಿಚಾರ ಸಂಕಿರಣ ದೆಹಲಿ ಕರ್ನಾಟಕ ಸಂಘದ ಸಭಾಂಗಣದಲ್ಲಿ ನಡೆಯಲಿದೆ ಎಂದು ಟ್ರಸ್ಟ್ ಅಧ್ಯಕ್ಷ ಎಚ್.ಕೆ. ರಾಮು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ. 17 ರ ಬುಧವಾರ ಒಂದು ದಿನದ ವಿಚಾರ ಸಂಕಿರಣ ಏರ್ಪಡಿಸಿದ್ದು ಅಂದು ಬೆಳಿಗ್ಗೆ 11 ಗಂಟೆಗೆ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ವಿಚಾರ ಸಂಕಿರಣ ಉದ್ಘಾಟಿಸಲಿದ್ದು, ಬೇಲಿ ಮಠದ ಶಿವಾನುಭವ ಚರಮೂರ್ತಿ ಶಿವರುದ್ರ ಸ್ವಾಮೀಜಿ, ಕೆಂಗೇರಿ ವಿಶ್ವ ಒಕ್ಕಲಿಗರ ಮಠದ ಪೀಠಾಧ್ಯಕ್ಷ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸುವರು.

ಮುಖ್ಯಮಂತ್ರಿ ಸಿದ್ದರಾಮಯ್ಯ ರಾಷ್ಟ್ರಕವಿ ಕುವೆಂಪುರವರ ಭಾವಚಿತ್ರ ಅನಾವರಣಗೊಳಿಸಿ ‘ಶ್ರೀ ರಾಮಾಯಣ ದರ್ಶನಂ’ ನ ಹಿಂದಿ ಆವೃತ್ತಿಯನ್ನು ಬಿಡುಗಡೆ ಮಾಡುವರು ಎಂದರು.


ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೇಂದ್ರದ ಕಾರ್ಮಿಕ ಮತ್ತು ಉದ್ಯೋಗ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಸಚಿವ ಜಿ.ಟಿ.ದೇವೇಗೌಡ, ವಿಶ್ರಾಂತ ಕುಲಪತಿ ಡಾ.ಕೆ.ಎಸ್.ರಂಗಪ್ಪ, ಎಂ.ಎ.ಶೇಖರ್, ಜಯರಾಂ ರಾಯಪುರ, ಸಿ.ಸೋಮಶೇಖರ್ ಮುಂತಾದವರು ಭಾಗವಹಿಸಲಿದ್ದು ಟ್ರಸ್ಟ್ ಅಧ್ಯಕ್ಷ ಹೆಚ್.ಕೆ.ರಾಮು ಅಧ್ಯಕ್ಷತೆ ವಹಿಸುವರು.

ಸಂಜೆ 3.30 ಕ್ಕೆ ನಡೆಯುವ ಸಮಾರೋಪ ಸಮಾರಂಭದ ದಿವ್ಯ ಸಾನಿಧ್ಯವನ್ನು ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ರಾಮಕೃಷ್ಣ ಆಶ್ರಮದ ಅಧ್ಯಕ್ಷ ಮುಕ್ತಿದಾನಂದ ಜಿ ಮಹಾರಾಜ್, ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಂಜಾವಧೂತ ಸ್ವಾಮೀಜಿ, ಮಾದಾರ ಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದು ಮಾಜಿ ಪ್ರಧಾನಮಂತ್ರಿ ಹಾಗೂ ರಾಜ್ಯಸಭಾ ಸದಸ್ಯ ಎಚ್.ಡಿ.ದೇವೇಗೌಡ ಉದ್ಘಾಟಿಸಲಿದ್ದಾರೆ. ರಾಷ್ಟ್ರಕವಿ ಕುವೆಂಪು ಅವರ ಸಾಹಿತ್ಯ ಅವಲೋಕನದ ತ್ರಿ ರಂಗ ಕೃತಿಯನ್ನು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ. ಎಲ್.ಸಂತೋಷ್ ಬಿಡುಗಡೆ ಮಾಡುವರು.

ಮುಖ್ಯ ಅತಿಥಿಗಳಾಗಿ ಕೇಂದ್ರ ಸರ್ಕಾರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಸಚಿವರಾದ ಎಚ್.ಡಿ. ಕುಮಾರಸ್ವಾಮಿ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ ಜೋಶಿ, ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರಸಿಂಗ್ ಶೆಖಾವತ್, ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ,ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ಭಾಗವಹಿಸುವರು.

ವಿಶೇಷ ಆಹ್ವಾನಿತರಾಗಿ ಸಾಹಿತಿಗಳಾದ ಡಾ.ಚಂದ್ರಶೇಖರ ಕಂಬಾರ, ಡಾ.ಹಂಪ ನಾಗರಾಜಯ್ಯ, ಸಿಪಿಕೆ ಸಂಸದರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ತೇಜಸ್ವಿ ಸೂರ್ಯ, ಡಾ||ಸಿ.ಎನ್.ಮಂಜುನಾಥ್, ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಮಾಧವ ಕೌಶಿಕ್, ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ಸಿ.ಎಂ.ನಾಗರಾಜು ಭಾಗವಹಿಸಲಿದ್ದು ಟ್ರಸ್ಟ್ ಅಧ್ಯಕ್ಷ ಎಚ್.ಕೆ.ರಾಮು ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.

ಮೈಸೂರು ವಿವಿ ಪ್ರಸಾರಾಂಗದ ನಿವೃತ್ತ ನಿರ್ದೇಶಕ ಸಿ.ನಾಗಣ್ಣ ಅವರು ಕುವೆಂಪು ಸಾಹಿತ್ಯದ ವಿಸ್ತಾರ ಹಾಗೂ ಕುವೆಂಪುರವರ ವ್ಯಕ್ತಿತ್ವದ ಬಗ್ಗೆ ಮಾತನಾಡಿ, ಇಂತಹ ಮೇರು ವ್ಯಕ್ತಿತ್ವದ ಕುವೆಂಪು ರವರಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕೆಂದು ಮನವಿ ಮಾಡಿದರು.

ಗೋಷ್ಠಿಯಲ್ಲಿ ಕರ್ನಾಟಕ ಸಂಘದ ಅಧ್ಯಕ್ಷ ಬಿ.ಜಯಪ್ರಕಾಶಗೌಡ, ಪ್ರಸಾರಾಂಗದ ನಿವೃತ್ತ ನಿರ್ದೇಶಕ ಕೆ.ಟಿ. ವೀರಪ್ಪ, ನೇಗಿಲ ಯೋಗಿ ಅಧ್ಯಕ್ಷ ಎ.ಸಿ.ರಮೇಶ್, ಕೆ.ಟಿ.ಚಂದ್ರು ಇದ್ದರು.

Continue Reading

Trending

error: Content is protected !!