Kodagu
ಡಾ.ಬಿ.ಆರ್.ಅಂಬೇಡ್ಕರ್ ಜೀವನ ಸಾಧನೆಗಳನ್ನು ಅಧ್ಯಯನ ಮಾಡಿ: ವೆಂಕಟ್ ರಾಜಾ
ಮಡಿಕೇರಿ : ಡಾ.ಬಿ.ಆರ್.ಅಂಬೇಡ್ಕರ್ ಅವರ ಮೌಲ್ಯ, ಜೀವನ ಸಾಧನೆಗಳನ್ನು ಅಧ್ಯಯನ ಮಾಡುವಂತಾಗಬೇಕು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಹೇಳಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ 69ನೇ ‘ಪರಿನಿರ್ವಾಣ ದಿನ’ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಅವರು ಮಾತನಾಡಿದರು.

ಡಾ.ಬಿ.ಆರ್.ಅಂಬೇಡ್ಕರ್ ಅವರು ದೇಶ ವಿದೇಶಗಳಲ್ಲಿ ಹಲವು ಸ್ನಾತಕೋತ್ತರ ಪದವಿ ಪಡೆದು ರಾಷ್ಟ್ರಕ್ಕೆ ಒಳ್ಳೆಯ ಸಂವಿಧಾನ ನೀಡಿದ್ದಾರೆ. ಅವರ ಜೀವನ ಸಂದೇಶಗಳನ್ನು ತಿಳಿದುಕೊಳ್ಳುವಂತಾಗಬೇಕು ಎಂದರು.
ದೇಶ ವಿದೇಶಗಳಲ್ಲಿ ಅಂಬೇಡ್ಕರ್ ಅವರ ಅಧ್ಯಯನ ಕೇಂದ್ರಗಳು ಹಾಗೂ ಸಂಶೋಧನಾ ಕೇಂದ್ರಗಳು ಇವೆ. ಇಡೀ ಪ್ರಪಂಚದಲ್ಲಿಯೇ ಅವರು ಅಜರಾಮರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಅವರು ಸ್ಮರಿಸಿದರು.

ದೇಶ ವಿದೇಶಗಳಲ್ಲಿಯೂ ಸಹ ಅವರ ಪ್ರತಿಮೆಯನ್ನು ಕಾಣಬಹುದಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ಅಧ್ಯಯನಶೀಲತೆ ಮತ್ತು ಸಾಮಾಜಿಕ ಹೋರಾಟ ರಾಷ್ಟ್ರದಲ್ಲಿ ಒಂದು ರೀತಿ ಮಹಾನ್ ಕ್ರಾಂತಿ ಎಂದು ಜಿಲ್ಲಾಧಿಕಾರಿ ಅವರು ವರ್ಣಿಸಿದರು.
ಅಂಬೇಡ್ಕರ್ ಅವರ ಮೌಲ್ಯಗಳು ಹಾಗೂ ಮಾರ್ಗದರ್ಶನದಂತೆ ನಡೆದುಕೊಳ್ಳಬೇಕು. ಅವರು ಬರೆದಿರುವ ಸಂವಿಧಾನವನ್ನು ಸ್ಮರಿಸಿಕೊಂಡು ಅಭಿವೃದ್ಧಿಯತ್ತ ಚಿಂತನೆ ಮಾಡಬೇಕು. ಮುಂದಿನ ಪೀಳಿಗೆಗೆ ಮಾರ್ಗದರ್ಶಕರಾಗಿ ನಡೆದುಕೊಳ್ಳಬೇಕು ಎಂದರು.

ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಎಚ್.ಎಲ್.ದಿವಾಕರ ಅವರು ಮಾತನಾಡಿ, ಸುಮಾರು ಆರು ದಶಕಗಳ ಹೋರಾಟದ ನಂತರ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ನಿರ್ಮಾಣವಾಗುತ್ತಿರುವುದು ಶ್ಲಾಘನೀಯ ಎಂದರು.
ಅಂಬೇಡ್ಕರ್ ಅವರ ಪ್ರತಿಮೆ ನಿರ್ಮಾಣ ಸಂಬಂಧ ಜಿಲ್ಲಾಧಿಕಾರಿ ಅವರು ನುಡಿದಂತೆ ನಡೆದಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.

ಸಂವಿಧಾನ ಶಿಲ್ಪಿ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ನೆರವೇರಿಸಿದರು. ನಗರಸಭೆ ಸದಸ್ಯರಾದ ಎಸ್.ಸಿ.ಸತೀಶ್, ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಸಂಚಾಲಕರಾದ ದೀಪಕ್ ಪೊನ್ನಪ್ಪ, ಪ್ರಮುಖರಾದ ಮೋಹನ್ ಮೌರ್ಯ, ಪ್ರೇಮ್ ಕುಮಾರ್, ರಮೇಶ್, ಸಿದ್ದೇಶ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಶೇಖರ್, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಸಿಬ್ಬಂದಿಗಳು ಇದ್ದರು.
Kodagu
ಏಳನೇ ಹೊಸಕೋಟೆಯಲ್ಲಿ ಕಾಡಾನೆ ಸಾ*ವು
ಸಿದ್ದಾಪುರ : ಸಮೀಪದ ಏಳನೇ ಹೊಸಕೋಟೆ ಗ್ರಾಮದ ತೋಟವೊಂದರಲ್ಲಿ ಕಾಡಾನೆ ಸಾವನ್ನಪ್ಪಿರುವ ಘಟನೆ ಗುರುವಾರ ಬೆಳಕಿಗೆ ಬಂದಿದೆ.
ತೋಟದಲ್ಲಿ ಕಾಡಾನೆ ಮೃತದೇಹ ಕಂಡುಬಂದ ಹಿನ್ನೆಲೆಯಲ್ಲಿ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಮಾಹಿತಿ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಾಡಾನೆಯ ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಪಶುವೈದ್ಯರು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಮರಣೋತ್ತರ ಪರೀಕ್ಷೆ ಕೈಗೊಳ್ಳಲಿದ್ದು, ವರದಿ ಬಂದ ಬಳಿಕ ಸಾವಿನ ಕಾರಣ ಸ್ಪಷ್ಟವಾಗಲಿದೆ ಎಂದು ತಿಳಿದುಬಂದಿದೆ.
ಘಟನೆಯಿಂದ ಸ್ಥಳೀಯರಲ್ಲಿ ಆತಂಕ ಉಂಟಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
Kodagu
ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಖತರ್ ರಾಷ್ಟ್ರೀಯ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ
ನಾಪೋಕ್ಲು : ಕೊಡಗು ಜಿಲ್ಲಾ ಅನಿವಾಸಿಗಳ ಹಿತಕ್ಕಾಗಿ ಸಾಂತ್ವನ ಹಾಗೂ ಜೀವದಯದ ಸರ್ವ ರಂಗಕ್ಕೂ ನೇತೃತ್ವ ವಹಿಸುವ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ (ಕೆಎಸ್ ಡಬ್ಲ್ಯೂ ಎ) ಇದರ ಖತರ್ ರಾಷ್ಟ್ರೀಯ ಸಮಿತಿಯ ವಾರ್ಷಿಕ ಮಹಾ ಸಭೆ ಹಾಗೂ ಈದ್ ಸಂಗಮ ಕಾರ್ಯಕ್ರಮ ಖತ್ತರ್ ದೋಹಾ ಟೆಸ್ಟ್ ವೇ ಹೋಟಲ್ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು.
ಅಬ್ಬಾಸ್ ಸಖಾಫಿ ಬಲಮುರಿಯವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಸಭೆಯಲ್ಲಿ ರಾಷ್ಟ್ರೀಯ ಸಮಿತಿ ಅಧ್ಯಕ್ಷ ರಫೀಕ್ ಮುಸ್ಲಿಯಾರ್ ಕೊಟ್ಟಮುಡಿ ಅಧ್ಯಕ್ಷತೆ ವಹಿಸಿದ್ದರು.

ಯೂಸುಫ್ ಸಖಾಫಿ ಅಯ್ಯಂಗೇರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಂತರ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು.
ಸಲಹಾ ಸಮಿತಿಗೆ ಯೂಸುಫ್ ಸಖಾಫಿ ಅಯ್ಯಂಗೇರಿ ಹಾಗೂ ಹಾಫಿಲ್ ಉಮರ್ ಸಖಾಫಿ ಎಮ್ಮೆಮಾಡು, ಅಧ್ಯಕ್ಷರಾಗಿ ರಫೀಕ್ ಮುಸ್ಲಿಯಾರ್ ಕೊಟ್ಟಮುಡಿ, ಉಪಾಧ್ಯಕ್ಷರಾಗಿ ಕಬೀರ್ ಹಾಜಿ ಮಡಿಕೇರಿ,ಪ್ರಧಾನ ಕಾರ್ಯದರ್ಶಿಯಾಗಿ ಅಬ್ಬಾಸ್ ಸಖಾಫಿ ಬಲಮುರಿ,ಜೊತೆ ಕಾರ್ಯದರ್ಶಿಯಾಗಿ ಅಲಿಚ್ಚು ಎಮ್ಮೆಮಾಡು,ಕೋಶಾಧಿಕಾರಿಯಾಗಿ ಉಸ್ಮಾನ್ ಕತ್ತಣಿ, ಕಾರ್ಯದರ್ಶಿಯಾಗಿ ಹಾರಿಸ್ ಕಿಕ್ಕರೆಯವರನ್ನು ಸಂಘಟನಾ ವಿಭಾಗಕ್ಕೆ ಅಜರುದ್ದೀನ್ ಕೊಂಡಂಗೇರಿ, ದಾವೂದ್ ತಾವೂರ್,ಶಿಕ್ಷಣ ವಿಭಾಗಕ್ಕೆ ರಫೀಕ್ ಗರಗಂದೂರ್, ಉವೈಸ್ ಕಡಂಗ,ಸಾಂತ್ವನ ವಿಭಾಗಕ್ಕೆ ಇಬ್ರಾಹೀಂ ಪಡಿಯಾಣಿ ಅನ್ವರ್ ಕೊಂಡಂಗೇರಿ,ಮಾಧ್ಯಮ ವಿಭಾಗಕ್ಕೆ ನಝೀರ್ ಮೂರ್ನಾಡು ಆಸಿಫ್ ಎಮ್ಮೆಮಾಡು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಯಹ್ಯ ಸಅದಿ ಕಡಂಗ,ಮೊಹಮ್ಮದ್ ಬೇತ್ರಿ,ಬಷೀರ್ ಕತ್ತಣಿ,ಸರೀಜ್ ಗುಂಡಿಗೆರೆಯವರನ್ನು ಆಯ್ಕೆ ಮಾಡಲಾಯಿತು.

ಅಬ್ಬಾಸ್ ಸಖಾಫಿ ಸ್ವಾಗತಿಸಿ,ನಿರೂಪಿಸಿದರು. ಉಬೈಸ್ ಕಡಂಗ ಸರ್ವರನ್ನು ವಂದಿಸಿದರು.
Kodagu
ಸ್ವಾತಂತ್ರ್ಯ ಹೋರಾಟಗಾರ ಕೊಳ್ಳಿಮಾಡ ಕರುಂಬಯ್ಯ ಹೆಸರಿನಲ್ಲಿ ಗೋಣಿಕೊಪ್ಪಲು ಬಸ್ ನಿಲ್ದಾಣ ನಾಮಕರಣ: ಕೋಟೂರಿನ ಜನರ ದಶಕಗಳ ಕನಸು ನನಸು
ಪೊನ್ನಂಪೇಟೆ : ಭಾರತದ ಸ್ವಾತಂತ್ರ್ಯಕ್ಕೆ ಎಂಟು ದಶಕಗಳಿಗಿಂತಲೂ ಹೆಚ್ಚು ಕಾಲ ಕಳೆದ ಬಳಿಕ, ಪೊನ್ನಂಪೇಟೆ ತಾಲೂಕಿನ ಕೋಟೂರು ಗ್ರಾಮದ ಹೆಮ್ಮೆಯ ಸ್ವಾತಂತ್ರ್ಯ ಹೋರಾಟಗಾರ ಹಾಗೂ ತ್ಯಾಗಮೂರ್ತಿಯಾದ ಕೊಳ್ಳಿಮಾಡ ಕರುಂಬಯ್ಯ ಅವರ ಸೇವೆಯನ್ನು ಸ್ಮರಿಸುವ ಮಹತ್ವದ ಹೆಜ್ಜೆಯಾಗಿ ಗೋಣಿಕೊಪ್ಪಲು ಬಸ್ ನಿಲ್ದಾಣಕ್ಕೆ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ.
ಗೋಣಿಕೊಪ್ಪದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಖಾಸಗಿ ಬಸ್ ನಿಲ್ದಾಣಕ್ಕೆ ‘ಕೊಳ್ಳಿಮಾಡ ಕರುಂಬಯ್ಯ ಬಸ್ ನಿಲ್ದಾಣ’ ಎಂದು ಹೆಸರಿಡುವ ಮೂಲಕ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮದೇ ಆದ ಕೊಡುಗೆ ನೀಡಿದ ಈ ಮಹನೀಯರಿಗೆ ಶಾಶ್ವತ ಗೌರವ ಸಲ್ಲಿಸಲಾಗಿದೆ. ಈ ಐತಿಹಾಸಿಕ ನಿರ್ಧಾರದಿಂದ ಕೋಟೂರು ಗ್ರಾಮದ ಜನತೆ ಹಾಗೂ ಕರುಂಬಯ್ಯ ಅವರ ಕುಟುಂಬಸ್ಥರು ಮತ್ತು ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಕಿಗ್ಗಟ್ಟ್ ನಾಡ್ ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಕಾಟಿಮಾಡ ಜಿಮ್ಮಿ ಅಣ್ಣಯ್ಯ ಅವರು, “ನಮ್ಮ ಪ್ರೀತಿಯ ಅಜ್ಜ ಕೊಳ್ಳಿಮಾಡ ಕರುಂಬಯ್ಯ ಅವರ ಹೆಸರನ್ನು ಗೋಣಿಕೊಪ್ಪಲು ಬಸ್ ನಿಲ್ದಾಣಕ್ಕೆ ನಾಮಕರಣ ಮಾಡಿರುವುದು ಅತ್ಯಂತ ಸಂತಸ ಮತ್ತು ಹೆಮ್ಮೆಯ ವಿಷಯವಾಗಿದೆ. ಈ ಮೂಲಕ ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯುವಂತಾಗಿದೆ” ಎಂದು ಹೇಳಿದ್ದಾರೆ.
ಅವರು, “ದೀರ್ಘಕಾಲದಿಂದ ಕೋಟೂರಿನ ಜನರು ಕಂಡಿದ್ದ ಕನಸು ಇದೀಗ ನನಸಾಗಿದೆ. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಸೇವೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಈ ಕ್ರಮ ಶ್ಲಾಘನೀಯವಾಗಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದೇ ಸಂದರ್ಭದಲ್ಲಿ ಈ ಐತಿಹಾಸಿಕ ನಿರ್ಧಾರಕ್ಕೆ ಕಾರಣಕರ್ತರಾದ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರಿಗೆ ಕೃತಜ್ಞತೆ ಸಲ್ಲಿಸಿರುವ ಅವರು, ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆಯನ್ನು ಉಳಿಸುವ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ ಎಂದು ತಿಳಿಸಿದ್ದಾರೆ.
ಕೊಡಗು ಜಿಲ್ಲೆಯ ಕೋಟೂರು ಗ್ರಾಮದ ಹೆಮ್ಮೆಯ ಪುತ್ರರಾದ ಕೊಳ್ಳಿಮಾಡ ಕರಂಬಯ್ಯ ಅವರ ಹೆಸರು ಈಗ ಗೋಣಿಕೊಪ್ಪಲು ಬಸ್ ನಿಲ್ದಾಣದೊಂದಿಗೆ ಶಾಶ್ವತವಾಗಿ ಬೆಸೆದುಕೊಂಡಿದ್ದು, ಅವರ ದೇಶಸೇವೆಯ ಸ್ಮರಣೆ ಮುಂದಿನ ಪೀಳಿಗೆಗಳಿಗೂ ಪ್ರೇರಣೆಯಾಗಲಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
-
Special9 hours agoಮಹಿಳೆಯರಿಗೆ 35 ದಿನಗಳ ಉಚಿತ ಬ್ಯೂಟಿ ಪಾರ್ಲರ್ ತರಬೇತಿ: ಅರ್ಜಿ ಆಹ್ವಾನ!!
-
Politics20 hours agoಕೆಪಿಸಿಸಿ ಅಧ್ಯಕ್ಷರಾಗಿ ಬಿ.ಕೆ. ಹರಿಪ್ರಸಾದ್ ನೇಮಕ
-
State21 hours agoರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಘೋಷಿಸಿದ ಸಿಎಂ ಡಿಕೆಶಿ
-
Hassan3 hours agoಹೃದಯ ಆರೈಕೆಗೆ ಜನಪ್ರಿಯ ಆಸ್ಪತ್ರೆಯ ನೂತನ ಕಾರ್ಡಿಯಾಕ್ ಕೇರ್ ಘಟಕ ಉದ್ಘಾಟನೆ
-
Chikmagalur22 hours agoನ್ಯೂ ವೈಬ್ರೆಂಟ್ ಕಾಲೇಜಿಗೆ ಹೆಮ್ಮೆ: ಜೆಇಇ ಅಡ್ವಾನ್ಸ್ಡ್ 2026ರಲ್ಲಿ ವಿದ್ಯಾರ್ಥಿಗಳ ಭರ್ಜರಿ ಸಾಧನೆ: ಧನುಷ್ ಗುತ್ತಿಗೆ ದೇಶದಲ್ಲಿ 95ನೇ ರ್ಯಾಂಕ್
-
Kodagu2 hours agoಸ್ವಾತಂತ್ರ್ಯ ಹೋರಾಟಗಾರ ಕೊಳ್ಳಿಮಾಡ ಕರುಂಬಯ್ಯ ಹೆಸರಿನಲ್ಲಿ ಗೋಣಿಕೊಪ್ಪಲು ಬಸ್ ನಿಲ್ದಾಣ ನಾಮಕರಣ: ಕೋಟೂರಿನ ಜನರ ದಶಕಗಳ ಕನಸು ನನಸು
-
Politics21 hours agoನೂತನ ಸಿಎಂ, ಡಿಸಿಎಂ ಮತ್ತು ಸಚಿವರಿಗೆ ಅಭಿನಂದನೆ ಸಲ್ಲಿಸಿದ ಸಿದ್ದರಾಮಯ್ಯ
-
Chamarajanagar2 hours agoಹಸುವನ್ನು ಕರೆತರಲು ಹೋದ ಮಹಿಳೆ ಕುಸಿದು ಬಿದ್ದು ಸಾವು
