Connect with us

Mandya

ತಹಶೀಲ್ದಾರ್‌ಗೆ ಚೀಮಾರಿ, ಭಾರಿ ಭೂ ಹಗರಣ ಪ್ರಕರಣಕ್ಕೆ ಹಿಡಿದ ಕೈಗನ್ನಡಿ : ಕೆ.ಅನ್ನದಾನಿ

Published

on

ಮಂಡ್ಯ: ಉಪಲೋಕಾಯುಕ್ತ ನ್ಯಾಯಮೂರ್ತಿಗಳು ತಹಶೀಲ್ದಾರ್‌ಗೆ ಚೀಮಾರಿ ಹಾಕಿರುವುದು ಮಳವಳ್ಳಿ ತಾಲೂಕಿನಲ್ಲಿ ನಡೆದಿರುವ ಭಾರಿ ಭೂ ಹಗರಣ ಪ್ರಕರಣಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಮಾಜಿ ಶಾಸಕ ಕೆ.ಅನ್ನದಾನಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದ ಮಾಜಿ ಶಾಸಕನಾಗಿ ಈ ಸಂಬಂಧ ಸಾಕಷ್ಟು ಬಾರಿ ಕ್ರಮ ವಹಿಸಲು ಮನವಿ ಮಾಡಿದ್ದೆ. ಆದರೆ ಯಾವುದೇ ಕ್ರಮ ಕೈಗೊಳ್ಳದ ಕಾರಣ ಸಿದ್ದಾಚಾರ್ ಅವರ ಮೂಲಕ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದು, ಇದೀಗ ತಾಲೂಕು ಆಡಳಿತ ಭೂಗಳ್ಳರ ಪರವಾಗಿ ಕೆಲಸ ಮಾಡುತ್ತಿರುವುದು ಬೆಳಕಿಗೆ ಬಂದಿದೆ ಎಂದರು.

ಮಳವಳ್ಳಿ ತಾಲೂಕಿನ ಅಭಿವೃದ್ಧಿಗೆ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ನಿರ್ಲಕ್ಷ್ಯ ವಹಿಸಿದ್ದು, ತಾಲೂಕಿನಲ್ಲಿ ಆಡಳಿತ ಯಂತ್ರ ಸಂಪೂರ್ಣ ಕುಸಿತವಾಗಿದ್ದು, ಇಲ್ಲಿನ ಭೂ ಹಗರಣಗಳಿಗೆ ಕುಮ್ಮಕ್ಕು ನೀಡುವಲ್ಲಿ ಮಾತ್ರ ಕೆಲಸ ಮಾಡುತ್ತಿದೆ. ಹಾಲಿ ಶಾಸಕರು ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ಹೇಳಿದರು.

ತಾಲೂಕಿನಲ್ಲಿ ೩೦೫ ಎಕರೆ ಅಕ್ರಮ ಆರ್‌ಟಿಸಿ ವಜಾ ಸಂಬಂಧ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಸಂಬಂಧ ವಿರೋಧ ಪಕ್ಷವಾಗಿ ದೂರಿದ್ದೇನೆ. ಇದೀಗ ಲೋಕಾಯುಕ್ತರು ಚೀಮಾರಿ ಹಾಕಿದ್ದಾರೆ. ಕೂಡಲೇ ಅಕ್ರಮ ಭೂಗಳ್ಳರ ಪರವಾಗಿ ಕೆಲಸ ಮಾಡುವ ಅಧಿಕಾರಿಗಳ ವಿರುದ್ಧ ಕ್ರಮ ವಹಿಸಬೇಕೆಂದು ಒತ್ತಾಯಿಸಿದರು.

ತಾಲೂಕು ಪಂಚಾಯಿತಿಯ ಆಡಳಿತ ನಿಷ್ಕೃಯಗೊಂಡಿದೆ. ಇಓ ಹಾಗೂ ತಾಲೂಕಿನ ಎಲ್ಲ ಆಡಳಿತಾಧಿಕಾರಿಗಳು ಸಾರ್ವಜನಿಕರ ಯಾವುದೇ ಕೆಲಸ ಮಾಡದೇ ಅಭಿವೃದ್ಧಿಯ ಕಡೆ ದಿವ್ಯ ನಿರ್ಲಕ್ಷ್ಯ ತೋರಿದ್ದಾರೆ. ಹಲಗೂರು ಗ್ರಾ.ಪಂ.ನಲ್ಲಂತೂ ಲಕ್ಷಾಂತರ ರೂ ಹಣ ದುರುಪಯೋಗವಾಗಿದೆ. ಎಂದು ಆರೋಪಿಸಿದರು.

ಪುರಸಭೆಯ ಆವರಣದಲ್ಲಿ ನಿರ್ಮಿಸಲಾದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಜಾಗದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗಿಲ್ಲ, ಕೇಂದ್ರ ಸಚಿವರು ನೀಡಿದ ೧೦ ಲಕ್ಷ ರೂ.ಗಳಲ್ಲಿ ಒಂದು ಕಾಪೌಂಡ್ ನಿರ್ಮಾಣವಾಗಿರುವುದು ಬಿಟ್ಟರೆ ಬೇರಾವ ಕೆಲಸಗಳನ್ನು ಮಾಡಲಾಗಿಲ್ಲ. ೪ ವರ್ಷದಿಂದ ಅಭಿವೃದ್ಧಿ ಕಾಣದಿರುವುದಕ್ಕೆ ಹಾಲಿ ಶಾಸಕರ ದಿವ್ಯ ನಿರ್ಲಕ್ಷ್ಯವೇ ಕಾರಣ ಎಂದು ದೂರಿದರು.

ಮಳವಳ್ಳಿ ತಾಲೂಕು ಕಾವೇರಿ ಜಲಾನಯನ ಪ್ರದೇಶದ ಕೊನೆಯ ಭಾಗವಾಗಿದೆ. ಇಲ್ಲಿಗೆ ನೀರು ಒದಗಿಸುವಲ್ಲಿ ಶಾಸಕರು ವಿಫಲರಾಗಿದ್ದಾರೆ. ಈ ಭಾಗದ ಕಾಲುವೆಗಳ ಅವುಗಳ ದುರಸ್ಥಿ ಕಾರ್‍ಯ ಯಾವಾಗ ಆಗುತ್ತವೆ ಎಂಬ ಮಾಹಿತಿಯೂ ರೈತರಿಗೆ ನೀಡದೇ ನೀರನ್ನೂ ಒದಗಿಸದೇ ವಂಚನೆ ಮಾಡಲಾಗುತ್ತಿದೆ. ಜಲಜೀವನ್ ಮಿಷನ್ ಯೋಜನೆಯು ತಾಲೂಕಿನ ಯಾವ ಗ್ರಾಮದಲ್ಲೂ ಜಾರಿಯಾಗಿಲ್ಲ. ಇದಕ್ಕಾಗಿ ರಸ್ತೆ ಅಗೆದಿರುವುದನ್ನು ಸರಿಪಡಿಸಲಾಗಿಲ್ಲ ಎಂದು ಆರೋಪಿಸಿದರು.

ತಾಲೂಕಿನ ಕನಕಭವನ ಮತ್ತು ಬಸವ ಭವನ ನಿರ್ಮಾಣ ಮಾಡುವಲ್ಲಿ ಶಾಸಕರು ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ. ಕಳೆದ ೩ ವರ್ಷಗಳಿಂದ ಕಾಮಗಾರಿ ಆರಂಭ ಮಾಡಲಿಲ್ಲ. ತಾಲೂಕಿನಲ್ಲಿ ಸಿಆರ್‌ಎಸ್ ನಿಧಿಯಿಂದ ೮ ಬಸ್ ನಿಲ್ದಾಣಗಳನ್ನು ಸಂಬಂಧ ಕಾಮಗಾರಿಗೆ ಅಗತ್ಯ ಸಾಮಗ್ರಿಗಳು ರಸ್ತೆಯಲ್ಲಿ ಬಿದ್ದಿವೆ. ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಆಕ್ಷೇಪದಿಂದ ಸ್ಥಗಿತಗೊಂಡಿದೆ. ಆಶ್ರಯ ಬಡಾವಣೆಯ ನಾಮಫಲಕ ಒಡೆದು ಅದರ ಅಭಿವೃದ್ಧಿಗೂ ಅಡ್ಡಗಾಲಿಡುವ ಮೂಲಕ ಹೊಟ್ಟೆಕಿಚ್ಚಿನ ರಾಜಕಾರಣ ಮಾಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.

ಸಮಾಜಿಕ ಸಂಘಟನೆಗಳು, ಸಂಸ್ಥೆಗಳು ಸಾರ್ವಜನಿಕರ ಪರ ಕೆಲಸ ಮಾಡುವ ಸಂಬಂಧ ಪ್ರಶ್ನೆ ಮಾಡಿದರೆ ಸುಮೋಟೊ ಪ್ರಕರಣ ದಾಖಲಿಸುವಂತೆ ಶಾಸಕರು ಹೇಳಿಕೆ ನೀಡಿದ್ದಾರೆ. ತಾಲೂಕಿನಲ್ಲಿ ಸಾರ್ವಜನಿಕರ ಕೆಲಸ ಮಾಡಲು ಅಧಿಕಾರಿಗಳನ್ನು ಪ್ರಶ್ನೆ ಮಾಡುವುದೇ ಅಪರಾಧವಾಗಿದೆ. ಶಾಸಕರು ಈ ಕೂಡಲೇ ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ಜಿ.ಪಂ ಮಾಜಿ ಸದಸ್ಯ ಹನುಮಂತು, ಯುವ ಜೆಡಿಎಸ್ ತಾಲೂಕು ಅಧ್ಯಕ್ಷ ಚಂದಳ್ಳಿ ಶ್ರೀಧರ್, ಸಿದ್ದಾಚಾರ್, ಶಂಕರ್, ಚೇತನ್ ಇದ್ದರು.

Continue Reading

Mandya

ಪ್ರಧಾನ ಮಂತ್ರಿ 15 ಅಂಶಗಳ ಕಾರ್ಯಕ್ರಮ ಅನುಷ್ಠಾನದಲ್ಲಿ ನಿರ್ಲಕ್ಷ್ಯ ಬೇಡ : ಯು. ನಿಸಾರ್ ಅಹಮ್ಮದ್

Published

on

ಮಂಡ್ಯ: ಅಲ್ಪಸಂಖ್ಯಾತರ ಅಭಿವದ್ಧಿಗಾಗಿ ಪ್ರಧಾನಮಂತ್ರಿ ಯವರ 15 ಅಂಶಗಳ ಕಾರ್ಯಕ್ರಮಗಳನ್ನು ಕಾಲಮಿತಿಯೊಳಗೆ ತಲುಪಿಸಬೇಕು ಹಾಗೂ ಕಾರ್ಯಕ್ರಮದ ಪರಿಣಾಮಕಾರಿ ಅನುಷ್ಠಾನಕ್ಕೆ ಎಲ್ಲ ಇಲಾಖೆಯ ಅಧಿಕಾರಿಗಳು ಆದ್ಯತೆ ನೀಡಬೇಕು. ಯೋಜನೆಗಳ ಅನುಷ್ಠಾನದಲ್ಲಿ ಯಾವುದೇ ನಿರ್ಲಕ್ಷ್ಯ ಬೇಡ ಎಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾದ ಯು.ನಿಸಾರ್ ಅಹಮದ್ ಅವರು ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮಕ್ಕೆ ಸಂಬಂಧಿಸಿದ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮವು ಅಲ್ಪಸಂಖ್ಯಾತ ಸಮುದಾಯಗಳಾದ ಮುಸ್ಲಿಂ, ಜೈನ್, ಕ್ರಿಶ್ಚಿಯನ್, ಸಿಖ್, ಪಾರ್ಸಿ ಹಾಗೂ ಬೌದ್ಧ ಸಮುದಾಯಗಳ ಸಮಗ್ರ ಅಭಿವೃದ್ಧಿಗಾಗಿ ರೂಪಿಸಲಾದ ಪ್ರಮುಖ ಯೋಜನೆಯಾಗಿದೆ.

ಅಲ್ಪಸಂಖ್ಯಾತ ಸಮುದಾಯದ 6 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಅಂಗನವಾಡಿ ಪ್ರವೇಶ ಪಡೆಯುತ್ತಾರೆ. ಆದರೆ ಮಕ್ಕಳು ಸೇರಿದ ನಂತರ ಕೆಲವು ತಿಂಗಳ ನಂತರ ಹೊರಗುಳಿಯುತ್ತಾರೆ. ಇದನ್ನು ಗಂಬೀರವಾಗಿ ಪರಿಗಣಿಸಿ ಮಹಿಳಾ ಮತ್ತು ಮಕ್ಕಳ ಇಲಾಖೆಯ ಅಧಿಕಾರಿಗಳು ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಇಲಾಖೆಯ ವತಿಯಿಂದ ಅಲ್ಪಸಂಖ್ಯಾತರು ಹೆಚ್ಚಿರುವ ಬಡಾವಣೆಗಳಲ್ಲಿ ಮನೆ-ಮನೆಗೆ ತೆರಳಿ ಅಂಗನವಾಡಿಯ ಪ್ರಯೋಜನಗಳ ಬಗ್ಗೆ ಪೋಷಕರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಅವರು ತಿಳಿಸಿದರು.

ಮಂಡ್ಯ ಜಿಲ್ಲೆಯಲ್ಲಿ 64 ಅಲ್ಪ ಸಂಖ್ಯಾತ ಅಂಗನವಾಡಿ ಕೇಂದ್ರಗಳು ಇವೆ. ಒಟ್ಟು 4326 ಮಕ್ಕಳು ಅಂಗನವಾಡಿ ಕೇಂದ್ರಕ್ಕೆ ಹಾಜರಾಗುತ್ತಿದ್ದಾರೆ. ಈ ಬಗ್ಗೆ ಅಲ್ಪ ಸಂಖ್ಯಾತರು ಹೆಚ್ಚಿರುವ ಸ್ಧಳಗಳಿಗೆ ಭೇಟಿ ನೀಡಿ ಅಂಗನವಾಡಿ ಕೇಂದ್ರದಿಂದ ಹೊರಗುಳಿಯುವ ಕಾರಣ ತಿಳಿದು ಅದಕ್ಕೆ ಅಗತ್ಯ ಕ್ರಮವಹಿಸಬೇಕು ಎಂದು ಅವರು ತಿಳಿಸಿದರು.

 

ಭವಿಷ್ಯದಲ್ಲಿ ಉತ್ತಮ ಉದ್ಯೋಗಾವಕಾಶವಿರುವ ವೃತ್ತಿ ಆಧಾರಿತ ತರಬೇತಿಗಳನ್ನು ಅರ್ಹರಿಗೆ ನೀಡುವುದರ ಜೊತೆಗೆ ಉದ್ಯೋಗವಕಾಶಗಳ ಬಗ್ಗೆ ಜಾಗೃತಿ ಮೂಡಿಸಿ, ವೃತ್ತಿ ಕೌಶಲ್ಯ ತರಬೇತಿ ನೀಡಿ ಅಲ್ಪಸಂಖ್ಯಾತರು ಮಾತ್ರವಲ್ಲದೆ ಎಲ್ಲ ವರ್ಗದ ಅರ್ಹರಿಗೂ ಉದ್ಯೋಗವಕಾಶಗಳನ್ನು ಒದಗಿಸುವುದು ಅಧಿಕಾರಿಗಳ ಜವಾಬ್ದಾರಿಯಾಗಬೇಕು ಎಂದು ಅವರು ತಿಳಿಸಿದರು.

ಪಿಎಂ ಸ್ವಾನಿಧಿ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳ ಅನುಕೂಲಕ್ಕಾಗಿ ಜಾರಿಗೆ ತಂದಿರುವ ಮೈಕ್ರೋ-ಕ್ರೆಡಿಟ್ (ಕಿರು ಸಾಲ) ಯೋಜನೆಯನ್ನು ಅಲ್ಪಸಂಖ್ಯಾತ ಫಲನುಭವಿಗಳಿಗೆ ತಲುಪಿಸುವ ಕೆಲಸ ಆಗಬೇಕು ಎಂದು ತಿಳಿಸಿದರು.ಕರ್ನಾಟಕ ಸರ್ಕಾರದ ಯುವ ನಿಧಿ ಯೋಜನೆಯ ಬಗ್ಗೆ ಪದವಿ ಹಾಗೂ ಡಿಪ್ಲೋಮ ಪಡೆದ ಅಲ್ಪಸಂಖ್ಯಾತ ನಿರುದ್ಯೋಗಿ ಯುವಕ ಹಾಗೂ ಯುವತಿಯರಿಗೆ ಅರಿವು ಮೂಡಿಸಿ ಈ ಯೋಜನೆಯ ಸದುಪಯೋಗ ಮಾಡಿಕೊಳ್ಳುವಂತೆ ಮಾಡಬೇಕು ಎಂದು ತಿಳಿಸಿದರು.

ಸರ್ಕಾರವು ಅಲ್ಪಸಂಖ್ಯಾತರಿಗೆ (ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಬೌದ್ಧ, ಜೈನ ಮತ್ತು ಪಾರ್ಸಿ) ಸ್ವಯಂ ಉದ್ಯೋಗ ಹಾಗೂ ಉನ್ನತ ಶಿಕ್ಷಣಕ್ಕಾಗಿ ಬ್ಯಾಂಕುಗಳ ಮೂಲಕ ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಸಾಲ ಹಾಗೂ ಸಬ್ಸಿಡಿ ಸೌಲಭ್ಯಗಳನ್ನು ನೀಡುತ್ತಿವೆ. ಈ ಸಂಬಂಧ ಮಂಡ್ಯದಲ್ಲಿ ಶಿಕ್ಷಣಕ್ಕಾಗಿ 477 ಅಲ್ಟಸಂಖ್ಯಾತ ಮಂದಿಗೆ ಸಾಲ ನೀಡಲಾಗಿದೆ ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್ ಅರುಣ ಕುಮಾರ್ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ ಕುಮಾರ ಅವರು ಜಿಲ್ಲೆಯಲ್ಲಿ ಅಲ್ಪಸಂಖ್ಯಾತ ಕಲ್ಯಾಣ ಯೋಜನೆಗಳ ಅನುಷ್ಠಾನ ಹಾಗೂ ಸರ್ಕಾರದ ಸೌಲಭ್ಯಗಳು ಅಲ್ಪಸಂಖ್ಯಾತರಿಗೆ ಸಮರ್ಪಕವಾಗಿ ತಲುಪುತ್ತಿದೆ. ಈ ಸಂಬಂಧ ಅಗತ್ಯ ಕ್ರಮವಹಿಸಲಾಗಿದೆ ಎಂದು ಸಭೆ ತಿಳಿಸಿದರು.

ಮಕ್ಕಳು ಶಾಲೆಯಿಂದ ಹೊರಗುಳಿಯಂದಂತೆ ಹಾಗೂ ಶಿಕ್ಷಣದಿಂದ ವಂಚಿತರಾಗದಂತೆ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ. ಆರ್. ನಂದಿನಿ, ಅಪರ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ರಾಜ್ಯ ಅಲ್ಪಸಂಖ್ಯಾತ ಅಭಿವೃದ್ಥಿ ನಿಗಮದ ವಿಶೇಷ ಕರ್ತವ್ಯಧಿಕಾರಿ ಮುಜಿಬುಲ್ ಜಫಾರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳಾದ ಜಯಣ್ಣ ಹಾಗೂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

Continue Reading

Mandya

ತರಬೇತಿ ಕಾರ್ಯಕ್ರಮವನ್ನು ಸದುಪಯೋಗ ಪಡಿಸಿಕೊಳ್ಳಿ :ಡಾ. ಕುಮಾರ

Published

on

ಮಂಡ್ಯ : ಘನ ತ್ಯಾಜ್ಯವನ್ನು ವೈಜ್ಞಾನಿಕ ವಾಗಿ ವಿಲೇವಾರಿ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಮನೆಗಳಲ್ಲಿ ಹಸಿ ಕಸ, ಒಣ ಕಸ ವಿಂಗಡಣೆ ಮಾಡಬೇಕು ಹಾಗೂ ಇದರ ಬಗ್ಗೆ ಸಾರ್ವಜನಿಕರಿಗೆ ಅರಿವು ಅಗತ್ಯ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ರವರು ತಿಳಿಸಿದರು.

ಮಂಡ್ಯ ವಿಶ್ವ ವಿದ್ಯಾಲಯ ಸಭಾಂಗಣದಲ್ಲಿ ನಡೆದ ಜಿಲ್ಲಾ ನಾಗರಾಭಿವೃದ್ಧಿ ಕೋಶ, ಮಂಡ್ಯ ಮತ್ತು ನಗರಸಭೆ ವತಿಯಿಂದ ಘನ ತ್ಯಾಜ್ಯ ವಸ್ತು ನಿರ್ವಹಣೆ ನಿಯಮಗಳು 2026 ಕುರಿತು ಮಂಡ್ಯ ಜಿಲ್ಲೆಯ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಎಲ್ಲಾ ಪೌರಯುಕ್ತರು, ಮುಖ್ಯಾಧಿಕಾರಿಗಳಿಗೆ ಒಂದು ದಿನದ ಕಾರ್ಯಾಗಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರುಸರ್ವೋಚ್ಚ ನ್ಯಾಯಾಲಯದ 2026 ರ ಹೊಸ ನಿಯಮಗಳ ಅನ್ವಯ ಹಸಿ ಕಸ, ಒಣ ಕಸ, ವಿಶೇಷ ತ್ಯಾಜ್ಯ, ಡೈಪರ್ ತ್ಯಾಜ್ಯ ವಾಗಿ ನಾಲ್ಕು ರೀತಿಯ ವಿಲೇವಾರಿ ಭಾಗಗಳಾಗಿ ರೂಪಿಸಲಾಗಿದ್ದು ಸಾರ್ವಜನಿಕರಲ್ಲಿ 2026 ರ ನಿಯಮಗಳ ಕುರಿತು ಅರಿವು ಮೂಡಿಸುವಂತೆ ಕ್ರಮ ವಹಿಸಬೇಕು ಎಂದು ತಿಳಿಸಿದರು.

ಘನ ತ್ಯಾಜ್ಯಗಳನ್ನು ನಿರ್ಲಕ್ಷಿಸುವುದರಿಂದ ಆರ್ಥಿಕತೆ ಅಷ್ಟೇ ಅಲ್ಲದೇ ಆರೋಗ್ಯದ ಮೇಲೆಯೂ ಪರಿಣಾಮ ಬೀರುತ್ತದೆ. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡಾಗ ಮಾತ್ರ ಮನುಷ್ಯ ಉತ್ತಮ ಆರೋಗ್ಯವನ್ನು ಹೊಂದಲು ಸಾಧ್ಯ. ಸ್ಥಳೀಯ ಸಂಸ್ಥೆಗಳು ಘನತ್ಯಾಜ್ಯಗಳನ್ನು ನಾಲ್ಕು ವಿಧದ ತ್ಯಾಜ್ಯಗಳಾದ ಹಸಿ ತ್ಯಾಜ್ಯ, ಒಣ ತ್ಯಾಜ್ಯ, ಸ್ಯಾನಿಟರಿ ತ್ಯಾಜ್ಯ ಹಾಗೂ ಸ್ಪೆಷಲ್ ಕೇರ್ ತ್ಯಾಜ್ಯಗಳ (ಬಲ್ಬ್ ಗಳು, ಬ್ಯಾಟರಿ, ಅವಧಿ ಮೀರಿದ ಔಷಧಗಳು,ಪೇಂಟ್ ಡಬ್ಬಿಗಳು ಇತ್ಯಾದಿ) ವಿಂಗಡಣೆಯನ್ನು ಮಾಡಿ ಸಂಗ್ರಹಿಸಿ, ಅವುಗಳನ್ನು ಸಾಗಾಣಿಕೆ ಮಾಡಿ ಸಂಸ್ಕರಣೆ ಹಾಗೂ ವಿಲೇವಾರಿಯನ್ನು ವೈಜ್ಞಾನಿಕವಾಗಿ ಮಾಡಬೇಕು ಎಂದು ತಿಳಿಸಿದರು.

ಪ್ರತಿ ಸ್ಥಳೀಯ ಸಂಸ್ಥೆಗಳಲ್ಲಿ 4 ವಿಧಗಳ ತ್ಯಾಜ್ಯ ವಿಂಗಡಣೆಯನ್ನು ಕಡ್ಡಾಯವಾಗಿ ಪಾಲಿಸಬೇಕು. ಇವುಗಳ ಸಂಗ್ರಹಣೆ, ಸಾಗಾಣಿಕೆ ಹಾಗೂ ಸಂಸ್ಕರಣೆ, ವಿಲೇವಾರಿಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕೆಂದು ಸೂಚಿಸಿದರು. ನೂತನ ನಿಯಮ ಉಲ್ಲಂಘನೆ ಮಾಡುವ ವ್ಯಕ್ತಿ, ಸಂಘ-ಸಂಸ್ಥೆಗಳ ವಿರುದ್ಧ ಕಡ್ಡಾಯವಾಗಿ ದಂಡ ವಿಧಿಸಬೇಕು ಎಂದರು.ಸ್ಥಳೀಯ ಸಂಸ್ಥೆಗಳು ಪ್ರತ್ಯೇಕವಾಗಿ ಸಂಗ್ರಹಿಸಿದ ಒಣ ತ್ಯಾಜ್ಯವನ್ನು ಎಂ.ಆ‌ರ್.ಎಫ್ ಘಟಕಗಳಲ್ಲಿ ಮರುಬಳಕೆ ಮಾಡಬಹುದಾದ ವಸ್ತುಗಳು, ಮರುಬಳಕೆ ಮಾಡಲಾಗದ ವಸ್ತುಗಳು, ದಹನಕಾರಿ ತ್ಯಾಜ್ಯ ನಿಷ್ಕ್ರಿಯ ತ್ಯಾಜ್ಯಗಳು ಎಂದು ಮರು ವಿಂಗಡಣೆ ಮಾಡಿ, ನಿಯಮಾನುಸಾರ ವಿಲೇವಾರಿ ಮಾಡಬೇಕು ಎಂದು ಸೂಚಿಸಿದರು.

ಹಸಿಕಸ ಮತ್ತು ಒಣ ಕಸವನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡುವುದು ಪ್ರತಿಯೊಬ್ಬ ಪ್ರಜ್ಞಾವಂತರ ಕರ್ತವ್ಯ. ನಮ್ಮ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛತೆಯಿಂದ ನೋಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಹೇಳಿದರು.ಜನರ ಮನಸ್ಥಿತಿಯನ್ನು ಬದಲಾಯಿಸಿ ಆರೋಗ್ಯಕರ ಸಮಾಜವನ್ನು ಸೃಷ್ಟಿಸಬೇಕು ಆದ್ದರಿಂದ ಸಾರ್ವಜನಿಕರು ಸರಿಯಾದ ರೀತಿಯಲ್ಲಿ ತ್ಯಾಜ್ಯ ವಿಲೇವಾರಿ ಮಾಡಬೇಕು. ತರಬೇತಿ ಕಾರ್ಯಾಗಾರ ಕಾರ್ಯಕ್ರಮವನ್ನು ಸಮರ್ಪಕವಾಗಿ ಅರ್ಥೈಸಿಕೊಂಡು ಸದುಪಯೋಗ ಪಡೆದು ಪಾಲಿಕೆ ಆರೋಗ್ಯ ಅಧಿಕಾರಿಗಳು, ಪರಿಸರ ಇಂಜಿನಿಯರ್‌ಗಳು ಮತ್ತು ಪೌರಕಾರ್ಮಿಕರು ವಾರ್ಡ್‌ಗಳಿಗೆ ಭೇಟಿ ನೀಡಿ ಕಸ ವಿಂಗಡನೆಯ ಸರಿಯಾದ ಪದ್ಧತಿಯನ್ನು ಪ್ರಾತ್ಯಕ್ಷಿಕೆ (Demonstration) ಮೂಲಕ ಜನರಿಗೆ ತಿಳಿಸಬೇಕು.ತರಬೇತಿ ಕಾರ್ಯಾಗಾರ ಕಾರ್ಯಕ್ರಮವನ್ನು ಸಮರ್ಪಕವಾಗಿ ಅರ್ಥೈಸಿಕೊಂಡು ಸದುಪಯೋಗ ಪಡೆದು ಕೊಳ್ಳುವುದರ ಜೊತೆಗೆ ಸಾರ್ವಜನಿಕರಿಗೆ ಅರಿವು ಮೂಡಿಸುವುದು ತುಂಬಾ ಅಗತ್ಯ ಎಂದು ತಿಳಿಸಿದರು.

ಜಿಲ್ಲಾ ನಗರಾಭಿವೃದ್ಧಿಕೋಶದ ಯೋಜನಾಧಿಕಾರಿ ನರಸಿಂಹಮೂರ್ತಿ ಮಾತನಾಡಿ, ಘನತ್ಯಾಜ್ಯಗಳನ್ನು ನಾಲ್ಕು ವಿಧದ ತ್ಯಾಜ್ಯಗಳಾದ ಹಸಿ ತ್ಯಾಜ್ಯ, ಒಣ ತ್ಯಾಜ್ಯ,ಸ್ಯಾನಿಟರಿ ತ್ಯಾಜ್ಯ ಹಾಗೂ ಸ್ಪೆಷಲ್ ಕೇರ್ ತ್ಯಾಜ್ಯಗಳ (ಬಲ್ಬ್ ಗಳು, ಬ್ಯಾಟರಿ, ಅವಧಿ ಮೀರಿದ ಔಷಧಗಳು,ಪೇಂಟ್ ಡಬ್ಬಿಗಳು ಇತ್ಯಾದಿ) ವಿಂಗಡಣೆ ಯನ್ನು ಸಾರ್ವಜನಿಕರಿಂದ ಮಾಡಿಸಿ, ಸಂಗ್ರಹಿಸಿ, ಅವುಗಳನ್ನು ಸಾಗಾಣಿಕೆ ಮಾಡಿ ಸಂಸ್ಕರಣೆ ಹಾಗೂ ವಿಲೇವಾರಿಯನ್ನು ವೈಜ್ಞಾನಿಕವಾಗಿ ಮಾಡಬೇಕು ಎಂದು ತಿಳಿಸಿದರು.

ತರಬೇತಿ ಕಾರ್ಯಾಗಾರ ಕಾರ್ಯಕ್ರಮವನ್ನು ಸಮರ್ಪಕವಾಗಿ ಅರ್ಥೈಸಿಕೊಂಡು ಸದುಪಯೋಗ ಪಡೆದು ಕೊಳ್ಳುವುದರ ಜೊತೆಗೆ ಸಾರ್ವಜನಿಕರಿಗೆ ಅರಿವು ಮೂಡಿಸುವುದು ತುಂಬಾ ಅಗತ್ಯ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಅಪರ ಪೊಲೀಸ್ ಅಧೀಕ್ಷಕರು ತಿಮ್ಮಯ್ಯ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಶ್ರೀನಿವಾಸ್, ನಗರಸಭೆ ಪೌರಯುಕ್ತರಾದ ಪಂಪಶ್ರೀ, ನಗರಸಭೆಯ ಕಾರ್ಯಪಾಲಕ ಅಭಿಯಂತರರು ಪ್ರತಾಪ್, ಸುಂದರ್ ರಾಜ್, ಸಂಪನ್ಮೂಲ ವ್ಯಕ್ತಿ ರಾಘವೇಂದ್ರ ರವರು ಉಪಸ್ಥಿತರಿದ್ದರು.

Continue Reading

Mandya

ತೆರೆಯಲ್ಲಿ`ಅನ್ನಂ ಪರಬ್ರಹ್ಮ ಸ್ವರೂಪಂ’ ಚಲನಚಿತ್ರ ಪ್ರದರ್ಶನ : ರಾಜೇಗೌಡ

Published

on

ಮಂಡ್ಯ: ರಾಜವೀರ ನಿರ್ಮಾಣದ ಸೃಷ್ಟಿಕರ್ತ ಫಿಲಂಸ್‌ನ ರೈತರ ಸಾಧಕ-ಬಾಧಕಗಳ ಆಧಾರಿತ `ಅನ್ನಂ ಪರಬ್ರಹ್ಮ ಸ್ವರೂಪಂ’ ಚಲನಚಿತ್ರವು ಪ್ರದರ್ಶನಗೊಳ್ಳುತ್ತಿದ್ದು, ಜಿಲ್ಲೆಯ ರೈತ ಬಂಧುಗಳು, ಸಿನಿರಸಿಕರು ವೀಕ್ಷಿಸಿ ಬೆಂಬಲಿಸಬೇಕೆಂದು ಚಲನಚಿತ್ರದ ನಿರ್ದೇಶಕ ರಾಜೇಗೌಡ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚನಚಿತ್ರವು ಮಂಡ್ಯ ತಾಲೂಕಿನ ಸಾತನೂರು ಗ್ರಾಮದ ವೆಂಕಟೇಶ್ವರ ಚಿತ್ರಮಂದಿರದಲ್ಲಿ ದಿನಕ್ಕೆ ೪ ಆಟಗಳು ಪ್ರದರ್ಶನಗೊಳ್ಳುತ್ತಿವೆ ಎಂದರು.

ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಅವರ ಕನಸಿನ ಚಿತ್ರ ಇದಾಗಿದೆ. ಅವರ ಸಹಕಾರದೊಂದಿಗೆ 8 ವರ್ಷಗಳ ಸುದೀರ್ಘ ಅವಧಿಯಲ್ಲಿ ಚಿತ್ರೀಕರಣ ಪೂರ್ಣಗೊಳಿಸಲಾಗಿದೆ. ತಮಿಳುನಾಡಿನ ಜತೆಗಿನ ನೀರಿನ ಹಂಚಿ ವಿವಾದ, ರೈತರ ಜೀವನದ ನೈಜತೆ, ಜೀವನ ಶೈಲಿ, ಕಷ್ಟಗಳನ್ನು ತಿಳಿಸುವುದು ಚಲನಚಿತ್ರದ ಮೂಲ ಉದ್ದೇಶವಾಗಿದೆ ಎಂದು ಹೇಳಿದರು.ಮದ್ದೂರು ತಾಲೂಕಿನ ದೇಶಹಳ್ಳಿ ಗ್ರಾಮದವನಾದ ನಾನು ಹಲವು ವರ್ಷಗಳಿಂದ ಚಲನಚಿತ್ರೋದ್ಯಮದಲ್ಲಿ ಭಾಗಿಯಾಗಿದ್ದೇನೆ.

ಕೋಲಾರದಲ್ಲೂ 10 ಎಕರೆ ಜಮೀನು ಭೋಗ್ಯಕ್ಕೆ ಪಡೆದು ವ್ಯವಸಾಯ ಮಾಡುತ್ತಿದ್ದೇನೆ. ರೈತನಾಗಿ ರೈತರ ಬಗ್ಗೆ ಜನರಿಗೆ ತಿಳಿಸುವ ಸುದ್ದೇಶದಿಂದ ಈ ಚಿತ್ರವನ್ನು ರಾಮನಗರ, ಮಂಡ್ಯ, ಮೈಸೂರಿನಲ್ಲಿ ಚಿತ್ರೀಕರಿಸಲಾಗಿದೆ ಎಂದು ತಿಳಿಸಿದರು.ಗೋಷ್ಠಿಯಲ್ಲಿ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜೇಗೌಡ, ತಾಲೂಕು ಅಧ್ಯಕ್ಷ ಬೂದನೂರು ಪುಟ್ಟಸ್ವಾಮಿ, ವಿಜಯ್, ಸೂರ್ಯಗೌಡ ಇದ್ದರು.

Continue Reading

Trending

error: Content is protected !!