Hassan
ಅರಕಲಗೂಡಿನಲ್ಲಿ ಮೇ 30ರಂದು ಡಾ. ಬಿ.ಆರ್. ಅಂಬೇಡ್ಕರ್ 135ನೇ ಜಯಂತಿ ಆಚರಣೆ
ಅರಕಲಗೂಡು: ತಾಲೂಕಿನ ಕ್ರೀಡಾಂಗಣದಲ್ಲಿ ಮೇ 30ರಂದು ಶನಿವಾರ ಬೆಳಿಗ್ಗೆ 11 ಗಂಟೆಗೆ ಪರಮಪೂಜ್ಯ ಬೋಧಿಸತ್ವ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜನ್ಮದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಗುವುದು ಎಂದು ದಲಿತ ಸಂಘಟನೆಗಳ ಒಕ್ಕೂಟ ತಿಳಿಸಿದೆ.ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಆಚರಣಾ ಸಮಿತಿ ಪದಾಧಿಕಾರಿಗಳು, ಕಾರ್ಯಕ್ರಮಕ್ಕೆ ಮಹಾರಾಷ್ಟ್ರದಿಂದ ಡಾ. ಅಂಬೇಡ್ಕರ್ ಅವರ ಮೊಮ್ಮಗ ಆನಂದ್‌ರಾಜ್ ಯಶ್ವಂತ್ ಅಂಬೇಡ್ಕರ್ ಆಗಮಿಸಲಿದ್ದು, ಇದು ಜಿಲ್ಲೆಯ ದಲಿತ ಸಮುದಾಯಕ್ಕೆ ಐತಿಹಾಸಿಕ ಕ್ಷಣವಾಗಲಿದೆ ಎಂದು ಹೇಳಿದರು.
ಡಾ. ಅಂಬೇಡ್ಕರ್ ಅವರ ಹೋರಾಟದ ಫಲವಾಗಿ ಶಿಕ್ಷಣ, ಉದ್ಯೋಗ, ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕೆಲವರು ಮಾತ್ರ ಪ್ರಗತಿ ಸಾಧಿಸಿದ್ದು, ಇನ್ನೂ ಬಹುಪಾಲು ದಲಿತ ಸಮುದಾಯ ಮೂಲಭೂತ ಹಕ್ಕುಗಳು ಹಾಗೂ ಅವಕಾಶಗಳಿಂದ ವಂಚಿತವಾಗಿರುವುದು ವಿಷಾದನೀಯ ಸಂಗತಿ ಎಂದು ಅಭಿಪ್ರಾಯಪಟ್ಟರು. ಸಮಾಜದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದಲೇ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಆಯುಷ್ಮಾನ್ ವರಜೋತಿ ಬಂತೆ ಬೀದರ್ ವಹಿಸಲಿದ್ದು, ಉದ್ಘಾಟನೆಯನ್ನು ಆನಂದ್‌ರಾಜ್ ಯಶ್ವಂತ್ ಅಂಬೇಡ್ಕರ್ ನೆರವೇರಿಸಲಿದ್ದಾರೆ. ಜವರಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಸಚಿವ ಹೆಚ್.ಸಿ. ಮಹಾದೇವಪ್ಪ, ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಭಾಗವಹಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು.ಹಾಸನ ಜಿಲ್ಲೆಯಲ್ಲಿ ಲಕ್ಷಾಂತರ ದಲಿತ ಸಮುದಾಯದ ಜನರಿದ್ದರೂ, ರಾಜಕೀಯ ಪ್ರಾತಿನಿಧ್ಯ ಹಾಗೂ ಅವಕಾಶಗಳಿಂದ ಸಮುದಾಯ ವಂಚಿತವಾಗಿರುವ ನೋವು ಇಂದಿಗೂ ಮುಂದುವರಿದಿದೆ. ಒಳಮೀಸಲಾತಿ ವಿಚಾರದಲ್ಲಿ ಎಡ-ಬಲ ಜಾತಿಗಳ ನಡುವೆ ಉಂಟಾಗಿರುವ ಭಿನ್ನಾಭಿಪ್ರಾಯಗಳನ್ನು ದೂರ ಮಾಡಿ, ಎಲ್ಲರೂ ಒಗ್ಗಟ್ಟಿನಿಂದ ಸಾಗುವುದು ಅಗತ್ಯವಾಗಿದೆ ಎಂದು ಮುಖಂಡರು ಕರೆ ನೀಡಿದರು.
ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಜಿಲ್ಲೆಯ ಎಲ್ಲಾ ದಲಿತ ಸಂಘಟನೆಗಳ ಮುಖಂಡರು, ಸರ್ಕಾರಿ ಹಾಗೂ ಖಾಸಗಿ ನೌಕರರು, ವಕೀಲರು, ಗುತ್ತಿಗೆದಾರರು, ಉದ್ಯಮಿಗಳು, ಸಾಹಿತಿಗಳು, ಸಾಮಾಜಿಕ ಹೋರಾಟಗಾರರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಆಚರಣಾ ಸಮಿತಿ ಕಾರ್ಯಾಧ್ಯಕ್ಷ ರಾಜೇಶ್ ಬಿ.ಸಿ., ಅಧ್ಯಕ್ಷ ಜವರಯ್ಯ, ಉಪಾಧ್ಯಕ್ಷ ನಿಂಗರಾಜು, ಕಾರ್ಯದರ್ಶಿ ಗಣೇಶ್ ವೇಲಾಪುರಿ, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಜಿ. ಸೋಮಶೇಖರ್, ಹಿರಿಯ ಮುಖಂಡ ಎಚ್.ಕೆ. ಸಂದೇಶ್ ಹಾಗೂ ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೃಷ್ಣಕುಮಾರ್ ಉಪಸ್ಥಿತರಿದ್ದರು.
Hassan
2025-26ರ ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ : ಫುಟ್ಬಾಲ್‌ನಲ್ಲಿ ಹಾಸನ ಜಿಲ್ಲೆಗೆ ರನ್ನರ್-ಅಪ್ ಗೌರವ
ಹಾಸನ: 2025-26ನೇ ಸಾಲಿನ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟದ ಫುಟ್ಬಾಲ್ ಪಂದ್ಯಾವಳಿಯಲ್ಲಿ ಹಾಸನ ಜಿಲ್ಲಾ ತಂಡ ದ್ವಿತೀಯ ಸ್ಥಾನ ಪಡೆದು ಗಮನ ಸೆಳೆದಿದೆ.ರೋಚಕ ಅಂತಿಮ ಪಂದ್ಯದಲ್ಲಿ ಹಾಸನ ಹಾಗೂ ಬೆಳಗಾವಿ ತಂಡಗಳು ಪೂರ್ಣಾವಧಿ ಆಟದಲ್ಲಿ 0-0 ಗೋಲುಗಳಿಂದ ಸಮಬಲ ಸಾಧಿಸಿವೆ. ಬಳಿಕ ನಡೆದ ಪೆನಾಲ್ಟಿ ಶೂಟ್‌ಔಟ್‌ನಲ್ಲಿ ಎರಡೂ ತಂಡಗಳು 3-3ರಿಂದ ಸಮಬಲ ಕಾಯ್ದುಕೊಂಡವು. ಅಂತಿಮವಾಗಿ ಸಡನ್ ಡೆತ್‌ನಲ್ಲಿ ಬೆಳಗಾವಿ ತಂಡ 2-1 ಅಂತರದಲ್ಲಿ ಗೆಲುವು ಸಾಧಿಸಿ ಚಾಂಪಿಯನ್ ಪಟ್ಟಕ್ಕೇರಿದರೆ, ಹಾಸನ ತಂಡ ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತು.
ಇದಕ್ಕೂ ಮೊದಲು ನಡೆದ ಸೆಮಿಫೈನಲ್ ಮತ್ತು ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಹಾಸನ ತಂಡವು ಬಲಿಷ್ಠ ಬೀದರ್ ಹಾಗೂ ಬೆಂಗಳೂರು ನಗರ ತಂಡಗಳನ್ನು ಮಣಿಸಿ ಫೈನಲ್ ಪ್ರವೇಶಿಸಿತ್ತು. ಲೀಗ್ ಹಂತದಲ್ಲಿ ಕಲಬುರಗಿ ಮತ್ತು ಚಿಕ್ಕಮಗಳೂರು ತಂಡಗಳ ವಿರುದ್ಧವೂ ಗೆಲುವು ದಾಖಲಿಸಿತ್ತು.ಹಾಸನ ಜಿಲ್ಲಾ ಫುಟ್ಬಾಲ್ ತಂಡದ ನಾಯಕನಾಗಿ ಹರೀಶ್ ಕೆ. (ಪಿಡಿಓ) ತಂಡವನ್ನು ಮುನ್ನಡೆಸಿದರು.

ಸಹಾಯಕ ನಿರ್ದೇಶಕರಾದ ಪಂರಾಜ್ ಹಾಗೂ ಆನೆಮಹಲ್ ವೇಣುಗೋಪಾಲ್ (ಪಿಡಿಓ) ಕಳೆದ ಸಾಲಿನಲ್ಲಿ ರಾಷ್ಟ್ರಮಟ್ಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದವರು ಎಂಬುದು ವಿಶೇಷ.ತಂಡದಲ್ಲಿ ಡಾ. ವೆಂಕಟೇಶ್, ಡಾ. ಸತೀಶ್, ವಸಂತ್, ಗುರುಪ್ರಸಾದ್, ಶಿವಣ್ಣ, ಸೋಮಶೇಖರ್, ಸಂಪತ್ (ಆರೋಗ್ಯ ಇಲಾಖೆ), ಡಾ. ಸಾಗರ್, ಲೋಕೇಶ್ (ಪಶುಸಂಗೋಪನೆ ಇಲಾಖೆ), ಲೋಕೇಶ್ (ಕಂದಾಯ ಇಲಾಖೆ), ಪುರುಶೋತ್ತಮ್ ಪ್ರಕಾಶ್, ವೇದ, ಕಾಂತರಾಜು (ಶಿಕ್ಷಣ ಇಲಾಖೆ), ಯೋಗಾನಾಥ್ (ಕೈಗಾರಿಕಾ ತರಬೇತಿ ಇಲಾಖೆ) ಹಾಗೂ ಮೈಲಾರಸ್ವಾಮಿ (ಅರಣ್ಯ ಇಲಾಖೆ) ಆಟಗಾರರಾಗಿ ಭಾಗವಹಿಸಿದ್ದರು.ಹಾಸನ ಜಿಲ್ಲಾ ಫುಟ್ಬಾಲ್ ತಂಡದ ಸಾಧನೆಯನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಶ್ರೀ ಸಿ.ಎಸ್. ಷಡಾಕ್ಷರಿ, ಜಿಲ್ಲಾಧ್ಯಕ್ಷರಾದ ಬಿ.ಪಿ. ಕೃಷ್ಣೇಗೌಡ ಹಾಗೂ ಜಿಲ್ಲಾ ಪದಾಧಿಕಾರಿಗಳು ಅಭಿನಂದಿಸಿದರು.
Hassan
ಬಕ್ರಿದ್ ವೇಳೆ ಗೋವಂಶ ವಧೆ ಬೇಡ: ಹಾಸನ ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟ ಕರೆ
ಹಾಸನ: ಮೇ 28ರಂದು ಆಚರಿಸಲಾಗುವ ಬಕ್ರಿದ್ ಹಬ್ಬದ ಸಂದರ್ಭದಲ್ಲಿ ಜಿಲ್ಲೆಯಾದ್ಯಂತ ಗೋವಂಶದ ಯಾವುದೇ ಪ್ರಾಣಿಗಳನ್ನು ವಧೆ ಮಾಡದಂತೆ ಹಾಸನ ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟ ಮುಸ್ಲಿಂ ಸಮುದಾಯಕ್ಕೆ ಕರೆ ನೀಡಿದೆ.ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಮುಖಂಡರು, ಕರ್ನಾಟಕದಲ್ಲಿ ಜಾರಿಯಲ್ಲಿರುವ ಜಾನುವಾರು ವಧೆ ಹಾಗೂ ಸಾಗಾಟ ಪ್ರತಿಬಂಧಕ ಕಾಯ್ದೆ-2020ನ್ನು ಕೆಲವರು ದುರುಪಯೋಗಪಡಿಸಿಕೊಂಡು ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಬಕ್ರಿದ್ ಹಬ್ಬದ ಅಂಗವಾಗಿ ಕುರಿ, ಮೇಕೆ, ಒಂಟೆ ಸೇರಿದಂತೆ ಮಾಂಸ ವಿತರಣೆ ಮಾಡುವುದು ಧಾರ್ಮಿಕ ಆಚರಣೆಯ ಭಾಗವಾಗಿದ್ದರೂ, ಪ್ರಸ್ತುತ ಕಾಯ್ದೆಯ ನೆಪದಲ್ಲಿ ಜಾನುವಾರು ಸಾಗಾಟ ತಡೆದು ರೈತರು ಹಾಗೂ ವ್ಯಾಪಾರಸ್ಥರಿಗೆ ತೊಂದರೆ ನೀಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾನೂನು ಸಂವಿಧಾನ ವಿರೋಧಿ ಆಶಯಗಳನ್ನು ಹೊಂದಿದ್ದು, ಆಹಾರದ ಹಕ್ಕು ಹಾಗೂ ಧಾರ್ಮಿಕ ಹಕ್ಕುಗಳ ಮೇಲಿನ ದಾಳಿಯಾಗಿದೆ ಎಂದು ಮುಖಂಡರು ಆರೋಪಿಸಿದರು. ಕೆಲ ಸಂಘಟನೆಗಳು ಹಾಗೂ ಕಿಡಿಗೇಡಿಗಳು ಮುಸ್ಲಿಂ ಸಮುದಾಯವನ್ನೇ ಗುರಿಯಾಗಿಸಿ ವಾತಾವರಣ ಹಾಳು ಮಾಡುವ ಕೆಲಸ ಮಾಡುತ್ತಿವೆ ಎಂದು ದೂರಿದರು.

ಹಾಸನ ನಗರದ ಮುಸ್ಲಿಂ ಜನಸಂಖ್ಯೆ ಹೆಚ್ಚಿರುವ ಪ್ರದೇಶಗಳಲ್ಲಿ ಸರ್ಕಾರದ ಅನುಮತಿ ಇಲ್ಲದೆ ಬ್ಯಾನರ್ ಹಾಗೂ ಪ್ಲೆಕ್ಸ್‌ಗಳನ್ನು ಅಳವಡಿಸಿರುವುದನ್ನು ಖಂಡಿಸಿದ ಮುಖಂಡರು, ಅವುಗಳನ್ನು ಕೂಡಲೇ ತೆರವುಗೊಳಿಸಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಸರ್ಕಾರ ಜಾನುವಾರು ಕಾಯ್ದೆಯನ್ನು ವಾಪಸ್ ಪಡೆಯುವವರೆಗೆ ಜಿಲ್ಲೆಯ ಯಾವುದೇ ಜಾನುವಾರು ಸಂತೆಯಲ್ಲಿ ಭಾಗವಹಿಸದಂತೆ ಹಾಗೂ ಗೋವಂಶದ ಪ್ರಾಣಿಗಳನ್ನು ವಧೆ ಮಾಡದಂತೆ ಒಕ್ಕೂಟ ತೀರ್ಮಾನಿಸಿದೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಅನ್ಷಾದ್-ಇ-ಪಾಳ್ಯ, ಯೂಸುಫ್ ಖಾನ್, ಅಮೀರ್ ಜಾನ್, ಇಮ್ರಾನ್ ಪಾಷಾ, ನಯೀಮ್, ಶಾಕಿರ್, ಸುಹೇಲ್, ಮೆಹರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Hassan
ಖಾತೆ ಬದಲಾವಣೆ, ಭೂಮಿ ನೋಂದಣಿ ಅಕ್ರಮ ಆರೋಪ: ಲೋಕಾಯುಕ್ತ ತನಿಖೆಗೆ ಒತ್ತಾಯ
ಹಾಸನ: ತಾಲೂಕಿನ ಶಾಂತಿಗ್ರಾಮ ಹೋಬಳಿಯ ಕೊಂತಗೌಡನಹಳ್ಳಿ ಗ್ರಾಮದ ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ನಾಡಕಚೇರಿ ಹಾಗೂ ಉಪನೊಂದಣಾಧಿಕಾರಿ ಕಚೇರಿ ಅಧಿಕಾರಿಗಳು ಏಕಪಕ್ಷೀಯವಾಗಿ ನಡೆದುಕೊಂಡು ಮೋಸದ ಖಾತೆ ಬದಲಾವಣೆ ಮತ್ತು ಭೂಮಿ ನೋಂದಣಿ ನಡೆಸಿದ್ದಾರೆ ಎಂದು ಪೂರ್ಣಿಮಾ ಅವರು ಆರೋಪಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ವಾಮಿಗೌಡ ಅವರು, ತಂದೆ ರಂಗೇಗೌಡ ಅವರ ಪಿತ್ರಾರ್ಜಿತ ಆಸ್ತಿಯನ್ನು ಕುಟುಂಬ ಸದಸ್ಯರ ನಡುವೆ ಸಮವಾಗಿ ಹಂಚಿಕೆ ಮಾಡಬೇಕಾಗಿದ್ದ ಸಂದರ್ಭದಲ್ಲಿ ಸಹೋದರಿಯರಿಗೆ ಕೊಡಬೇಕಾದ ಪಾಲನ್ನು ಪರಸ್ಪರ ಒಪ್ಪಂದದ ಮೂಲಕ ನೀಡಲಾಗಿತ್ತು. ನಂತರ ತಮ್ಮ ಸಹೋದರ ಹಾಗೂ ಅವರ ಮಕ್ಕಳು ಸೇರಿಕೊಂಡು ಕೆಲವು ಸರ್ವೇ ನಂಬರುಗಳನ್ನು ಮರೆಮಾಚಿ ತಮ್ಮ ಹಾಗೂ ತಮ್ಮ ಹೆಣ್ಣು ಮಕ್ಕಳಿಂದ ಹಕ್ಕು ಖುಲಾಸೆ ಪತ್ರ ಮಾಡಿಸಿಕೊಂಡಿದ್ದಾರೆ ಎಂದು ದೂರಿದರು.
ಸರ್ವೇ ನಂ.70/1ರಲ್ಲಿ 1 ಎಕರೆ 30 ಗುಂಟೆ, 7/14ರಲ್ಲಿ 14 ಗುಂಟೆ ಸೇರಿದಂತೆ ಹಲವು ಜಾಗಗಳನ್ನು ನ್ಯಾಯಾಲಯದ ಡಿಗ್ರಿ ಹಿನ್ನೆಲೆಯಲ್ಲಿ ಸಮವಾಗಿ ಹಂಚಿಕೆ ಮಾಡಬೇಕಾಗಿದ್ದರೂ, ಉದ್ದೇಶಪೂರ್ವಕವಾಗಿ ಮೋಸ ಮಾಡಿ ಖಾತೆ ಬದಲಾವಣೆ ಮಾಡಲಾಗಿದೆ ಎಂದು ಆರೋಪಿಸಿದರು.ಶಾಂತಿಗ್ರಾಮ ನಾಡಕಚೇರಿಯ ವಿಎ, ಆರ್‌ಐ ಹಾಗೂ ಉಪತಹಶೀಲ್ದಾರ್ ಕುಟುಂಬದ ಸದಸ್ಯರಿಗೆ ಯಾವುದೇ ನೋಟಿಸ್ ನೀಡದೇ, ವಂಶವೃಕ್ಷ ಮತ್ತು ದಾಖಲೆಗಳನ್ನು ಪರಿಶೀಲಿಸದೇ ತಮ್ಮ ಸಹೋದರ ರಂಗಸ್ವಾಮಿ ಹೆಸರಿಗೆ ಖಾತೆ ಮಾಡಿದ್ದಾರೆ ಎಂದು ಹೇಳಿದರು. ಈ ಸಂಬಂಧ ಹಲವು ಬಾರಿ ಅರ್ಜಿ ಸಲ್ಲಿಸಿದ್ದರೂ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದಲ್ಲದೆ, ಉಪನೊಂದಣಾಧಿಕಾರಿ ಕಚೇರಿಗೆ ತಕರಾರು ಸಲ್ಲಿಸಿದ್ದರೂ ಸಹ ಭೂಮಿಯನ್ನು ಬೇರೊಬ್ಬರಿಗೆ ನೋಂದಣಿ ಮಾಡಿಕೊಟ್ಟು, ಕಮರ್ಷಿಯಲ್ ಅಭಿವೃದ್ಧಿಗೆ ಒಪ್ಪಂದ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿದರು. “ಹಣ ಕಟ್ಟಿದರೆ ರಿಜಿಸ್ಟರ್ ಮಾಡುವುದು ನಮ್ಮ ಕೆಲಸ, ಉಳಿದದ್ದು ನ್ಯಾಯಾಲಯದಲ್ಲಿ ಹೋಗಿ ನೋಡಿಕೊಳ್ಳಿ” ಎಂದು ಅಧಿಕಾರಿಗಳು ಉಡಾಫೆಯ ಉತ್ತರ ನೀಡಿದ್ದಾರೆ ಎಂದು ಸ್ವಾಮಿಗೌಡ ದೂರಿದರು.ಈ ಪ್ರಕರಣದಲ್ಲಿ ನಾಡಕಚೇರಿ ಹಾಗೂ ನೋಂದಣಿ ಇಲಾಖೆ ಅಧಿಕಾರಿಗಳು ಲಂಚ ಪಡೆದು ಏಕಪಕ್ಷೀಯವಾಗಿ ನಡೆದುಕೊಂಡಿರುವ ಅನುಮಾನವಿದ್ದು, ಲೋಕಾಯುಕ್ತ ತನಿಖೆ ನಡೆಸಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಭೂಮಿಯ ಮುಂದಿನ ನೋಂದಣಿ ಹಾಗೂ ಖಾತೆ ಬದಲಾವಣೆ ತಡೆಯಬೇಕು ಎಂದು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಚೇತನ್, ಚಿಕ್ಕಯ್ಯ, ದಿನೇಶ್, ಸಂತೋಷ್, ಪೂರ್ಣಿಮಾ ಸೇರಿದಂತೆ ಇತರರು ಉಪಸ್ಥಿತರಿದ್ದರು.
-
State17 hours agoಗೃಹಲಕ್ಷ್ಮೀ ಯೋಜನೆಯಲ್ಲಿ ಬದಲಾವಣೆ
-
Hassan20 hours agoಜಿಲ್ಲಾಧಿಕಾರಿಯ ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಪದಾಧಿಕಾರಿಗಳಿಂದ ತಹಸೀಲ್ದಾರ್ಗೆ ಮನವಿ
-
Hassan54 minutes ago2025-26ರ ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ : ಫುಟ್ಬಾಲ್‌ನಲ್ಲಿ ಹಾಸನ ಜಿಲ್ಲೆಗೆ ರನ್ನರ್-ಅಪ್ ಗೌರವ
-
Kodagu22 hours agoದಿ ಮೈಸೂರು ಕಾಫಿ ಸಂಸ್ಕರಣ ಮಾರಾಟ ಮತ್ತು ಉಗ್ರಾಣ ಸಹಕಾರ ಸಂಘದ ಸಭೆ
-
Chamarajanagar19 hours agoಮಾಸಾಶನ ಪಡೆಯುತ್ತಿರುವ ಸಾಹಿತಿ, ಕಲಾವಿದರು ಜೀವಿತ ಪ್ರಮಾಣ ಪತ್ರ ಸಲ್ಲಿಸಲು ಮನವಿ
-
Mysore6 hours agoಮೈಸೂರಿನಲ್ಲಿ ಸಿಡಿಲು ಬಡಿದು ಮಡಿಕೇರಿಯ ಹೊಸೊಕ್ಲು ರೋಷನ್ ಬಾಲಕೃಷ್ಣ (43) ನಿಧನ .
-
Kodagu20 hours agoಬೇಡು ಹಬ್ಬ : ಮದ್ಯ ಮಾರಾಟ ನಿಷೇಧ
-
State24 hours agoದೆಹಲಿಗೆ ಸಿಎಂ ಸಿದ್ದರಾಮಯ್ಯ ಭೇಟಿ: ಹೈಕಮಾಂಡ್ ಸಭೆಯಲ್ಲಿ ಮಹತ್ವದ ಚರ್ಚೆ ಸಾಧ್ಯ
