Cinema
ಗೀತರಚನೆಯನ್ನು ಕಲಿಸುವುದಕ್ಕೆ ಸಾಧ್ಯವಿಲ್ಲ, ಅದು ಸುಪ್ತಮನಸ್ಸಿನಿಂದ ಬರಬೇಕು: ಜಯಂತ್ ಕಾಯ್ಕಿಣಿ
ಬೆಂಗಳೂರು ಚಿತ್ರೋತ್ಸವ ವೇದಿಕೆ: ʼಗೀತರಚನೆ ಎನ್ನುವುದು ಕಲಿಯೋದು, ಕಲಿಸೋದಲ್ಲ. ಕನ್ನಡ ಕಾವ್ಯ, ಸಾಹಿತ್ಯ ಓದಬೇಕು. ಜನಜೀವನ ನೋಡಬೇಕು. ಬರವಣಿಗೆ ಎನ್ನುವುದು ನಮ್ಮ ಸುಪ್ತಮನಸ್ಸಿನಿಂದ ಬರುವಂತದ್ದು. ಅದಕ್ಕೆ ಯಾವುದೇ ತರಬೇತಿ, ಕಾರ್ಯಾಗಾರ ಇರುವುದಿಲ್ಲʼ ಎಂದು ಖ್ಯಾತ ಸಾಹಿತಿ ಮತ್ತು ಚಿತ್ರಸಾಹಿತಿ ಜಯಂತ್ ಕಾಯ್ಕಿಣಿ ಅಭಿಪ್ರಾಯಪಟ್ಟಿದ್ದಾರೆ.
17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನಡೆದ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, ʼಗೀತರಚನೆಯನ್ನು ಕಲಿಸುವುದಕ್ಕಾಗುವುದಿಲ್ಲ. ಕನಸ್ಸಿನಲ್ಲಿ ಒಮ್ಮೊಮ್ಮೆ ಅಮೂರ್ತವಾಗಿ ಏನೇನೋ ಕಾಣುತ್ತದಲ್ಲ, ಗೀತರಚನೆಯೂ ಹಾಗೆಯೇ. ನಿರ್ದೇಶನ, ನಟನೆಯ ತರಹ ಗೀತರಚನೆಗೆ ತರಬೇತಿ ತೆಗೆದುಕೊಳ್ಳುವುದಕ್ಕೆ ಆಗುವುದಿಲ್ಲ. ತರಬೇತಿ ಪಡೆದರೆ, ಜಿಮಿನಂದ ಬಂದ ಒಂದೇ ತರಹ ದೇಹಗಳ ಹಾಗೆ ಕಾಣುತ್ತದೆ. ಬ್ಯೂಟಿ ಪಾರ್ಲರ್‌ನಿಂದ ಬಂದ ವಧುವಿನ ಹಾಗೆ ಎಲ್ಲವೂ ಒಂದೇ ರೀತಿ ಕಾಣುತ್ತದೆ. ನಿಮ್ಮ ಛಾಪು ಮೂಡಿಸಬೇಕೆಂದರೆ ಸ್ವತಂತ್ರವಾಗಿ ಬರೆಯುವುದಕ್ಕೆ ಕಲಿಯಬೇಕುʼ ಎಂದು ಹೇಳಿದರು.
ಕಾಲಕ್ಕೆ ತಕ್ಕ ಹಾಗೆ ಬದಲಾಗುತ್ತಿರಬೇಕು ಎಂದ ಅವರು, ʼಹಳೆಯದೆಲ್ಲಾ ಚೆನ್ನಾಗಿತ್ತು, ಈಗ ಚೆನ್ನಾಗಿಲ್ಲ ಎನ್ನುವುದು ತಪ್ಪು. ಅಂದರೆ ನಾವು ಸಹ ಮೊದಲ ಹಾಗಿಲ್ಲ ಎಂದರ್ಥ. ಎಲ್ಲಾ ಕಡೆ ಸಾಕಷ್ಟು ಬದಲಾವಣೆಗಳಾಗಿವೆ. ಮೊದಲು ನಮ್ಮೂರಿನಲ್ಲಿ ಸಾಕಷ್ಟು ಹಿರಿಯರಿದ್ದರು. ಈಗ ನಾನೇ ಹಿರಿಯ ಎನ್ನುವಂತಾಗಿದೆ. ಸಮಯ ಬದಲಾಗುತ್ತಿರುತ್ತದೆ. ತಂತ್ರಜ್ಞಾನ ಬೆಳೆಯುತ್ತಿದೆ. ನಾವು ಸಹ ಬದಲಾಗಬೇಕಾಗುತ್ತದೆ. ಹಳೆಯದೇ ಚೆನ್ನಾಗಿತ್ತು, ಈಗ ಚೆನ್ನಾಗಿಲ್ಲ ಎನ್ನುವುದು ತಪ್ಪುʼ ಎಂದು ಅವರು ಹೇಳಿದರು.
ತಾವು ಮೊದಲಿಂದಲೂ ಸಿನಿಮಾ ಹಾಡುಗಳ ಪ್ರೇಮಿ ಎಂದ ಜಯಂತ್ ಕಾಯ್ಕಿಣಿ, ʼನಾವೆಲ್ಲಾ ಹಾಡುಗಳನ್ನು ಗುನುಗಿ ಬೆಳೆದವರು. ಗೊಣಗುವುದಕ್ಕಿಂತ ಗುನುಗುವುದು ಮೇಲು ಎಂದು ನಮ್ಮ ತಂದೆ ಹೇಳುತ್ತಿದ್ದರು. ನಾನು ೫೨ನೇ ವಯಸ್ಸಿಗೆ ಸಿನಿಮಾದಲ್ಲಿ ಗೀತರಚನೆಕಾರನಾದೆ. ಯೌವ್ವನದಲ್ಲಿದ್ದಾಗ ಗಂಭಿರವಾಗಿ ʼಕೋಟಿತೀರ್ಥʼ ಅಂತ ಬರೆದೆ. ವಯಸ್ಸಾದ ಮೇಲೆ ಸಿನಿಮಾ ಹಾಡುಗಳನ್ನು ಬರೆಯುವಂತಾಯಿತುʼ ಎಂದರು.
ಆರಂಭದಲ್ಲಿ ಸಿನಿಮಾ ಹಾಡುಗಳನ್ನು ಬರೆಯುವಾಗ ಒಂದು ಉಡಾಫೆ ಇತ್ತು ಎಂದ ಅವರು, ʼಸಿನಿಮಾ ಹಾಡುಗಳನ್ನು ಬರೆಯುವುದು ಬಹಳ ಸುಲಭ ಎಂದು ಭಾವಿಸಿದ್ದೆ. ಹಾಡುಗಳನ್ನು ಬರೆಯುವುದಕ್ಕೆ ಶುರು ಮಾಡಿದ ಮೇಲೆ ಅದರ ಕಷ್ಟ ಗೊತ್ತಾಯ್ತು. ಸಿನಿಮಾದಲ್ಲಿ ಟ್ಯೂನ್ ಹಾಕಿದ ಮೇಲೆ, ಮೀಟರ್‌ಗೆ ತಕ್ಕ ಹಾಗೆ ಸಾಹಿತ್ಯವನ್ನು ರಚಿಸಲಾಗುತ್ತದೆ. ಅದು ದೊಡ್ಡ ಸವಾಲಾಗಿತ್ತು. ನಮ್ಮಲ್ಲಿ ಕೋಟ್ಯಂತರ ಹಾಡುಗಳಿವೆ. ಅದರಲ್ಲಿ ವಿಭಿನ್ನವಾದುದನ್ನೇನೋ ಬರೆಯಬೇಕು. ಅದರಲ್ಲಿ ಶೇ. 97ರಷ್ಟು ಪ್ರೇಮಗೀತೆಗಳು. ಅದರಲ್ಲಿ ವಿಭಿನ್ನವಾಗಿ ಅದೆಷ್ಟು ಬರೆಯೋಕೆ ಸಾಧ್ಯ? ಒಲವು, ನಲಿವು, ಚೆಲುವು, ಹಸಿರು, ಉಸಿರು … ಈ ಪದಗಳನ್ನೇ ಪುನಃ ಬಳಸಬೇಕು. ಅದನ್ನು ಹೊರತುಪಡಿಸಿ, ಹೊಸ ಎಕ್ಸ್‌ಪ್ರೆಶನ್ ಸೃಷ್ಟಿಸುವುದು ನಿಜಕ್ಕೂ ಸವಾಲಿನ ಕೆಲಸʼ ಎಂದು ಹೇಳಿದರು.
ಸಿನಿಮಾಗಳಿಗೆ ಹಾಡುಗಳನ್ನು ಬರೆಯುವುದಕ್ಕೆ ಪ್ರಾರಂಭಿಸಿದ ಮೇಲೆ ಅನುಕೂಲವೇ ಆಯಿತು ಎನ್ನುವ ಅವರು, ʼಚಿತ್ರಗೀತೆಗಳನ್ನು ಬರೆಯುವುದಕ್ಕೆ ಪ್ರಾರಂಭಿಸಿದ ಮೇಲೆ, ನಾನು ಸಿನಿಮಾಗೆ ಹೆಚ್ಚು ಬರೆಯುತ್ತಿರುವುದರ ಬಗ್ಗೆ ಹಿತೈಷಿಗಳು ಬೇಸರ ವ್ಯಕ್ತಪಡಿಸಿದರು. ಸಿನಿಮಾ ಹಾಡುಗಳನ್ನು ಬರೆಯುತ್ತಿದ್ದೇನೆ ಎಂದು ನಾನು ಬೇರೆ ಸಾಹಿತ್ಯವನ್ನು ಕಡೆಗಣಿಸಿಲ್ಲ. ನನ್ನ ಬೇರೆ ಮರವಣಿಗೆಯನ್ನು ಮುಂದುವರೆಸಿದ್ದೇನೆ. ಇದರಿಂದ ಅನಾಮಿಕ ಶೋತೃಗಳು ಹೆಚ್ಚಾಗುವುದರ ಜೊತೆಗೆ ಒಂಥರಾ Reverse Osmosis ಪ್ರಕ್ರಿಯೆ ಶುರುವಾಯ್ತು. ನನ್ನ ಕಥೆ, ಕವನ ಸಂಕಲನಗಳನ್ನು ಓದದ ಬಹಳಷ್ಟು ಹೊಸ ತಲೆಮಾರಿನವರು, ಹಾಡುಗಳನ್ನು ಕೇಳಿ ಇಷ್ಟಪಟ್ಟು, ನನ್ನ ಪುಸ್ತಕಗಳನ್ನು ಕೊಂಡು ಓದಿದರು. ಇದರಿಂದ ನನ್ನ ಪುಸ್ತಕಗಳ ಮರುಮುದ್ರಣವಾದಂತಾಯಿತುʼ ಎಂದರು.
ವ್ಯಕ್ತ, ಶ್ರಾವ್ಯ ಮತ್ತು ದೃಶ್ಯ ಹೀಗೆ ಮೂರೂ ಗುಣಗಳಿರುವ ಒಂದು ಅಪರೂಪದ ಮಾಧ್ಯಮ ಸಿನಿಮಾ ಎಂದ ಅವರು, ʼಸಿನಿಮಾದಲ್ಲಿ ವ್ಯಕ್ತ, ಶ್ರಾವ್ಯ ಮತ್ತು ದೃಶ್ಯ ಎಂಬ ಮೂರೂ ಗುಣಗಳೂ ಇವೆ. ಒಬ್ಬ ನಿರ್ದೇಶಕನಿಗೆ ಇದರ ಅರಿವು ಮತ್ತು ಹಿಡಿತವಿದ್ದರೆ, ತೆರೆಯ ಮೇಲೆ ಅದ್ಭುತವಾದುದನ್ನು ಸೃಷ್ಟಿಸಬಹುದುʼ ಎಂದರು.
ತಮಗೆ ಸಿನಿಮಾ ಆಸಕ್ತಿ ಬಾಲ್ಯದಲ್ಲೇ ಹುಟ್ಟಿತ್ತು ಮತ್ತು ಅದಕ್ಕೆ ಮೂಲ ಕಾರಣ ತಮ್ಮೂರಿನ ಟೂರಿಂಗ್ ಟಾಕೀಸ್ ಕಾರಣ ಎಂದ ಅವರು, ʼಬಾಲ್ಯದಲ್ಲಿ ʼಕಠಾರಿ ವೀರʼ, ʼಬೀದಿ ಬಸವಣ್ಣʼ, ʼಚೂರಿ ಚಿಕ್ಕಣ್ಣʼ, ʼಚಂದವಳ್ಳಿಯ ತೋಟʼ ಮುಂತಾದ ಚಿತ್ರಗಳನ್ನು ನೋಡಿ ಬೆಳೆದಂತೆ. ಜಾವೇದ್ ಅಖ್ತರ್ ಅವರು ಹೇಳಿದಂತೆ ಸಿನಿಮಾನೇ ನಮ್ಮ ಧರ್ಮ. ಹಲವು ಆದರ್ಶ ಗುಣಗಳನ್ನು ಸಿನಿಮಾದಿಂದ ನೋಡಿ ಕಲಿತವರು ನಾವು. ʼದೀವಾರ್ʼ ಚಿತ್ರದಲ್ಲಿ ಬರುವ ʼಮೇರೇ ಪಾಸ್ ಮಾʼ ಎನ್ನುವಂತೆ, ನನ್ನ ಹತ್ತಿರ ಏನಿದೆ ಎಂದು ಕೇಳಿದರೆ, ʼಮೇರೆ ಪಾಸ್ ಸಿನಿಮಾ ಹೇ …ʼ ಎನ್ನುತ್ತೇನೆ. ಭಾರತದಲ್ಲಿ ನಾವು ಸಿನಿಮಾದ ಜೊತೆಗೆ ಬೆರೆತು ಹೋಗಿದ್ದೇವೆʼ ಎಂದರು.
ಇತ್ತೀಚಿನ ವರ್ಷಗಳಲ್ಲಿ ʼಪೊನ್ನಿಯನ್ ಸೆಲ್ವನ್ʼ ಚಿತ್ರದ ಕನ್ನಡ ಡಬ್ಬಿಂಗ್ ಅವತರಣಿಕೆಗೆ ಸಾಹಿತ್ಯ ರಚಿಸಿದ್ದು ಸವಾಲಿನ ಕೆಲಸವಾಗಿತ್ತು ಎಂದ ಅವರು, ʼಎ.ಆರ್.ರೆಹಮಾನ್ ಸಂಗೀತ ನಿರ್ದೇಶನದ ‘ಪೊನ್ನಿಯನ್ ಸೆಲ್ವನ್ʼ ಸಿನಿಮಾದ ಎರಡೂ ಭಾಗಗಳು ಸೇರಿ 14 ಹಾಡುಗಳಿವೆ. ನಾನು ಭಾಷಾಂತರ ಮಾಡುವುದಿಲ್ಲ, ಸ್ವಂತವಾಗಿ ಬರೆಯುವುದಕ್ಕೆ ಅವಕಾಶ ಕೊಟ್ಟರೆ ಬರೆಯುವುದಾಗಿ ನಿರ್ದೇಶಕ ಮಣಿರತ್ನಂ ಅವರಿಗೆ ಹೇಳಿದ್ದೆ. ಅವರು ಸಹ ಸನ್ನಿವೇಶ ಹೇಳಿ, ಅದಕ್ಕೆ ಪೂರಕವಾಗಿ ಬರೆಯುವುದಕ್ಕೆ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟರು. ಕನ್ನಡದಲ್ಲಿ ಪ್ರೀತಿ, ಪ್ರೇಮ ಎನ್ನಲು ತುಟಿಗಳನ್ನು ತಾಗಿಸಬೇಕು. ತಮಿಳಿನಲ್ಲಿ ‘ಕಾದಲ್ʼ ಎನ್ನುವಾಗ ತುಟಿಗಳೇ ತಾಗುವುದಿಲ್ಲ. ತುಟಿಗಳು ಸೇರಿಸದೆ ಪ್ರೀತಿ ಹೇಗೆ ಮಾಡುತ್ತೀರಿ ಎಂದು ಮಣಿರತ್ನಂ ಅವರನ್ನು ತಮಾಷೆ ಮಾಡಿದ್ದಾಗಿʼ ನೆನಪಿಸಿಕೊಂಡರು.
ಈ ಕಾರ್ಯಕ್ರಮವನ್ನು ಪ್ರಶಾಂತ್ ಪಂಡಿತ್ ನಡೆಸಿಕೊಟ್ಟರು.
Cinema
ಫೆ.7ಕ್ಕೆ ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಶತಮಾನೋತ್ಸವ
ಬೆಂಗಳೂರು: ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಪ್ರತಿಷ್ಠಾನ, ಜಿ.ಎಸ್ಸೆಸ್ ವಿಶ್ವಸ್ತ ಮಂಡಳಿ ಹಾಗೂ ಕರ್ನಾಟಕ ಗಾಂಧೀ ಸ್ಮಾರಕ ನಿಧಿ ಜಂಟಿಯಾಗಿ ಏರ್ಪಡಿಸಿರುವ ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಜನ್ಮ ಶತಮಾನೋತ್ಸವದ ಕಾರ್ಯಕ್ರಮ ಫೆಬ್ರವರಿ 7 ಶನಿವಾರ ಬೆಳಗ್ಗೆ ಗಾಂಧಿ ಭವನದಲ್ಲಿ ನಡೆಯಲಿದೆ.
ಇದೇ ಸಂದರ್ಭದಲ್ಲಿ ಇಡೀ ದಿನ ಜಿಎಸ್ಎಸ್ ಪ್ರಶಸ್ತಿ ಪ್ರಧಾನ ಸಮಾರಂಭ, ವಿಚಾರಗೋಷ್ಠಿಗಳು, ಕವಿ ಗೋಷ್ಠಿ, ಜಿಎಸ್ಎಸ್ ಕಾವ್ಯಾಧಾರಿತ “ವಿಪುಲರೂಪ ಧಾರಣಿ” ಕಾವ್ಯಾಭಿನಯದ ರೂಪಕವನ್ನು ಶಿವಮೊಗ್ಗದ ಹೊಂಗಿರಣ ತಂಡ ಅಭಿನಯಿಸುತ್ತದೆ. ಈ ರೂಪಕದ ನಿರ್ದೇಶಕರು ಡಾ. ಶ್ರೀಪಾದ ಭಟ್, ಡಾ. ಸಾಸ್ವೇಹಳ್ಳಿ ಸತೀಶ್.

ಈ ಶತಮಾನೋತ್ಸವದ ಉದ್ಘಾಟನೆಯನ್ನು ಚಿಂತಕ ಡಾ. ಕೆ.ವಿ. ನಾರಾಯಣ ಮಾಡುವರು. ವಿಚಾರಗೋಷ್ಠಿಯಲ್ಲಿ ಡಾ. ಎಚ್.ಎಸ್. ರಾಘವೇಂದ್ರರಾವ್, ರಾಜೇಂದ್ರ ಚೆನ್ನಿ, ವಿನಯಾ ವಕ್ಕುಂದ ಮೊದಲಾದವರು ಭಾಗವಹಿಸುತ್ತಿದ್ದಾರೆ. ಪ್ರಮುಖ ಕವಿಗಳು ಕವಿಗೋಷ್ಠಿಯಲ್ಲಿ ಭಾಗವಹಿಸುತ್ತಿದ್ದು ಅಧ್ಯಕ್ಷತೆಯನ್ನು ಪ್ರೊ. ಎಸ್.ಜಿ. ಸಿದ್ದರಾಮಯ್ಯನವರು ವಹಿಸುತ್ತಾರೆ.
ಈಸಾರಿ “ಜಿಎಸ್ಎಸ್ ಪ್ರಶಸ್ತಿ” ಪುರಸ್ಕೃತರು – ಡಾ. ಎಚ್.ಎಸ್. ಶಿವಪ್ರಕಾಶ್, ಪ್ರೊ. ಕೃಷ್ಣಮೂರ್ತಿ ಹನೂರ್, ಡಾ. ವಿನಯಾ ವಕ್ಕುಂದ. ಕಾರ್ಯಕ್ರಮದಲ್ಲಿ ಡಾ. ಕೆ. ಮರುಳಸಿದ್ದಪ್ಪ, ವೂಡೆ ಪಿ. ಕೃಷ್ಣ ಮೊದಲಾದವರು ಭಾಗವಹಿಸುವರು ಎಂದು ಜಿ.ಎಸ್. ಶಿವರುದ್ರಪ್ಪ ಪ್ರತಿಷ್ಠಾನದ ಅಧ್ಯಕ್ಷ ಕೊಂಡಜ್ಜಿ ಮೋಹನ ಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Cinema
ಚಿತ್ರೋತ್ಸವದ ಕೊನೆಯ ದಿನ ನೋಡಬಹುದಾದ ಅತ್ಯುತ್ತಮ 10 ಸಿನಿಮಾಗಳು
ಬೆಂಗಳೂರು: ನಾಳೆ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಕೊನೆಯ ದಿನ ಲುಲು ಮಾಲ್ ನಲ್ಲಿ ನೋಡಬಹುದಾದ ಅತ್ಯುತ್ತಮ 10 ಚಲನಚಿತ್ರಗಳ ಪಟ್ಟಿ ಇಲ್ಲಿದೆ:
1. ನೌವೆಲ್ ವಾಗ್
ಸಮಯ ಮತ್ತು ಸ್ಕ್ರೀನ್: ರಾತ್ರಿ 8:20 (ಸ್ಕ್ರೀನ್ 3), ರಾತ್ರಿ 7:30 (ಸ್ಕ್ರೀನ್ 6), ಅಥವಾ ಸಂಜೆ 7:20 (ಸ್ಕ್ರೀನ್ 8)
ವಿವರಣೆ: ಪ್ರಖ್ಯಾತ ನಿರ್ದೇಶಕ ರಿಚರ್ಡ್ ಲಿಂಕ್ಲೇಟರ್ ನಿರ್ದೇಶನದ ಈ 2025ರ ಚಿತ್ರವು ಫ್ರೆಂಚ್ ಸಿನಿಮಾ ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತದೆ.
2. ಶಂಕರ್ ಗುರು
ಸಮಯ ಮತ್ತು ಸ್ಕ್ರೀನ್: ಮಧ್ಯಾಹ್ನ 2:00 (ಸ್ಕ್ರೀನ್ 6)
ವಿವರಣೆ: ಕನ್ನಡ ಚಿತ್ರರಂಗದ ಮೇರು ನಟ ಡಾ. ರಾಜ್‌ಕುಮಾರ್ ಅವರ ಅಭಿನಯದ ಈ 1978ರ ಮೈಲಿಗಲ್ಲು ಚಿತ್ರವನ್ನು ‘ಜನಪ್ರಿಯ ಮನರಂಜನಾ ಚಿತ್ರಗಳ’ ವಿಭಾಗದಲ್ಲಿ ಪ್ರದರ್ಶಿಸಲಾಗುತ್ತಿದೆ.

3. ಅಂಕಲ್ ಬೂನ್ಮಿ ಹೂ ಕ್ಯಾನ್ ರಿಕಾಲ್ ಹಿಸ್ ಪಾಸ್ಟ್ ಲೈವ್ಸ್
ಸಮಯ ಮತ್ತು ಸ್ಕ್ರೀನ್: ಸಂಜೆ 4:10 (ವಿಐಪಿ ಸ್ಕ್ರೀನ್ 1)
ವಿವರಣೆ: ಅಪಿಚತ್‌ಪಾಂಗ್ ವೀರಸೇತಕುಲ್ ನಿರ್ದೇಶನದ ಈ ಥಾಯ್ ಚಿತ್ರವು ಆಧ್ಯಾತ್ಮಿಕ ಮತ್ತು ಪುನರ್ಜನ್ಮದ ಕುರಿತಾದ ಜಾಗತಿಕ ಮಟ್ಟದ ಶ್ರೇಷ್ಠ ಕಲಾಕೃತಿಯಾಗಿದೆ.
4. ದಿ ಪ್ರೆಸಿಡೆಂಟ್ಸ್ ಕೇಕ್
ಸಮಯ ಮತ್ತು ಸ್ಕ್ರೀನ್: ಸಂಜೆ 5:40 (ಸ್ಕ್ರೀನ್ 4)
ವಿವರಣೆ: ಹಸನ್ ಹಾದಿ ನಿರ್ದೇಶನದ ಈ 2025ರ ಅರೇಬಿಕ್ ಚಿತ್ರವು ಇರಾಕ್‌ನ ಸಮಕಾಲೀನ ಸಾಮಾಜಿಕ ಚಿತ್ರಣವನ್ನು ಕಟ್ಟಿಕೊಡುತ್ತದೆ.

5. ಮ್ಯಾನ್ ಆಫ್ ಮಾರ್ಬಲ್
ಸಮಯ ಮತ್ತು ಸ್ಕ್ರೀನ್: ಸಂಜೆ 6:50 (ವಿಐಪಿ ಸ್ಕ್ರೀನ್ 1)
ವಿವರಣೆ: ಪೋಲಿಷ್ ನಿರ್ದೇಶಕ ಅಂದ್ರೆಜ್ ವಾಜ್ದಾ ಅವರ ಈ 1977ರ ಚಿತ್ರವು ವಿಶ್ವ ಸಿನಿಮಾದ ಐತಿಹಾಸಿಕ ಕೃತಿಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ.
6. ಡಿವೈನ್ ಕಾಮಿಡಿ
ಸಮಯ ಮತ್ತು ಸ್ಕ್ರೀನ್: ಮಧ್ಯಾಹ್ನ 12:30 (ಸ್ಕ್ರೀನ್ 5)
ವಿವರಣೆ: ಅಲಿ ಅಸ್ಗರಿ ನಿರ್ದೇಶನದ ಈ 2025ರ ಪರ್ಷಿಯನ್ ಚಿತ್ರವು ಏಷ್ಯನ್ ಸಿನಿಮಾ ಸ್ಪರ್ಧಾ ವಿಭಾಗದ ಅಡಿಯಲ್ಲಿ ಪ್ರದರ್ಶನಗೊಳ್ಳುತ್ತಿದೆ.
7. ದಿ ಮಾಸ್ಟರ್ ಮೈಂಡ್
ಸಮಯ ಮತ್ತು ಸ್ಕ್ರೀನ್: ಮಧ್ಯಾಹ್ನ 2:30 (ಸ್ಕ್ರೀನ್ 5)
ವಿವರಣೆ: ಕೆಲ್ಲಿ ರೀಚಾರ್ಡ್ ನಿರ್ದೇಶನದ ಈ ಇಂಗ್ಲಿಷ್ ಚಿತ್ರವು ತನ್ನ ವಿಶಿಷ್ಟ ಕಥಾಹಂದರದಿಂದಾಗಿ ‘ಸಮಕಾಲೀನ ವಿಶ್ವ ಸಿನಿಮಾ’ ವಿಭಾಗದಲ್ಲಿ ಗಮನಸೆಳೆಯುತ್ತಿದೆ.

8. ಡ್ರಾಗನ್‌ಫ್ಲೈ
ಸಮಯ ಮತ್ತು ಸ್ಕ್ರೀನ್: ಬೆಳಗ್ಗೆ 11:30 (ಸ್ಕ್ರೀನ್ 3)
ವಿವರಣೆ: ಪಾಲ್ ಆಂಡ್ರ್ಯೂ ವಿಲಿಯಮ್ಸ್ ನಿರ್ದೇಶನದ ಈ 2025ರ ಇಂಗ್ಲಿಷ್ ಚಿತ್ರವು ಗಂಭೀರ ಕಥಾಹಂದರ ಹೊಂದಿರುವ ಪ್ರಮುಖ ಚಿತ್ರವಾಗಿದೆ.
9. ಗಣರಾಜ್
ಸಮಯ ಮತ್ತು ಸ್ಕ್ರೀನ್: ಮಧ್ಯಾಹ್ನ 3:00 (ವಿಐಪಿ ಸ್ಕ್ರೀನ್ 2)
ವಿವರಣೆ: ಭಾರತದ ಈಶಾನ್ಯ ರಾಜ್ಯದ ಸಂಸ್ಕೃತಿಯನ್ನು ಬಿಂಬಿಸುವ ಈ 2025ರ ಅಸ್ಸಾಮಿ ಚಿತ್ರವನ್ನು ದಿಪ್ ಭುಯಾನ್ ನಿರ್ದೇಶಿಸಿದ್ದಾರೆ.
10. ಕ್ಯಾಟನೇ
ಸಮಯ ಮತ್ತು ಸ್ಕ್ರೀನ್: ಸಂಜೆ 4:50 (ಸ್ಕ್ರೀನ್ 1)
ವಿವರಣೆ: ಅಯೋನಾ ಮಿಸ್ಚೀ ನಿರ್ದೇಶನದ ಈ 2025ರ ರೋಮೇನಿಯನ್ ಚಿತ್ರವು ಯುರೋಪಿಯನ್ ಸಿನಿಮಾದ ಆಧುನಿಕ ಶೈಲಿಯನ್ನು ಪ್ರತಿನಿಧಿಸುತ್ತದೆ.
Cinema
ಫೆ. 7ರ ಸಂಜೆ ಕುವೆಂಪು ಸಿಗ್ತಾರೆ…
ಕುವೆಂಪು ನಮ್ಮ ನಾಡಿನ “ಕಾಡಿನ ಕೊಳಲು”… ಅವರ ವೈಚಾರಿಕತೆ, ಕಾದಂಬರಿ, ನಾಟಕಗಳದ್ದೇ ಒಂದು ಲೋಕವಾದರೆ ಅವರ ಕಾವ್ಯದ್ದು ಬೇರೆಯದೇ ಆದ ಒಂದು ಅನನ್ಯ ಲೋಕ. ಅಂತಹ ರಸಋಷಿ, ಭಾವನೆಗಳ ಮಹಾಪೂರ ಕುವೆಂಪುರವರ ಕಾವ್ಯವನ್ನೇ ಕೇಂದ್ರವಾಗಿಟ್ಟುಕೊಂಡ ನೃತ್ಯರೂಪಕ ಹಾಸನದಲ್ಲಿ ಪ್ರದರ್ಶನವಾಗುತ್ತಿದೆ.
ವಿದುಷಿ ಡಾ. ಪಿ. ಮಾನಸ ಅವರ ಮನೋಜ್ಙ ನೃತ್ಯಕಲಾ ಅಕಾಡೆಮಿ ವತಿಯಿಂದ ಈ ಅದ್ಭುತ ನೃತ್ಯ ರೂಪಕ ರೂಪುಗೊಂಡಿದೆ.
ಫೆ. 7 ನೇ ತಾರೀಖಿನಂದು ಎಂ. ಜಿ. ರಸ್ತೆಯಲ್ಲಿರುವ ಬಿಜಿಎಸ್ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ನಡೆಯಲಿದೆ. ಕುವೆಂಪು ಅವರನ್ನು ಹೀಗೂ ಮುಖಾಮುಖಿಯಾಗಬಹುದಾ ಅಂತ ಅಚ್ಚರಿ ಪಡುತ್ತೀರಿ… ಬನ್ನಿ ಸಂಭ್ರಮಿಸೋಣ.
-
State18 hours agoಗೃಹಲಕ್ಷ್ಮೀ ಯೋಜನೆಯಲ್ಲಿ ಬದಲಾವಣೆ
-
Kodagu23 hours agoದಿ ಮೈಸೂರು ಕಾಫಿ ಸಂಸ್ಕರಣ ಮಾರಾಟ ಮತ್ತು ಉಗ್ರಾಣ ಸಹಕಾರ ಸಂಘದ ಸಭೆ
-
Hassan21 hours agoಜಿಲ್ಲಾಧಿಕಾರಿಯ ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಪದಾಧಿಕಾರಿಗಳಿಂದ ತಹಸೀಲ್ದಾರ್ಗೆ ಮನವಿ
-
Hassan2 hours ago2025-26ರ ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ : ಫುಟ್ಬಾಲ್ನಲ್ಲಿ ಹಾಸನ ಜಿಲ್ಲೆಗೆ ರನ್ನರ್-ಅಪ್ ಗೌರವ
-
Mysore7 hours agoಮೈಸೂರಿನಲ್ಲಿ ಸಿಡಿಲು ಬಡಿದು ಮಡಿಕೇರಿಯ ಹೊಸೊಕ್ಲು ರೋಷನ್ ಬಾಲಕೃಷ್ಣ (43) ನಿಧನ .
-
Hassan23 minutes ago“ರಾಜ್ಯದ ಸಾಲ ₹10 ಲಕ್ಷ ಕೋಟಿ ತಲುಪಲಿದೆ”: ಕಾಂಗ್ರೆಸ್ ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ
-
Chamarajanagar20 hours agoಮಾಸಾಶನ ಪಡೆಯುತ್ತಿರುವ ಸಾಹಿತಿ, ಕಲಾವಿದರು ಜೀವಿತ ಪ್ರಮಾಣ ಪತ್ರ ಸಲ್ಲಿಸಲು ಮನವಿ
-
Kodagu21 hours agoಬೇಡು ಹಬ್ಬ : ಮದ್ಯ ಮಾರಾಟ ನಿಷೇಧ
