Kodagu
ಶಿಕ್ಷಣದೊಂದಿಗೆ ಕ್ರೀಡೆಯಲ್ಲೂ ಕೀರ್ತಿ ಗಳಿಸಿ : ಬಿ.ಎಸ್.ಅಂಕಿತಾ ಕರೆ
ಮಡಿಕೇರಿ : ವಿದ್ಯಾರ್ಥಿಗಳು ಶಿಕ್ಷಣದಂತೆ ಕ್ರೀಡೆಗೂ ಮಹತ್ವ ನೀಡಿ ಕ್ರೀಡಾ ಕ್ಷೇತ್ರದಲ್ಲಿ ಕೀರ್ತಿ ಗಳಿಸಬೇಕು ಎಂದು ಭಾರತೀಯ ಮಹಿಳಾ ಹಾಕಿ ತಂಡದ ತರಬೇತುದಾರರಾದ ಅಂಕಿತಾ ಬಿ.ಎಸ್ ಕರೆ ನೀಡಿದ್ದಾರೆ.
ನಗರದ ಕೊಡಗು ವಿಶ್ವ ವಿದ್ಯಾನಿಲಯದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಸಭಾಂಗಣದಲ್ಲಿ ನಡೆದ “ಕ್ರೀಡೆ ಮತ್ತು ಪ್ರತಿಭೋತ್ಸವ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಪಡೆಯಬೇಕು, ಶಿಕ್ಷಣದೊಂದಿಗೆ ಕ್ರೀಡೆಯಲ್ಲೂ ತೊಡಗಿಸಿಕೊಂಡು ಕ್ರೀಡಾ ಪ್ರತಿಭೆಯನ್ನು ಅನಾವರಣಗೊಳಿಸಬೇಕು. ಶಾಲಾ ಕಾಲೇಜುಗಳಲ್ಲಿ ನಡೆಯುವ ಕ್ರೀಡಾಕೂಟಗಳು ವಿದ್ಯಾರ್ಥಿಗಳಲ್ಲಿ ಸ್ಫೂರ್ತಿಯನ್ನು ತುಂಬುತ್ತವೆ. ಕ್ರೀಡೆಯಲ್ಲಿ ಪಾಲ್ಗೊಂಡು ಸಾಧನೆ ಮಾಡುವ ಮೂಲಕ ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲೂ ವಿದ್ಯಾರ್ಥಿಗಳು ಕೀರ್ತಿ ಗಳಿಸಬೇಕು ಎಂದರು.

ಶೈಕ್ಷಣಿಕವಾಗಿ ಓದಿಗೆ ಕೊನೆ ಎಂಬುವುದೇ ಇಲ್ಲ, ಕ್ರೀಡೆಯಲ್ಲಿ ತೊಡಗಿಸಿಕೊಂಡೇ ಹೆಚ್ಚು ಹೆಚ್ಚು ಓದಬಹುದು. ಕ್ರೀಡಾಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ಗೌರವ ದೊರೆತಾಗ ಕಾಲೇಜು ದಿನಗಳಲ್ಲಿ ತೋರಿದ ಕ್ರೀಡಾ ಪ್ರತಿಭೆಯ ನೆಪಾಗುವುದು ಸಹಜ. ಕ್ರೀಡಾಪಟುಗಳಿಗೆ ಕ್ರೀಡಾಕೂಟಗಳು ಹಬ್ಬವಿದ್ದಂತೆ, ಕ್ರೀಡೆಗಳಿಂದಲೂ ಸುಂದರ ಜೀವನವನ್ನು ರೂಪಿಸಿಕೊಳ್ಳಬಹುದು ಎಂದು ಅಂಕಿತಾ ಬಿ.ಎಸ್ ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜ್ ನ ಪ್ರಾಂಶುಪಾಲ ಮೇಜರ್ ಪ್ರೊ.ರಾಘವ ಬಿ. ಅವರು ವಿದ್ಯಾರ್ಥಿಗಳ ಶೈಕ್ಷಣಿಕ ಬದುಕು ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತ್ತಿರಬೇಕು ಮತ್ತು ಮಾದರಿಯಾಗಿರಬೇಕು ಎಂದು ಕಿವಿಮಾತು ಹೇಳಿದರು.
ಶೈಕ್ಷಣಿಕ ಜೀವನದಲ್ಲಿ ಪರಿಶ್ರಮದಿಂದ ಮಾತ್ರ ಗುರಿ ಮತ್ತು ಕನಸನ್ನು ಸಾಧಿಸಲು ಸಾಧ್ಯ. ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಸಾಧನೆ ಹಾಗೂ ಪ್ರತಿಭೆಯ ಮೂಲಕವೇ ನಕ್ಷತ್ರದಂತೆ ಹೊಳೆಯಬೇಕು. ಆತ್ಮವಿಶ್ವಾಸವನ್ನು ಬೆಳೆಸಿಕೊಂಡು ಜೀವನದಲ್ಲಿ ಸಾರ್ಥಕತೆಯನ್ನು ಕಂಡುಕೊಳ್ಳಬೇಕು. ವಿದ್ಯಾರ್ಥಿ ಜೀವನದ ಉತ್ತಮ ಸಾಧನೆ ತಂದೆ, ತಾಯಿ, ಬಂಧು ಬಳಗದಲ್ಲಿ ಖುಷಿಯನ್ನು ತಂದು ಕೊಡುತ್ತದೆ, ಇದನ್ನು ಸಮಾಜ ಸದಾ ನೆನಪಿಸಿಕೊಳ್ಳುತ್ತದೆ.
ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ತುಂಬುವ ಮೂಲಕವೇ ನಾಯಕತ್ವದ ಗುಣವನ್ನು ಬೆಳೆಸುವ ಕಾರ್ಯವನ್ನು ಫೀ.ಮಾ.ಕಾರ್ಯಪ್ಪ ಕಾಲೇಜು ಮಾಡುತ್ತಿದೆ. ಇಲ್ಲಿರುವ ಬೋಧಕ ಹಾಗೂ ಬೋಧಕೇತರ ಎಲ್ಲಾ ಸಿಬ್ಬಂದಿಗಳು ಒಗ್ಗಟ್ಟನಿಂದ ಕಾರ್ಯ ನಿರ್ವಹಿಸಿ ಕಾಲೇಜ್ ನ ಕೀರ್ತಿ ಹೆಚ್ಚುವಂತೆ ಮಾಡಿದ್ದಾರೆ. ಹಳೆಯ ವಿದ್ಯಾರ್ಥಿಗಳ ಸಂಘ ಸೇರಿದಂತೆ ದಾನಿಗಳ ಸಹಕಾರವೂ ಕಾಲೇಜ್ ಗೆ ದೊರೆಯುತ್ತಿದೆ. ಪ್ರತಿಯೊಬ್ಬ ವ್ಯಕ್ತಿ ಸಮಾಜದಲ್ಲಿ ಅಳಿಲು ಸೇವೆಯನ್ನಾದರೂ ಮಾಡುವ ಮೂಲಕ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಮೇಜರ್ ಪ್ರೊ.ರಾಘವ ಬಿ. ಅವರು ಕರೆ ನೀಡಿದರು.
ಕಾಲೇಜ್ ಗೆ ಸೇರಿದ ಆಸ್ತಿಯನ್ನು ಮುಂದಿನ ವಿದ್ಯಾರ್ಥಿಗಳಿಗಾಗಿ ಸಂರಕ್ಷಿಸಬೇಕು, ಪರಿಸರ ಕಾಳಜಿ ತೋರಬೇಕು. ಕಾಲೇಜ್ ನಲ್ಲಿ ಲಭ್ಯವಿರುವ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜ್ ನ ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರು ಸೋಲು ಪಾಠವನ್ನು ಕಲಿಸುತ್ತದೆ, ಗೆಲುವಿನ ಮೆಟ್ಟಿಲಾಗುತ್ತದೆ. ಗೆದ್ದವರಿಗೆ ಅಹಂಕಾರ ಬಂದರೆ ಅದು ಅಪಾಯಕಾರಿ ಎಂದು ಅಭಿಪ್ರಾಯಪಟ್ಟರು.
ಗುರಿ ಇದ್ದರೆ ಮಾತ್ರ ಸಾಧನೆ ಸಾಧ್ಯ, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಒಂದೊಂದು ರೀತಿಯ ಪ್ರತಿಭೆ ಇರುತ್ತದೆ. ಇದರ ಅನಾವರಣಕ್ಕೆ ಕಾಲೇಜು ಕಾರ್ಯಕ್ರಮಗಳು ಉತ್ತಮ ವೇದಿಕೆಯಾಗಿದೆ. ಕಾಲೇಜ್ ನ ಕ್ರೀಡೋತ್ಸವಗಳು ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಸಾಧನೆಗೆ ಮೊದಲ ಹೆಜ್ಜೆಯಾಗಿದೆ ಹಾಗೂ ವಿದ್ಯಾರ್ಥಿಗಳಲ್ಲಿ ಸ್ಫೂರ್ತಿಯನ್ನು ತುಂಬುತ್ತದೆ. ಗುರಿ, ಕನಸು ಮತ್ತು ಶಿಸ್ತು ಇದ್ದಾಗ ಮಾತ್ರ ವಿದ್ಯಾರ್ಥಿ ಜೀವನದಲ್ಲಿ ಯಶಸ್ಸು ಲಭಿಸಲು ಸಾಧ್ಯ ಎಂದರು.
ಫೀ.ಮಾ.ಕಾರ್ಯಪ್ಪ ಕಾಲೇಜ್ ನ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯಲ್ಲಿ ಕೊರತೆ ಆಗಬಾರದು ಎನ್ನುವ ಉದ್ದೇಶದಿಂದ ಪ್ರಾಂಶುಪಾಲರು ಪರಿಶ್ರಮ ವಹಿಸಿ ಅಗತ್ಯ ಸೌಲಭ್ಯಗಳನ್ನು ಮತ್ತು ಕಾರ್ಯಕ್ರಮಗಳನ್ನು ಒದಗಿಸುತ್ತಿದ್ದಾರೆ. ವಿದ್ಯಾರ್ಥಿಗಳು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಬೊಳ್ಳಜಿರ ಬಿ.ಅಯ್ಯಪ್ಪ ಕರೆ ನೀಡಿದರು.
ಕೊಡಗು ವಿಶ್ವ ವಿದ್ಯಾನಿಲಯದ ಪರೀಕ್ಷಾಂಗ ವಿಭಾಗದ ವಿಶೇಷ ಅಧಿಕಾರಿ ಮೇಚಿರ ರವಿಶಂಕರ್ ನಾಣಯ್ಯ, ಸಹಪಠ್ಯ ಚಟುವಟಿಕೆ ವಿಭಾಗದ ಸಂಚಾಲಕಿ ಡಾ.ಹೆಚ್.ಕೆ.ರೇಣು ವಿದ್ಯಾರ್ಥಿ ಸಂಘದ ಸಲಹೆಗಾರ ಪ್ರೊ.ಶ್ರೀಧರ ಹೆಗಡೆ, ಕ್ರೀಡಾ ವಿಭಾಗದ ಸಂಯೋಜಕ ಡಾ.ತಳವಾರ ಬಿ.ಹೆಚ್, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಸಾಂಸ್ಕೃತಿಕ ಕಾರ್ಯದರ್ಶಿಗಳು, ಎನ್‌ಎಸ್‌ಎಸ್ ನಾಯಕರು, ಬೋಧಕ, ಬೋಧಕೇತರ ಸಿಬ್ಬಂದಿಗಳು ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.
ಸನ್ಮಾನ
ಭಾರತೀಯ ಮಹಿಳಾ ಹಾಕಿ ತಂಡದ ತರಬೇತುದಾರರಾದ ಅಂಕಿತಾ ಬಿ.ಎಸ್, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜ್ ನ ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಹಾಗೂ ಸಮಾಜ ಸೇವಕ ಪ್ರಸನ್ನ ಭಟ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
* ವಾರ್ಷಿಕೋತ್ಸವ*
ಕ್ರೀಡಾಕೂಟದಲ್ಲಿ ಗೆಲುವು ಸಾಧಿಸಿದ ವಿದ್ಯಾರ್ಥಿಗಳಿಗೆ ಅತಿಥಿಗಳು ಬಹುಮಾನ ವಿತರಿಸಿದರು. ವಿವಿಧ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಗೆದ್ದವರಿಗೆ ಮೇ ೨೬ ರಂದು ನಡೆಯುವ ಕಾಲೇಜು ವಾರ್ಷಿಕೋತ್ಸವದಲ್ಲಿ ಬಹುಮಾನ ವಿತರಿಸಲಾಗುವುದು. ಕೊಡಗು ವಿವಿ ಕುಲಪತಿ ಪ್ರೊ.ಅಶೋಕ್ ಸಂಗಪ್ಪ ಆಲೂರು ಅವರ ಅಧ್ಯಕ್ಷತೆಯಲ್ಲಿ ನಡೆಯುವ ವಾರ್ಷಿಕೋತ್ಸವವನ್ನು ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಅವರು ಉದ್ಘಾಟಿಸಲಿದ್ದಾರೆ.
Kodagu
ಪಾಳುಬಿದ್ದ ಶ್ರೀ ಮಲೆಯಚ್ಚ ಅಯ್ಯಪ್ಪ ದೇವಸ್ಥಾನ ಜೀರ್ಣೋದ್ದಾರಕ್ಕೆ ಚಾಲನೆ
ಪೊನ್ನಂಪೇಟೆ : ದಕ್ಷಿಣ ಕೊಡಗಿನ ಕುತ್ತ್ ನಾಡಿನ ಕುಟ್ಟಂದಿ ಗ್ರಾಮದ ಕೊಡಕೇರಿಯಲ್ಲಿರುವ ಮಲೆಯಚ್ಚ (ಮಚ್ಚಂಗಾಡ್ ದೇವ) ಎಂದೇ ಪ್ರಸಿದ್ಧಿ ಪಡೆದ ಸುಮಾರು 700 ವರ್ಷಗಳ ಪುರಾತನ ಶ್ರೀ ಅಯ್ಯಪ್ಪ ದೇವಸ್ಥಾನವು ಕಾಲದ ಹೊಡೆತಕ್ಕೆ ಸಿಲುಕಿ ಕಳೆದ 500 ವರ್ಷಗಳಿಂದ ಪೂಜೆ-ಪುನಸ್ಕಾರಗಳಿಲ್ಲದೆ ಪಾಳುಬಿದ್ದಿದ್ದು, ಇದೀಗ ದೇವಸ್ಥಾನದ ಜೀರ್ಣೋದ್ದಾರ ಕಾರ್ಯಕ್ಕೆ ಅಧಿಕೃತ ಚಾಲನೆ ನೀಡಲಾಗಿದೆ.
ಒಂದು ಕಾಲದಲ್ಲಿ ಭಕ್ತರ ಆರಾಧನೆ, ಪೂಜೆ ಹಾಗೂ ಮಂಗಳಘೋಷಗಳಿಂದ ಕಂಗೊಳಿಸುತ್ತಿದ್ದ ಈ ಪವಿತ್ರ ಕ್ಷೇತ್ರ ಇಂದು ನಿಶ್ಯಬ್ದವಾಗಿ ಉಳಿದಿದೆ. ದೇವಸ್ಥಾನವು ಕೇವಲ ಕಲ್ಲು-ಮಣ್ಣಿನ ಕಟ್ಟಡವಾಗಿರದೇ, ಪೂರ್ವಜರ ನಂಬಿಕೆ, ಧಾರ್ಮಿಕ ಸಂಪ್ರದಾಯ, ಶ್ರದ್ಧೆ ಮತ್ತು ಸಾಂಸ್ಕೃತಿಕ ಪರಂಪರೆಯ ಪ್ರತೀಕವಾಗಿ ಗುರುತಿಸಿಕೊಂಡಿದೆ. ಹಲವು ವರ್ಷಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಈ ಐತಿಹಾಸಿಕ ಕ್ಷೇತ್ರವನ್ನು ಪುನಃ ಭಕ್ತರ ಆರಾಧನಾ ಕೇಂದ್ರವನ್ನಾಗಿ ರೂಪಿಸುವ ಉದ್ದೇಶದಿಂದ ಕೊಡಕೇರಿ–ಕುಟ್ಟಂದಿ ಗ್ರಾಮ ಸಮಿತಿ ಹಾಗೂ ಧಾರ್ಮಿಕ ಮುಖಂಡರು ಜೀರ್ಣೋದ್ದಾರ ಕಾರ್ಯಕ್ಕೆ ಮುಂದಾಗಿದ್ದಾರೆ.
ದೇವಸ್ಥಾನದ ಪುನರ್ ನಿರ್ಮಾಣವನ್ನು ಶಾಸ್ತ್ರೋಕ್ತವಾಗಿ ಕೈಗೊಳ್ಳಲಾಗುತ್ತಿದ್ದು, ಗರ್ಭಗುಡಿ, ಪ್ರಾಕಾರ, ರಾಜಗೋಪುರ ಹಾಗೂ ಸುತ್ತಮುತ್ತಲಿನ ಆವರಣವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ. ಈ ಕಾಮಗಾರಿಗೆ ಅಂದಾಜು ರೂ.45 ಲಕ್ಷ ವೆಚ್ಚವಾಗಲಿದೆ ಎಂದು ಜೀರ್ಣೋದ್ದಾರ ಸಮಿತಿ ಮಾಹಿತಿ ನೀಡಿದೆ.

ಇದು ಒಂದು ಗ್ರಾಮ ಅಥವಾ ಒಂದು ಸಂಘಟನೆಯಿಂದ ಮಾತ್ರ ಪೂರ್ಣಗೊಳ್ಳುವ ಕಾರ್ಯವಲ್ಲ. ಸನಾತನ ಧರ್ಮ, ಹಿಂದೂ ಸಂಸ್ಕೃತಿ ಹಾಗೂ ಪೂರ್ವಜರ ಪರಂಪರೆಯನ್ನು ಉಳಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಮಹತ್ತರ ಉದ್ದೇಶ ಹೊಂದಿರುವ ಈ ಕಾರ್ಯಕ್ಕೆ ಪ್ರತಿಯೊಬ್ಬ ಭಕ್ತನ ಸಹಕಾರ ಅಗತ್ಯವಾಗಿದೆ ಎಂದು ಸಮಿತಿ ಮನವಿ ಮಾಡಿದೆ.
“ದೇವಾಲಯ ನಿರ್ಮಾಣವು ಸಾವಿರ ಯಜ್ಞಗಳ ಫಲ” ಎಂಬ ಶಾಸ್ತ್ರ ವಚನದಂತೆ, ಭಕ್ತರು ತಮ್ಮ ಶಕ್ತಾನುಸಾರ ದೇಣಿಗೆ ಹಾಗೂ ಸಹಾಯ ನೀಡಿ ಈ ಪುರಾತನ ದೇವಸ್ಥಾನವನ್ನು ಮತ್ತೆ ಜೀವಂತ ಆರಾಧನಾ ಕೇಂದ್ರವನ್ನಾಗಿ ರೂಪಿಸಲು ಕೈಜೋಡಿಸಬೇಕು ಎಂದು ಕೋರಲಾಗಿದೆ.
ಮಲೆಯಚ್ಚ ದೇವಸ್ಥಾನ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಚೇರಂಡ ರವಿ ಬಿದ್ದಪ್ಪ ನೇತೃತ್ವದಲ್ಲಿ ಉಪಾಧ್ಯಕ್ಷ ಕರ್ತಮಾಡ ತರುಣ್, ಕಾರ್ಯದರ್ಶಿ ಕಳ್ಳಿಚಂಡ ಸಂಪತ್ ನಾಚಪ್ಪ, ಖಜಾಂಚಿ ಚೇರಂಡ ನಾಚಪ್ಪ ಸೇರಿದಂತೆ ಚೇರಂಡ ಕೀರ್ತಿ ತಿಮ್ಮಯ್ಯ, ಚೇರಂಡ ದರ್ಶನ್ ದೇವಯ್ಯ, ಕರ್ತಮಾಡ ಪ್ರೇಮ, ಕರ್ತಮಾಡ ಪುನೀತ್, ಚೇರಂಡ ಮೋಟಯ್ಯ, ಕರ್ತಮಾಡ ನಿಕಿಲ್, ಚೇರಂಡ ರೋಷನ್, ಚೇರಂಡ ಕಿರಣ್ ಹಾಗೂ ಚೇರಂಡ ನಿಕಿಲ್ ಸೇರಿದಂತೆ ಸದಸ್ಯರು ಗ್ರಾಮಸ್ಥರೊಂದಿಗೆ ಸೇರಿ ಕಾರ್ಯನಿರ್ವಹಿಸುತ್ತಿದ್ದಾರೆ.
ದೇಣಿಗೆ ನೀಡಲು ಆಸಕ್ತರು ಮೊಬೈಲ್ ಸಂಖ್ಯೆ 9449181937, 9964029762, 9480605103 ಅನ್ನು ಸಂಪರ್ಕಿಸಬಹುದಾಗಿದೆ. ಬ್ಯಾಂಕ್ ಖಾತೆ: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ವೀರಾಜಪೇಟೆ ಶಾಖೆ, ಖಾತೆ ಸಂಖ್ಯೆ: 000822010001823, IFSC: UBIN0900087.
Kodagu
ಅಂಗಡಿಯಲ್ಲಿ ಕಳ್ಳತನ: ಇಬ್ಬರು ಅಪರಿಚಿತರಿಂದ ಕೃತ್ಯ
ಸಿದ್ದಾಪುರ: ಪಟ್ಟಣದ ಮಡಿಕೇರಿ ರಸ್ತೆಯಲ್ಲಿರುವ ಪಿ.ಆರ್. ಟ್ರೇಡರ್ಸ್ ಎಂಬ ಫ್ಲೈವುಡ್ ಮಾರಾಟದ ಅಂಗಡಿಯಲ್ಲಿ ₹ 50 ಸಾವಿರ ನಗದು ಕಳ್ಳತನವಾಗಿರುವ ಘಟನೆ ನಡೆದಿದ್ದು, ಈ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಂಗಡಿಯ ವ್ಯವಸ್ಥಾಪಕರಾದ ನೆಲ್ಯಹುದಿಕೇರಿ ಗ್ರಾಮದ ಎಂ.ಜಿ. ಕಾಲೋನಿ ನಿವಾಸಿ ಅಜೀಜ್ ಪಿ.ಸಿ. (58) ನೀಡಿದ ದೂರಿನಂತೆ, ಅವರು ಕಳೆದ ಸುಮಾರು 13 ವರ್ಷಗಳಿಂದ ಪಿ.ಆರ್. ಟ್ರೇಡರ್ಸ್ನಲ್ಲಿ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಮೇ 25 ರಂದು ಬೆಳಿಗ್ಗೆ ಸುಮಾರು 11 ಗಂಟೆ ವೇಳೆಗೆ ಇಬ್ಬರು ಅಪರಿಚಿತರು ಅಂಗಡಿಗೆ ಬಂದು ಮರದ ಬೀಡಿಂಗ್ ಮತ್ತು ಪ್ಲೈವುಡ್ ಬೇಕೆಂದು ಕೇಳಿದ್ದಾರೆ. ತಾವು ಮಡಿಕೇರಿ ರಸ್ತೆಯ ಪೆಟ್ರೋಲ್ ಬಂಕ್ ಸಮೀಪದ ಕೆಲಸಕ್ಕಾಗಿ ಸಾಮಗ್ರಿ ಬೇಕಾಗಿದೆ ಎಂದು ತಿಳಿಸಿದ್ದಾರೆ. ಬಳಿಕ ಅವರು ಎಸ್.ಎಚ್. ಫೆವಿಕೋಲ್ ಡಬ್ಬವನ್ನು ಖರೀದಿಸಿ ₹500 ನೀಡಿದ್ದು, ಅದರ ಉಳಿದ ₹310 ಹಣವನ್ನು ವ್ಯವಸ್ಥಾಪಕರು ವಾಪಸ್ ನೀಡಿದ್ದಾರೆ.

ನಂತರ ಅವರು ಕೇಳಿದ ಮರದ ಬೀಡಿಂಗ್ ತೆಗೆಯಲು ವ್ಯವಸ್ಥಾಪಕರು ಹೋದ ವೇಳೆ, ಆರೋಪಿಗಳು ಅವರ ಗಮನವನ್ನು ಬೇರೆಡೆ ಸೆಳೆದು ಗಲ್ಲದ ಪೆಟ್ಟಿಗೆಯ ಕೀ ಕದ್ದು, ಅದರಲ್ಲಿದ್ದ ₹50 ಸಾವಿರ ನಗದು ಹಣವನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಘಟನೆ ಕುರಿತು ಅಜೀಜ್ ಪಿ.ಸಿ. ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಈ ಪ್ರಕರಣವನ್ನು ಸಿದ್ದಾಪುರ ಪೊಲೀಸ್ ಠಾಣೆಯ ಎಎಸ್ಐ ಮಂಜುನಾಥ್ ಎಚ್.ಕೆ. ದಾಖಲಿಸಿಕೊಂಡಿದ್ದಾರೆ.
Kodagu
ಬೇಡು ಹಬ್ಬ : ಮದ್ಯ ಮಾರಾಟ ನಿಷೇಧ
ಮಡಿಕೇರಿ : ಕೊಡಗು ಜಿಲ್ಲೆಯ ಗೋಣಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ದೇವರಪುರ ಗ್ರಾಮದ ಅಯ್ಯಪ್ಪ ಭದ್ರಕಾಳಿ ದೇವಸ್ಥಾನದಲ್ಲಿ ಮೇ, 27 ಮತ್ತು 28 ರಂದು ನಡೆಯುವ ಬೇಡು ಹಬ್ಬದ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತಾಸಕ್ತಿಯಿಂದ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಅಬಕಾರಿ ಕಾಯ್ದೆ 1965ರ ಕಲಂ 21 ರಲ್ಲಿ ದತ್ತವಾಗಿರುವ ಅಧಿಕಾರದಂತೆ ಮೇ, 28 ರಂದು ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ದೇವರಪುರ ಗ್ರಾಮದ ಸುತ್ತಮುತ್ತಲಿನ 5 ಕಿ.ಮೀ. ವ್ಯಾಪ್ತಿಯಲ್ಲಿ ಎಲ್ಲಾ ರೀತಿಯ ಮದ್ಯದ ಅಂಗಡಿ, ಬಾರ್, ಹೋಟೆಲ್ ಮತ್ತು ಕ್ಲಬ್‍ಗಳಲ್ಲಿ ಎಲ್ಲಾ ವಿಧದ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಆದೇಶಿಸಿದ್ದಾರೆ.
-
State18 hours agoಗೃಹಲಕ್ಷ್ಮೀ ಯೋಜನೆಯಲ್ಲಿ ಬದಲಾವಣೆ
-
Kodagu23 hours agoದಿ ಮೈಸೂರು ಕಾಫಿ ಸಂಸ್ಕರಣ ಮಾರಾಟ ಮತ್ತು ಉಗ್ರಾಣ ಸಹಕಾರ ಸಂಘದ ಸಭೆ
-
Hassan2 hours ago2025-26ರ ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ : ಫುಟ್ಬಾಲ್ನಲ್ಲಿ ಹಾಸನ ಜಿಲ್ಲೆಗೆ ರನ್ನರ್-ಅಪ್ ಗೌರವ
-
Hassan21 hours agoಜಿಲ್ಲಾಧಿಕಾರಿಯ ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಪದಾಧಿಕಾರಿಗಳಿಂದ ತಹಸೀಲ್ದಾರ್ಗೆ ಮನವಿ
-
Mysore7 hours agoಮೈಸೂರಿನಲ್ಲಿ ಸಿಡಿಲು ಬಡಿದು ಮಡಿಕೇರಿಯ ಹೊಸೊಕ್ಲು ರೋಷನ್ ಬಾಲಕೃಷ್ಣ (43) ನಿಧನ .
-
Hassan23 minutes ago“ರಾಜ್ಯದ ಸಾಲ ₹10 ಲಕ್ಷ ಕೋಟಿ ತಲುಪಲಿದೆ”: ಕಾಂಗ್ರೆಸ್ ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ
-
Chamarajanagar20 hours agoಮಾಸಾಶನ ಪಡೆಯುತ್ತಿರುವ ಸಾಹಿತಿ, ಕಲಾವಿದರು ಜೀವಿತ ಪ್ರಮಾಣ ಪತ್ರ ಸಲ್ಲಿಸಲು ಮನವಿ
-
Kodagu21 hours agoಬೇಡು ಹಬ್ಬ : ಮದ್ಯ ಮಾರಾಟ ನಿಷೇಧ
