Connect with us

Mandya

ಪ್ರಧಾನ ಮಂತ್ರಿ 15 ಅಂಶಗಳ ಕಾರ್ಯಕ್ರಮ ಅನುಷ್ಠಾನದಲ್ಲಿ ನಿರ್ಲಕ್ಷ್ಯ ಬೇಡ : ಯು. ನಿಸಾರ್ ಅಹಮ್ಮದ್

Published

on

ಮಂಡ್ಯ: ಅಲ್ಪಸಂಖ್ಯಾತರ ಅಭಿವದ್ಧಿಗಾಗಿ ಪ್ರಧಾನಮಂತ್ರಿ ಯವರ 15 ಅಂಶಗಳ ಕಾರ್ಯಕ್ರಮಗಳನ್ನು ಕಾಲಮಿತಿಯೊಳಗೆ ತಲುಪಿಸಬೇಕು ಹಾಗೂ ಕಾರ್ಯಕ್ರಮದ ಪರಿಣಾಮಕಾರಿ ಅನುಷ್ಠಾನಕ್ಕೆ ಎಲ್ಲ ಇಲಾಖೆಯ ಅಧಿಕಾರಿಗಳು ಆದ್ಯತೆ ನೀಡಬೇಕು. ಯೋಜನೆಗಳ ಅನುಷ್ಠಾನದಲ್ಲಿ ಯಾವುದೇ ನಿರ್ಲಕ್ಷ್ಯ ಬೇಡ ಎಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾದ ಯು.ನಿಸಾರ್ ಅಹಮದ್ ಅವರು ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮಕ್ಕೆ ಸಂಬಂಧಿಸಿದ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮವು ಅಲ್ಪಸಂಖ್ಯಾತ ಸಮುದಾಯಗಳಾದ ಮುಸ್ಲಿಂ, ಜೈನ್, ಕ್ರಿಶ್ಚಿಯನ್, ಸಿಖ್, ಪಾರ್ಸಿ ಹಾಗೂ ಬೌದ್ಧ ಸಮುದಾಯಗಳ ಸಮಗ್ರ ಅಭಿವೃದ್ಧಿಗಾಗಿ ರೂಪಿಸಲಾದ ಪ್ರಮುಖ ಯೋಜನೆಯಾಗಿದೆ.

ಅಲ್ಪಸಂಖ್ಯಾತ ಸಮುದಾಯದ 6 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಅಂಗನವಾಡಿ ಪ್ರವೇಶ ಪಡೆಯುತ್ತಾರೆ. ಆದರೆ ಮಕ್ಕಳು ಸೇರಿದ ನಂತರ ಕೆಲವು ತಿಂಗಳ ನಂತರ ಹೊರಗುಳಿಯುತ್ತಾರೆ. ಇದನ್ನು ಗಂಬೀರವಾಗಿ ಪರಿಗಣಿಸಿ ಮಹಿಳಾ ಮತ್ತು ಮಕ್ಕಳ ಇಲಾಖೆಯ ಅಧಿಕಾರಿಗಳು ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಇಲಾಖೆಯ ವತಿಯಿಂದ ಅಲ್ಪಸಂಖ್ಯಾತರು ಹೆಚ್ಚಿರುವ ಬಡಾವಣೆಗಳಲ್ಲಿ ಮನೆ-ಮನೆಗೆ ತೆರಳಿ ಅಂಗನವಾಡಿಯ ಪ್ರಯೋಜನಗಳ ಬಗ್ಗೆ ಪೋಷಕರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಅವರು ತಿಳಿಸಿದರು.

ಮಂಡ್ಯ ಜಿಲ್ಲೆಯಲ್ಲಿ 64 ಅಲ್ಪ ಸಂಖ್ಯಾತ ಅಂಗನವಾಡಿ ಕೇಂದ್ರಗಳು ಇವೆ. ಒಟ್ಟು 4326 ಮಕ್ಕಳು ಅಂಗನವಾಡಿ ಕೇಂದ್ರಕ್ಕೆ ಹಾಜರಾಗುತ್ತಿದ್ದಾರೆ. ಈ ಬಗ್ಗೆ ಅಲ್ಪ ಸಂಖ್ಯಾತರು ಹೆಚ್ಚಿರುವ ಸ್ಧಳಗಳಿಗೆ ಭೇಟಿ ನೀಡಿ ಅಂಗನವಾಡಿ ಕೇಂದ್ರದಿಂದ ಹೊರಗುಳಿಯುವ ಕಾರಣ ತಿಳಿದು ಅದಕ್ಕೆ ಅಗತ್ಯ ಕ್ರಮವಹಿಸಬೇಕು ಎಂದು ಅವರು ತಿಳಿಸಿದರು.

 

ಭವಿಷ್ಯದಲ್ಲಿ ಉತ್ತಮ ಉದ್ಯೋಗಾವಕಾಶವಿರುವ ವೃತ್ತಿ ಆಧಾರಿತ ತರಬೇತಿಗಳನ್ನು ಅರ್ಹರಿಗೆ ನೀಡುವುದರ ಜೊತೆಗೆ ಉದ್ಯೋಗವಕಾಶಗಳ ಬಗ್ಗೆ ಜಾಗೃತಿ ಮೂಡಿಸಿ, ವೃತ್ತಿ ಕೌಶಲ್ಯ ತರಬೇತಿ ನೀಡಿ ಅಲ್ಪಸಂಖ್ಯಾತರು ಮಾತ್ರವಲ್ಲದೆ ಎಲ್ಲ ವರ್ಗದ ಅರ್ಹರಿಗೂ ಉದ್ಯೋಗವಕಾಶಗಳನ್ನು ಒದಗಿಸುವುದು ಅಧಿಕಾರಿಗಳ ಜವಾಬ್ದಾರಿಯಾಗಬೇಕು ಎಂದು ಅವರು ತಿಳಿಸಿದರು.

ಪಿಎಂ ಸ್ವಾನಿಧಿ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳ ಅನುಕೂಲಕ್ಕಾಗಿ ಜಾರಿಗೆ ತಂದಿರುವ ಮೈಕ್ರೋ-ಕ್ರೆಡಿಟ್ (ಕಿರು ಸಾಲ) ಯೋಜನೆಯನ್ನು ಅಲ್ಪಸಂಖ್ಯಾತ ಫಲನುಭವಿಗಳಿಗೆ ತಲುಪಿಸುವ ಕೆಲಸ ಆಗಬೇಕು ಎಂದು ತಿಳಿಸಿದರು.ಕರ್ನಾಟಕ ಸರ್ಕಾರದ ಯುವ ನಿಧಿ ಯೋಜನೆಯ ಬಗ್ಗೆ ಪದವಿ ಹಾಗೂ ಡಿಪ್ಲೋಮ ಪಡೆದ ಅಲ್ಪಸಂಖ್ಯಾತ ನಿರುದ್ಯೋಗಿ ಯುವಕ ಹಾಗೂ ಯುವತಿಯರಿಗೆ ಅರಿವು ಮೂಡಿಸಿ ಈ ಯೋಜನೆಯ ಸದುಪಯೋಗ ಮಾಡಿಕೊಳ್ಳುವಂತೆ ಮಾಡಬೇಕು ಎಂದು ತಿಳಿಸಿದರು.

ಸರ್ಕಾರವು ಅಲ್ಪಸಂಖ್ಯಾತರಿಗೆ (ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಬೌದ್ಧ, ಜೈನ ಮತ್ತು ಪಾರ್ಸಿ) ಸ್ವಯಂ ಉದ್ಯೋಗ ಹಾಗೂ ಉನ್ನತ ಶಿಕ್ಷಣಕ್ಕಾಗಿ ಬ್ಯಾಂಕುಗಳ ಮೂಲಕ ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಸಾಲ ಹಾಗೂ ಸಬ್ಸಿಡಿ ಸೌಲಭ್ಯಗಳನ್ನು ನೀಡುತ್ತಿವೆ. ಈ ಸಂಬಂಧ ಮಂಡ್ಯದಲ್ಲಿ ಶಿಕ್ಷಣಕ್ಕಾಗಿ 477 ಅಲ್ಟಸಂಖ್ಯಾತ ಮಂದಿಗೆ ಸಾಲ ನೀಡಲಾಗಿದೆ ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್ ಅರುಣ ಕುಮಾರ್ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ ಕುಮಾರ ಅವರು ಜಿಲ್ಲೆಯಲ್ಲಿ ಅಲ್ಪಸಂಖ್ಯಾತ ಕಲ್ಯಾಣ ಯೋಜನೆಗಳ ಅನುಷ್ಠಾನ ಹಾಗೂ ಸರ್ಕಾರದ ಸೌಲಭ್ಯಗಳು ಅಲ್ಪಸಂಖ್ಯಾತರಿಗೆ ಸಮರ್ಪಕವಾಗಿ ತಲುಪುತ್ತಿದೆ. ಈ ಸಂಬಂಧ ಅಗತ್ಯ ಕ್ರಮವಹಿಸಲಾಗಿದೆ ಎಂದು ಸಭೆ ತಿಳಿಸಿದರು.

ಮಕ್ಕಳು ಶಾಲೆಯಿಂದ ಹೊರಗುಳಿಯಂದಂತೆ ಹಾಗೂ ಶಿಕ್ಷಣದಿಂದ ವಂಚಿತರಾಗದಂತೆ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ. ಆರ್. ನಂದಿನಿ, ಅಪರ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ರಾಜ್ಯ ಅಲ್ಪಸಂಖ್ಯಾತ ಅಭಿವೃದ್ಥಿ ನಿಗಮದ ವಿಶೇಷ ಕರ್ತವ್ಯಧಿಕಾರಿ ಮುಜಿಬುಲ್ ಜಫಾರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳಾದ ಜಯಣ್ಣ ಹಾಗೂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

Continue Reading

Mandya

ವೈದ್ಯರ ದಿನಾಚರಣೆ

Published

on

ಮಂಡ್ಯ: ನಗರದ ಹೊರವಲಯದಲ್ಲಿರುವ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (ಐಎಂಎ ಹಾಲ್), ಮಂಡ್ಯ, ವತಿಯಿಂದ ನಡೆದ ವೈದ್ಯರ ದಿನಾಚರಣೆ- 2026ರ ಕಾರ್ಯಕ್ರಮವು ಅಧ್ಯಕ್ಷ ಡಾ. ಟಿ.ಎಸ್. ಮರಿಗೌಡರವರ ಅಧ್ಯಕ್ಷತೆಯಲ್ಲಿ ಜರಗಿತು.

ಸದರಿ ಕಾರ್ಯಕ್ರಮವನ್ನು ಹಿರಿಯ ಡಯಾಬಿಟಿಕ್ ವೈದ್ಯ ಹಾಗೂ ಆದಿಚುಂಚನಗಿರಿ ಯುನಿವರ್ಸಿಟಿ, ಬೆಳ್ಳೂರು, ಮೈಸೂರು ಮಾಜಿ ಉಪಕುಲಪತಿಗಳಾದ ಡಾ. ಎಂ.ಎ. ಶೇಖರ್ ರವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಂಡ್ಯ ಶಾಖೆಯ ವೈದ್ಯರುಗಳಾದ ಡಾ. ಬಿ.ಎಂ. ಪ್ರಭಾವತಿ, ಡಾ. ಉತ್ತಮ್ ಚಂದ್, ಡಾ. ಎಚ್.ಸಿ. ನಾರಾಯಣ್, ಡಾ. ಶ್ರೀನಿವಾಸ್ ರವರಿಗೆ 2026ನೇ ಸಾಲಿನ ವೈದ್ಯ ಚೇತನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಡಾ. ಟಿ.ಎನ್. ಮರಿಗೌಡರವರು ಮಾತನಾಡಿ, ಮಹಾನ್ ವೈದ್ಯ, ಶಿಕ್ಷಣ ತಜ್ಞ ಹಾಗೂ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿಗಳಾಗಿದ್ದ ಡಾ. ಬಿ.ಸಿ. ರಾಯ್ (ಡಾ ಬಿದಾನ್ ಚಂದ್ರ ರಾಯ್) ರವರು 1882ರ ಜುಲೈ 1 ರಂದು ಜನಿಸಿ, 1962ರ ಜುಲೈ 1 ನೇ ತಾರೀಕಿನಲ್ಲಿಯೇ ತಮ್ಮ 80ನೇ ಜನ್ಮದಿನದಂದು ಇಹಲೋಕ ಇರಿಸಿದರು. ಅವರ ಆದರ್ಶಮಯ ಜೀವನ ಹಾಗೂ ವೈದ್ಯಕೀಯ ಸೇವೆಗೆ ಗೌರವ ಸೂಚಿಸುವ ಸಲುವಾಗಿ ಜುಲೈ 1 ರಂದು ಭಾರತದ ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಆಚರಿಸುತ್ತಿದೆ.

ಇಂದಿನ ಆಧುನಿಕ ಆರೋಗ್ಯದ ವ್ಯವಸ್ಥೆಯಲ್ಲಿ ವೈದ್ಯರ ಮಹಾ ಪಾತ್ರವು ಅತ್ಯಂತ ಮಹತ್ವದ್ದಾಗಿದ್ದು, ರೋಗವನ್ನು ಗುಣಪಡಿಸುವುದು ಮಾತ್ರವಲ್ಲದೆ ಆರೋಗ್ಯ ಜಾಗೃತಿ ಮೂಡಿಸುವುದು, ತುರ್ತು ಸಂದರ್ಭದಲ್ಲಿ ಜೀವನವನ್ನು ಉಳಿಸುವುದು ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸುವುದರ ಜೊತೆಗೆ ಸಾರ್ವಜನಿಕ ರ ಆರೋಗ್ಯವನ್ನು ಕಾಪಾಡುವುದು ವೈದ್ಯರ ಪ್ರಮುಖ ಹೊಣೆಗಾರಿಕೆಯಾಗಿದೆ.

2019 ರ ಮಾರ್ಚ್ ತಿಂಗಳಲ್ಲಿ ವಿಶ್ವದಾದ್ಯಂತ ಹರಡಿದ್ದ ಮಹಾಮಾರಿ ಕೋವಿಡ್ ಸಂದರ್ಭದಲ್ಲಿ ವೈದ್ಯರು ತಮ್ಮ ಕುಟುಂಬಕ್ಕಿಂತ ರೋಗಿಗಳ ಸೇವೆಗೆ ಹೆಚ್ಚಿನ ಆದ್ಯತೆಯನ್ನು ನೀಡಿ, ಜೀವದ ಹಂಗು ತೊರೆದು ಸೇವೆಯನ್ನು ಸಲ್ಲಿಸಿದ ತ್ಯಾಗವನ್ನು ಎಂದೆಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಕರ್ನಾಟಕ ರಾಜ್ಯದ ಗ್ರಾಮೀಣ ಹಾಗೂ ತಾಲೂಕು ಪ್ರದೇಶಗಳ ಆರೋಗ್ಯ ಸೇವೆಯ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತಿರುವ ಸಾವಿರಾರು ಸಣ್ಣ ಮತ್ತು ಮಧ್ಯಮ ಗಾತ್ರದ ಆಸ್ಪತ್ರೆಗಳು ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ತ್ವರಿತ ಚಿಕಿತ್ಸೆಯನ್ನು ಸಮರ್ಪಕವಾಗಿ ಒದಗಿಸುತ್ತಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಈ ಆಸ್ಪತ್ರೆಗಳು ಹಲವಾರು ಆಡಳಿತಾತ್ಮಕ ಹಾಗೂ ನಿಯಂತ್ರಣ ಸಂಬಂಧಿತ ಸವಾಲುಗಳನ್ನು ಎದುರಿಸುತ್ತಿದೆ. ಹಾಗೆಯೇ ಹಲವಾರು ಕಡೆಗಳಲ್ಲಿ ನಕಲಿ ವೈದ್ಯರುಗಳ ಹಾವಳಿ ಹೆಚ್ಚಾಗುತ್ತಿರುವುದು ಕಳವಳದ ಸಂಗತಿಯಾಗಿದೆ ಎಂದು ನುಡಿದರು.

ವೈದ್ಯರ ದಿನಾಚರಣೆಯ ಸಂದರ್ಭದಲ್ಲಿ ವೈದ್ಯರನ್ನು ಗೌರವಿಸುವುದಷ್ಟೇ ಸಾಕಾಗುವುದಿಲ್ಲ, ಅವರು ಎದುರಿಸುತ್ತಿರುವ ನೈಜ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಡುವ ಸಂಕಲ್ಪವನ್ನು ತೊಡುವುದು ಅಗತ್ಯವಾಗಿದೆ. ವೈದ್ಯರು ಹಾಗೂ ಸಮಾಜ ಪರಸ್ಪರ ವಿಶ್ವಾಸ ಹಾಗೂ ಸಹಕಾರದೊಂದಿಗೆ ಕಾರ್ಯವನ್ನು ನಿರ್ವಹಿಸಿದಾಗ ಮಾತ್ರ ಆರೋಗ್ಯವಂತ ಕರ್ನಾಟಕದ ಕನಸು ನನಸಾಗುತ್ತದೆ. ವೈದ್ಯರನ್ನು ಗೌರವಿಸುವುದರ ಜೊತೆಗೆ ಅವರಿಗೆ ನೀಡುವ ಸಹಕಾರ ತಮ್ಮ ಆರೋಗ್ಯವನ್ನು ಗೌರವಿಸಿದಂತೆ ಆಗುತ್ತದೆ ಎಂದು ಅಭಿಪ್ರಾಯಪಟ್ಟರು.

ವೈದ್ಯರ ದಿನಾಚರಣೆಯ ಪ್ರಯುಕ್ತ ಏರ್ಪಡಿಸಲಾಗಿದ್ದ ವಿವಿಧ ಬಗೆಯ ಸ್ಪರ್ಧೆಯಲ್ಲಿ ಪಾಲ್ಗೊಂಡು, ವಿಜಯತರಾದವರಿಗೆ ಮಂಡ್ಯ ವೈದ್ಯಕೀಯ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಡಾ. ಬಿ. ನರಸಿಂಹಸ್ವಾಮಿರವರು ಬಹುಮಾನವನ್ನು ವಿತರಿಸಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಡಾ. ಬಿ.ಎಂ. ಜಗದೀಶ್ ಕುಮಾರ್, ಡಿಎಚ್ಓ ಡಾ. ಬೆಟ್ಟ, ಮೈಸೂರಿನ ಡಿಎಚ್ಒ ಡಾ. ಕೆ. ಮೋಹನ್ ರವರು ವೈದ್ಯರ ದಿನಾಚರಣೆಯ ಕುರಿತು ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಡಾ. ವಿ. ಎಲ್. ನಂದೀಶ್, ಐಎಂಎ ಸಂಸ್ಥೆಯ ಕಾರ್ಯದರ್ಶಿಗಳಾದ ಡಾ. ಎಂ. ವಿನಯ್, ಡಾ. ಸಿದ್ದೇಗೌಡ, ಡಾ. ಕೃಷ್ಣಪ್ಪ, ಮಾಲಿನಿ ಐಎಂಎ ಸಂಸ್ಥೆಯ ವಿಭಾಗದ ಅಧ್ಯಕ್ಷರಾದ ಡಾ. ಜಾಹ್ನವಿ, ಕಾರ್ಯದರ್ಶಿಗಳಾದ ಡಾ. ಬಿಂದಿಯಾರವರು ಸೇರಿದಂತೆ ನೂರಕ್ಕೂ ಹೆಚ್ಚು ಮಂದಿ ವೈದ್ಯರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Continue Reading

Mandya

ಆನ್‌ಲೈನ್ ಮೂಲಕ ಅರ್ಜಿ ಆಹ್ವಾನ

Published

on

ಮಂಡ್ಯ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಅರ್ಹ ಸಾಧಕ ಕ್ರೀಡಾಪಟುಗಳಿಗೆ ವಿವಿಧ ಪ್ರಶಸ್ತಿ ಮತ್ತು ಪ್ರೋತ್ಸಾಹಧನ ನೀಡುವ ಯೋಜನೆಗಳು ಜಾರಿಯಲ್ಲಿದ್ದು, ಪ್ರಶಸ್ತಿಯ ವಿವರ: ಏಕಲವ್ಯ ಪ್ರಶಸ್ತಿ, ಜೀವಮಾನ ಸಾಧನೆ ಪ್ರಶಸ್ತಿ, ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ, ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿ, ನಗದು ಪುರಸ್ಕಾರ, ಶೈಕ್ಷಣಿಕ ಶುಲ್ಕ ಮರುಪಾವತಿ, ಕ್ರೀಡಾ ವಿದ್ಯಾರ್ಥಿ ವೇತನ, ಗುರಿ-ಒಲಂಪಿಕ್ ಪದಕ ಕಾರ್ಯಕ್ರಮಗಳಡಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಹ ಕ್ರೀಡಾಪಟುಗಳು ಹಾಗೂ ಆಸಕ್ತರು ಅರ್ಜಿಗಳನ್ನು ಅಧಿಕೃತ ಜಾಲತಾಣ: https://sevasindhu.karnataka.gov.in ಮೂಲಕ ಕಡ್ಡಾಯವಾಗಿ ಆನ್‌ಲೈನ್ ಮೂಲಕ ನಿಗದಿತ ದಿನಾಂಕದೊಳಗೆ ಸಲ್ಲಿಸಲು ಕೋರಿದೆ.

ಅರ್ಜಿ ಸಲ್ಲಿಸಲು ಜುಲೈ 31 ರಂದು ಕೊನೆಯ ದಿನಾಂಕವಾಗಿರುತ್ತದೆ. ಅರ್ಜಿ ಸಲ್ಲಿಸುವ ಸಂಬಂಧ ಹೆಚ್ಚಿನ ಮಾಹಿತಿಗಾಗಿ ಯುವ ಸಹಾಯವಾಣಿ 155265 ಕ್ಕೆ ಕಛೇರಿ ಅವಧಿಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Continue Reading

Mandya

ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಮಂಡ್ಯ ವಿದ್ಯಾರ್ಥಿಗಳ ಸಾಧನೆ

Published

on

ಮಂಡ್ಯ : ಇತ್ತೀಚೆಗೆ ಕೊಳ್ಳೇಗಾಲದಲ್ಲಿ ನಡೆದ ಚಾಮರಾಜ ಕರಾಟೆ ಕಪ್ ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಮಂಡ್ಯ ಜಿಲ್ಲೆಯಿಂದ ಸುಮಾರು 10 ವಿದ್ಯಾರ್ಥಿಗಳು ಭಾಗವಹಿಸಿ ಹಲವು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಪಡೆದಿರುತ್ತಾರೆ ಎಂದು ಗೋಜುರಿಯೋ ಕರಾಟೆ ದು ಅಕಾಡೆಮಿ ಇಂಡಿಯಾ ಹಾಗೂ ಟೀಮ್ ವಿ ಎಲ್ ಎಮ್ ಎ ಎ ಕರಾಟೆ ಸಂಸ್ಥೆಯ ಅಧ್ಯಕ್ಷರಾದ ಕರಾಟೆ ಲೋಕೇಶ್ ಮೊದಲಿಯಾರ್ ತಿಳಿಸಿದ್ದಾರೆ.

ಈ ಕರಾಟೆ ಸ್ಪರ್ಧೆಯಲ್ಲಿ 9 ವರ್ಷದೊಳಗಿನ ಬಾಲಕರ ಕಟ ವಿಭಾಗದಲ್ಲಿ ಲಿಕೇಶ್ ದ್ವಿತೀಯ ಸ್ಥಾನ. ಶರ್ವ ದ್ವಿತೀಯ ಸ್ಥಾನ. ಆರುಶ್ ದ್ವಿತೀಯ ಸ್ಥಾನ. ಪರಿನಿತ್ ತೃತೀಯ ಸ್ಥಾನ. ಅದೇ ರೀತಿ ಬಾಲಕಿಯರ ವಿಭಾಗದಲ್ಲಿ ಶರ್ವರಿ ಪ್ರಥಮ ಸ್ಥಾನ ಪಡೆದಿರುತ್ತಾರೆ. ಅದೇ ರೀತಿ 14 ರಿಂದ 16 ವರ್ಷದೊಳಗಿನ ಬಾಲಕ/ ಬಾಲಕಿಯರ ವಯೋಮಿತಿಯ ವಿಭಾಗದಲ್ಲಿ ಮದನ್ ಕಟ ತೃತೀಯ ಸ್ಥಾನ ಕುಮುತೇ ದ್ವಿತೀಯ ಸ್ಥಾನ. ಶಶಾಂಕ್ ಗೌಡ ಕಟ ಹಾಗೂ ಕು ಮಕ ವಿಭಾಗದಲ್ಲಿ ದ್ವಿತೀಯ ಸ್ಥಾನ. ರಂಜನ್ ಕಟ ವಿಭಾಗದಲ್ಲಿ ದ್ವಿತೀಯ ಸ್ಥಾನ. ವಿಷ್ಣು ಕಟ ಪ್ರಥಮ ಹಾಗೂ ಕುಮತೆ ವಿಭಾಗ ದ್ವಿತೀಯ ಸ್ಥಾನ. ಹನಿ ಕಟಾ ಹಾಗೂ ಕುಮುತೆ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.

ಸ್ಪರ್ಧೆಯ ಮುಖ್ಯ ತರಬೇತುದರವಾಗಿ ಎಸ್.ಸಿ ಸಚಿನ್ ಕುಮಾರ್ ಅವರು ಕಾರ್ಯನಿರ್ವಹಿಸಿದ್ದು, ಬಹುಮಾನ ವಿಜೇತ ಎಲ್ಲಾ ಮಕ್ಕಳಿಗೂ ಸಂಸ್ಥೆ ವತಿಯಿಂದ ಹಾಗೂ ಪೋಷಕರ ವತಿಯಿಂದ ಅಭಿನಂದನೆ ಸಲ್ಲಿಸಲಾಗಿದೆ.

Continue Reading

Trending

error: Content is protected !!