Chamarajanagar
ಶಾಸಕರು, ಸಂಸದರ ನಿರ್ಲಕ್ಷ್ಯ ಖಂಡಿಸಿ ಬಿಎಸ್‌ಪಿ ಪ್ರತಿಭಟನೆಗೆ ಕರೆ
ವರದಿ : ಸುನೀಲ್ ಪ್ರಶಾಂತ್
ಕೊಳ್ಳೇಗಾಲ: ಪಟ್ಟಣದ ಐಬಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಎಸ್‌ಪಿ ನೂತನ ಪದಾಧಿಕಾರಿಗಳು, ಶಾಸಕರು ಹಾಗೂ ಸಂಸದರ ನಿರ್ಲಕ್ಷ್ಯ ಮತ್ತು ನಗರಸಭೆಯ ದುರಾಡಳಿತವನ್ನು ಖಂಡಿಸಿ ನಗರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಈ ಪ್ರತಿಭಟನೆಗೆ ಕನ್ನಡ ಪರ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು ಹಾಗೂ ಮಹಿಳಾ ಸಂಘಟನೆಗಳು ಬೆಂಬಲ ಸೂಚಿಸಿದ್ದು, ಸುಮಾರು ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಹೇಳಿದರು.

ನಗರಸಭೆಯ 31 ವಾರ್ಡ್‌ಗಳಲ್ಲಿನ ಎಲ್ಲಾ ಮೂಲಭೂತ ಸಮಸ್ಯೆಗಳನ್ನೊಳಗೊಂಡಂತೆ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತಿದ್ದು, ಎಲ್ಲಾ ವಾರ್ಡ್‌ಗಳ ನಾಗರಿಕರು ಪ್ರತಿಭಟನೆಯಲ್ಲಿ ಭಾಗವಹಿಸಿ ಬೆಂಬಲ ನೀಡಬೇಕೆಂದು ಮನವಿ ಮಾಡಿದರು.
Chamarajanagar
ಸಂತೇಮರಹಳ್ಳಿಯಲ್ಲಿ ಈಶ ಗ್ರಾಮೋತ್ಸವ: ಗ್ರಾಮೀಣ ಆಟಗಾರರ ಕ್ರೀಡಾ ಕಲರವ
ಚಾಮರಾಜನಗರ: ಗ್ರಾಮೀಣ ಕ್ರೀಡಾ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ‘ಈಶ ಗ್ರಾಮೋತ್ಸವ 2026’ರ ಕ್ಲಸ್ಟರ್ ಪಂದ್ಯಾವಳಿಯು ತಾಲೂಕಿನ ಸಂತೇಮರಹಳ್ಳಿ ಗ್ರಾಮದಲ್ಲಿ ಸಂಭ್ರಮದಿಂದ ನಡೆಯಿತು.
ಈಶ ಔಟ್‌ರೀಚ್ ಆಯೋಜಿಸಿದ್ದ ಗ್ರಾಮೀಣ ಕ್ರೀಡಾ ಹಬ್ಬದಲ್ಲಿ ಚಾಮರಾಜನಗರದ ವಿವಿಧ ಹಳ್ಳಿಗಳಿಂದ 250 ಕ್ಕೂ ಪುರುಷರು ವಾಲಿಬಾಲ್ ಕ್ರೀಡೆಯಲ್ಲಿ ಭಾಗವಹಿಸಿದ್ದರು.

ಹನೂರು ತಾಲೂಕಿನ ರಾಮಾಪುರ ಗ್ರಾಮ ಪಂಚಾಯತಿಯ ಬುದ್ಧ ಸೂಪರ್ ತಂಡವು ಪ್ರಥಮ ಸ್ಥಾನ ಗಳಿಸಿದರೆ, ಪಾಳ್ಯ ಗ್ರಾಪಂ ನ ಗೌತಮ್ ಪಾಳ್ಯ ತಂಡ ದ್ವಿತೀಯ ಸ್ಥಾನ ಗಳಿಸಿತು. ಮದ್ದೂರು ಗ್ರಾಪಂ ನ ಎಂಡಿಆರ್ ಎಸ್ ಸ್ಪೈಕರ್ಸ್ ತೃತೀಯ ಸ್ಥಾನ ಗಳಿಸಿದರೆ, ಮಂಗಲ ಗ್ರಾಪಂ ನ ಕಣಿಯನಪುರ ಕಾಲೋನಿಯ ಸ್ಟಾರ್ ಬಾಯ್ಸ್ ತಂಡ ನಾಲ್ಕನೇ ಸ್ಥಾನ ಪಡೆದುಕೊಂಡಿತು.
ಈ ವಿಜೇತ ತಂಡಗಳು ಆಗಸ್ಟ್‌ನಲ್ಲಿ ನಡೆಯುವ ವಿಭಾಗೀಯ ಹಂತಕ್ಕೆ ಅರ್ಹತೆ ಪಡೆದಿದ್ದು, ಕ್ರೀಡಾ ಮನೋಭಾವಕ್ಕಾಗಿ ಮನೋಜ್ ಕುಮಾರ್ ಅವರಿಗೆ ವಿಶೇಷ ಪ್ರಶಸ್ತಿ ನೀಡಲಾಯಿತು.

ಈಶ ಪ್ರತಿನಿಧಿ ರಘು ಎಸ್ ಮಾತನಾಡಿ “ಕ್ರೀಡೆಯ ಮೂಲಕ ಗ್ರಾಮೀಣ ಸಮಾಜದ ಬಾಂಧವ್ಯ ಗಟ್ಟಿಗೊಳ್ಳುತ್ತಿದೆ. ಗ್ರಾಮೀಣ ಕರ್ನಾಟಕದ ಉತ್ಸಾಹ ಅಭೂತಪೂರ್ವವಾಗಿದೆ” ಎಂದರು.
ಈ ವರ್ಷ ಈಶ ಗ್ರಾಮೋತ್ಸವದ 18ನೇ ಆವೃತ್ತಿಯಾಗಿದ್ದು, 10 ರಾಜ್ಯಗಳಲ್ಲಿ 40,000 ಹಳ್ಳಿಗಳ 80,000ಕ್ಕೂ ಹೆಚ್ಚು ಆಟಗಾರರು ಪಾಲ್ಗೊಳ್ಳಲಿದ್ದಾರೆ. ಅಂತಿಮ ಪಂದ್ಯಗಳು ಸೆ. 4-6ರವರೆಗೆ ಕೊಯಂಬತ್ತೂರು ಈಶ ಯೋಗ ಕೇಂದ್ರದಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಈ ಕ್ರೀಡಾಕೂಟದಲ್ಲಿ ಮುಖಂಡರಾದ ಸಿದ್ಧಲಿಂಗೇಶ್ವರ, ಪ್ರಭು, ಪ್ರಕಾಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
Chamarajanagar
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ಪ್ರತಿಭಟನೆ
ಗುಂಡ್ಲುಪೇಟೆ: ಬರಗಾಲದ ಸಮರ್ಪಕ ನಿರ್ವಹಣೆ, ಕುಡಿಯುವ ನೀರಿನ ಸಮಸ್ಯೆ ಪರಿಹಾರ ಸೇರಿದಂತೆ ವಿವಿಧ ರೈತಪರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಟ್ರ್ಯಾಕ್ಟರ್ ರ್ಯಾಲಿ ನಡೆಸಿ ತಹಶೀಲ್ದಾರ್ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಹಕ್ಕೊತ್ತಾಯ ಪತ್ರ ಸಲ್ಲಿಸಲಾಯಿತು.
ಪಟ್ಟಣದ ದೇವರಾಜು ಅರಸು ಕ್ರೀಡಾಂಗಣದಲ್ಲಿ ಜಮಾವಣೆಗೊಂಡ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಟ್ಯಾಕ್ಟರ್ ರ್ಯಾಲಿ ಮೂಲಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿ ತಾಲೂಕು ಕಚೇರಿ ಮುಂಭಾಗ ಹಮ್ಮಿಕೊಂಡಿದ್ದ 46ನೇ ರೈತ ಹುತಾತ್ಮ ದಿನದ ಅಂಗವಾಗಿ ಹುತಾತ್ಮರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ಶಾಸಕ ಎಚ್.ಎಂ.ಗಣೇಶಪ್ರಸಾದ್ ಮಾತನಾಡಿ, ತಾಲೂಕಿನ ಅಭಿವೃದ್ಧಿಗೆ 475 ಕೋಟಿ ರೂ. ಅನುದಾನ ತಂದಿದ್ದೇನೆ. ಕ್ಷೇತ್ರದ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಅನುದಾನ ತಂದು ಕೆಲಸ ಮಾಡುತ್ತೇನೆ. ತಾಲೂಕಿನ ಕೆರೆಗಳಿಗೆ ಹಂತ ಹಂತವಾಗಿ ನೀರು ತುಂಬಿಸಲಾಗುತ್ತಿದೆ. ರೈತರ ಜೊತೆ ಯಾವಾಗಲೂ ನಾನು ಇರುತ್ತೇನೆ ಎಂದು ರೈತರಿಗೆ ಭರವಸೆ ನೀಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಸಿ.ಎಸ್.ನಿರಂಜನಕುಮಾರ್ ಮಾತನಾಡಿ, ಈ ಬಾರಿ ರಾಜ್ಯದಲ್ಲಿ ಮಳೆಯಿಲ್ಲದೇ ರೈತರ ಫಸಲು ನಾಶವಾಗಿದೆ. ಅಂತರ್ಜಲ ಕುಸಿತದಿಂದ ಬೋರ್‌ವೆಲ್‌ಗಳಲ್ಲೂ ನೀರು ಬತ್ತಿದೆ. ನೀರಿನ ಕೊರತೆಯಿಂದ ಬೆಳೆಗಳು ಒಣಗುತ್ತಿದ್ದು, ಜಾನುವಾರುಗಳಿಗೆ ಮೇವು ಇಲ್ಲದೇ ರೈತರು ಪರದಾಡುವಂತಾಗಿದೆ. ಸರ್ಕಾರ ಕೆರೆಗಳಿಗೆ ನೀರು ತುಂಬಿಸಬೇಕು. ಸರ್ಕಾರ ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಬೇಕು ಎಂದರು.
ರೈತ ಸಂಘಟನೆಗಳು ಸದಾ ರೈತರ ಪರವಾಗಿ ಹೋರಾಟ ನಡೆಸುತ್ತಿವೆ. ರೈತರಿಗೆ ಅನ್ಯಾಯವಾದಾಗ ಸಂಘಟನೆಗಳು ಧ್ವನಿಯಾಗಿದ್ದು, ಅಧಿಕಾರಿಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸಿ ನ್ಯಾಯಯುತವಾಗಿ ಕೆಲಸ ಮಾಡಬೇಕು ಎಂದು ಹೇಳಿದರು.

ಕಾಡಂಚಿನ ಗ್ರಾಮಗಳಲ್ಲಿ ಕಾಡುಪ್ರಾಣಿಗಳ ಹಾವಳಿ ನಿಯಂತ್ರಣಕ್ಕೆ ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು. ಬೆಳೆ ಹಾಗೂ ಸಾಕುಪ್ರಾಣಿಗಳ ಹಾನಿಗೆ ವೈಜ್ಞಾನಿಕ ಆಧಾರದ ಮೇಲೆ ಶೀಘ್ರ ಪರಿಹಾರ ನೀಡಬೇಕು. ಸೋಲಾರ್ ಬೇಲಿ ಯೋಜನೆಗೆ ಶೇ.90ರಷ್ಟು ಸಬ್ಸಿಡಿ ನೀಡಿ, ಯೋಜನೆಯ ವ್ಯಾಪ್ತಿಯನ್ನು 7 ಕಿ.ಮೀ.ನಿಂದ 10 ಕಿ.ಮೀ.ವರೆಗೆ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಗೌಡೇಗೌಡ, ನವಲಗುಂದ-ನರಗುಂದ ರೈತರ ಹೋರಾಟದ ಇತಿಹಾಸವನ್ನು ಸ್ಮರಿಸಿ, ನೀರಿನ ಸಮಸ್ಯೆ ಹಾಗೂ ತೆರಿಗೆ ವಿಚಾರವಾಗಿ ನಡೆದ ಹೋರಾಟದ ವೇಳೆ ಪೊಲೀಸ್ ಗೋಲಿಬಾರ್‌ನಲ್ಲಿ ರೈತರು ಪ್ರಾಣ ತ್ಯಾಗ ಮಾಡಿದ್ದು ರೈತ ಚಳುವಳಿಯ ಇತಿಹಾಸದಲ್ಲಿ ಮರೆಯಲಾಗದ ಘಟನೆಯಾಗಿದೆ ಎಂದು ಹೇಳಿದರು.
ಅಂದಿನ ದಿನದಲ್ಲಿ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅವರ ನೇತೃತ್ವದಲ್ಲಿ ಆ ಹೋರಾಟ ರಾಜ್ಯಾದ್ಯಂತ ವ್ಯಾಪಿಸಿ, ರೈತರ ಹಕ್ಕುಗಳಿಗಾಗಿ ಅನೇಕರು ಪ್ರಾಣ ತ್ಯಾಗ ಮಾಡಿದ್ದಾರೆ. ಇಂದಿನ ರೈತರೂ ಸರ್ಕಾರದ ರೈತ ವಿರೋಧಿ ನೀತಿಗಳ ಬಗ್ಗೆ ಜಾಗೃತರಾಗಬೇಕು. ರೈತರಿಗೆ ಅನ್ಯಾಯವಾಗುವ ಯಾವುದೇ ಕಾನೂನುಗಳನ್ನು ವಿರೋಧಿಸಿ ಪ್ರಜಾಪ್ರಭುತ್ವದ ಮಾರ್ಗದಲ್ಲಿ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.
ಮಡಿಕೇರಿ ಮನು ಸೋಮಯ್ಯ ಮಾತನಾಡಿ, ನವಲಗುಂದ-ನರಗುಂದ ಹುತಾತ್ಮರ ದಿನವು ರೈತರ ಹೋರಾಟದ ಸಂಕೇತವಾಗಿದೆ. ಅಧಿಕಾರಿಗಳು ರೈತರ ಸಮಸ್ಯೆಗಳನ್ನು ಸಂವೇದನಾಶೀಲವಾಗಿ ಆಲಿಸಿದ್ದರೆ ಅಂದು ಗೋಲಿಬಾರ್ ನಡೆಯುತ್ತಿರಲಿಲ್ಲ. ಹೋರಾಟಗಾರರು ಹಾಗೂ ರೈತರನ್ನು ಅಧಿಕಾರಿಗಳು ಗೌರವದಿಂದ ಕಾಣಬೇಕು. ಎಲ್ಲ ಹೋರಾಟಗಳು ಗಾಂಧಿ ಮಾರ್ಗದಲ್ಲಿ ಶಾಂತಿಯುತವಾಗಿ ನಡೆಯಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ರಕ್ತದಾನ ಶಿಬಿರವನ್ನು ಸಹ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಚಾಮುಲ್ ನಿರ್ದೇಶಕ ಎಚ್.ಎಸ್.ನಂಜುಂಡಪ್ರಸಾದ್, ಬಿಜೆಪಿ ಮಂಡಲ ಅಧ್ಯಕ್ಷ ಮಹದೇವಪ್ರಸಾದ್, ಜಿಡಿಎಲ್ ಸುರೇಶ್, ಮೈಸೂರು ಜಿಲ್ಲಾಧ್ಯಕ್ಷ ಸರಗೂರು ನಟರಾಜು, ರೈತ ಸಂಘದ ತಾಲೂಕು ಅಧ್ಯಕ್ಷ ಹಂಗಳ ದಿಲೀಪ್, ಮಾಧು, ಲೋಕೇಶ್, ಮಹದೇವಪ್ರಸಾದ್, ಕುಮಾರಸ್ವಾಮಿ, ಶಿವಮಲ್ಲು, ರತ್ನಮ್ಮ, ಸೌಮ್ಯ, ಮಹದೇವನಾಯಕ, ಶಿವಮಲ್ಲು, ಚೆನ್ನನಾಯಕ, ಅಣ್ಣಯ್ಯ ಆಚಾರ್, ಕೆ.ಸಿ. ಪರಮೇಶ್ವರ್, ಅಮ್ಜಾದ್ ಖಾನ್, ಮುತ್ತುಲಕ್ಷ್ಮಿ ಸೇರಿದಂತೆ ರೈತ ಪದಾಧಿಕಾರಿಗಳು ಭಾಗವಹಿಸಿದ್ದರು.
Chamarajanagar
ಪುರಸಭೆ ತ್ವರಿತ ಕ್ರಮಕ್ಕೆ ಕಸ್ತೂರಿ ಕರ್ನಾಟಕ ನ್ಯಾಯಪರ ವೇದಿಕೆ ಅಭಿನಂದನೆ
ಗುಂಡ್ಲುಪೇಟೆ: ಪಟ್ಟಣದ ಹೊರವಲಯದಲ್ಲಿರುವ ಕಲ್ಯಾಣಿ ಕೊಳದ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗದ ನೀರಿನ ನಲ್ಲಿಗಳ ದುರಾವಸ್ಥೆ ಕುರಿತು ಸಲ್ಲಿಸಿದ್ದ ಮನವಿಗೆ ಸ್ಪಂದಿಸಿ ನೂತನ ನೀರಿನ ತೊಟ್ಟಿ ನಿರ್ಮಿಸಿ, ಹಾಳಾಗಿದ್ದ ನಲ್ಲಿಗಳನ್ನು ದುರಸ್ತಿಗೊಳಿಸಿರುವ ಪುರಸಭೆ ಅಧಿಕಾರಿಗಳ ಕ್ರಮವನ್ನು ಕಸ್ತೂರಿ ಕರ್ನಾಟಕ ನ್ಯಾಯಪರ ವೇದಿಕೆ ಅಭಿನಂದಿಸಿದೆ.
ವೇದಿಕೆಯ ವತಿಯಿಂದ ಸುಮಾರು ಎಂಟು ದಿನಗಳ ಹಿಂದೆ ಪುರಸಭೆ ಮುಖ್ಯಾಧಿಕಾರಿ ಶರವಣ ಅವರಿಗೆ ಮನವಿ ಸಲ್ಲಿಸಿ, ದೇವಸ್ಥಾನದ ಮುಂಭಾಗದಲ್ಲಿದ್ದ ನೀರಿನ ನಲ್ಲಿಗಳು ಹಾಳಾಗಿದ್ದರಿಂದ ಸಾಕಷ್ಟು ಪ್ರಮಾಣದ ನೀರು ರಸ್ತೆಗೆ ಹರಿದು ವ್ಯರ್ಥವಾಗುತ್ತಿತ್ತು. ಇದರಿಂದ ಸಾರ್ವಜನಿಕರು ಹಾಗೂ ದನ-ಕರುಗಳು ಮತ್ತು ಪಕ್ಷಿಗಳಿಗೆ ತೊಂದರೆಯಾಗುತ್ತಿದ್ದು, ತಕ್ಷಣ ದುರಸ್ತಿ ಕೈಗೊಳ್ಳುವಂತೆ ಒತ್ತಾಯಿಸಲಾಗಿತ್ತು.

ಮನವಿಗೆ ತಕ್ಷಣ ಸ್ಪಂದಿಸಿದ ಪುರಸಭೆ ಮುಖ್ಯಾಧಿಕಾರಿ ಶರವಣ ಅವರ ನಿರ್ದೇಶನದಂತೆ ನೂತನ ನೀರಿನ ತೊಟ್ಟಿ ನಿರ್ಮಿಸಿ, ಹಾಳಾಗಿದ್ದ ನಲ್ಲಿಗಳನ್ನು ದುರಸ್ತಿಗೊಳಿಸಲಾಗಿದೆ. ಇದರಿಂದ ಬರಗಾಲದ ಸಂದರ್ಭದಲ್ಲಿ ದನ-ಕರುಗಳು ಹಾಗೂ ಪಕ್ಷಿಗಳಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿದ್ದು, ನೀರಿನ ವ್ಯರ್ಥ ಹರಿವಿಗೂ ತಡೆ ಬಿದ್ದಿದೆ ಎಂದು ಕಸ್ತೂರಿ ಕರ್ನಾಟಕ ನ್ಯಾಯಪರ ವೇದಿಕೆ ಜಿಲ್ಲಾ ಯುವ ಘಟಕದ ಅಧ್ಯಕ್ಷ ಹಾಗೂ ತಾಲೂಕು ಉಸ್ತುವಾರಿ ಬೇರಂಬಾಡಿ ರಂಗಪ್ಪನಾಯಕ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ವೇದಿಕೆಯ ತಾಲೂಕು ಅಧ್ಯಕ್ಷ ಸ್ವಾಮಿ ನಾಯಕ್, ಜಿಲ್ಲಾ ಗೌರವಾಧ್ಯಕ್ಷ ಶಿವಕುಮಾರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಜಾಫರ್ ಹಾಗೂ ಜಿಲ್ಲಾ ಗೌರವಾಧ್ಯಕ್ಷ ರಹಮತುಲ್ಲಾಖಾನ್ ಉಪಸ್ಥಿತರಿದ್ದರು.
-
Mysore9 hours agoಹುಣಸೂರಿನಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹ*ತ್ಯೆ; ಸಾವಿನ ಕಾರಣ ನಿಗೂಢ
-
Mysore15 hours agoನಂಜನಗೂಡಿನಲ್ಲಿ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ: ಕಾಮುಕನಿಗೆ ಗ್ರಾಮಸ್ಥರಿಂದ ಧರ್ಮದೇಟು, ಪೊಲೀಸರ ವಶಕ್ಕೆ
-
Kodagu12 hours agoಅಧ್ಯಕ್ಷರಾಗಿ ವಾಂಚಿರ ವಿಠಲ್ ನಾಣಯ್ಯ ಆಯ್ಕೆ
-
Politics4 hours agoಪರಪ್ಪನ ಅಗ್ರಹಾರಕ್ಕೆ ವಿಜಯಲಕ್ಷ್ಮಿ, ರಕ್ಷಿತಾ ಭೇಟಿ: ದರ್ಶನ್ ಆರೋಗ್ಯ ವಿಚಾರಣೆ
-
Politics5 hours agoರಾಜ್ಯ ಸಚಿವ ಸಂಪುಟ ವಿಸ್ತರಣೆ ನಾಳೆ: 18 ಮಂದಿಗೆ ಸಚಿವ ಸ್ಥಾನ ಸಾಧ್ಯತೆ
-
Kodagu5 hours agoಹಾರಂಗಿ ಜಲಾಶಯದ ನೀರು ಕುಡಿಯಲು ಮಾತ್ರ: ರೈತರಿಗೆ ಬೆಳೆ ಬೆಳೆಯದಂತೆ ಮನವಿ
-
Kodagu7 hours agoಕೂಡಿಗೆ ವ್ಯಾಪ್ತಿಯಲ್ಲಿ 1 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಡಾ. ಮಂತರ್ ಗೌಡ ಚಾಲನೆ
-
Manglore3 hours agoಮನೆ ಕಾಮಗಾರಿಗೆ ಬಂದು 6.37 ಲಕ್ಷ ಮೌಲ್ಯದ ಚಿನ್ನಾಭರಣ ಕಳವು- ಕೃತ್ಯ ಎಸಗಿದ 24 ಗಂಟೆಯೊಳಗೆ ಆರೋಪಿ ಅಂದರ್
