Manglore
ಆಸ್ತಿಗಾಗಿ ಪುತ್ರಿಯಿಂದಲೇ ತಂದೆಯ ಕೊ*ಲೆ ಆರೋಪ- ಎರಡು ತಿಂಗಳ ಬಳಿಕ ಹೂತಿಟ್ಟ ಶ*ವ ಹೊರತೆಗೆದು ತನಿಖೆ!
ಮಂಗಳೂರು: ಆಸ್ತಿಗಾಗಿ ತಂದೆಯನ್ನು ಪುತ್ರಿಯೇ ಕೊಲೆಗೈದಿರುವ ಶಂಕೆ ವ್ಯಕ್ತವಾಗಿದ್ದು, ಎರಡು ತಿಂಗಳ ಬಳಿಕ ದಫನ ಮಾಡಿದ್ದ ಮೃತದೇಹವನ್ನು ಹೊರತೆಗೆದು ಪೊಲೀಸರು ಮರು ತನಿಖೆಗೆ ಮುಂದಾಗಿದ್ದಾರೆ.
ಮಂಗಳೂರಿನ ಕೊಟ್ಟಾರ ಫಸ್ಟ್ ಕ್ರಾಸ್ ನಿವಾಸಿ ಆಲ್ಬರ್ಟ್ ಜೊಸ್ಸಿ ರೇಗೋ 2026ರ ಜುಲೈ 19ರಂದು ಮೃತಪಟ್ಟಿದ್ದರು. ಈ ವೇಳೆ ಪುತ್ರಿ ತರಾತುರಿಯಲ್ಲಿ ಅವರ ಮೃತದೇಹವನ್ನು ದೇರೆಬೈಲ್ ಚರ್ಚ್‌ನ ದಫನ ಮಾಡಿದ್ದರು. ತಂದೆಯ ಸಾವಿನ ಬಗ್ಗೆ ಸಂಬಂಧಿಕರಿಗೆ ಹಾಗೂ ಸ್ಥಳೀಯರಿಗೆ ಮಾಹಿತಿ ನೀಡದೆ ಅಂತ್ಯಕ್ರಿಯೆ ನಡೆಸಿರುವ ಪುತ್ರಿ ಮಾಯಾ ರೇಗೋ ಅವರ ಸಂಶಯಾಸ್ಪದ ನಡೆ ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ದೂರುದಾರ ಅಜೋಯ್ ಡಿಸೋಜ ಹೇಳಿದ್ದಾರೆ.
ಅಲ್ಲದೆ ಆಲ್ಬರ್ಟ್ ಅವರು ಮೃತಪಟ್ಟು ಮೂರನೇ ದಿನ ಅವರು ಬರೆದಿಟ್ಟುರುವ ವೀಲ್ ಪ್ರಸ್ತಾಪ ಬಂದಾಗ ಖ್ಯಾತೆ ತೆಗೆದ ಮಾಯಾ ರೇಗೋ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಇದೇ ರೀತಿ ಪುತ್ರಿ ಆಲ್ಬರ್ಟ್ ರೇಗೊರನ್ನೂ ನಿದ್ದೆ ಮಾತ್ರೆ ನೀಡಿ ಕೊಂದಿರಬಹುದು ಎಂದು ಅನುಮಾನಗೊಂಡು ಆಲ್ಬರ್ಟ್ ಅವರ ಹಿತೈಷಿಗಳು ಪುತ್ರಿಯ ವಿರುದ್ಧ ಉರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಆಧಾರದಲ್ಲಿ ಮಾಯಾ ರೇಗೋ ವಿರುದ್ಧ ಪ್ರಕರಣ ದಾಖಲಾಗಿದೆ.
ಇದೀಗ ನ್ಯಾಯಾಲಯದ ಆದೇಶದ ಮೇರೆಗೆ ಮಂಗಳೂರು ತಹಶೀಲ್ದಾರ್ ಸಮಕ್ಷಮ ಹೂತ ಮೃತದೇಹವನ್ನು ಮೇಲೆತ್ತಿ ವಿಧಿವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ ಮೃತದೇಹದ ಸ್ಯಾಂಪಲ್ ಸಂಗ್ರಹಿಸಿದ್ದಾರೆ.
ಮೃತ ಆಲ್ಬರ್ಟ್ ಜೊಸ್ಸಿ ರೇಗೋ ಅವರು ತಮ್ಮ ಜೀವಿತಾವಧಿಯಲ್ಲಿ 60-70ಕೋಟಿಯಷ್ಟು ಆಸ್ತಿ ಮಾಡಿದ್ದರು. ತಂದೆಯ ಸಾವಿಗೂ ಮುನ್ನ ಅವರಿಂದ ಒತ್ತಾಯಪೂರ್ವಕವಾಗಿ ವಿಲ್ ಬರೆಸಿಕೊಂಡಿದ್ದಾರೆ, ಕಿರುಕುಳ ನೀಡುತ್ತಿದ್ದರು ಎಂದು ಮಾಯಾ ರೇಗೊ ವಿರುದ್ಧ ಆರೋಪಿಸಲಾಗಿದೆ. ಆಲ್ಬರ್ಟ್ ರೇಗೋ ಅವರಿಗೆ ಇನ್ನೂ ಮೂವರು ಮಕ್ಕಳಿದ್ದು, ದುಬೈ, ದೆಹಲಿ, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಆಲ್ಬರ್ಟ್ ಪುತ್ರಿ ಮಾಯಾ ರೇಗೊರೊಂದಿಗೆ ವಾಸಿಸುತ್ತಿದ್ದರು.
ಇದೀಗ ಅವರ ಸಾವಿನ ಸುತ್ತ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ದಫನ ಮಾಡಿದ್ದ ಮೃತದೇಹವನ್ನು ಹೊರತೆಗೆದು ವಿಧಿವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ಪರೀಕ್ಷೆಗೆ ಒಳಪಡಿಸಲು ಸಿದ್ಧತೆ ನಡೆಸಿದ್ದಾರೆ. ತನಿಖೆಯಿಂದಷ್ಟೇ ಸಾವಿನ ಹಿಂದಿನ ನೈಜ ಕಾರಣ ಬೆಳಕಿಗೆ ಬರಬೇಕಿದೆ.
Manglore
ಕೊರಿಯರ್‌ನಲ್ಲಿ ಎಂಡಿಎಂಎ ಸಾಗಿಸುತ್ತಿದ್ದ ಜಾಲಕ್ಕೆ ಪೊಲೀಸ್ ಬಲೆ- ಮೂವರು ಅರೆಸ್ಟ್, 1.58 ಕೋಟಿ ಮಾದಕದ್ರವ್ಯ ವಶಕ್ಕೆ
ಮಂಗಳೂರು: ವಾಟರ್ ಪ್ಯೂರಿಫೈಯರ್‌ನ ನೀರು ಸಂಗ್ರಹಿಸುವ ಸ್ಥಳದಲ್ಲಿ ಬರೋಬ್ಬರಿ 1.58 ಕೋಟಿ ರೂ. ಮೌಲ್ಯದ ಎಂಡಿಎಂಎಯನ್ನು ಅಡಗಿಸಿಟ್ಟು ಕೊರಿಯರ್‌ನಲ್ಲಿ ತರಿಸಿ ಮಾರಾಟಕ್ಕೆ ಯತ್ನಿಸುತ್ತಿದ್ದ ಖತರ್ನಾಕ್ ಖದೀಮರ ಜಾಲಕ್ಕೆ ಬಲೆ ಬೀಸಿದ ಮಂಗಳೂರು ಸಿಸಿಬಿ ಪೊಲೀಸರು ಮೂವರನ್ನು ಬಂಧಿಸಿ ನಿಷೇಧಿತ ಮಾದಕದ್ರವ್ಯವನ್ನು ವಶಪಡಿಸಿಕೊಂಡಿದ್ದಾರೆ.
ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಮಂಗಲ್ಪಾಡಿ ನಿವಾಸಿ ಅಬ್ದುಲ್ ಹಾಪೀಲ್(25), ಮಂಗಳೂರಿನ ತಣ್ಣೀರುಬಾವಿಯ ಕಸಬಾ ಬೆಂಗ್ರೆ ನಿವಾಸಿ ಜಿಯಾವುಲ್(30), ಮಂಗಳೂರಿನ ಪಾಂಡೇಶ್ವರದ ಓಲ್ಡ್ ಕೆಂಟ್ ರೋಡ್‌ನ ಆಯಿಷಾ ಅಪಾರ್ಟ್‌ಮೆಂಟ್ ನಿವಾಸಿ ಅಲ್ತಾಫ್(28) ಬಂಧಿತ ಆರೋಪಿಗಳು.

ಆರೋಪಿಗಳು ಪಂಜಾಬ್ ರಾಜ್ಯದ ಅಮೃತಸರದಿಂದ ಎಂಡಿಎಂಎಯನ್ನು ಖರೀದಿಸಿ, ಅದನ್ನು ವಾಟರ್ ಪ್ಯೂರಿಫೈಯರ್‌ನ ನೀರು ಸಂಗ್ರಹವಾಗುವ ಸ್ಥಳದಲ್ಲಿ ಬಚ್ಚಿಟ್ಟು ಬಳಿಕ ಕೋರಿಯರ್ ಮೂಲಕ ಮಂಗಳೂರಿಗೆ ರವಾನಿಸಿದ್ದಾರೆ. ಬಳಿಕ ಈ ಮಾದಕದ್ರವ್ಯವನ್ನು ಕೇರಳ ರಾಜ್ಯ ಹಾಗೂ ಮಂಗಳೂರು ನಗರದ ವಿವಿಧ ಪ್ರದೇಶಗಳಿಗೆ ಪೂರೈಕೆ ಮಾಡಿ ಮಾರಾಟ ಮಾಡಲು ಸಂಚು ರೂಪಿಸಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡ ಸಿಸಿಬಿ ಪೊಲೀಸರು ಅ.8ರಂದು ರಾತ್ರಿ 10ಗಂಟೆಗೆ ಉಳ್ಳಾಲದ ಕುಂಪಲದ ಡಿಮಾರ್ಟ್ ಬಳಿ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 1 ಕೋಟಿ 58 ಲಕ್ಷದ 34 ಸಾವಿರ ಮೌಲ್ಯದ 1ಕೆಜಿ 796.96 ಗ್ರಾಂ ಎಂಡಿಎಂಎಯನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ 3 ಮೊಬೈಲ್ ಫೋನ್, ಮಾದಕವಸ್ತು ಸಾಗಾಟಕ್ಕೆ ಬಳಸಿದ ಮಾರುತಿ ಸುಜುಕಿ ಸ್ವೀಪ್ಟ್ ಕಾರು ಮತ್ತು ಆಟೋ ರಿಕ್ಷಾ, ಕೋರಿಯರ್ ರಟ್ಟಿನ ಬಾಕ್ಸ್, ವಾಟರ್ ಪ್ಯೂರಿಪಾಯರ್ ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ- 1,63,84,000/- ಆಗಿರುತ್ತದೆ. ಈ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಆರೋಪಿ ಅಬ್ದುಲ್ ಹಾಫಿಲ್ ವಿರುದ್ಧ ಈ ಹಿಂದೆ ಉಳ್ಳಾಲ ಠಾಣೆಯಲ್ಲಿ ಮಾದಕವಸ್ತು ಸೇವನೆ ಮಾಡಿದ ಪ್ರಕರಣ ಮತ್ತು ಆರೋಪಿ ಜಿಯಾವುಲ್ ಹಕ್ ಎಂಬಾತ ದುಬೈ ದೇಶದ ರಸ್-ಅಲ್- ಖೈಮಾ ಎಂಬಲ್ಲಿ ಮಾದಕವಸ್ತು ಮಾರಾಟ ಪ್ರಕರಣದಲ್ಲಿ ಭಾಗಿಯಾಗಿ 3 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದನು. ಆರೋಪಿ ಅಲ್ತಾಫ್ ವಿರುದ್ಧ ಈ ಹಿಂದೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಮಾದಕವಸ್ತು ಸೇವನೆ ಮಾಡಿದ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ.
Manglore
ಎಚ್‌ಪಿಸಿಎಲ್‌ನಿಂದ ಕೆಲಸ ಕಳೆದುಕೊಂಡ ನಾಲ್ವರು ಮಹಿಳಾ ಕಾರ್ಮಿಕರಿಗೆ ಡಿವೈಎಫ್‌ಐ ಬೆಂಬಲ
ಸುರತ್ಕಲ್: ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ನಲ್ಲಿ (ಎಚ್‌ಪಿಸಿಎಲ್) ಕಳೆದ 15 ವರ್ಷಗಳಿಂದ ಗುತ್ತಿಗೆ ಕಾರ್ಮಿಕರಾಗಿ ದುಡಿಯುತ್ತಿದ್ದ ನಾಲ್ವರು ಮಹಿಳೆಯರನ್ನು ಏಕಾಏಕಿ ಕೆಲಸದಿಂದ ತೆಗೆದುಹಾಕಲಾಗಿದೆ ಎಂದು ಆರೋಪಿಸಲಾಗಿದ್ದು, ಉದ್ಯೋಗ ಕಳೆದುಕೊಂಡ ಮಹಿಳೆಯರು ನ್ಯಾಯಕ್ಕಾಗಿ ಕಂಪನಿಯ ಮುಂಭಾಗದಲ್ಲಿ ಧರಣಿ ನಡೆಸುತ್ತಿದ್ದಾರೆ. ಸೆ.1ರಿಂದ ಧರಣಿ ನಡೆಸುತ್ತಿರುವ ಮಹಿಳಾ ಕಾರ್ಮಿಕರಿಗೆ ಸಿಐಟಿಯು ಹಾಗೂ ಸುರತ್ಕಲ್ ನಾಗರಿಕ ಹೋರಾಟ ಸಮಿತಿ ಬೆಂಬಲ ನೀಡಿದ್ದು, ಇದೀಗ ಡಿವೈಎಫ್‌ಐ ಸುರತ್ಕಲ್ ಘಟಕವೂ ಸಾಥ್ ನೀಡಿದೆ.

ಎಚ್‌ಪಿಸಿಎಲ್‌ನಲ್ಲಿ ಹಲವು ವರ್ಷಗಳಿಂದ ದುಡಿಯುತ್ತಿದ್ದ ಮಹಿಳಾ ಕಾರ್ಮಿಕರನ್ನು ನಿಯಮಬಾಹಿರವಾಗಿ ಕೆಲಸದಿಂದ ತೆಗೆದುಹಾಕಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಉದ್ಯೋಗ ಕಳೆದುಕೊಂಡಿರುವ ಮಹಿಳೆಯರಿಗೆ ನ್ಯಾಯ ದೊರೆಯಬೇಕು ಎಂಬ ಒತ್ತಾಯ ವ್ಯಕ್ತವಾಗಿದೆ. ಡಿವೈಎಫ್‌ಐ ನಿಯೋಗದಲ್ಲಿ ಮುನೀರ್ ಕಾಟಿಪಳ್ಳ, ಶ್ರೀನಾಥ್ ಕುಲಾಲ್, ಮಕ್ಸೂದ್ ಬಿ.ಕೆ., ಅಜ್ಮಲ್ ಕಾನ, ಇಮ್ತಿಯಾಜ್ ಕುಳಾಯಿ, ಬಶೀರ್ ಫಿಟ್ಟರ್, ಮಯ್ಯದ್ದಿ ಕುಳಾಯಿ, ಐ. ಮಹಮ್ಮದ್ ಹಾಗೂ ಖಾಲಿದ್ ಕೃಷ್ಣಾಪುರ ಉಪಸ್ಥಿತರಿದ್ದರು.
Manglore
ದಾಂಡಿಯಾ ಪಾರ್ಟಿ ವಿವಾದ: ಕಾನೂನು ಕೈಗೆತ್ತಿಕೊಂಡರೆ 10 ವರ್ಷ ಜೈಲು – ಪೊಲೀಸ್ ಆಯುಕ್ತರ ಎಚ್ಚರಿಕೆ
ಮಂಗಳೂರು: ನವರಾತ್ರಿ ಹಿನ್ನೆಲೆಯಲ್ಲಿ ನಗರದ ವಿವಿಧೆಡೆ ಆಯೋಜಿಸಲಾಗುತ್ತಿರುವ ದಾಂಡಿಯಾ ಹೆಸರಿನಲ್ಲಿ ಅಸಭ್ಯ ನೃತ್ಯ, ಫ್ಯಾಷನ್ ಶೋ ಹಾಗೂ ಪಾಶ್ಚಿಮಾತ್ಯ ಸಂಸ್ಕೃತಿಯ ಪಾರ್ಟಿಗಳಿಗೆ ಅವಕಾಶ ನೀಡಬಾರದು ಎಂದು ಬಜರಂಗದಳ ಮತ್ತು ದುರ್ಗಾವಾಹಿನಿ ಪೊಲೀಸ್ ಇಲಾಖೆಗೆ ಮನವಿ ಮಾಡಿವೆ. ಇಂತಹ ಕಾರ್ಯಕ್ರಮಗಳಿಂದ ಯುವಜನತೆ ದುಶ್ಚಟಗಳಿಗೆ ಒಳಗಾಗುವ ಸಾಧ್ಯತೆ ಇದೆ. ಅಲ್ಲದೆ, ಮದ್ಯ ಹಾಗೂ ಮಾದಕವಸ್ತುಗಳ ಸೇವನೆಗೆ ಅವಕಾಶ ಕಲ್ಪಿಸಲಾಗುತ್ತಿದೆಯೇ ಎಂಬುದರ ಬಗ್ಗೆಯೂ ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿವೆ.

ಈ ಸಂಬಂಧ ಪ್ರಾಂತ ಮಾತೃಶಕ್ತಿ ಪ್ರಮುಖ್ ಸುರೇಖಾ ರಾಜ್ ಹಾಗೂ ಜಿಲ್ಲಾ ಬಜರಂಗದಳ ಸಂಯೋಜಕ ಪ್ರೀತಮ್ ಕಾಟಿಪಳ್ಳ ಮಂಗಳೂರು ನಗರ ಪೊಲೀಸ್ ಉಪ ಆಯುಕ್ತರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಕಾನೂನುಬಾಹಿರ ಚಟುವಟಿಕೆಗಳಿಗೆ ಅವಕಾಶ ನೀಡದಂತೆ ಹಾಗೂ ಅಂತಹ ಕಾರ್ಯಕ್ರಮಗಳ ಆಯೋಜಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಸಂಘಟನೆಗಳ ಮನವಿಗೆ ಪ್ರತಿಕ್ರಿಯಿಸಿರುವ ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ಕಾನೂನುಬದ್ಧವಾಗಿ ನಡೆಯುವ ಯಾವುದೇ ಕಾರ್ಯಕ್ರಮವನ್ನು ಯಾರೂ ಸ್ವಯಂಪ್ರೇರಿತವಾಗಿ ತಡೆಯಲು ಮುಂದಾಗಬಾರದು.
ಕಾರ್ಯಕ್ರಮವೊಂದರಲ್ಲಿ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿರುವುದು ಕಂಡುಬಂದರೆ ಸಾರ್ವಜನಿಕರು ಅಥವಾ ಸಂಘಟನೆಗಳು ಪೊಲೀಸರಿಗೆ ಮಾಹಿತಿ ನೀಡಬೇಕು. ಕಾನೂನು ಉಲ್ಲಂಘನೆ ಕಂಡುಬಂದರೆ ಕ್ರಮ ಕೈಗೊಳ್ಳುವುದು ಪೊಲೀಸ್ ಇಲಾಖೆಯ ಜವಾಬ್ದಾರಿ ಎಂದು ಸ್ಪಷ್ಟಪಡಿಸಿದ್ದಾರೆ.
ವೈಯಕ್ತಿಕವಾಗಿ ಯಾವುದಾದರೂ ಚಟುವಟಿಕೆಯನ್ನು ಅನೈತಿಕ ಎಂದು ಪರಿಗಣಿಸಿ, ಕಾನೂನುಬದ್ಧ ಅನುಮತಿ ಪಡೆದ ಕಾರ್ಯಕ್ರಮವನ್ನು ತಾವೇ ನಿಲ್ಲಿಸಲು ಅಥವಾ ಅಡ್ಡಿಪಡಿಸಲು ಯಾರಾದರೂ ಮುಂದಾದರೆ ಅಂತಹವರ ವಿರುದ್ಧವೂ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ದೂರು ಬಂದಲ್ಲಿ ಕೃತ್ಯದ ಸ್ವರೂಪ ಮತ್ತು ತೀವ್ರತೆಗೆ ಅನುಗುಣವಾಗಿ, ಗಂಭೀರ ಕಾನೂನು ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿ 10 ವರ್ಷಗಳವರೆಗೆ ಜೈಲು ಶಿಕ್ಷೆಯಾಗುವ ಸಾಧ್ಯತೆಯಿದೆ ಎಂದು ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.
ಇದೇ ವೇಳೆ, ಇಂತಹ ವಿಚಾರಗಳಲ್ಲಿ ಸಂಘಟನೆಗಳು ಕಾನೂನನ್ನು ಕೈಗೆತ್ತಿಕೊಳ್ಳುವ ಬದಲು ತಮ್ಮದೇ ಸಮುದಾಯದಲ್ಲಿ ನಡೆಯುವ ಗಂಭೀರ ಅಪರಾಧಗಳ ವಿರುದ್ಧ ಧ್ವನಿ ಎತ್ತುವುದು ಸಮಾಜದ ಹಿತದೃಷ್ಟಿಯಿಂದ ಹೆಚ್ಚು ಪರಿಣಾಮಕಾರಿ. ಕೊಲೆ, ಕೊಲೆಗೆ ಸಂಚು ಹಾಗೂ ಸುಲಿಗೆ ಸೇರಿದಂತೆ ಗಂಭೀರ ಅಪರಾಧಗಳನ್ನು ತಡೆಯಲು ಸಾರ್ವಜನಿಕರು ಪೊಲೀಸರೊಂದಿಗೆ ಕೈಜೋಡಿಸಬೇಕು. ಕಾನೂನುಬಾಹಿರ ಕೃತ್ಯ ಕಂಡುಬಂದರೆ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಪೊಲೀಸ್ ಆಯುಕ್ತರು ಮಾರ್ಮಿಕವಾಗಿ ಹೇಳಿದ್ದಾರೆ.
-
Mysore21 hours agoನಂಜನಗೂಡು ದೇಬೂರು ಸರ್ಕಾರಿ ಕಾಲೇಜಿನ ಆವ್ಯವಸ್ಥೆ ಬಯಲು : ಮಾಜಿ ಶಾಸಕ ಬಿ.ಹರ್ಷವರ್ಧನ್ ಖುದ್ದು ಭೇಟಿ
-
National22 hours agoತಮಿಳುನಾಡಿಗೆ 15 ದಿನ 3 ಸಾವಿರ ಕ್ಯೂಸೆಕ್ ನೀರು ಹರಿಸಲು ಕರ್ನಾಟಕಕ್ಕೆ CWMA ಆದೇಶ
-
Chikmagalur19 hours agoಉಪ ವಲಯ ಅರಣ್ಯಾಧಿಕಾರಿ ರವಿಕುಮಾರ್ ಅಮಾನತು
-
National24 hours agoದರ್ಶನ್ಗೆ ಮತ್ತೊಂದು ಕಾನೂನು ಹಿನ್ನಡೆ: ಪ್ರದೂಷ್ ‘ಮಾಫಿ ಸಾಕ್ಷಿ’ ವಿಚಾರದ ಅರ್ಜಿ ವಜಾ
-
Mysore22 hours agoನಾಳೆ ಅ.9ಕ್ಕೆ ನಂಜನಗೂಡಿನಲ್ಲಿ BSP ಬಹುಜನರ ಸಂಕಲ್ಪ ಸಮಾವೇಶ
-
National20 hours agoಜಿಎಸ್ಟಿ ಅಡಿಯಲ್ಲಿ ಬಂಧನ ಅಧಿಕಾರ ರದ್ದು ಪ್ರಸ್ತಾವನೆ: ವಿಚಾರಣಾ ಮಿತಿ ₹5 ಕೋಟಿಗೆ ಹೆಚ್ಚಳ
-
National4 hours agoಇಸ್ರೇಲ್ನಿಂದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ಗೆ ಶೌರ್ಯ ಪ್ರಶಸ್ತಿ ಘೋಷಣೆ
-
Kodagu23 hours agoಪೋಷಣ್ ಮಾಸಾಚರಣೆ ಮುಕ್ತಾಯ ಸಮಾರಂಭ: ಗ್ರಾಮೀಣ ಒಕ್ಕೂಟದಿಂದ ಅಂಗನವಾಡಿಗೆ ಕೊಡುಗೆ
