Connect with us

National

ತಮಿಳುನಾಡಿಗೆ 15 ದಿನ 3 ಸಾವಿರ ಕ್ಯೂಸೆಕ್ ನೀರು ಹರಿಸಲು ಕರ್ನಾಟಕಕ್ಕೆ CWMA ಆದೇಶ

Published

on

ನವದೆಹಲಿ: ತಮಿಳುನಾಡಿಗೆ ಪ್ರತಿದಿನ 3,000 ಕ್ಯೂಸೆಕ್‌ ನೀರಿನಂತೆ 15 ದಿನಗಳ ಕಾಲ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಕರ್ನಾಟಕಕ್ಕೆ ಆದೇಶಿಸಿದೆ.


ಇಂದು ಬೆಳಗ್ಗೆ ನಡೆದ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಸಭೆಯಲ್ಲಿ ತಮಿಳುನಾಡಿಗೆ ಪ್ರತಿದಿನ 3,000 ಕ್ಯೂಸೆಕ್‌ನಂತೆ ಒಟ್ಟು 15 ದಿನಗಳ ಕಾಲ ಸುಮಾರು 3.91 ಟಿಎಂಸಿ ನೀರು ಹರಿಸುವಂತೆ ಶಿಫಾರಸು ಮಾಡಲಾಗಿತ್ತು. ಇದೀಗ ಈ ಶಿಫಾರಸನ್ನು ಜಾರಿಗೊಳಿಸುವಂತೆ CWMA ಕರ್ನಾಟಕಕ್ಕೆ ಸೂಚಿಸಿದೆ.

ರಾಜ್ಯದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಜಲಾಶಯಗಳಿಗೆ ಒಳಹರಿವು ಕುಸಿದಿದೆ. ಕೆಆರ್‌ಎಸ್‌, ಹೇಮಾವತಿ, ಹಾರಂಗಿ ಹಾಗೂ ಕಬಿನಿ ಜಲಾಶಯಗಳಲ್ಲಿ ನೀರಿನ ಸಂಗ್ರಹವೂ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಸರ್ಕಾರ ಪ್ರಾಧಿಕಾರದ ಮುಂದೆ ಮನವಿ ಮಾಡಿತ್ತು.

ಆದರೆ ಕರ್ನಾಟಕದ ಮನವಿಯನ್ನು CWMA ಪುರಸ್ಕರಿಸದೆ, CWRC ಮಾಡಿದ್ದ ಶಿಫಾರಸಿನಂತೆ 15 ದಿನಗಳ ಕಾಲ ಪ್ರತಿದಿನ 3,000 ಕ್ಯೂಸೆಕ್‌ ನೀರು ಹರಿಸುವಂತೆ ಆದೇಶಿಸಿದೆ.

ಈ ಆದೇಶದಿಂದ ರಾಜ್ಯದ ಜಲಾಶಯಗಳಲ್ಲಿನ ನೀರಿನ ಲಭ್ಯತೆ ಹಾಗೂ ಕುಡಿಯುವ ನೀರು ಮತ್ತು ರೈತರ ಹಿತಾಸಕ್ತಿಯ ಕುರಿತು ಮತ್ತೆ ಚರ್ಚೆ ಆರಂಭವಾಗುವ ಸಾಧ್ಯತೆ ಇದೆ.

Continue Reading

National

ಇಸ್ರೇಲ್‌ನಿಂದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್‌ಗೆ ಶೌರ್ಯ ಪ್ರಶಸ್ತಿ ಘೋಷಣೆ

Published

on

ಜೆರುಸಲೇಂ: ಫ್ಲೈದುಬೈ (Flydubai) ವಿಮಾನದ ಅವಘಡ ತಪ್ಪಿಸಿ 174 ಪ್ರಯಾಣಿಕರ ಜೀವ ಉಳಿಸಿದ ಭಾರತೀಯ ಪೈಲಟ್‌ ಸ್ಮಿತ್‌ ಮಚ್ಚಾರ್‌ (Smit Machchhar) ಅವರ ಸಾಹಸಕ್ಕೆ ಇಸ್ರೇಲ್‌ ಶೌರ್ಯ ಪ್ರಶಸ್ತಿ ಘೋಷಣೆ ಮಾಡಿದೆ.

ಇಸ್ರೇಲ್‌ನ ಅತ್ಯುನ್ನತ ಗೌರವಗಳಲ್ಲಿ ಒಂದಾದ ಶೌರ್ಯ ಪ್ರಶಸ್ತಿ ಪ್ರದಾನಕ್ಕೆ ಇಸ್ರೇಲ್‌ ನಿರ್ಧಾರ ಕೈಗೊಂಡಿದೆ. ಇಸ್ರೇಲ್ ಅಧ್ಯಕ್ಷ ಐಸಾಕ್ ಹೆರ್ಜಾಗ್ ಅವರು ‘ಇಸ್ರೇಲಿ ಶೌರ್ಯ’ ಪ್ರಶಸ್ತಿ (Presidential Award For Heroism) ಘೋಷಣೆ ಮಾಡಿದ್ದಾರೆ.

‘ಫ್ಲೈದುಬೈ’ (flydubai) ವಿಮಾನದ ಕಾಕ್‌ಪಿಟ್‌ನಲ್ಲಿ ತಮ್ಮ ಸಹ-ಪೈಲಟ್ ನಡೆಸಿದ ದಾಳಿಯನ್ನು ಎದುರಿಸಿ, 174 ಪ್ರಯಾಣಿಕರು ಹಾಗೂ ಸಿಬ್ಬಂದಿಯ ಪ್ರಾಣವನ್ನು ಕ್ಯಾಪ್ಟನ್‌ ಸ್ಮಿತ್‌ ಮಚ್ಚಾರ್‌ ಉಳಿಸಿದ್ದರು.

ಕಾಕ್‌ಪಿಟ್‌ನಲ್ಲಿದ್ದಾಗ, ಓಮನ್ ಪ್ರಜೆ ಸಹ-ಪೈಲಟ್ ಹಮ್ಮಮ್ ಅಲ್-ಹಮ್ಮಮಿ ಎಂಬಾತ ಫ್ಲೈದುಬೈ ವಿಮಾನ ಪತನಕ್ಕೆ ಯತ್ನಿಸಿದ್ದ. ಈತ ಕೊಡಲಿಯಿಂದ (ಕ್ರಾಶ್ ಆಕ್ಸ್) ಹಲ್ಲೆ ನಡೆಸಿದ ಪರಿಣಾಮವಾಗಿ‌ ಸ್ಮಿತ್‌ ಮಚ್ಚಾರ್ ಗಂಭೀರವಾಗಿ ಗಾಯಗೊಂಡರು. ತೀವ್ರವಾಗಿ ಗಾಯಗೊಂಡು ವಿಪರೀತ ರಕ್ತಸ್ರಾವವಾಗುತ್ತಿದ್ದರೂ, ಭಾರತೀಯ ಪೈಲಟ್ ಕಾಕ್‌ಪಿಟ್‌ನ ಬಾಗಿಲನ್ನು ತೆರೆದರು. ಅವರ ಈ ಕ್ರಮದಿಂದಾಗಿ ಇಸ್ರೇಲಿ ಪ್ರಯಾಣಿಕರು ಕಾಕ್‌ಪಿಟ್‌ಗೆ ನುಗ್ಗಿ, ಹಲ್ಲೆ ನಡೆಸಿದ ವ್ಯಕ್ತಿಯನ್ನು ಹತೋಟಿಗೆ ತರಲು ಸಾಧ್ಯವಾಯಿತು.

ಭಾರತೀಯ ಪೈಲಟ್ ಯುಎಇಯ ಆಸ್ಪತ್ರೆಯೊಂದರಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಭಾರತೀಯ ಪೈಲಟ್ ಸಂಪೂರ್ಣ ಗುಣಮುಖರಾದ ನಂತರ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ ಎಂದು ಇಸ್ರೇಲ್ ಅಧ್ಯಕ್ಷ ಐಸಾಕ್ ಹರ್ಜೋಗ್ ತಿಳಿಸಿದ್ದಾರೆ.

ನಾವು ಗೌರವಿಸುತ್ತಿರುವ ಇಸ್ರೇಲ್‌ ಹೀರೋ, ಭಾರತದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾವು ಹಾರೈಸುತ್ತೇವೆ. ಕ್ಯಾಪ್ಟನ್ ಮಚ್ಚಾರ್ ಅವರ ಅಸಾಧಾರಣ ಧೈರ್ಯ ಮತ್ತು ಅತ್ಯುತ್ತಮ ವೃತ್ತಿಪರತೆಯು ಒಂದು ದೊಡ್ಡ ದುರಂತವನ್ನು ತಪ್ಪಿಸಲು ನೆರವಾಯಿತು. ಅವರು ಚೇತರಿಸಿಕೊಂಡ ನಂತರ, ಇಸ್ರೇಲ್ ಜನರ ಪರವಾಗಿ ಅವರಿಗೆ ‘ಇಸ್ರೇಲ್‌ನ ನಾಗರಿಕ ಶೌರ್ಯಕ್ಕಾಗಿ ನೀಡುವ ಅಧ್ಯಕ್ಷೀಯ ಪ್ರಶಸ್ತಿ’ಯನ್ನು ಪ್ರದಾನ ಮಾಡುವುದು ನನಗೆ ಹೆಮ್ಮೆಯ ವಿಷಯವಾಗಿರುತ್ತದೆ ಎಂದು ಐಸಾಕ್‌ ಹೇಳಿದ್ದಾರೆ.

Continue Reading

National

ಜಿಎಸ್‌ಟಿ ಅಡಿಯಲ್ಲಿ ಬಂಧನ ಅಧಿಕಾರ ರದ್ದು ಪ್ರಸ್ತಾವನೆ: ವಿಚಾರಣಾ ಮಿತಿ ₹5 ಕೋಟಿಗೆ ಹೆಚ್ಚಳ

Published

on

ನವದೆಹಲಿ: ಜಿಎಸ್‌ಟಿ ವ್ಯವಸ್ಥೆಯ ತೆರಿಗೆ ಜಾರಿ ಮತ್ತು ಆಡಳಿತ ಕ್ರಮಗಳಲ್ಲಿ ಮಹತ್ವದ ಸುಧಾರಣೆಗಳನ್ನು ತರಲು ಜಿಎಸ್‌ಟಿ ಮಂಡಳಿ ಪ್ರಸ್ತಾಪಿಸಿದೆ. ಜಿಎಸ್‌ಟಿ ಅಡಿಯಲ್ಲಿ ಬಂಧನದ ಅಧಿಕಾರವನ್ನು ರದ್ದುಪಡಿಸುವುದು, ವಿಚಾರಣೆಗೆ ಒಳಪಡಿಸುವ ತೆರಿಗೆ ಮೊತ್ತದ ಮಿತಿಯನ್ನು ₹1 ಕೋಟಿಯಿಂದ ₹5 ಕೋಟಿಗೆ ಹೆಚ್ಚಿಸುವುದು ಹಾಗೂ ಸಾಮಾನ್ಯ ದಂಡವನ್ನು ₹25 ಸಾವಿರದಿಂದ ₹10 ಸಾವಿರಕ್ಕೆ ಇಳಿಸುವುದು ಪ್ರಮುಖ ಪ್ರಸ್ತಾವನೆಗಳಾಗಿವೆ.


ದೆಹಲಿಯಲ್ಲಿ ನಡೆದ 57ನೇ ಜಿಎಸ್‌ಟಿ ಮಂಡಳಿ ಸಭೆಯ ಫಲಿತಾಂಶಗಳ ಕುರಿತು ಹೊರಡಿಸಿರುವ ಟಿಪ್ಪಣಿಯಲ್ಲಿ ಈ ಸುಧಾರಣೆಗಳನ್ನು ವಿವರಿಸಲಾಗಿದೆ. ನೋಂದಣಿ, ರಿಟರ್ನ್ಸ್‌, ಮರುಪಾವತಿ, ಮೇಲ್ಮನವಿ, ವ್ಯಾಜ್ಯ, ಇನ್‌ಪುಟ್‌ ತೆರಿಗೆ ಕ್ರೆಡಿಟ್‌, ಸರಕು ಸಾಗಣೆ ಮತ್ತು ರಫ್ತು ಸೇರಿದಂತೆ ಹಲವು ಕ್ಷೇತ್ರಗಳಲ್ಲಿನ ಪ್ರಕ್ರಿಯೆಗಳನ್ನು ಸರಳಗೊಳಿಸಲು ಮಂಡಳಿ ಮುಂದಾಗಿದೆ.

ಜಿಎಸ್‌ಟಿ ಅಡಿಯಲ್ಲಿ ಬಂಧನ ಅಧಿಕಾರ ರದ್ದು

ಜಿಎಸ್‌ಟಿ ಕಾಯ್ದೆಯಡಿ ಗಂಭೀರ ತೆರಿಗೆ ವಂಚನೆ ಪ್ರಕರಣಗಳಲ್ಲಿ ಅಧಿಕಾರಿಗಳಿಗೆ ನೀಡಲಾಗಿರುವ ಬಂಧನದ ಅಧಿಕಾರವನ್ನು ತೆಗೆದುಹಾಕಲು ಮಂಡಳಿ ಪ್ರಸ್ತಾಪಿಸಿದೆ. ಪ್ರಕರಣವನ್ನು ವಿಚಾರಣೆಗೆ ಒಳಪಡಿಸುವ ತೆರಿಗೆ ಮೊತ್ತದ ಮಿತಿಯನ್ನು ₹1 ಕೋಟಿಯಿಂದ ₹5 ಕೋಟಿಗೆ ಹೆಚ್ಚಿಸಲು ನಿರ್ಧರಿಸಲಾಗಿದೆ.

ಕನಿಷ್ಠ ಶಿಕ್ಷೆಯ ನಿಯಮವನ್ನೂ ತೆಗೆದುಹಾಕುವ ಪ್ರಸ್ತಾವನೆ ಇದ್ದು, ದಂಡ, ಜೈಲು ಶಿಕ್ಷೆ ಅಥವಾ ಎರಡರಲ್ಲಿ ಯಾವುದನ್ನು ವಿಧಿಸಬೇಕು ಎಂಬುದನ್ನು ಪ್ರಕರಣದ ಸ್ವರೂಪವನ್ನು ಆಧರಿಸಿ ನ್ಯಾಯಾಲಯ ನಿರ್ಧರಿಸಲಿದೆ.

ನಿರ್ದಿಷ್ಟ ದಂಡದ ನಿಯಮ ಇಲ್ಲದ ಉಲ್ಲಂಘನೆಗಳಿಗೆ ವಿಧಿಸಲಾಗುವ ಸಾಮಾನ್ಯ ದಂಡವನ್ನು ₹25 ಸಾವಿರದಿಂದ ₹10 ಸಾವಿರಕ್ಕೆ ಇಳಿಸಲು ಪ್ರಸ್ತಾಪಿಸಲಾಗಿದೆ.

₹10 ಸಾವಿರಕ್ಕಿಂತ ಕಡಿಮೆ ಪ್ರಕರಣಗಳಿಗೆ ನೋಟಿಸ್‌ ಇಲ್ಲ

ಜಿಎಸ್‌ಟಿ ವ್ಯಾಜ್ಯಗಳಲ್ಲಿ ನೋಟಿಸ್‌ ನೀಡುವ ವಿಧಾನ, ಪೂರ್ವ ನೋಟಿಸ್‌, ವಂಚನೆ ಆರೋಪ, ವಿಚಾರಣೆ ಹಾಗೂ ಆದೇಶ ಬರೆಯುವ ಪ್ರಕ್ರಿಯೆಗಳಿಗೆ ಸಾಮಾನ್ಯ ಮಾನದಂಡ ರೂಪಿಸಲು ಮಂಡಳಿ ಮುಂದಾಗಿದೆ.

₹10 ಸಾವಿರಕ್ಕಿಂತ ಕಡಿಮೆ ಮೊತ್ತ ಒಳಗೊಂಡ ಪ್ರಕರಣಗಳಿಗೆ ನೋಟಿಸ್‌ ನೀಡದಿರಲು ಪ್ರಸ್ತಾಪಿಸಲಾಗಿದೆ. ಸರಿಯಾದ ಇನ್‌ವಾಯ್ಸ್‌ ಹೊಂದಿರುವ, ಸರಕು ಸ್ವೀಕರಿಸಿ ಪೂರೈಕೆದಾರರಿಗೆ ಸಂಪೂರ್ಣ ಹಣ ಪಾವತಿಸಿರುವ ಪ್ರಾಮಾಣಿಕ ಖರೀದಿದಾರರಿಗೆ ರಕ್ಷಣೆ ನೀಡುವ ಬಗ್ಗೆಯೂ ಮಂಡಳಿ ಪರಿಶೀಲನೆ ನಡೆಸಿದೆ.

ಈ ಕುರಿತು ಅಧಿಕಾರಿಗಳ ಸಮಿತಿ ಮೂರು ತಿಂಗಳೊಳಗೆ ಅಧ್ಯಯನ ನಡೆಸಿ, ಮುಂದಿನ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ವರದಿ ಸಲ್ಲಿಸಲಿದೆ.

ಜಿಎಸ್‌ಟಿ ಮರುಪಾವತಿ ಪ್ರಕ್ರಿಯೆ ವೇಗ

ಮರುಪಾವತಿ ಅರ್ಜಿಯ ಸ್ವೀಕೃತಿಯನ್ನು ದೃಢೀಕರಿಸುವ ಗಡುವನ್ನು 15 ದಿನಗಳಿಂದ 10 ದಿನಗಳಿಗೆ ಇಳಿಸಲು ಪ್ರಸ್ತಾಪಿಸಲಾಗಿದೆ. ಈ ಅವಧಿಯಲ್ಲಿ ಸ್ವೀಕೃತಿ ದೃಢೀಕರಣ ಅಥವಾ ಕೊರತೆ ಸೂಚಿಸುವ ಮೆಮೊ ನೀಡದಿದ್ದರೆ, ಅರ್ಜಿಯನ್ನು ಸ್ವಯಂಚಾಲಿತವಾಗಿ ಸ್ವೀಕರಿಸಲಾಗಿದೆ ಎಂದು ಪರಿಗಣಿಸುವ ವ್ಯವಸ್ಥೆ ಜಾರಿಗೆ ಬರಲಿದೆ.

ಅಪಾಯ ಮೌಲ್ಯಮಾಪನದ ಆಧಾರದ ಮೇಲೆ ಮರುಪಾವತಿ ಮೊತ್ತದ ಶೇ.90ರಷ್ಟನ್ನು ಅಧಿಕಾರಿಯ ಬದಲಾಗಿ ವ್ಯವಸ್ಥೆಯೇ ಮಂಜೂರು ಮಾಡುವ ಪ್ರಸ್ತಾವನೆ ಇದೆ. ಅರ್ಜಿ ಸ್ವೀಕೃತಿಯಾದ ಮೂರು ಕೆಲಸದ ದಿನಗಳೊಳಗೆ ಆದೇಶ ಹೊರಡಿಸುವ ಗುರಿ ಹೊಂದಲಾಗಿದೆ.

ಉಳಿದ ಹೆಚ್ಚುವರಿ ನಗದು ಮರುಪಾವತಿಯನ್ನೂ ಅಧಿಕಾರಿಗಳ ಹಸ್ತಕ್ಷೇಪವಿಲ್ಲದೆ ಸಂಪೂರ್ಣ ಸ್ವಯಂಚಾಲಿತಗೊಳಿಸಲು ಮಂಡಳಿ ಪ್ರಸ್ತಾಪಿಸಿದೆ.

ಸರಕು ಸಾಗಣೆ ವಾಹನಗಳ ತಪಾಸಣೆಗೆ ಹೊಸ ನಿಯಮ

ರಾಜ್ಯಗಳ ನಡುವೆ ಸಂಚರಿಸುವ ಸರಕು ಸಾಗಣೆ ವಾಹನಗಳ ತಪಾಸಣೆಯಲ್ಲೂ ಬದಲಾವಣೆ ತರಲು ನಿರ್ಧರಿಸಲಾಗಿದೆ. ನಿರ್ದಿಷ್ಟ ಗುಪ್ತಚರ ಮಾಹಿತಿ ಅಥವಾ ಅನುಮಾನಾಸ್ಪದ ಮಾಹಿತಿಯ ಆಧಾರದ ಮೇಲೆ ಮಾತ್ರ ವಾಹನವನ್ನು ತಡೆದು ಪರಿಶೀಲಿಸಲು ಅವಕಾಶ ನೀಡಲಾಗುತ್ತದೆ.

ಅದಕ್ಕೂ ಮುನ್ನ ಜಂಟಿ ಆಯುಕ್ತರ ಹುದ್ದೆಗಿಂತ ಕಡಿಮೆಯಲ್ಲದ ಅಧಿಕಾರಿಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.

ಸರಕು ಹೊರಡುವ ರಾಜ್ಯ ಹಾಗೂ ಸರಕು ತಲುಪಬೇಕಾದ ರಾಜ್ಯಗಳಿಗೆ ಮಾತ್ರ ವಾಹನ ತಪಾಸಣೆಯ ಅಧಿಕಾರ ಇರಲಿದೆ. ಮಾರ್ಗಮಧ್ಯೆ ಬರುವ ಇತರ ರಾಜ್ಯಗಳು ವಾಹನವನ್ನು ತಡೆದು ಪರಿಶೀಲಿಸಲು ಅವಕಾಶ ಇರುವುದಿಲ್ಲ.

ಜಿಎಸ್‌ಟಿ ನೋಂದಣಿ, ರಿಟರ್ನ್ಸ್‌ ಮತ್ತಷ್ಟು ಸ್ವಯಂಚಾಲಿತ

ಕಡಿಮೆ ಅಪಾಯದ ಅರ್ಜಿದಾರರಿಗೆ ಹಾಗೂ ನೋಂದಾಯಿತ ವ್ಯಕ್ತಿಗಳಿಗೆ ನೀಡುವ ಸರಬರಾಜಿನ ಮೇಲಿನ ಮಾಸಿಕ ತೆರಿಗೆ ₹2.5 ಲಕ್ಷ ಮೀರದ ಅರ್ಜಿದಾರರಿಗೆ ಈಗಾಗಲೇ ಮೂರು ಕೆಲಸದ ದಿನಗಳೊಳಗೆ ಅಧಿಕಾರಿಗಳ ಹಸ್ತಕ್ಷೇಪವಿಲ್ಲದೆ ಜಿಎಸ್‌ಟಿ ನೋಂದಣಿ ನೀಡಲಾಗುತ್ತಿದೆ.

ಒಟ್ಟು ಜಿಎಸ್‌ಟಿ ನೋಂದಣಿಗಳಲ್ಲಿ ಶೇ.61ರಷ್ಟು ನೋಂದಣಿಗಳು ಈಗಾಗಲೇ ಸ್ವಯಂಚಾಲಿತ ಮಾರ್ಗದಲ್ಲಿ ನಡೆಯುತ್ತಿವೆ. ಉಳಿದ ಶೇ.39ರಷ್ಟು ಅರ್ಜಿಗಳು ಅಧಿಕಾರಿಗಳ ಪರಿಶೀಲನೆಗೆ ಒಳಪಡುತ್ತಿವೆ ಎಂದು ಮಂಡಳಿ ತಿಳಿಸಿದೆ.

ರಿಟರ್ನ್ಸ್‌ನಲ್ಲಿ ಕಂಡುಬರುವ ವ್ಯತ್ಯಾಸಗಳಿಗೆ ಸಂಬಂಧಿಸಿದಂತೆ ಪ್ರತಿ ವರ್ಷ ಸುಮಾರು 95 ಸಾವಿರ ವ್ಯವಸ್ಥೆ-ಸೃಷ್ಟಿತ ನೋಟಿಸ್‌ಗಳು ಜಾರಿಯಾಗುತ್ತಿವೆ. ಇಂತಹ ಪ್ರಕ್ರಿಯೆಗಳನ್ನು ಮತ್ತಷ್ಟು ಸರಳಗೊಳಿಸುವ ಮೂಲಕ ತೆರಿಗೆದಾರರಿಗೆ ಅನುಕೂಲ ಕಲ್ಪಿಸುವ ಉದ್ದೇಶವನ್ನು ಜಿಎಸ್‌ಟಿ ಮಂಡಳಿ ಹೊಂದಿದೆ.

Continue Reading

National

ನೈಸ್‌ ದಾಖಲೆ ಬಿಡುಗಡೆಗೆ ಮುಜುಗರ- ಅದಕ್ಕಾಗಿಯೇ ಟ್ರ್ಯಾಪ್‌ ಆರೋಪ: ಹೆಚ್‌.ಡಿ. ಕುಮಾರಸ್ವಾಮಿ

Published

on

ನವದೆಹಲಿ: ನೈಸ್‌ ಅಕ್ರಮಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಬಿಡುಗಡೆ ಮಾಡಿರುವುದರಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗೆ ಮುಜುಗರವಾಗಿದೆ. ಹೀಗಾಗಿ ಗಮನ ಬೇರೆಡೆ ಸೆಳೆಯಲು ತಮ್ಮ ವಿರುದ್ಧ ಸ್ಟಿಂಗ್‌ ಆಪರೇಷನ್‌ ಹಾಗೂ ಟ್ರ್ಯಾಪ್‌ ಆರೋಪದಂತಹ ಸುದ್ದಿಗಳನ್ನು ಹರಡಲಾಗುತ್ತಿದೆ ಎಂದು ಕೇಂದ್ರ ಸಚಿವ ಹೆಚ್‌.ಡಿ. ಕುಮಾರಸ್ವಾಮಿ ಆರೋಪಿಸಿದರು.


ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮ್ಮ ವಿರುದ್ಧವೇ ಸ್ಟಿಂಗ್‌ ಆಪರೇಷನ್‌ ನಡೆಸಲು ಯತ್ನಿಸಲಾಗಿತ್ತು ಎಂಬ ಡಿ.ಕೆ. ಶಿವಕುಮಾರ್‌ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದರು.

ಕ್ಯಾಬಿನೆಟ್‌ನಲ್ಲಿ ನಡೆದ ಚರ್ಚೆಯ ವಿಚಾರಗಳು ಮಾಧ್ಯಮಗಳಿಗೆ ಹೇಗೆ ಸೋರಿಕೆಯಾದವು ಎಂಬುದನ್ನು ಪ್ರಶ್ನಿಸಿದ ಕುಮಾರಸ್ವಾಮಿ, ನೈಸ್‌ ವಿಚಾರ ಮುನ್ನೆಲೆಗೆ ಬರಬಾರದು ಎಂಬ ಉದ್ದೇಶದಿಂದ ಇಂತಹ ಸುದ್ದಿಗಳನ್ನು ಹರಡಲಾಗುತ್ತಿದೆ ಎಂದು ಆರೋಪಿಸಿದರು.

‘ಪಿತಾಮಹ ಯಾರು ಎಂಬುದನ್ನು ಬಹಿರಂಗಪಡಿಸಿ’

ತಮ್ಮನ್ನು ಟ್ರ್ಯಾಪ್‌ ಮಾಡಲು ಯತ್ನಿಸಲಾಗಿದೆ, ಫೋಟೊಗಳಿವೆ ಎಂದು ಹೇಳಲಾಗುತ್ತಿದೆ. ಹಾಗಾದರೆ ಆ ಟ್ರ್ಯಾಪ್‌ನ ಹಿಂದಿರುವ ‘ಪಿತಾಮಹ’ ಯಾರು ಎಂಬುದನ್ನು ಮುಖ್ಯಮಂತ್ರಿ ಜನರ ಮುಂದೆ ಬಹಿರಂಗಪಡಿಸಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೂ ಟ್ರ್ಯಾಪ್‌ ಮಾಡಲು ಯತ್ನಿಸಲಾಗಿತ್ತು ಎಂಬ ಸುದ್ದಿಗಳಿವೆ. ಹಾಗಿದ್ದರೆ ಈ ಪ್ರಕರಣಗಳ ಹಿಂದೆ ಇರುವವರನ್ನು ಏಕೆ ಬಂಧಿಸಿಲ್ಲ? ಎಂದು ಪ್ರಶ್ನಿಸಿದರು.

ನೈಸ್‌ ಕಂಪನಿಯ ಮಾಲೀಕರು ಮುಖ್ಯಮಂತ್ರಿಯನ್ನು ಭೇಟಿ ಮಾಡಿರುವ ದೃಶ್ಯಗಳನ್ನು ತಾವು ನೋಡಿದ್ದಾಗಿ ಹೇಳಿದ ಕುಮಾರಸ್ವಾಮಿ, ಅವರೂ ಮುಖ್ಯಮಂತ್ರಿಯನ್ನು ಟ್ರ್ಯಾಪ್‌ ಮಾಡಲು ಬಂದಿದ್ದರೇ? ಎಂದು ಪ್ರಶ್ನಿಸಿದರು.

ರಾಜ್ಯಪಾಲರನ್ನು ಭೇಟಿಯಾದ ನಿಯೋಗದಲ್ಲಿದ್ದವರೊಬ್ಬರು ಈ ಪ್ರಕರಣದ ‘ಪಿತಾಮಹ’ ಎಂದು ಹೇಳಲಾಗುತ್ತಿದೆ. ಹಾಗಾದರೆ ಅವರು ಯಾರು ಎಂಬುದನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.

‘ಟ್ರ್ಯಾಪ್‌ ಮಾಡಲು ಬಂದವರನ್ನು ಏಕೆ ಬಿಟ್ಟರು?’

ಮುಖ್ಯಮಂತ್ರಿಯನ್ನು ಭೇಟಿ ಮಾಡಲು ಬರುವವರು ತಮ್ಮ ಮೊಬೈಲ್‌ ಫೋನ್‌ಗಳನ್ನು ಹೊರಗೆ ಇಟ್ಟು ಒಳಗೆ ಹೋಗಬೇಕು. ಹಾಗಿದ್ದರೆ ತಮ್ಮನ್ನು ಟ್ರ್ಯಾಪ್‌ ಮಾಡಲು ಬಂದಿದ್ದಾರೆ ಎನ್ನಲಾದ ವ್ಯಕ್ತಿಗಳನ್ನು ಏಕೆ ಪೊಲೀಸರು ಬಂಧಿಸಲಿಲ್ಲ? ಏಕೆ ಬಿಟ್ಟು ಕಳುಹಿಸಲಾಯಿತು? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ತಮ್ಮ ವಿರುದ್ಧ ಈ ಹಿಂದೆಯೂ ಮಾಧ್ಯಮದವರು ಟ್ರ್ಯಾಪ್‌ ಮಾಡಲು ಬಂದು ತಾವೇ ಸಿಕ್ಕಿಬಿದ್ದರು ಎಂದು ಮುಖ್ಯಮಂತ್ರಿ ಹೇಳಿದ್ದರು. ಇತ್ತೀಚೆಗೆ ನಡೆದ ಮಾಧ್ಯಮಗೋಷ್ಠಿಯಲ್ಲೂ ಇದೇ ವಿಚಾರವನ್ನು ಪುನರುಚ್ಚರಿಸಿದ್ದಾರೆ. ಹಾಗಾದರೆ ಈಗ ಯಾರು ಬಂದಿದ್ದರು, ಯಾವ ವ್ಯಕ್ತಿ ಬಂದಿದ್ದರು, ಆ ‘ಪಿತಾಮಹ’ ಯಾರು ಎಂಬುದನ್ನು ಜನರಿಗೆ ತಿಳಿಸಬೇಕು ಎಂದು ಸವಾಲು ಹಾಕಿದರು.

“ನೀವು ಇದ್ದ ಜಾಗದಲ್ಲಿ ಸಿಸಿ ಕ್ಯಾಮೆರಾಗಳು ಇರಬೇಕಲ್ಲವೇ? ಎಲ್ಲವನ್ನೂ ತೆಗೆಸಿ. ಯಾರು ಅವರು ಎಂಬುದನ್ನು ಜನರ ಮುಂದೆ ಹೇಳಿ” ಎಂದು ಕುಮಾರಸ್ವಾಮಿ ಆಗ್ರಹಿಸಿದರು.

‘ಸರ್ಕಾರ ಅಸ್ಥಿರಗೊಳಿಸುವ ಶಕ್ತಿ ನಮಗಿದೆಯೇ?’

ರಾಜ್ಯದಲ್ಲಿ 134 ಶಾಸಕರ ಬೆಂಬಲ ಹೊಂದಿರುವ ಸರ್ಕಾರ ಅಸ್ಥಿರವಾಗುತ್ತದೆ ಎಂಬ ಚರ್ಚೆಗಳ ಬಗ್ಗೆಯೂ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಬಿಜೆಪಿ-ಜೆಡಿಎಸ್‌ನಲ್ಲಿ ಸರ್ಕಾರಕ್ಕೆ ಬೆಂಬಲ ನೀಡುವವರು ಇದ್ದಾರೆ ಎಂಬ ಆರೋಪ ಮಾಡಲಾಗುತ್ತಿದೆ. ಆದರೆ ಸರ್ಕಾರ ಅಸ್ಥಿರಗೊಳಿಸುವ ಶಕ್ತಿ ಈಗ ನಮಗಿದೆಯೇ ಎಂದು ಪ್ರಶ್ನಿಸಿದರು.

ರಮೇಶ್‌ ಜಾರಕಿಹೊಳಿ ಪ್ರಕರಣ, ಮಾಜಿ ಸಚಿವ ಕೆ.ಎನ್‌. ರಾಜಣ್ಣ ಅವರು ವಿಧಾನಸಭೆಯಲ್ಲಿ ಮಾಡಿದ್ದ ಟ್ರ್ಯಾಪ್‌ ಕುರಿತ ಹೇಳಿಕೆ ಸೇರಿದಂತೆ ಹಲವು ಹಳೆಯ ಪ್ರಕರಣಗಳನ್ನು ಪ್ರಸ್ತಾಪಿಸಿದ ಅವರು, ಈ ಎಲ್ಲ ವಿಚಾರಗಳ ಬಗ್ಗೆಯೂ ಸತ್ಯಾಂಶ ಹೊರಬರಬೇಕು ಎಂದು ಒತ್ತಾಯಿಸಿದರು.

ಮುಖ್ಯಮಂತ್ರಿಯವರ ವಿರುದ್ಧವೇ ಸ್ಟಿಂಗ್‌ ಆಪರೇಷನ್‌ ನಡೆಸಲು ಯತ್ನಿಸಲಾಗಿದೆ ಎನ್ನುವುದು ಸಾಮಾನ್ಯ ವಿಚಾರವಲ್ಲ. ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕು. ರಾಜ್ಯಪಾಲರನ್ನು ಭೇಟಿಯಾದವರಲ್ಲಿ ಒಬ್ಬರು ಈ ಪ್ರಕರಣದ ಹಿಂದೆ ಇದ್ದಾರೆ ಎನ್ನುವುದಾದರೆ ಅವರ ಹೆಸರನ್ನೂ ಮುಖ್ಯಮಂತ್ರಿ ಬಹಿರಂಗಪಡಿಸಬೇಕು ಎಂದು ಕುಮಾರಸ್ವಾಮಿ ಹೇಳಿದರು.

‘ಟ್ರ್ಯಾಪ್‌, ಸ್ಟಿಂಗ್‌ ಬಗ್ಗೆ ಜನರಿಗೆ ಉತ್ತರಿಸಿ’

ಮುಖ್ಯಮಂತ್ರಿ ಹುದ್ದೆಯ ಘನತೆಯನ್ನು ಉಳಿಸಿಕೊಳ್ಳಬೇಕಾದರೆ ಟ್ರ್ಯಾಪ್‌ ಹಾಗೂ ಸ್ಟಿಂಗ್‌ ಆರೋಪಗಳ ಕುರಿತು ರಾಜ್ಯದ ಜನರಿಗೆ ಸ್ಪಷ್ಟ ಉತ್ತರ ನೀಡಬೇಕು. ತಮ್ಮನ್ನು ಸ್ಟಿಂಗ್‌ ಮಾಡಲು ಬಂದವರನ್ನು ಏಕೆ ಬಿಟ್ಟು ಕಳುಹಿಸಲಾಯಿತು ಎಂಬುದಕ್ಕೂ ವಿವರಣೆ ನೀಡಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದರು.

ನೈಸ್‌ ಅಕ್ರಮಗಳ ದಾಖಲೆಗಳು ಹೊರಬಂದಿರುವ ಹಿನ್ನೆಲೆಯಲ್ಲಿ ಗಮನ ಬೇರೆಡೆ ಸೆಳೆಯಲು ಇಂತಹ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಅವರು ಪುನರುಚ್ಚರಿಸಿದರು. “ನಾಟಕ ಬಿಟ್ಟು ಸತ್ಯಾಂಶವನ್ನು ಜನರ ಮುಂದೆ ಇಡಿ. ಪ್ರಕರಣದ ಬಗ್ಗೆ ಸರಿಯಾಗಿ ತನಿಖೆ ನಡೆಸಿ” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗೆ ಸವಾಲು ಹಾಕಿದರು.

ಗೃಹ ಸಚಿವರ ಹೇಳಿಕೆಗೂ ತಿರುಗೇಟು

ಇದೇ ವೇಳೆ ಗೃಹ ಸಚಿವರ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಇಂಜಿನಿಯರ್‌ಗಳ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಅಧಿಕಾರಿಗಳು ನೀಡಿದ ಪೆನ್‌ಡ್ರೈವ್‌ ಅನ್ನು ತಾವು ಪ್ರದರ್ಶಿಸಿದ್ದಾಗಿ ಹೇಳಿದರು. ಬೇರೆ ಯಾವುದೇ ಪೆನ್‌ಡ್ರೈವ್‌ ತೋರಿಸಿಲ್ಲ ಎಂದು ಸ್ಪಷ್ಟಪಡಿಸಿದರು.

ಕೆಪಿಎಸ್‌ಸಿಯ 2024ರ ನೇಮಕಾತಿಗೆ ಸಹಿ ಹಾಕಿರುವ ವಿಚಾರದ ಬಗ್ಗೆಯೂ ಉತ್ತರ ನೀಡಬೇಕು ಎಂದು ಒತ್ತಾಯಿಸಿದ ಅವರು, ತಮ್ಮ ನೈತಿಕತೆಯನ್ನು ಪ್ರಶ್ನಿಸುವ ಮೊದಲು ಸರ್ಕಾರದ ವಿರುದ್ಧ ಕೇಳಿರುವ ಪ್ರಶ್ನೆಗಳಿಗೆ ಉತ್ತರ ನೀಡಬೇಕು ಎಂದರು.

ಸಿದ್ದಾರ್ಥ ಟ್ರಸ್ಟ್‌ಗೆ ಸಂಬಂಧಿಸಿದ ಆರೋಪಗಳನ್ನೂ ಪ್ರಸ್ತಾಪಿಸಿದ ಕುಮಾರಸ್ವಾಮಿ, ಕುಟುಂಬದ ವ್ಯವಹಾರಗಳ ಬಗ್ಗೆ ತಮಗೆ ಪ್ರಶ್ನೆ ಮಾಡುವ ಬದಲು ಸರ್ಕಾರದ ವಿರುದ್ಧ ಕೇಳಲಾಗಿರುವ ಆರೋಪಗಳಿಗೆ ಉತ್ತರ ನೀಡಲಿ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ವಿರುದ್ಧವೂ ವಾಗ್ದಾಳಿ ನಡೆಸಿದರು.

Continue Reading

Trending

error: Content is protected !!