Mysore
ನಾಳೆ ಅ.9ಕ್ಕೆ ನಂಜನಗೂಡಿನಲ್ಲಿ BSP ಬಹುಜನರ ಸಂಕಲ್ಪ ಸಮಾವೇಶ
ನಂಜನಗೂಡು : ಮಾನ್ಯವರ್ ದಾದಾಸಾಹೇಬ್ ಕಾನ್ಷಿರಾಂಜೀ ರವರ 20ನೇ ವರ್ಷದ ಪರಿನಿಬ್ಬಾಣ ಅಂಗವಾಗಿ ಅ.9 ರಂದು BSP ಬಹುಜನರ ಸಂಕಲ್ಪ ಸಮಾವೇಶ ನಂಜನಗೂಡು ನಗರದ ವಿದ್ಯಾವರ್ಧಕ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು Bsp ಸಂಚಾಲಕ ಆರಾ ಮಹೇಶ್ ಹಾಗೂ ಇನ್ನಿತರರು ತಿಳಿಸಿದರು.

ಇಂದು ನಂಜನಗೂಡು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,
ಗೌತಮ ಬುದ್ಧರಿಂದ ಆರಂಭವಾದ ಸಾಮಾಜಿಕ ಪರಿವರ್ತನಾ ಚಳುವಳಿಯು ಸಾಮ್ರಾಟ್ ಅಶೋಕ, ಅಣ್ಣ ಬಸವಣ್ಣ, ಜ್ಯೋತಿಬಾ ಫುಲೆ, ಸಾವಿತ್ರಿ ಫುಲೆ, ಛತ್ರಪತಿ ಶಾಹು ಮಹಾರಾಜ್, ತಂದೆ ಪೆರಿಯಾರ್ ರಾಮಸ್ವಾಮಿ ನಾಯ್ಕರ್, ನಾರಾಯಣ ಗುರು, ನಾಲ್ವಡಿ ಕೃಷ್ಣರಾಜ ಒಡೆಯರ್ ಮುಂತಾದ ಬಹುಜನ ಪೂರ್ವಿಕರಿಂದ ಮುಂದುವರಿಯಿತು.
ಈ ಎಲ್ಲಾ ಹೋರಾಟದ ಆಶಯವನ್ನು ಎದೆಗುಂದದೆ ರಾಷ್ಟ್ರಾದ್ಯಂತ ಚಳುವಳಿಯನ್ನು ಮುನ್ನಡೆಸುವ ಜವಾಬ್ದಾರಿಯನ್ನು ಸ್ವಯಂಪ್ರೇರಿತರಾಗಿ ಹೆಗಲಿಗೇರಿಸಿಕೊಂಡ ಪರಮಪೂಜ್ಯ ಬಾಬಾಸಾಹೇಬ್ ಡಾ. ಅಂಬೇಡ್ಕರ್ ರವರು ತಮ್ಮದೇ ಜೀವ-ಜೀವನ ಕುಟುಂಬವನ್ನೇ ತ್ಯಾಗಮಾಡಿ ಸತತ 40 ವರ್ಷಗಳ ಅವಿರತ ಅಧ್ಯಯನ ಮತ್ತು ಹೋರಾಟ ಮಾಡಿ, ಶೋಷಿತ ಸಮುದಾಯಗಳನ್ನು ಶತಮಾನಗಳ ಅಸಮಾನತೆಯಿಂದ ಬಿಡುಗಡೆಗೊಳಿಸಲು ಬೇಕಾದ ಎಲ್ಲಾ ರೀತಿಯ ಹಕ್ಕು ಅವಕಾಶಗಳನ್ನೊಳಗೊಂಡ “ಭಾರತ ಸಂವಿಧಾನವನ್ನು” ರಚಿಸಿ ಕೊಟ್ಟರು.
ಆದರೆ ಸಂವಿಧಾನ ವಿರೋಧಿಗಳಾದ ಮನುವಾದಿ ಪಕ್ಷಗಳ ಸರ್ಕಾರಗಳು ನಮ್ಮ ಸಂವಿಧಾನವನ್ನು ಸರಿಯಾಗಿ ಜಾರಿ ಮಾಡುವುದಿಲ್ಲ! ನಮ್ಮ ಸಂವಿಧಾನ ಜಾರಿಯಾಗಬೇಕೆಂದರೆ ಬಹುಸಂಖ್ಯಾತರಾದ ಅಂದರೆ ಜಾತಿ ಉಪಜಾತಿ ಮತಧರ್ಮಗಳ ಹೆಸರಿನಲ್ಲಿ ಒಡೆದುಹೋಗಿರುವ ಶೋಷಿತ ಬಹುಜನ ಸಮುದಾಯಗಳು ರಾಜಕೀಯವಾಗಿ ಒಂದಾಗಿ ತಮ್ಮದೇ ಸ್ವಂತ ಸ್ವತಂತ್ರ ರಾಜಕೀಯ ಪಕ್ಷವೊಂದನ್ನು ಕಟ್ಟಿಕೊಂಡು ಬೆಳೆಸಿ ರಾಜ್ಯಾಧಿಕಾರ ಪಡೆದು ಆಳುವ ವರ್ಗವಾದಾಗ ಮಾತ್ರ ನಮ್ಮ ಸಂವಿಧಾನ ಜಾರಿಯಾಗುತ್ತದೆ ಎಂದು ಬಾಬಾಸಾಹೇಬ್ ಹೇಳಿದ್ದರು.
ಇದೇ ವಿಷಮ ಪರಿಸ್ಥಿತಿಯನ್ನು ಗಮನಿಸಿದ ದಾದಾಸಾಹೇಬ್ ಕಾನ್ಷಿರಾಂಜೀಯವರು ತಮ್ಮ ಉದ್ಯೋಗವನ್ನು ತ್ಯಜಿಸಿ, ವೈಯಕ್ತಿಕ ಬದುಕನ್ನು ತ್ಯಾಗ ಮಾಡಿ ಬಹುಜನ ಪೂರ್ವಿಕರ ಆಶಯಗಳನ್ನು ಜನರಿಗೆ ಅರ್ಥಮಾಡಿಸಿ ಬಾಬಾಸಾಹೇಬರ “ನನ್ನ ಜನ ಈ ದೇಶವನ್ನು ಸ್ವತಂತ್ರವಾಗಿ ಆಳಬೇಕು” ಎಂಬ ಮಹಾ ಕನಸನ್ನು ನನಸು ಮಾಡಲು ಪಣತೊಟ್ಟು ನಿಂತರು.
ಬಹುಜನ’ ಎಂದರೆ ಭಾರತ ದೇಶದ ಶೋಷಿತ ಸಮುದಾಯಗಳಾದ ಪರಿಶಿಷ್ಟ ಜಾತಿ, ಪಂಗಡ, ಬುಡಕಟ್ಟು, ಹಿಂದುಳಿದ ವರ್ಗ ಮತ್ತು ಧಾರ್ಮಿಕ ಅಲ್ಪಸಂಖ್ಯಾತರು ನಾವು ಬಹುಸಂಖ್ಯಾತರು “ಓಟು ನಮ್ಮದು ರಾಜ್ಯ ನಿಮ್ಮದು ನಡೆಯೋದಿಲ್ಲ, ನಡೆಯೋದಿಲ್ಲ ಹೀಗಾಗಿ ಅಕ್ಟೋಬರ್ 9ರಂದು ಡಿಎಸ್ಪಿ ಸಂಕಲ್ಪ ಯಾತ್ರೆ ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಬಹುಜನ ಸಮಾಜದ ವಿದ್ಯಾವಂತರನ್ನು ಒಗ್ಗೂಡಿಸಿ ಸಾಮಾಜಿಕ ಮತ್ತು ರಾಜಕೀಯ ಪ್ರಜ್ಞಾವಂತರನ್ನಾಗಿಸಿ BAMCEF, DS4, BSP, ಈ ಮುಂತಾದ ರಾಜಕೀಯೇತರ ಸಂಘಟನೆಗಳನ್ನು ಸ್ಥಾಪಿಸಿ ದೇಶಾದ್ಯಂತ ತಿರುಗಿ ಬಹುಜನರನ್ನು ಜಾಗೃತಗೊಳಿಸಿ ಸಂಘಟಿಸಿ ಒಂದಾಗಿಸಿ, ಅಂತಿಮವಾಗಿ ಎಷ್ಟೇ ಸಂಘಟನೆಗಳಿದ್ದರೂ ದೇಶ ಆಳಲು ಅಧಿಕಾರ ಹಿಡಿಯಲು ಸ್ವಂತ ಸ್ವತಂತ್ರ ಪಕ್ಷವೊಂದರ ಅಗತ್ಯವಿದೆ ಎಂಬುದನ್ನು ಮನಗಂಡ ದಾದಾಸಾಹೇಬರು 1984 ರಲ್ಲಿ ಬಾಬಾಸಾಹೇಬರ ಜಯಂತಿ ಅಂದರೆ ಏಪ್ರಿಲ್ 14 ರಂದು ಬಹುಜನ ಸಮಾಜ ಪಕ್ಷ – BSP ಯನ್ನು ಸ್ಥಾಪಿಸಿದರು.
ಬಹುಜನ ಸಮುದಾಯದ ಪ್ರಮುಖ ಸಮಸ್ಯೆಗಳಾದ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಗಳ ಪರಿಣಾಮವಾಗಿ ಸೃಷ್ಟಿಯಾಗಿರುವ ಬಡತನ, ಜಾತೀಯತೆ, ಅಸ್ಪೃಶ್ಯತೆ, ಕೋಮುವಾದ, ಲಿಂಗತಾರತಮ್ಯ, ಮಹಿಳಾ ಶೋಷಣೆ, ದೌರ್ಜನ್ಯ, ದಬ್ಬಾಳಿಕೆ, ಅನಕ್ಷರತೆ, ನಿರುದ್ಯೋಗ, ಅನಾರೋಗ್ಯ, ಭ್ರಷ್ಟಾಚಾರ, ಕೊಲೆ ಸುಲಿಗೆ ದರೋಡೆ ಗುಂಡಾಗಿರಿ, ಅಜ್ಞಾನ, ಮೂಢಾಚರಣೆ, ವ್ಯಸನ, ಓಟು ಖರೀದಿ ಮತ್ತು ಮಾರಾಟ ಇವೆಲ್ಲವೂ ಬಹುಜನರು ನಿತ್ಯ ಎದುರಿಸುತ್ತಿರುವ ಸಮಸ್ಯೆಗಳು. ಈ ಸಮಸ್ಯೆಗಳು ನಿವಾರಣೆಯಾಗಬೇಕೆಂದರೆ ಬಹುಜನರ ಸರ್ಕಾರವು ಅಧಿಕಾರಕ್ಕೆ ಬರಬೇಕು.ಈ ಕಾರಣಕ್ಕಾಗಿ ಈ ಸಂಕಲ್ಪ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮವೂ ಮುನ್ನ ನಂಜನಗೂಡು ನಗರದ ಅಂಬೇಡ್ಕರ್ ವೃತ್ತ ಬಳಿ ಡಾಕ್ಟರ್ ಬಿ. ಆರ್. ಅಂಬೇಡ್ಕರ್ ಪುತ್ತಳಿಗೆ ಮಾಲಾರ್ಪಣೆ ಮಾಡಿ ಅಲ್ಲಿಂದ ಮೌನ ಮೆರವಣಿಗೆ ಮೂಲಕ ವೇದಿಕೆ ಕಾರ್ಯಕ್ರಮ ಅವರಿಗೆ ಮೆರವಣಿಗೆ ನಡೆಸಲಾಗುವುದು.
ಮೈಸೂರು, ಮಂಡ್ಯ, ಹಾಸನ ಚಿಕ್ಕಮಗಳೂರು, ಚಾಮರಾಜನಗರ ಸೇರಿ ವಿವಿಧ ಜಿಲ್ಲೆಗಳಿಂದ ಜನ ಆಗಮಿಸಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಶಿವನಂದ, ನಾಗೇಂದ್ರ, ಸಿದ್ದರಾಜು, ಮಹೇಶ್, ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.
ವರದಿ ಮಹದೇವಸ್ವಾಮಿ ಪಟೇಲ್
Mysore
ಮೈಸೂರು ದಸರಾಗೆ ಪ್ರವಾಸಿಗರಿಗಾಗಿ ಕೆಎಸ್ಟಿಡಿಸಿ ವಿಶೇಷ ವ್ಯವಸ್ಥೆ
ಹಗಲು, ರಾತ್ರಿ ದೀಪಾಲಂಕಾರ ವೀಕ್ಷಣೆಗೆ ಅಂಬಾರಿ ಡಬಲ್ ಡೆಕ್ಕರ್ ಬಸ್; ಪ್ರವಾಸಿಗರಿಗೆ ವೈವಿಧ್ಯಮಯ ಪ್ಯಾಕೇಜ್ಗಳ ಸೌಲಭ್ಯ
ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಆಗಮಿಸುವ ಪ್ರವಾಸಿಗರಿಗೆ ಸುಗಮ ಹಾಗೂ ವೈವಿಧ್ಯಮಯ ಪ್ರವಾಸಿ ಅನುಭವ ಕಲ್ಪಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್ಟಿಡಿಸಿ) ವಿಶೇಷ ಪ್ರವಾಸ ವ್ಯವಸ್ಥೆಗಳನ್ನು ರೂಪಿಸಿದೆ ಎಂದು ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.
ದಸರಾ ಸಂದರ್ಭದಲ್ಲಿ ಮೈಸೂರಿನ ಪ್ರಮುಖ ಪ್ರವಾಸಿ ತಾಣಗಳು ಹಾಗೂ ಕಣ್ಮನ ಸೆಳೆಯುವ ವಿದ್ಯುತ್ ದೀಪಾಲಂಕಾರವನ್ನು ವೀಕ್ಷಿಸಲು ಜನಪ್ರಿಯ ಅಂಬಾರಿ ಡಬಲ್ ಡೆಕ್ಕರ್ ಬಸ್ ಸೇವೆ ಒದಗಿಸಲಾಗುತ್ತಿದೆ. ಇದರೊಂದಿಗೆ ಮೈಸೂರು ಹಾಗೂ ಸುತ್ತಮುತ್ತಲಿನ ಪ್ರಮುಖ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಏಳು ವಿಶೇಷ ಪ್ರವಾಸ ಪ್ಯಾಕೇಜ್ಗಳನ್ನು ರೂಪಿಸಲಾಗಿದೆ.

ಅಂಬಾರಿ ಬಸ್ನಲ್ಲಿ ದಸರಾ ದೀಪಾಲಂಕಾರ ವೀಕ್ಷಣೆ
ಅಂಬಾರಿ ಡಬಲ್ ಡೆಕ್ಕರ್ ಬಸ್ ಹಗಲು ವೇಳೆಯಲ್ಲಿ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಪ್ರತಿ ಗಂಟೆಗೊಮ್ಮೆ ಸಂಚರಿಸಲಿದೆ. ಹಗಲಿನ ಸವಾರಿಗೆ ಪ್ರತಿ ವ್ಯಕ್ತಿಗೆ 250 ರೂ. ಶುಲ್ಕ ನಿಗದಿಪಡಿಸಲಾಗಿದೆ.
ದಸರಾ ವಿದ್ಯುತ್ ದೀಪಾಲಂಕಾರವನ್ನು ಕಣ್ತುಂಬಿಕೊಳ್ಳಲು ರಾತ್ರಿ 6.30, 8 ಹಾಗೂ 9.30ಕ್ಕೆ ವಿಶೇಷ ಸವಾರಿಗಳನ್ನು ಆಯೋಜಿಸಲಾಗಿದೆ. ರಾತ್ರಿ ಸವಾರಿಯಲ್ಲಿ ಕೆಳಗಿನ ಡೆಕ್ಗೆ 250 ರೂ. ಹಾಗೂ ಮೇಲಿನ ಡೆಕ್ಗೆ 500 ರೂ. ದರ ನಿಗದಿಪಡಿಸಲಾಗಿದೆ.
ನಗರದ ಪ್ರಮುಖ ವೃತ್ತಗಳು, ಮೈಸೂರು ಅರಮನೆಯ ಸುತ್ತಮುತ್ತಲಿನ ಪ್ರದೇಶಗಳು ಹಾಗೂ ಸಯ್ಯಾಜಿರಾವ್ ರಸ್ತೆಯೂ ಸೇರಿದಂತೆ ದೀಪಾಲಂಕಾರದಿಂದ ಕಂಗೊಳಿಸುವ ಪ್ರಮುಖ ರಸ್ತೆಗಳಲ್ಲಿ ಅಂಬಾರಿ ಬಸ್ ಸಂಚರಿಸಲಿದೆ. ಇದರಿಂದ ಪ್ರವಾಸಿಗರು ನಗರದ ದಸರಾ ವೈಭವವನ್ನು ವಿಭಿನ್ನ ರೀತಿಯಲ್ಲಿ ವೀಕ್ಷಿಸಲು ಅನುಕೂಲವಾಗಲಿದೆ.
ಏಳು ವಿಶೇಷ ಪ್ರವಾಸ ಪ್ಯಾಕೇಜ್ಗಳು
ದಸರಾಕ್ಕೆ ಆಗಮಿಸುವ ಪ್ರವಾಸಿಗರು ಮೈಸೂರು ನಗರಕ್ಕೆ ಮಾತ್ರ ಸೀಮಿತವಾಗದೆ, ಸುತ್ತಮುತ್ತಲಿನ ಪ್ರವಾಸಿ ತಾಣಗಳನ್ನೂ ವೀಕ್ಷಿಸಲು ಅನುಕೂಲವಾಗುವಂತೆ ಕೆಎಸ್ಟಿಡಿಸಿ ಒಂದು ಹಾಗೂ ಎರಡು ದಿನಗಳ ಪ್ರವಾಸ ಪ್ಯಾಕೇಜ್ಗಳನ್ನು ರೂಪಿಸಿದೆ.
ಈ ಪ್ಯಾಕೇಜ್ಗಳಲ್ಲಿ ಊಟಿಗೆ ಎರಡು ದಿನಗಳ ಪ್ರವಾಸ, ಮೈಸೂರು ಸ್ಥಳೀಯ ಪ್ರವಾಸ, ಬೇಲೂರು-ಹಳೇಬೀಡು-ಶ್ರವಣಬೆಳಗೊಳ ಪ್ರವಾಸ, ಕೊಡಗಿನ ಪ್ರಮುಖ ತಾಣಗಳ ವೀಕ್ಷಣೆ, ಶಿವನಸಮುದ್ರ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಪ್ರವಾಸ ಮತ್ತು ನಂಜನಗೂಡು ಸೇರಿದಂತೆ ಧಾರ್ಮಿಕ, ಐತಿಹಾಸಿಕ ಹಾಗೂ ನೈಸರ್ಗಿಕ ತಾಣಗಳ ವೀಕ್ಷಣೆ ಒಳಗೊಂಡಿವೆ.
ಪ್ರವಾಸಿಗರಿಗೆ ಸುಗಮ ಪ್ರಯಾಣ, ವಿಶ್ವಾಸಾರ್ಹ ಸೇವೆ ಹಾಗೂ ವೈವಿಧ್ಯಮಯ ಪ್ರವಾಸದ ಅವಕಾಶ ಕಲ್ಪಿಸುವ ಮೂಲಕ ದಸರಾ ಅನುಭವವನ್ನು ಮತ್ತಷ್ಟು ಸ್ಮರಣೀಯವಾಗಿಸುವುದು ಕೆಎಸ್ಟಿಡಿಸಿಯ ಉದ್ದೇಶವಾಗಿದೆ ಎಂದು ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.
ಬುಕ್ಕಿಂಗ್ ಹಾಗೂ ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ
ಅಂಬಾರಿ ಬಸ್ ಸೇವೆ, ಪ್ರವಾಸ ಪ್ಯಾಕೇಜ್ಗಳು ಹಾಗೂ ಬುಕ್ಕಿಂಗ್ ವಿವರಗಳಿಗಾಗಿ ಪ್ರವಾಸಿಗರು ಕೆಎಸ್ಟಿಡಿಸಿ ಸಹಾಯವಾಣಿ ಸಂಖ್ಯೆಗಳಾದ 080-4334 4334, 080-4334 4335, 080-4334 4336, 080-4334 4342, 0821-2423652 ಅಥವಾ 8970656400 ಸಂಪರ್ಕಿಸಬಹುದು.
ಹೆಚ್ಚಿನ ಮಾಹಿತಿಗಾಗಿ www.kstdc.co ವೆಬ್ಸೈಟ್ಗೆ ಭೇಟಿ ನೀಡಬಹುದು.
Mysore
ಮೈಸೂರು ದಸರಾ ಜಂಬೂಸವಾರಿ ಟಿಕೆಟ್: ಗೋಲ್ಡ್ ಪಾಸ್ ಕಾಳಸಂತೆಯಲ್ಲಿ ಮಾರಾಟ
ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2026ರ ಸಂಭ್ರಮಕ್ಕೆ ದಿನಗಣನೆ ಆರಂಭವಾಗುತ್ತಿದ್ದಂತೆ, ದಸರಾ ಗೋಲ್ಡ್ ಪಾಸ್ಗಳು ಹಾಗೂ ಜಂಬೂಸವಾರಿ ಟಿಕೆಟ್ಗಳಿಗೆ ಭಾರೀ ಬೇಡಿಕೆ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ಗೋಲ್ಡ್ ಪಾಸ್ಗಳು ಮತ್ತು ಜಂಬೂಸವಾರಿ ಟಿಕೆಟ್ಗಳು ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವ ಆರೋಪಗಳು ಕೇಳಿಬಂದಿವೆ.

ನಾಡಹಬ್ಬ ಮೈಸೂರು ದಸರಾವನ್ನು ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧ ಭಾಗಗಳಿಂದ ಮಾತ್ರವಲ್ಲದೆ, ದೇಶ-ವಿದೇಶಗಳಿಂದಲೂ ಪ್ರವಾಸಿಗರು ಮೈಸೂರಿಗೆ ಆಗಮಿಸುತ್ತಾರೆ. ಅದರಲ್ಲೂ ದಸರಾ ಜಂಬೂಸವಾರಿಯನ್ನು ಹತ್ತಿರದಿಂದ ವೀಕ್ಷಿಸಲು ಅನುಕೂಲವಾಗುವ ಗೋಲ್ಡ್ ಪಾಸ್ಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಈ ಬೇಡಿಕೆಯನ್ನೇ ಬಂಡವಾಳವಾಗಿಸಿಕೊಂಡ ಕೆಲವರು ಪಾಸ್ಗಳು ಹಾಗೂ ಟಿಕೆಟ್ಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವ ಆರೋಪಗಳು ಕೇಳಿಬರುತ್ತಿವೆ.
ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿಯೂ ಗೋಲ್ಡ್ ಪಾಸ್ಗಳ ಮಾರಾಟಕ್ಕೆ ಸಂಬಂಧಿಸಿದ ಪ್ರಚಾರ ಹೆಚ್ಚಾಗಿದ್ದು, ಆನ್ಲೈನ್ ಮೂಲಕ ಪಾಸ್ಗಳನ್ನು ಪಡೆಯಲು ಹಲವರು ಆಸಕ್ತಿ ತೋರುತ್ತಿದ್ದಾರೆ. ಅಧಿಕೃತ ಮಾರಾಟದ ಹೊರತಾಗಿ ಅನಧಿಕೃತವಾಗಿ ಪಾಸ್ಗಳು ಹಾಗೂ ಟಿಕೆಟ್ಗಳನ್ನು ಮಾರಾಟ ಮಾಡಲಾಗುತ್ತಿದೆಯೇ ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ದಸರಾ ಮಹೋತ್ಸವದ ಹೆಸರಿನಲ್ಲಿ ಸಾರ್ವಜನಿಕರನ್ನು ವಂಚಿಸುವ ಸಾಧ್ಯತೆಯೂ ಇರುವುದರಿಂದ, ಪ್ರವಾಸಿಗರು ಎಚ್ಚರಿಕೆ ವಹಿಸಬೇಕಿದೆ. ಗೋಲ್ಡ್ ಪಾಸ್ಗಳು ಮತ್ತು ಜಂಬೂಸವಾರಿ ಟಿಕೆಟ್ಗಳನ್ನು ಅಧಿಕೃತ ಮೂಲಗಳಿಂದಲೇ ಖರೀದಿಸುವಂತೆ ಸಾರ್ವಜನಿಕರಿಗೆ ಸಲಹೆ ನೀಡಲಾಗುತ್ತಿದೆ.
ದಸರಾ ಟಿಕೆಟ್ಗಳ ಅನಧಿಕೃತ ಮಾರಾಟದ ಆರೋಪಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿ, ಕಾಳಸಂತೆ ಮಾರಾಟಕ್ಕೆ ಕಡಿವಾಣ ಹಾಕಬೇಕೆಂಬ ಒತ್ತಾಯವೂ ಕೇಳಿಬರುತ್ತಿದೆ.
Mysore
ಸುಸೂತ್ರ ದಸರಾ ಮಹೋತ್ಸವಕ್ಕೆ ಜಿಲ್ಲಾಧಿಕಾರಿ ಸಂಕಲ್ಪ: ಕೋಟೆ ಆಂಜನೇಯನಿಗೆ ವಿಶೇಷ ಪೂಜೆ
ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಯಾವುದೇ ವಿಘ್ನಗಳಿಲ್ಲದೆ ಸುಸೂತ್ರವಾಗಿ ನೆರವೇರಲಿ ಹಾಗೂ ಉತ್ಸವ ಯಶಸ್ವಿಯಾಗಿ ನಡೆಯಲಿ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ ಅವರು ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ದಸರಾ ಮಹೋತ್ಸವದ ಆಮಂತ್ರಣ ಪತ್ರಿಕೆಗಳನ್ನು ದೇವರ ಮುಂದಿಟ್ಟು ವಿಶೇಷ ಪೂಜೆ ಸಲ್ಲಿಸಿದ ಜಿಲ್ಲಾಧಿಕಾರಿಗಳು, ನಾಡಹಬ್ಬ ಯಾವುದೇ ಅಡೆತಡೆಗಳಿಲ್ಲದೆ ನಿರ್ವಿಘ್ನವಾಗಿ ನೆರವೇರಲಿ ಎಂದು ಪ್ರಾರ್ಥಿಸಿದರು.
ದಸರಾ ಮಹೋತ್ಸವವನ್ನು ಯಶಸ್ವಿಯಾಗಿ ನಡೆಸುವ ಸಂಕಲ್ಪದೊಂದಿಗೆ ಕೋಟೆ ಆಂಜನೇಯ ಸ್ವಾಮಿಯ ಮೊರೆ ಹೋದ ಜಿಲ್ಲಾಧಿಕಾರಿಗಳಿಗೆ ಚಾಮುಂಡೇಶ್ವರಿ ಬೆಟ್ಟದ ಕಾರ್ಯದರ್ಶಿ ರೂಪ ಅವರು ಸಾಥ್ ನೀಡಿದರು.
ನಾಡಹಬ್ಬದ ಸಿದ್ಧತೆಗಳು ಸುಸೂತ್ರವಾಗಿ ನಡೆಯಲಿ, ದಸರಾ ಮಹೋತ್ಸವಕ್ಕೆ ಆಗಮಿಸುವ ಭಕ್ತರು ಹಾಗೂ ಪ್ರವಾಸಿಗರಿಗೆ ಯಾವುದೇ ತೊಂದರೆಯಾಗದಿರಲಿ ಎಂಬ ಆಶಯದೊಂದಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.
-
Mysore22 hours agoನಂಜನಗೂಡು ದೇಬೂರು ಸರ್ಕಾರಿ ಕಾಲೇಜಿನ ಆವ್ಯವಸ್ಥೆ ಬಯಲು : ಮಾಜಿ ಶಾಸಕ ಬಿ.ಹರ್ಷವರ್ಧನ್ ಖುದ್ದು ಭೇಟಿ
-
National23 hours agoತಮಿಳುನಾಡಿಗೆ 15 ದಿನ 3 ಸಾವಿರ ಕ್ಯೂಸೆಕ್ ನೀರು ಹರಿಸಲು ಕರ್ನಾಟಕಕ್ಕೆ CWMA ಆದೇಶ
-
Chikmagalur20 hours agoಉಪ ವಲಯ ಅರಣ್ಯಾಧಿಕಾರಿ ರವಿಕುಮಾರ್ ಅಮಾನತು
-
National21 hours agoಜಿಎಸ್ಟಿ ಅಡಿಯಲ್ಲಿ ಬಂಧನ ಅಧಿಕಾರ ರದ್ದು ಪ್ರಸ್ತಾವನೆ: ವಿಚಾರಣಾ ಮಿತಿ ₹5 ಕೋಟಿಗೆ ಹೆಚ್ಚಳ
-
National4 hours agoಇಸ್ರೇಲ್ನಿಂದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ಗೆ ಶೌರ್ಯ ಪ್ರಶಸ್ತಿ ಘೋಷಣೆ
-
Manglore2 hours agoಕೊರಿಯರ್ನಲ್ಲಿ ಎಂಡಿಎಂಎ ಸಾಗಿಸುತ್ತಿದ್ದ ಜಾಲಕ್ಕೆ ಪೊಲೀಸ್ ಬಲೆ- ಮೂವರು ಅರೆಸ್ಟ್, 1.58 ಕೋಟಿ ಮಾದಕದ್ರವ್ಯ ವಶಕ್ಕೆ
-
Chikmagalur2 hours agoಮಳೆ ಇಲ್ಲ, ಬೆಳೆ ಇಲ್ಲ, ಸಾಲದ ಹೊರೆ: ಕಡೂರಿನಲ್ಲಿ ಮೂರು ದಿನಗಳ ಅಂತರದಲ್ಲಿ ಇಬ್ಬರು ರೈತರ ಆ*ತ್ಮಹ*ತ್ಯೆ
-
Chamarajanagar5 hours agoಭಾರಿ ಯಂತ್ರ ಸಾಗಿಸುತ್ತಿದ್ದ ಲಾರಿಯಿಂದ ವಿದ್ಯುತ್ ಅವಘಡ – 7 ಕಂಬಗಳು ಧರೆಗೆ!
