Connect with us

Mysore

ಹೊಲದ ನೀರು ಕದ್ದು ಗುತ್ತಿಗೆದಾರರ ಕಾಮಗಾರಿ – ನಂಜನಗೂಡು ನೀರಾವರಿ ಇಲಾಖೆ ಎದುರು ರೈತರ ಪ್ರತಿಭಟನೆ

Published

on

ನಂಜನಗೂಡು: ಹೊಲದ ನೀರನ್ನು ಟ್ಯಾಂಕರ್ ಮೂಲಕ ಕಳ್ಳಸಾಗಣೆ ಮಾಡಿ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ, ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಾಧ್ಯಕ್ಷ ವಿದ್ಯಾಸಾಗರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.


ಇಂದು ನಂಜನಗೂಡು ನೀರಾವರಿ ಇಲಾಖೆ ಕಚೇರಿ ಎದುರು ಜಮಾಯಿಸಿದ್ದ ರೈತ ಮುಖಂಡರು ಗುತ್ತಿಗೆದಾರರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಕಾರ್ಯಾಧ್ಯಕ್ಷ ಟಿ.ಎಲ್. ವಿದ್ಯಾಸಾಗರ್ ಮಾತನಾಡಿ, ನಂಜನಗೂಡು ಹೊಸಳ್ಳಿ ಗೇಟ್ ಕಾಮಗಾರಿ ಕಳಪೆಯಿಂದ ಕೂಡಿದೆ. ಅಪಘಾತದಲ್ಲಿ ಯುವಕನೋರ್ವ ಸಾವನ್ನಪ್ಪಿದ್ದಾನೆ. ಕಳಪೆ ಕಾಮಗಾರಿ ನಡೆಸಿ ಯುವಕನ ಸಾವಿಗೆ ಕಾರಣಕರ್ತರಾದ ಗುತ್ತಿಗೆದಾರರ ವಿರುದ್ಧ ಎಫ್ಐಆರ್ ದಾಖಲಿಸಿ ನ್ಯಾಯ ಕೊಡದೆ ಹೋದರೆ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಶನಿವಾರದೊಳಗೆ ಅವಕಾಶ ನೀಡಿದ್ದು, ಇದರೊಳಗೆ ಘಟನೆಗೆ ಸಂಬಂಧಿಸಿದಂತೆ ನ್ಯಾಯ ಸಿಗದೇ ಹೋದರೆ ರಸ್ತೆ ತೊಡೆದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿ, ನೀರಾವರಿ ಇಲಾಖೆ ಅಧಿಕಾರಿಗಳ ಕಾರ್ಯವೈಕರಿಗೆ ಖಂಡನೆ ವ್ಯಕ್ತಪಡಿಸಿದರು.

ಜಿಲ್ಲಾಧ್ಯಕ್ಷ ಸಿಂಧುವಳ್ಳಿ ಸತೀಶ್ ರಾವ್ ಮಾತನಾಡಿ,”ಮೈಸೂರು ಭಾಗದ ಫ್ಲೈಓವರ್ ಕಾಮಗಾರಿ ಅವೈಜ್ಞಾನಿಕವಾಗಿ ನಡೆಯುತ್ತಿದೆ. ಕಾಮಗಾರಿಗೆ ಬೇಕಾದ ನೀರನ್ನು ನಾಲೆಯಿಂದ ಟ್ಯಾಂಕರ್ ಮೂಲಕ ಕದ್ದು ಸಾಗಿಸಿ ಬಳಕೆ ಮಾಡುತ್ತಿದ್ದಾರೆ. ಇದು ಖಂಡನೀಯ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತ ಮುಖಂಡ ರಾಜ್ಯ ಉಪಾಧ್ಯಕ್ಷ ಇಮ್ಮಾವು ರಘು ಮಾತನಾಡಿ, ತಾಲೂಕಿನಲ್ಲಿ ಬರದಿಂದ ರೈತರು ಕಂಗಾಲಾಗಿದ್ದಾರೆ. ಕುಡಿಯಲು, ಬೆಳೆಗಳಿಗೆ ನೀರಿಲ್ಲದೆ ಜನ, ದನ-ಕರುಗಳು ತತ್ತರಿಸಿದ್ದಾರೆ. ಗೊತ್ತಿದ್ದರೂ ನೀರಾವರಿ ಇಲಾಖೆ ಅಧಿಕಾರಿಗಳು ಸುಮ್ಮನಿದ್ದಾರೆ. ಕೂಡಲೇ ಈ ಕಳ್ಳಸಾಗಣೆಯನ್ನು ನಿಲ್ಲಿಸದಿದ್ದರೆ ಉಗ್ರ ಹೋರಾಟ ನಡೆಸುತ್ತೇವೆ” ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಮಹಿಳಾ ಜಿಲ್ಲಾಧ್ಯಕ್ಷೆ ಶ್ವೇತಾ, ನಂಜುಂಡ, ಮೋಹನ್, ರವಿಚಂದ್ರ, ಸಿದ್ದೇಗೌಡ, ಮಂಜು, ರವಿ, ಸೇರಿದಂತೆ ಹಲವಾರು ರೈತ ಮುಖಂಡರು ಇದ್ದರು.

ವರದಿ ಮಹದೇವಸ್ವಾಮಿ ಪಟೇಲ್

Continue Reading

Mysore

ಮೈಸೂರು ದಸರಾಗೆ ಪ್ರವಾಸಿಗರಿಗಾಗಿ ಕೆಎಸ್‌ಟಿಡಿಸಿ ವಿಶೇಷ ವ್ಯವಸ್ಥೆ

Published

on

ಹಗಲು, ರಾತ್ರಿ ದೀಪಾಲಂಕಾರ ವೀಕ್ಷಣೆಗೆ ಅಂಬಾರಿ ಡಬಲ್ ಡೆಕ್ಕರ್ ಬಸ್; ಪ್ರವಾಸಿಗರಿಗೆ ವೈವಿಧ್ಯಮಯ ಪ್ಯಾಕೇಜ್‌ಗಳ ಸೌಲಭ್ಯ

ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಆಗಮಿಸುವ ಪ್ರವಾಸಿಗರಿಗೆ ಸುಗಮ ಹಾಗೂ ವೈವಿಧ್ಯಮಯ ಪ್ರವಾಸಿ ಅನುಭವ ಕಲ್ಪಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್‌ಟಿಡಿಸಿ) ವಿಶೇಷ ಪ್ರವಾಸ ವ್ಯವಸ್ಥೆಗಳನ್ನು ರೂಪಿಸಿದೆ ಎಂದು ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.

ದಸರಾ ಸಂದರ್ಭದಲ್ಲಿ ಮೈಸೂರಿನ ಪ್ರಮುಖ ಪ್ರವಾಸಿ ತಾಣಗಳು ಹಾಗೂ ಕಣ್ಮನ ಸೆಳೆಯುವ ವಿದ್ಯುತ್ ದೀಪಾಲಂಕಾರವನ್ನು ವೀಕ್ಷಿಸಲು ಜನಪ್ರಿಯ ಅಂಬಾರಿ ಡಬಲ್ ಡೆಕ್ಕರ್ ಬಸ್ ಸೇವೆ ಒದಗಿಸಲಾಗುತ್ತಿದೆ. ಇದರೊಂದಿಗೆ ಮೈಸೂರು ಹಾಗೂ ಸುತ್ತಮುತ್ತಲಿನ ಪ್ರಮುಖ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಏಳು ವಿಶೇಷ ಪ್ರವಾಸ ಪ್ಯಾಕೇಜ್‌ಗಳನ್ನು ರೂಪಿಸಲಾಗಿದೆ.


ಅಂಬಾರಿ ಬಸ್‌ನಲ್ಲಿ ದಸರಾ ದೀಪಾಲಂಕಾರ ವೀಕ್ಷಣೆ

ಅಂಬಾರಿ ಡಬಲ್ ಡೆಕ್ಕರ್ ಬಸ್ ಹಗಲು ವೇಳೆಯಲ್ಲಿ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಪ್ರತಿ ಗಂಟೆಗೊಮ್ಮೆ ಸಂಚರಿಸಲಿದೆ. ಹಗಲಿನ ಸವಾರಿಗೆ ಪ್ರತಿ ವ್ಯಕ್ತಿಗೆ 250 ರೂ. ಶುಲ್ಕ ನಿಗದಿಪಡಿಸಲಾಗಿದೆ.

ದಸರಾ ವಿದ್ಯುತ್ ದೀಪಾಲಂಕಾರವನ್ನು ಕಣ್ತುಂಬಿಕೊಳ್ಳಲು ರಾತ್ರಿ 6.30, 8 ಹಾಗೂ 9.30ಕ್ಕೆ ವಿಶೇಷ ಸವಾರಿಗಳನ್ನು ಆಯೋಜಿಸಲಾಗಿದೆ. ರಾತ್ರಿ ಸವಾರಿಯಲ್ಲಿ ಕೆಳಗಿನ ಡೆಕ್‌ಗೆ 250 ರೂ. ಹಾಗೂ ಮೇಲಿನ ಡೆಕ್‌ಗೆ 500 ರೂ. ದರ ನಿಗದಿಪಡಿಸಲಾಗಿದೆ.

ನಗರದ ಪ್ರಮುಖ ವೃತ್ತಗಳು, ಮೈಸೂರು ಅರಮನೆಯ ಸುತ್ತಮುತ್ತಲಿನ ಪ್ರದೇಶಗಳು ಹಾಗೂ ಸಯ್ಯಾಜಿರಾವ್ ರಸ್ತೆಯೂ ಸೇರಿದಂತೆ ದೀಪಾಲಂಕಾರದಿಂದ ಕಂಗೊಳಿಸುವ ಪ್ರಮುಖ ರಸ್ತೆಗಳಲ್ಲಿ ಅಂಬಾರಿ ಬಸ್ ಸಂಚರಿಸಲಿದೆ. ಇದರಿಂದ ಪ್ರವಾಸಿಗರು ನಗರದ ದಸರಾ ವೈಭವವನ್ನು ವಿಭಿನ್ನ ರೀತಿಯಲ್ಲಿ ವೀಕ್ಷಿಸಲು ಅನುಕೂಲವಾಗಲಿದೆ.

ಏಳು ವಿಶೇಷ ಪ್ರವಾಸ ಪ್ಯಾಕೇಜ್‌ಗಳು

ದಸರಾಕ್ಕೆ ಆಗಮಿಸುವ ಪ್ರವಾಸಿಗರು ಮೈಸೂರು ನಗರಕ್ಕೆ ಮಾತ್ರ ಸೀಮಿತವಾಗದೆ, ಸುತ್ತಮುತ್ತಲಿನ ಪ್ರವಾಸಿ ತಾಣಗಳನ್ನೂ ವೀಕ್ಷಿಸಲು ಅನುಕೂಲವಾಗುವಂತೆ ಕೆಎಸ್‌ಟಿಡಿಸಿ ಒಂದು ಹಾಗೂ ಎರಡು ದಿನಗಳ ಪ್ರವಾಸ ಪ್ಯಾಕೇಜ್‌ಗಳನ್ನು ರೂಪಿಸಿದೆ.

ಈ ಪ್ಯಾಕೇಜ್‌ಗಳಲ್ಲಿ ಊಟಿಗೆ ಎರಡು ದಿನಗಳ ಪ್ರವಾಸ, ಮೈಸೂರು ಸ್ಥಳೀಯ ಪ್ರವಾಸ, ಬೇಲೂರು-ಹಳೇಬೀಡು-ಶ್ರವಣಬೆಳಗೊಳ ಪ್ರವಾಸ, ಕೊಡಗಿನ ಪ್ರಮುಖ ತಾಣಗಳ ವೀಕ್ಷಣೆ, ಶಿವನಸಮುದ್ರ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಪ್ರವಾಸ ಮತ್ತು ನಂಜನಗೂಡು ಸೇರಿದಂತೆ ಧಾರ್ಮಿಕ, ಐತಿಹಾಸಿಕ ಹಾಗೂ ನೈಸರ್ಗಿಕ ತಾಣಗಳ ವೀಕ್ಷಣೆ ಒಳಗೊಂಡಿವೆ.

ಪ್ರವಾಸಿಗರಿಗೆ ಸುಗಮ ಪ್ರಯಾಣ, ವಿಶ್ವಾಸಾರ್ಹ ಸೇವೆ ಹಾಗೂ ವೈವಿಧ್ಯಮಯ ಪ್ರವಾಸದ ಅವಕಾಶ ಕಲ್ಪಿಸುವ ಮೂಲಕ ದಸರಾ ಅನುಭವವನ್ನು ಮತ್ತಷ್ಟು ಸ್ಮರಣೀಯವಾಗಿಸುವುದು ಕೆಎಸ್‌ಟಿಡಿಸಿಯ ಉದ್ದೇಶವಾಗಿದೆ ಎಂದು ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.

ಬುಕ್ಕಿಂಗ್ ಹಾಗೂ ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ

ಅಂಬಾರಿ ಬಸ್ ಸೇವೆ, ಪ್ರವಾಸ ಪ್ಯಾಕೇಜ್‌ಗಳು ಹಾಗೂ ಬುಕ್ಕಿಂಗ್ ವಿವರಗಳಿಗಾಗಿ ಪ್ರವಾಸಿಗರು ಕೆಎಸ್‌ಟಿಡಿಸಿ ಸಹಾಯವಾಣಿ ಸಂಖ್ಯೆಗಳಾದ 080-4334 4334, 080-4334 4335, 080-4334 4336, 080-4334 4342, 0821-2423652 ಅಥವಾ 8970656400 ಸಂಪರ್ಕಿಸಬಹುದು.

ಹೆಚ್ಚಿನ ಮಾಹಿತಿಗಾಗಿ www.kstdc.co ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

Continue Reading

Mysore

ಮೈಸೂರು ದಸರಾ ಜಂಬೂಸವಾರಿ ಟಿಕೆಟ್‌: ಗೋಲ್ಡ್ ಪಾಸ್‌ ಕಾಳಸಂತೆಯಲ್ಲಿ ಮಾರಾಟ

Published

on

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2026ರ ಸಂಭ್ರಮಕ್ಕೆ ದಿನಗಣನೆ ಆರಂಭವಾಗುತ್ತಿದ್ದಂತೆ, ದಸರಾ ಗೋಲ್ಡ್ ಪಾಸ್‌ಗಳು ಹಾಗೂ ಜಂಬೂಸವಾರಿ ಟಿಕೆಟ್‌ಗಳಿಗೆ ಭಾರೀ ಬೇಡಿಕೆ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ಗೋಲ್ಡ್ ಪಾಸ್‌ಗಳು ಮತ್ತು ಜಂಬೂಸವಾರಿ ಟಿಕೆಟ್‌ಗಳು ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವ ಆರೋಪಗಳು ಕೇಳಿಬಂದಿವೆ.

ನಾಡಹಬ್ಬ ಮೈಸೂರು ದಸರಾವನ್ನು ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧ ಭಾಗಗಳಿಂದ ಮಾತ್ರವಲ್ಲದೆ, ದೇಶ-ವಿದೇಶಗಳಿಂದಲೂ ಪ್ರವಾಸಿಗರು ಮೈಸೂರಿಗೆ ಆಗಮಿಸುತ್ತಾರೆ. ಅದರಲ್ಲೂ ದಸರಾ ಜಂಬೂಸವಾರಿಯನ್ನು ಹತ್ತಿರದಿಂದ ವೀಕ್ಷಿಸಲು ಅನುಕೂಲವಾಗುವ ಗೋಲ್ಡ್ ಪಾಸ್‌ಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಈ ಬೇಡಿಕೆಯನ್ನೇ ಬಂಡವಾಳವಾಗಿಸಿಕೊಂಡ ಕೆಲವರು ಪಾಸ್‌ಗಳು ಹಾಗೂ ಟಿಕೆಟ್‌ಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವ ಆರೋಪಗಳು ಕೇಳಿಬರುತ್ತಿವೆ.

ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿಯೂ ಗೋಲ್ಡ್ ಪಾಸ್‌ಗಳ ಮಾರಾಟಕ್ಕೆ ಸಂಬಂಧಿಸಿದ ಪ್ರಚಾರ ಹೆಚ್ಚಾಗಿದ್ದು, ಆನ್‌ಲೈನ್ ಮೂಲಕ ಪಾಸ್‌ಗಳನ್ನು ಪಡೆಯಲು ಹಲವರು ಆಸಕ್ತಿ ತೋರುತ್ತಿದ್ದಾರೆ. ಅಧಿಕೃತ ಮಾರಾಟದ ಹೊರತಾಗಿ ಅನಧಿಕೃತವಾಗಿ ಪಾಸ್‌ಗಳು ಹಾಗೂ ಟಿಕೆಟ್‌ಗಳನ್ನು ಮಾರಾಟ ಮಾಡಲಾಗುತ್ತಿದೆಯೇ ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ದಸರಾ ಮಹೋತ್ಸವದ ಹೆಸರಿನಲ್ಲಿ ಸಾರ್ವಜನಿಕರನ್ನು ವಂಚಿಸುವ ಸಾಧ್ಯತೆಯೂ ಇರುವುದರಿಂದ, ಪ್ರವಾಸಿಗರು ಎಚ್ಚರಿಕೆ ವಹಿಸಬೇಕಿದೆ. ಗೋಲ್ಡ್ ಪಾಸ್‌ಗಳು ಮತ್ತು ಜಂಬೂಸವಾರಿ ಟಿಕೆಟ್‌ಗಳನ್ನು ಅಧಿಕೃತ ಮೂಲಗಳಿಂದಲೇ ಖರೀದಿಸುವಂತೆ ಸಾರ್ವಜನಿಕರಿಗೆ ಸಲಹೆ ನೀಡಲಾಗುತ್ತಿದೆ.

ದಸರಾ ಟಿಕೆಟ್‌ಗಳ ಅನಧಿಕೃತ ಮಾರಾಟದ ಆರೋಪಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿ, ಕಾಳಸಂತೆ ಮಾರಾಟಕ್ಕೆ ಕಡಿವಾಣ ಹಾಕಬೇಕೆಂಬ ಒತ್ತಾಯವೂ ಕೇಳಿಬರುತ್ತಿದೆ.

Continue Reading

Mysore

ಸುಸೂತ್ರ ದಸರಾ ಮಹೋತ್ಸವಕ್ಕೆ ಜಿಲ್ಲಾಧಿಕಾರಿ ಸಂಕಲ್ಪ: ಕೋಟೆ ಆಂಜನೇಯನಿಗೆ ವಿಶೇಷ ಪೂಜೆ

Published

on

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಯಾವುದೇ ವಿಘ್ನಗಳಿಲ್ಲದೆ ಸುಸೂತ್ರವಾಗಿ ನೆರವೇರಲಿ ಹಾಗೂ ಉತ್ಸವ ಯಶಸ್ವಿಯಾಗಿ ನಡೆಯಲಿ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ ಅವರು ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ದಸರಾ ಮಹೋತ್ಸವದ ಆಮಂತ್ರಣ ಪತ್ರಿಕೆಗಳನ್ನು ದೇವರ ಮುಂದಿಟ್ಟು ವಿಶೇಷ ಪೂಜೆ ಸಲ್ಲಿಸಿದ ಜಿಲ್ಲಾಧಿಕಾರಿಗಳು, ನಾಡಹಬ್ಬ ಯಾವುದೇ ಅಡೆತಡೆಗಳಿಲ್ಲದೆ ನಿರ್ವಿಘ್ನವಾಗಿ ನೆರವೇರಲಿ ಎಂದು ಪ್ರಾರ್ಥಿಸಿದರು.

ದಸರಾ ಮಹೋತ್ಸವವನ್ನು ಯಶಸ್ವಿಯಾಗಿ ನಡೆಸುವ ಸಂಕಲ್ಪದೊಂದಿಗೆ ಕೋಟೆ ಆಂಜನೇಯ ಸ್ವಾಮಿಯ ಮೊರೆ ಹೋದ ಜಿಲ್ಲಾಧಿಕಾರಿಗಳಿಗೆ ಚಾಮುಂಡೇಶ್ವರಿ ಬೆಟ್ಟದ ಕಾರ್ಯದರ್ಶಿ ರೂಪ ಅವರು ಸಾಥ್ ನೀಡಿದರು.

ನಾಡಹಬ್ಬದ ಸಿದ್ಧತೆಗಳು ಸುಸೂತ್ರವಾಗಿ ನಡೆಯಲಿ, ದಸರಾ ಮಹೋತ್ಸವಕ್ಕೆ ಆಗಮಿಸುವ ಭಕ್ತರು ಹಾಗೂ ಪ್ರವಾಸಿಗರಿಗೆ ಯಾವುದೇ ತೊಂದರೆಯಾಗದಿರಲಿ ಎಂಬ ಆಶಯದೊಂದಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.

Continue Reading

Trending

error: Content is protected !!