Connect with us

Kodagu

ಆಲೆನಾಡ್ ಇಂಜ ಮಲೆನಾಡ್ : ಪರಂಪರೆಯ ಹೆಜ್ಜೆ ಗುರುತುಗಳಲ್ಲಿ ಆಲೇಮಾಡ ಒಕ್ಕದ ತೋಕ್ ನಮ್ಮೆ

Published

on

ವರದಿ : ಚೀರಂಡ ಎಂ. ಚಂಗಪ್ಪ, ಪೊನ್ನಂಪೇಟೆ
ಪೊನ್ನಂಪೇಟೆ : ಕೊಡವ ಸಂಸ್ಕೃತಿ, ಕುಟುಂಬ ಪರಂಪರೆ, ಕ್ರೀಡಾ ಪ್ರತಿಭೆ ಹಾಗೂ ಸಾಮಾಜಿಕ ಬಾಂಧವ್ಯವನ್ನು ಒಂದೇ ವೇದಿಕೆಯಲ್ಲಿ ಅನಾವರಣಗೊಳಿಸುವ ಆಲೇಮಾಡ ಒಕ್ಕದ ಎರಡನೇ ವರ್ಷದ ತೋಕ್ ನಮ್ಮೆ ಅ.10 ಮತ್ತು 11ರಂದು ಪೊನ್ನಂಪೇಟೆಯ ಕರ್ನಾಟಕ ಪಬ್ಲಿಕ್ ಶಾಲೆಯ ಮೈದಾನದಲ್ಲಿ ನಡೆಯಲಿದೆ.
ನಮ್ಮೆಗಾಗಿ ಈಗಾಗಲೇ ಸಿದ್ಧತೆಗಳು ಪೂರ್ಣಗೊಂಡಿದ್ದು, ಕಾರ್ಯಕ್ರಮ ಯಶಸ್ವಿಗೊಳಿಸಲು ಒಕ್ಕದ ಯುವಕರು ಹಗಲು-ರಾತ್ರಿ ಎನ್ನದೆ ಶ್ರಮಿಸುತ್ತಿದ್ದಾರೆ. ಎರಡು ದಿನಗಳ ಕಾರ್ಯಕ್ರಮವು ಕುಟುಂಬದ ಸದಸ್ಯರ ಸಮಾಗಮದ ಜೊತೆಗೆ ಆಲೇಮಾಡ ಒಕ್ಕದ ಐತಿಹಾಸಿಕ ಹಿನ್ನೆಲೆ, ಕೊಡವ ಸಂಸ್ಕೃತಿ ಮತ್ತು ಪರಂಪರೆಯ ಆಚರಣೆಗಳಿಗೆ ಸಾಕ್ಷಿಯಾಗಲಿದೆ.
ದಿನಾಂಕ 10 ರಂದು ಬೆಳಿಗ್ಗೆ 8 ಗಂಟೆಗೆ ಪೊನ್ನಂಪೇಟೆ ಬಸ್ ನಿಲ್ದಾಣದಲ್ಲಿರುವ ಐತಿಹಾಸಿಕ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಕುಟುಂಬದವರು ಪೂಜೆ ಸಲ್ಲಿಸಿ ಒಡ್ಡೋಲಗ ದೊಂದಿಗೆ ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ನಂದಿನೆರವಂಡ ನಾಚಪ್ಪ ಕೊಡವ ಅವರ ಮುಂದಾಳತ್ವದಲ್ಲಿ ಕೊಡವರ ಸಾಂಪ್ರದಾಯಿಕ ಉಡುಪಿನೊಂದಿಗೆ ಮುಖ್ಯ ರಸ್ತೆಯಲ್ಲಿ ಸಾಗಿ ಕೊಡವರ ಹೆಗ್ಗುರುತಾದ ಕೋವಿಯೊಂದಿಗೆ ಸಾಂಪ್ರದಾಯಿಕವಾಗಿ ಮೆರವಣಿಗೆಯಲ್ಲಿ ಮೈದಾನಕ್ಕೆ ಬರಲಿದ್ದಾರೆ.
ತೋಕ್ ನಮ್ಮೆಯ ಉದ್ಘಾಟನಾ ಸಮಾರಂಭ ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ. ಅಧ್ಯಕ್ಷತೆಯನ್ನು ಆಲೇಮಾಡ ಒಕ್ಕದ ಅಧ್ಯಕ್ಷ ಎ.ಎನ್. ದೇವಯ್ಯ ವಹಿಸಲಿದ್ದಾರೆ. ವಿರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಉದ್ಘಾಟನೆ ನೆರವೇರಿಸಲಿದ್ದಾರೆ. ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ, ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡೀರ ಅರುಣ್ ಮಾಚಯ್ಯ, ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ನಂದಿನೆರವಂಡ ನಾಚಪ್ಪ ಕೊಡವ ಹಾಗೂ ಪೂರ್ವಾಂಕರ ಲಿಮಿಟೆಡ್ ಇಂಟೀರಿಯರ್ಸ್ ವಿಭಾಗದ ಸಿಇಒ ಆಲೇಮಾಡ ಎಸ್. ಅಯ್ಯಪ್ಪ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ನಂತರ ಉದ್ಘಾಟನಾ ಸಮಾರಂಭದಲ್ಲಿ ಅತಿಥಿಗಳು ತೆಂಗಿನಕಾಯಿಗೆ ಗುಂಡು ಹೊಡೆಯುವ ಮೂಲಕ ತೋಕ್ ನಮ್ಮೆಗೆ ಚಾಲನೆ ನೀಡಲಿದ್ದಾರೆ.
ಉದಯೋನ್ಮುಖ ಬ್ಯಾಡ್ಮೆಂಟನ್ ಪಟು ಬೊಪ್ಪಂಡ ದಿಯಾ ಭೀಮಯ್ಯ, ಅಥ್ಲೀಟ್ ತೀತರಮಾಡ ಸಿಂಚನಾ ಕಾವೇರಮ್ಮ, ಹಾಕಿ ಆಟಗಾರ ಚಂದುರ ಬಿ ಪೂವಣ್ಣ, ಖ್ಯಾತ ಶೂಟರ್ ಮಂಡೇಟಿರ ತಿಲಕ್ ಅಯ್ಯಪ್ಪ, ಭಾರತ ಎ ತಂಡ ಹಾಗೂ ರಣಜಿ ಕ್ರಿಕೆಟ್ ಆಟಗಾರ ಮಾಚಿಮಾಡ ವಿದ್ವತ್ ಕಾವೇರಪ್ಪ, ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅಪ್ಪಟ್ಟೀರ ಕವಿನಾ ಕಾವೇರಮ್ಮ ಅವರನ್ನು ತೋಕ್ ನಮ್ಮೆಯಲ್ಲಿ ಸನ್ಮಾನ ಮಾಡಲಾಗುವುದು.

ಕುಟುಂಬ ಪರಿಚಯ:“ಆಲೆನಾಡ್ ಇಂಜ ಮಲೆನಾಡ್” ನೆನಪಿಸುವ ಕುಟುಂಬದ ಪಯಣ

ಕೊಡಗಿನ ದಕ್ಷಿಣ ಭಾಗದ ಕಿರ್ಗೂರು (ಕಿರುಗೂರು) ಪ್ರದೇಶದೊಂದಿಗೆ ಐತಿಹಾಸಿಕ ನಂಟು ಹೊಂದಿರುವ ಆಲೇಮಾಡ ಒಕ್ಕವು ಕೊಡವ ಸಮುದಾಯದ ಸಾಂಪ್ರದಾಯಿಕ ಕುಟುಂಬಗಳಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಪ್ರಸ್ತುತ ಒಕ್ಕದಲ್ಲಿ 74 ಒಲೆಗಳಿದ್ದು, ಸುಮಾರು 250 ಸದಸ್ಯರಿದ್ದಾರೆ.

ಆಲೇಮಾಡ ಕುಟುಂಬದ ಮೌಖಿಕ ಇತಿಹಾಸದ ಪ್ರಕಾರ, ಕುಟುಂಬದ ಪ್ರಾಚೀನ ಪೂರ್ವಜರೆಂದು ಹೇಳಲಾಗುವ ಅಯ್ಯಣ್ಣ ಬಲ್ಯಯ್ಯ ಮತ್ತು ಚೀಯಮ ತಾಯಿ ಅವರು 13ನೇ ಶತಮಾನದ ಮಧ್ಯಭಾಗದಲ್ಲಿ ಕಣ್ಣೂರು–ಮಲಬಾರ್ ಪ್ರದೇಶದಿಂದ ಕೊಡಗಿಗೆ ವಲಸೆ ಬಂದು ಕಿರ್ಗೂರು ಗ್ರಾಮದಲ್ಲಿ ನೆಲೆಸಿದರು ಎನ್ನಲಾಗಿದೆ. ಇವರ ವಂಶವು ನಂತರ ವೃದ್ಧಿಗೊಂಡು ಮೂರು ಪ್ರಮುಖ ಭಾಗಗಳಾಗಿ ವಿಸ್ತರಿಸಿತು ಎಂಬ ಪ್ರತೀತಿಯಿದೆ. ಇವರೊಂದಿಗೆ ಭದ್ರಕಾಳಿ ಹಾಗೂ ಬೋಟೆಕಾರ ದೇವತೆಗಳು ಕಿರುಗೂರಿಗೆ ಬಂದವು ಎಂಬ ನಂಬಿಕೆಯೂ ಕುಟುಂಬದ ಪರಂಪರೆಯಲ್ಲಿದೆ.

“ಆಲೆ ನಾಡ್ ಇಂಜ ಮಲೆ ನಾಡ್” ಎಂಬ ಕೊಡವರ ಸಾಂಪ್ರದಾಯಿಕ ನುಡಿಯು ಈ ಕುಟುಂಬದ ವಲಸೆಯ ಕಥನದೊಂದಿಗೆ ಬೆಸೆದುಕೊಂಡಿದೆ. ಕರಾವಳಿ ನಾಡಿನಿಂದ ಬೆಟ್ಟನಾಡಾದ ಕೊಡಗಿನತ್ತ ನಡೆದ ಪೂರ್ವಜರ ಪಯಣವನ್ನು ಈ ನುಡಿ ಪ್ರತಿಬಿಂಬಿಸುತ್ತದೆ.

ಕಾಲಕ್ರಮೇಣ ಆಲೇಮಾಡ ಕುಟುಂಬವು ದಕ್ಷಿಣ ಕೊಡಗಿನ ವಿವಿಧ ಭಾಗಗಳಿಗೆ ವಿಸ್ತರಿಸಿಕೊಂಡು ಹಲವು ಕವಲು-ಕೊಂಬೆಗಳಾಗಿ ಬೆಳೆದಿದೆ. ಪ್ರಸ್ತುತ ಕಿರುಗೂರು, ಮತ್ತೂರು ಹಾಗೂ ಮುಗುಟಗೇರಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಆಲೇಮಾಡ ಒಕ್ಕದ ಕುಟುಂಬಗಳು ನೆಲೆಸಿವೆ. ಆದರೂ ಕುಟುಂಬದ ಮೂಲ ಪರಂಪರೆ, ಕೊಡವ ಸಂಸ್ಕೃತಿ, ಆಚಾರ-ವಿಚಾರ ಮತ್ತು ಸಾಮಾಜಿಕ ಬಂಧವನ್ನು ಇಂದಿಗೂ ಉಳಿಸಿಕೊಂಡು ಬರಲಾಗಿದೆ.

ಮೂರು ಭಾಗಗಳ ಒಗ್ಗೂಡುವಿಕೆಗೆ ವೇದಿಕೆ

ಕೊಡವ ಕುಟುಂಬಗಳ ಹಾಕಿ ನಮ್ಮೆಗಳಲ್ಲಿ ಆಗಾಗ್ಗೆ ಒಟ್ಟಾಗಿ ಪಾಲ್ಗೊಳ್ಳುತ್ತಿದ್ದ ಆಲೇಮಾಡ ಕುಟುಂಬದ ಸದಸ್ಯರು, ಈ ಬಾರಿಯ ತೋಕ್ ನಮ್ಮೆಯಲ್ಲಿ ಒಕ್ಕದ ಮೂರು ಭಾಗಗಳಿಂದ ಒಂದೇ ವೇದಿಕೆಯಲ್ಲಿ ಸೇರುತ್ತಿರುವುದು ವಿಶೇಷವಾಗಿದೆ. ಹೀಗಾಗಿ ತೋಕ್ ನಮ್ಮೆ ಕೇವಲ ಕುಟುಂಬದ ಕ್ರೀಡಾಕೂಟವಾಗಿರದೆ, ಹಲವು ಕವಲುಗಳಾಗಿ ಹರಡಿರುವ ಕುಟುಂಬ ಸದಸ್ಯರನ್ನು ಒಂದೆಡೆ ಸೇರಿಸುವ ಸಾಂಸ್ಕೃತಿಕ ಸೇತುವೆಯಾಗಿ ರೂಪುಗೊಂಡಿದೆ.

ವಿವಿಧ ಕ್ಷೇತ್ರಗಳಲ್ಲಿ ಆಲೇಮಾಡ ಸದಸ್ಯರ ಸಾಧನೆ

ಆಲೇಮಾಡ ಒಕ್ಕದ ಸದಸ್ಯರು ಕ್ರೀಡೆ, ರಾಜಕೀಯ, ಕೃಷಿ, ಸಹಕಾರ ಹಾಗೂ ಉದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ.

ಸೇನೆಯಲ್ಲಿ ಆಲೇಮಾಡ ಕರ್ನಲ್ ವಿಜಯ್ ಕರುಂಬಯ್ಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಏಕಲವ್ಯ ಪ್ರಶಸ್ತಿ ವಿಜೇತ ಹಾಕಿ ಆಟಗಾರ ಚೀಯಣ್ಣ, ಹಾಕಿ ಸಬ್-ಜೂನಿಯರ್ ವಿಭಾಗದ ತ್ರಿಶಾ ತಂಗಮ್ಮ, ಸಾಯಿ ಅಕಾಡೆಮಿಯಲ್ಲಿ ಆಡುತ್ತಿರುವ ರಿಷಿ ಕಾವೇರಪ್ಪ ಹಾಗೂ ಅಮೆರಿಕನ್ ಫುಟ್ಬಾಲ್ ರಾಷ್ಟ್ರೀಯ ಆಟಗಾರ ನಮನ್ ನಂಜಪ್ಪ ಒಕ್ಕದ ಹೆಸರನ್ನು ಎತ್ತರಕ್ಕೇರಿಸಿದ್ದಾರೆ.

ರಾಜಕೀಯ ಕ್ಷೇತ್ರದಲ್ಲಿ ಸುಧೀರ್, ಸೋಮಣ್ಣ ಹಾಗೂ ನವೀನ್ ದೇವಯ್ಯ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ರೈತ ಸಂಘದ ತಾಲೂಕು ಅಧ್ಯಕ್ಷರಾಗಿ ಮಂಜು ಹಾಗೂ ರಾಜ್ಯ ಸಹಕಾರಿ ಒಕ್ಕೂಟದಿಂದ ಜಿಲ್ಲಾ ಪ್ರಶಸ್ತಿ ಪಡೆದ ಶಾಂತಿ ಕಾವೇರಮ್ಮ ಕೂಡ ಒಕ್ಕದ ಕೀರ್ತಿಗೆ ಕೊಡುಗೆ ನೀಡಿದ್ದಾರೆ.ಶಿಕ್ಷಣ ಕ್ಷೇತ್ರದಲ್ಲಿ ಡಾ. ತಿಮ್ಮಯ್ಯ ಮೆಕಾನಿಕ್ ವಿಭಾಗದಲ್ಲಿ ಸಂಶೋಧನೆ ಮಾಡಿ ಪಿ ಎಚ್ ಡಿ ಪಡೆದಿರುತ್ತಾರೆ. ಎ.ಎಸ್ ಲಲಿತ ಶ್ರೀನಿವಾಸ್ ಅವರಿಗೆ ಮಡಿಕೇರಿ ರಾಜಾ ಸೀಟಿನಲ್ಲಿ ಪುಷ್ಪ ಪ್ರದರ್ಶನ ನೀಡಿದ ಹೆಗ್ಗಳಿಕೆ ಇದೆ. ಯುರೋಪ್ ಮೂಲದ ಸೂಡಾನ್ ಕಾಫಿ ಸಂಸ್ಥೆಯ ಕುಶಾಲನಗರ ಶಾಖೆಯ ಸಿಇಒ ಆಗಿ ಆಲೇಮಾಡ ಹರೀಶ್ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಂಕಾಂಗ್ ಅಂತಾರಾಷ್ಟ್ರೀಯ ಬ್ಯಾಂಕಿನ ಉಪಾಧ್ಯಕ್ಷರಾಗಿ ಬೋಪಣ್ಣ ಸೇವೆ ಸಲ್ಲಿಸುತ್ತಿದ್ದಾರೆ.

ವ್ಯಾಪಾರ ಕ್ಷೇತ್ರದಲ್ಲಿಯೂ ಸುತನ್ ಅಯ್ಯಪ್ಪ, ರೇಷ್ಮಾ ,ಬೋಪಣ್ಣ ಹಾಗೂ ಪೊನ್ನಣ್ಣ ಸೇರಿದಂತೆ ಹಲವು ಸದಸ್ಯರು ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಯುವಕರ ಪರಿಶ್ರಮದಲ್ಲಿ ನಮ್ಮೆ

ತೋಕ್ ನಮ್ಮೆಯನ್ನು ಅಚ್ಚುಕಟ್ಟಾಗಿ ನಡೆಸಲು ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು, ಆಹಾರ ಸಮಿತಿಯಲ್ಲಿ ರೋಷನ್, ನವೀನ್ ದೇವಯ್ಯ ಹಾಗೂ ರಮೇಶ್ ಕಾರ್ಯನಿರ್ವಹಿಸುತ್ತಿದ್ದಾರೆ. ಒಕ್ಕದ ಹಿರಿಯರ ಮಾರ್ಗದರ್ಶನದೊಂದಿಗೆ ಯುವಕರಾದ ಜಗತ್ , ಕೀರ್ತನ್ ತಮ್ಮಯ್ಯ, ವಿನು,ಸುತನ್,ವಿಬಿನ್,ವಿತನ್,ಭವನ್,ಸುಧೀರ್,ಬೋಪಣ್ಣ , ಪ್ರಶಾಂತ್, ಪ್ರಖ್ಯಾತ್ ಮತ್ತು ಇತರರು ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡಿದ್ದಾರೆ. ತೋಕ್ ನಮ್ಮೆ ಸಮಿತಿ ಅಧ್ಯಕ್ಷರಾಗಿ ಎ.ಟಿ ಸೋಮಣ್ಣ, ಉಪಾಧ್ಯಕ್ಷರಾಗಿ ಎ.ಡಿ ಸುಧೀರ್, ಕಾರ್ಯದರ್ಶಿ ಎ.ಟಿ ಬೋಪಣ್ಣ, ಖಜಾಂಚಿ ಎ.ಜಿ ತಿಮ್ಮಯ್ಯ ಕಾರ್ಯನಿರ್ವಹಿಸುತ್ತಿದ್ದಾರೆ.
ಒಟ್ಟಾರೆ, ಆಲೇಮಾಡ ಒಕ್ಕದ ಎರಡನೇ ವರ್ಷದ ತೋಕ್ ನಮ್ಮೆ ಕುಟುಂಬದ ಪರಂಪರೆಯನ್ನು ನೆನಪಿಸುವುದರ ಜೊತೆಗೆ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸದಸ್ಯರನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವ ಮತ್ತು ಮುಂದಿನ ಪೀಳಿಗೆಗೆ ತಮ್ಮ ಬೇರುಗಳ ಪರಿಚಯ ಮಾಡಿಸುವ ಮಹತ್ವದ ಕುಟುಂಬ ಸಮಾಗಮವಾಗಿ ಗಮನ ಸೆಳೆಯುತ್ತಿದೆ.
ಈ ತೋಕ್ ನಮ್ಮೆಯನ್ನು ಮಾರ್ಕ್ಸ್ ಮೆನ್ ಸಂಸ್ಥೆಯ ಅಧ್ಯಕ್ಷರಾದ ಡಾ. ಚೆಕ್ಕೇರ ತಮ್ಮಯ್ಯ ಅವರ ಸಹಕಾರದೊಂದಿಗೆ
ಆಯೋಜಿಸಲಾಗಿದೆ.
ಈ ತೋಕ್ ನಮ್ಮೆ ಆಯೋಜನೆಗೆ ಒಕ್ಕದ ಪ್ರಮುಖರಾದ ಪೂರ್ವಾಂಕರ ಲಿಮಿಟೆಡ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಯ್ಯಪ್ಪ ಅವರ ಕೊಡುಗೆ ಅಪಾರ. ಗೋಣಿಕೊಪ್ಪದ ಲೋಪಮುದ್ರಾ ಆಸ್ಪತ್ರೆಯವರು ವೈದ್ಯಕೀಯ ಸೇವೆ ಒದಗಿಸಲಿದ್ದಾರೆ.

ತೋಕ್ ನಮ್ಮೆಯ ವಿಶೇಷತೆ.

ಸ್ವಾತಂತ್ರ್ಯ ಪೂರ್ವದಿಂದಲೇ ಕೊಡವರಿಗೆ ಬ್ರಿಟಿಷರಿಂದ ಮಾನ್ಯತೆಯಾಗಿ ಬಂದ ಕೋವಿ ಹಕ್ಕು ಮತ್ತು ಕೊಡವರ ಆಚಾರ ವಿಚಾರ ಸಂಸ್ಕೃತಿ ಪದ್ದತಿ ಪರಂಪರೆಯನ್ನು ಉಳಿಸಿಕೊಳ್ಳಲು ಮತ್ತು ಮುಂದಿನ ಪೀಳಿಗೆಗೆ ಈ ಹಕ್ಕನ್ನು ಮುಂದುವರೆಸಿಕೊಂಡು ಹೋಗುವ ಅನಿವಾರ್ಯತೆ ಕೊಡವರಿಗೆ ಇದೆ. ತೋಕ್ ನಮ್ಮೆಯ ಮುನ್ನುಡಿ ಬರೆದವರು ಕೊಡವ ಹಾಕಿ ನಮ್ಮೆಯ ಜನಕ ಪಾಂಡಂಡ ಕುಟ್ಟಣಿ ಅವರದ್ದು ಎಂದು ಹೇಳಿದರೆ ತಪ್ಪಾಗಲಾರದು. ಈ ಹಿಂದೆ ಕೊಡವರ ಕೋವಿ ಹಕ್ಕನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ದಾವೆ ಹೂಡಿದ ಸಂದರ್ಭದಲ್ಲಿ
ಕೊಡವ ವಕೀಲರುಗಳಾದ ಮೇರಿಯಂಡ ಸಜನ್ ಪೂವಯ್ಯ, ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ, ಮುಕ್ಕಾಟಿರ ಟಿ. ನಾಣಯ್ಯ, ಮಾಳೇಟಿರ ಧ್ಯಾನ್ ಚಿಣ್ಣಪ್ಪ, ಮಲ್ಲೇಂಗಡ ಗಗನ್ ಬೆಳ್ಯಪ್ಪ ಅವರುಗಳೊಂದಿಗೆ ಐಚೆಟ್ಟಿರ ರಾಲಿ ಮುದ್ದಪ್ಪ, ಐತಿಚಂಡ ಎಂ. ದೇವಯ್ಯ, ಕಾಂಗೀರ ಭೀಮಯ್ಯ, ಚೆಪ್ಪುಡಿರ ಪೂಣಚ್ಚ, ಕಾಳೇಂಗಡ ಸರೋಜಿನಿ, ಕರೋಟಿರ ಪೆಮ್ಮಯ್ಯ, ಬೊಳ್ಳಾರ್ಪಂಡ ಬೋಪಣ್ಣ, ಮಣವಟ್ಟಿರ ಅವಿನ್ ಸುಬ್ರಮಣಿ, ಚಂದಪಂಡ ನರೇನ್ ಸೇರಿದಂತೆ ಹಲವು ವಕೀಲರ ತಂಡ ಕಾನೂನು ಪ್ರಯತ್ನ ನಡೆಸಿ ವಾದ ಮಂಡಿಸಿ ಕೋವಿ ಹಕ್ಕನ್ನು ಮರಳಿ ಪಡೆಯಲು ನೀಡಿದ ಕೊಡುಗೆ ತೋಕ್ ನಮ್ಮೆ ನಡೆಸಲು ಸಹಕಾರಿಯಾಯಿತು.

ಕೊಡವ ಕುಟುಂಬಗಳ ನಡುವೆ ಪ್ರಾರಂಭವಾದ ಹಾಕಿ ನಮ್ಮೆ ನಂತರದ ದಿನಗಳಲ್ಲಿ ಕ್ರಿಕೆಟ್, ಕೇರ್ ಬಲಿ, ವಾಲಿಬಾಲ್, ಕಬ್ಬಡ್ಡಿ ಹಾಗೂ ಫುಟ್ಬಾಲ್ ವರೆಗು ಬಂದು ನಿಂತಿದೆ. ಇದು ಕೊಡವರ ಪಾಲಿಗೆ ಉತ್ತಮ ಬೆಳವಣಿಗೆಯೂ ಕೂಡಾ ಹೌದು. 2025 ರಲ್ಲಿ ಪೆಮ್ಮಂಡ ಒಕ್ಕದವರು ಒಂದು ಹೆಜ್ಜೆ ಮುಂದೆ ಹೋಗಿ ಪ್ರಥಮ ಬಾರಿಗೆ ತೋಕ್ ನಮ್ಮೆಯನ್ನು ಯಶಸ್ವಿಯಾಗಿ ಆಯೋಜನೆ ಮಾಡಿದ್ದರು. ಅದರ ಮುಂದುವರಿದ ಭಾಗವಾಗಿ ಈ ವರ್ಷ ಆಲೇಮಾಡ ತೋಕ್ ನಮ್ಮೆ ಆಯೋಜನೆಗೊಂಡಿದೆ. 2027 ರಲ್ಲಿ ಮಂಡೀರ ಒಕ್ಕ ತೋಕ್ ನಮ್ಮೆಯನ್ನು ನಡೆಸಲಿದ್ದು ಅವರಿಗೆ ಧ್ವಜ ಹಸ್ತಾಂತರ ಪ್ರಕ್ರಿಯೆಯೂ ನಡೆಯಲಿದೆ.

ಶೂಟಿಂಗ್ ಸ್ಪರ್ಧೆಯ ನಿಯಮಗಳು ಮತ್ತು ನಿಬಂಧನೆಗಳು:

1\. ಘೋಷಣಾ ಪತ್ರಕ್ಕೆ ಸಹಿ: ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲರೂ ಪ್ರವೇಶ ದ್ವಾರದಲ್ಲಿ ಘೋಷಣಾ ಪತ್ರಕ್ಕೆ ಕಡ್ಡಾಯವಾಗಿ ಸಹಿ ಮಾಡಬೇಕು.

2\. ಎರಡೂ ಸ್ಪರ್ಧೆಗಳಲ್ಲಿ ಭಾಗವಹಿಸುವುದು: ತಂಡದ ಇಬ್ಬರೂ ಸ್ಪರ್ಧಿಗಳು 12-ಬೋರ್ ಮತ್ತು .22 ರೈಫಲ್ ಎರಡೂ ವಿಭಾಗಗಳಲ್ಲಿ ಸ್ಪರ್ಧಿಸಬೇಕು. ಮುಂದಿನ ಸುತ್ತಿಗೆ ಅರ್ಹತೆ ನಿರ್ಧರಿಸಲು ಎರಡೂ ಸ್ಪರ್ಧೆಗಳ ಒಟ್ಟು ಅಂಕಗಳನ್ನು ಪರಿಗಣಿಸಲಾಗುತ್ತದೆ.

3\. ಸಮಯ ಪಾಲನೆ: ನಿಗದಿಪಡಿಸಿದ ಸ್ಪರ್ಧೆಯ ಆರಂಭದ ಸಮಯಕ್ಕಿಂತ ಕನಿಷ್ಠ 15 ನಿಮಿಷ ಮುಂಚಿತವಾಗಿ ಸ್ಪರ್ಧಿಗಳು ಹಾಜರಿರಬೇಕು.

4\. ತಡವಾಗಿ ಹಾಜರಾದರೆ: ನಿಗದಿತ ಸಮಯಕ್ಕೆ ತಂಡ ಹಾಜರಾಗದಿದ್ದಲ್ಲಿ, ಎದುರಾಳಿ ತಂಡಕ್ಕೆ ವಾಕ್ಓವರ್ ಮೂಲಕ ಗೆಲುವು ನೀಡಲಾಗುತ್ತದೆ.

5\. ಸಮಯ ಬದಲಾವಣೆ: ಹವಾಮಾನ ಮತ್ತು ಕಾರ್ಯಾಚರಣೆಗೆ ಸಂಬಂಧಿಸಿದ ಅನಿವಾರ್ಯ ಪರಿಸ್ಥಿತಿಗಳ ಆಧಾರದ ಮೇಲೆ ಸ್ಪರ್ಧೆಯ ಸಮಯದಲ್ಲಿ ಬದಲಾವಣೆ ಮಾಡಬಹುದು. ಸ್ಪರ್ಧಿಗಳು ಆಯೋಜಕರೊಂದಿಗೆ ಸಹಕರಿಸಿ, ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು.

6\. ತಂಡದ ಸದಸ್ಯರು: ಪ್ರತಿ ತಂಡದಲ್ಲಿ ಇಬ್ಬರು ಆಟಗಾರರು ಇರಬೇಕು.

7\. ಅಧಿಕೃತ ಕೈಪಟ್ಟಿ ಕಡ್ಡಾಯ: ಅಧಿಕೃತ ಕೈಪಟ್ಟಿ ಅಥವಾ ಅನುಮತಿ ಪಟ್ಟಿಯನ್ನು ಧರಿಸಿರುವ ಸ್ಪರ್ಧಿಗಳಿಗೆ ಮಾತ್ರ ಶೂಟಿಂಗ್ ವಲಯಕ್ಕೆ ಪ್ರವೇಶ ನೀಡಲಾಗುತ್ತದೆ. ಈ ಕೈಪಟ್ಟಿಯನ್ನು ಸ್ಪರ್ಧಾ ಸ್ಥಳದಲ್ಲಿಯೇ ಒದಗಿಸಲಾಗುತ್ತದೆ. ಸೋತ ತಂಡದ ಕೈಪಟ್ಟಿಯನ್ನು ಬೂತ್ನ ಉಸ್ತುವಾರಿ ಅಧಿಕಾರಿ ಕತ್ತರಿಸಿ ತೆಗೆದುಹಾಕುತ್ತಾರೆ. ವಿಜೇತ ತಂಡದ ಸದಸ್ಯರು ಮುಂದಿನ ಅರ್ಹತಾ ಸುತ್ತಿಗೆ ಮುಂದುವರಿಯಲು ತಮ್ಮ ಕೈಪಟ್ಟಿಯನ್ನು ಉಳಿಸಿಕೊಳ್ಳಬೇಕು.

8\. ಒಬ್ಬ ಸ್ಪರ್ಧಿ ಮಾತ್ರ ಹಾಜರಿದ್ದರೆ: ತಂಡದ ಇಬ್ಬರಲ್ಲಿ ಒಬ್ಬರು ಮಾತ್ರ ಹಾಜರಿದ್ದರೂ ಸ್ಪರ್ಧಿಸಲು ಅವಕಾಶವಿರುತ್ತದೆ. ಆದರೆ ಅಂತಹ ತಂಡವು ಮುಂದಿನ ಸುತ್ತುಗಳಿಗೆ ಅರ್ಹತೆ ಪಡೆಯುವುದಿಲ್ಲ.

9\. ಸ್ಪರ್ಧಿಗಳ ಬದಲಾವಣೆಗೆ ಅವಕಾಶವಿಲ್ಲ: ಮೊದಲ ಸುತ್ತಿನಲ್ಲಿ ಸ್ಪರ್ಧಿಸಿದ ಆಟಗಾರರನ್ನು ನಂತರದ ಯಾವುದೇ ಸುತ್ತಿನಲ್ಲಿ ಬದಲಾಯಿಸಲು ಅವಕಾಶವಿರುವುದಿಲ್ಲ.

10\. ಶಸ್ತ್ರಾಸ್ತ್ರಗಳ ಸುರಕ್ಷತೆ: ಸ್ಪರ್ಧಾ ಆವರಣಕ್ಕೆ ಪ್ರವೇಶಿಸುವಾಗ ಎಲ್ಲ ಬಂದೂಕುಗಳು ಖಾಲಿಯಾಗಿರಬೇಕು. ಅವುಗಳನ್ನು ಕೇಸ್ನಲ್ಲಿ ಅಥವಾ ಹೋಲ್ಸ್ಟರ್ನಲ್ಲಿ ಸುರಕ್ಷಿತವಾಗಿ ಇರಿಸಬೇಕು. ಸುರಕ್ಷತಾ ಫ್ಲ್ಯಾಗ್ಗಳನ್ನು ಅಳವಡಿಸಿರಬೇಕು ಹಾಗೂ ಬ್ಯಾರೆಲ್ಗಳನ್ನು ತೆರೆದ ಸ್ಥಿತಿಯಲ್ಲಿಡಬೇಕು.

11\. ಸುರಕ್ಷತಾ ತಪಾಸಣೆ: ಸ್ಪರ್ಧೆಗೆ ಮೊದಲು ಎಲ್ಲ ಬಂದೂಕುಗಳು ಮತ್ತು ಸಂಬಂಧಿತ ಉಪಕರಣಗಳ ಸುರಕ್ಷತಾ ತಪಾಸಣೆ ಕಡ್ಡಾಯವಾಗಿರುತ್ತದೆ. ಸ್ಕೋಪ್ ಅಳವಡಿಸಿರುವ ಬಂದೂಕುಗಳಿಗೆ ಸ್ಪರ್ಧೆಯಲ್ಲಿ ಅವಕಾಶವಿರುವುದಿಲ್ಲ.

12\. ಕಾರ್ಟ್ರಿಡ್ಜ್ ದೋಷ (ಮಿಸ್ಫೈರ್): ಕಾರ್ಟ್ರಿಡ್ಜ್ ಅನ್ನು ಬಂದೂಕಿಗೆ ತುಂಬಿದ ನಂತರ, ತೆಂಗಿನಕಾಯಿಯತ್ತ ಗುರಿ ಹಿಡಿಯುವ ಮೊದಲು ಗುಂಡು ಸಿಡಿಯದಿದ್ದರೆ, ಆ ಪ್ರಯತ್ನವನ್ನು ಯಶಸ್ವಿ ಪ್ರಯತ್ನವೆಂದು ಪರಿಗಣಿಸಲಾಗುತ್ತದೆ. ಅದನ್ನು ವಿಫಲ ಪ್ರಯತ್ನವೆಂದು ಪರಿಗಣಿಸುವುದಿಲ್ಲ; ಮರುಪ್ರಯತ್ನಕ್ಕೂ ಅವಕಾಶವಿರುವುದಿಲ್ಲ.

13\. ಬಂದೂಕು ಮತ್ತು ಮದ್ದುಗುಂಡುಗಳ ವಾಪಸಾತಿ: ಸ್ಪರ್ಧಿಗಳು ಸಾಲವಾಗಿ ಪಡೆದ ಎಲ್ಲ ಬಂದೂಕುಗಳನ್ನು ಹಾಗೂ ಸ್ಪರ್ಧಾ ಸ್ಥಳದಲ್ಲಿ ಖರೀದಿಸಿ ಬಳಸದ ಉಳಿದ ಮದ್ದುಗುಂಡುಗಳನ್ನು ಆಯೋಜಕರಿಗೆ ಹಿಂದಿರುಗಿಸಬೇಕು.

14\. ಮೊಬೈಲ್ ಫೋನ್ ಬಳಕೆ ನಿಷೇಧ: ಶೂಟಿಂಗ್ ಮಾಡುವಾಗ ಮೊಬೈಲ್ ಫೋನ್ ಬಳಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಸ್ಪರ್ಧಿಗಳು ತಮ್ಮ ಮೊಬೈಲ್ ಫೋನ್ಗಳನ್ನು ಬೂತ್ನಲ್ಲಿರುವ ಆಯೋಜಕರ ಪ್ರತಿನಿಧಿಗಳಿಗೆ ಒಪ್ಪಿಸಬೇಕು.

15\. ಮದ್ಯ ಮತ್ತು ಮಾದಕ ವಸ್ತುಗಳ ನಿಷೇಧ: ಮದ್ಯಪಾನ, ಕಾನೂನುಬಾಹಿರ ಮಾದಕ ವಸ್ತುಗಳು ಹಾಗೂ ದೈಹಿಕ ಅಥವಾ ಮಾನಸಿಕ ಸಾಮರ್ಥ್ಯಕ್ಕೆ ಅಡ್ಡಿಪಡಿಸುವ ಔಷಧಗಳ ಪ್ರಭಾವದಲ್ಲಿರುವುದು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಯಾರಾದರೂ ಅಂತಹ ಪ್ರಭಾವದಲ್ಲಿದ್ದಾರೆ ಎಂಬ ಅನುಮಾನ ಕಂಡುಬಂದರೆ, ಅವರನ್ನು ತಕ್ಷಣವೇ ಸ್ಪರ್ಧೆಯಿಂದ ಹೊರಗಿಡಲಾಗುತ್ತದೆ.

16\. ಅಶಿಸ್ತಿನ ವರ್ತನೆಗೆ ಕ್ರಮ: ಕ್ರೀಡಾಸ್ಫೂರ್ತಿಗೆ ವಿರುದ್ಧವಾದ ವರ್ತನೆ, ಕಿರುಕುಳ ಅಥವಾ ಸಿಬ್ಬಂದಿ ಹಾಗೂ ಇತರ ಸ್ಪರ್ಧಿಗಳ ವಿರುದ್ಧ ಮೌಖಿಕ ನಿಂದನೆ ಮಾಡಿದರೆ ತಕ್ಷಣವೇ ಅನರ್ಹಗೊಳಿಸಲಾಗುತ್ತದೆ.

17\. ಶೂಟಿಂಗ್ ವಲಯದ ಶಿಸ್ತು: ಶೂಟಿಂಗ್ ವಲಯದ ಸುರಕ್ಷತಾ ನಿಯಮಗಳು ಮತ್ತು ಶಿಸ್ತನ್ನು ಪಾಲಿಸದವರ ವಿರುದ್ಧ ಕಟ್ಟುನಿಟ್ಟಿನ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ.

18\. ಶೂಟಿಂಗ್ ಅಂತರ:

* 12-ಬೋರ್ ಬಂದೂಕು: 30 ಮೀಟರ್.

* .22 ರೈಫಲ್: 50 ಮೀಟರ್.

19\. ಡಬಲ್ ಬ್ಯಾರೆಲ್ 12-ಬೋರ್ ಬಂದೂಕಿನ ಬಳಕೆ: ಡಬಲ್ ಬ್ಯಾರೆಲ್ 12-ಬೋರ್ ಬಂದೂಕಿನಲ್ಲಿ ಒಂದೇ ನೈಜ ಕಾರ್ಟ್ರಿಡ್ಜ್ ಬಳಸುವಾಗ, ಮತ್ತೊಂದು ಬ್ಯಾರೆಲ್ನಲ್ಲಿ ನಿಷ್ಕ್ರಿಯ ಡಮ್ಮಿ ಶೆಲ್ ಅನ್ನು ಅಳವಡಿಸಬೇಕು.

20\. ಅಂಕಗಳ ಲೆಕ್ಕಾಚಾರ: ಎರಡೂ ಸ್ಪರ್ಧೆಗಳಲ್ಲಿ ತಂಡದ ಇಬ್ಬರೂ ಆಟಗಾರರು ಗಳಿಸಿದ ಒಟ್ಟು ಅಂಕಗಳನ್ನು ಪರಿಗಣಿಸಲಾಗುತ್ತದೆ. ಅತಿ ಹೆಚ್ಚು ಒಟ್ಟು ಅಂಕ ಗಳಿಸಿದ ತಂಡಗಳು ಮುಂದಿನ ಸುತ್ತಿಗೆ ಅರ್ಹತೆ ಪಡೆಯುತ್ತವೆ.

21\. ಗುರಿಯ ಪರಿಶೀಲನೆ: ಸ್ಪರ್ಧಿಗಳು ವಿನಂತಿಸಿದಲ್ಲಿ, ಅಧಿಕಾರಿಗಳು ಗುರಿಯಾಗಿ ಬಳಸಿದ ತೆಂಗಿನಕಾಯಿಗಳನ್ನು ದೃಶ್ಯ ಪರಿಶೀಲನೆಗಾಗಿ ತೋರಿಸುತ್ತಾರೆ. ಆದರೆ ಗುರಿ ತೆಂಗಿನಕಾಯಿಗಳನ್ನು ಸ್ಪರ್ಧಿಗಳಿಗೆ ಹಸ್ತಾಂತರಿಸಲಾಗುವುದಿಲ್ಲ.

22\. ತೆಂಗಿನಕಾಯಿ ಒಡೆಯದಿದ್ದರೆ: ತೆಂಗಿನಕಾಯಿ ಒಡೆಯದಿದ್ದರೆ ಅಥವಾ ಅದರಿಂದ ನೀರು ಹೊರಬಂದಿರುವುದು ಸ್ಪಷ್ಟವಾಗಿ ಕಾಣದಿದ್ದರೆ, ಅಧಿಕೃತ ಸಿಬ್ಬಂದಿ ತೆಂಗಿನಕಾಯಿಯನ್ನು ಮೂರು ಬಾರಿ ಬೆರಳಿನಿಂದ ತಟ್ಟಿ ಪರಿಶೀಲಿಸುತ್ತಾರೆ.

23\. ಟೈ-ಬ್ರೇಕರ್ (ಸಮಬಲ ನಿರ್ಧಾರ):

* ಸಮಾನ ಅಂಕ ಗಳಿಸಿದ ತಂಡಗಳಿಂದ ತಲಾ ಒಬ್ಬರನ್ನು ಆಯ್ಕೆ ಮಾಡಿ, ಇಬ್ಬರೂ 12-ಬೋರ್ ಮತ್ತು .22 ರೈಫಲ್ ಎರಡೂ ವಿಭಾಗಗಳಲ್ಲಿ ಸ್ಪರ್ಧಿಸಬೇಕು.

* ಎರಡೂ ವಿಭಾಗಗಳ ಒಟ್ಟು ಅಂಕಗಳ ಆಧಾರದ ಮೇಲೆ ಹೆಚ್ಚಿನ ಅಂಕ ಗಳಿಸಿದ ತಂಡವನ್ನು ವಿಜೇತ ತಂಡವೆಂದು ಘೋಷಿಸಿ ಮುಂದಿನ ಸುತ್ತಿಗೆ ಅರ್ಹತೆ ನೀಡಲಾಗುತ್ತದೆ.

* ಈ ಹಂತದಲ್ಲಿಯೂ ಸಮಬಲ ಮುಂದುವರಿದರೆ, ಎರಡೂ ತಂಡಗಳ ಎರಡನೇ ಆಟಗಾರರು ಇದೇ ಎರಡು ವಿಭಾಗಗಳಲ್ಲಿ ಸ್ಪರ್ಧಿಸಬೇಕು.

* ಆ ಬಳಿಕವೂ ಸಮಬಲ ಮುಂದುವರಿದರೆ, ಚೀಟಿ ಎತ್ತುವ ಮೂಲಕ ವಿಜೇತರನ್ನು ನಿರ್ಧರಿಸಲಾಗುತ್ತದೆ.

24\. ಆಯೋಜಕರ ನಿರ್ಧಾರವೇ ಅಂತಿಮ: ಅಧಿಕೃತ ತೀರ್ಪುಗಳು, ನಿಯಮಗಳ ವ್ಯಾಖ್ಯಾನ ಮತ್ತು ಸಮಬಲ ನಿರ್ಧಾರಕ್ಕೆ ಸಂಬಂಧಿಸಿದಂತೆ ಟೂರ್ನಮೆಂಟ್ ಸಮಿತಿಯ ನಿರ್ಧಾರವೇ ಅಂತಿಮ ಹಾಗೂ ಎಲ್ಲರಿಗೂ ಬದ್ಧವಾಗಿರುತ್ತದೆ. ಪರಿಶೀಲನಾ ಅಧಿಕಾರಿಯ ನಿರ್ಧಾರವನ್ನೂ ಸ್ಪರ್ಧಿಗಳು ಅಂತಿಮವೆಂದು ಪರಿಗಣಿಸಬೇಕು.

25\. ಛಾಯಾಚಿತ್ರ ಮತ್ತು ವಿಡಿಯೊ ಚಿತ್ರೀಕರಣ: ಪ್ರಚಾರ ಮತ್ತು ವರದಿಗಳ ಉದ್ದೇಶಕ್ಕಾಗಿ ಸ್ಪರ್ಧಿಗಳ ಛಾಯಾಚಿತ್ರ ಹಾಗೂ ವಿಡಿಯೊಗಳನ್ನು ಚಿತ್ರೀಕರಿಸುವ ಹಕ್ಕನ್ನು ಆಯೋಜಕರು ಕಾಯ್ದಿರಿಸಿಕೊಂಡಿರುತ್ತಾರೆ.

ಸೂಚನೆ: ಸ್ಪರ್ಧೆಯ ಸುರಕ್ಷತೆ ಮತ್ತು ನಿಯಮಗಳ ಸ್ಪಷ್ಟತೆಗಾಗಿ, ವಿಶೇಷವಾಗಿ 12ನೇ ನಿಯಮದಲ್ಲಿನ ಮಿಸ್ಫೈರ್ ಅನ್ನು ಯಶಸ್ವಿ ಪ್ರಯತ್ನವೆಂದು ಪರಿಗಣಿಸುವುದು ಹಾಗೂ 19ನೇ ನಿಯಮದಲ್ಲಿನ ಡಮ್ಮಿ ಶೆಲ್ ಬಳಕೆ ಕುರಿತು ಆಯೋಜಕರು ಸ್ಪರ್ಧೆ ಆರಂಭಕ್ಕೂ ಮುನ್ನ ಸ್ಪಷ್ಟ ಮಾರ್ಗಸೂಚಿ ನೀಡುವುದು ಸೂಕ್ತ.

Continue Reading

Kodagu

ಚೆಯ್ಯಂಡಾಣೆಯಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಬೃಹತ್ ಜನಜಾಗೃತಿ ವಾಹನ ಜಾಥಾ

Published

on

ನಾಪೋಕ್ಲು : ಅಕ್ರಮ ಬಾಂಗ್ಲಾದೇಶಿ ವಲಸಿಗರ ವಿರುದ್ಧ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಕೊಡಗು ಸುರಕ್ಷಾ ಆಂದೋಲನ ಸಮಿತಿಯ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ನಡೆಯುತ್ತಿರುವ ಜನಜಾಗೃತಿ ವಾಹನ ಜಾಥಾ ಹಾಗೂ ಸಭಾ ಕಾರ್ಯಕ್ರಮವು ಚೆಯ್ಯಂಡಾಣೆಯಲ್ಲಿ ನಡೆಯಿತು.

ದೇಶದ ಏಕತೆ ಹಾಗೂ ಆಂತರಿಕ ಸುರಕ್ಷತೆಗೆ ಧಕ್ಕೆ ತರುತ್ತಿರುವ ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಸುರಕ್ಷಾ ಆಂದೋಲನ ಸಮಿತಿಯ ನೂರಾರು ಕಾರ್ಯಕರ್ತರು ಚೆಯ್ಯಂಡಾಣೆ ಪಟ್ಟಣದ ಹೃದಯ ಭಾಗದ ಜಂಕ್ಷನ್‌ನಲ್ಲಿ ಸೇರಿ ಜಾಥಾ ನಡೆಸಿದರು.
ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆಯ್ಯಂಡಾಣೆ ಪಟ್ಟಣಕ್ಕೆ ಆಗಮಿಸಿದ ಜಾಥಾವನ್ನು ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿ, ಭಾರತಾಂಬೆಗೆ ಪುಷ್ಪಾರ್ಚನೆ ಸಲ್ಲಿಸಿದರು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಕೊಡಗು ಸುರಕ್ಷಾ ಆಂದೋಲನ ಸಮಿತಿಯ ಸಂಚಾಲಕ ಚಿ.ನಾ. ಸೋಮೇಶ್ (ಸೋಮನಾಥ ಸ್ವಾಮೀಜಿ) ಮಾತನಾಡಿ, ದೇಶದ ಸನಾತನ ಪರಂಪರೆ, ಸಂಸ್ಕೃತಿ ಹಾಗೂ ಸಾಮಾಜಿಕ ವ್ಯವಸ್ಥೆಗೆ ಧಕ್ಕೆ ಉಂಟುಮಾಡುವ ಯಾವುದೇ ಚಟುವಟಿಕೆಗಳ ವಿರುದ್ಧ ಜನರು ಜಾಗೃತರಾಗಬೇಕೆಂದು ಕರೆ ನೀಡಿದರು.
ಕೊಡಗಿನ ಮಣ್ಣಿನ ಮಕ್ಕಳು ಇಂದು ಅಸ್ಥಿರತೆ ಹಾಗೂ ಅಭದ್ರತೆಯ ಭಾವನೆಯಲ್ಲಿದ್ದಾರೆ. ಕುಟುಂಬ ಹಾಗೂ ಸಮಾಜದಲ್ಲಿ ಒಡಕು ಸೃಷ್ಟಿಸಿ ಅದರ ಲಾಭ ಪಡೆಯುವ ಶಕ್ತಿಗಳ ವಿರುದ್ಧ ಜನರು ಎಚ್ಚರಿಕೆಯಿಂದ ಇರಬೇಕು. ಚೆಯ್ಯಂಡಾಣೆ ಭಾಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮಡಿಕೇರಿಯಲ್ಲಿ ನಡೆಯಲಿರುವ ಸಮಾವೇಶದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಅವರು ಕರೆ ನೀಡಿದರು.

ಪ್ರಮುಖರಾದ ಚೇನಂಡ ಸಂಪತ್ ಮಾತನಾಡಿ ಅಕ್ರಮ ಬಾಂಗ್ಲಾದೇಶಿ ವಲಸಿಗರ ವಿಚಾರ ಇತ್ತೀಚಿನ ದಿನಗಳಲ್ಲಿ ಪತ್ರಿಕೆ, ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ಕೃಷಿ ಚಟುವಟಿಕೆಗಳಿಗೆ ಕಾರ್ಮಿಕರ ಅವಶ್ಯಕತೆ ಇದ್ದರೂ, ಹೊರಗಿನಿಂದ ಬರುವ ಕಾರ್ಮಿಕರ ಕುರಿತು ಸೂಕ್ತ ಪರಿಶೀಲನೆ ಹಾಗೂ ನಿಗಾ ವಹಿಸುವ ಅಗತ್ಯವಿದೆ ಎಂದರು.
ರೈತರು ಕಾರ್ಮಿಕರ ಮೇಲೆ ಅವಲಂಬಿತರಾಗಿರುವ ಸಂದರ್ಭದಲ್ಲಿ ತಮ್ಮ ಜಮೀನು, ಲೈನ್ ಮನೆ ಹಾಗೂ ಇತರ ವಾಸಸ್ಥಳಗಳಲ್ಲಿ ಕೆಲಸ ಮಾಡುವವರ ವಿವರಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಸಮಸ್ಯೆ ಎದುರಾದ ಬಳಿಕ ಎಚ್ಚೆತ್ತುಕೊಳ್ಳುವ ಬದಲು ಮುನ್ನೆಚ್ಚರಿಕೆಯಾಗಿ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಕೊಡಗು ಸುರಕ್ಷಾ ಆಂದೋಲನ ಸಮಿತಿ ಹಮ್ಮಿಕೊಂಡಿರುವ ಜನಜಾಗೃತಿ ಜಾಥಾ ಶ್ಲಾಘನೀಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕೊಡಗು ಸುರಕ್ಷಾ ಆಂದೋಲನ ಸಮಿತಿಯ ಸುನಿಲ್ ಮಾದಪ್ಪ ಸೇರಿದಂತೆ ಕೋಕೇರಿ, ಚೇಲಾವರ,ಕರಡ,ಅರಪಟ್ಟು, ಪೊದವಾಡ ಹಾಗೂ ನರಿಯಂದಡ ಗ್ರಾಮದ ಸಾರ್ವಜನಿಕರು,ಗ್ರಾಮಸ್ಥರು ಮತ್ತು ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ದನೋಜ್ ಕುಮಾರ್ (ದಿವ್ಯ) ಸ್ವಾಗತಿಸಿ,ವಂದಿಸಿದರು.

Continue Reading

Kodagu

ಕುಶಾಲನಗರ ಮಡಿಕೇರಿ ಹೆದ್ದಾರಿಯಲ್ಲಿ ಅಪಘಾತ ತಡೆಗೆ ಉಬ್ಬುಗಳ ನಿರ್ಮಾಣ

Published

on

ಕುಶಾಲನಗರ : ಕುಶಾಲನಗರ ಮಡಿಕೇರಿ ಹೆದ್ದಾರಿ ರಸ್ತೆಯ ಆನೆಕಾಡು ಮೀಸಲು ಅರಣ್ಯದ ಬಳಿ ಅಪಘಾತ ಮುಕ್ತ ವಲಯವನ್ನಾಗಿಸಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.
ಕುಶಾಲನಗರ ಬಸವನಹಳ್ಳಿ ಮತ್ತು ಹೊಸಕೋಟೆ ನಡುವೆ ಆನೆಕಾಡು ಬಳಿ ನಿರಂತರ ವಾಹನಗಳ ಅಪಘಾತ ನಡೆಯುತ್ತಿದ್ದು, ಈ ಹಿನ್ನಲೆಯಲ್ಲಿ ಕುಶಾಲನಗರ ಸಂಚಾರಿ ಪೊಲೀಸ್ ಅಧಿಕಾರಿಗಳು ಕ್ಷೇತ್ರದ ಶಾಸಕರು ಮತ್ತು ಜಿಲ್ಲಾ ಪೊಲೀಸ್ ಅಧಿಕಾರಿಗಳಿಗೆ ಸದರಿ ಪ್ರದೇಶವನ್ನು ಅಪಘಾತ ಮುಕ್ತ ವಲಯವನ್ನಾಗಿಸಲು ಮನವಿ ಸಲ್ಲಿಸಿದ ಮೇರೆಗೆ ಇದೀಗ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ಮೂಲಕ ಆರು ಕಡೆ ರಸ್ತೆ ಉಬ್ಬುಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಆ ಮೂಲಕ ವಾಹನಗಳ ವೇಗ ನಿಯಂತ್ರಣ ಮಾಡಿ ಅಪಘಾತ ತಡೆಯಲು ಕ್ರಮ ಕೈಗೊಳ್ಳಲಾಗಿದೆ.
ಇತ್ತೀಚೆಗೆ ನಡೆದ ಸರಣಿ ವಾಹನ ಅಪಘಾತಗಳ ಘಟನೆ ಬೆನ್ನಲ್ಲಿಯೇ ಕುಶಾಲನಗರ ಪೊಲೀಸ್ ಇನ್ಸ್ಪೆಕ್ಟರ್ ಪ್ರದೀಪ್‌ಕುಮಾರ್ ಅವರು ಸ್ಥಳ ಪರಿಶೀಲಿಸಿ ನಂತರ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾಧಿಕಾರಿಗಳಿಗೆ ಹಾಗೂ ಕ್ಷೇತ್ರ ಶಾಸಕರಿಗೆ ವರದಿ ಸಲ್ಲಿಸಿದ್ದು ಈ ಸಂಬಂಧ ಶಾಸಕರೊಂದಿಗೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಇದೀಗ ಈ ವ್ಯಾಪ್ತಿಯಲ್ಲಿ ವಾಹನಗಳ ವೇಗವನ್ನು ತಡೆಯುವ ನಿಟ್ಟಿನಲ್ಲಿ ರಸ್ತೆ ಉಬ್ಬು ನಿರ್ಮಾಣ ಕಾಮಗಾರಿ ಭರದಿಂದ ನಡೆಯುತ್ತಿದೆ.

Continue Reading

Kodagu

ಬೆಂಗಳೂರು ಸಣ್ಣ ಭಾಷೆ ಚಲನಚಿತ್ರೋತ್ಸವಕ್ಕೆ ಕೊಡಗಿನ ’ಬೇರ್’ ಆಯ್ಕೆ

Published

on

ಮಡಿಕೇರಿ : ಸಣ್ಣ ಭಾಷೆಗಳನ್ನು ಜೀವಂತವಾಗಿಡುವ ಉದ್ದೇಶದಿಂದ ಬೆಂಗಳೂರು ಇಂಟರ್ ನ್ಯಾಷನಲ್ ಸೆಂಟರ್ ನಲ್ಲಿ ಅ.೧೦ ಮತ್ತು ೧೧ರಂದು ಕರ್ನಾಟಕ ಹಾಗೂ ಪಶ್ಚಿಮ ಬಂಗಾಳ ಆಯೋಜಿಸಿರುವ ಸಣ್ಣ ಭಾಷೆ ಚಲನಚಿತ್ರೋತ್ಸವದಲ್ಲಿ ಕೊಡವ ಭಾ?ಯ ’ಬೇರ್’ ಚಿತ್ರ ಆಯ್ಕೆಯಾಗಿದೆ.


ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಅವರ ಕಥೆ, ಸಂಭಾಷಣೆ ಹಾಗೂ ನಿರ್ದೇಶನದಲ್ಲಿ, ಕೊಡವ ಕಾದಂಬರಿ ಆಧಾರಿತ ’ಬೇರ್’ ಚಿತ್ರವು ಈ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿರುವುದು ವಿಶೇಷ.
ಅ.೧೧ರಂದು ಮಧ್ಯಾಹ್ನ ೧ ಗಂಟೆಗೆ ಬೆಂಗಳೂರಿನ ಬೆಂಗಳೂರು ಇಂಟರ್ ನ್ಯಾಷನಲ್ ಸೆಂಟರ್ ೨ನೇ ಹಂತದಲ್ಲಿ ಬೇರ್ ಚಿತ್ರ ಪ್ರದರ್ಶನವಾಗಲಿದೆ.

ಕೂರ್ಗ್ ಕಾಫಿವುಡ್ ಮೂವೀಸ್ ನಡಿ ಪ್ರಕಾಶ್ ಕಾರ್ಯಪ್ಪ ಹಾಗೂ ಅವರ ಪತ್ನಿ ಕೊಟ್ಟುಕತ್ತಿರ ಯಶೋಧ ಪ್ರಕಾಶ್ ಅವರು ’ಬೇರ್’ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರದಲ್ಲಿ ಮೊಣ್ಣಂಡ ನೇಹ ಮೋಟಯ್ಯ, ಉಳುವೊಂಗಡ ಅಮಿತ್ ಬೋಪಣ್ಣ, ಮಂಡಿರ ಪದ್ಮ ಬೋಪಯ್ಯ, ಗುಮ್ಮಟ್ಟಿರ ಕಿಶು ಉತ್ತಪ್ಪ, ವಾಂಚಿರ ವಿಠಲ್ ನಾಣಯ್ಯ, ಪುಲಿಯಂಡ ಯಾಮಿನಿ, ಕೋಲೆಯಂಡ ನಿಶಾ ಮೋಹನ್, ಬಾಲ ನಟಿಯಾಗಿ ಕೊಟ್ಟುಕತ್ತಿರ ತೇಜಲ್ ಕಾರ್ಯಪ್ಪ, ತನಂ ಕಾರ್ಯಪ್ಪ ಸೇರಿದಂತೆ ಅನೇಕ ಕಲಾವಿದರು ಅಭಿನಯಿಸಿದ್ದಾರೆ.

ವಿಠಲ್ ರಂಗದೋಳ್ ಸಂಗೀತ ನೀಡಿದ್ದಾರೆ, ನಿರ್ಮಾಣ ವ್ಯವಸ್ಥಾಪಕರಾಗಿ ಈರಮಂಡ ವಿಜಯ್ ಉತ್ತಯ್ಯ, ಸಹ ನಿರ್ದೇಶಕರಾಗಿ ಈರಮಂಡ ಹರಿಣಿ ವಿಜಯ್, ನಾಗರಾಜ್ ನೀಲ್, ಛಾಯಾಗ್ರಾಹಕರಾಗಿ ಪ್ರದೀಪ್ ಆರ್ಯನ್, ಸಂಕಲನಕಾರರಾಗಿ ಮುತ್ತುರಾಜು ಪಿ. ಹಾಗೂ ದ್ರೋಣ್ ನಿರಂಜನ್ ಕಾರ್ಯನಿರ್ವಹಿಸಿದ್ದಾರೆ.
ಅ.೧೦ ಮತ್ತು ೧೧ರಂದು ಬೆಳಿಗ್ಗೆ ೧೧.೩೦ರಿಂದ ಸಂಜೆ ೭ರವರೆಗೆ ನಡೆಯಲಿರುವ ಈ ಚಲನಚಿತ್ರೋತ್ಸವದಲ್ಲಿ ಸಣ್ಣ ಭಾ?ಗಳನ್ನು ಪ್ರತಿನಿಧಿಸುವ ಚಿತ್ರಗಳ ಪ್ರದರ್ಶನ ಮತ್ತು ಸಂವಾದಗಳು ನಡೆಯಲಿವೆ. ಅನೇಕ ಭಾಷೆಗಳ ಚಿತ್ರಗಳ ಜೊತೆಯಲ್ಲಿ ಕೊಡವ ಭಾ? ಮತ್ತು ಸಾಹಿತ್ಯದ ನೆಲೆಯಿಂದ ಮೂಡಿಬಂದಿರುವ ’ಬೇರ್’ ಚಿತ್ರವು ಸಣ್ಣ ಭಾ? ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿರುವುದು ಕೊಡಗಿನ ಸಿನಿಮಾ ಕ್ಷೇತ್ರಕ್ಕೆ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ.

Continue Reading

Trending

error: Content is protected !!