Connect with us

Kodagu

ಪೋಷಣ್ ಮಾಸಾಚರಣೆ ಮುಕ್ತಾಯ ಸಮಾರಂಭ: ಗ್ರಾಮೀಣ ಒಕ್ಕೂಟದಿಂದ ಅಂಗನವಾಡಿಗೆ ಕೊಡುಗೆ

Published

on

ಮಡಿಕೇರಿ: ನಗರದ ಕಾಲೇಜು ಹಿಂಭಾಗದ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಮಾಸಾಚರಣೆ ಮುಕ್ತಾಯ ಸಮಾರಂಭ ಹಾಗೂ ಗ್ರಾಮೀಣ ಒಕ್ಕೂಟದ ವತಿಯಿಂದ ಅಂಗನವಾಡಿ ಕೇಂದ್ರಗಳಿಗೆ ಕೊಡುಗೆ ನೀಡುವ ಕಾರ್ಯಕ್ರಮ ನಡೆಯಿತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರೂಪಣಾಧಿಕಾರಿ ಪ್ರಸನ್ನ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸೆಪ್ಟೆಂಬರ್ 9ರಿಂದ ಅಕ್ಟೋಬರ್ 8ರವರೆಗೆ ತಾಲ್ಲೂಕಿನಾದ್ಯಂತ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಹಾಗೂ ಮೇಲ್ವಿಚಾರಕರ ಮಾರ್ಗದರ್ಶನದಲ್ಲಿ ಪೋಷಣ್ ಮಾಸಾಚರಣೆಯನ್ನು ಉತ್ತಮವಾಗಿ ಆಯೋಜಿಸಿ, ಎಲ್ಲಾ ಫಲಾನುಭವಿಗಳಿಗೆ ಯೋಜನೆಗಳ ಮಾಹಿತಿ ತಲುಪಿಸುವಲ್ಲಿ ಶ್ರಮಿಸಿದ್ದಾರೆ ಎಂದು ತಿಳಿಸಿದರು.

ನಮ್ಮ ಅಂಗನವಾಡಿ, ನಮ್ಮ ಜವಾಬ್ದಾರಿ ಎಂಬ ಘೋಷವಾಕ್ಯದೊಂದಿಗೆ ಆಹಾರದಲ್ಲಿ ವೈವಿಧ್ಯತೆ, ಪ್ರೋಟೀನ್ಯುಕ್ತ ಆಹಾರದ ಬಳಕೆ, ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ ಹಾಗೂ ಇಲಾಖೆಯ ವಿವಿಧ ಯೋಜನೆಗಳ ಕುರಿತು ಅರಿವು ಮೂಡಿಸುವುದು, ಸೀಮಂತ ಕಾರ್ಯಕ್ರಮ, ರಾಸಾಯನಿಕ ಮುಕ್ತ ಆಹಾರ ಉತ್ಪಾದನೆ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಸಮುದಾಯದ ಸಹಭಾಗಿತ್ವ ಹೆಚ್ಚಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಅಂಗನವಾಡಿ ಕೇಂದ್ರಗಳ ಸುತ್ತಮುತ್ತ ತರಕಾರಿ ಹಾಗೂ ಹಣ್ಣಿನ ಗಿಡಗಳನ್ನು ಬೆಳೆಸಿ, ಅವುಗಳನ್ನು ಮಕ್ಕಳ ಪೌಷ್ಟಿಕ ಆಹಾರಕ್ಕೆ ಬಳಸುವ ಮೂಲಕ ಅಪೌಷ್ಟಿಕತೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗಿದೆ. ಪೌಷ್ಟಿಕ ಹಾಗೂ ಸಮತೋಲನ ಆಹಾರದ ಮಹತ್ವವನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಇಂದಿನ ದಿನಗಳಲ್ಲಿ ಮೊಬೈಲ್ ಫೋನ್ಗಳ ಅತಿಯಾದ ಬಳಕೆಯಿಂದ ಮಕ್ಕಳಲ್ಲಿ ಮಾನಸಿಕ ಹಾಗೂ ಸಾಮಾಜಿಕ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಪೋಷಕರು ಮಕ್ಕಳ ಮೊಬೈಲ್ ಬಳಕೆಯನ್ನು ನಿಯಂತ್ರಿಸಿ, ಅವರೊಂದಿಗೆ ಹೆಚ್ಚಿನ ಸಮಯ ಕಳೆಯಬೇಕು ಎಂದು ಸಲಹೆ ನೀಡಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹೇಶ್ ಅವರು ಮಾತನಾಡಿ, ವಿವಿಧ ಬಣ್ಣಗಳ ಪೌಷ್ಟಿಕ ಆಹಾರ, ಸೊಪ್ಪು, ತರಕಾರಿ, ಹಣ್ಣುಗಳು ಹಾಗೂ ಸ್ಥಳೀಯ ಆಹಾರ ಪದಾರ್ಥಗಳನ್ನು ಬಳಸುವ ಮೂಲಕ ಅಪೌಷ್ಟಿಕತೆ ಮತ್ತು ರಕ್ತಹೀನತೆಯನ್ನು ತಡೆಗಟ್ಟಬಹುದು ಎಂದು ತಿಳಿಸಿದರು. ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವ ಮೂಲಕ ಆರೋಗ್ಯವಂತ ಪೀಳಿಗೆಯನ್ನು ರೂಪಿಸಬೇಕು ಎಂದರು.

ಪೋಷಣ್ ಮಾಸಾಚರಣೆಯ ಸಂದರ್ಭದಲ್ಲಿ ಉತ್ತಮವಾಗಿ ಕಾರ್ಯಕ್ರಮಗಳನ್ನು ಆಯೋಜಿಸಿದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಅಂಗನವಾಡಿಗಳಿಗೆ ಗ್ರಾಮೀಣ ಒಕ್ಕೂಟದಿಂದ ಕೊಡುಗೆಗ್ರಾಮೀಣ ಒಕ್ಕೂಟದ ಮ್ಯಾನೇಜರ್ ಮುರಳಿ ಹಾಗೂ ಸುಭಾಷ್ ಅವರು ಬೇಡಿಕೆಯ ಮೇರೆಗೆ ಕಾಲೇಜು ಹಿಂಭಾಗ ಮತ್ತು ಅಶೋಕಪುರ ಅಂಗನವಾಡಿ ಕೇಂದ್ರಗಳಿಗೆ 28 ಮಕ್ಕಳ ಕುರ್ಚಿಗಳು, ಎರಡು ದೊಡ್ಡವರ ಕುರ್ಚಿಗಳು ಹಾಗೂ ಜಮಖಾನವನ್ನು ಕೊಡುಗೆಯಾಗಿ ನೀಡಿದರು.

ಇದೇ ಸಂದರ್ಭದಲ್ಲಿ ಗ್ರಾಮೀಣ ಒಕ್ಕೂಟದ ಚಟುವಟಿಕೆಗಳು ಹಾಗೂ ಸೇವೆಗಳ ಕುರಿತು ಫಲಾನುಭವಿಗಳಿಗೆ ಮಾಹಿತಿ ನೀಡಿದರು. ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಅವರು ಮಾತನಾಡಿ, ತಾಲ್ಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳ ಮೂಲಭೂತ ಸೌಕರ್ಯಗಳ ಅಗತ್ಯಕ್ಕೆ ಅನುಗುಣವಾಗಿ ಗ್ರಾಮೀಣ ಒಕ್ಕೂಟ ಹಾಗೂ ಇತರ ಸಂಘ-ಸಂಸ್ಥೆಗಳು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಎರಡು ಅಂಗನವಾಡಿ ಕೇಂದ್ರಗಳಿಗೆ ಅಗತ್ಯ ಸಾಮಗ್ರಿಗಳನ್ನು ಕೊಡುಗೆಯಾಗಿ ನೀಡಿದ ಗ್ರಾಮೀಣ ಒಕ್ಕೂಟಕ್ಕೆ ಇಲಾಖೆಯ ಪರವಾಗಿ ಧನ್ಯವಾದ ಸಲ್ಲಿಸಿದರು. ಮಕ್ಕಳ ಹೆಸರಿನಲ್ಲಿ ಗ್ರೋ ಬ್ಯಾಗ್ಗಳನ್ನು ನೀಡಿ, ಅವುಗಳಲ್ಲಿ ತರಕಾರಿ ಹಾಗೂ ಸೊಪ್ಪುಗಳನ್ನು ಬೆಳೆಸಿ, ಪೌಷ್ಟಿಕ ಆಹಾರದ ಮಹತ್ವವನ್ನು ಮಕ್ಕಳಿಗೆ ಪ್ರಾರಂಭಿಕ ಹಂತದಿಂದಲೇ ತಿಳಿಸುವಂತೆ ಪೋಷಕರು ಹಾಗೂ ದಾನಿಗಳಿಗೆ ಮನವಿ ಮಾಡಿದರು. ಅಲ್ಲದೆ, ಅಂಗನವಾಡಿ ಮಕ್ಕಳಿಗೆ ತಲಾ ಎರಡು ಜೊತೆ ಟ್ರ್ಯಾಕ್ ಪ್ಯಾಂಟ್ಗಳನ್ನು ಸಮವಸ್ತ್ರವಾಗಿ ನೀಡಲು ದಾನಿಗಳು ಸಹಕರಿಸುವಂತೆ ಕೋರಿದರು. ಮಕ್ಕಳ ತೂಕವನ್ನು ನಿಯಮಿತವಾಗಿ ಪರಿಶೀಲಿಸುವ ಮಹತ್ವವನ್ನು ತಿಳಿಸಿ, ಅಪೌಷ್ಟಿಕತೆ ಮುಕ್ತ ಹಾಗೂ ಆರೋಗ್ಯವಂತ ಮಕ್ಕಳನ್ನು ಬೆಳೆಸಲು ಜಂಕ್ಫುಡ್ನಿಂದ ಮಕ್ಕಳನ್ನು ದೂರವಿಟ್ಟು, ಸಾಂಪ್ರದಾಯಿಕ ಹಾಗೂ ಸ್ಥಳೀಯ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.

ಕಾರ್ಯಕ್ರಮದ ಅಂಗವಾಗಿ ಹಣ್ಣಿನ ಗಿಡ ನೆಡುವ ಮೂಲಕ ಪೋಷಣ್ ಮಾಸಾಚರಣೆಯ ಉದ್ದೇಶದ ಕುರಿತು ಜಾಗೃತಿ ಮೂಡಿಸಲಾಯಿತು. ಅಂಗನವಾಡಿ ಮಕ್ಕಳಿಂದ ಸ್ವಾಗತ ನೃತ್ಯ ನಡೆಯಿತು.ಕಾರ್ಯಕ್ರಮದ ನಿರೂಪಣೆಯನ್ನು ಅಂಗನವಾಡಿ ಕಾರ್ಯಕರ್ತೆ ನೀತು ನೆರವೇರಿಸಿದರು. ಅಂಗನವಾಡಿ ಸಹಾಯಕಿ ದಿವ್ಯ ವಂದನಾರ್ಪಣೆ ಮಾಡಿದರು.

Continue Reading

Kodagu

ಸರ್ಫೇಸಿ ಕಾಯ್ದೆ ದುರ್ಬಳಕೆ ಆರೋಪ: ರೈತರ ಆಸ್ತಿ ಹರಾಜಿಗೆ ರೈತ ಸಂಘದ ವಿರೋಧ

Published

on

ಪೊನ್ನಂಪೇಟೆ : ಸರ್ಫೇಸಿ ಕಾಯ್ದೆಯನ್ನು ದುರ್ಬಳಕೆ ಮಾಡಿಕೊಂಡು ರೈತರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಮೂಲಕ ಅವರನ್ನು ಸಂಕಷ್ಟಕ್ಕೆ ದೂಡಲಾಗುತ್ತಿದೆ ಎಂದು ಆರೋಪಿಸಿರುವ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಕೆನರಾ ಬ್ಯಾಂಕ್ನ ಕ್ರಮಗಳ ವಿರುದ್ಧ ಕೊಡಗಿನಾದ್ಯಂತ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದೆ.


ಗೋಣಿಕೊಪ್ಪದ ಸಂಘದ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ, ಕೊಡಗು ಸೇರಿದಂತೆ ಮಲೆನಾಡಿನ ಜಿಲ್ಲೆಗಳಲ್ಲಿ ರೈತರ ಜಮೀನುಗಳನ್ನು ಹರಾಜು ಮಾಡುವ ಪ್ರಕ್ರಿಯೆಯಲ್ಲಿ ಕೆನರಾ ಬ್ಯಾಂಕ್ನ ಪಾತ್ರ ಹೆಚ್ಚಿದೆ ಎಂದು ಆರೋಪಿಸಿದರು.

ಸಾಲ ಮರುಪಾವತಿಗೆ ರೈತರು ವಿರೋಧಿಗಳಲ್ಲ. ಬ್ಯಾಂಕ್ನಿಂದ ಸಾಲ ಪಡೆದ ಬಳಿಕ ಅದನ್ನು ಮರುಪಾವತಿಸುವುದು ರೈತರ ಜವಾಬ್ದಾರಿಯಾಗಿದೆ. ರೈತ ಸಂಘವೂ ಸಾಲ ಮರುಪಾವತಿ ಮಾಡಬಾರದು ಎಂದು ಹೇಳುವುದಿಲ್ಲ. ಆದರೆ ಕೃಷಿ ನಷ್ಟ, ಹವಾಮಾನ ವೈಫಲ್ಯ ಮತ್ತು ವನ್ಯಜೀವಿಗಳ ಹಾವಳಿಯಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಸಾಲ ತೀರಿಸಲು ಸೂಕ್ತ ಅವಕಾಶ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಕೊಡಗು ಜಿಲ್ಲೆಯಲ್ಲಿ ಕಳೆದ 20ರಿಂದ 30 ವರ್ಷಗಳಿಂದ ವನ್ಯಜೀವಿಗಳ ಹಾವಳಿಯಿಂದ ಕಾಫಿ ತೋಟಗಳು, ಅಡಿಕೆ ಮರಗಳು ಹಾಗೂ ಇತರ ಕೃಷಿ ಬೆಳೆಗಳಿಗೆ ನಿರಂತರ ಹಾನಿಯಾಗುತ್ತಿದೆ. ಕಾಫಿ ಗಿಡಗಳ ಕೊಂಬೆಗಳು ಹಾನಿಗೊಳಗಾದರೂ ಅವು ಮತ್ತೆ ಬೆಳೆದು ಫಸಲು ನೀಡಲು ಸುಮಾರು ಐದು ವರ್ಷಗಳು ಬೇಕಾಗುತ್ತವೆ. ಆದರೆ ಅರಣ್ಯ ಇಲಾಖೆ ನೀಡುವ ಬೆಳೆ ನಷ್ಟ ಪರಿಹಾರವು ಈ ದೀರ್ಘಕಾಲದ ನಷ್ಟವನ್ನು ಪರಿಗಣಿಸುವುದಿಲ್ಲ. ಹೀಗಾಗಿ ವೈಜ್ಞಾನಿಕವಾಗಿ ನಷ್ಟ ಅಂದಾಜಿಸಿ ಸೂಕ್ತ ಪರಿಹಾರ ನೀಡುವ ವ್ಯವಸ್ಥೆ ಜಾರಿಯಾಗಬೇಕು ಎಂದು ಆಗ್ರಹಿಸಿದರು.

ಅತಿವೃಷ್ಟಿ, ಅನಾವೃಷ್ಟಿ ಹಾಗೂ ವನ್ಯಜೀವಿಗಳ ಹಾವಳಿಯಿಂದ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ನಷ್ಟವಾದಾಗ ರೈತರು ಸಾಲ ಮರುಪಾವತಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ರೈತರಿಗೆ ಪರಿಹಾರ ಒದಗಿಸುವುದು ಸರ್ಕಾರ ಮತ್ತು ಜನಪ್ರತಿನಿಧಿಗಳ ಜವಾಬ್ದಾರಿಯಾಗಿದೆ. ಕೃಷಿ ಹಾಗೂ ಕಾಫಿ ತೋಟಗಳಿಗೆ ಸಂಬಂಧಿಸಿದ ಸಾಲಗಳನ್ನು ಸರ್ಫೇಸಿ ಕಾಯ್ದೆಯ ವ್ಯಾಪ್ತಿಯಿಂದ ಹೊರಗಿಡಬೇಕು. ರೈತರಿಗೆ ಒಂದು ಬಾರಿಯ ಸಾಲ ಇತ್ಯರ್ಥ ಯೋಜನೆ (ಒಟಿಎಸ್) ಜಾರಿಗೊಳಿಸಿದರೆ ಸಾಲ ಮರುಪಾವತಿಗೆ ಸಿದ್ಧರಿದ್ದಾರೆ ಎಂದು ತಿಳಿಸಿದರು.

ಕೆನರಾ ಬ್ಯಾಂಕ್ನಲ್ಲಿ ಖಾತೆ ತೆರೆಯದಂತೆ ಕರೆ

ಕೆನರಾ ಬ್ಯಾಂಕ್ನ ಕ್ರಮಗಳನ್ನು ವಿರೋಧಿಸಿ ರೈತರು ಬ್ಯಾಂಕ್ನಲ್ಲಿರುವ ತಮ್ಮ ಖಾತೆಗಳನ್ನು ಬೇರೆ ಬ್ಯಾಂಕ್ಗಳಿಗೆ ವರ್ಗಾಯಿಸಬೇಕು ಎಂದು ಮನು ಸೋಮಯ್ಯ ಕರೆ ನೀಡಿದರು. ಹೊಸದಾಗಿ ಉಳಿತಾಯ ಖಾತೆ ತೆರೆಯುವುದು, ನಿಶ್ಚಿತ ಠೇವಣಿ ಇಡುವುದು ಹಾಗೂ ಪಿಂಚಣಿ ಖಾತೆಗಳನ್ನು ನಿರ್ವಹಿಸುವುದರಿಂದ ದೂರವಿರಬೇಕು ಎಂದು ಮನವಿ ಮಾಡಿದರು. ರೈತರ ಹಿತಾಸಕ್ತಿಗೆ ಸ್ಪಂದಿಸುವಂತೆ ಬ್ಯಾಂಕ್ ಮೇಲೆ ಒತ್ತಡ ಹೇರುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಬೇಕೆಂದು ಹೇಳಿದರು.

ಕಳೆದ ಹತ್ತು ವರ್ಷಗಳಲ್ಲಿ ಸರ್ಫೇಸಿ ಕಾಯ್ದೆಯಡಿ ಹರಾಜು ಮಾಡಲಾದ ರೈತರ ಆಸ್ತಿಗಳ ಕುರಿತು ಪರಿಶೀಲನೆ ನಡೆಸಿ, ಸಂಬಂಧಪಟ್ಟ ಪ್ರಕರಣಗಳಲ್ಲಿ ನ್ಯಾಯಾಂಗ ಹೋರಾಟಕ್ಕೆ ಮುಂದಾಗಬೇಕು. ರೈತ ಸಂಘವು ಸಂತ್ರಸ್ತ ರೈತರ ಬೆಂಬಲಕ್ಕೆ ನಿಲ್ಲಲಿದೆ. ಅಗತ್ಯವಿದ್ದಲ್ಲಿ ಹೈಕೋರ್ಟ್ ಸೇರಿದಂತೆ ಉನ್ನತ ನ್ಯಾಯಾಲಯಗಳಲ್ಲಿ ಕಾನೂನು ಹೋರಾಟ ನಡೆಸಲು ರೈತರಿಗೆ ನೆರವು ನೀಡಲಾಗುವುದು ಎಂದರು.

ಕೆನರಾ ಬ್ಯಾಂಕ್ನಿಂದ ರೈತರಿಗೆ ಅನ್ಯಾಯವಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯಾದ್ಯಂತ ಬ್ಯಾಂಕ್ನ ಎಲ್ಲ ಶಾಖೆಗಳ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಷ್, ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಅಜ್ಜಮಾಡ ಚಂಗಪ್ಪ, ವಿರಾಜಪೇಟೆ ತಾಲೂಕು ಅಧ್ಯಕ್ಷ ಭವಿಕುಮಾರ್, ಶ್ರೀಮಂಗಲ ಅಧ್ಯಕ್ಷ ಕಂಬಕಾರ್ಯಪ್ಪ, ಅಮ್ಮತ್ತಿ ಹೋಬಳಿ ಅಧ್ಯಕ್ಷ ಪೂಣಚ್ಚ, ಮಾಯಮುಡಿ ಅಧ್ಯಕ್ಷ ರಾಯ್ ಮಾದಪ್ಪ, ನಲ್ಲೂರು ಅಧ್ಯಕ್ಷ ತೀತಿರಮಾಡ ರಾಜ, ಶ್ರೀಮಂಗಲದ ಬೋಸ್ ವಿಶ್ವನಾಥ್, ತಿತಿಮತಿ ಹೋಬಳಿಯ ಚೆಪ್ಪುಡಿರ ಕಾರ್ಯಪ್ಪ ಹಾಗೂ ನಲ್ಲೂರು ಗ್ರಾಮದ ಪುಚ್ಚಿಮಾಡ ಲಾಲಾ ಪೂಣಚ್ಚ ಸೇರಿದಂತೆ ಇತರರು ಉಪಸ್ಥಿತರಿದ್ದರು.

Continue Reading

Kodagu

ಅ.13 ಮತ್ತು 14 ರಂದು ಕಾಫಿ ದಸರಾ ಸಂಭ್ರಮ ಕಾಫಿ ಕೃಷಿಯ 13 ಸಾಧಕರಿಗೆ ಸನ್ಮಾನ – 50 ಮಳಿಗೆಗಳಲ್ಲಿ ಮೇಳೈಸಲಿದೆ ಕಾಫಿ ಘಮ

Published

on

ಮಡಿಕೇರಿ: ಮಡಿಕೇರಿ ದಸರಾ ಜನೋತ್ಸವದ ಪ್ರಯುಕ್ತ ಅ.13 ಮತ್ತು 14 ರಂದು 3ನೇ ವರ್ಷದ ಕಾಫಿ ದಸರಾ ಆಯೋಜಿಸಲಾಗಿದೆ. ಕಾಫಿಗೆ ಸಂಬಂಧಿಸಿದ ವೈವಿಧ್ಯಮಯ 50 ಮಳಿಗೆಗಳು ಮೇಳೈಸಲಿವೆ. ಕಾಫಿ ದಸರಾದಲ್ಲಿ 13 ಸಾಧಕ ಕೃಷಿಕರಿಗೆ ಗೌರವ ಸನ್ಮಾನ ನಡೆಯಲಿದೆ ಎಂದು ಕಾಫಿ ದಸರಾ ಸಂಚಾಲಕ ಅನಿಲ್ ಹೆಚ್.ಟಿ. ಮಾಹಿತಿ ನೀಡಿದ್ದಾರೆ. ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರ ಪರಿಕಲ್ಪನೆಯಲ್ಲಿ ಕೂರ್ಗ್ ಕಾಫಿ ಪ್ಲಾಂಟರ್ಸ್ ಅಸೋಸಿಯೇಷನ್ ಸಹಯೋಗದಲ್ಲಿ ಮಡಿಕೇರಿ ದಸರಾ ಪ್ರಯುಕ್ತ 3ನೇ ವರ್ಷದ ಕಾಫಿ ದಸರಾವು ಮಡಿಕೇರಿಯ ಗಾಂಧಿ ಮೈದಾನದಲ್ಲಿ ಆಯೋಜಿಸಲ್ಪಟ್ಟಿದೆ.
ಅಕ್ಟೋಬರ್ 13 ರಂದು ಮಂಗಳವಾರ ಸಂಜೆ 4 ಗಂಟೆಗೆ ಗಾಂಧಿ ಮೈದಾನದ ಕಲಾ ಸಂಭ್ರಮ ಸಭಾಂಗಣದಲ್ಲಿ ಕಾಫಿ ಸಂಬಂಧಿತ 50 ಮಳಿಗೆಗಳನ್ನು ಶಾಸಕ ಡಾ.ಮಂತರ್ ಗೌಡ ಉದ್ಘಾಟಿಸಲಿದ್ದಾರೆ. ಅಕ್ಟೋಬರ್ 14 ರಂದು ಬುಧವಾರ ಬೆಳಗ್ಗೆ 10 ಗಂಟೆಗೆ ಕಲಾ ಸಂಭ್ರಮ ಸಭಾಂಗಣದಲ್ಲಿ ಕರ್ನಾಟಕದ ಮೊದಲ ಮಹಿಳಾ ಕಾಫಿ ಉದ್ಯಮಿ ದಿ. ಸಾಕಮ್ಮ ವೇದಿಕೆಯಲ್ಲಿ ಕಾಫಿ ದಸರಾ ಸಭಾ ಕಾರ್ಯಕ್ರಮವನ್ನು ಭಾರತೀಯ ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ. ದಿನೇಶ್ ಉದ್ಘಾಟಿಸಲಿದ್ದಾರೆ.

ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅಧ್ಯಕ್ಷತೆಯ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ, ಸಂಸದ ಯದುವೀರ್ ಕೃಷ್ಣದತ್ತ ಒಡೆಯರ್, ಭಾರತೀಯ ಕಾಫಿ ಮಂಡಳಿ ಕಾರ್ಯದರ್ಶಿ ಕೂರ್ಮಾರಾವ್, ರಾಜ್ಯಸಭಾ ಸದಸ್ಯ ಅಜಯ್ ಮಖಾನ್, ವಿಧಾನ ಪರಿಷತ್ ಸದಸ್ಯರುಗಳಾದ ಎಂ.ಪಿ. ಸುಜಾ ಕುಶಾಲಪ್ಪ, ಬೋಜೇಗೌಡ, ಡಾ. ಧನಂಜಯ್ ಸರ್ಜಿ, ಕರ್ನಾಟಕ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಎಸ್. ಆರ್. ಮೆಹರೋಜ್ ಖಾನ್, ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಸಿ.ಎಸ್. ಅರುಣ್ ಮಾಚಯ್ಯ, ಮಡಿಕೇರಿ ನಗರಸಭೆ ಅಧ್ಯಕ್ಷೆ ಪಿ. ಕಲಾವತಿ, ಕೊಡಗು ಜಿಲ್ಲಾಧಿಕಾರಿ ಎಸ್.ಜಿ. ಸೋಮಶೇಖರ್, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಕೊಡಗು ಜಿಲ್ಲಾಧ್ಯಕ್ಷ ತೀತೀರ ಧರ್ಮಜ ಉತ್ತಪ್ಪ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ವೈ. ರಾಜೇಶ್, ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ನಂದಾ ಬೆಳ್ಯಪ್ಪ, ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಕಾರ್ಯಪ್ಪ, ಕೊಡಗು ಮಹಿಳಾ ಕಾಫಿ ಜಾಗೃತಿ ಸಂಘದ ಅಧ್ಯಕ್ಷೆ ಜ್ಯೋತಿ, ಕಾಫಿ ಮಂಡಳಿ ಸದಸ್ಯ ತಳೂರು ಕಿಶೋರ್ ಕುಮಾರ್, ಮಡಿಕೇರಿ ನಗರಸಭೆ ಉಪಾಧ್ಯಕ್ಷ ಮಹೇಶ್ ಜೈನಿ, ಮಡಿಕೇರಿ ನಗರ ದಸರಾ ಸಮಿತಿ ಕಾರ್ಯಾಧ್ಯಕ್ಷ ಬಿ.ಕೆ. ಅರುಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ಅರುಣ್ ಶೆಟ್ಟಿ, ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಕುಡೆಕಲ್ ಸಂತೋಷ್ ಉಪಸ್ಥಿತರಿರುತ್ತಾರೆ.


ಮಧ್ಯಾಹ್ನ 11 ಗಂಟೆಯಿಂದ ಆಯೋಜಿತ ಕಾಫಿ ಕೃಷಿ ಸಂಬಂಧಿತ ವಿವಿಧ ವಿಚಾರಗೋಷ್ಠಿ ಮತ್ತು ಸಂವಾದದಲ್ಲಿ ಕಾಫಿ, ನಿಸರ್ಗ ಮತ್ತು ಪ್ರವಾಸೋದ್ಯಮ ಕುರಿತಂತೆ ವಿರಾಜಪೇಟೆ ಪ್ರವಾಸೋದ್ಯಮಿ ಭಜನ್ ಬೋಪಣ್ಣ, ಕೃಷಿಕರ ಆತಂಕಕ್ಕೆ ಕಾರಣವಾಗಿರುವ ಇ.ಯು. ಡಿಆರ್. ಮತ್ತು ಇಂಡಿಕಾಫ್ ಕುರಿತಂತೆ ಬೆಂಗಳೂರಿನ ಭಾರತೀಯ ಕಾಫಿ ಮಂಡಳಿ ಸಂಶೋಧನಾ ವಿಭಾಗದ ಸಹಾಯಕ ನಿರ್ದೇಶಕ ಡಾ. ಪ್ರದೀಪ್ ಬಾಬು, ಕೊಡಗು ಕಾಫಿ ಗುಣಮಟ್ಟ ಮತ್ತು ಮಹತ್ವದ ಕುರಿತಾಗಿ ಚೆಟ್ಟಳ್ಳಿ ಕಾಫಿ ಸಂಶೋಧನಾ ಕೇಂದ್ರದ ಡಾ. ರಶ್ಮಿ ಹಾಗೂ ಕಾಫಿ ಕೆಫೆ ಭವಿಷ್ಯದ ಕುರಿತಂತೆ ಹಟ್ಟಿ ಕಾಫಿ ಸಂಸ್ಥೆಯ ಯತೀಶ್ ಮಾಹಿತಿ ನೀಡಲಿದ್ದಾರೆ.

ಕಾಫಿ ದಸರಾ ಕೃಷಿ ಸಾಧಕರು:
ಮಧ್ಯಾಹ್ನ 12.30 ಗಂಟೆಗೆ ಕಲಾ ಸಂಭ್ರಮ ಸಭಾಂಗಣದ ಸಾಕಮ್ಮ ವೇದಿಕೆಯಲ್ಲಿ, ಜಿಲ್ಲೆಯಾದ್ಯಂತದ ಕಾಫಿ ಕೃಷಿ ಸಾಧಕರಾದ 13 ಕೃಷಿಕರಿಗೆ ಸನ್ಮಾನ ನೆರವೇರಲಿದೆ. ಚೆಯ್ಯಂಡಾಣೆಯ ಮಕ್ಕಿಮನೆ ಸುಧೀರ್, ಬಗ್ಗನಮನೆ ಸುರೇಂದ್ರ, ಸೋಮವಾರಪೇಟೆಯ ಉದಯ್ ಈಶ್ವರನ್, ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷೆ ತಾರಾ ಅಯ್ಯಮ್ಮ, ಕಾಫಿ ತಜ್ಞ ಮಡಿಕೇರಿಯ ಕೆ.ಕೆ. ವಿಶ್ವನಾಥ್, ಕಾಫಿ ಪಲ್ಪಿಂಗ್ ನಲ್ಲಿ ಸಹಕಾರ ತತ್ವ ಅಳವಡಿಸಿಕೊಂಡ ತಾಕೇರಿಯ ಕೃಷಿ ಸ್ವಸಹಾಯ ಸಂಘ, ಮಣಜೂರಿನ ಶೇಷಪ್ಪ, ಕಾಫಿ ಬ್ಲಾಗರ್ ಪಟ್ಟಡ ಕಾರ್ತಿಕ್, ನಾಕೂರು ಶಿರಂಗಾಲದ ಪಿ.ಎಂ. ಬಿಜು, ಸುಂಟಿಕೊಪ್ಪ ಪನ್ಯತೋಟದ ಎಸ್.ಬಿ. ಜಯರಾಜ್, ಕೊಡ್ಲಿಪೇಟೆಯ ಕೃಷಿಕ ಮಹಮ್ಮದ್ ರಾಝ್, ನೆಲ್ಯಹುದಿಕೇರಿಯ ಇ.ಹೆಚ್. ಹನೀಫ್ ಹಾಗೂ ನಾವಿನ್ಯತೆಯ ಕೆಫೆಗಾಗಿ ಮಡಿಕೇರಿಯ ವೀಲ್ ಕೆಫೆ ಈ ಬಾರಿಯ ಕಾಫಿ ದಸರಾ ಸಾಧಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಮಡಿಕೇರಿ ಪೌರಕಾರ್ಮಿಕರಿಗೆ ಗೌರವ ಸನ್ಮಾನ:
ಕಾಫಿ ದಸರಾ ವಿಶೇಷವಾಗಿ ಅಕ್ಟೋಬರ್ 13 ರಂದು ಸಂಜೆ 6 ಗಂಟೆಗೆ ಕಲಾ ಸಂಭ್ರಮ ವೇದಿಕೆಯಲ್ಲಿ ಮಡಿಕೇರಿ ನಗರದ ಸ್ವಚ್ಛತೆ ಕಾಪಾಡುವ 68 ಪೌರಕಾರ್ಮಿಕರನ್ನು ಶಾಸಕ ಡಾ. ಮಂತರ್ ಗೌಡ ಸನ್ಮಾನಿಸಿ ಪುರಸ್ಕರಿಸಲಿದ್ದಾರೆ. ಕಾಫಿ ದಸರಾ ಸಮಿತಿ ಸದಸ್ಯರಾಗಿ ವಿನೋದ್ ಮೂಡಗದ್ದೆ, ಪಾಲೆಯಂಡ ರೂಪಾ ಸುಬ್ಬಯ್ಯ, ವೀಣಾಕ್ಷಿ ರವಿಕುಮಾರ್, ಮಿನಾಜ್ ಪ್ರವೀಣ್, ಹೆಚ್.ಟಿ. ಶಿವಪ್ಪ, ಮೇಪಾಡಂಡ ಸವಿತಾ ಕೀರ್ತನ್, ಪುದಿನೆರವನ ರೇವತಿ ರಮೇಶ್, ಮೂವೆರ ಸರಿತಾ ಹರೀಶ್ ಹಾಗೂ ಗೌರವ ಸಲಹೆಗಾರರಾಗಿ ಬಿ.ವೈ. ರಾಜೇಶ್ ಕಾರ್ಯನಿರ್ವಹಿಸಿದ್ದಾರೆ ಎಂದು ಅನಿಲ್ ಮಾಹಿತಿ ನೀಡಿದ್ದಾರೆ.

Continue Reading

Kodagu

ಆಲೆನಾಡ್ ಇಂಜ ಮಲೆನಾಡ್ : ಪರಂಪರೆಯ ಹೆಜ್ಜೆ ಗುರುತುಗಳಲ್ಲಿ ಆಲೇಮಾಡ ಒಕ್ಕದ ತೋಕ್ ನಮ್ಮೆ

Published

on

ವರದಿ : ಚೀರಂಡ ಎಂ. ಚಂಗಪ್ಪ, ಪೊನ್ನಂಪೇಟೆ
ಪೊನ್ನಂಪೇಟೆ : ಕೊಡವ ಸಂಸ್ಕೃತಿ, ಕುಟುಂಬ ಪರಂಪರೆ, ಕ್ರೀಡಾ ಪ್ರತಿಭೆ ಹಾಗೂ ಸಾಮಾಜಿಕ ಬಾಂಧವ್ಯವನ್ನು ಒಂದೇ ವೇದಿಕೆಯಲ್ಲಿ ಅನಾವರಣಗೊಳಿಸುವ ಆಲೇಮಾಡ ಒಕ್ಕದ ಎರಡನೇ ವರ್ಷದ ತೋಕ್ ನಮ್ಮೆ ಅ.10 ಮತ್ತು 11ರಂದು ಪೊನ್ನಂಪೇಟೆಯ ಕರ್ನಾಟಕ ಪಬ್ಲಿಕ್ ಶಾಲೆಯ ಮೈದಾನದಲ್ಲಿ ನಡೆಯಲಿದೆ.
ನಮ್ಮೆಗಾಗಿ ಈಗಾಗಲೇ ಸಿದ್ಧತೆಗಳು ಪೂರ್ಣಗೊಂಡಿದ್ದು, ಕಾರ್ಯಕ್ರಮ ಯಶಸ್ವಿಗೊಳಿಸಲು ಒಕ್ಕದ ಯುವಕರು ಹಗಲು-ರಾತ್ರಿ ಎನ್ನದೆ ಶ್ರಮಿಸುತ್ತಿದ್ದಾರೆ. ಎರಡು ದಿನಗಳ ಕಾರ್ಯಕ್ರಮವು ಕುಟುಂಬದ ಸದಸ್ಯರ ಸಮಾಗಮದ ಜೊತೆಗೆ ಆಲೇಮಾಡ ಒಕ್ಕದ ಐತಿಹಾಸಿಕ ಹಿನ್ನೆಲೆ, ಕೊಡವ ಸಂಸ್ಕೃತಿ ಮತ್ತು ಪರಂಪರೆಯ ಆಚರಣೆಗಳಿಗೆ ಸಾಕ್ಷಿಯಾಗಲಿದೆ.
ದಿನಾಂಕ 10 ರಂದು ಬೆಳಿಗ್ಗೆ 8 ಗಂಟೆಗೆ ಪೊನ್ನಂಪೇಟೆ ಬಸ್ ನಿಲ್ದಾಣದಲ್ಲಿರುವ ಐತಿಹಾಸಿಕ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಕುಟುಂಬದವರು ಪೂಜೆ ಸಲ್ಲಿಸಿ ಒಡ್ಡೋಲಗ ದೊಂದಿಗೆ ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ನಂದಿನೆರವಂಡ ನಾಚಪ್ಪ ಕೊಡವ ಅವರ ಮುಂದಾಳತ್ವದಲ್ಲಿ ಕೊಡವರ ಸಾಂಪ್ರದಾಯಿಕ ಉಡುಪಿನೊಂದಿಗೆ ಮುಖ್ಯ ರಸ್ತೆಯಲ್ಲಿ ಸಾಗಿ ಕೊಡವರ ಹೆಗ್ಗುರುತಾದ ಕೋವಿಯೊಂದಿಗೆ ಸಾಂಪ್ರದಾಯಿಕವಾಗಿ ಮೆರವಣಿಗೆಯಲ್ಲಿ ಮೈದಾನಕ್ಕೆ ಬರಲಿದ್ದಾರೆ.
ತೋಕ್ ನಮ್ಮೆಯ ಉದ್ಘಾಟನಾ ಸಮಾರಂಭ ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ. ಅಧ್ಯಕ್ಷತೆಯನ್ನು ಆಲೇಮಾಡ ಒಕ್ಕದ ಅಧ್ಯಕ್ಷ ಎ.ಎನ್. ದೇವಯ್ಯ ವಹಿಸಲಿದ್ದಾರೆ. ವಿರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಉದ್ಘಾಟನೆ ನೆರವೇರಿಸಲಿದ್ದಾರೆ. ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ, ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡೀರ ಅರುಣ್ ಮಾಚಯ್ಯ, ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ನಂದಿನೆರವಂಡ ನಾಚಪ್ಪ ಕೊಡವ ಹಾಗೂ ಪೂರ್ವಾಂಕರ ಲಿಮಿಟೆಡ್ ಇಂಟೀರಿಯರ್ಸ್ ವಿಭಾಗದ ಸಿಇಒ ಆಲೇಮಾಡ ಎಸ್. ಅಯ್ಯಪ್ಪ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ನಂತರ ಉದ್ಘಾಟನಾ ಸಮಾರಂಭದಲ್ಲಿ ಅತಿಥಿಗಳು ತೆಂಗಿನಕಾಯಿಗೆ ಗುಂಡು ಹೊಡೆಯುವ ಮೂಲಕ ತೋಕ್ ನಮ್ಮೆಗೆ ಚಾಲನೆ ನೀಡಲಿದ್ದಾರೆ.
ಉದಯೋನ್ಮುಖ ಬ್ಯಾಡ್ಮೆಂಟನ್ ಪಟು ಬೊಪ್ಪಂಡ ದಿಯಾ ಭೀಮಯ್ಯ, ಅಥ್ಲೀಟ್ ತೀತರಮಾಡ ಸಿಂಚನಾ ಕಾವೇರಮ್ಮ, ಹಾಕಿ ಆಟಗಾರ ಚಂದುರ ಬಿ ಪೂವಣ್ಣ, ಖ್ಯಾತ ಶೂಟರ್ ಮಂಡೇಟಿರ ತಿಲಕ್ ಅಯ್ಯಪ್ಪ, ಭಾರತ ಎ ತಂಡ ಹಾಗೂ ರಣಜಿ ಕ್ರಿಕೆಟ್ ಆಟಗಾರ ಮಾಚಿಮಾಡ ವಿದ್ವತ್ ಕಾವೇರಪ್ಪ, ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅಪ್ಪಟ್ಟೀರ ಕವಿನಾ ಕಾವೇರಮ್ಮ ಅವರನ್ನು ತೋಕ್ ನಮ್ಮೆಯಲ್ಲಿ ಸನ್ಮಾನ ಮಾಡಲಾಗುವುದು.

ಕುಟುಂಬ ಪರಿಚಯ:“ಆಲೆನಾಡ್ ಇಂಜ ಮಲೆನಾಡ್” ನೆನಪಿಸುವ ಕುಟುಂಬದ ಪಯಣ

ಕೊಡಗಿನ ದಕ್ಷಿಣ ಭಾಗದ ಕಿರ್ಗೂರು (ಕಿರುಗೂರು) ಪ್ರದೇಶದೊಂದಿಗೆ ಐತಿಹಾಸಿಕ ನಂಟು ಹೊಂದಿರುವ ಆಲೇಮಾಡ ಒಕ್ಕವು ಕೊಡವ ಸಮುದಾಯದ ಸಾಂಪ್ರದಾಯಿಕ ಕುಟುಂಬಗಳಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಪ್ರಸ್ತುತ ಒಕ್ಕದಲ್ಲಿ 74 ಒಲೆಗಳಿದ್ದು, ಸುಮಾರು 250 ಸದಸ್ಯರಿದ್ದಾರೆ.

ಆಲೇಮಾಡ ಕುಟುಂಬದ ಮೌಖಿಕ ಇತಿಹಾಸದ ಪ್ರಕಾರ, ಕುಟುಂಬದ ಪ್ರಾಚೀನ ಪೂರ್ವಜರೆಂದು ಹೇಳಲಾಗುವ ಅಯ್ಯಣ್ಣ ಬಲ್ಯಯ್ಯ ಮತ್ತು ಚೀಯಮ ತಾಯಿ ಅವರು 13ನೇ ಶತಮಾನದ ಮಧ್ಯಭಾಗದಲ್ಲಿ ಕಣ್ಣೂರು–ಮಲಬಾರ್ ಪ್ರದೇಶದಿಂದ ಕೊಡಗಿಗೆ ವಲಸೆ ಬಂದು ಕಿರ್ಗೂರು ಗ್ರಾಮದಲ್ಲಿ ನೆಲೆಸಿದರು ಎನ್ನಲಾಗಿದೆ. ಇವರ ವಂಶವು ನಂತರ ವೃದ್ಧಿಗೊಂಡು ಮೂರು ಪ್ರಮುಖ ಭಾಗಗಳಾಗಿ ವಿಸ್ತರಿಸಿತು ಎಂಬ ಪ್ರತೀತಿಯಿದೆ. ಇವರೊಂದಿಗೆ ಭದ್ರಕಾಳಿ ಹಾಗೂ ಬೋಟೆಕಾರ ದೇವತೆಗಳು ಕಿರುಗೂರಿಗೆ ಬಂದವು ಎಂಬ ನಂಬಿಕೆಯೂ ಕುಟುಂಬದ ಪರಂಪರೆಯಲ್ಲಿದೆ.

“ಆಲೆ ನಾಡ್ ಇಂಜ ಮಲೆ ನಾಡ್” ಎಂಬ ಕೊಡವರ ಸಾಂಪ್ರದಾಯಿಕ ನುಡಿಯು ಈ ಕುಟುಂಬದ ವಲಸೆಯ ಕಥನದೊಂದಿಗೆ ಬೆಸೆದುಕೊಂಡಿದೆ. ಕರಾವಳಿ ನಾಡಿನಿಂದ ಬೆಟ್ಟನಾಡಾದ ಕೊಡಗಿನತ್ತ ನಡೆದ ಪೂರ್ವಜರ ಪಯಣವನ್ನು ಈ ನುಡಿ ಪ್ರತಿಬಿಂಬಿಸುತ್ತದೆ.

ಕಾಲಕ್ರಮೇಣ ಆಲೇಮಾಡ ಕುಟುಂಬವು ದಕ್ಷಿಣ ಕೊಡಗಿನ ವಿವಿಧ ಭಾಗಗಳಿಗೆ ವಿಸ್ತರಿಸಿಕೊಂಡು ಹಲವು ಕವಲು-ಕೊಂಬೆಗಳಾಗಿ ಬೆಳೆದಿದೆ. ಪ್ರಸ್ತುತ ಕಿರುಗೂರು, ಮತ್ತೂರು ಹಾಗೂ ಮುಗುಟಗೇರಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಆಲೇಮಾಡ ಒಕ್ಕದ ಕುಟುಂಬಗಳು ನೆಲೆಸಿವೆ. ಆದರೂ ಕುಟುಂಬದ ಮೂಲ ಪರಂಪರೆ, ಕೊಡವ ಸಂಸ್ಕೃತಿ, ಆಚಾರ-ವಿಚಾರ ಮತ್ತು ಸಾಮಾಜಿಕ ಬಂಧವನ್ನು ಇಂದಿಗೂ ಉಳಿಸಿಕೊಂಡು ಬರಲಾಗಿದೆ.

ಮೂರು ಭಾಗಗಳ ಒಗ್ಗೂಡುವಿಕೆಗೆ ವೇದಿಕೆ

ಕೊಡವ ಕುಟುಂಬಗಳ ಹಾಕಿ ನಮ್ಮೆಗಳಲ್ಲಿ ಆಗಾಗ್ಗೆ ಒಟ್ಟಾಗಿ ಪಾಲ್ಗೊಳ್ಳುತ್ತಿದ್ದ ಆಲೇಮಾಡ ಕುಟುಂಬದ ಸದಸ್ಯರು, ಈ ಬಾರಿಯ ತೋಕ್ ನಮ್ಮೆಯಲ್ಲಿ ಒಕ್ಕದ ಮೂರು ಭಾಗಗಳಿಂದ ಒಂದೇ ವೇದಿಕೆಯಲ್ಲಿ ಸೇರುತ್ತಿರುವುದು ವಿಶೇಷವಾಗಿದೆ. ಹೀಗಾಗಿ ತೋಕ್ ನಮ್ಮೆ ಕೇವಲ ಕುಟುಂಬದ ಕ್ರೀಡಾಕೂಟವಾಗಿರದೆ, ಹಲವು ಕವಲುಗಳಾಗಿ ಹರಡಿರುವ ಕುಟುಂಬ ಸದಸ್ಯರನ್ನು ಒಂದೆಡೆ ಸೇರಿಸುವ ಸಾಂಸ್ಕೃತಿಕ ಸೇತುವೆಯಾಗಿ ರೂಪುಗೊಂಡಿದೆ.

ವಿವಿಧ ಕ್ಷೇತ್ರಗಳಲ್ಲಿ ಆಲೇಮಾಡ ಸದಸ್ಯರ ಸಾಧನೆ

ಆಲೇಮಾಡ ಒಕ್ಕದ ಸದಸ್ಯರು ಕ್ರೀಡೆ, ರಾಜಕೀಯ, ಕೃಷಿ, ಸಹಕಾರ ಹಾಗೂ ಉದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ.

ಸೇನೆಯಲ್ಲಿ ಆಲೇಮಾಡ ಕರ್ನಲ್ ವಿಜಯ್ ಕರುಂಬಯ್ಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಏಕಲವ್ಯ ಪ್ರಶಸ್ತಿ ವಿಜೇತ ಹಾಕಿ ಆಟಗಾರ ಚೀಯಣ್ಣ, ಹಾಕಿ ಸಬ್-ಜೂನಿಯರ್ ವಿಭಾಗದ ತ್ರಿಶಾ ತಂಗಮ್ಮ, ಸಾಯಿ ಅಕಾಡೆಮಿಯಲ್ಲಿ ಆಡುತ್ತಿರುವ ರಿಷಿ ಕಾವೇರಪ್ಪ ಹಾಗೂ ಅಮೆರಿಕನ್ ಫುಟ್ಬಾಲ್ ರಾಷ್ಟ್ರೀಯ ಆಟಗಾರ ನಮನ್ ನಂಜಪ್ಪ ಒಕ್ಕದ ಹೆಸರನ್ನು ಎತ್ತರಕ್ಕೇರಿಸಿದ್ದಾರೆ.

ರಾಜಕೀಯ ಕ್ಷೇತ್ರದಲ್ಲಿ ಸುಧೀರ್, ಸೋಮಣ್ಣ ಹಾಗೂ ನವೀನ್ ದೇವಯ್ಯ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ರೈತ ಸಂಘದ ತಾಲೂಕು ಅಧ್ಯಕ್ಷರಾಗಿ ಮಂಜು ಹಾಗೂ ರಾಜ್ಯ ಸಹಕಾರಿ ಒಕ್ಕೂಟದಿಂದ ಜಿಲ್ಲಾ ಪ್ರಶಸ್ತಿ ಪಡೆದ ಶಾಂತಿ ಕಾವೇರಮ್ಮ ಕೂಡ ಒಕ್ಕದ ಕೀರ್ತಿಗೆ ಕೊಡುಗೆ ನೀಡಿದ್ದಾರೆ.ಶಿಕ್ಷಣ ಕ್ಷೇತ್ರದಲ್ಲಿ ಡಾ. ತಿಮ್ಮಯ್ಯ ಮೆಕಾನಿಕ್ ವಿಭಾಗದಲ್ಲಿ ಸಂಶೋಧನೆ ಮಾಡಿ ಪಿ ಎಚ್ ಡಿ ಪಡೆದಿರುತ್ತಾರೆ. ಎ.ಎಸ್ ಲಲಿತ ಶ್ರೀನಿವಾಸ್ ಅವರಿಗೆ ಮಡಿಕೇರಿ ರಾಜಾ ಸೀಟಿನಲ್ಲಿ ಪುಷ್ಪ ಪ್ರದರ್ಶನ ನೀಡಿದ ಹೆಗ್ಗಳಿಕೆ ಇದೆ. ಯುರೋಪ್ ಮೂಲದ ಸೂಡಾನ್ ಕಾಫಿ ಸಂಸ್ಥೆಯ ಕುಶಾಲನಗರ ಶಾಖೆಯ ಸಿಇಒ ಆಗಿ ಆಲೇಮಾಡ ಹರೀಶ್ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಂಕಾಂಗ್ ಅಂತಾರಾಷ್ಟ್ರೀಯ ಬ್ಯಾಂಕಿನ ಉಪಾಧ್ಯಕ್ಷರಾಗಿ ಬೋಪಣ್ಣ ಸೇವೆ ಸಲ್ಲಿಸುತ್ತಿದ್ದಾರೆ.

ವ್ಯಾಪಾರ ಕ್ಷೇತ್ರದಲ್ಲಿಯೂ ಸುತನ್ ಅಯ್ಯಪ್ಪ, ರೇಷ್ಮಾ ,ಬೋಪಣ್ಣ ಹಾಗೂ ಪೊನ್ನಣ್ಣ ಸೇರಿದಂತೆ ಹಲವು ಸದಸ್ಯರು ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಯುವಕರ ಪರಿಶ್ರಮದಲ್ಲಿ ನಮ್ಮೆ

ತೋಕ್ ನಮ್ಮೆಯನ್ನು ಅಚ್ಚುಕಟ್ಟಾಗಿ ನಡೆಸಲು ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು, ಆಹಾರ ಸಮಿತಿಯಲ್ಲಿ ರೋಷನ್, ನವೀನ್ ದೇವಯ್ಯ ಹಾಗೂ ರಮೇಶ್ ಕಾರ್ಯನಿರ್ವಹಿಸುತ್ತಿದ್ದಾರೆ. ಒಕ್ಕದ ಹಿರಿಯರ ಮಾರ್ಗದರ್ಶನದೊಂದಿಗೆ ಯುವಕರಾದ ಜಗತ್ , ಕೀರ್ತನ್ ತಮ್ಮಯ್ಯ, ವಿನು,ಸುತನ್,ವಿಬಿನ್,ವಿತನ್,ಭವನ್,ಸುಧೀರ್,ಬೋಪಣ್ಣ , ಪ್ರಶಾಂತ್, ಪ್ರಖ್ಯಾತ್ ಮತ್ತು ಇತರರು ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡಿದ್ದಾರೆ. ತೋಕ್ ನಮ್ಮೆ ಸಮಿತಿ ಅಧ್ಯಕ್ಷರಾಗಿ ಎ.ಟಿ ಸೋಮಣ್ಣ, ಉಪಾಧ್ಯಕ್ಷರಾಗಿ ಎ.ಡಿ ಸುಧೀರ್, ಕಾರ್ಯದರ್ಶಿ ಎ.ಟಿ ಬೋಪಣ್ಣ, ಖಜಾಂಚಿ ಎ.ಜಿ ತಿಮ್ಮಯ್ಯ ಕಾರ್ಯನಿರ್ವಹಿಸುತ್ತಿದ್ದಾರೆ.
ಒಟ್ಟಾರೆ, ಆಲೇಮಾಡ ಒಕ್ಕದ ಎರಡನೇ ವರ್ಷದ ತೋಕ್ ನಮ್ಮೆ ಕುಟುಂಬದ ಪರಂಪರೆಯನ್ನು ನೆನಪಿಸುವುದರ ಜೊತೆಗೆ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸದಸ್ಯರನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವ ಮತ್ತು ಮುಂದಿನ ಪೀಳಿಗೆಗೆ ತಮ್ಮ ಬೇರುಗಳ ಪರಿಚಯ ಮಾಡಿಸುವ ಮಹತ್ವದ ಕುಟುಂಬ ಸಮಾಗಮವಾಗಿ ಗಮನ ಸೆಳೆಯುತ್ತಿದೆ.
ಈ ತೋಕ್ ನಮ್ಮೆಯನ್ನು ಮಾರ್ಕ್ಸ್ ಮೆನ್ ಸಂಸ್ಥೆಯ ಅಧ್ಯಕ್ಷರಾದ ಡಾ. ಚೆಕ್ಕೇರ ತಮ್ಮಯ್ಯ ಅವರ ಸಹಕಾರದೊಂದಿಗೆ
ಆಯೋಜಿಸಲಾಗಿದೆ.
ಈ ತೋಕ್ ನಮ್ಮೆ ಆಯೋಜನೆಗೆ ಒಕ್ಕದ ಪ್ರಮುಖರಾದ ಪೂರ್ವಾಂಕರ ಲಿಮಿಟೆಡ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಯ್ಯಪ್ಪ ಅವರ ಕೊಡುಗೆ ಅಪಾರ. ಗೋಣಿಕೊಪ್ಪದ ಲೋಪಮುದ್ರಾ ಆಸ್ಪತ್ರೆಯವರು ವೈದ್ಯಕೀಯ ಸೇವೆ ಒದಗಿಸಲಿದ್ದಾರೆ.

ತೋಕ್ ನಮ್ಮೆಯ ವಿಶೇಷತೆ.

ಸ್ವಾತಂತ್ರ್ಯ ಪೂರ್ವದಿಂದಲೇ ಕೊಡವರಿಗೆ ಬ್ರಿಟಿಷರಿಂದ ಮಾನ್ಯತೆಯಾಗಿ ಬಂದ ಕೋವಿ ಹಕ್ಕು ಮತ್ತು ಕೊಡವರ ಆಚಾರ ವಿಚಾರ ಸಂಸ್ಕೃತಿ ಪದ್ದತಿ ಪರಂಪರೆಯನ್ನು ಉಳಿಸಿಕೊಳ್ಳಲು ಮತ್ತು ಮುಂದಿನ ಪೀಳಿಗೆಗೆ ಈ ಹಕ್ಕನ್ನು ಮುಂದುವರೆಸಿಕೊಂಡು ಹೋಗುವ ಅನಿವಾರ್ಯತೆ ಕೊಡವರಿಗೆ ಇದೆ. ತೋಕ್ ನಮ್ಮೆಯ ಮುನ್ನುಡಿ ಬರೆದವರು ಕೊಡವ ಹಾಕಿ ನಮ್ಮೆಯ ಜನಕ ಪಾಂಡಂಡ ಕುಟ್ಟಣಿ ಅವರದ್ದು ಎಂದು ಹೇಳಿದರೆ ತಪ್ಪಾಗಲಾರದು. ಈ ಹಿಂದೆ ಕೊಡವರ ಕೋವಿ ಹಕ್ಕನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ದಾವೆ ಹೂಡಿದ ಸಂದರ್ಭದಲ್ಲಿ
ಕೊಡವ ವಕೀಲರುಗಳಾದ ಮೇರಿಯಂಡ ಸಜನ್ ಪೂವಯ್ಯ, ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ, ಮುಕ್ಕಾಟಿರ ಟಿ. ನಾಣಯ್ಯ, ಮಾಳೇಟಿರ ಧ್ಯಾನ್ ಚಿಣ್ಣಪ್ಪ, ಮಲ್ಲೇಂಗಡ ಗಗನ್ ಬೆಳ್ಯಪ್ಪ ಅವರುಗಳೊಂದಿಗೆ ಐಚೆಟ್ಟಿರ ರಾಲಿ ಮುದ್ದಪ್ಪ, ಐತಿಚಂಡ ಎಂ. ದೇವಯ್ಯ, ಕಾಂಗೀರ ಭೀಮಯ್ಯ, ಚೆಪ್ಪುಡಿರ ಪೂಣಚ್ಚ, ಕಾಳೇಂಗಡ ಸರೋಜಿನಿ, ಕರೋಟಿರ ಪೆಮ್ಮಯ್ಯ, ಬೊಳ್ಳಾರ್ಪಂಡ ಬೋಪಣ್ಣ, ಮಣವಟ್ಟಿರ ಅವಿನ್ ಸುಬ್ರಮಣಿ, ಚಂದಪಂಡ ನರೇನ್ ಸೇರಿದಂತೆ ಹಲವು ವಕೀಲರ ತಂಡ ಕಾನೂನು ಪ್ರಯತ್ನ ನಡೆಸಿ ವಾದ ಮಂಡಿಸಿ ಕೋವಿ ಹಕ್ಕನ್ನು ಮರಳಿ ಪಡೆಯಲು ನೀಡಿದ ಕೊಡುಗೆ ತೋಕ್ ನಮ್ಮೆ ನಡೆಸಲು ಸಹಕಾರಿಯಾಯಿತು.

ಕೊಡವ ಕುಟುಂಬಗಳ ನಡುವೆ ಪ್ರಾರಂಭವಾದ ಹಾಕಿ ನಮ್ಮೆ ನಂತರದ ದಿನಗಳಲ್ಲಿ ಕ್ರಿಕೆಟ್, ಕೇರ್ ಬಲಿ, ವಾಲಿಬಾಲ್, ಕಬ್ಬಡ್ಡಿ ಹಾಗೂ ಫುಟ್ಬಾಲ್ ವರೆಗು ಬಂದು ನಿಂತಿದೆ. ಇದು ಕೊಡವರ ಪಾಲಿಗೆ ಉತ್ತಮ ಬೆಳವಣಿಗೆಯೂ ಕೂಡಾ ಹೌದು. 2025 ರಲ್ಲಿ ಪೆಮ್ಮಂಡ ಒಕ್ಕದವರು ಒಂದು ಹೆಜ್ಜೆ ಮುಂದೆ ಹೋಗಿ ಪ್ರಥಮ ಬಾರಿಗೆ ತೋಕ್ ನಮ್ಮೆಯನ್ನು ಯಶಸ್ವಿಯಾಗಿ ಆಯೋಜನೆ ಮಾಡಿದ್ದರು. ಅದರ ಮುಂದುವರಿದ ಭಾಗವಾಗಿ ಈ ವರ್ಷ ಆಲೇಮಾಡ ತೋಕ್ ನಮ್ಮೆ ಆಯೋಜನೆಗೊಂಡಿದೆ. 2027 ರಲ್ಲಿ ಮಂಡೀರ ಒಕ್ಕ ತೋಕ್ ನಮ್ಮೆಯನ್ನು ನಡೆಸಲಿದ್ದು ಅವರಿಗೆ ಧ್ವಜ ಹಸ್ತಾಂತರ ಪ್ರಕ್ರಿಯೆಯೂ ನಡೆಯಲಿದೆ.

ಶೂಟಿಂಗ್ ಸ್ಪರ್ಧೆಯ ನಿಯಮಗಳು ಮತ್ತು ನಿಬಂಧನೆಗಳು:

1\. ಘೋಷಣಾ ಪತ್ರಕ್ಕೆ ಸಹಿ: ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲರೂ ಪ್ರವೇಶ ದ್ವಾರದಲ್ಲಿ ಘೋಷಣಾ ಪತ್ರಕ್ಕೆ ಕಡ್ಡಾಯವಾಗಿ ಸಹಿ ಮಾಡಬೇಕು.

2\. ಎರಡೂ ಸ್ಪರ್ಧೆಗಳಲ್ಲಿ ಭಾಗವಹಿಸುವುದು: ತಂಡದ ಇಬ್ಬರೂ ಸ್ಪರ್ಧಿಗಳು 12-ಬೋರ್ ಮತ್ತು .22 ರೈಫಲ್ ಎರಡೂ ವಿಭಾಗಗಳಲ್ಲಿ ಸ್ಪರ್ಧಿಸಬೇಕು. ಮುಂದಿನ ಸುತ್ತಿಗೆ ಅರ್ಹತೆ ನಿರ್ಧರಿಸಲು ಎರಡೂ ಸ್ಪರ್ಧೆಗಳ ಒಟ್ಟು ಅಂಕಗಳನ್ನು ಪರಿಗಣಿಸಲಾಗುತ್ತದೆ.

3\. ಸಮಯ ಪಾಲನೆ: ನಿಗದಿಪಡಿಸಿದ ಸ್ಪರ್ಧೆಯ ಆರಂಭದ ಸಮಯಕ್ಕಿಂತ ಕನಿಷ್ಠ 15 ನಿಮಿಷ ಮುಂಚಿತವಾಗಿ ಸ್ಪರ್ಧಿಗಳು ಹಾಜರಿರಬೇಕು.

4\. ತಡವಾಗಿ ಹಾಜರಾದರೆ: ನಿಗದಿತ ಸಮಯಕ್ಕೆ ತಂಡ ಹಾಜರಾಗದಿದ್ದಲ್ಲಿ, ಎದುರಾಳಿ ತಂಡಕ್ಕೆ ವಾಕ್ಓವರ್ ಮೂಲಕ ಗೆಲುವು ನೀಡಲಾಗುತ್ತದೆ.

5\. ಸಮಯ ಬದಲಾವಣೆ: ಹವಾಮಾನ ಮತ್ತು ಕಾರ್ಯಾಚರಣೆಗೆ ಸಂಬಂಧಿಸಿದ ಅನಿವಾರ್ಯ ಪರಿಸ್ಥಿತಿಗಳ ಆಧಾರದ ಮೇಲೆ ಸ್ಪರ್ಧೆಯ ಸಮಯದಲ್ಲಿ ಬದಲಾವಣೆ ಮಾಡಬಹುದು. ಸ್ಪರ್ಧಿಗಳು ಆಯೋಜಕರೊಂದಿಗೆ ಸಹಕರಿಸಿ, ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು.

6\. ತಂಡದ ಸದಸ್ಯರು: ಪ್ರತಿ ತಂಡದಲ್ಲಿ ಇಬ್ಬರು ಆಟಗಾರರು ಇರಬೇಕು.

7\. ಅಧಿಕೃತ ಕೈಪಟ್ಟಿ ಕಡ್ಡಾಯ: ಅಧಿಕೃತ ಕೈಪಟ್ಟಿ ಅಥವಾ ಅನುಮತಿ ಪಟ್ಟಿಯನ್ನು ಧರಿಸಿರುವ ಸ್ಪರ್ಧಿಗಳಿಗೆ ಮಾತ್ರ ಶೂಟಿಂಗ್ ವಲಯಕ್ಕೆ ಪ್ರವೇಶ ನೀಡಲಾಗುತ್ತದೆ. ಈ ಕೈಪಟ್ಟಿಯನ್ನು ಸ್ಪರ್ಧಾ ಸ್ಥಳದಲ್ಲಿಯೇ ಒದಗಿಸಲಾಗುತ್ತದೆ. ಸೋತ ತಂಡದ ಕೈಪಟ್ಟಿಯನ್ನು ಬೂತ್ನ ಉಸ್ತುವಾರಿ ಅಧಿಕಾರಿ ಕತ್ತರಿಸಿ ತೆಗೆದುಹಾಕುತ್ತಾರೆ. ವಿಜೇತ ತಂಡದ ಸದಸ್ಯರು ಮುಂದಿನ ಅರ್ಹತಾ ಸುತ್ತಿಗೆ ಮುಂದುವರಿಯಲು ತಮ್ಮ ಕೈಪಟ್ಟಿಯನ್ನು ಉಳಿಸಿಕೊಳ್ಳಬೇಕು.

8\. ಒಬ್ಬ ಸ್ಪರ್ಧಿ ಮಾತ್ರ ಹಾಜರಿದ್ದರೆ: ತಂಡದ ಇಬ್ಬರಲ್ಲಿ ಒಬ್ಬರು ಮಾತ್ರ ಹಾಜರಿದ್ದರೂ ಸ್ಪರ್ಧಿಸಲು ಅವಕಾಶವಿರುತ್ತದೆ. ಆದರೆ ಅಂತಹ ತಂಡವು ಮುಂದಿನ ಸುತ್ತುಗಳಿಗೆ ಅರ್ಹತೆ ಪಡೆಯುವುದಿಲ್ಲ.

9\. ಸ್ಪರ್ಧಿಗಳ ಬದಲಾವಣೆಗೆ ಅವಕಾಶವಿಲ್ಲ: ಮೊದಲ ಸುತ್ತಿನಲ್ಲಿ ಸ್ಪರ್ಧಿಸಿದ ಆಟಗಾರರನ್ನು ನಂತರದ ಯಾವುದೇ ಸುತ್ತಿನಲ್ಲಿ ಬದಲಾಯಿಸಲು ಅವಕಾಶವಿರುವುದಿಲ್ಲ.

10\. ಶಸ್ತ್ರಾಸ್ತ್ರಗಳ ಸುರಕ್ಷತೆ: ಸ್ಪರ್ಧಾ ಆವರಣಕ್ಕೆ ಪ್ರವೇಶಿಸುವಾಗ ಎಲ್ಲ ಬಂದೂಕುಗಳು ಖಾಲಿಯಾಗಿರಬೇಕು. ಅವುಗಳನ್ನು ಕೇಸ್ನಲ್ಲಿ ಅಥವಾ ಹೋಲ್ಸ್ಟರ್ನಲ್ಲಿ ಸುರಕ್ಷಿತವಾಗಿ ಇರಿಸಬೇಕು. ಸುರಕ್ಷತಾ ಫ್ಲ್ಯಾಗ್ಗಳನ್ನು ಅಳವಡಿಸಿರಬೇಕು ಹಾಗೂ ಬ್ಯಾರೆಲ್ಗಳನ್ನು ತೆರೆದ ಸ್ಥಿತಿಯಲ್ಲಿಡಬೇಕು.

11\. ಸುರಕ್ಷತಾ ತಪಾಸಣೆ: ಸ್ಪರ್ಧೆಗೆ ಮೊದಲು ಎಲ್ಲ ಬಂದೂಕುಗಳು ಮತ್ತು ಸಂಬಂಧಿತ ಉಪಕರಣಗಳ ಸುರಕ್ಷತಾ ತಪಾಸಣೆ ಕಡ್ಡಾಯವಾಗಿರುತ್ತದೆ. ಸ್ಕೋಪ್ ಅಳವಡಿಸಿರುವ ಬಂದೂಕುಗಳಿಗೆ ಸ್ಪರ್ಧೆಯಲ್ಲಿ ಅವಕಾಶವಿರುವುದಿಲ್ಲ.

12\. ಕಾರ್ಟ್ರಿಡ್ಜ್ ದೋಷ (ಮಿಸ್ಫೈರ್): ಕಾರ್ಟ್ರಿಡ್ಜ್ ಅನ್ನು ಬಂದೂಕಿಗೆ ತುಂಬಿದ ನಂತರ, ತೆಂಗಿನಕಾಯಿಯತ್ತ ಗುರಿ ಹಿಡಿಯುವ ಮೊದಲು ಗುಂಡು ಸಿಡಿಯದಿದ್ದರೆ, ಆ ಪ್ರಯತ್ನವನ್ನು ಯಶಸ್ವಿ ಪ್ರಯತ್ನವೆಂದು ಪರಿಗಣಿಸಲಾಗುತ್ತದೆ. ಅದನ್ನು ವಿಫಲ ಪ್ರಯತ್ನವೆಂದು ಪರಿಗಣಿಸುವುದಿಲ್ಲ; ಮರುಪ್ರಯತ್ನಕ್ಕೂ ಅವಕಾಶವಿರುವುದಿಲ್ಲ.

13\. ಬಂದೂಕು ಮತ್ತು ಮದ್ದುಗುಂಡುಗಳ ವಾಪಸಾತಿ: ಸ್ಪರ್ಧಿಗಳು ಸಾಲವಾಗಿ ಪಡೆದ ಎಲ್ಲ ಬಂದೂಕುಗಳನ್ನು ಹಾಗೂ ಸ್ಪರ್ಧಾ ಸ್ಥಳದಲ್ಲಿ ಖರೀದಿಸಿ ಬಳಸದ ಉಳಿದ ಮದ್ದುಗುಂಡುಗಳನ್ನು ಆಯೋಜಕರಿಗೆ ಹಿಂದಿರುಗಿಸಬೇಕು.

14\. ಮೊಬೈಲ್ ಫೋನ್ ಬಳಕೆ ನಿಷೇಧ: ಶೂಟಿಂಗ್ ಮಾಡುವಾಗ ಮೊಬೈಲ್ ಫೋನ್ ಬಳಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಸ್ಪರ್ಧಿಗಳು ತಮ್ಮ ಮೊಬೈಲ್ ಫೋನ್ಗಳನ್ನು ಬೂತ್ನಲ್ಲಿರುವ ಆಯೋಜಕರ ಪ್ರತಿನಿಧಿಗಳಿಗೆ ಒಪ್ಪಿಸಬೇಕು.

15\. ಮದ್ಯ ಮತ್ತು ಮಾದಕ ವಸ್ತುಗಳ ನಿಷೇಧ: ಮದ್ಯಪಾನ, ಕಾನೂನುಬಾಹಿರ ಮಾದಕ ವಸ್ತುಗಳು ಹಾಗೂ ದೈಹಿಕ ಅಥವಾ ಮಾನಸಿಕ ಸಾಮರ್ಥ್ಯಕ್ಕೆ ಅಡ್ಡಿಪಡಿಸುವ ಔಷಧಗಳ ಪ್ರಭಾವದಲ್ಲಿರುವುದು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಯಾರಾದರೂ ಅಂತಹ ಪ್ರಭಾವದಲ್ಲಿದ್ದಾರೆ ಎಂಬ ಅನುಮಾನ ಕಂಡುಬಂದರೆ, ಅವರನ್ನು ತಕ್ಷಣವೇ ಸ್ಪರ್ಧೆಯಿಂದ ಹೊರಗಿಡಲಾಗುತ್ತದೆ.

16\. ಅಶಿಸ್ತಿನ ವರ್ತನೆಗೆ ಕ್ರಮ: ಕ್ರೀಡಾಸ್ಫೂರ್ತಿಗೆ ವಿರುದ್ಧವಾದ ವರ್ತನೆ, ಕಿರುಕುಳ ಅಥವಾ ಸಿಬ್ಬಂದಿ ಹಾಗೂ ಇತರ ಸ್ಪರ್ಧಿಗಳ ವಿರುದ್ಧ ಮೌಖಿಕ ನಿಂದನೆ ಮಾಡಿದರೆ ತಕ್ಷಣವೇ ಅನರ್ಹಗೊಳಿಸಲಾಗುತ್ತದೆ.

17\. ಶೂಟಿಂಗ್ ವಲಯದ ಶಿಸ್ತು: ಶೂಟಿಂಗ್ ವಲಯದ ಸುರಕ್ಷತಾ ನಿಯಮಗಳು ಮತ್ತು ಶಿಸ್ತನ್ನು ಪಾಲಿಸದವರ ವಿರುದ್ಧ ಕಟ್ಟುನಿಟ್ಟಿನ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ.

18\. ಶೂಟಿಂಗ್ ಅಂತರ:

* 12-ಬೋರ್ ಬಂದೂಕು: 30 ಮೀಟರ್.

* .22 ರೈಫಲ್: 50 ಮೀಟರ್.

19\. ಡಬಲ್ ಬ್ಯಾರೆಲ್ 12-ಬೋರ್ ಬಂದೂಕಿನ ಬಳಕೆ: ಡಬಲ್ ಬ್ಯಾರೆಲ್ 12-ಬೋರ್ ಬಂದೂಕಿನಲ್ಲಿ ಒಂದೇ ನೈಜ ಕಾರ್ಟ್ರಿಡ್ಜ್ ಬಳಸುವಾಗ, ಮತ್ತೊಂದು ಬ್ಯಾರೆಲ್ನಲ್ಲಿ ನಿಷ್ಕ್ರಿಯ ಡಮ್ಮಿ ಶೆಲ್ ಅನ್ನು ಅಳವಡಿಸಬೇಕು.

20\. ಅಂಕಗಳ ಲೆಕ್ಕಾಚಾರ: ಎರಡೂ ಸ್ಪರ್ಧೆಗಳಲ್ಲಿ ತಂಡದ ಇಬ್ಬರೂ ಆಟಗಾರರು ಗಳಿಸಿದ ಒಟ್ಟು ಅಂಕಗಳನ್ನು ಪರಿಗಣಿಸಲಾಗುತ್ತದೆ. ಅತಿ ಹೆಚ್ಚು ಒಟ್ಟು ಅಂಕ ಗಳಿಸಿದ ತಂಡಗಳು ಮುಂದಿನ ಸುತ್ತಿಗೆ ಅರ್ಹತೆ ಪಡೆಯುತ್ತವೆ.

21\. ಗುರಿಯ ಪರಿಶೀಲನೆ: ಸ್ಪರ್ಧಿಗಳು ವಿನಂತಿಸಿದಲ್ಲಿ, ಅಧಿಕಾರಿಗಳು ಗುರಿಯಾಗಿ ಬಳಸಿದ ತೆಂಗಿನಕಾಯಿಗಳನ್ನು ದೃಶ್ಯ ಪರಿಶೀಲನೆಗಾಗಿ ತೋರಿಸುತ್ತಾರೆ. ಆದರೆ ಗುರಿ ತೆಂಗಿನಕಾಯಿಗಳನ್ನು ಸ್ಪರ್ಧಿಗಳಿಗೆ ಹಸ್ತಾಂತರಿಸಲಾಗುವುದಿಲ್ಲ.

22\. ತೆಂಗಿನಕಾಯಿ ಒಡೆಯದಿದ್ದರೆ: ತೆಂಗಿನಕಾಯಿ ಒಡೆಯದಿದ್ದರೆ ಅಥವಾ ಅದರಿಂದ ನೀರು ಹೊರಬಂದಿರುವುದು ಸ್ಪಷ್ಟವಾಗಿ ಕಾಣದಿದ್ದರೆ, ಅಧಿಕೃತ ಸಿಬ್ಬಂದಿ ತೆಂಗಿನಕಾಯಿಯನ್ನು ಮೂರು ಬಾರಿ ಬೆರಳಿನಿಂದ ತಟ್ಟಿ ಪರಿಶೀಲಿಸುತ್ತಾರೆ.

23\. ಟೈ-ಬ್ರೇಕರ್ (ಸಮಬಲ ನಿರ್ಧಾರ):

* ಸಮಾನ ಅಂಕ ಗಳಿಸಿದ ತಂಡಗಳಿಂದ ತಲಾ ಒಬ್ಬರನ್ನು ಆಯ್ಕೆ ಮಾಡಿ, ಇಬ್ಬರೂ 12-ಬೋರ್ ಮತ್ತು .22 ರೈಫಲ್ ಎರಡೂ ವಿಭಾಗಗಳಲ್ಲಿ ಸ್ಪರ್ಧಿಸಬೇಕು.

* ಎರಡೂ ವಿಭಾಗಗಳ ಒಟ್ಟು ಅಂಕಗಳ ಆಧಾರದ ಮೇಲೆ ಹೆಚ್ಚಿನ ಅಂಕ ಗಳಿಸಿದ ತಂಡವನ್ನು ವಿಜೇತ ತಂಡವೆಂದು ಘೋಷಿಸಿ ಮುಂದಿನ ಸುತ್ತಿಗೆ ಅರ್ಹತೆ ನೀಡಲಾಗುತ್ತದೆ.

* ಈ ಹಂತದಲ್ಲಿಯೂ ಸಮಬಲ ಮುಂದುವರಿದರೆ, ಎರಡೂ ತಂಡಗಳ ಎರಡನೇ ಆಟಗಾರರು ಇದೇ ಎರಡು ವಿಭಾಗಗಳಲ್ಲಿ ಸ್ಪರ್ಧಿಸಬೇಕು.

* ಆ ಬಳಿಕವೂ ಸಮಬಲ ಮುಂದುವರಿದರೆ, ಚೀಟಿ ಎತ್ತುವ ಮೂಲಕ ವಿಜೇತರನ್ನು ನಿರ್ಧರಿಸಲಾಗುತ್ತದೆ.

24\. ಆಯೋಜಕರ ನಿರ್ಧಾರವೇ ಅಂತಿಮ: ಅಧಿಕೃತ ತೀರ್ಪುಗಳು, ನಿಯಮಗಳ ವ್ಯಾಖ್ಯಾನ ಮತ್ತು ಸಮಬಲ ನಿರ್ಧಾರಕ್ಕೆ ಸಂಬಂಧಿಸಿದಂತೆ ಟೂರ್ನಮೆಂಟ್ ಸಮಿತಿಯ ನಿರ್ಧಾರವೇ ಅಂತಿಮ ಹಾಗೂ ಎಲ್ಲರಿಗೂ ಬದ್ಧವಾಗಿರುತ್ತದೆ. ಪರಿಶೀಲನಾ ಅಧಿಕಾರಿಯ ನಿರ್ಧಾರವನ್ನೂ ಸ್ಪರ್ಧಿಗಳು ಅಂತಿಮವೆಂದು ಪರಿಗಣಿಸಬೇಕು.

25\. ಛಾಯಾಚಿತ್ರ ಮತ್ತು ವಿಡಿಯೊ ಚಿತ್ರೀಕರಣ: ಪ್ರಚಾರ ಮತ್ತು ವರದಿಗಳ ಉದ್ದೇಶಕ್ಕಾಗಿ ಸ್ಪರ್ಧಿಗಳ ಛಾಯಾಚಿತ್ರ ಹಾಗೂ ವಿಡಿಯೊಗಳನ್ನು ಚಿತ್ರೀಕರಿಸುವ ಹಕ್ಕನ್ನು ಆಯೋಜಕರು ಕಾಯ್ದಿರಿಸಿಕೊಂಡಿರುತ್ತಾರೆ.

ಸೂಚನೆ: ಸ್ಪರ್ಧೆಯ ಸುರಕ್ಷತೆ ಮತ್ತು ನಿಯಮಗಳ ಸ್ಪಷ್ಟತೆಗಾಗಿ, ವಿಶೇಷವಾಗಿ 12ನೇ ನಿಯಮದಲ್ಲಿನ ಮಿಸ್ಫೈರ್ ಅನ್ನು ಯಶಸ್ವಿ ಪ್ರಯತ್ನವೆಂದು ಪರಿಗಣಿಸುವುದು ಹಾಗೂ 19ನೇ ನಿಯಮದಲ್ಲಿನ ಡಮ್ಮಿ ಶೆಲ್ ಬಳಕೆ ಕುರಿತು ಆಯೋಜಕರು ಸ್ಪರ್ಧೆ ಆರಂಭಕ್ಕೂ ಮುನ್ನ ಸ್ಪಷ್ಟ ಮಾರ್ಗಸೂಚಿ ನೀಡುವುದು ಸೂಕ್ತ.

Continue Reading

Trending

error: Content is protected !!