Special
ಹೌತಿ ದಾಳಿ ಭೀತಿ: ರಿಯಾದ್‌ಗೆ ಹೊರಟ ಏರ್‌ಇಂಡಿಯಾ ವಿಮಾನ ವಾಪಸ್; ಅ.10ರವರೆಗೆ ಹಾರಾಟ ರದ್ದು!
ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಸಂಘರ್ಷ ಹಾಗೂ ಭದ್ರತಾ ಆತಂಕದ ಹಿನ್ನೆಲೆಯಲ್ಲಿ ದೆಹಲಿಯಿಂದ ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ಗೆ ಹೊರಟಿದ್ದ ಏರ್‌ಇಂಡಿಯಾ ವಿಮಾನವು ಮಧ್ಯ ಆಗಸದಲ್ಲೇ ತನ್ನ ಹಾರಾಟದ ದಿಕ್ಕು ಬದಲಿಸಿ ದೆಹಲಿಗೆ ವಾಪಸಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಅಕ್ಟೋಬರ್ 10ರವರೆಗೆ ರಿಯಾದ್‌ಗೆ ನಿಗದಿಯಾಗಿದ್ದ ಏರ್‌ಇಂಡಿಯಾ ಮತ್ತು ಏರ್‌ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ.

ಮಧ್ಯ ಆಗಸದಲ್ಲೇ ಯೂಟರ್ನ್ ಹೊಡೆದ ವಿಮಾನ
ಗುರುವಾರ (ಅ.8) ದೆಹಲಿಯಿಂದ ರಿಯಾದ್‌ಗೆ ಹಾರಾಟ ನಡೆಸುತ್ತಿದ್ದ ಏರ್‌ಇಂಡಿಯಾದ AI2243 ವಿಮಾನವು ಭದ್ರತಾ ಕಾರಣಗಳಿಂದಾಗಿ ತನ್ನ ಪ್ರಯಾಣವನ್ನು ಮೊಟಕುಗೊಳಿಸಿ ದೆಹಲಿಗೆ ಮರಳಿದೆ. ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಏರ್‌ಇಂಡಿಯಾ ವಕ್ತಾರರು ತಿಳಿಸಿದ್ದಾರೆ.
ಪ್ರಸ್ತುತ ಪರಿಸ್ಥಿತಿಯನ್ನು ಪರಿಗಣಿಸಿ ಅಕ್ಟೋಬರ್ 10ರವರೆಗೆ ರಿಯಾದ್‌ಗೆ ನಿಗದಿಯಾಗಿದ್ದ ಏರ್‌ಇಂಡಿಯಾ ಮತ್ತು ಏರ್‌ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇದರಿಂದ ತೊಂದರೆಗೊಳಗಾದ ಪ್ರಯಾಣಿಕರಿಗೆ ಹಣ ಮರುಪಾವತಿ ಮಾಡುವುದಾಗಿ ವಿಮಾನಯಾನ ಸಂಸ್ಥೆ ತಿಳಿಸಿದೆ.

ವಿಮಾನ ನಿಲ್ದಾಣ, ತೈಲ ಮೂಲಸೌಕರ್ಯಗಳ ಮೇಲೆ ದಾಳಿ ಆತಂಕ
ಮಧ್ಯಪ್ರಾಚ್ಯದಲ್ಲಿ ಸಂಘರ್ಷ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾದ ಪ್ರಮುಖ ಮೂಲಸೌಕರ್ಯಗಳ ಭದ್ರತೆ ಕುರಿತು ಆತಂಕ ಹೆಚ್ಚಾಗಿದೆ. ರಿಯಾದ್‌ನ ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ತೈಲ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆದಿರುವುದಾಗಿ ವರದಿಯಾಗಿದೆ.
ಹೌತಿ ಪಡೆಗಳ ಸೇನಾ ವಕ್ತಾರ ಯಾಹ್ಯಾ ಸಾರಿ, ರಿಯಾದ್ ವಿಮಾನ ನಿಲ್ದಾಣವನ್ನು ಗುರಿಯಾಗಿಸಿಕೊಂಡು ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಿರುವುದಾಗಿ ಹೇಳಿಕೊಂಡಿದ್ದಾರೆ. ಮತ್ತೊಂದೆಡೆ, ಸೌದಿ ನೇತೃತ್ವದ ಒಕ್ಕೂಟದ ವಕ್ತಾರ ಮೇಜರ್ ಜನರಲ್ ಟರ್ಕಿ ಅಲ್-ಮಾಲ್ಕಿ ಅವರು, ರಿಯಾದ್ ಕಡೆಗೆ ಹಾರಿಸಲಾದ ಎರಡು ಬ್ಯಾಲಿಸ್ಟಿಕ್ ಕ್ಷಿಪಣಿಗಳು ಹಾಗೂ ನೈಋತ್ಯ ಸೌದಿ ಅರೇಬಿಯಾದ ಖಾಮಿಸ್ ಮುಷೈತ್ ಪ್ರದೇಶವನ್ನು ಗುರಿಯಾಗಿಸಿಕೊಂಡ ಮತ್ತೊಂದು ಕ್ಷಿಪಣಿಯನ್ನು ನಾಶಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಪ್ರದೇಶದಲ್ಲಿ ಭದ್ರತಾ ಪರಿಸ್ಥಿತಿ ಹೇಗೆ ಬದಲಾಗಲಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ವಿಮಾನಯಾನ ಸಂಸ್ಥೆಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿವೆ. ರಿಯಾದ್‌ಗೆ ಪ್ರಯಾಣಿಸಲು ಯೋಜಿಸಿರುವವರು ತಮ್ಮ ವಿಮಾನದ ವೇಳಾಪಟ್ಟಿ ಹಾಗೂ ರದ್ದತಿ ಕುರಿತ ಮಾಹಿತಿಯನ್ನು ಸಂಬಂಧಪಟ್ಟ ವಿಮಾನಯಾನ ಸಂಸ್ಥೆಗಳಿಂದ ಖಚಿತಪಡಿಸಿಕೊಳ್ಳುವುದು ಅಗತ್ಯವಾಗಿದೆ.
Special
ಮಹಿಳೆಯರಿಗೆ ಸಾಲ-ಸಹಾಯಧನ: ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ!!
ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿಸುವ ಹಾಗೂ ಸ್ವಯಂ ಉದ್ಯೋಗಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು 2026-27ನೇ ಸಾಲಿಗೆ ವಿವಿಧ ಯೋಜನೆಗಳಡಿ ಅರ್ಜಿ ಆಹ್ವಾನಿಸಿದೆ. ಉದ್ಯೋಗಿನಿ, ಚೇತನ, ಧನಶ್ರೀ, ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಹಾಗೂ ಮಾಜಿ ದೇವದಾಸಿ ಮಹಿಳೆಯರ ಪುನರ್ವಸತಿ ಯೋಜನೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಹರು ಅಕ್ಟೋಬರ್ 31ರ ಸಂಜೆ 5.30ರೊಳಗೆ ಅರ್ಜಿ ಸಲ್ಲಿಸಬೇಕು.
ಉದ್ಯೋಗಿನಿ ಯೋಜನೆಯಡಿ ₹3 ಲಕ್ಷದವರೆಗೆ ಸಾಲ:
ಉದ್ಯೋಗಿನಿ ಯೋಜನೆಯಡಿ ಮಹಿಳೆಯರು ಸ್ವಯಂ ಉದ್ಯೋಗ ಆರಂಭಿಸಲು ಬ್ಯಾಂಕ್‌ಗಳ ಮೂಲಕ ಕನಿಷ್ಠ ₹50,000ರಿಂದ ಗರಿಷ್ಠ ₹3 ಲಕ್ಷದವರೆಗೆ ಸಾಲ ಪಡೆಯಬಹುದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ವಾರ್ಷಿಕ ಆದಾಯ ₹2 ಲಕ್ಷದೊಳಗಿದ್ದರೆ ಶೇ.75ರಷ್ಟು ಅಥವಾ ಗರಿಷ್ಠ ₹2 ಲಕ್ಷದವರೆಗೆ ಸಹಾಯಧನ ಸಿಗಲಿದೆ. ಇತರ ವರ್ಗದವರಿಗೆ ವಾರ್ಷಿಕ ಆದಾಯ ಮಿತಿ ₹1.50 ಲಕ್ಷವಾಗಿದ್ದು, ಶೇ.30ರಷ್ಟು ಅಥವಾ ಗರಿಷ್ಠ ₹90,000 ಸಹಾಯಧನ ನೀಡಲಾಗುತ್ತದೆ. ವಯೋಮಿತಿ: 21ರಿಂದ 55 ವರ್ಷ.

ಇತರೆ ಯೋಜನೆಗಳ ಪ್ರಯೋಜನ:
ಚೇತನ ಯೋಜನೆಯಡಿ ದಮನಿತ ಮಹಿಳೆಯರಿಗೆ ಆದಾಯೋತ್ಪನ್ನ ಚಟುವಟಿಕೆ ಕೈಗೊಳ್ಳಲು ₹45,000 ಪ್ರೋತ್ಸಾಹಧನ ನೀಡಲಾಗುತ್ತದೆ. ಧನಶ್ರೀ ಯೋಜನೆಯಡಿ ಎಚ್‌ಐವಿ/ಏಡ್ಸ್ ಸೋಂಕಿತ ಅಥವಾ ಬಾಧಿತ ಮಹಿಳೆಯರಿಗೆ ಸ್ವಯಂ ಉದ್ಯೋಗಕ್ಕಾಗಿ ₹45,000 ನೆರವು ದೊರೆಯಲಿದೆ.
ಇದೇ ರೀತಿ ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಹಾಗೂ ಮಾಜಿ ದೇವದಾಸಿ ಮಹಿಳೆಯರ ಪುನರ್ವಸತಿ ಯೋಜನೆಯಡಿಯೂ ಆದಾಯೋತ್ಪನ್ನ ಚಟುವಟಿಕೆಗಳಿಗೆ ₹45,000 ಪ್ರೋತ್ಸಾಹಧನ ನೀಡಲಾಗುತ್ತದೆ. ಈ ಯೋಜನೆಗಳಿಗೆ ಸಾಮಾನ್ಯವಾಗಿ 20ರಿಂದ 55 ವರ್ಷದೊಳಗಿನವರು ಅರ್ಹರಾಗಿರುತ್ತಾರೆ.

ಅರ್ಜಿ ಸಲ್ಲಿಸುವುದು ಹೇಗೆ?
ಅರ್ಜಿಗಳನ್ನು ಸೇವಾ ಸಿಂಧು ಪೋರ್ಟಲ್ ಆದ https://sevasindhu.karnataka.gov.in/Sevasindhu/Kannada ಮೂಲಕ ಬಾಪೂಜಿ ಸೇವಾ ಕೇಂದ್ರ, ಗ್ರಾಮ ಒನ್, ಬೆಂಗಳೂರು ಒನ್ ಹಾಗೂ ಕರ್ನಾಟಕ ಒನ್ ಕೇಂದ್ರಗಳಲ್ಲಿ ಸಲ್ಲಿಸಬಹುದು. ಚೇತನ ಮತ್ತು ಧನಶ್ರೀ ಯೋಜನೆಗಳಿಗೆ ಅಗತ್ಯ ದಾಖಲೆಗಳೊಂದಿಗೆ ಆಫ್‌ಲೈನ್‌ನಲ್ಲಿಯೂ ಅರ್ಜಿ ಸಲ್ಲಿಸುವ ಅವಕಾಶವಿದೆ.
ಅರ್ಜಿದಾರರ ಆಧಾರ್‌ಗೆ ಮೊಬೈಲ್ ಸಂಖ್ಯೆ ಜೋಡಣೆಯಾಗಿರಬೇಕು ಹಾಗೂ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಮಾಡಿಸಿರಬೇಕು. ಹೆಚ್ಚಿನ ಮಾಹಿತಿಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳನ್ನು ಅಥವಾ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವನ್ನು ಸಂಪರ್ಕಿಸಬಹುದು.
Special
ರೇಣುಕಾಸ್ವಾಮಿ ಹ*ತ್ಯೆ ಕೇಸ್: ದರ್ಶನ್ & ಗ್ಯಾಂಗ್ ವಿರುದ್ಧ ಪ್ರದೋಷ್ ಮಾಫಿ ಸಾಕ್ಷಿ ಹೇಳಿಕೆ ಮುಕ್ತಾಯ
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಾಸಿಕ್ಯೂಷನ್ ವಿಟ್ನೆಸ್, ಪ್ರದೋಷ್ ಮಾಫಿ ಸಾಕ್ಷಿ ಹೇಳಿಕೆ ಮುಕ್ತಾಯವಾಗಿದೆ.
ಒಟ್ಟಾರೆಯಾಗಿ ನಾಲ್ಕು ದಿನಗಳ ಕಾಲ ನಡೆದ ಮಾಫಿ ಸಾಕ್ಷಿ ಹೇಳಿಕೆ ಇಂದು ಅಂತ್ಯಗೊಂಡಿದ್ದು, ಮಂಗಳವಾರ ಡಾಕ್ಯುಮೆಂಟ್ ಮಾರ್ಕಿಂಗ್ ಪ್ರಕ್ರಿಯೆ ನಡೆಯಲಿದೆ. 59ನೇ ಸಿಸಿಹೆಚ್ ಕೋರ್ಟ್ ಮುಂದೆ ಹಾಜರಾಗಿ ದರ್ಶನ್ ಅಂಡ್ ಗ್ಯಾಂಗ್ ಕ್ರೌರ್ಯ ಬಿಚ್ಚಿಟ್ಟಿದ್ದ ಪ್ರದೋಷ್‌ನ ಹೇಳಿಕೆಯನ್ನ ನ್ಯಾಯಾಲಯ ಸಂಪೂರ್ಣವಾಗಿ ದಾಖಲು ಮಾಡಿದೆ.

ಪ್ರಾಸಿಕ್ಯೂಷನ್‌ಗೆ ಅನುಗುಣವಾಗಿ ಪ್ರದೋಷ್ ಹೇಳಿಕೆ ದಾಖಲಿಸಿದ್ದು, ಇತ್ತ ದರ್ಶನ್ ಪರ ವಕೀಲರು ಕ್ರಾಸ್ ಎಕ್ಸಾಮಿನೇಷನ್ ಸಂಬಂಧ ಸಲ್ಲಿಸಿದ್ದ ಅರ್ಜಿಯ ಆದೇಶ ಮಂಗಳವಾರಕ್ಕೆ ಮುಂದೂಡಿಕೆಯಾಗಿದೆ.
Special
ವೈಲ್ಡ್ ಕಾರ್ಡ್ ಮೂಲಕ ಬಿಗ್‌ಬಾಸ್ ಮನೆಗೆ ಮೂವರು ಹೊಸ ಸ್ಪರ್ಧಿಗಳ ಎಂಟ್ರಿ – ಮನೆಯವರ ಮುಂದೆ ಪ್ರಶ್ನೆಗಳ ಮಳೆ
‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋನಲ್ಲಿ ಇದೀಗ ಮತ್ತೊಂದು ಹೊಸ ಟ್ವಿಸ್ಟ್ ಎದುರಾಗಿದ್ದು . ಈಗಾಗಲೇ ಹಲವು ತಿರುವುಗಳಿಂದ ಗಮನ ಸೆಳೆಯುತ್ತಿರುವ ಶೋಗೆ ಮೂವರು ಹೊಸ ಸ್ಪರ್ಧಿಗಳು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ಕಿಚ್ಚ ಸುದೀಪ್ ಅವರು ಹೊಸ ಸ್ಪರ್ಧಿಗಳನ್ನು ಬಿಗ್ ಬಾಸ್ ಮನೆಗೆ ಸ್ವಾಗತಿಸಿದ್ದಾರೆ.
ಭಾನುವಾರದ ಸಂಚಿಕೆಯ ಪ್ರೋಮೋವನ್ನು ‘ಕಲರ್ಸ್ ಕನ್ನಡ’ ವಾಹಿನಿ ಹಂಚಿಕೊಂಡಿದ್ದು, ಇದರಲ್ಲಿ ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳ ಎಂಟ್ರಿಯ ಝಲಕ್ ತೋರಿಸಲಾಗಿದೆ. ಆದರೆ ಪ್ರೋಮೋದಲ್ಲಿ ಈ ಮೂವರು ಯಾರು ಎಂಬುದನ್ನು ಮಾತ್ರ ಬಹಿರಂಗಪಡಿಸಿಲ್ಲ. ಹೀಗಾಗಿ ಹೊಸ ಸ್ಪರ್ಧಿಗಳ ಗುರುತು ತಿಳಿಯಲು ವೀಕ್ಷಕರು ಸಂಜೆಯ ಸಂಚಿಕೆಗಾಗಿ ಕಾಯುವಂತಾಗಿದೆ.

ಮೂವರು ಹೊಸ ಸ್ಪರ್ಧಿಗಳ ಎಂಟ್ರಿಯಿಂದ ಬಿಗ್‌ಬಾಸ್ ಮನೆಯ ವಾತಾವರಣವೂ ಬದಲಾಗುವ ಸಾಧ್ಯತೆ ಇದೆ. ಈಗಾಗಲೇ ಮನೆಯೊಳಗೆ ಹಲವು ವಿಚಾರಗಳ ಬಗ್ಗೆ ಚರ್ಚೆ, ಗೊಂದಲ ಮತ್ತು ಭಿನ್ನಾಭಿಪ್ರಾಯಗಳು ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಹೊಸ ಸ್ಪರ್ಧಿಗಳ ಆಗಮನ ಕುತೂಹಲ ಹೆಚ್ಚಿಸಿದೆ.
ಮನೆಯವರಿಗೆ ಪ್ರಶ್ನೆಗಳ ಸುರಿಮಳೆ
ಮನೆಗೆ ಎಂಟ್ರಿ ಕೊಟ್ಟ ಕೂಡಲೇ ಹೊಸ ಸ್ಪರ್ಧಿಗಳಲ್ಲಿ ಒಬ್ಬರು ಮನೆಯಲ್ಲಿರುವ ಸ್ಪರ್ಧಿಗಳಿಗೆ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಿದ್ದಾರೆ. ಗಗನ್‌ಗೆ, ‘ನಿಮ್ಮ ಮೊದಲ ದಿನದ ರಾವಣ ಎಲ್ಲಿ?’ ಎಂದು ಪ್ರಶ್ನೆ ಮಾಡಿದ್ದಾರೆ. ಸೌಂದರ್ಯಗೆ, ‘ಡಾನ್ ಕ್ಯಾರೆಕ್ಟರ್ ಎಲ್ಲಿ?’ ಎಂದು ಕೇಳಿದ್ದಾರೆ.

ಇನ್ನು ಆಸಿಯಾಗೆ, ‘ನೀವು ಸೋತಾಗ ವಿಕ್ಟಿಮ್ ಕಾರ್ಡ್ ಪ್ಲೇ ಮಾಡಿದ್ದು ಯಾಕೆ?’ ಎಂಬ ರೀತಿಯಲ್ಲಿ ಪ್ರಶ್ನೆ ಕೇಳಲಾಗಿದೆ. ಮತ್ತೊಂದೆಡೆ ಮಂಜನ ಕುರಿತಾಗಿಯೂ ಹೊಸ ಸ್ಪರ್ಧಿ ಪ್ರಶ್ನೆ ಎತ್ತಿರುವುದು ಪ್ರೋಮೋದಲ್ಲಿ ಕಂಡುಬಂದಿದೆ.
ಹೊಸ ಸ್ಪರ್ಧಿಗಳು ಮೊದಲ ದಿನವೇ ಮನೆಯವರ ಆಟ, ವರ್ತನೆ ಮತ್ತು ಹಿಂದಿನ ಘಟನೆಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿರುವುದು ಕುತೂಹಲ ಮೂಡಿಸಿದೆ. ಈ ಪ್ರಶ್ನೆಗಳಿಗೆ ಮನೆಯ ಸದಸ್ಯರು ಹೇಗೆ ಪ್ರತಿಕ್ರಿಯಿಸುತ್ತಾರೆ? ಹೊಸ ಸ್ಪರ್ಧಿಗಳ ಎಂಟ್ರಿಯಿಂದ ಮನೆಯೊಳಗೆ ಏನೆಲ್ಲಾ ಬದಲಾವಣೆ ಆಗಲಿದೆ ಕಾದು ನೋಡಬೇಕಿದೆ.
-
Mysore20 hours agoನಂಜನಗೂಡು ದೇಬೂರು ಸರ್ಕಾರಿ ಕಾಲೇಜಿನ ಆವ್ಯವಸ್ಥೆ ಬಯಲು : ಮಾಜಿ ಶಾಸಕ ಬಿ.ಹರ್ಷವರ್ಧನ್ ಖುದ್ದು ಭೇಟಿ
-
National22 hours agoತಮಿಳುನಾಡಿಗೆ 15 ದಿನ 3 ಸಾವಿರ ಕ್ಯೂಸೆಕ್ ನೀರು ಹರಿಸಲು ಕರ್ನಾಟಕಕ್ಕೆ CWMA ಆದೇಶ
-
National23 hours agoದರ್ಶನ್ಗೆ ಮತ್ತೊಂದು ಕಾನೂನು ಹಿನ್ನಡೆ: ಪ್ರದೂಷ್ ‘ಮಾಫಿ ಸಾಕ್ಷಿ’ ವಿಚಾರದ ಅರ್ಜಿ ವಜಾ
-
Chikmagalur19 hours agoಉಪ ವಲಯ ಅರಣ್ಯಾಧಿಕಾರಿ ರವಿಕುಮಾರ್ ಅಮಾನತು
-
Mysore21 hours agoನಾಳೆ ಅ.9ಕ್ಕೆ ನಂಜನಗೂಡಿನಲ್ಲಿ BSP ಬಹುಜನರ ಸಂಕಲ್ಪ ಸಮಾವೇಶ
-
National20 hours agoಜಿಎಸ್ಟಿ ಅಡಿಯಲ್ಲಿ ಬಂಧನ ಅಧಿಕಾರ ರದ್ದು ಪ್ರಸ್ತಾವನೆ: ವಿಚಾರಣಾ ಮಿತಿ ₹5 ಕೋಟಿಗೆ ಹೆಚ್ಚಳ
-
National3 hours agoಇಸ್ರೇಲ್ನಿಂದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ಗೆ ಶೌರ್ಯ ಪ್ರಶಸ್ತಿ ಘೋಷಣೆ
-
Kodagu23 hours agoಪೋಷಣ್ ಮಾಸಾಚರಣೆ ಮುಕ್ತಾಯ ಸಮಾರಂಭ: ಗ್ರಾಮೀಣ ಒಕ್ಕೂಟದಿಂದ ಅಂಗನವಾಡಿಗೆ ಕೊಡುಗೆ
