Connect with us

Hassan

ಅ.11ರಂದು ‘ಮಾಣಿಕ್ಯ ಸಂಭ್ರಮ–2026

Published

on

ಹಾಸನ: ಕನ್ನಡ ಸಾಹಿತ್ಯ ಪರಂಪರೆಯನ್ನು ಮೆಲುಕು ಹಾಕುವುದರೊಂದಿಗೆ ವಿವಿಧ ಸಾಹಿತ್ಯ ಪ್ರಕಾರಗಳನ್ನು ಗುರುತಿಸಿ ಗೌರವಿಸುವ ಹಾಗೂ ರಾಜ್ಯ ಮತ್ತು ಹೊರರಾಜ್ಯದ ಸಾಹಿತಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಮಾಣಿಕ್ಯ ಪ್ರಕಾಶನ ವತಿಯಿಂದ ಅ.11ರಂದು ‘ಮಾಣಿಕ್ಯ ಸಂಭ್ರಮ–2026’ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕೊಟ್ರೇಶ್ ಎಸ್ ಉಪ್ಪಾರ್ ಅವರು ತಿಳಿಸಿದರು. ನಗರದ ಸಂಸ್ಕೃತ ಭವನದಲ್ಲಿ ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ಮಾಣಿಕ್ಯ ಪ್ರಕಾಶನದ 11ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಸಂಭ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.


ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ ವಿಭಾಗದ ಉಪನ್ಯಾಸಕಿ ಹಾಗೂ ಹಿರಿಯ ಸಾಹಿತಿ ಡಾ. ಹಸೀನಾ ಎಚ್.ಕೆ. ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಲಿದ್ದು, ರಾಯಚೂರಿನ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಶಿವಾನಂದ ಕೆಳಗಿನಮನಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಹಲವು ಗಣ್ಯರು ಭಾಗವಹಿಸಲಿದ್ದಾರೆ.
28 ಕೃತಿಗಳಿಗೆ ದತ್ತಿ ಪುರಸ್ಕಾರ 2026ನೇ ಸಾಲಿನ ದತ್ತಿ ಪ್ರಶಸ್ತಿಗಾಗಿ ರಾಜ್ಯ ಹಾಗೂ ಹೊರರಾಜ್ಯಗಳಿಂದ 350ಕ್ಕೂ ಹೆಚ್ಚು ಕೃತಿಗಳು ಸ್ಪರ್ಧೆಗೆ ಬಂದಿದ್ದು, ಹಿರಿಯ ಸಾಹಿತಿಗಳ ತಂಡ ಎರಡು ತಿಂಗಳ ಕಾಲ ಮೌಲ್ಯಮಾಪನ ನಡೆಸಿ 13 ದತ್ತಿ ಪ್ರಶಸ್ತಿಗಳಿಗೆ 28 ಕೃತಿಗಳನ್ನು ಆಯ್ಕೆ ಮಾಡಿದೆ ಎಂದು ರವಿ ನಾಕಲಗೂಡು ತಿಳಿಸಿದರು.
ಬೆಳಗಿನ ಅವಧಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 12 ಸಾಧಕರನ್ನು ಗೌರವಿಸಲಾಗುವುದು. ರಾಜ್ಯಮಟ್ಟದ ಹೊಯ್ಸಳ ಸಾಂಸ್ಕೃತಿಕ ಹಾಗೂ ಹೊಯ್ಸಳ ಸಾಹಿತ್ಯ ಪ್ರಶಸ್ತಿಗಳನ್ನು ಸಹ ಪ್ರದಾನ ಮಾಡಲಾಗುವುದು ಎಂದರು.


ಐದು ಕೃತಿಗಳ ಲೋಕಾರ್ಪಣೆ ಮಧ್ಯಾಹ್ನ ಹಿರಿಯ ಸಾಹಿತಿ ಜಯಂತಿ ಚಂದ್ರಶೇಖರ್ ಅವರ ಅಧ್ಯಕ್ಷತೆಯಲ್ಲಿ ಕೃತಿ ಲೋಕಾರ್ಪಣೆ ಹಾಗೂ ಅಂತರರಾಜ್ಯಮಟ್ಟದ ಕವಿಗೋಷ್ಠಿ ನಡೆಯಲಿದೆ. ಕರ್ನಾಟಕ ಸೇರಿದಂತೆ ಆಂಧ್ರಪ್ರದೇಶ, ಚೆನ್ನೈ ಹಾಗೂ ಮಹಾರಾಷ್ಟ್ರದಿಂದ 150ಕ್ಕೂ ಹೆಚ್ಚು ಕವಿಗಳು ಭಾಗವಹಿಸಲಿದ್ದಾರೆ ಎಂದು ಪತ್ರಕರ್ತ ಹಾಗೂ ಸಾಹಿತಿ ನಾಗರಾಜ್ ಹೆತ್ತೂರು ಹೇಳಿದರು.
ಡಾ. ವಿಶ್ವೇಶ್ವರ ಮೇಟಿ ಅವರ ‘ಹಳ್ಳಿ ಎಂಬ ಬಳ್ಳಿ’, ಎಸ್.ಜಿ. ಕಡೇಮನಿಯವರ ‘ಸಾಲು ಹಣತೆಗಳು’, ಭಾರತಿ ಕೆ. ನಲವಡೆಯವರ ‘ಭಾವಸೆಲೆ’, ಗಿರಿಜಾ ನಿರ್ವಾಣಿಯವರ ‘ಕರಿಮುಗಿಲು’ ಹಾಗೂ ಎಚ್.ಜಿ. ನೀಲಮ್ಮ ಅವರ ಸಂಪಾದಿತ ‘ಬದುಕು ಹಾಡಿದ ಹಾಡು’ ಕೃತಿಗಳು ಲೋಕಾರ್ಪಣೆಯಾಗಲಿವೆ. ಪತ್ರಿಕಾಗೋಷ್ಠಿಯಲ್ಲಿ ಗಣೇಶ್ ತಮ್ಲಾಪುರ, ವರದರಾಜು ಡಿ.ಎಂ., ಎಚ್.ಎಸ್. ಭಾನುಮತಿ, ಕೆ.ಸಿ. ಗೀತಾ, ಜಯಶ್ರೀ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Continue Reading

Hassan

SIR ಕೈಬಿಡಿ, ಮುಖ್ಯ ಚುನಾವಣಾ ಆಯುಕ್ತರ ವಜಾಕ್ಕೆ ಆಗ್ರಹ

Published

on

ಹಾಸನ: ಪ್ರಜಾತಾಂತ್ರಿಕ ಹಕ್ಕುಗಳನ್ನು ರಕ್ಷಿಸಬೇಕು, ಅಪ್ರಜಾತಾಂತ್ರಿಕ ಎಂದು ಆರೋಪಿಸಲಾದ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ತಕ್ಷಣ ಕೈಬಿಡಬೇಕು ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿ AIDSO, SFI ಮತ್ತು DYFI ಸಂಘಟನೆಗಳ ನೇತೃತ್ವದಲ್ಲಿ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.


ನಗರದ ಹೇಮಾವತಿ ಪ್ರತಿಮೆ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ AIDSO ಜಿಲ್ಲಾ ಅಧ್ಯಕ್ಷೆ ಚೈತ್ರ, ಚುನಾವಣಾ ಆಯೋಗದ ನಿರ್ಧಾರಗಳು ಹಾಗೂ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯ ಕುರಿತು ಆಕ್ಷೇಪ ವ್ಯಕ್ತಪಡಿಸಿದರು.

ಚುನಾವಣಾ ಆಯೋಗದ ದಾಖಲೆಗಳ ಆಧಾರದಲ್ಲಿ ಪ್ರಕಟವಾದ ವರದಿಯನ್ನು ಉಲ್ಲೇಖಿಸಿದ ಅವರು, ಕಳೆದ ಹತ್ತು ತಿಂಗಳಲ್ಲಿ ಇಬ್ಬರು ಚುನಾವಣಾ ಆಯುಕ್ತರು 14 ವಿಷಯಗಳಲ್ಲಿ ಅಸಮ್ಮತಿ ದಾಖಲಿಸಿದ್ದಾರೆ ಎಂದು ಹೇಳಿದರು.

SIR ಪ್ರಕ್ರಿಯೆಯಿಂದ ದೇಶಾದ್ಯಂತ 13 ಕೋಟಿಗೂ ಅಧಿಕ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂಬ ಆರೋಪ ಮಾಡಿದ ಅವರು, ಹೊಸ ಮತದಾರರ ನೋಂದಣಿಗೆ ಸಂಬಂಧಿಸಿದ ಫಾರ್ಮ್-6ರ ನಿಯಮಗಳು ಯುವ ಮತದಾರರಿಗೆ ತೊಂದರೆ ಉಂಟುಮಾಡಬಹುದು. ಪೋಷಕರೊಂದಿಗಿನ ಸಂಬಂಧವನ್ನು ದೃಢೀಕರಿಸುವ ದಾಖಲೆಗಳನ್ನು ಕಡ್ಡಾಯಗೊಳಿಸುವುದರಿಂದ ಅರ್ಹ ಯುವಜನರು ಮತದಾನದ ಹಕ್ಕಿನಿಂದ ವಂಚಿತರಾಗುವ ಆತಂಕವಿದೆ ಎಂದು ತಿಳಿಸಿದರು. ಪ್ರಜಾತಾಂತ್ರಿಕ ಹಕ್ಕುಗಳ ರಕ್ಷಣೆಯ ಹೋರಾಟದಲ್ಲಿ ವಿದ್ಯಾರ್ಥಿಗಳು ಮತ್ತು ಯುವಜನರು ಮುಂಚೂಣಿಯಲ್ಲಿ ನಿಲ್ಲಬೇಕು ಎಂದು ಕರೆ ನೀಡಿದರು.

DYFI ಜಿಲ್ಲಾ ಸಂಚಾಲಕ ಪೃಥ್ವಿ ಮಾತನಾಡಿ, ಹಿಂದೆ ಚುನಾವಣಾ ಆಯೋಗ ಸ್ವತಂತ್ರ ಹಾಗೂ ನಿಷ್ಪಕ್ಷಪಾತ ಸಂಸ್ಥೆಯಾಗಿ ಗೌರವ ಪಡೆದಿತ್ತು. ಆದರೆ ಇಂದು ಆಯೋಗದ ಕಾರ್ಯವೈಖರಿ ಕುರಿತು ಗಂಭೀರ ಪ್ರಶ್ನೆಗಳು ಉದ್ಭವಿಸಿವೆ. ಚುನಾವಣಾ ವ್ಯವಸ್ಥೆಯ ಸ್ವಾಯತ್ತತೆ ಮತ್ತು ಜನರ ಮತದಾನದ ಹಕ್ಕುಗಳನ್ನು ರಕ್ಷಿಸುವುದು ಅಗತ್ಯ ಎಂದು ಹೇಳಿದರು.

SFI ಜಿಲ್ಲಾ ಕಾರ್ಯದರ್ಶಿ ರಮೇಶ್ ಮಾತನಾಡಿ, ಈ ಹಿಂದೆ ಬೂತ್ ಮಟ್ಟದ ಅಧಿಕಾರಿಗಳು ಮನೆಮನೆಗೆ ತೆರಳಿ ಮತದಾರರ ಪರಿಶೀಲನೆ ನಡೆಸುತ್ತಿದ್ದರು. ಆದರೆ ಈಗಿನ SIR ಪ್ರಕ್ರಿಯೆಯಲ್ಲಿ ದೇಶಾದ್ಯಂತ 13 ಕೋಟಿಗೂ ಹೆಚ್ಚು ಮತದಾರರ ಹೆಸರುಗಳನ್ನು ಕೈಬಿಡಲಾಗಿದೆ ಎಂದು ಆರೋಪಿಸಿದರು.

ಕರ್ನಾಟಕದಲ್ಲಿ 1.07 ಕೋಟಿ ಹಾಗೂ ಹಾಸನ ಜಿಲ್ಲೆಯಲ್ಲಿ 1,67,285 ಮತದಾರರ ಹೆಸರುಗಳನ್ನು ಕರಡು ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಉಲ್ಲೇಖಿಸಿದ ಅವರು, ಈ ಕುರಿತು ಸಮಗ್ರ ಪರಿಶೀಲನೆ ನಡೆಸಿ ಅರ್ಹ ಮತದಾರರ ಹಕ್ಕುಗಳನ್ನು ಖಾತರಿಪಡಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಗೆ ಬೆಂಬಲ ಸೂಚಿಸಿ ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್ ಹಾಗೂ ದಲಿತ ಮುಖಂಡ ಟಿ.ಆರ್. ವಿಜಯ್ ಕುಮಾರ್ ಮಾತನಾಡಿದರು.

AIDSO ಜಿಲ್ಲಾ ಕಾರ್ಯದರ್ಶಿ ಸುಷ್ಮಾ, DYFI ಮುಖಂಡರಾದ ಪ್ರದೀಪ್ ಮತ್ತು ಲೋಕೇಶ್, SFI ಪದಾಧಿಕಾರಿ ಮೇಘನ, AIDSO ಸದಸ್ಯ ಲೋಕೇಶ್ ಸೇರಿದಂತೆ ನೂರಾರು ವಿದ್ಯಾರ್ಥಿಗಳು, ಯುವಜನರು ಹಾಗೂ ಪ್ರಗತಿಪರ ಚಿಂತಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Continue Reading

Hassan

ಕ್ರೀಡಾ ಕ್ಷೇತ್ರದಲ್ಲಿ ಎಪಿಜೆ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಗಮನಾರ್ಹ ಸಾಧನೆ

Published

on

ಹಾಸನ: ಶಿಕ್ಷಣದ ಜತೆಗೆ ಕ್ರೀಡಾ ಕ್ಷೇತ್ರದಲ್ಲಿಯೂ ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಪ್ರದರ್ಶಿಸುವ ಮೂಲಕ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಕಾಲೇಜಿನ ಕೀರ್ತಿ ಹೆಚ್ಚಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ನಗರದ ಬಿ.ಕಾಟಿಹಳ್ಳಿಯಲ್ಲಿರುವ ಉನ್ನತಿ ಎಜುಕೇಶನ್ ಟ್ರಸ್ಟ್‌ನ ಎಪಿಜೆ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪದವಿಪೂರ್ವ ಕಾಲೇಜುಗಳ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಅಮೋಘ ಪ್ರದರ್ಶನ ನೀಡಿ ಹಲವು ವಿಭಾಗಗಳಲ್ಲಿ ಪ್ರಥಮ ಸ್ಥಾನ ಗಳಿಸುವ ಮೂಲಕ ರಾಜ್ಯ ಹಾಗೂ ರಾಷ್ಟ್ರಮಟ್ಟದ ಸ್ಪರ್ಧೆಗಳಿಗೆ ಆಯ್ಕೆಯಾಗಿದ್ದಾರೆ.


ಕ್ರೀಡೆಯೆಂದರೆ ಕೇವಲ ಗೆಲುವು-ಸೋಲಿನ ವಿಚಾರವಲ್ಲ. ಶಿಸ್ತು, ಆತ್ಮವಿಶ್ವಾಸ, ನಿರಂತರ ಅಭ್ಯಾಸ, ಸಮಯಪಾಲನೆ ಹಾಗೂ ಸೋಲನ್ನು ಸವಾಲಾಗಿ ಸ್ವೀಕರಿಸುವ ಮನೋಭಾವವನ್ನು ಬೆಳೆಸುವ ಪ್ರಮುಖ ವೇದಿಕೆಯಾಗಿದೆ.
ಈ ನಿಟ್ಟಿನಲ್ಲಿ ಎಪಿಜೆ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಕ್ರೀಡಾ ಕ್ಷೇತ್ರದಲ್ಲಿ ತೋರಿಸಿರುವ ಸಾಧನೆ ಇತರ ವಿದ್ಯಾರ್ಥಿಗಳಿಗೂ ಪ್ರೇರಣೆಯಾಗಿದೆ.

ರಾಷ್ಟ್ರಮಟ್ಟಕ್ಕೆ ಸಿಂಚನ ಕೆ:ಹೆಚ್::ಕಾಲೇಜಿನ ವಿದ್ಯಾರ್ಥಿನಿ ಸಿಂಚನ ಕೆ. ಹೆಚ್:ಅವರು ವೇಟ್‌ಲಿಫ್ಟಿಂಗ್‌ನಲ್ಲಿ ಗಮನಾರ್ಹ ಸಾಧನೆ ಮಾಡುವ ಮೂಲಕ ಕಾಲೇಜಿಗೆ ಮತ್ತೊಂದು ಹೆಮ್ಮೆ ತಂದಿದ್ದಾರೆ. ಶಿವಮೊಗ್ಗದಲ್ಲಿ ನಡೆದ ಪದವಿಪೂರ್ವ ಕಾಲೇಜುಗಳ ವೇಟ್‌ಲಿಫ್ಟಿಂಗ್ ಕ್ರೀಡಾಕೂಟದಲ್ಲಿ 48 ಕೆ.ಜಿ. ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿರುವ ಅವರು ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಕಠಿಣ ಪರಿಶ್ರಮ, ನಿರಂತರ ತರಬೇತಿ ಮತ್ತು ಆತ್ಮವಿಶ್ವಾಸದ ಫಲವಾಗಿ ಸಿಂಚನ ಈ ಸಾಧನೆ ಮಾಡಿದ್ದಾರೆ. ಮುಂದಿನ ನವೆಂಬರ್ ತಿಂಗಳಲ್ಲಿ ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಅವರು ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ. ರಾಷ್ಟ್ರಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿ ಕಾಲೇಜು ಹಾಗೂ ಜಿಲ್ಲೆಗೆ ಮತ್ತಷ್ಟು ಕೀರ್ತಿ ತರಬೇಕೆಂಬ ಆಶಯವನ್ನು ಎಲ್ಲರೂ ವ್ಯಕ್ತಪಡಿಸಿದ್ದಾರೆ.

ಕಾಲೇಜಿನ ವಿದ್ಯಾರ್ಥಿ ಪ್ರಕೃತ್ ಎತ್ತರ ಜಿಗಿತ ಹಾಗೂ ತ್ರಿವಿಧ ಜಿಗಿತ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ. ಯಶ್ವಂತ್ ಚೆಸ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದರೆ, ನವಜೋತ್ ಸಿಂಗ್ ಕರಾಟೆ ಸ್ಪರ್ಧೆಯಲ್ಲಿ ಹಾಗೂ ನೀರಜ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹಾಗೂ ಪ್ರೀತಮ್ ಬಿ.ಸ್ wieght ಲಿಫ್ಟಿಂಗ್ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟದ ಸ್ಪರ್ಧೆಗೆ ಅರ್ಹತೆ ಗಳಿಸಿದ್ದಾರೆ.

ಅದೇ ರೀತಿ ಟೆಕ್ವಾಂಡೋ ಸ್ಪರ್ಧೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಸ್ಕಂದನ್ 60 ಕೆ.ಜಿ. ವಿಭಾಗದಲ್ಲಿ, ನಿಹಾಲ್ 75 ಕೆ.ಜಿ. ವಿಭಾಗದಲ್ಲಿ ಹಾಗೂ ನೀರಜ್ ಕೆ.ಪಿ. 65 ಕೆ.ಜಿ. ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿ ಮುಂದಿನ ಹಂತಕ್ಕೆ ಆಯ್ಕೆಯಾಗಿದ್ದಾರೆ.
ಇನ್ನು ಚಿನ್ಮಯಿ 3000 ಮೀಟರ್ ನಡಿಗೆ (ವಾಕ್ ರೇಸ್) ಹಾಗೂ ಗುಡ್ಡಗಾಡು ಓಟ (ಕ್ರಾಸ್ ಕಂಟ್ರಿ) ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವುದು ವಿಶೇಷ ಸಾಧನೆಯಾಗಿದೆ. ಒಂದೇ ಕ್ರೀಡಾಕೂಟದಲ್ಲಿ ವಿವಿಧ ವಿಭಾಗಗಳಲ್ಲಿ ವಿದ್ಯಾರ್ಥಿಗಳು ತೋರಿದ ಈ ಸಾಮೂಹಿಕ ಸಾಧನೆ ಕಾಲೇಜಿನ ಕ್ರೀಡಾ ಚಟುವಟಿಕೆಗಳಿಗೆ ದೊರೆಯುತ್ತಿರುವ ಪ್ರೋತ್ಸಾಹಕ್ಕೆ ಸಾಕ್ಷಿಯಾಗಿದೆ.

ವಿದ್ಯಾರ್ಥಿಗಳ ಸಾಧನೆಗೆ ಅಭಿನಂದನೆ ಕ್ರೀಡೆಯಲ್ಲಿ ವಿದ್ಯಾರ್ಥಿಗಳು ತೋರಿರುವ ಈ ಸಾಧನೆಗೆ ಉನ್ನತಿ ಎಜುಕೇಶನ್ ಟ್ರಸ್ಟ್‌ನ ಕಾರ್ಯದರ್ಶಿ ಡಿ. ಮುರಳಿ, ಕಾಲೇಜಿನ ಆಡಳಿತ ಮಂಡಳಿ ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ. ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಸೂಕ್ತ ತರಬೇತಿ ಮತ್ತು ಪ್ರೋತ್ಸಾಹ ನೀಡುವ ಮೂಲಕ ಮುಂದಿನ ದಿನಗಳಲ್ಲಿ ಇನ್ನಷ್ಟು ವಿದ್ಯಾರ್ಥಿಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡುವಂತಾಗಲಿ ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದ್ದಾರೆ.

Continue Reading

Hassan

ಮುದಿಗೆರೆ ಸರ್ಕಾರಿ ಜಾಗ ಒತ್ತುವರಿ: 16 ಮಂದಿ ವಿರುದ್ಧ ಪ್ರಕರಣ

Published

on

ಬೇಲೂರು,: ಸಮೀಪದ ಮುದಿಗೆರೆ ಗ್ರಾಮದ ಸರ್ವೆ ನಂ. 3ರಲ್ಲಿರುವ 5.16 ಎಕರೆ ಸರ್ಕಾರಿ ಜಾಗವನ್ನು ಅತಿಕ್ರಮಿಸಿ ಅಕ್ರಮ ಕಟ್ಟಡಗಳನ್ನು ನಿರ್ಮಿಸಿ, ತೆರವು ಕಾರ್ಯಾಚರಣೆಗೆ ಅಡ್ಡಿಪಡಿಸಿದ ಆರೋಪದ ಮೇರೆಗೆ 16 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

ಈ ಸರ್ಕಾರಿ ಜಾಗವನ್ನು ಗ್ರಾಮಸ್ಥರ ಮನವಿ ಮೇರೆಗೆ ವಸತಿ ಶಾಲೆ, ಅಂಗನವಾಡಿ, ಆಟದ ಮೈದಾನ ಸೇರಿದಂತೆ ವಿವಿಧ ಸಾರ್ವಜನಿಕ ಉದ್ದೇಶಗಳಿಗೆ ಬಳಸಲು ಮೀಸಲಿಡಲಾಗಿತ್ತು. ಆದರೆ ಕೆಲವರು ಜಾಗಕ್ಕೆ ಅನಧಿಕೃತವಾಗಿ ಪ್ರವೇಶಿಸಿ ಅಕ್ರಮವಾಗಿ ಶೆಡ್‌ಗಳು ಹಾಗೂ ಕಟ್ಟಡಗಳನ್ನು ನಿರ್ಮಿಸಿರುವುದು ಅಧಿಕಾರಿಗಳ ಗಮನಕ್ಕೆ ಬಂದಿತ್ತು.

ಈ ಹಿನ್ನೆಲೆಯಲ್ಲಿ ತಹಶೀಲ್ದಾರ್‌ ಶ್ರೀಧರ್‌ ಕಂಕಣವಾಡಿ ನೇತೃತ್ವದಲ್ಲಿ ಅ. 6ರಂದು ಅಕ್ರಮ ನಿರ್ಮಾಣಗಳನ್ನು ತೆರವುಗೊಳಿಸಲು ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಕೆಲ ಗ್ರಾಮಸ್ಥರು ತೆರವು ಕಾರ್ಯಾಚರಣೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು.
ತೆರವು ಕಾರ್ಯಾಚರಣೆ ವೇಳೆ ಕೆಲವರು ಸೀಮೆಎಣ್ಣೆ ಹಾಗೂ ವಿಷದ ಬಾಟಲಿ ತೋರಿಸಿ ಬೆದರಿಕೆ ಹಾಕಿದರು. ಅಲ್ಲದೆ, ಟ್ಯಾಂಕ್‌ ಮೇಲೆ ಹತ್ತಿ ಜಿಗಿಯಲು ಯತ್ನಿಸಿದ ಘಟನೆಯೂ ನಡೆದಿದೆ ಎನ್ನಲಾಗಿದೆ. ಬೆಳಿಗ್ಗೆ 11 ಗಂಟೆಗೆ ಆರಂಭವಾದ ಕಾರ್ಯಾಚರಣೆ ಸಂಜೆ 4 ಗಂಟೆಯಾದರೂ ಪೂರ್ಣಗೊಳ್ಳಲಿಲ್ಲ. ಈ ಸಂದರ್ಭದಲ್ಲಿ ಪೊಲೀಸ್‌ ಮತ್ತು ಕಂದಾಯ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದಿತ್ತು ಎನ್ನಲಾಗಿದೆ.
ಸರ್ಕಾರಿ ಜಾಗಕ್ಕೆ ಅನಧಿಕೃತ ಪ್ರವೇಶ, ಅಕ್ರಮ ಕಟ್ಟಡ ನಿರ್ಮಾಣ ಹಾಗೂ ತೆರವು ಕಾರ್ಯಾಚರಣೆಗೆ ಅಡ್ಡಿಪಡಿಸಿದ ಆರೋಪದ ಹಿನ್ನೆಲೆಯಲ್ಲಿ ಕಸಬಾ ಹೋಬಳಿ ರಾಜಸ್ವ ನಿರೀಕ್ಷಕ ಭಾಸ್ಕರ್‌ ಅವರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಪ್ರಕರಣ ದಾಖಲಾಗಿರುವವರು:ಶ್ರೀನಾಥ, ಪುಟ್ಟರಾಜು, ಮಂಜುನಾಥ್‌, ಮಹೇಶ್ವರಪ್ಪ, ಚಂದ್ರಶೇಖರ್‌, ರವಿ, ಶಿವಮ್ಮ, ಶ್ಯಾಮಲಾ, ಭಾಗ್ಯ, ಸೋಮಯ್ಯ ಅವರ ಪತ್ನಿ ಶಿವಮ್ಮ, ಲಲಿತಮ್ಮ, ಪ್ರತಿಮಾ, ಜಯಲಕ್ಷ್ಮಿ, ರಜನಿ, ಕವಿತಾ ಹಾಗೂ ರೇಖಾ.
ಕರ್ನಾಟಕ ಭೂ ಕಂದಾಯ ಕಾಯ್ದೆ–1964ರ ವಿವಿಧ ಕಲಂಗಳಡಿ ಸರ್ಕಾರಿ ಜಮೀನಿಗೆ ಅನಧಿಕೃತ ಪ್ರವೇಶ, ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸುವುದು ಹಾಗೂ ಬೆದರಿಕೆ ಸೇರಿದಂತೆ ವಿವಿಧ ಆರೋಪಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಮನೆ ಪ್ರತಿಭಟನೆಯಲ್ಲಿ ಭಾಗವಹಿಸಿರುವ ಸುಮಾರು 25ಕ್ಕೂ ಹೆಚ್ಚು ಜನರಿಗೆ ಸರ್ಕಾರದಿಂದ ಮಂಜೂರಾಗಿರುವಂತಹ ನಿವೇಶನ ಜಮೀನು ದಾಖಲೆಗಳನ್ನು ಹೊಂದಿದ್ದರು ಸಹ ಸರ್ಕಾರ ಜಾಗವನ್ನು ಒತ್ತುವರಿ ಮಾಡುವ ಉದ್ದೇಶದಿಂದ ಪ್ರತಿಭಟನೆ ಮಾಡಲಾಗಿದೆ ಎಂದು ತಿಳಿಸಿದರು
ಜಿಲ್ಲಾಧಿಕಾರಿಗೆ ವರದಿ:

ಮುದಿಗೆರೆ ಸರ್ವೆ ನಂ. 3ರ 5.16 ಎಕರೆ ಸರ್ಕಾರಿ ಜಾಗವನ್ನು ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಡುವ ಕುರಿತು ಹಾಗೂ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ ಕುರಿತು ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ ಎಂದು ತಹಶೀಲ್ದಾರ್‌ ಶ್ರೀಧರ್‌ ಕಂಕಣವಾಡಿ ತಿಳಿಸಿದ್ದಾರೆ.

ತಹಸೀಲ್ದಾರ್‌ ಹೇಳಿಕೆ:
“ಮುದಿಗೆರೆ ಸರ್ವೆ ನಂ. 3ರ 5.16 ಎಕರೆ ಸರ್ಕಾರಿ ಜಾಗವನ್ನು ಗ್ರಾಮಸ್ಥರ ಮನವಿ ಮೇರೆಗೆ ವಸತಿ ಶಾಲೆ, ಅಂಗನವಾಡಿ, ಆಟದ ಮೈದಾನ ಸೇರಿದಂತೆ ಸಾರ್ವಜನಿಕ ಉದ್ದೇಶಗಳಿಗೆ ಮೀಸಲಿಡಲಾಗಿದೆ. ಜಾಗದಲ್ಲಿ ಅಕ್ರಮ ಕಟ್ಟಡ ನಿರ್ಮಿಸಿರುವ ಮಾಹಿತಿ ಹಿನ್ನೆಲೆಯಲ್ಲಿ ತೆರವು ಕಾರ್ಯಾಚರಣೆ ನಡೆಸಲಾಗಿತ್ತು. ಈ ವೇಳೆ ಕಾರ್ಯಾಚರಣೆಗೆ ಅಡ್ಡಿಪಡಿಸಿದ ಆರೋಪದ ಮೇರೆಗೆ 16 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಕುರಿತು ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ, ಅಲ್ಲದೆ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರಿಗೂ ಸಹ ಮಂಜೂರಾಗಿರುವಂತಹ ಜಮೀನು ಹಾಗೂ ಮನೆಗಳು ಇರುವುದಕ್ಕೆ ಸಂಪೂರ್ಣ ದಾಖಲೆಗಳನ್ನು ಈಗಾಗಲೇ ಕಂದಾಯ ಇಲಾಖೆಯಿಂದ ಪರಿಶೀಲಿಸಲಾಗಿದೆ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು” ಎಂದು ತಹಶೀಲ್ದಾರ್‌ ಶ್ರೀಧರ್‌ ಕಂಕಣವಾಡಿ ತಿಳಿಸಿದ್ದಾರೆ.

Continue Reading

Trending

error: Content is protected !!