Connect with us

Hassan

ಕಟ್ಟಾಯ ಹೋಬಳಿಗೆ ಯಗಚಿ ನೀರು ಹರಿಸಲು ಆಗ್ರಹ: ಜೆಡಿಎಸ್ ವತಿಯಿಂದ ಪ್ರತಿಭಟನೆ

Published

on

ಹಾಸನ: ಯಗಚಿ ಜಲಾಶಯದಿಂದ ಹಾಸನ ತಾಲೂಕಿನ ಕಟ್ಟಾಯ ಹೋಬಳಿ ವ್ಯಾಪ್ತಿಯ ಕೆರೆ-ಕಟ್ಟೆಗಳಿಗೆ ನೀರು ಹರಿಸಿ, ಜನರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ಮಾಜಿ ಸಚಿವ ಎಚ್.ಕೆ.ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಕಾರ್ಯಕರ್ತರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಕಟ್ಟಾಯ ಹೋಬಳಿ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಮಳೆ ಕೊರತೆಯಿಂದ ಕೆರೆ-ಕಟ್ಟೆಗಳು ಒಣಗಿದ್ದು, ಅಂತರ್ಜಲ ಮಟ್ಟವೂ ಕುಸಿದಿದೆ. ಇದರಿಂದ ರೈತರು ಬೆಳೆದ ಬೆಳೆಗಳು ಒಣಗುತ್ತಿದ್ದು, ಗ್ರಾಮೀಣ ಪ್ರದೇಶದಲ್ಲಿ ಬರದ ಪರಿಸ್ಥಿತಿ ನಿರ್ಮಾಣವಾಗಿದೆ. ಜನರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.

ಯಗಚಿ ಜಲಾಶಯದಲ್ಲಿ ಲಭ್ಯವಿರುವ ನೀರನ್ನು ಬಳಸಿಕೊಂಡು ನಾಲಾ ವ್ಯಾಪ್ತಿಯ ಎಲ್ಲ ಗ್ರಾಮಗಳ ಕೆರೆ-ಕಟ್ಟೆಗಳನ್ನು ತುಂಬಿಸಬೇಕು. ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಜನರು ಹಾಗೂ ಜಾನುವಾರುಗಳ ಹಿತದೃಷ್ಟಿಯಿಂದ ತುರ್ತಾಗಿ ನೀರು ಹರಿಸಬೇಕು ಎಂದು ಒತ್ತಾಯಿಸಿದರು. ಅಂಕಪುರ, ಕಟ್ಟಾಯ, ಕಬ್ಬತ್ತಿ ಸೇರಿದಂತೆ ಹಲವು ಗ್ರಾಮಗಳ ನಾಲೆಗಳಿಗಾಗಿ ಭೂಸ್ವಾಧೀನ ಮಾಡಿಕೊಂಡು ಹಲವು ವರ್ಷಗಳು ಕಳೆದಿದ್ದರೂ ಭೂಮಾಲೀಕರಿಗೆ ಇನ್ನೂ ಸೂಕ್ತ ಪರಿಹಾರ ದೊರೆತಿಲ್ಲ. ಸರ್ಕಾರ ಕೂಡಲೇ ಬಾಕಿ ಇರುವ ಪರಿಹಾರವನ್ನು ಬಿಡುಗಡೆ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಜೆಡಿಎಸ್ ಹಾಸನ ತಾಲೂಕು ಅಧ್ಯಕ್ಷ ಎಸ್. ದ್ಯಾವೇಗೌಡ, ಜಿಲ್ಲಾವಕ್ತಾರ ರಘು ಹೊಂಗೆರೆ, ಎಚ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಜಯರಾಂ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Continue Reading

Hassan

ಶುಂಠಿ ಬೆಳೆಗೆ ನೀಡಿದ್ದ ಜಮೀನಿನ ಹಣ ಕೇಳಿದ್ದಕ್ಕೆ ಮಾರಣಾಂತಿಕ ಹಲ್ಲೆ

Published

on

ಬೇಲೂರು: ಶುಂಠಿ ಬೆಳೆಯಲು ಜಮೀನು ನೀಡಿದ್ದಕ್ಕೆ ಬಾಕಿ ಹಣ ಕೇಳಲು ಹೋದ ವ್ಯಕ್ತಿಯ ಮೇಲೆ ಇಬ್ಬರು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ತಾಲೂಕಿನ ನೆಟ್ಟೇಕೆರೆ ಗ್ರಾಮದಲ್ಲಿ ನಡೆದಿದೆ.

ನೆಟ್ಟೇಕೆರೆ ಗ್ರಾಮದ ಅಣ್ಣೇಗೌಡ ಅವರ ಪುತ್ರ ಚಂದ್ರೇಗೌಡ ಗಾಯಾಳುವಾಗಿದ್ದು, ಹಲ್ಲೆಗೊಳಗಾಗಿದ್ದಾರೆ. ಪ್ರಕರಣದಲ್ಲಿ ಬಿಕ್ಕೋಡು ಗ್ರಾಮದ ಸಂತೋಷ ಹಾಗೂ ಆಲೂರು ತಾಲೂಕಿನ ಕೋಟಿಗನಹಳ್ಳಿ ಪಾಳ್ಯದ ಕುಮಾರ್ ಹಲ್ಲೆ ನಡೆಸಿರುವ ಆರೋಪಿಗಳು.

ಚಂದ್ರೇಗೌಡ ಅವರು ಶುಂಠಿ ಬೆಳೆ ಬೆಳೆಯಲು ತಮ್ಮ ಭೂಮಿಯನ್ನು ಆರೋಪಿಗಳಿಗೆ ನೀಡಿದ್ದರು. ಬೆಳೆಯ ಹಣದ ವಿಚಾರವಾಗಿ ಬಾಕಿ ಹಣ ನೀಡುವಂತೆ ಕೇಳಲು ಹೋದ ಸಂದರ್ಭದಲ್ಲಿ ಆರೋಪಿಗಳು ಹಣ ನೀಡಲು ನಿರಾಕರಿಸಿ, ‘ಹಣ ಕೊಡುವುದಿಲ್ಲ, ನಿಮ್ಮನ್ನು ಕೊಲೆ ಮಾಡುತ್ತೇನೆ’ ಎಂದು ಬೆದರಿಕೆ ಹಾಕಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಹಲ್ಲೆಯಲ್ಲಿ ಚಂದ್ರೇಗೌಡ ಅವರಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Continue Reading

Hassan

ಅಮಾನತ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 29ನೇ ವಾರ್ಷಿಕ ಮಹಾಸಭೆ

Published

on

ಅರಸೀಕೆರೆ: ನಗರದ ಹುಳಿಯಾರು ರಸ್ತೆ ಪಕ್ಕದಲ್ಲಿರುವ ಮದೀನಾ ಶಾದಿಮಹಲ್‌ನಲ್ಲಿ ದಿ ಅಮಾನತ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ.ಯ 29ನೇ ವರ್ಷದ 2025–26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಅಲ್ ಹಜ್ ಯೂನುಸ್ ಮೊಹಮ್ಮದ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.


ಸಭೆಯಲ್ಲಿ ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಸಂಸ್ಥೆಯ ಮುಂದಿನ ಬೆಳವಣಿಗೆ ಹಾಗೂ ಸದಸ್ಯರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಹಲವು ಸಲಹೆ–ಸೂಚನೆಗಳನ್ನು ನೀಡಿದರು.
ಸಂಘದ ವ್ಯವಸ್ಥಾಪಕ ಕೆ. ನಜೀರ್ ಅಹ್ಮದ್ ಅವರು 2025–26ನೇ ಸಾಲಿನಲ್ಲಿ ಸಂಘವು ರೂ, 9,62,141, ರೂಪಾಯಿಗಳನ್ನು ಲಾಭ ಗಳಿಸಿರುವ ಬಗೆ ಹಾಗೂ ಸಂಸ್ಥೆಯು ಜಮಾ–ಖರ್ಚು, ಲಾಭ–ನಷ್ಟ ಸೇರಿದಂತೆ ವಿವಿಧ ಆರ್ಥಿಕ ಚಟುವಟಿಕೆಗಳ ಕುರಿತು ಸದಸ್ಯರಿಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು.

ಸಭೆಯಲ್ಲಿ ಸಂಸ್ಥೆಯ ಸದಸ್ಯರ ಮಕ್ಕಳಲ್ಲಿ ಪದವಿ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸುನ್ನಿ ಮುಸ್ಲಿಂ ಜಮಾತ್ ಕಮಿಟಿಯ ಅಧ್ಯಕ್ಷ ಅಪ್ರೋಜ್ ಪಾಷಾ, ಸಹಕಾರ ಅಭಿವೃದ್ಧಿ ಅಧಿಕಾರಿಗಳಾದ ದೇವರಾಜ್ ಜಿ ಅವರನ್ನು ಸನ್ಮಾನಿಸಲಾಯಿತು.

ಅಧ್ಯಕ್ಷ ಅಲ್ ಹಜ್ ಯೂನುಸ್ ಮೊಹಮ್ಮದ್ ಮಾತನಾಡಿ, ಸದಸ್ಯರು ಪಡೆದಿರುವ ಸಾಲವನ್ನು ನಿಗದಿತ ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡುವ ಮೂಲಕ ಸಂಸ್ಥೆಯ ಆರ್ಥಿಕ ಸದೃಢತೆಗೆ ಸಹಕಾರ ನೀಡಬೇಕು. ಸದಸ್ಯರ ಸಹಕಾರದಿಂದ ಸಂಸ್ಥೆಯನ್ನು ಇನ್ನಷ್ಟು ಉತ್ತಮವಾಗಿ ಅಭಿವೃದ್ಧಿಪಡಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ಸಭೆಯಲ್ಲಿ ಉಪಾಧ್ಯಕ್ಷ ಜಮೀಲ್ ಪಾಷಾ ಜೆ.ಕೆ.,, ನಿರ್ದೇಶಕರಾದ ಆರ್. ನಿಜಾಮುದ್ದೀನ್,, ರೋಷನ್,ತೌಸೀಫ್ ಖಾನ್ ಕೆ.ಕೆ. ಸೈಯದ್ ಅನ್ಸರ್, ಮುನಾಫ್ ಬೇಗ್, ನಸೀಮಾ ಬಾನು, ಸೀಮಾ ಖಾನಂ, ಸೇರಿದಂತೆ ಸಂಘದ ಸದಸ್ಯರು ಉಪಸ್ಥಿತರಿದ್ದರು.

Continue Reading

Hassan

ಬೇಲೂರು ಪುರಸಭೆ ವತಿಯಿಂದ ಸ್ವಚ್ಛತಾ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ

Published

on

​ಬೇಲೂರು : ಪಟ್ಟಣದ ನೈರ್ಮಲ್ಯ ಮತ್ತು ಸಮಾಜದ ಆರೋಗ್ಯ ಕಾಪಾಡುವಲ್ಲಿ ಪೌರಕಾರ್ಮಿಕರ ಪಾತ್ರ ಅಪಾರ. ನಗರದ ಸ್ವಚ್ಛತೆಯನ್ನು ಕಾಯ್ದುಕೊಳ್ಳಲು ಪ್ರತಿಯೊಬ್ಬ ನಾಗರಿಕರೂ ಪುರಸಭೆಯೊಂದಿಗೆ ಕೈಜೋಡಿಸಬೇಕು ಎಂದು ಬೇಲೂರು ಪುರಸಭೆ ಅಧ್ಯಕ್ಷ ಆಕ್ರಂ ಶರೀಫ್ ಮನವಿ ಮಾಡಿದರು.


​ಪಟ್ಟಣದಲ್ಲಿ ಪುರಸಭೆ ವತಿಯಿಂದ ಹಮ್ಮಿಕೊಂಡಿದ್ದ ಸ್ವಚ್ಛತಾ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,​ ಪ್ರತಿಯೊಬ್ಬರೂ ಮನೆಗಳಲ್ಲೇ ನಾಲ್ಕು ವಿಧದ ತ್ಯಾಜ್ಯಗಳನ್ನು ಕಡ್ಡಾಯವಾಗಿ ವಿಂಗಡಿಸಬೇಕು. ಈ ನಿಯಮವು ಈಗಾಗಲೇ ಕಾನೂನಾಗಿ ಜಾರಿಯಲ್ಲಿದ್ದು, ಸಾರ್ವಜನಿಕರು ಒಣ ತ್ಯಾಜ್ಯ, ಹಸಿ ತ್ಯಾಜ್ಯ ಸೇರಿದಂತೆ ವಿವಿಧ ಮಾದರಿಯ ಕಸವನ್ನು ಪ್ರತ್ಯೇಕವಾಗಿಯೇ ವಿಂಗಡಿಸಿ ಪೌರಕಾರ್ಮಿಕರಿಗೆ ನೀಡಬೇಕು,” ಎಂದು ವಿನಂತಿಸಿಕೊಂಡರು.

ಪುರಸಭೆ ಆರೋಗ್ಯ ಅಧಿಕಾರಿ ಜ್ಯೋತಿ ಮಾತನಾಡಿ, ಮಹಾತ್ಮ ಗಾಂಧೀಜಿಯವರ ‘ಕಸ ಮುಕ್ತ ಭಾರತ’ದ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಸೆಪ್ಟೆಂಬರ್ 15ರಿಂದ ಅಕ್ಟೋಬರ್ 2ರ ಗಾಂಧಿ ಜಯಂತಿಯವರೆಗೆ ‘ಸ್ವಚ್ಛತೆಯೇ ಸೇವೆ’ ಅಭಿಯಾನ ಆಯೋಜಿಸಲಾಗಿದೆ ಎಂದರು.

​ಇದುವರೆಗೆ ಸಾರ್ವಜನಿಕರು ಮನೆಗಳಲ್ಲಿ ಹಸಿ ಮತ್ತು ಒಣ ಕಸವನ್ನು ಮಾತ್ರ ಪ್ರತ್ಯೇಕಿಸುತ್ತಿದ್ದರು. ಆದರೆ ಇನ್ಮುಂದೆ ತ್ಯಾಜ್ಯವನ್ನು ಹಸಿ ಕಸ, ಒಣ ಕಸ, ಅಪಾಯಕಾರಿ ತ್ಯಾಜ್ಯ ಹಾಗೂ ಇ-ತ್ಯಾಜ್ಯ ಎಂದು ನಾಲ್ಕು ಬಗೆಯಾಗಿ ವಿಂಗಡಿಸಿ ಪುರಸಭೆಯ ತ್ಯಾಜ್ಯ ಸಂಗ್ರಹಣಾ ವಾಹನಗಳಿಗೆ ನೀಡಬೇಕು ಎಂದು ಅವರು ಮನವಿ ಮಾಡಿದರು.
​ಪಟ್ಟಣದ ನೈರ್ಮಲ್ಯ ನಿರ್ವಹಣೆಯ ಬಗ್ಗೆ ವಿವರ ನೀಡಿದ ಅವರು, “ನಮ್ಮ ವ್ಯಾಪ್ತಿಯಲ್ಲಿ ಪ್ರತಿದಿನ ಸರಾಸರಿ 8 ಮೆಟ್ರಿಕ್ ಟನ್ (TPD) ಕಸ ಉತ್ಪತ್ತಿಯಾಗುತ್ತಿದೆ. ಇದನ್ನು ಸುಸೂತ್ರವಾಗಿ ವಿಲೇವಾರಿ ಮಾಡಲು 56 ಜನ ಪೌರಕಾರ್ಮಿಕರು ಶ್ರಮಿಸುತ್ತಿದ್ದಾರೆ. ತ್ಯಾಜ್ಯ ಸಂಗ್ರಹಣೆ ಹಾಗೂ ಸಾಗಾಣಿಕೆಗಾಗಿ ಪ್ರಸ್ತುತ 2 ಟ್ರ್ಯಾಕ್ಟರ್ ಹಾಗೂ 5 ಆಟೋ ವಾಹನಗಳನ್ನು ಬಳಸಿಕೊಳ್ಳಲಾಗುತ್ತಿದೆ,” ಎಂದು ವಿವರಿಸಿದರು.

ಪುರಸಭೆಯ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಎ. ಏರ್ ಅಶೋಕ್ ಮಾತನಾಡಿ, “ಬೇಲೂರು ಇವತ್ತು ಸುಂದರವಾಗಿದೆ ಎಂದರೆ ಅದಕ್ಕೆ ಪೌರಕಾರ್ಮಿಕರೇ ಮುಖ್ಯ ಕಾರಣ. ಬೆಳಿಗ್ಗೆ 4 ಗಂಟೆಗೆ ಎದ್ದು, ವಿಶ್ವ ಪಾರಂಪರಿಕ ತಾಣವಾದ ಚೆನ್ನಕೇಶವಸ್ವಾಮಿ ದೇವಾಲಯದ ಮುಂಭಾಗ, ನೆಹರೂ ನಗರ, ಜ್ಯೋತಿ ನಗರ ಸೇರಿದಂತೆ ಪ್ರತಿಯೊಂದು ಗಲ್ಲಿ-ಗಲ್ಲಿಯಲ್ಲೂ ಕರ್ತವ್ಯ ನಿರ್ವಹಿಸುವ ಪೌರಕಾರ್ಮಿಕರ ಶ್ರಮಕ್ಕೆ ಬೇಲೂರು ಜನತೆಯ ಪರವಾಗಿ ಧನ್ಯವಾದಗಳು ಸಲ್ಲಬೇಕು,” ಎಂದು ಶ್ಲಾಘಿಸಿದರು. ಅಲ್ಲದೆ, ಪುರಸಭೆಯ ಹಾಲಿ ಅವಧಿ ಮುಕ್ತಾಯದ ಹಂತದಲ್ಲಿದ್ದು, ಇದು ನಮಗೆ ಕೊನೆಯ ಅವಕಾಶವಾಗಿದೆ ಎಂದರು.
​ಈ ಕಾರ್ಯಕ್ರಮದಲ್ಲಿ ಪುರಸಭೆ ಉಪಾಧ್ಯಕ್ಷೆ ಉಷಾಸತೀಶ್, ಸದಸ್ಯರಾದ ತೀರ್ಥಕುಮಾರಿ, ಜಮಾಲ್ ಜಗದೀಶ್, ಜಾಮ್ಮಿಲಾ, ಸೌಮ್ಯ, ಮೀನಾಕ್ಷಿ, ಮಣಿ, ಪುರಸಭೆ ಮುಖ್ಯಾಧಿಕಾರಿ ಬಸವರಾಜು ಶಿಗ್ಗಾವಿ ಹಾಗೂ ಪೌರಕಾರ್ಮಿಕರು ಉಪಸ್ಥಿತರಿದ್ದರು.

Continue Reading

Trending

error: Content is protected !!