State
ರೇಷನ್ ಕಾರ್ಡ್ ಇ-ಕೆವೈಸಿಗೆ ಅಕ್ಟೋಬರ್ 20ರವರೆಗೆ ಅವಕಾಶ!!
ಪಡಿತರ ಚೀಟಿದಾರರಿಗೆ ರಾಜ್ಯ ಸರ್ಕಾರ ಮಹತ್ವದ ಮಾಹಿತಿಯನ್ನು ನೀಡಿದ್ದು, ರೇಷನ್ ಕಾರ್ಡ್‌ಗಳ ಇ-ಕೆವೈಸಿ (e-KYC) ಪ್ರಕ್ರಿಯೆಗೆ ನೀಡಲಾಗಿದ್ದ ಗಡುವನ್ನು ವಿಸ್ತರಿಸಲಾಗಿದೆ. ಜನಸಾಮಾನ್ಯರಿಗೆ ಯಾವುದೇ ತೊಂದರೆಯಾಗದಂತೆ ಹಾಗೂ ಅರ್ಹ ಫಲಾನುಭವಿಗಳಿಗೆ ಪಡಿತರ ವಿತರಣೆಯಲ್ಲಿ ಸಮಸ್ಯೆಯಾಗದಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ.

ಇ-ಕೆವೈಸಿ ಗಡುವು ವಿಸ್ತರಣೆ:
ರೇಷನ್ ಕಾರ್ಡ್‌ಗಳ ಇ-ಕೆವೈಸಿ ಪೂರ್ಣಗೊಳಿಸಲು ಈ ಹಿಂದೆ ಸೆಪ್ಟೆಂಬರ್ 30ರವರೆಗೆ ಕಾಲಾವಕಾಶ ನೀಡಲಾಗಿತ್ತು. ಇದೀಗ ಈ ಅವಧಿಯನ್ನು ಅಕ್ಟೋಬರ್ 20ರವರೆಗೆ ವಿಸ್ತರಿಸಲಾಗಿದೆ. ಹೀಗಾಗಿ ಇನ್ನುಳಿದಿರುವ ಫಲಾನುಭವಿಗಳು ನಿಗದಿತ ಅವಧಿಯೊಳಗೆ ತಮ್ಮ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಕೊಳ್ಳಬಹುದು.
ಇ-ಕೆವೈಸಿ ಪ್ರಕ್ರಿಯೆಯ ಮೂಲಕ ರೇಷನ್ ಕಾರ್ಡ್‌ನಲ್ಲಿರುವ ಫಲಾನುಭವಿಗಳ ವಿವರಗಳನ್ನು ಪರಿಶೀಲಿಸಲಾಗುತ್ತದೆ. ಪಡಿತರ ವ್ಯವಸ್ಥೆಯಲ್ಲಿ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ತಲುಪಿಸುವ ಉದ್ದೇಶದಿಂದ ಈ ಪ್ರಕ್ರಿಯೆ ನಡೆಸಲಾಗುತ್ತಿದೆ.
ಪಡಿತರ ವಿತರಣಾ ಅವಧಿಯಲ್ಲೂ ಬದಲಾವಣೆ:
ಫಲಾನುಭವಿಗಳಿಗೆ ಅನುಕೂಲವಾಗುವಂತೆ ಪಡಿತರ ವಿತರಣೆಯ ಸಮಯದಲ್ಲಿಯೂ ಬದಲಾವಣೆ ಮಾಡಲಾಗಿದೆ. ಈ ಹಿಂದೆ 6 ಗಂಟೆಗಳ ಕಾಲ ನಡೆಯುತ್ತಿದ್ದ ಪಡಿತರ ವಿತರಣಾ ಅವಧಿಯನ್ನು ಇದೀಗ 8 ಗಂಟೆಗಳವರೆಗೆ ವಿಸ್ತರಿಸಲಾಗಿದೆ. ಇದರಿಂದ ಪಡಿತರ ಪಡೆಯಲು ಬರುವ ಜನರಿಗೆ ಹೆಚ್ಚಿನ ಸಮಯ ಲಭ್ಯವಾಗಲಿದೆ. ಬೆಳಗ್ಗೆ ಅಥವಾ ಸಂಜೆ ತಮ್ಮ ಕೆಲಸದ ಸಮಯಕ್ಕೆ ಅನುಗುಣವಾಗಿ ಪಡಿತರ ಪಡೆಯಲು ಸಾಧ್ಯವಾಗುವಂತೆ ವಿತರಣಾ ಅವಧಿಯನ್ನು ವಿಸ್ತರಿಸಿರುವುದು ಫಲಾನುಭವಿಗಳಿಗೆ ಅನುಕೂಲವಾಗಲಿದೆ.

ಅರ್ಹರಿಗೆ ಪಡಿತರ ತಲುಪಿಸುವ ಗುರಿ:
ಯಾವುದೇ ಅರ್ಹ ಕುಟುಂಬವು ಪಡಿತರ ಸೌಲಭ್ಯದಿಂದ ವಂಚಿತವಾಗಬಾರದು ಎಂಬ ಉದ್ದೇಶದಿಂದ ಇ-ಕೆವೈಸಿ ಗಡುವನ್ನು ವಿಸ್ತರಿಸಲಾಗಿದೆ. ಬಾಕಿ ಇರುವ ಫಲಾನುಭವಿಗಳು ಅಕ್ಟೋಬರ್ 20ರೊಳಗೆ ಇ-ಕೆವೈಸಿ ಪೂರ್ಣಗೊಳಿಸಿಕೊಳ್ಳುವುದು ಅಗತ್ಯ.
ಪ್ರತಿಯೊಬ್ಬರಿಗೂ ಪಡಿತರ, ಪ್ರತಿಯೊಂದು ಕುಟುಂಬಕ್ಕೂ ನೆಮ್ಮದಿ ಎಂಬ ಆಶಯದೊಂದಿಗೆ ಪಡಿತರ ವ್ಯವಸ್ಥೆಯನ್ನು ಮತ್ತಷ್ಟು ಸುಗಮಗೊಳಿಸುವ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
State
ಯಶವಂತರಾಯ ಪಾಟೀಲ್ ರಾಜೀನಾಮೆ : ಡಿಕೆಶಿ ಸ್ಪಷ್ಟನೆ
ಬೆಂಗಳೂರು: ಇಂಡಿ ಶಾಸಕ ಯಶವಂತರಾಯ ಗೌಡ ಪಾಟೀಲ್ ಅವರ ರಾಜೀನಾಮೆ ವಿಚಾರವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟನೆ ನೀಡಿದ್ದು, ಇದು ಬೇರೆ ರೀತಿಯ ರಾಜೀನಾಮೆ ಅಲ್ಲ. ರೈತರು ಹಾಗೂ ಜನರಿಗಾಗಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಿದ್ದಾರೆ.

ವಿಧಾನಸಭೆಯಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, “ಯಶವಂತರಾಯ ಗೌಡ ಪಾಟೀಲ್ ಅವರು ನನ್ನನ್ನು ಭೇಟಿ ಮಾಡಿ ಮಾತನಾಡಿದ್ದಾರೆ. ಅವರೊಂದಿಗೆ ಚರ್ಚಿಸಿ ಸಮಾಧಾನಪಡಿಸಿ ಕಳುಹಿಸಿದ್ದೇನೆ. ಇದು ಈಶ್ವರಪ್ಪ ಅವರ ರೀತಿಯ ರಾಜೀನಾಮೆ ಅಲ್ಲ. ರೈತರು ಮತ್ತು ಜನರಿಗಾಗಿ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ” ಎಂದರು.
“224 ಶಾಸಕರಿಗೂ ತಾಳ್ಮೆಯಿಂದ ಇರುವಂತೆ ನಾನು ತಿಳಿಸಿದ್ದೇನೆ. ರಾಜ್ಯದಲ್ಲಿ ಬರ ಪರಿಸ್ಥಿತಿ ಗಂಭೀರವಾಗಿದೆ. ಪ್ರಧಾನಿಯವರೇ ಬರ ಪರಿಸ್ಥಿತಿ ಕುರಿತು ಎಚ್ಚರಿಕೆ ನೀಡಿದ್ದಾರೆ. ನಾನು ರಾಜ್ಯ ಪ್ರವಾಸ ಮಾಡಿದ್ದು, ಬರದ ಪರಿಸ್ಥಿತಿಯನ್ನು ಗಮನಿಸಿದ್ದೇನೆ” ಎಂದು ಸಿಎಂ ಹೇಳಿದರು.
ಬರ ಘೋಷಣೆಗೆ ಮಾನದಂಡ ಅಗತ್ಯ
ಬರ ಪರಿಸ್ಥಿತಿ ಕುರಿತು ಮಾತನಾಡಿದ ಅವರು, “ಇಂಡಿ ಶಾಸಕ ನನ್ನ ಕಚೇರಿಯನ್ನು ಸಂಪರ್ಕಿಸಲು ಪ್ರಯತ್ನಿಸಿದ್ದರು. ನಾನು ಹೊರಗಡೆ ಇದ್ದ ಕಾರಣ ತಕ್ಷಣ ಸಂಪರ್ಕ ಸಾಧ್ಯವಾಗಲಿಲ್ಲ. ಬಳಿಕ ಅವರೊಂದಿಗೆ ಮಾತನಾಡಿದ್ದೇನೆ. ಬರದಿಂದ ಜನರು ಹಾಗೂ ರೈತರು ಸಮಸ್ಯೆ ಎದುರಿಸುತ್ತಿದ್ದಾರೆ” ಎಂದರು.
“ಬರ ಘೋಷಣೆಗೆ ಕೆಲವು ಮಾನದಂಡಗಳಿವೆ. ಶಾಸಕರು ಬೇಡಿಕೆ ಇಟ್ಟ ತಕ್ಷಣ ಬರ ಘೋಷಣೆ ಮಾಡಲು ಸಾಧ್ಯವಿಲ್ಲ. ನಿಗದಿತ ಮಾನದಂಡಗಳ ಆಧಾರದ ಮೇಲೆಯೇ ಬರ ಘೋಷಣೆ ಮಾಡಬೇಕಾಗುತ್ತದೆ. ಈ ಕುರಿತು ಗೃಹ ಸಚಿವ ಪರಮೇಶ್ವರ್ ಅವರೊಂದಿಗೂ ಚರ್ಚಿಸಿದ್ದೇನೆ” ಎಂದು ತಿಳಿಸಿದರು.
ಎಲ್ಲ ಕ್ಷೇತ್ರಗಳನ್ನೂ ಒಂದೇ ಮಾನದಂಡದಲ್ಲಿ ನೋಡುತ್ತೇವೆ
“ಹೆಚ್.ಕೆ. ಪಾಟೀಲ್ ಅವರಂತಹ ಹಿರಿಯ ನಾಯಕರ ಮೇಲೆಯೇ ಸಾಕಷ್ಟು ಒತ್ತಡವಿದೆ. ಹಾಗಿರುವಾಗ ಯಶವಂತರಾಯ ಪಾಟೀಲ್ ಅವರ ಮೇಲೂ ಒತ್ತಡ ಇರಲ್ವಾ? 224 ಕ್ಷೇತ್ರಗಳಲ್ಲೂ ಕಾಂಗ್ರೆಸ್, ಬಿಜೆಪಿ ಎಂದು ನಾವು ನೋಡುವುದಿಲ್ಲ. ಮಾನದಂಡಗಳು ಸರಿಯಾಗಿದ್ದರೆ ನಿಯಮಾನುಸಾರ ಬರ ಘೋಷಣೆ ಮಾಡುತ್ತೇವೆ” ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
State
ಶ್ರವಣಬೆಳಗೊಳಕ್ಕೆ ರೋಪ್‌ವೇ: ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಲು ಮನವಿ
ಬೆಂಗಳೂರು: ಐತಿಹಾಸಿಕ ಹಾಗೂ ಜೈನ ಧಾರ್ಮಿಕ ಕ್ಷೇತ್ರವಾದ ಶ್ರವಣಬೆಳಗೊಳದ ವಿಂಧ್ಯಗಿರಿ ಬೆಟ್ಟಕ್ಕೆ ರೋಪ್‌ವೇ ನಿರ್ಮಾಣ ಹಾಗೂ ಕ್ಷೇತ್ರದ ರಸ್ತೆ ಅಗಲೀಕರಣ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಲೋಕೋಪಯೋಗಿ ಇಲಾಖೆಯಿಂದ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಸಿ.ಎನ್. ಬಾಲಕೃಷ್ಣ ಅವರು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಕುರಿತು ಸಚಿವರಿಗೆ ಮಾಹಿತಿ ನೀಡಿದ ಶಾಸಕ ಬಾಲಕೃಷ್ಣ ಅವರು, ಶ್ರವಣಬೆಳಗೊಳಕ್ಕೆ ದೇಶ-ವಿದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಹಾಗೂ ಭಕ್ತರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ವಿಂಧ್ಯಗಿರಿ ಬೆಟ್ಟಕ್ಕೆ ರೋಪ್‌ವೇ ನಿರ್ಮಾಣ ಹಾಗೂ ಅಗತ್ಯ ರಸ್ತೆ ಅಗಲೀಕರಣ ಕಾಮಗಾರಿಗಳು ಅತ್ಯಂತ ಮಹತ್ವದ್ದಾಗಿವೆ ಎಂದು ತಿಳಿಸಿದರು.
ಕ್ಷೇತ್ರದ ಅಭಿವೃದ್ಧಿಗೆ ಅಗತ್ಯವಿರುವ ಈ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಇಲಾಖೆಯ ವತಿಯಿಂದ ಕೇಂದ್ರ ಸರ್ಕಾರಕ್ಕೆ ಸೂಕ್ತ ಪ್ರಸ್ತಾವನೆ ಸಲ್ಲಿಸುವಂತೆ ಮನವಿ ಮಾಡಿದ ಅವರು, ಶ್ರವಣಬೆಳಗೊಳ ಕ್ಷೇತ್ರಕ್ಕೆ ಖುದ್ದಾಗಿ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸುವಂತೆ ಸಚಿವರನ್ನು ಆಹ್ವಾನಿಸಿದರು.
ಶಾಸಕರ ಮನವಿಗೆ ಸ್ಪಂದಿಸಿದ ಸಚಿವ ಸತೀಶ್ ಜಾರಕಿಹೊಳಿ ಅವರು, ರೋಪ್‌ವೇ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸುವ ಕುರಿತು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಅಲ್ಲದೆ, ಶ್ರವಣಬೆಳಗೊಳ ಕ್ಷೇತ್ರಕ್ಕೆ ಖುದ್ದಾಗಿ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸುವುದಾಗಿಯೂ ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀ ಮಠದ ಪ್ರತಿನಿಧಿ ರಾಜೇಶ್ ಖನ್ನ ಉಪಸ್ಥಿತರಿದ್ದರು.
State
ಗೌರವ ಕೊಡಿ ಎಂದಿದ್ದು ಲಂಚ ಕೊಡಿ ಎಂಬರ್ಥದಲ್ಲಲ್ಲ: ಕೆ. ಎಂ. ಶಿವಲಿಂಗೇಗೌಡ ಸ್ಪಷ್ಟನೆ
ಬೆಂಗಳೂರು: ನನ್ನದು ಗ್ರಾಮೀಣ ಭಾಷೆ. ಆಡುಭಾಷೆಯಲ್ಲಿ ಮಾತನಾಡುವ ಸಂದರ್ಭ ಪದ ಬಳಕೆಯ ವ್ಯತ್ಯಾಸವಾಗಿರಬಹುದು. ಗೌರವ ಕೊಡಿ ಎಂದಿದ್ದು ಲಂಚ ಕೊಡಿ ಎಂಬರ್ಥದಲ್ಲಿ ಹೇಳಿಲ್ಲ. ಒಂದು ಪದ ವ್ಯತ್ಯಾಸವಾಗಿದ್ದನ್ನೇ ದೊಡ್ಡ ಸಮಸ್ಯೆಯನ್ನಾಗಿ ಬಿಂಬಿಸಬಾರದು ಎಂದು ಅಬಕಾರಿ ಸಚಿವರು ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಎಂ. ಶಿವಲಿಂಗೇಗೌಡ ಅವರು ಸ್ಪಷ್ಟಪಡಿಸಿದರು.

ಇಂದು ವಿಕಾಸಸೌಧದ ಸಭಾಂಗಣದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕೆ. ಎಂ. ಶಿವಲಿಂಗೇಗೌಡ ಅವರು ಪದ ವಿವಾದದ ಕುರಿತು ಸಮರ್ಥನೆ ಮಾಡಿಕೊಳ್ಳುತ್ತಿಲ್ಲ, ಉಚ್ಛಾರಣೆಯಲ್ಲಿ ತಪ್ಪಾಗಿದ್ದನ್ನು ಬೆಳೆಸಿಕೊಂಡು ಹೋಗಬಾರದು. ನನ್ನ ವ್ಯಾಖ್ಯಾನದಲ್ಲಿ ಸಹಾಯ ಮಾಡಿದವರಿಗೆ ಧನ್ಯವಾದ ಹೇಳುವುದು ನಮ್ಮ ಧರ್ಮ ಎಂಬುದಾಗಿತ್ತು.ಇದರಿಂದ ಫಲಾನುಭವಿ ಹಾಗೂ ಅಧಿಕಾರಿಗಳ ನಡುವಣ ಸಂಘರ್ಷ ಇತ್ಯರ್ಥಗೊಳ್ಳುತ್ತದೆ ಎಂಬ ಆಶಾಭಾವನೆಯಲ್ಲಿ ನಾನು ಹಾಗೆ ಹೇಳಿದ್ದಾಗಿತ್ತು ಎಂದರು.
ಹಾಸನದಲ್ಲಿ ಡ್ಯಾಶ್ ಬೋರ್ಡ್ ಸ್ಥಾಪನೆ:
ರಾಜ್ಯದಲ್ಲೇ ಮೊದಲ ಬಾರಿಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಹಾಸನದಲ್ಲಿ ಕುಂದುಕೊರತೆಗಳ ಪರಿಹಾರ ಪ್ರಕ್ರಿಯೆಗೆ ಸಂಬಂಧಿಸಿದ ಡ್ಯಾಶ್ ಬೋರ್ಡ್ ಅನ್ನು ಸ್ಥಾಪಿಸಲಾಗುವುದು. ಅದರಲ್ಲಿ ದಾಖಲಾದ ಜನರ ಸಮಸ್ಯೆಗಳು, ಪರಿಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ತೆಗೆದುಕೊಂಡ ಸಮಯಾವಕಾಶ ಮತ್ತು ಅದು ಯಾವ ಹಂತದಲ್ಲಿದೆ ಎಂಬ ವಿವರಗಳು ಅದರಲ್ಲಿ ಲಭ್ಯವಿರಲಿದೆ ಎಂದು ಮಾಹಿತಿ ನೀಡಿದರು.
ಲಂಚ ತೆಗೆದುಕೊಂಡ ಅಧಿಕಾರಿಗಳ ವಿರುದ್ಧ ಕ್ರಮ:
ಸಕಲೇಶಪುರ ತಾಲ್ಲೂಕಿನಲ್ಲಿ ನಡೆದ ಪ್ರಜಾಸೇವಾ ಆಂದೋಲನ ಕಾರ್ಯಕ್ರಮದಲ್ಲಿ ಕೆಲವು ಅಧಿಕಾರಿಗಳು ಲಂಚ ಸ್ವೀಕರಿಸಿರುವುದಾಗಿ ಸ್ಥಳೀಯರು ದೂರಿದ್ದಾರೆ. ಅಂತಹ ಆರೋಪ ಹೊತ್ತಿರುವ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ, ಎರಡು ತಿಂಗಳಲ್ಲಿ ಕ್ರಮ ವಹಿಸಲಾಗುವುದು ಎಂದು ಶಿವಲಿಂಗೇಗೌಡ ಅವರು ಸ್ಪಷ್ಟಪಡಿಸಿದರು.
ಸಕಲೇಶಪುರದಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 8 ಗಂಟೆ ವರೆಗೆ ಬಿಡುವಿಲ್ಲದೆ ನಿರಂತರವಾಗಿ ಸ್ಥಳೀಯರ ಸಮಸ್ಯೆಗಳನ್ನು ಆಲಿಸಿದ್ದೇನೆ. ಒಂದು ಬದಿಯಲ್ಲಿ ಸಮಸ್ಯೆ ತಂದವರನ್ನು, ಮತ್ತೊಂದು ಬದಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ನಿಲ್ಲಿಸಿಕೊಂಡು ಇಬ್ಬರ ವಾದಗಳನ್ನು ಆಲಿಸಿದ್ದೇನೆ. ಸರ್ಕಾರದ ಯೋಜನೆ ಫಲಾನುಭವಿಗೆ ಸರಿಯಾಗಿ ತಲುಪುವ ನಿಟ್ಟಿನಲ್ಲಿ ಸಲಹೆಗಳನ್ನು ನೀಡಿದ್ದೇನೆ. ಎಷ್ಟು ದಿನಗಳಲ್ಲಿ ಸಮಸ್ಯೆ ಬಗೆಹರಿಸಿಕೊಡುತ್ತೀರಿ ಎಂಬುದನ್ನು ಅಧಿಕಾರಿಗಳನ್ನು ಸ್ಥಳದಲ್ಲಿಯೇ ಕೇಳಿ, ನಿಗದಿತ ಸಮಯವನ್ನು ದಾಖಲಿಸಿಕೊಂಡಿದ್ದೇನೆ. ನಿಗದಿತ ಸಮಯದಲ್ಲಿ ಇತ್ಯರ್ಥ ಪಡಿಸಿಕೊಡದಿದ್ದರೆ ಕ್ರಮ ಕೈಗೊಳ್ಳುವುದಾಗಿಯೂ ಎಚ್ಚರಿಕೆ ನೀಡಿದ್ದೇನೆ. ಹೀಗೆ ಸುಮಾರು 400ಕ್ಕೂ ಹೆಚ್ಚು ಮಂದಿಯ ಕುಂದುಕೊರತೆಗಳನ್ನು ಖುದ್ದಾಗಿ ಆಲಿಸಿ, ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನಿಸಿದ್ದೇನೆ. ವಿಧಾನಸೌಧದಲ್ಲಿ ನಡೆಯುವ ಪ್ರಶ್ನೋತ್ತರ ಮಾದರಿಯಲ್ಲಿ ನಡೆಸಿದ ಆಂದೋಲನದ ಬಗ್ಗೆ ಸ್ಥಳೀಯರಿಂದ ಭಾರಿ ಮುಚ್ಚುಗೆ ವ್ಯಕ್ತವಾಗಿದೆ. ಆದರೆ ವಿರೋಧ ಪಕ್ಷಗಳ ಕೆಲವರು ನನ್ನ ಒಂದು ಪದ ಬಳಕೆಯನ್ನೇ ಪ್ರಧಾನವಾಗಿಸಿ ನನ್ನ ಶ್ರಮವನ್ನೇ ಹಾಳುಗೆಡವಲು ಪ್ರಯತ್ನಿಸುತ್ತಿದ್ದಾರೆ ಎಂದು ಶಿವಲಿಂಗೇಗೌಡ ಅವರು ಹೇಳಿದರು.
ಸ್ವಕ್ಷೇತ್ರ ಅರಸೀಕೆರೆಯಲ್ಲಿ ಸ್ಥಳೀಯರ ಕುಂದುಕೊರತೆಗಳನ್ನು ಆಲಿಸಿ,ಬಗೆಹರಿಸುವ ಕೆಲಸವನ್ನು ಮೊದಲಿನಿಂದಲೂ ಮಾಡುತ್ತ ಬಂದಿದ್ದೇನೆ. ಅದೇ ಮಾದರಿಯಲ್ಲಿ ಹಾಸನದ ಉಸ್ತುವಾರಿ ಸಚಿವರಾದ ಮೇಲೆ ಮೊದಲ ಬಾರಿಗೆ ಸಕಲೇಶಪುರದಲ್ಲೂ ನಡೆಸಿದೆ.ಕಾರ್ಯಕ್ರಮ ಯಶಸ್ವಿಯಾದ ತೃಪ್ತಿ ನನಗಿದೆ.ಆದರೆ ಒಂದು ಪದ ಬಳಕೆಯನ್ನು ವಿವಾದಕ್ಕೆ ಬಳಸಲಾಯಿತಲ್ಲ ಎಂಬ ವ್ಯಥೆಯೂ ಇದೆ. ಹೃದಯದ ಭಾರವನ್ನು ಇಳಿಸಿಕೊಳ್ಳಲು ಈ ಮಾತುಗಳನ್ನು ಹೇಳುತ್ತಿದ್ದೇನೆ. ನನ್ನ ರಾಜಕೀಯ ಜೀವನದಲ್ಲಿ ಒಂದೇ ಒಂದು ಕಪ್ಪುಚುಕ್ಕಿಯಿಲ್ಲ, ಅತ್ಯಂತ ಪ್ರಾಮಾಣಿಕವಾಗಿ ನಡೆದುಕೊಂಡು ಬಂದಿದ್ದೇನೆ ಎಂದು ಹೇಳಿದರು.
ಪ್ರಜಾಸೇವಾ ಕಾರ್ಯಕ್ರಮದ ನಡುವೆ ಒಂದು ಗುಂಪು ಒಟ್ಟಾಗಿ ಬಂದು ಸರ್ವೆ ಇಲಾಖೆಯಲ್ಲಿ 2 ಲಕ್ಷದ ವರೆಗೆ ಲಂಚ ತೆಗೆದುಕೊಳ್ಳುತ್ತಿರುವುದಾಗಿ ಆರೋಪಿಸಿದರು. ಈ ಸಂದರ್ಭ ಜಿಲ್ಲಾಮಂತ್ರಿ ನೇತೃತ್ವದಲ್ಲಿ ಪ್ರಜಾಸೇವಾ ಇಲಾಖೆಯಡಿ ಅದಾಲತ್ ನಡೆಸಿ ಅಧಿಕಾರಿಗಳನ್ನು ಹಾಗೂ ಫಲಾನುಭವಿಗಳನ್ನು ವೈಯಕ್ತಿಕವಾಗಿ ಕರೆಸಿ ಚರ್ಚಿಸಿ ಸಮಸ್ಯೆ ಬಗೆಹರಿಸಿ ಎಂಬ ಸಲಹೆಯನ್ನು ನೀಡಿದೆ. 2 ಲಕ್ಷ ಲಂಚ ಕೊಟ್ಟಿದ್ದೇನೆ ಎಂಬ ವ್ಯಕ್ತಿಯ ಸಮಸ್ಯೆಯನ್ನು ಸರಿಯಾಗಿ ಕೇಳುವಂತೆ ಜಿಲ್ಲಾಧಿಕಾರಿಗೆ ಸ್ಥಳದಲ್ಲೇ ಹೇಳಿದೆ. ಅಧಿಕಾರಿಗಳು ಹಾಗೂ ಫಲಾನುಭವಿಗಳ ನಡುವೆ ಸಂಘರ್ಷ ಬೇಡ.ಕೆಲಸ ಮಾಡಿಕೊಟ್ಟ ಮೇಲೆ ಅಧಿಕಾರಿಗಳಿಗೆ ಗೌರವ ಸಲ್ಲಿಸಿ, ಅದು ನಮ್ಮ ಧರ್ಮ. ನಮ್ಮ ಕೆಲಸವನ್ನು ಮಾಡಿಕೊಟ್ಟವರಿಗೆ ಗೌರವ ಕೊಡುವುದು ಸನ್ನಡತೆ ಎಂದಿದ್ದೆ.ಆಗ ಗೌರವ ನೀಡಿ ಎಂದರೆ ಲಂಚ ಕೊಡಬೇಕೆ ಎಂದು ಕೆಲವರು ಗಲಾಟೆ ಮಾಡಿದರು.ಆಗ ಯಾರೂ ಕೂಡ ಒಂದು ರೂಪಾಯಿ ಲಂಚ ಕೊಡಬಾರದು. ಈಗಾಗಲೇ ಲಂಚದ ರೂಪದಲ್ಲಿ ಕೊಟ್ಟಿರುವ ಹಣವನ್ನು ಅಧಿಕಾರಿಗಳಿಂದ ವಾಪಸ್ ಕೊಡಿಸುವ ನಿಟ್ಟಿನಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದಿದ್ದೇನೆ ಎಂದು ಸಚಿವ ಶಿವಲಿಂಗೇಗೌಡ ಸ್ಪಷ್ಟಪಡಿಸಿದರು.
-
Hassan6 hours agoಭಗತ್ಸಿಂಗ್ ಜನ್ಮದಿನದ ಅಂಗವಾಗಿ ಸೆ.27ರಂದು ರಾಜ್ಯಮಟ್ಟದ ವೈಚಾರಕ ಸಮಾವೇಶ
-
Mysore6 hours agoFIR ದಾಖಲಾದ ಬೆನ್ನಲ್ಲೇ ಪ್ರತಾಪ್ ಸಿಂಹ ಪ್ರತಿಕ್ರಿಯೆ
-
Kodagu8 hours agoಕರಿಕೆಯಲ್ಲಿ ಪೋಷಣ್ ವಾಟಿಕಾ ಉತ್ಪನ್ನ ಹಾಗೂ ಸ್ಥಳೀಯ ಆಹಾರ ಪ್ರದರ್ಶನ
-
Hassan41 minutes agoಶುಂಠಿ ಬೆಳೆಗೆ ನೀಡಿದ್ದ ಜಮೀನಿನ ಹಣ ಕೇಳಿದ್ದಕ್ಕೆ ಮಾರಣಾಂತಿಕ ಹಲ್ಲೆ
-
State7 hours agoಕಸ್ತೂರಿ ರಂಗನ್ ವರದಿ; ಸುಪ್ರೀಂ ಕೋರ್ಟ್ನಲ್ಲಿ ರಾಜ್ಯದ ಅಭಿಪ್ರಾಯ ಮಂಡಿಸಲು ಹಿರಿಯ ವಕೀಲರ ನೇಮಕ: ಡಿಕೆಶಿ
-
National3 hours agoSIR ವಿಚಾರ: ಚುನಾವಣಾ ಆಯೋಗದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ
-
Chamarajanagar1 hour agoಸಂಚಾರಿ ನಿಯಮ ಉಲ್ಲಂಘನೆ ಪತ್ತೆಗೆ ಎಎನ್ಪಿಆರ್ ಕ್ಯಾಮೆರಾ ಅಳವಡಿಕೆ
-
Chikmagalur19 minutes agoಸೆ. 30ರಂದು ಕೊಳ್ಳೇಗಾಲಕ್ಕೆ ಮುಖ್ಯಮಂತ್ರಿಗಳ ಭೇಟಿ ಹಿನ್ನೆಲೆ : ಶಾಸಕ ಎ.ಆರ್. ಕೃಷ್ಣಮೂರ್ತಿ ಅವರಿಂದ ಸ್ಥಳ ಪರಿಶೀಲನೆ
