Connect with us

Kodagu

ಆಯುರ್ವೇದ ಕಾಯಿಲೆ ತಡೆಯುವ ಜೀವನ ವಿಧಾನ: 11 ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಕಾರ್ಯಕ್ರಮ

Published

on

ಮಡಿಕೇರಿ : ಆಯುರ್ವೇದವು ಕೇವಲ ಕಾಯಿಲೆ ಬಂದ ನಂತರ ಚಿಕಿತ್ಸೆ ನೀಡುವ ಪದ್ಧತಿಯಲ್ಲ, ಆರೋಗ್ಯ ಕಾಪಾಡಿಕೊಂಡು ಕಾಯಿಲೆ ತಡೆಗಟ್ಟುವ ಜೀವನ ವಿಜ್ಞಾನವಾಗಿದೆ ಎಂದು ಕುಶಾಲನಗರ ಯೋಗಕ್ಷೇಮ ಆಸ್ಪತ್ರೆಯ ಆಯುರ್ವೇದ ವೈದ್ಯರಾದ ಡಾ.ಶ್ಯಾಮ್ ಪ್ರಸಾದ್ ಹೇಳಿದರು.
ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಆಯುಷ್ ಇಲಾಖೆ ಸಂಯುಕ್ತ ಆಶ್ರಯದಲ್ಲಿ ’ಆರೋಗ್ಯಕರ ನಾಳೆಗಾಗಿ ಆಯುರ್ವೇದ’ ಎಂಬ ಘೋಷವಾಕ್ಯದೊಂದಿಗೆ ನಗರದ ಜಿಲ್ಲಾ ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ಬುಧವಾರ ನಡೆದ ೧೧ ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉಪನ್ಯಾಸ ನೀಡಿದರು.

ಆಯು ಎಂದರೆ ಜೀವನ ಅಥವಾ ಆಯಸ್ಸು ಹಾಗೂ ವೇದ ಎಂದರೆ ವಿಜ್ಞಾನ. ಜೀವನ ಹೇಗೆ ಆರೋಗ್ಯಕರವಾಗಿ ನಡೆಸಬೇಕು ಎಂಬುದನ್ನು ತಿಳಿಸಿಕೊಡುವುದೇ ಆಯುರ್ವೇದದ ಪ್ರಮುಖ ಉದ್ದೇಶವಾಗಿದೆ. ನಮ್ಮ ಹಿರಿಯರು ಅನುಭವದ ಮೂಲಕ ತಿಳಿದುಕೊಂಡು, ಪೀಳಿಗೆಯಿಂದ ಪೀಳಿಗೆಗೆ ಅನುಸರಿಸಿಕೊಂಡು ಬಂದಿರುವ ಆಹಾರ ಪದ್ಧತಿ, ಜೀವನಶೈಲಿ ಹಾಗೂ ಮನೆ ಮದ್ದುಗಳಲ್ಲಿಯೂ ಆಯುರ್ವೇದದ ತತ್ವಗಳು ಅಡಕವಾಗಿವೆ ಎಂದು ವಿವರಿಸಿದರು.
ಪ್ರಸ್ತುತ ಜೀವನಶೈಲಿಯಿಂದಾಗಿ ಮಧುಮೇಹ, ಬೊಜ್ಜು ಸೇರಿದಂತೆ ಹಲವು ಜೀವನಶೈಲಿ ಆಧಾರಿತ ಕಾಯಿಲೆಗಳು ಹೆಚ್ಚುತ್ತಿವೆ. ಕಾಯಿಲೆ ಬಂದ ನಂತರ ಚಿಕಿತ್ಸೆ ಪಡೆಯುವುದಕ್ಕಿಂತ ಮುನ್ನೆಚ್ಚರಿಕೆ ವಹಿಸುವುದು ಅತ್ಯಂತ ಮುಖ್ಯ. ಆರೋಗ್ಯಕರ ಆಹಾರ, ಸಮಯಕ್ಕೆ ಸರಿಯಾಗಿ ಊಟ, ಸಮರ್ಪಕ ನಿದ್ರೆ ಹಾಗೂ ನಿಯಮಿತ ಜೀವನಶೈಲಿಯನ್ನು ಅಳವಡಿಸಿಕೊಂಡರೆ ಹಲವು ಆರೋಗ್ಯ ಸಮಸ್ಯೆ ದೂರವಿಡಬಹುದು ಎಂದರು.

ಜೀರ್ಣಶಕ್ತಿಯನ್ನು ಉತ್ತಮವಾಗಿ ಕಾಪಾಡಿಕೊಳ್ಳುವುದು ಆರೋಗ್ಯದ ಪ್ರಮುಖ ಅಂಶವಾಗಿದೆ. ಹಸಿವು ಮತ್ತು ನಿದ್ರೆಯ ಬಗ್ಗೆ ಪ್ರತಿಯೊಬ್ಬರೂ ಗಮನಹರಿಸಬೇಕು ಎಂದು ಸಲಹೆ ನೀಡಿದರು.
ಇಂದಿನ ದಿನಗಳಲ್ಲಿ ಒತ್ತಡ, ಆತಂಕ ಹಾಗೂ ಖಿನ್ನತೆಯಂತಹ ಸಮಸ್ಯೆಗಳೂ ಹೆಚ್ಚುತ್ತಿವೆ. ದೈನಂದಿನ ಜೀವನದಲ್ಲಿ ಸೂಕ್ತ ವಿಶ್ರಾಂತಿ ಪಡೆಯುವುದು, ಸಾಧ್ಯವಾದ? ನೈಸರ್ಗಿಕ ವಾತಾವರಣದಲ್ಲಿ ಸಮಯ ಕಳೆಯುವುದು ಹಾಗೂ ಆರೋಗ್ಯಕರ ಆಹಾರ ಪದ್ಧತಿ ಅನುಸರಿಸುವುದು ಅಗತ್ಯವಾಗಿದೆ ಎಂದು ಡಾ.ಶ್ಯಾಮ್ ಪ್ರಸಾದ್ ಅವರು ಹೇಳಿದರು.
ನೀಮಾ ಸಂಸ್ಥೆಯ ಡಾ.ರಾಜಾರಾಮ್ ಅವರು ಮಾತನಾಡಿ, ಆಯುರ್ವೇದವು ಕೇವಲ ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ಪದ್ಧತಿಯಲ್ಲ, ಆರೋಗ್ಯವನ್ನು ಕಾಪಾಡಿಕೊಳ್ಳುವ ಸಮಗ್ರ ಜೀವನಶೈಲಿಯಾಗಿದೆ. ಪ್ರಕೃತಿ ಮತ್ತು ದೇಹದ ನಡುವಿನ ಸಮತೋಲನ ಕಾಪಾಡಿಕೊಳ್ಳುವ ಮೂಲಕ ಆರೋಗ್ಯಕರ ಜೀವನ ನಡೆಸಲು ಆಯುರ್ವೇದ ಮಾರ್ಗದರ್ಶನ ನೀಡುತ್ತದೆ ಎಂದು ಹೇಳಿದರು.
ಇಂದಿನ ಆಧುನಿಕ ಜೀವನಶೈಲಿಯಿಂದಾಗಿ ಒತ್ತಡ, ಆಹಾರ ಪದ್ಧತಿಯ ಬದಲಾವಣೆ ಹಾಗೂ ನಿದ್ರೆಯ ಕೊರತೆಯಂತಹ ಸಮಸ್ಯೆಗಳು ಹೆಚ್ಚಾಗುತ್ತಿವೆ. ಇಂತಹ ಸಂದರ್ಭದಲ್ಲಿ ಸರಿಯಾದ ಆಹಾರ, ನಿಯಮಿತ ಜೀವನಕ್ರಮ, ಯೋಗ, ವ್ಯಾಯಾಮ ಹಾಗೂ ಪ್ರಕೃತಿಗೆ ಹೊಂದಿಕೊಂಡ ಜೀವನಶೈಲಿಗೆ ಆಯುರ್ವೇದದಲ್ಲಿ ಮಹತ್ವ ನೀಡಲಾಗಿದೆ ಎಂದರು.
ಆಯುರ್ವೇದವು ರೋಗದ ಲಕ್ಷಣಗಳ ಜೊತೆಗೆ ವ್ಯಕ್ತಿಯ ದೇಹಪ್ರಕೃತಿ, ಆಹಾರ ಪದ್ಧತಿ ಹಾಗೂ ಜೀವನಶೈಲಿಯನ್ನು ಪರಿಗಣಿಸಿ ಆರೋಗ್ಯ ಸಂರಕ್ಷಣೆಗೆ ಒತ್ತು ನೀಡುತ್ತದೆ ಎಂದು ತಿಳಿಸಿದರು.

ಆಯುರ್ವೇದದ ಔ?ಧಿಯನ್ನು ತಜ್ಞ ವೈದ್ಯರ ಸಲಹೆಯೊಂದಿಗೆ ಮಾತ್ರ ಬಳಸಬೇಕು. ಸ್ವಯಂ ಚಿಕಿತ್ಸೆ ಮಾಡಿಕೊಳ್ಳದೆ, ಅಗತ್ಯವಿದ್ದಾಗ ಅರ್ಹ ವೈದ್ಯರನ್ನು ಸಂಪರ್ಕಿಸುವುದು ಮುಖ್ಯ. ಆರೋಗ್ಯಕರ ಆಹಾರ ಮತ್ತು ಶಿಸ್ತಿನ ಜೀವನಶೈಲಿಯೊಂದಿಗೆ ಆಯುರ್ವೇದದ ತತ್ವ ಅಳವಡಿಸಿಕೊಂಡರೆ ದೈಹಿಕ ಹಾಗೂ ಮಾನಸಿಕ ಕ್ಷೇಮವನ್ನು ಕಾಪಾಡಿಕೊಳ್ಳಲು ನೆರವಾಗುತ್ತದೆ. ಜೊತೆಗೆ ಸಮಾಜದಲ್ಲಿಯೂ ಆರೋಗ್ಯದ ಕುರಿತು ಜಾಗೃತಿ ಮೂಡಿಸಬೇಕು ಎಂದು ಡಾ.ರಾಜಾರಾಮ್ ಕರೆ ನೀಡಿದರು.

ನಗರಸಭೆ ಅಧ್ಯಕ್ಷರಾದ ಪಿ.ಕಲಾವತಿ ಅವರು ಆಯುರ್ವೇದವು ಕೇವಲ ರೋಗ ನಿವಾರಣೆ ಮಾಡುವ ವೈದ್ಯ ಪದ್ಧತಿಯಲ್ಲ, ಅದು ಸೌಹಾರ್ದಯುತ ಮತ್ತು ಆರೋಗ್ಯಕರ ಜೀವನ ನಡೆಸುವ ಜೀವನ ಶೈಲಿಯಾಗಿದೆ. ಇಂದಿನ ಒತ್ತಡದ ಬದುಕಿನಲ್ಲಿ ನೈಸರ್ಗಿಕ ಆರೋಗ್ಯ ರಕ್ಷಣೆಗೆ ಆಯುರ್ವೇದ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ಅಗತ್ಯ ಎಂದು ತಿಳಿಸಿದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ.ಶೈಲಜಾ ಜಿ ಅವರು, ದಿನದ ಮಹತ್ವದ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯರಾದ ಸಬಿತ, ಆಶಾ ಕಾರ್ಯಕರ್ತೆಯರು, ಇಲಾಖೆ ವೈದ್ಯಾಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು. ಆಯುಷ್ ಇಲಾಖೆಯ ದಿಶಾ ಪ್ರಾರ್ಥಿಸಿದರು, ಡಾ.ಸರಸ್ವತಿ ಸ್ವಾಗತಿಸಿದರು, ಡಾ.ಪಲ್ಲವಿ ನಾಯಕ್ ನಿರೂಪಿಸಿದರು, ಡಾ.ಸೌಪರ್ಣಿಕ ಉಪನ್ಯಾಸಕರ ಪರಿಚಯ ಮಾಡಿದರು. ಡಾ.ಕೆ.ಜಿ.ಶುಭ ವಂದಿಸಿದರು.

ಕಾರ್ಯಕ್ರಮದಲ್ಲಿ ದಿನನಿತ್ಯದ ಬದುಕಿನಲ್ಲಿ ಬಳಸಬಹುದಾದ ಪ್ರಮುಖ ಗಿಡಮೂಲಿಕೆಗಳು ಹಾಗೂ ಮನೆಮದ್ದುಗಳ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಗಿಡಮೂಲಿಕೆಗಳ ಪ್ರದರ್ಶನ ನಡೆಯಿತು. ಇದೇ ಸಂದರ್ಭ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

Continue Reading

Kodagu

ದುಬಾರೆ ಆನೆ ಶಿಬಿರದಲ್ಲಿ ಕಾವಾಡಿಗಳ ನೇಮಕಾತಿ ಪ್ರಕ್ರಿಯೆ ಚುರುಕು: ನಾಳೆಯಿಂದ ಪ್ರವಾಸಿಗರಿಗೆ ಪ್ರವೇಶ ಮುಕ್ತ

Published

on

ಸಿದ್ದಾಪುರ: ದುಬಾರೆ ಸಾಕಾನೆ ಶಿಬಿರದಲ್ಲಿ ಖಾಲಿ ಇರುವ ಆನೆ ಕಾವಾಡಿಗಳ ಹುದ್ದೆಗಳ ನೇರ ನೇಮಕಾತಿ ಪ್ರಕ್ರಿಯೆ ಚುರುಕುಗೊಂಡಿದೆ.


ನೇಮಕಾತಿ ಪ್ರಕ್ರಿಯೆ ಇನ್ನೂ ಸಂಪೂರ್ಣವಾಗಿ ಅಂತಿಮಗೊಂಡಿಲ್ಲ ಅಭ್ಯರ್ಥಿಗಳ ದೈಹಿಕ ಸಾಮರ್ಥ್ಯ ಪರೀಕ್ಷೆ, ಆನೆಗಳನ್ನು ನಿಯಂತ್ರಿಸುವ ಹಾಗೂ ಆನೆ ಏರುವ ಸಾಮರ್ಥ್ಯ, ಸಂದರ್ಶನ ಮತ್ತು ಅವರ ಹಿಂದಿನ ಅನುಭವಗಳನ್ನು ಪರಿಗಣಿಸಿ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತಿದೆ ಎಲ್ಲ ಹಂತಗಳು ಪೂರ್ಣಗೊಂಡ ಬಳಿಕ ಅಂತಿಮ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ

ನಾಳೆಯಿಂದ ಸಾರ್ವಜನಿಕರಿಗೆ ಪ್ರವೇಶ:-
ಮಂಗಳವಾರ ವಾರದ ರಜೆ ಹಾಗೂ ಕಾವಾಡಿಗಳ ನೇಮಕಾತಿ ಪ್ರಕ್ರಿಯೆಯ ಹಿನ್ನೆಲೆಯಲ್ಲಿ ಬುಧವಾರ ದುಬಾರೆ ಸಾಕಾನೆ ಶಿಬಿರಕ್ಕೆ ಸಾರ್ವಜನಿಕರು ಮತ್ತು ಪ್ರವಾಸಿಗರ ಪ್ರವೇಶವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು
ಆದರೆ ನೇಮಕಾತಿ ಪ್ರಕ್ರಿಯೆ ಮುಂದುವರಿದಿರುವ ನಡುವೆಯೇ, ಗುರುವಾರದಿಂದ (ಸೆ.24) ದುಬಾರೆ ಸಾಕಾನೆ ಶಿಬಿರವು ಸಾರ್ವಜನಿಕರು ಹಾಗೂ ಪ್ರವಾಸಿಗರ ವೀಕ್ಷಣೆಗೆ ಯಥಾರೀತಿ ಮುಕ್ತವಾಗಿರಲಿದೆ ಎಂದು ಮಡಿಕೇರಿ ಡಿಸಿಎಫ್‌ ಅಭಿಷೇಕ್ ತಿಳಿಸಿದ್ದಾರೆ

Continue Reading

Kodagu

ಅಪಾಯಕಾರಿ ಸ್ಥಿತಿಯಲ್ಲಿ ಟಿಂಬರ್ ಸಾಗಾಟ: ಲಾರಿಗಳು ಪೊಲೀಸ್ ವಶ

Published

on

ಕುಶಾಲನಗರ : ಅಪಾಯಕಾರಿ ಸ್ಥಿತಿಯಲ್ಲಿ ಟಿಂಬರ್ ಗಳನ್ನು ಹೇರಿಕೊಂಡು ಸಂಚರಿಸುತ್ತಿದ್ದ 4 ಟಿಂಬರ್ ಲಾರಿಗಳನ್ನು ಕುಶಾಲನಗರ ಸಂಚಾರಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ನಿಗದಿತ ಸಾಮರ್ಥ್ಯಕ್ಕಿಂತ ಹೆಚ್ಚಿನ ತೂಕ ಹಾಗೂ
ಸಂಪೂರ್ಣಲಾರಿಯಿಂದ ಹೊರಕ್ಕೆ ಚಾಚಿದ ರೀತಿಯಲ್ಲಿ ಟಿಂಬರ್ ಗಳನ್ನು ತುಂಬಿಸಿ ಅಸುರಕ್ಷಿತ ಸಾಗಾಟ ಕಂಡುಬಂದ ಹಿನ್ನಲೆಯಲ್ಲಿ ಪೊಲೀಸ್ ನಿರೀಕ್ಷಕ ಪ್ರದೀಪದ ಕುಮಾರ್ ನೇತೃತ್ವದಲ್ಲಿ ಮಂಗಳವಾರ ರಾತ್ರಿ ಲಾರಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

Continue Reading

Kodagu

ಚಾಲಕನ ನಿಯಂತ್ರಣ ತಪ್ಪಿ ಶಾಲಾ ಬಸ್ ಪಲ್ಟಿ: ಮಕ್ಕಳಿಗೆ ಗಾಯ

Published

on

ಮಡಿಕೇರಿ: ಚಾಲಕನ ನಿಯಂತ್ರಣ ತಪ್ಪಿ ಶಾಲಾ ಬಸ್‌ವೊಂದು ಪಲ್ಟಿಯಾದ ಘಟನೆ ಮಡಿಕೇರಿ ಸಮೀಪದ ಕಾಟಕೇರಿ ಬಳಿ ನಡೆದಿದೆ.

ಮದೆನಾಡಿನ ಬಿಜಿಎಸ್ ಶಾಲೆಗೆ ಸೇರಿದ ಶಾಲಾ ಬಸ್‌ನಲ್ಲಿ 30ಕ್ಕೂ ಅಧಿಕ ಮಕ್ಕಳು ಪ್ರಯಾಣಿಸುತ್ತಿದ್ದರು. ಸಂಜೆ ಮಕ್ಕಳನ್ನು ಮನೆಗೆ ಕರೆದೊಯ್ಯುತ್ತಿದ್ದ ವೇಳೆ ಎದುರಿನಿಂದ ಬಂದ ಬೈಕ್‌ವೊಂದನ್ನು ತಪ್ಪಿಸಲು ಚಾಲಕ ಯತ್ನಿಸಿದಾಗ ಬಸ್ ನಿಯಂತ್ರಣ ಕಳೆದುಕೊಂಡು ಮಗುಚಿದೆ ಎನ್ನಲಾಗಿದೆ.

ಘಟನೆಯಲ್ಲಿ ಮೂರುಕ್ಕೂ ಅಧಿಕ ಮಕ್ಕಳಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಸ್ ಚಾಲಕ ಗಗನ್ ಅವರಿಗೂ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಅಪಘಾತದ ಸುದ್ದಿ ತಿಳಿದು ಮಡಿಕೇರಿ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Continue Reading

Trending

error: Content is protected !!