Hassan
ಕ್ಯಾತನಹಳ್ಳಿ ಎರಡನೇ ಹಂತಕ್ಕೆ ₹70 ಕೋಟಿ ಬಿಡುಗಡೆಗೆ ಸ್ವರೂಪ್ ಪ್ರಕಾಶ್ ಒತ್ತಾಯ
ಹಾಸನ: ರಾಜ್ಯ ವಿಧಾನಸಭೆಯ ವಿಶೇಷ ಬರಗಾಲದ ಅಧಿವೇಶನದಲ್ಲಿ ಹಾಸನ ವಿಧಾನಸಭಾ ಕ್ಷೇತ್ರದ ಶಾಸಕ ಸ್ವರೂಪ್ ಪ್ರಕಾಶ್ ಅವರು ತಾಲೂಕಿನ ಕ್ಯಾತನಹಳ್ಳಿ ಎರಡನೇ ಹಂತದ ನೀರಾವರಿ ಕಾಮಗಾರಿಗೆ ₹70 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದರು.

ಕ್ಯಾತನಹಳ್ಳಿ ಯೋಜನೆಯ ಮೊದಲ ಹಂತದಲ್ಲಿ ಸುಮಾರು 13 ಗ್ರಾಮಗಳ 21 ಕೆರೆಗಳಿಗೆ ನೀರು ಹರಿಸಲಾಗುತ್ತಿದೆ. ಇದೇ ಮಾದರಿಯಲ್ಲಿ ಎರಡನೇ ಹಂತದ ಕಾಮಗಾರಿಗೆ ಅನುದಾನ ಬಿಡುಗಡೆಯಾದರೆ 37ಕ್ಕೂ ಹೆಚ್ಚು ಕೆರೆಗಳಿಗೆ ನೀರು ಒದಗಿಸುವುದರ ಜೊತೆಗೆ 5,685ಕ್ಕೂ ಅಧಿಕ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಸಾಧ್ಯವಾಗಲಿದೆ ಎಂದು ಅವರು ಸದನದ ಗಮನಕ್ಕೆ ತಂದರು.
ಬರ ಪರಿಸ್ಥಿತಿಯಿಂದ ಸಂಕಷ್ಟದಲ್ಲಿರುವ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸುವುದು ಅತ್ಯಂತ ಅಗತ್ಯವಾಗಿದೆ. ಕ್ಯಾತನಹಳ್ಳಿ ಎರಡನೇ ಹಂತದ ಯೋಜನೆ ಪೂರ್ಣಗೊಂಡರೆ ಹೆಚ್ಚಿನ ಕೃಷಿ ಪ್ರದೇಶಕ್ಕೆ ನೀರು ಲಭ್ಯವಾಗಲಿದ್ದು, ರೈತರ ಮೇಲಿನ ಆರ್ಥಿಕ ಹೊರೆ ಕಡಿಮೆಯಾಗಲಿದೆ ಎಂದು ಸ್ವರೂಪ್ ಪ್ರಕಾಶ್ ತಿಳಿಸಿದರು.
ಆದ್ದರಿಂದ ಕ್ಯಾತನಹಳ್ಳಿ ಎರಡನೇ ಹಂತದ ಕಾಮಗಾರಿಗೆ ಅಗತ್ಯವಿರುವ ₹70 ಕೋಟಿ ಹಣವನ್ನು ಶೀಘ್ರ ಬಿಡುಗಡೆ ಮಾಡಿ ಯೋಜನೆಯನ್ನು ಅನುಷ್ಠಾನಗೊಳಿಸಬೇಕು ಎಂದು ಅವರು ಸರ್ಕಾರಕ್ಕೆ ಮನವಿ ಮಾಡಿದರು.
Hassan
ಹಿಂದೂ ಮಹಾಗಣಪತಿ ಶೋಭಾಯಾತ್ರೆಯಲ್ಲಿ ಯುವಕ, ಹೋಂ ಗಾರ್ಡ್‌ಗೆ ಗಾಯ: ಎಸ್ಪಿ ನೇತೃತ್ವದಲ್ಲಿ ಪರಿಸ್ಥಿತಿ ನಿಯಂತ್ರಣ
ಹಾಸನ: ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಹಾಗೂ ಭಜರಂಗದಳದ ವತಿಯಿಂದ ನಗರದ ಸಹ್ಯಾದ್ರಿ ವೃತ್ತದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ ಭವನದ ಆವರಣದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಹಿಂದೂ ಮಹಾಗಣಪತಿ ವಿಸರ್ಜನಾ ಮಹೋತ್ಸವ ಹಾಗೂ ಬೃಹತ್ ಶೋಭಾಯಾತ್ರೆ ಬುಧವಾರ ಅದ್ಧೂರಿಯಾಗಿ ನಡೆಯಿತು.

ಸಾವಿರಾರು ಮಂದಿ ಭಾಗವಹಿಸಿದ್ದ ಶೋಭಾಯಾತ್ರೆ ಹೇಮಾವತಿ ಪ್ರತಿಮೆ ರಸ್ತೆ, ಸಾಲಗಾಮೆ ರಸ್ತೆ ಮೂಲಕ ಪೆನ್‌ಷನ್‌ಮೊಹಲ್ಲಾಕ್ಕೆ ಆಗಮಿಸಿತು. ಡಿಜೆ ಸದ್ದಿಗೆ ಯುವಕ-ಯುವತಿಯರು ಕುಣಿದು ಸಂಭ್ರಮಿಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ಎಸ್ಪಿ ಶುಭನ್ವಿತಾ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಮಸೀದಿ ಕಾಣದಂತೆ ನಾಲ್ಕು ಕೆಎಸ್‌ಆರ್‌ಪಿ ವಾಹನಗಳನ್ನು ಅಡ್ಡಲಾಗಿ ನಿಲ್ಲಿಸಲಾಗಿತ್ತು.
ಶೋಭಾಯಾತ್ರೆ ಪೆನ್‌ಷನ್‌ಮೊಹಲ್ಲಾದ ಬಾರ್ಲೈನ್ ಮಸೀದಿ ಎದುರು ಬರುತ್ತಿದ್ದಂತೆ ಕೆಲ ಯುವಕರು ಕರ್ಪೂರ ಹಚ್ಚಿದರು. ಹೊಗೆ ಹೆಚ್ಚಾದ ಹಿನ್ನೆಲೆಯಲ್ಲಿ ಪೊಲೀಸರು ಕರ್ಪೂರ ಆರಿಸಲು ಮುಂದಾದಾಗ ಯುವಕರು ಹಾಗೂ ಪೊಲೀಸರ ನಡುವೆ ತಳ್ಳಾಟ ಉಂಟಾಯಿತು. ಈ ವೇಳೆ ಓರ್ವ ಯುವಕನ ಮೂಗಿಗೆ ಗಾಯವಾಗಿ ರಕ್ತಸ್ರಾವವಾಯಿತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.
ಘಟನೆ ತಿಳಿಯುತ್ತಿದ್ದಂತೆ ಎಸ್ಪಿ ಶುಭನ್ವಿತಾ ಸ್ಥಳಕ್ಕೆ ಆಗಮಿಸಿ ಖುದ್ದು ಪರಿಸ್ಥಿತಿ ಅವಲೋಕಿಸಿ ಪೊಲೀಸ್ ಸಿಬ್ಬಂದಿಗೆ ಸೂಚನೆ ನೀಡಿದರು. ಮಾಜಿ ಶಾಸಕ ಪ್ರೀತಂಗೌಡ ಕೂಡ ಮೆರವಣಿಗೆಯಲ್ಲಿದ್ದು, ಯುವಕರನ್ನು ಮಸೀದಿ ಎದುರಿನಿಂದ ಮುಂದೆ ಸಾಗುವಂತೆ ಮನವಿ ಮಾಡಿದರು. ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರಿಂದ ಕೆಲಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಈ ನಡುವೆ ಶೋಭಾಯಾತ್ರೆ ಮಸೀದಿ ಎದುರು ಸಾಗುತ್ತಿದ್ದ ವೇಳೆ ಆಜಾನ್ ಮೊಳಗಿತು. ಇದಕ್ಕೆ ಪ್ರತಿಯಾಗಿ ಮೆರವಣಿಗೆಯಲ್ಲಿದ್ದವರು ಘೋಷಣೆಗಳನ್ನು ಕೂಗಿ ಶಂಖನಾದ ಮೊಳಗಿಸಿದರು. ಇದೇ ವೇಳೆ ಧ್ವಜ ಹಿಡಿದು ತಿರುಗಿಸುತ್ತಿದ್ದ ಯುವಕನೊಬ್ಬನ ಕೈಯಲ್ಲಿದ್ದ ಬಂಬು, ಸ್ಟಾಂಡ್ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದ ಹೋಂಗಾರ್ಡ್‌ನ ತಲೆಗೆ ಬಡಿದು ಗಾಯವಾಯಿತು. ಕೂಡಲೇ ಆತನಿಗೆ ಚಿಕಿತ್ಸೆ ನೀಡಲಾಯಿತು.
ಪೊಲೀಸರು ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಿ ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಟ್ಟುಕೊಂಡು ಶೋಭಾಯಾತ್ರೆಯನ್ನು ಮುಂದಕ್ಕೆ ಸಾಗಿಸಿದರು. ಮೆರವಣಿಗೆ ಮಸೀದಿ ಪ್ರದೇಶವನ್ನು ಸಂಪೂರ್ಣವಾಗಿ ದಾಟಿದ ಬಳಿಕ ಕೆಎಸ್‌ಆರ್‌ಪಿ ವಾಹನಗಳನ್ನು ತೆರವುಗೊಳಿಸಲಾಯಿತು.
ಪೆನ್‌ಷನ್‌ಮೊಹಲ್ಲಾ ಮಸೀದಿ ಎದುರು ನಡೆದ ತಳ್ಳಾಟ, ವಾಗ್ವಾದ ಹಾಗೂ ಸಣ್ಣಪುಟ್ಟ ಗಾಯದ ಘಟನೆ ಹೊರತುಪಡಿಸಿ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣಿಗೆ ಶಾಂತಿಯುತವಾಗಿ ಮುಂದುವರಿಯಿತು. ರಾತ್ರಿ ದೇವಿಗೆರೆ ಬಳಿ ಹಿಂದೂ ಮಹಾಗಣಪತಿಯನ್ನು ವಿಸರ್ಜನೆ ಮಾಡಲಾಯಿತು.
Hassan
ಅರಸೀಕೆರೆಯಲ್ಲಿ ಜುಲುಸ್-ಎ- ಗೌಸಿಯಾ ಮೆರವಣಿಗೆ
ಅರಸೀಕೆರೆ: ಸುನ್ನಿ ಮುಸ್ಲಿಂ ಜಮಾತ್ ಕಮಿಟಿ ಹಾಗೂ ನಗರದ ವಿವಿಧ ಮಸೀದಿಗಳ ಸಂಯುಕ್ತ ಆಶ್ರಯದಲ್ಲಿ ಜುಲುಸ್-ಎ-ಗೌಸಿಯಾ ಧಾರ್ಮಿಕ ಮೆರವಣಿಗೆ ನಗರದಲ್ಲಿ ಶ್ರದ್ಧಾಭಕ್ತಿಯಿಂದ ನಡೆಯಿತು.
ನಗರದ ಸುನ್ನಿ ಜಾಮಿಯಾ ಮಸೀದಿ ಮುಂಭಾಗದಿಂದ ಆರಂಭಗೊಂಡ ಮೆರವಣಿಗೆ ನಗರದ ವಿವಿಧ ಪ್ರಮುಖ ಮಾರ್ಗಗಳು ಹಾಗೂ ಮುಸ್ಲಿಂ ಸಮಾಜದ ಮೊಹಲ್ಲಾಗಳಲ್ಲಿ ಸಂಚರಿಸಿತು. ಬಳಿಕ ಜಾಮಿಯಾ ಮಸೀದಿ ಮುಂಭಾಗಕ್ಕೆ ಆಗಮಿಸಿ ಮೆರವಣಿಗೆ ಸಮಾಪ್ತಿಗೊಂಡಿತು.

ಮೆರವಣಿಗೆಯಲ್ಲಿ ನಗರದ ವಿವಿಧ ಮಸೀದಿಗಳ ಧರ್ಮಗುರುಗಳು, ಸುನ್ನಿ ಮುಸ್ಲಿಂ ಜಮಾತ್ ಕಮಿಟಿಯ ಅಧ್ಯಕ್ಷರು, ಕಾರ್ಯದರ್ಶಿ, ಪದಾಧಿಕಾರಿಗಳು ಹಾಗೂ ಸದಸ್ಯರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರು ಪಾಲ್ಗೊಂಡಿದ್ದರು.
ಜುಲುಸ್-ಎ-ಗೌಸಿಯಾ ಹಿನ್ನೆಲೆಯಲ್ಲಿ ಮೆರವಣಿಗೆ ಸಾಗಿದ ಮಾರ್ಗಗಳಲ್ಲಿ ಧಾರ್ಮಿಕ ಶ್ರದ್ಧೆ ಮತ್ತು ಸೌಹಾರ್ದತೆಯ ವಾತಾವರಣ ನಿರ್ಮಾಣವಾಗಿತ್ತು. ಸಮಾಜದ ಮುಖಂಡರು, ಗಣ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಈ ಮೆರವಣಿಗೆಯನ್ನು ಹಜರತ್ ಶೇಕ್ ಸೈಯದ್ ಅಬ್ದುಲ್ ಖಾದರ್ ಜಿಲಾನಿ ರೆಹಮತುಲ್ಲಾ ಅಲೈ (ಗೌಸ್ ಪಾಕ್) ಅವರ ಸ್ಮರಣಾರ್ಥವಾಗಿ ಆಚರಿಸಲಾಗುತ್ತದೆ. ಅವರ ಹೆಸರಿನಲ್ಲಿ ದೇಶಾದ್ಯಂತ ‘ಗ್ಯಾರವಿ ಷರೀಫ್’ ಎಂಬ ಹೆಸರಿನಲ್ಲಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬದ ಅಂಗವಾಗಿ ನಗರದ ಎಲ್ಲಾ ಮಸೀದಿಗಳಲ್ಲಿ ಸುಮಾರು 11 ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. 11ನೇ ದಿನವನ್ನು ಕೊನೆಯ ದಿನವಾಗಿ ಆಚರಿಸಿ, ಅದರ ಅಂಗವಾಗಿ ಜುಲುಸ್-ಎ-ಗೌಸಿಯಾ ಮೆರವಣಿಗೆ ನಡೆಸಲಾಗುತ್ತದೆ.
Hassan
ಕರ್ತವ್ಯಲೋಪ ಆರೋಪ: ಭೂಮಾಪಕ ಮನು ಎಸ್.ಆರ್. ಅಮಾನತು
ಸಕಲೇಶಪುರ: ತಾಲೂಕಿನ ಬೆಳಗೋಡು ಹೋಬಳಿಯ ಉದೇವಾರ ಗ್ರಾಮದ ಸರ್ವೇ ನಂ.173ಕ್ಕೆ ಸಂಬಂಧಿಸಿದ ಸರ್ವೇ ಹಾಗೂ ಸ್ಕೆಚ್ ತಯಾರಿಕೆ ಪ್ರಕರಣದಲ್ಲಿ ಕರ್ತವ್ಯಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದ ಹಿನ್ನೆಲೆಯಲ್ಲಿ ಸಕಲೇಶಪುರ ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯ ಭೂಮಾಪಕ ಮನು ಎಸ್.ಆರ್. ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.

ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕರು ಹಾಗೂ ಪದನಿಮಿತ್ತ ಭೂದಾಖಲೆಗಳ ಉಪನಿರ್ದೇಶಕರಾದ ಹೇಮಲತಾ ಎಂ.ಡಿ. ಅವರು ಸೆ.22ರಂದು ಅಮಾನತು ಆದೇಶ ಹೊರಡಿಸಿದ್ದಾರೆ.
ಉದೇವಾರ ಗ್ರಾಮದ ಸರ್ವೇ ನಂ.173ರ ಜಮೀನಿಗೆ ಸಂಬಂಧಿಸಿದಂತೆ ಯು.ಕೆ. ಶಂಕರಾಚಾರ್ ಅವರು ಜು.10ರಂದು ದೂರು ಸಲ್ಲಿಸಿದ್ದರು. ತಾವು ಸ್ವಾಧೀನಾನುಭವದಲ್ಲಿರುವ ಜಮೀನಿನ ಸರ್ವೇ ನಡೆಸುವ ಸಂದರ್ಭದಲ್ಲಿ ಯಾವುದೇ ನೋಟಿಸ್ ಅಥವಾ ಮಾಹಿತಿ ನೀಡದೆ ಬೇಲಿ ದಾಟಿ ಸರ್ವೇ ನಡೆಸಲಾಗಿದೆ. ಅಲ್ಲದೆ, ಸರ್ವೇ ವರದಿಯಲ್ಲಿ ತಮ್ಮ ಸಹಿಯನ್ನು ನಕಲು ಮಾಡಿ ಮಾಲತಿ ನೇತ್ರಾನಂದ ಅವರ ಹೆಸರಿಗೆ ಅನುಕೂಲವಾಗುವಂತೆ ಸ್ಕೆಚ್ ತಯಾರಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.
ದೂರುದಾರರ ಪ್ರಕಾರ, ಸರ್ವೇ ನಂ.173ರಲ್ಲಿ ಒಟ್ಟು 3 ಎಕರೆ ಜಮೀನಿದ್ದು, ಈ ಪೈಕಿ 1 ಎಕರೆ 17 ಗುಂಟೆ ಜಮೀನು ಶಂಕರಾಚಾರ್ ಅವರ ಹೆಸರಿಗೆ ಮಂಜೂರಾಗಿದೆ. ಉಳಿದ 1 ಎಕರೆ 23 ಗುಂಟೆ ಜಮೀನು ಸಹ ತಮ್ಮ ಸ್ವಾಧೀನಾನುಭವದಲ್ಲಿದ್ದು, ಕಾಫಿ, ಕಾಳುಮೆಣಸು ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆದಿರುವುದಾಗಿ ಅವರು ದೂರಿನಲ್ಲಿ ತಿಳಿಸಿದ್ದರು.
ಈ ನಡುವೆ ಮಾಲತಿ ನೇತ್ರಾನಂದ ಅವರ ಹೆಸರಿಗೆ ತಯಾರಿಸಲಾದ ಸರ್ವೇ ಸ್ಕೆಚ್‌ನಲ್ಲಿ ನ್ಯೂನತೆಗಳಿವೆ ಎಂಬ ಆರೋಪವೂ ಕೇಳಿಬಂದಿತ್ತು. ಸ್ಕೆಚ್ ರದ್ದುಪಡಿಸಿ ಒಂದು ತಿಂಗಳೊಳಗೆ ಹೊಸ ಸ್ಕೆಚ್ ತಯಾರಿಸುವುದಾಗಿ ಭೂಮಾಪಕರು ಛಾಪಾಕಾಗದದಲ್ಲಿ ಬರೆದುಕೊಟ್ಟು ನೋಟರಿ ದೃಢೀಕರಣ ಮಾಡಿಸಿದ್ದಾರೆ ಎಂಬ ಅಂಶವೂ ಪ್ರಕರಣದಲ್ಲಿ ಉಲ್ಲೇಖಗೊಂಡಿದೆ.
ದೂರಿನ ಹಿನ್ನೆಲೆಯಲ್ಲಿ ಭೂದಾಖಲೆಗಳ ಸಹಾಯಕ ನಿರ್ದೇಶಕರು ವಿಚಾರಣೆ ಪ್ರಕ್ರಿಯೆ ಕೈಗೊಂಡಿದ್ದರು. ಸೆ.19ರಂದು ನಡೆದ ಪ್ರಜಾಸೇವಾ ಆಂದೋಲನ ಕಾರ್ಯಕ್ರಮದಲ್ಲಿಯೂ ಈ ಪ್ರಕರಣ ಪ್ರಸ್ತಾಪವಾಗಿದ್ದು, ಜಿಲ್ಲಾಧಿಕಾರಿಗಳು ಅಗತ್ಯ ಕ್ರಮಕ್ಕೆ ಸೂಚನೆ ನೀಡಿದ್ದರು.
ಪ್ರಕರಣದಲ್ಲಿ ಭೂಮಾಪಕ ಮನು ಎಸ್.ಆರ್. ಅವರಿಂದ ಕರ್ತವ್ಯಲೋಪವಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಅಮಾನತು ಆದೇಶದಲ್ಲಿ ತಿಳಿಸಲಾಗಿದೆ. ಸರ್ಕಾರಿ ನೌಕರರ ನಡತೆ ನಿಯಮಗಳ ಉಲ್ಲಂಘನೆ ಆರೋಪದ ಹಿನ್ನೆಲೆಯಲ್ಲಿ ಶಿಸ್ತು ಪ್ರಕರಣವನ್ನು ಕಾಯ್ದಿರಿಸಿ, ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿ-1957ರ ನಿಯಮ 10(1)(ಡಿ) ಅಡಿಯಲ್ಲಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತಿನಲ್ಲಿರಿಸಲಾಗಿದೆ.
ಅಮಾನತುಗೊಂಡ ನೌಕರರ ಹುದ್ದೆಯ ಮೇಲಿನ ಹಕ್ಕನ್ನು ಬೇಲೂರು ತಾಲೂಕು ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಗೆ ಸ್ಥಳಾಂತರಿಸಲಾಗಿದೆ. ಅಮಾನತು ಅವಧಿಯಲ್ಲಿ ನಿಯಮಾನುಸಾರ ಜೀವನಾಧಾರ ಭತ್ಯೆ ಪಾವತಿಸಲು ಹಾಗೂ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಪಡೆಯದೆ ಕೇಂದ್ರ ಸ್ಥಾನ ಬಿಡದಂತೆ ಆದೇಶದಲ್ಲಿ ಸೂಚಿಸಲಾಗಿದೆ.
-
State12 hours agoರೇಷನ್ ಕಾರ್ಡ್ ಇ-ಕೆವೈಸಿಗೆ ಅಕ್ಟೋಬರ್ 20ರವರೆಗೆ ಅವಕಾಶ!!
-
Hassan8 hours agoಭಗತ್ಸಿಂಗ್ ಜನ್ಮದಿನದ ಅಂಗವಾಗಿ ಸೆ.27ರಂದು ರಾಜ್ಯಮಟ್ಟದ ವೈಚಾರಕ ಸಮಾವೇಶ
-
Mysore9 hours agoFIR ದಾಖಲಾದ ಬೆನ್ನಲ್ಲೇ ಪ್ರತಾಪ್ ಸಿಂಹ ಪ್ರತಿಕ್ರಿಯೆ
-
Kodagu11 hours agoಕರಿಕೆಯಲ್ಲಿ ಪೋಷಣ್ ವಾಟಿಕಾ ಉತ್ಪನ್ನ ಹಾಗೂ ಸ್ಥಳೀಯ ಆಹಾರ ಪ್ರದರ್ಶನ
-
National6 hours agoSIR ವಿಚಾರ: ಚುನಾವಣಾ ಆಯೋಗದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ
-
State10 hours agoಕಸ್ತೂರಿ ರಂಗನ್ ವರದಿ; ಸುಪ್ರೀಂ ಕೋರ್ಟ್ನಲ್ಲಿ ರಾಜ್ಯದ ಅಭಿಪ್ರಾಯ ಮಂಡಿಸಲು ಹಿರಿಯ ವಕೀಲರ ನೇಮಕ: ಡಿಕೆಶಿ
-
Chamarajanagar4 hours agoಸಂಚಾರಿ ನಿಯಮ ಉಲ್ಲಂಘನೆ ಪತ್ತೆಗೆ ಎಎನ್ಪಿಆರ್ ಕ್ಯಾಮೆರಾ ಅಳವಡಿಕೆ
-
Chikmagalur3 hours agoಸೆ. 30ರಂದು ಕೊಳ್ಳೇಗಾಲಕ್ಕೆ ಮುಖ್ಯಮಂತ್ರಿಗಳ ಭೇಟಿ ಹಿನ್ನೆಲೆ : ಶಾಸಕ ಎ.ಆರ್. ಕೃಷ್ಣಮೂರ್ತಿ ಅವರಿಂದ ಸ್ಥಳ ಪರಿಶೀಲನೆ
