ಗಾಂಧಿನಗರ: ಭಾರತ ವಿಶ್ವಬಂಧು ಭಾವನೆಯಲ್ಲಿ ಮುಂದೆ ಸಾಗುತ್ತಿದ್ದು, ನಮಗೆ ಈ ಪ್ರಪಂಚದಲ್ಲಿ ಯಾರೂ ಶತ್ರುಗಳಿಲ್ಲ . ಆದರೆ ಬೇರೆ ದೇಶದ ಮೇಲಿನ ಅವಲಂಬನೆಯೇ ನಮ್ಮ ದೊಡ್ಡ ಶತ್ರುವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
ಗುಜರಾತ್‌ನ ಭಾವನನಗರದಲ್ಲಿ ಇಂದು ನಡೆದ ಸಮುದ್ರ ಸೆ ಸಮೃದ್ಧಿ ಕಾರ್ಯಕ್ರಮದಲ್ಲಿ ಭಾಗವಹಿಸಿ 34,200 ಕೋಟಿ ರೂಪಾಯಿಗಳ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಬಳಿಕ ಸಾರ್ವಜನಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಅಮೆರಿಕಾ ಅಧ್ಯಕ್ಷ ಟ್ರಂಪ್ ಶೇ. 50% ಸುಂಕ ನೀತಿಗೆ ಗುದ್ದು ನೀಡಿದರು. ಆತ್ಮನಿರ್ಭರ ಭಾರತದ ಮಹತ್ವವನ್ನು ಪ್ರತಿಪಾದಿಸುತ್ತಾ, ಭಾರತದಲ್ಲೇ ತಯಾರಾದ ಉತ್ಪನ್ನ ಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ವಿದೇಶಗಳ ಮೇಲಿನ ಅವಲಂಬನೆ ಕಡಿಮೆ ಮಾಡಬೇಕು ಎಂದು ದೇಶದ ಜನತೆಗೆ ಕರೆ ನೀಡಿದರು.
ಇಂದು ಭಾರತ ವಿಶ್ವಬಂಧು ಭಾವನೆಯಿಂದ ಮುಂದುವರಿಯುತ್ತಿದೆ. ಹಾಗಾಗಿ ಜಗತ್ತಿನಲ್ಲಿ ನಮಗೆ ಯಾವುದೇ ದೊಡ್ಡ ಶತ್ರು ಇಲ್ಲ. ಆದರೆ ಇತರರ ಮೇಲಿನ ಅವಲಂಬನೆಯೇ ನಮಗೆ ದೊಡ್ಡ ಶತ್ರು. ಆದ್ದರಿಂದ ನಾವು ಒಟ್ಟಾಗಿ ಈ ಅವಲಂಬನೆಯ ಶತ್ರುವನ್ನು ಸೋಲಿಸಬೇಕು ಎಂದರು.
ವಿದೇಶಿ ಅವಲಂಬನೆ ಹೆಚ್ಚಾದಷ್ಟು ದೇಶದ ವೈಫಲ್ಯ ಹೆಚ್ಚಾಗುತ್ತದೆ. ಹೀಗಾಗಿ ವಿಶ್ವದಲ್ಲೇ ಅತಿಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ನಾವು ದೇಶದ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗಾಗಿ ಆತ್ಮನಿರ್ಭರವಾಗಬೇಕು. ಇತರರ ಮೇಲೆ ಅವಲಂಬಿತರಾಗಿದ್ದರೆ, ನಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಗುತ್ತದೆ. ಭಾರತದ ಅಭಿವೃದ್ಧಿಯನ್ನು ಇತರ ದೇಶಗಳ ಮೇಲೆ ಬಿಡಬಾರದು. ಭವಿಷ್ಯದ ಪೀಳಿಗೆಯನ್ನು ಪಣಕ್ಕಿಡಬಾರದು. 140 ಕೋಟಿ ದೇಶವಾಸಿಗಳ ಭವಿಷ್ಯವನ್ನ ನಾವು ಇತರರಿಗೆ ಬಿಡಲು ಸಾಧ್ಯವಿಲ್ಲ ಎಂದು ಹೇಳಿದರು.

ಒಂದು ರಾಷ್ಟ್ರ – ಒಂದು ದಾಖಲಾತಿ ಎಂಬ ಹೊಸ ಸುಧಾರಣೆ ಜಾರಿ
ಈ ಸಂದರ್ಭದಲ್ಲಿ ಭಾರತೀಯ ಬಂದರುಗಳ ದಾಖಲಾತಿಗೆ ಸಂಬಂಧಿಸಿದ ಸುಧಾರಣೆಗಳನ್ನು ಪರಿಚಯಿಸುವುದಾಗಿ ಹೇಳಿದ ಅವರು, ಶೀಘ್ರದಲ್ಲೇ ಭಾರತೀಯ ಬಂಧರುಗಳಿಗೆ ಒಂದು ರಾಷ್ಟ್ರ – ಒಂದು ದಾಖಲಾತಿ ಎಂಬ ಹೊಸ ಸುಧಾರಣೆ ತರಲಿದ್ದೇವೆ. ಇದು ವ್ಯಾಪಾರವನ್ನು ಸುಲಭಗೊಳಿಸುತ್ತದೆ ಎಂದು ತಿಳಿಸಿದರು.
ಇನ್ನು ಭಾರತದಲ್ಲಿ ತಯಾರಿಸಬೇಕಾದ ವೈವಿಧ್ಯಮಯ ಉತ್ಪನ್ನಗಳ ಬಗ್ಗೆ ಮಾತನಾಡಿದ ಅವರು, ಚಿಪ್ ಆಗಲಿ ಶಿಪ್ ಆಗಲಿ ನಾವು ಎಲ್ಲವನ್ನೂ ಭಾರತದಲ್ಲೇ ತಯಾರಿಸಬೇಕು. ಅದಕ್ಕಾಗಿ ವಿಶ್ವದ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ನಾವು ದೇಶದ ಸಂಪತನ್ನು ಕಾಪಾಡಿಕೊಳ್ಳಲು ಸ್ವಾವಲಂಬಿಗಳಾಗಬೇಕು ಎಂದು ಹೇಳಿದರು.
ಇದೇ ವೇಳೆ ಭಾರತದಲ್ಲಿ ಉಕ್ಕಿನಿಂದ ತಯಾರಿಸಿದ ಐಎನ್‌ಎಸ್ ವಿಕ್ರಾಂತ್ ಉಲ್ಲೇಖಿಸಿ ಮಾತನಾಡಿದ ಅವರು, ಸ್ವಾವಲಂಬನೆಯ ಅಗಾಧ ಸಾಮರ್ಥ್ಯಕ್ಕೆ ಉದಾಹರಣೆ ನೀಡಿದರು. ಭಾರತ 40ಕ್ಕೂ ಹೆಚ್ಚು ಹಡಗುಗಳು ಮತ್ತು ಜಲಾಂತರ್ಗಾಮಿ ನೌಕೆಗಳನ್ನು ಪರಿಚಯಿಯಿಸಿದೆ ಎಂದು ತಿಳಿಸಿದರು.