Connect with us

Cinema

ಡಾ.ವಿಷ್ಣುವರ್ಧನ್‌ ಸ್ಮಾರಕ ನೆಲಸಮ| ಸರ್ಕಾರ ಮಧ್ಯೆ ಪ್ರವೇಶಿಸಬೇಕು: ನಟ ಕಿಚ್ಚ ಸುದೀಪ

Published

on

ಬೆಂಗಳೂರು: ರಾತ್ರೋ  ರಾತ್ರಿ ನಟ ಡಾ. ವಿಷ್ಣುವರ್ಧನ್‌ ಸಮಾಧಿಯನ್ನು ನೆಲಸಮ ಮಾಡಿದ್ದರಿಂದ ಅಭಿಮಾನಿಗಳ ಆಕ್ರೋಶ ಕಟ್ಟೆಯೊಡೆದಿದೆ. ವಿಷ್ಣು ಸಮಾಧಿ ಸ್ಥಳವನ್ನು ಉಳಿಸಿಕೊಳ್ಳಲು ಅಭಿಮಾನಿಗಳು ಹೋರಾಟ ನಡೆಸುತ್ತಿದ್ದಾರೆ. ಇದಕ್ಕೆ ಪೂರಕವಾಗುವಂತೆ ಟ ಕಿಚ್ಚ ಸುದೀಪ್‌ ಅಭಿಮಾನಿಗಳ ಹೋರಾಟಕ್ಕೆ ಈಗ ಕೂಡ ಕೈ ಜೋಡಿಸಿದ್ದು, ಸರ್ಕಾರ ಮಧ್ಯೆ ಪ್ರವೇಶಿಸಬೇಕು. ನ್ಯಾಯಾಲಯಕ್ಕೆ ಹೋಗುವುದಾದರೆ, ನಾನೂ ಬರಲು ಸಿದ್ಧ ಎಂದು ತಿಳಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ತಮ್ಮ ಅಧಿಕೃತ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಅವರು, ಸಾಹಸ ಸಿಂಹ ವಿಷ್ಣುವರ್ಧನ್ ಅಂದರೆ ಅದು ಎಂದೂ ಮುಗಿಯದ ಒಂದು ಅಭಿಮಾನ, ಗೌರವ. ಮೊನ್ನೆ ರಾತ್ರಿ, ಅವರ ಸ್ಮಾರಕವನ್ನ ಒಡೆದು ಹಾಕಿರುವುದು, ನಾವು ವರ್ಷಾನೂಗಟ್ಟಲೆ ಇಂದ ನಂಬಿ, ಮೊರೆ ಹೋದಂತಹ ಒಂದು ದೇವರ ದೇವಸ್ಥಾನವನ್ನುಒಡೆದು ಹಾಕಿದಾಗ ಎಷ್ಟು ನೋವು ಆಗುತ್ತದೋ, ಅಷ್ಟೇ ನೋವು ಮತ್ತು ಸಂಕಟ ನನಗಾಗಿದೆ. ಇದು ಹೈ ಕೋರ್ಟ್ ಆದೇಶ, ನ್ಯಾಯಾಲಯದ ಆದೇಶ ಅಂತಾರೆ. ಆದರೆ, ಸರ್ಕಾರಗಳ ಮುಖಾಂತರ, ಸರ್ಕಾರದಲ್ಲಿ ಇರುವ ಮಂತ್ರಿಗಳ ಮುಖಾಂತರ, ವಿಷ್ಣು ಸ್ಮಾರಕವನ್ನು ಉಳಿಸಿಕೊಳ್ಳುವುದಕ್ಕೆ ಏನೇನು ಕ್ರಮ ತೆಗೆದುಕೊಳ್ಳಬೇಕು ಅನ್ನುವುದನ್ನು ನಾವು ತುಂಬಾ ಹೋರಾಟ ಮಾಡಿದೆವು. ಸಂಬಂಧ ಪಟ್ಟ ಮಂತ್ರಿಗಳಿಗೆ ಹೇಳಿದೆವು. ಅದಕ್ಕೆ ಹಣ ಕಾಸು ಬೇಕಾ? ಮತ್ತೇನಾದರೂ ಬೇಕಾ? ಎಲ್ಲದಕ್ಕೂ ನಾವು ಸಿದ್ಧರಿದ್ದೀವಿ ಅಂತ ನಾನೇ ಸ್ವತಃ ಹೇಳಿದ್ದೆ ಎಂದಿದ್ದಾರೆ.

ಆದರೂ ಸರ್ಕಾರ ಇದರ ಬಗ್ಗೆ ಗಮನ ತೆಗೆದುಕೊಳ್ಳಲಿಲ್ಲವೋ, ಅಥವಾ ನ್ಯಾಯಾಲಯಕ್ಕೆ ಸಮಾಧಿ ಮಾಡದೆ, ಭೂಮಿಯಲ್ಲಿ ಹೂಳದೆ, ಚಿತೆ ಇಟ್ಟ ಕಡೆ ಸ್ಮಾರಕ ಅಲ್ಲ, ಆಗಲೇ ಮೈಸೂರಿನಲ್ಲಿ ಒಂದು ಸ್ಮಾರಕ ಇದೆ. ಅದನ್ನೇ ಅಧಿಕೃತ ಸ್ಮಾರಕವಾಗಿ ಅವರನ್ನ ಗೌರವಿಸುದುದಕ್ಕೆ ಇಟ್ಟುಕೊಳ್ಳಿ ಅಂತ ಮಾಹಿತಿ ನೀಡಿ ಹೈ ಕೋರ್ಟ್ ಕೂಡ ಆದೇಶ ಮಾಡಿದೆ. ನಾವು ನ್ಯಾಯಾಲಯದ ವಿರುದ್ಧ ಮಾತನಾಡಲು ಆಗುವುದಿಲ್ಲ. ಮತ್ತೆ ನ್ಯಾಯಾಲಯಕ್ಕೆ ಹೋಗಿ, ಯಾವ ಸಂಸ್ಥೆ ಅಥವಾ ವ್ಯಕ್ತಿ ಅದನ್ನು ಖರೀದಿ ಮಾಡಿರುವರೋ, ಅವರ ಮನ ಒಲಿಸಿ, ಅವರಿಗೆ ಸಾಹಸ ಸಿಂಹರ ಸ್ಮಾರಕ ಇದ್ದ, ಅಷ್ಟು ಜಾಗವನ್ನಾದರೂ ನಮಗೆ ಉಳಿಸಿ ಕೊಡುವುದಕ್ಕೆ ಮನವಿ ಮಾಡಲು ನಾನು ತಯಾರಿದ್ದೀನಿ ಎಂದು ಹೇಳಿದ್ದಾರೆ.

ಸರ್ಕಾರ ಮಧ್ಯ ಪ್ರವೇಶಿಸುವುದರಿಂದ ಇದು ಬಗೆ ಹರಿಯುತ್ತದೆ ಎನ್ನುವುದಾದರೆ, ಸರ್ಕಾರಕ್ಕೂ ಮನವಿ ಮಾಡಲು ತಯಾರಿದ್ದೀನಿ. ನಾನು ವಿಷ್ಣುವರ್ಧನ್ ಅವರ ಒಬ್ಬ ಅಭಿಮಾನಿಯಾಗಿ ಮಾತನಾಡುತ್ತಿದೀನಿ, ಕಿಚ್ಚ ಆಗಿ ಅಲ್ಲ. ಅತಿಯಾದ ನೋವಿದೆ, ವಿಷ್ಣುವರ್ಧನ್ ಅವರಿಗೆ ಆಧ್ಯಾತ್ಮದಲ್ಲಿ ಒಲವಿತ್ತು. ಅವರು ಯಾವಾಗಲೂ ಹೇಳುತ್ತಿದ್ದರು- ನಾನು ರೂಪಕ ಆಗಬೇಕು. ಯಾವುದೋ ಕಟ್ಟಡಕ್ಕೆ ಹೋಗಿ ಸೇರಬಾರದು, ಸ್ಥಾವರಗಳಿಗೆ ಉಳಿಯಬಾರದು. ನಾನು ಪಂಚಭೂತಗಳಲ್ಲಿ ಇರಬೇಕು. ನಾವು ನೇಚರ್ ಗೆ ಸಂಬಂಧ ಪಟ್ಟವರು ಅಂತ. ಒಂದು ಲೆಕ್ಕದಲ್ಲಿ ಅವರ ಇನ್ನೊಂದು ಆಸೆ ಈಡೇರಿದಂತೆ ಅನಿಸುತಿದೆ. ಆದರೆ, ಇದು ನಾವು ಎಲ್ಲ ಸಾಮಾನ್ಯ ಅಭಿಮಾನಿಗಳಿಗೆ, ಜನರಿಗೆ ಅರ್ಥ ಆಗುವುದಿಲ್ಲ. ಪೋಸ್ಟ್ ಹಾಕಲು ಹೇಗೆ ಒಂದು ಪೋಸ್ಟ್ ಬಾಕ್ಸ್ ಬೇಕೋ, ಹಾಗೆ ನಾವು ಗೌರವ ಸಲ್ಲಿಸಲು, ಪೂಜೆ ಮಾಡಲು ಒಂದು ದೇವಸ್ಥಾನ ಬೇಕು, ಸ್ಮಾರಕ ಬೇಕು ಎಂದು ತಿಳಿಸಿದ್ದಾರೆ.

ವಿಷ್ಣುವರ್ಧನ್ ಅಂತಹ ಒಬ್ಬ ಮೇರೂ ನಟರಿಗೆ, ಬೆಂಗಳೂರಿನಂತಹ ಒಂದು ರಾಜಧಾನಿಯಲ್ಲಿ, ಒಂದು ಅರ್ಧ ಎಕರೆ ಜಾಗ ಕೊಡಲಿಲ್ಲ, ಅವರ ಹೆಸರಿನಲ್ಲಿ, ಒಂದು ಪ್ರಾರ್ಥನೆ ಮಾಡಲು, ಅವರನ್ನು ನೋಡಲು, ಅವರ ಜನ್ಮ ದಿನ ಆಚರಿಸಲು, ನಮ್ಮ ಬಳಿ ಒಂದು ಜಾಗ ಇಲ್ಲ ಅಂದರೆ, ಇದು ಅತ್ಯಂತ ಖಂಡನೀಯ ವಿಷಯ. ನಾನು ಕೇಳ್ಪಟ್ಟೆ, ಬಾಲಕೃಷ್ಣ ಅಂತಹ ಹಿರಿಯ ನಟರ ಸಮಾಧಿಯನ್ನು ಕೂಡ ಒಡೆದು ಹಾಕಿದ್ದಾರೆ. ಅಲ್ಲಿದಂತಹ ಒಂದು ಗಣಪತಿ ದೇವಸ್ಥಾನವೂ ಈಗಲ್ಲಿ ಇಲ್ಲ. ವಿಷ್ಣು ಅವರ ಸ್ಮಾರಕ ಕೂಡ ಅಲ್ಲಿ ಇಲ್ಲ ಅಂದರೆ ಏನು ಅರ್ಥ? ಮನುಷ್ಯನ ಭಾವನೆಗಳಿಗಿಂತ, ಗೌರವಕ್ಕಿಂತ, ಅಭಿಮಾನಕ್ಕಿಂತ, ಈ ಒಂದು ಭೂಮಿ ವ್ಯವಹಾರ ಅಷ್ಟು ದೊಡ್ಡದಾಯಿತಾ? ಹಣ ನಮಗೆ ಅಷ್ಟು ಮುಖ್ಯ ಅಲ್ಲ. ಸರ್ಕಾರ ಮಧ್ಯ ಪ್ರವೇಶ ಮಾಡಬೇಕು. ಇದು ನನ್ನ ವಿನಂತಿ. ನ್ಯಾಯಾಲಯಕ್ಕೆ ಹೋಗುವುದಾದರೆ, ನಾನೂ ಬರಲು ಸಿದ್ಧ ಎಂದು ಮನವಿ  ಮಾಡಿದ್ದಾರೆ.

ಸರ್ಕಾರ, ನ್ಯಾಯಾಲಯ ಮತ್ತು ಆ ಭೂಮಿ ಖರೀದಿ ಮಾಡಿರುವವರಲ್ಲಿ ನನ್ನದೊಂದು ಮನವಿ- ನಿಮಗೆ ಏನು ಹಣಕಾಸು ಬೇಕೋ, ಅದನ್ನು ಕೊಡಲು ನಾನು ಮತ್ತು ನನ್ನಂತಹ ಲಕ್ಷಾಂತರ ಜನರು ಮುಂದೆ ಬರುತ್ತೇವೆ. ನಾನೇ ಮುಂದೆ ನಿಂತು ಅದನ್ನು ಮತ್ತೆ ಒಂದು ಸ್ಮಾರಕವಾಗಿ ಮರುಸ್ಥಾಪನೆ ಮಾಡುವುದಕ್ಕೆ ಮುಂದಾಗಿತ್ತೇನೆ. ಅದಕ್ಕೆಒಂದು ಅವಕಾಶ ಮಾಡಿ ಕೊಡಿ. ಅವರು ನಮ್ಮ ಎದೆಯ ಒಳಗೆ ಸದಾ ಇರುತ್ತಾರೆ ನಿಜ. ಹಾಗಂತ ಪ್ರಾರ್ಥನೆ, ಗೌರವಕ್ಕೆ ಸಂಕೇತವಾಗಿ ಒಂದು ಸ್ಥಳ ಬೇಕು. ಆ ಪ್ರೀತಿಗೆ, ಪ್ರೇಮಕ್ಕೆ, ಅಭಿಮಾನಕ್ಕೆ ದ್ರೋಹ ಮಾಡಬೇಡಿ ಅಂತ ನಾನು ವಿನಂತಿ ಮಾಡುತ್ತೇನೆ. ನಿಮ್ಮ ಪ್ರೀತಿಯ ಕಿಚ್ಚ ಎಂದು ತಿಳಿಸಿದ್ದಾರೆ.

Continue Reading

Cinema

‘ಟಾಕ್ಸಿಕ್’ ತಬಾಹಿ ಹಾಡು ವೈರಲ್: ಯಶ್ ಅವರ ಹಳೆಯ ರೊಮ್ಯಾಂಟಿಕ್ ದೃಶ್ಯದ ಹೇಳಿಕೆ ಮತ್ತೆ ಚರ್ಚೆಯಲ್ಲಿ

Published

on

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಚಿತ್ರದ ‘ತಬಾಹಿ’ ಹಾಡು ಬಿಡುಗಡೆಯಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಮೂಡಿಸಿದೆ. ಹಾಡಿನಲ್ಲಿರುವ ರೊಮ್ಯಾಂಟಿಕ್ ಹಾಗೂ ಬೋಲ್ಡ್ ದೃಶ್ಯಗಳು ಸಿನಿಪ್ರಿಯರ ಗಮನ ಸೆಳೆದಿದ್ದು, ಯಶ್ ಮತ್ತು ಕಿಯಾರಾ ಅಡ್ವಾಣಿ ಅವರ ಜೋಡಿ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ.

ಈ ಬೆಳವಣಿಗೆಯ ನಡುವೆ, ಯಶ್ ಅವರು ಈ ಹಿಂದೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ನೀಡಿದ್ದ ಹೇಳಿಕೆ ಮತ್ತೆ ವೈರಲ್ ಆಗಿದೆ. ಆ ಸಂದರ್ಭದಲ್ಲಿ ಮಾತನಾಡಿದ್ದ ಅವರು, ರೊಮ್ಯಾಂಟಿಕ್ ದೃಶ್ಯಗಳಲ್ಲಿ ನಟಿಸುವುದು ತಮ್ಮ ಪಾಲಿಗೆ ಅತ್ಯಂತ ಸವಾಲಿನ ಕೆಲಸ ಎಂದು ಹೇಳಿದ್ದರು.

“ಜನರು ನೀವು ರೊಮ್ಯಾಂಟಿಕ್ ದೃಶ್ಯಗಳನ್ನು ಚೆನ್ನಾಗಿ ಮಾಡುತ್ತೀರಿ ಎಂದು ಹೇಳಿದಾಗ ನನಗೆ ಅಚ್ಚರಿಯಾಗುತ್ತದೆ. ಅಂತಹ ದೃಶ್ಯಗಳನ್ನು ಮಾಡುವಾಗ ನಾನು ತುಂಬಾ ನರ್ವಸ್ ಆಗುತ್ತಿದ್ದೆ. ನಾನು ರೊಮ್ಯಾಂಟಿಕ್ ಸೀನ್ ಮಾಡುತ್ತಿದ್ದಾಗ ರಾಧಿಕಾ ಸೇರಿದಂತೆ ಸೆಟ್‌ನಲ್ಲಿದ್ದವರು ನನ್ನನ್ನು ನೋಡಿ ನಗುತ್ತಿದ್ದರು,” ಎಂದು ಯಶ್ ಹೇಳಿದ್ದರು.

ಇದೇ ವೇಳೆ, ತಮ್ಮ ವೈಯಕ್ತಿಕ ನಿಲುವಿನ ಬಗ್ಗೆ ಮಾತನಾಡಿದ್ದ ಅವರು, “ನನ್ನ ಪೋಷಕರೊಂದಿಗೆ ಕುಳಿತು ನೋಡಲು ಮುಜುಗರವಾಗುವ ದೃಶ್ಯಗಳಲ್ಲಿ ನಾನು ನಟಿಸುವುದಿಲ್ಲ. ಏಕೆಂದರೆ ಅಂತಹ ದೃಶ್ಯಗಳು ಸಾಮಾನ್ಯ ಪ್ರೇಕ್ಷಕರಿಗೂ ಅಸಹಜ ಭಾವನೆ ಉಂಟುಮಾಡಬಹುದು,” ಎಂದು ತಿಳಿಸಿದ್ದರು.

ಆದರೆ, ಟಾಕ್ಸಿಕ್ ಚಿತ್ರದ ‘ತಬಾಹಿ’ ಹಾಡಿನಲ್ಲಿನ ಆಪ್ತ ದೃಶ್ಯಗಳ ಹಿನ್ನೆಲೆಯಲ್ಲಿ, ಯಶ್ ಅವರ ಈ ಹಿಂದಿನ ಹೇಳಿಕೆ ಮತ್ತೆ ಚರ್ಚೆಗೆ ಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಅವರ ಹಳೆಯ ಮತ್ತು ಇಂದಿನ ಪಾತ್ರದ ಆಯ್ಕೆಯನ್ನು ಹೋಲಿಕೆ ಮಾಡುತ್ತಿದ್ದು, ಇನ್ನೂ ಕೆಲವರು ಚಿತ್ರದ ಕಥೆ ಮತ್ತು ಪಾತ್ರದ ಅಗತ್ಯಕ್ಕೆ ಅನುಗುಣವಾಗಿ ನಟರು ವಿಭಿನ್ನ ರೀತಿಯ ದೃಶ್ಯಗಳಲ್ಲಿ ಅಭಿನಯಿಸುವುದು ಸಹಜ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಆದಾಗ್ಯೂ, ಈ ವಿಚಾರದ ಕುರಿತು ಯಶ್ ಅವರು ಯಾವುದೇ ಹೊಸ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.

Continue Reading

Cinema

ಟಿವಿ TRP ಪ್ರಕಟಣೆ ತಾತ್ಕಾಲಿಕ ಸ್ಥಗಿತ: ವಾಹಿನಿಗಳು, ಜಾಹೀರಾತು ಕ್ಷೇತ್ರಕ್ಕೆ ಹೊಸ ಸವಾಲು

Published

on

ಬೆಂಗಳೂರು: ಭಾರತೀಯ ಟೆಲಿವಿಷನ್ ಉದ್ಯಮಕ್ಕೆ ಮಹತ್ವದ ಬೆಳವಣಿಗೆಯೊಂದರಲ್ಲಿ, ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (BARC) ತನ್ನ ಪರವಾನಗಿ (ಲೈಸೆನ್ಸ್) ನವೀಕರಣ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಎಲ್ಲಾ ಟಿವಿ ಚಾನೆಲ್‌ಗಳ ಟೆಲಿವಿಷನ್ ರೇಟಿಂಗ್ ಪಾಯಿಂಟ್ (TRP) ಪ್ರಕಟಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ಮಾಹಿತಿ ಮತ್ತು ಪ್ರಸಾರ ಸಚಿವಾಲಯ (MIB) ಜಾರಿಗೆ ತಂದಿರುವ ಹೊಸ Television Ratings Policy-2026 ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಮನರಂಜನೆ, ಸುದ್ದಿ, ಕ್ರೀಡೆ, ಸಿನಿಮಾ, ಪ್ರಾದೇಶಿಕ ಹಾಗೂ ಇನ್‌ಫೊಟೇನ್ಮೆಂಟ್ ಸೇರಿದಂತೆ ಎಲ್ಲ ವಿಭಾಗಗಳ ವಾಹಿನಿಗಳ ವಾರದ ವೀಕ್ಷಕರ ಅಂಕಿ-ಅಂಶಗಳು ಸದ್ಯ ಲಭ್ಯವಾಗುವುದಿಲ್ಲ.

TRP ಎನ್ನುವುದು ಟಿವಿ ಕಾರ್ಯಕ್ರಮಗಳು ಮತ್ತು ವಾಹಿನಿಗಳ ವೀಕ್ಷಕರ ಸಂಖ್ಯೆಯನ್ನು ಅಳೆಯುವ ಅಧಿಕೃತ ಮಾನದಂಡವಾಗಿದೆ. ಇದೇ ಅಂಕಿ-ಅಂಶಗಳ ಆಧಾರದ ಮೇಲೆ ಜಾಹೀರಾತು ದರ ನಿಗದಿ, ಸ್ಪಾನ್ಸರ್‌ಶಿಪ್ ಒಪ್ಪಂದಗಳು, ಹೊಸ ಕಾರ್ಯಕ್ರಮಗಳ ಯೋಜನೆ ಹಾಗೂ ವಾಹಿನಿಗಳ ಸ್ಪರ್ಧಾತ್ಮಕ ಸ್ಥಾನಮಾನ ನಿರ್ಧಾರವಾಗುತ್ತದೆ.

TRP ಪ್ರಕಟಣೆ ಸ್ಥಗಿತಗೊಂಡಿರುವುದರಿಂದ ಜಾಹೀರಾತುದಾರರು, ಪ್ರಸಾರ ಸಂಸ್ಥೆಗಳು, ಮೀಡಿಯಾ ಏಜೆನ್ಸಿಗಳು ಹಾಗೂ ಹೂಡಿಕೆದಾರರು ನಿರ್ಧಾರ ಕೈಗೊಳ್ಳುವಲ್ಲಿ ಅನಿಶ್ಚಿತತೆಯನ್ನು ಎದುರಿಸುವ ಸಾಧ್ಯತೆ ಇದೆ. ವಾರದ TRP ಆಧರಿಸಿ ಜಾಹೀರಾತು ಬಜೆಟ್ ಹಂಚಿಕೆ ಮಾಡುವ ಬ್ರ್ಯಾಂಡ್‌ಗಳು ಈಗ ಪರ್ಯಾಯ ಡೇಟಾ ಹಾಗೂ ಡಿಜಿಟಲ್ ವೀಕ್ಷಕರ ಅಂಕಿ-ಅಂಶಗಳನ್ನು ಹೆಚ್ಚಾಗಿ ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ವಾಹಿನಿಗಳಿಗೂ ಈ ಬೆಳವಣಿಗೆ ಸವಾಲಾಗಿ ಪರಿಣಮಿಸಿದೆ. ಹೊಸ ಧಾರಾವಾಹಿಗಳು, ರಿಯಾಲಿಟಿ ಶೋಗಳು ಹಾಗೂ ಕಾರ್ಯಕ್ರಮಗಳ ಸಮಯ ಬದಲಾವಣೆಯಂತಹ ನಿರ್ಧಾರಗಳನ್ನು ಸಾಮಾನ್ಯವಾಗಿ TRP ಆಧರಿಸಿ ಕೈಗೊಳ್ಳಲಾಗುತ್ತಿತ್ತು. ಇದೀಗ ಸಾಮಾಜಿಕ ಜಾಲತಾಣಗಳ ಪ್ರತಿಕ್ರಿಯೆ, ಡಿಜಿಟಲ್ ವೀಕ್ಷಣೆ ಹಾಗೂ ಆಂತರಿಕ ವಿಶ್ಲೇಷಣೆಗಳನ್ನೇ ಹೆಚ್ಚು ಅವಲಂಬಿಸಬೇಕಾಗಿದೆ.

ಭಾರತೀಯ ಟಿವಿ ಉದ್ಯಮದಲ್ಲಿ TRP ಪ್ರಕಟಣೆ ಈ ಹಿಂದೆ 2015ರಲ್ಲಿ BARC ವ್ಯವಸ್ಥೆ ಜಾರಿಗೆ ಬಂದ ವೇಳೆ, 2019ರಲ್ಲಿ TRAI ಹೊಸ ಟ್ಯಾರಿಫ್ ಆದೇಶದ ನಂತರ ಹಾಗೂ 2020ರಲ್ಲಿ TRP ಹಗರಣದ ಹಿನ್ನೆಲೆಯಲ್ಲಿ ಕೆಲವು ವಿಭಾಗಗಳಿಗೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ಆದರೆ ಈ ಬಾರಿ ಸರ್ಕಾರದ ಹೊಸ ನಿಯಮಾವಳಿಯಡಿ ಪರವಾನಗಿ ನವೀಕರಣ ಕಡ್ಡಾಯವಾಗಿರುವುದರಿಂದ ಪ್ರಕಟಣೆ ನಿಲ್ಲಿಸಲಾಗಿದೆ.

BARCಗೆ ಹೊಸ ಪರವಾನಗಿ ಯಾವಾಗ ಸಿಗಲಿದೆ ಎಂಬ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಹೀಗಾಗಿ TRP ವರದಿಗಳು ಯಾವಾಗ ಮರುಪ್ರಾರಂಭವಾಗಲಿವೆ ಎಂಬ ಪ್ರಶ್ನೆಗೆ ಸದ್ಯ ಸ್ಪಷ್ಟ ಉತ್ತರ ಇಲ್ಲ.

Continue Reading

Cinema

ಆಪ್ತನ ಅಗಲಿಕೆಗೆ ಕಂಗಾಲಾದ ನಟಿ ಕೃಷಿ ತಾಪಂಡ: ಗೆಳೆಯ ವೈಶಾಕ್ ನೆನೆದು ಭಾವುಕ ಪೋಸ್ಟ್!

Published

on

ಬೆಂಗಳೂರು : ಇತ್ತೀಚೆಗೆ ನಟಿ ಕೃಷಿ ತಾಪಂಡ ಅವರು ವಾಸವಿದ್ದ ಫ್ಲ್ಯಾಟ್‌ನಲ್ಲೇ ಅವರ ಆಪ್ತ ಗೆಳೆಯ ವೈಶಾಕ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಈ ಬಗ್ಗೆ ನಟಿ ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದಾರೆ.

“ಇಂತಹದ್ದೊಂದು ಬರಹವನ್ನು ಬರೆಯಬೇಕಾಗಿ ಬರುತ್ತದೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ. ನನಗೆ ಈ ಸಮಯದಲ್ಲಿ ಯಾವುದೇ ಸಾರ್ವಜನಿಕ ಹೇಳಿಕೆ ನೀಡುವ ಮಾನಸಿಕ ಶಕ್ತಿ ಇಲ್ಲದಿದ್ದರೂ, ಸುತ್ತಲೂ ಕೇಳಿಬರುತ್ತಿರುವ ನಿರಂತರ ಊಹಾಪೋಹಗಳು ಮತ್ತು ಪ್ರಶ್ನೆಗಳಿಂದಾಗಿ ಈ ಸ್ಪಷ್ಟನೆ ನೀಡುತ್ತಿದ್ದೇನೆ. ನನಗೆ ಅತ್ಯಂತ ಆಪ್ತರಾಗಿದ್ದ, ನನ್ನನ್ನು ರಕ್ಷಿಸುತ್ತಿದ್ದ ವ್ಯಕ್ತಿಯನ್ನು ಕಳೆದುಕೊಂಡ ನೋವಿನಲ್ಲಿ ನಾನಿದ್ದೇನೆ. ಈ ನಷ್ಟದಿಂದ ಹೊರಬರಲು ನನಗೆ ಸಾಧ್ಯವಾಗುತ್ತಿಲ್ಲ” ಎಂದು ಪೋಸ್ಟ್ ಮಾಡಿದ್ದಾರೆ.

“ಅವರ ಕುಟುಂಬ ಮತ್ತು ಆಪ್ತರು ಈ ದೊಡ್ಡ ನಷ್ಟವನ್ನು ಅರಗಿಸಿಕೊಳ್ಳಲು ಹೆಣಗಾಡುತ್ತಿರುವಾಗ, ನಿರಂತರವಾಗಿ ಕಥೆಗಳನ್ನು ಸೃಷ್ಟಿಸಲಾಗುತ್ತಿದೆ. ಕೆಲವು ಮಾಧ್ಯಮಗಳು ಗೌರವಯುತವಾಗಿ ನಡೆದುಕೊಂಡರೆ, ಇನ್ನು ಕೆಲವು ಕೇವಲ ರಿಯಾಕ್ಷನ್‌ಗಾಗಿ ಒತ್ತಾಯಿಸುತ್ತಿವೆ. ನೀವು ಹೇಗಿದ್ದೀರಾ ಎಂದು ಕೇಳುವ ಬದಲು ನಿಮ್ಮ ರಿಯಾಕ್ಷನ್ ಏನು ಎಂದು ಕೇಳುತ್ತಿದ್ದಾರೆ” ಎಂದಿದ್ದಾರೆ.

“ಇಲ್ಲಿ ಒಂದು ಕುಟುಂಬ ತನ್ನ ಮಗನನ್ನು ಕಳೆದುಕೊಂಡಿದೆ. ಸ್ನೇಹಿತರು ತಮ್ಮ ಆಪ್ತನನ್ನು ಕಳೆದುಕೊಂಡಿದ್ದಾರೆ. ಪ್ರತಿಯೊಂದು ಅನಗತ್ಯ ಪ್ರಶ್ನೆ, ಊಹೆ ಮತ್ತು ವದಂತಿಗಳು ಇಲ್ಲಿ ಉಳಿದು ನೋವು ಅನುಭವಿಸುತ್ತಿರುವವರ ಮೇಲೆ ತೀವ್ರ ಪರಿಣಾಮ ಬೀರುತ್ತವೆ. ನಮಗೆ ಶಾಂತಿಯಿಂದ ದುಃಖಿಸಲು ಬಿಡಿ” ಎಂದು ಮನವಿ ಮಾಡಿಕೊಂಡಿದ್ದಾರೆ.

“ಸದ್ಯಕ್ಕೆ ಪ್ರತಿಯೊಬ್ಬರಿಗೂ ವೈಯಕ್ತಿಕವಾಗಿ ಉತ್ತರಿಸುವ ಶಕ್ತಿ ನನಗಿಲ್ಲ. ಆದರೆ ನಿಮ್ಮ ಪ್ರೀತಿ ಮತ್ತು ಕಾಳಜಿಗೆ ನಾನು ಚಿರಋಣಿ. ಯಾರಿಗಾದರೂ ಬದುಕಲು ಕಾರಣ ನೀಡಲು ಸಾಧ್ಯವಾಗದಿದ್ದರೆ, ಕನಿಷ್ಠ ಅವರು ಭರವಸೆ ಕಳೆದುಕೊಳ್ಳುವಂತೆ ಮಾಡಬೇಡಿ. ದಯವಿಟ್ಟು ಎಲ್ಲರೂ ದಯೆ ಮತ್ತು ಕರುಣೆಯನ್ನು ಆಯ್ಕೆ ಮಾಡಿಕೊಳ್ಳಿ. ದಯವಿಟ್ಟು ಇದನ್ನು ಇಷ್ಟಕ್ಕೇ ನಿಲ್ಲಿಸಿ” ಎಂದು ಕೇಳಿಕೊಂಡಿದ್ದಾರೆ.

Continue Reading

Trending

error: Content is protected !!