Connect with us

Cinema

71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಅತ್ಯುತ್ತಮ ನಟ ಪ್ರಶಸ್ತಿಗೆ ಶಾರುಖ್ ಖಾನ್, ವಿಕ್ರಾಂತ್ ಮಾಸ್ಸಿ ಭಾಜನ

Published

on

ನವದೆಹಲಿ: 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಇಂದು ಘೋಷಣೆ ಮಾಡಲಾಗಿದ್ದು, ಅತ್ಯುತ್ತಮ ನಟ ಪ್ರಶಸ್ತಿಗೆ ಬಾಲಿವುಟ್‌ ನಟರಾದ ಶಾರುಖ್ ಖಾನ್, ವಿಕ್ರಾಂತ್ ಮಾಸ್ಸಿ ಹಾಗೂ ಅತ್ಯುತ್ತಮ ನಟಿ ರಾಣಿ ಮುಖರ್ಜಿ ಅವರು ಭಾಜನರಾಗಿದ್ದಾರೆ.

ಈ ಪ್ರಶಸ್ತಿಯಲ್ಲಿ  ‘12 ಫೇಲ್’ ಚಲನಚಿತ್ರ ಅತ್ಯುತ್ತಮ ಸಿನಿಮಾ ಹಾಗೂ  ‘ದಿ ಕಶ್ಮೀರ್ ಫೈಲ್ಸ್’ನ ಸುದಿಪ್ತೋ ಸೇನ್​ಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಲಭಿಸಿದೆ. ಈ ಬಾರಿ ಹಿಂದಿ ಸಿನಿಮಾಗಳೇ ಅಧಿಕ ಪ್ರಶಸ್ತಿಗೆ ಆಯ್ಕೆ ಆಗಿವೆ. ಮಲಯಾಳಂ, ತಮಿಳು ಮತ್ತು ತೆಲುಗಿನ ಕೆಲವು ಸಿನಿಮಾಗಳು ಸಹ ಪಟ್ಟಿಯಲ್ಲಿವೆ. ಆದರೆ ಕನ್ನಡದ ಒಂದೇ ಒಂದು ಸಿನಿಮಾಕ್ಕೂ ಪ್ರಶಸ್ತಿ ಲಭಿಸಿಲ್ಲ. ಆದರೆ ನಾನ್ ಫೀಚರ್ ವಿಭಾಗದಲ್ಲಿ ಕನ್ನಡದ ಕಿರುಚಿತ್ರವೊಂದು ಪ್ರಶಸ್ತಿಗೆ ನೇಮಕವಾಗಿದೆ.

ಫೀಚರ್ ಫಿಲಂನ ಯಾವೊಂದು ವಿಭಾಗದಲ್ಲಿಯೂ ಕನ್ನಡದ ಯಾವೊಂದು ಚಲನಚಿತ್ರಕ್ಕೂ ಪ್ರಶಸ್ತಿ ಲಭಿಸಿಲ್ಲ. ಪ್ರಾದೇಶಿಕ ವಿಭಾಗದಲ್ಲಿ ಕನ್ನಡದ ‘ಕಂದೀಲು’ ಸಿನಿಮಾಕ್ಕೆ ಪ್ರಶಸ್ತಿ ದೊರೆತಿದೆ. ಪ್ರಾದೇಶಿಕ ವಿಭಾಗವಾದ ಕಾರಣ ಆ ವಿಭಾಗದಲ್ಲಿ ಕನ್ನಡದ ಸಿನಿಮಾಗಳೇ ಪರಸ್ಪರ ಸ್ಪರ್ಧೆಯಲ್ಲಿದ್ದು, ಅವುಗಳಲ್ಲಿ ಉತ್ತಮವಾದ ‘ಕಂದೀಲು’ ಸಿನಿಮಾಕ್ಕೆ ಪ್ರಶಸ್ತಿ ಸಿಕ್ಕಿದೆ.

ನಾನ್ ಫೀಚರ್ ವಿಭಾಗದಲ್ಲಿ ಚಿದಾನಂದ ನಾಯಕ್ ನಿರ್ದೇಶನ ಮಾಡಿರುವ ‘ಸನ್​ಫ್ರವರ್ಸ್​ ವರ್ ದಿ ಫಸ್ಟ್ ಒನ್ಸ್​​ ಟು ನೋ’ ಕಿರುಚಿತ್ರ ಅತ್ಯುತ್ತಮ ಚಿತ್ರಕತೆ ವಿಭಾಗದಲ್ಲಿ ಪ್ರಶಸ್ತಿ ಪಡೆದುಕೊಂಡಿದೆ. ಇದು ಜನಪದ ಕತೆಯನ್ನು ಆಧರಿಸಿದ ಕಿರುಚಿತ್ರವಾಗಿದ್ದು, ಕಿರುಚಿತ್ರದ ಅವಧಿ 60 ನಿಮಿಷಗಳು, ಅತ್ಯುತ್ತಮ ಸಿನಿಮಾಟೊಗ್ರಫಿ ಹಾಗೂ ಸೌಂಡ್ ಅನ್ನು  ಒಳಗೊಂಡಿದೆ. ಕಾನ್ ಫಿಲಂ ಫೆಸ್ಟ್​ನಲ್ಲಿ ಈ ಕಿರುಚಿತ್ರ ಪ್ರಶಸ್ತಿ ಪಡೆದುಕೊಂಡಿತ್ತು. ಇದೀಗ ಈ ಸಿನಿಮಾ ಚಿತ್ರಕತೆ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿ ಪಡೆದುಕೊಂಡಿದೆ.

‘ಸನ್​ಫ್ರವರ್ಸ್​ ವರ್ ದಿ ಫಸ್ಟ್ ಒನ್ಸ್​​ ಟು ನೋ’ ಕಿರುಚಿತ್ರವನ್ನು ಎಫ್​ಟಿಟಿಐ ನಿರ್ಮಾಣ ಮಾಡಿದೆ. ಚಿದಾನಂದ ನಾಯಕ್ ನಿರ್ದೇಶನ ಮಾಡಿದ್ದು, ಚಿತ್ರಕತೆಯೂ ಅವರದ್ದೇ ಆಗಿದೆ.ಸೂರಜ್ ಠಾಕೂರ್ ಅವರು ಇದಕ್ಕೆ ಸಿನಿಮಾಟೊಗ್ರಫಿ ಮಾಡಿದ್ದು, ಅಭಿಷೇಕ್ ಕದಮ್ ಸಂಗೀತ ನೀಡಿದ್ದಾರೆ. ಇದೊಂದು ಕನ್ನಡ ಕಿರುಚಿತ್ರವಾಗಿದ್ದು, ಈ ಬಾರಿಯ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಪ್ರಶಸ್ತಿಗೆ ಆಯ್ಕೆಯಾದ ಏಕೈಕ ಕನ್ನಡ ಚಲನಚಿತ್ರವಾಗಿದೆ.

Continue Reading

Cinema

ಗೀತರಚನೆಯನ್ನು ಕಲಿಸುವುದಕ್ಕೆ ಸಾಧ್ಯವಿಲ್ಲ, ಅದು ಸುಪ್ತಮನಸ್ಸಿನಿಂದ ಬರಬೇಕು: ಜಯಂತ್‌ ಕಾಯ್ಕಿಣಿ

Published

on

ಬೆಂಗಳೂರು ಚಿತ್ರೋತ್ಸವ ವೇದಿಕೆ: ʼಗೀತರಚನೆ ಎನ್ನುವುದು ಕಲಿಯೋದು, ಕಲಿಸೋದಲ್ಲ. ಕನ್ನಡ ಕಾವ್ಯ, ಸಾಹಿತ್ಯ ಓದಬೇಕು. ಜನಜೀವನ ನೋಡಬೇಕು. ಬರವಣಿಗೆ ಎನ್ನುವುದು ನಮ್ಮ ಸುಪ್ತಮನಸ್ಸಿನಿಂದ ಬರುವಂತದ್ದು. ಅದಕ್ಕೆ ಯಾವುದೇ ತರಬೇತಿ, ಕಾರ್ಯಾಗಾರ ಇರುವುದಿಲ್ಲʼ ಎಂದು ಖ್ಯಾತ ಸಾಹಿತಿ ಮತ್ತು ಚಿತ್ರಸಾಹಿತಿ ಜಯಂತ್‌ ಕಾಯ್ಕಿಣಿ ಅಭಿಪ್ರಾಯಪಟ್ಟಿದ್ದಾರೆ.

17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನಡೆದ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, ʼಗೀತರಚನೆಯನ್ನು ಕಲಿಸುವುದಕ್ಕಾಗುವುದಿಲ್ಲ. ಕನಸ್ಸಿನಲ್ಲಿ ಒಮ್ಮೊಮ್ಮೆ ಅಮೂರ್ತವಾಗಿ ಏನೇನೋ ಕಾಣುತ್ತದಲ್ಲ, ಗೀತರಚನೆಯೂ ಹಾಗೆಯೇ. ನಿರ್ದೇಶನ, ನಟನೆಯ ತರಹ ಗೀತರಚನೆಗೆ ತರಬೇತಿ ತೆಗೆದುಕೊಳ್ಳುವುದಕ್ಕೆ ಆಗುವುದಿಲ್ಲ. ತರಬೇತಿ ಪಡೆದರೆ, ಜಿಮಿನಂದ ಬಂದ ಒಂದೇ ತರಹ ದೇಹಗಳ ಹಾಗೆ ಕಾಣುತ್ತದೆ. ಬ್ಯೂಟಿ ಪಾರ್ಲರ್‌ನಿಂದ ಬಂದ ವಧುವಿನ ಹಾಗೆ ಎಲ್ಲವೂ ಒಂದೇ ರೀತಿ ಕಾಣುತ್ತದೆ. ನಿಮ್ಮ ಛಾಪು ಮೂಡಿಸಬೇಕೆಂದರೆ ಸ್ವತಂತ್ರವಾಗಿ ಬರೆಯುವುದಕ್ಕೆ ಕಲಿಯಬೇಕುʼ ಎಂದು ಹೇಳಿದರು.

 

ಕಾಲಕ್ಕೆ ತಕ್ಕ ಹಾಗೆ ಬದಲಾಗುತ್ತಿರಬೇಕು ಎಂದ ಅವರು, ʼಹಳೆಯದೆಲ್ಲಾ ಚೆನ್ನಾಗಿತ್ತು, ಈಗ ಚೆನ್ನಾಗಿಲ್ಲ ಎನ್ನುವುದು ತಪ್ಪು. ಅಂದರೆ ನಾವು ಸಹ ಮೊದಲ ಹಾಗಿಲ್ಲ ಎಂದರ್ಥ. ಎಲ್ಲಾ ಕಡೆ ಸಾಕಷ್ಟು ಬದಲಾವಣೆಗಳಾಗಿವೆ. ಮೊದಲು ನಮ್ಮೂರಿನಲ್ಲಿ ಸಾಕಷ್ಟು ಹಿರಿಯರಿದ್ದರು. ಈಗ ನಾನೇ ಹಿರಿಯ ಎನ್ನುವಂತಾಗಿದೆ. ಸಮಯ ಬದಲಾಗುತ್ತಿರುತ್ತದೆ. ತಂತ್ರಜ್ಞಾನ ಬೆಳೆಯುತ್ತಿದೆ. ನಾವು ಸಹ ಬದಲಾಗಬೇಕಾಗುತ್ತದೆ. ಹಳೆಯದೇ ಚೆನ್ನಾಗಿತ್ತು, ಈಗ ಚೆನ್ನಾಗಿಲ್ಲ ಎನ್ನುವುದು ತಪ್ಪುʼ ಎಂದು ಅವರು ಹೇಳಿದರು.

ತಾವು ಮೊದಲಿಂದಲೂ ಸಿನಿಮಾ ಹಾಡುಗಳ ಪ್ರೇಮಿ ಎಂದ ಜಯಂತ್‌ ಕಾಯ್ಕಿಣಿ, ʼನಾವೆಲ್ಲಾ ಹಾಡುಗಳನ್ನು ಗುನುಗಿ ಬೆಳೆದವರು. ಗೊಣಗುವುದಕ್ಕಿಂತ ಗುನುಗುವುದು ಮೇಲು ಎಂದು ನಮ್ಮ ತಂದೆ ಹೇಳುತ್ತಿದ್ದರು. ನಾನು ೫೨ನೇ ವಯಸ್ಸಿಗೆ ಸಿನಿಮಾದಲ್ಲಿ ಗೀತರಚನೆಕಾರನಾದೆ. ಯೌವ್ವನದಲ್ಲಿದ್ದಾಗ ಗಂಭಿರವಾಗಿ ʼಕೋಟಿತೀರ್ಥʼ ಅಂತ ಬರೆದೆ. ವಯಸ್ಸಾದ ಮೇಲೆ ಸಿನಿಮಾ ಹಾಡುಗಳನ್ನು ಬರೆಯುವಂತಾಯಿತುʼ ಎಂದರು.

ಆರಂಭದಲ್ಲಿ ಸಿನಿಮಾ ಹಾಡುಗಳನ್ನು ಬರೆಯುವಾಗ ಒಂದು ಉಡಾಫೆ ಇತ್ತು ಎಂದ ಅವರು, ʼಸಿನಿಮಾ ಹಾಡುಗಳನ್ನು ಬರೆಯುವುದು ಬಹಳ ಸುಲಭ ಎಂದು ಭಾವಿಸಿದ್ದೆ. ಹಾಡುಗಳನ್ನು ಬರೆಯುವುದಕ್ಕೆ ಶುರು ಮಾಡಿದ ಮೇಲೆ ಅದರ ಕಷ್ಟ ಗೊತ್ತಾಯ್ತು. ಸಿನಿಮಾದಲ್ಲಿ ಟ್ಯೂನ್‌ ಹಾಕಿದ ಮೇಲೆ, ಮೀಟರ್‌ಗೆ ತಕ್ಕ ಹಾಗೆ ಸಾಹಿತ್ಯವನ್ನು ರಚಿಸಲಾಗುತ್ತದೆ. ಅದು ದೊಡ್ಡ ಸವಾಲಾಗಿತ್ತು. ನಮ್ಮಲ್ಲಿ ಕೋಟ್ಯಂತರ ಹಾಡುಗಳಿವೆ. ಅದರಲ್ಲಿ ವಿಭಿನ್ನವಾದುದನ್ನೇನೋ ಬರೆಯಬೇಕು. ಅದರಲ್ಲಿ ಶೇ. 97ರಷ್ಟು ಪ್ರೇಮಗೀತೆಗಳು. ಅದರಲ್ಲಿ ವಿಭಿನ್ನವಾಗಿ ಅದೆಷ್ಟು ಬರೆಯೋಕೆ ಸಾಧ್ಯ? ಒಲವು, ನಲಿವು, ಚೆಲುವು, ಹಸಿರು, ಉಸಿರು … ಈ ಪದಗಳನ್ನೇ ಪುನಃ ಬಳಸಬೇಕು. ಅದನ್ನು ಹೊರತುಪಡಿಸಿ, ಹೊಸ ಎಕ್ಸ್‌ಪ್ರೆಶನ್‌ ಸೃಷ್ಟಿಸುವುದು ನಿಜಕ್ಕೂ ಸವಾಲಿನ ಕೆಲಸʼ ಎಂದು ಹೇಳಿದರು.

ಸಿನಿಮಾಗಳಿಗೆ ಹಾಡುಗಳನ್ನು ಬರೆಯುವುದಕ್ಕೆ ಪ್ರಾರಂಭಿಸಿದ ಮೇಲೆ ಅನುಕೂಲವೇ ಆಯಿತು ಎನ್ನುವ ಅವರು, ʼಚಿತ್ರಗೀತೆಗಳನ್ನು ಬರೆಯುವುದಕ್ಕೆ ಪ್ರಾರಂಭಿಸಿದ ಮೇಲೆ, ನಾನು ಸಿನಿಮಾಗೆ ಹೆಚ್ಚು ಬರೆಯುತ್ತಿರುವುದರ ಬಗ್ಗೆ ಹಿತೈಷಿಗಳು ಬೇಸರ ವ್ಯಕ್ತಪಡಿಸಿದರು. ಸಿನಿಮಾ ಹಾಡುಗಳನ್ನು ಬರೆಯುತ್ತಿದ್ದೇನೆ ಎಂದು ನಾನು ಬೇರೆ ಸಾಹಿತ್ಯವನ್ನು ಕಡೆಗಣಿಸಿಲ್ಲ. ನನ್ನ ಬೇರೆ ಮರವಣಿಗೆಯನ್ನು ಮುಂದುವರೆಸಿದ್ದೇನೆ. ಇದರಿಂದ ಅನಾಮಿಕ ಶೋತೃಗಳು ಹೆಚ್ಚಾಗುವುದರ ಜೊತೆಗೆ ಒಂಥರಾ Reverse Osmosis ಪ್ರಕ್ರಿಯೆ ಶುರುವಾಯ್ತು. ನನ್ನ ಕಥೆ, ಕವನ ಸಂಕಲನಗಳನ್ನು ಓದದ ಬಹಳಷ್ಟು ಹೊಸ ತಲೆಮಾರಿನವರು, ಹಾಡುಗಳನ್ನು ಕೇಳಿ ಇಷ್ಟಪಟ್ಟು, ನನ್ನ ಪುಸ್ತಕಗಳನ್ನು ಕೊಂಡು ಓದಿದರು. ಇದರಿಂದ ನನ್ನ ಪುಸ್ತಕಗಳ ಮರುಮುದ್ರಣವಾದಂತಾಯಿತುʼ ಎಂದರು.

ವ್ಯಕ್ತ, ಶ್ರಾವ್ಯ ಮತ್ತು ದೃಶ್ಯ ಹೀಗೆ ಮೂರೂ ಗುಣಗಳಿರುವ ಒಂದು ಅಪರೂಪದ ಮಾಧ್ಯಮ ಸಿನಿಮಾ ಎಂದ ಅವರು, ʼಸಿನಿಮಾದಲ್ಲಿ ವ್ಯಕ್ತ, ಶ್ರಾವ್ಯ ಮತ್ತು ದೃಶ್ಯ ಎಂಬ ಮೂರೂ ಗುಣಗಳೂ ಇವೆ. ಒಬ್ಬ ನಿರ್ದೇಶಕನಿಗೆ ಇದರ ಅರಿವು ಮತ್ತು ಹಿಡಿತವಿದ್ದರೆ, ತೆರೆಯ ಮೇಲೆ ಅದ್ಭುತವಾದುದನ್ನು ಸೃಷ್ಟಿಸಬಹುದುʼ ಎಂದರು.

ತಮಗೆ ಸಿನಿಮಾ ಆಸಕ್ತಿ ಬಾಲ್ಯದಲ್ಲೇ ಹುಟ್ಟಿತ್ತು ಮತ್ತು ಅದಕ್ಕೆ ಮೂಲ ಕಾರಣ ತಮ್ಮೂರಿನ ಟೂರಿಂಗ್‌ ಟಾಕೀಸ್‌ ಕಾರಣ ಎಂದ ಅವರು, ʼಬಾಲ್ಯದಲ್ಲಿ ʼಕಠಾರಿ ವೀರʼ, ʼಬೀದಿ ಬಸವಣ್ಣʼ, ʼಚೂರಿ ಚಿಕ್ಕಣ್ಣʼ, ʼಚಂದವಳ್ಳಿಯ ತೋಟʼ ಮುಂತಾದ ಚಿತ್ರಗಳನ್ನು ನೋಡಿ ಬೆಳೆದಂತೆ. ಜಾವೇದ್‌ ಅಖ್ತರ್‌ ಅವರು ಹೇಳಿದಂತೆ ಸಿನಿಮಾನೇ ನಮ್ಮ ಧರ್ಮ. ಹಲವು ಆದರ್ಶ ಗುಣಗಳನ್ನು ಸಿನಿಮಾದಿಂದ ನೋಡಿ ಕಲಿತವರು ನಾವು. ʼದೀವಾರ್‌ʼ ಚಿತ್ರದಲ್ಲಿ ಬರುವ ʼಮೇರೇ ಪಾಸ್‌ ಮಾʼ ಎನ್ನುವಂತೆ, ನನ್ನ ಹತ್ತಿರ ಏನಿದೆ ಎಂದು ಕೇಳಿದರೆ, ʼಮೇರೆ ಪಾಸ್‌ ಸಿನಿಮಾ ಹೇ …ʼ ಎನ್ನುತ್ತೇನೆ. ಭಾರತದಲ್ಲಿ ನಾವು ಸಿನಿಮಾದ ಜೊತೆಗೆ ಬೆರೆತು ಹೋಗಿದ್ದೇವೆʼ ಎಂದರು.

ಇತ್ತೀಚಿನ ವರ್ಷಗಳಲ್ಲಿ ʼಪೊನ್ನಿಯನ್‌ ಸೆಲ್ವನ್‌ʼ ಚಿತ್ರದ ಕನ್ನಡ ಡಬ್ಬಿಂಗ್‌ ಅವತರಣಿಕೆಗೆ ಸಾಹಿತ್ಯ ರಚಿಸಿದ್ದು ಸವಾಲಿನ ಕೆಲಸವಾಗಿತ್ತು ಎಂದ ಅವರು, ʼಎ.ಆರ್‌.ರೆಹಮಾನ್‌ ಸಂಗೀತ ನಿರ್ದೇಶನದ ‘ಪೊನ್ನಿಯನ್‌ ಸೆಲ್ವನ್‌ʼ ಸಿನಿಮಾದ ಎರಡೂ ಭಾಗಗಳು ಸೇರಿ 14 ಹಾಡುಗಳಿವೆ. ನಾನು ಭಾಷಾಂತರ ಮಾಡುವುದಿಲ್ಲ, ಸ್ವಂತವಾಗಿ ಬರೆಯುವುದಕ್ಕೆ ಅವಕಾಶ ಕೊಟ್ಟರೆ ಬರೆಯುವುದಾಗಿ ನಿರ್ದೇಶಕ ಮಣಿರತ್ನಂ ಅವರಿಗೆ ಹೇಳಿದ್ದೆ. ಅವರು ಸಹ ಸನ್ನಿವೇಶ ಹೇಳಿ, ಅದಕ್ಕೆ ಪೂರಕವಾಗಿ ಬರೆಯುವುದಕ್ಕೆ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟರು. ಕನ್ನಡದಲ್ಲಿ ಪ್ರೀತಿ, ಪ್ರೇಮ ಎನ್ನಲು ತುಟಿಗಳನ್ನು ತಾಗಿಸಬೇಕು. ತಮಿಳಿನಲ್ಲಿ ‘ಕಾದಲ್‌ʼ ಎನ್ನುವಾಗ ತುಟಿಗಳೇ ತಾಗುವುದಿಲ್ಲ. ತುಟಿಗಳು ಸೇರಿಸದೆ ಪ್ರೀತಿ ಹೇಗೆ ಮಾಡುತ್ತೀರಿ ಎಂದು ಮಣಿರತ್ನಂ ಅವರನ್ನು ತಮಾಷೆ ಮಾಡಿದ್ದಾಗಿʼ ನೆನಪಿಸಿಕೊಂಡರು.

ಈ ಕಾರ್ಯಕ್ರಮವನ್ನು ಪ್ರಶಾಂತ್‌ ಪಂಡಿತ್‌ ನಡೆಸಿಕೊಟ್ಟರು.

Continue Reading

Cinema

ಬೆಂಗಳೂರು ಚಿತ್ರೋತ್ಸವದಲ್ಲಿ ನಾಳೆ ನೋಡಬಹುದಾದ ಅತ್ಯುತ್ತಮ 10 ಸಿನಿಮಾಗಳು

Published

on

ಬೆಂಗಳೂರು ಚಿತ್ರೋತ್ಸವ ಇನ್ನೇನು ಅಂತಿಮ ಕ್ಷಣ ತಲುಪುತ್ತಿದ್ದು, ಫೆ.5ರಂದು ನೋಡಬಹುದಾದ 10 ಸಿನಿಮಾಗಳ ಪಟ್ಟಿ ಇಲ್ಲಿದೆ:

1. ಜೀವನ ಚೈತ್ರ (ಕನ್ನಡ)
ಸಮಯ: ಸಂಜೆ 7:50 | ಸ್ಕ್ರೀನ್: 7
ವಿಶೇಷತೆ: ಡಾ. ರಾಜ್ಕುಮಾರ್ ಅಭಿನಯದ 1992 ರ ಈ ಅದ್ಭುತ ಕಾವ್ಯ ಈಗ ಡಿಜಿಟಲ್ 4ಕೆ ರೂಪದಲ್ಲಿ ಸಿದ್ಧಗೊಂಡಿದೆ. ಕನ್ನಡ ಚಿತ್ರರಂಗದ ಈ ಸ್ತಂಭವನ್ನು ಅತ್ಯಾಧುನಿಕ ಸ್ಪಷ್ಟತೆಯಲ್ಲಿ ನೋಡುವ ಅಪರೂಪದ ಅವಕಾಶ ಇದಾಗಿದೆ.

2. ಭೂಮಿಕಾ (ಹಿಂದಿ)
ಸಮಯ: ಮಧ್ಯಾಹ್ನ 1:00 | ಸ್ಕ್ರೀನ್: ವಿಐಪಿ 2
ವಿಶೇಷತೆ: ಶ್ಯಾಮ್ ಬೆನಗಲ್ ನಿರ್ದೇಶನದ ಮತ್ತು ಸ್ಮಿತಾ ಪಾಟೀಲ್ ಅಭಿನಯದ ಈ ಚಿತ್ರವು ಉತ್ಸವದ ‘ಪಾಟೀಲ್ ರೆಟ್ರೋಸ್ಪೆಕ್ಟಿವ್’ ವಿಭಾಗದ ಪ್ರಮುಖ ಆಕರ್ಷಣೆಯಾಗಿದೆ. ಒಬ್ಬ ನಟಿಯ ಅಸ್ಮಿತೆಯ ಕುರಿತಾದ ಅತ್ಯುತ್ತಮ ಚಿತ್ರವಿದು.

3. ಪ್ಯಾಲೆಸ್ಟೈನ್ 36 (ಅರೇಬಿಕ್)
ಸಮಯ: ಸಂಜೆ 5:10 | ಸ್ಕ್ರೀನ್: 8
ವಿಶೇಷತೆ: ನಿರ್ದೇಶಕಿ ಆನ್ನೆಮರಿ ಜಾಸಿರ್ ಅವರ ಐತಿಹಾಸಿಕ ಮಹಾಕಾವ್ಯವಿದು. 98ನೇ ಅಕಾಡೆಮಿ ಪ್ರಶಸ್ತಿಗಳಿಗೆ ಪ್ಯಾಲೆಸ್ಟೈನ್ನ ಅಧಿಕೃತ ಪ್ರವೇಶವಾಗಿದ್ದ ಈ ಚಿತ್ರವು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಗಮನ ಸೆಳೆದಿದೆ.

4. ಕೇಸ್ 137 (ಫ್ರೆಂಚ್)
ಸಮಯ: ಸಂಜೆ 5:20 | ಸ್ಕ್ರೀನ್: 7
ವಿಶೇಷತೆ: ಸಸ್ಪೆನ್ಸ್ ಇಷ್ಟಪಡುವವರಿಗಾಗಿ ಡೊಮಿನಿಕ್ ಮೋಲ್ ನಿರ್ದೇಶನದ ಈ 2025ರ ಥ್ರಿಲ್ಲರ್ ಸಿನಿಮಾ, ಯುರೋಪಿಯನ್ ಶೈಲಿಯ ಚಿತ್ರವಿದು.

5. ದಿ ಪ್ರಾಮಿಸ್ಡ್ ಲ್ಯಾಂಡ್ (ಪೋಲಿಷ್)
ಸಮಯ: ಬೆಳಗ್ಗೆ 9:30 | ಸ್ಕ್ರೀನ್: ವಿಐಪಿ 2
ವಿಶೇಷತೆ: ಆಂಡ್ರೆಜ್ ವಾಜ್ದಾ ಅವರ ಸ್ಮರಣಾರ್ಥ ಪ್ರದರ್ಶಿಸಲಾಗುತ್ತಿರುವ ಈ 1975 ರ ಕ್ಲಾಸಿಕ್ ಚಿತ್ರವು ಪೋಲಿಷ್ ಚಿತ್ರರಂಗದ ಶ್ರೇಷ್ಠ ಚಿತ್ರಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ. ಇದು ಕೈಗಾರಿಕಾ ಯುಗದ ಕ್ರೂರ ಆರಂಭವನ್ನು ಚಿತ್ರಿಸುತ್ತದೆ.

6. ಅಮ್ರಮ್ (ಜರ್ಮನ್)
ಸಮಯ: ಮಧ್ಯಾಹ್ನ 3:20 | ಸ್ಕ್ರೀನ್: 7
ವಿಶೇಷತೆ: ಖ್ಯಾತ ನಿರ್ದೇಶಕ ಫಾತಿಹ್ ಅಕಿನ್ ಅವರ ಇತ್ತೀಚಿನ ಕೃತಿಯಿದು. ಪ್ರಬಲವಾದ ಸಾಮಾಜಿಕ ಪ್ರಜ್ಞೆ ಮತ್ತು ದೃಷ್ಟಿಕೋನಗಳನ್ನು ಪ್ರಶ್ನಿಸುವ ಕಥಾಹಂದರವನ್ನು ಈ ಸಿನಿಮಾ ಹೊಂದಿದೆ.

7. ಉಯ್ಯಾಲೆ (ಕನ್ನಡ)
ಸಮಯ: ಸಂಜೆ 7:50 | ಸ್ಕ್ರೀನ್: ವಿಐಪಿ 2
ವಿಶೇಷತೆ: ಪರಂಪರೆಯನ್ನು ಪ್ರೀತಿಸುವವರಿಗೆ ಇದೊಂದು ಹಬ್ಬ. 1969 ರ ಈ ಮಾಸ್ಟರ್ಪೀಸ್ ಚಿತ್ರದಲ್ಲಿ ಡಾ. ರಾಜ್ಕುಮಾರ್ ಮತ್ತು ಕಲ್ಪನಾ ನಟಿಸಿದ್ದು, ತೀವ್ರ ಭಾವನೆಗಳ ಚಿತ್ರಣವನ್ನು ಹೊಂದಿದೆ.

8. ದಿ ಪೋರ್ಚುಗೀಸ್ ಹೌಸ್ (ಸ್ಪ್ಯಾನಿಷ್)
ಸಮಯ: ಸಂಜೆ 7:00 | ಸ್ಕ್ರೀನ್: 1
ವಿಶೇಷತೆ: ಅವೆಲಿನಾ ಪ್ರಾಟ್ ನಿರ್ದೇಶನದ ಸಮಕಾಲೀನ ಸ್ಪ್ಯಾನಿಷ್ ಡ್ರಾಮಾ ಇದಾಗಿದ್ದು, ಯುರೋಪಿಯನ್ ಜೀವನ ಮತ್ತು ಸಂಬಂಧಗಳ ಆಧುನಿಕ ನೋಟವನ್ನು ಕಾವ್ಯಾತ್ಮಕವಾಗಿ ದಾಖಲಿಸಿದೆ.

9. ಸರ್ಕ್ರೀಟ್ (ಮಲಯಾಳಂ)
ಸಮಯ: ಸಂಜೆ 5:30 | ಸ್ಕ್ರೀನ್: 2
ವಿಶೇಷತೆ: ಇತ್ತೀಚಿನ ಭಾರತೀಯ ಪ್ರಾದೇಶಿಕ ಸಿನಿಮಾಗಳ ಅತ್ಯುತ್ತಮ ಪ್ರಾತಿನಿಧ್ಯವಾಗಿರುವ ಮಲಯಾಳಂ ಸಿನಿಮಾ ಇದು.

10. ಫುಲ್ ಪ್ಲೇಟ್ (ಹಿಂದಿ)
ಸಮಯ: ಸಂಜೆ 4:30 | ಸ್ಕ್ರೀನ್: 6
ವಿಶೇಷತೆ: ತನ್ನಿಷ್ಠಾ ಚಟರ್ಜಿ ನಿರ್ದೇಶನದ ಈ ಚಿತ್ರವು ಸಮಕಾಲೀನ ಭಾರತೀಯ ಸಮಾಜದ ಕಥೆಯನ್ನು ಪ್ರಸ್ತುತಪಡಿಸುತ್ತದೆ.

Continue Reading

Cinema

ಬೆಂಗಳೂರು ಚಿತ್ರೋತ್ಸವದಲ್ಲಿ ನಾಳೆ ನೋಡಬಹುದಾದ 10 ಅತ್ಯುತ್ತಮ ಚಿತ್ರಗಳು

Published

on

ಬೆಂಗಳೂರು: ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಫೆಬ್ರವರಿ 4ರಂದು ಪ್ರದರ್ಶನಗೊಳ್ಳಲಿರುವ ಅತ್ಯುತ್ತಮ 10 ಚಿತ್ರಗಳ ಪಟ್ಟಿ ಇಲ್ಲಿದೆ:

1. ಮ್ಯಾನ್ ಆಫ್ ಮಾರ್ಬಲ್
ಬೆಳಿಗ್ಗೆ 09:50, ಸ್ಕ್ರೀನ್ 1
ವಿಶೇಷತೆ: ಪೋಲೆಂಡ್‌ನ ಖ್ಯಾತ ನಿರ್ದೇಶಕ ಆಂಡ್ರೆಜ್ ವಾಜ್ದಾ ಅವರ ಈ ಚಿತ್ರವು ರಾಜಕೀಯ ಸಿನೆಮಾದ ಒಂದು ಮೈಲಿಗಲ್ಲು. ಇವರ ಜನ್ಮಶತಮಾನೋತ್ಸವದ ಅಂಗವಾಗಿ ಈ ಚಿತ್ರವನ್ನು ಪ್ರದರ್ಶಿಸಲಾಗುತ್ತಿದೆ.

2. ದೋ ಬಿಘಾ ಜಮೀನ್
ರಾತ್ರಿ 07:10, ವಿಐಪಿ ಸ್ಕ್ರೀನ್ 1
ವಿಶೇಷತೆ: ಬಿಮಲ್ ರಾಯ್ ಅವರ ಈ ಸಾಮಾಜಿಕ ವಾಸ್ತವವಾದಿ ಚಿತ್ರವು ಕೇನ್ಸ್ ಚಲನಚಿತ್ರೋತ್ಸವದಲ್ಲಿ ಅಂತರಾಷ್ಟ್ರೀಯ ಪ್ರಶಸ್ತಿ ಗೆದ್ದಿದೆ.

3. ಕ್ರೌರ್ಯ
ಸಂಜೆ 05:30, ಸ್ಕ್ರೀನ್ 1
ವಿಶೇಷತೆ: ಗಿರೀಶ್ ಕಾಸರವಳ್ಳಿ ಅವರ 50 ವರ್ಷಗಳ ಸಿನಿಮಾ ಪಯಣದ ಅಂಗವಾಗಿ ಈ ಪ್ರಶಸ್ತಿ ವಿಜೇತ ಚಿತ್ರವನ್ನು ಪ್ರದರ್ಶಿಸಲಾಗುತ್ತಿದೆ. ತಣ್ಣನೆಯ ಕ್ರೌರ್ಯವನ್ನು ಈ ಸಿನಿಮಾ ಅನಾವರಣಗೊಳಿಸುತ್ತದೆ.

4. ಸಿಮೆಟ್ರಿ ಆಫ್ ಸ್ಪ್ಲೆಂಡರ್
ಸಂಜೆ 04:20, ವಿಐಪಿ ಸ್ಕ್ರೀನ್ 1
ವಿಶೇಷತೆ: ವಿಶ್ವವಿಖ್ಯಾತ ಥಾಯ್ ನಿರ್ದೇಶಕ ಅಪಿಚಾತ್‌ಪಾಂಗ್ ವೀರಸೇತಕುಲ್ ಅವರ ಈ ಚಿತ್ರವು ‘ಫಿಲ್ಮ್ ಮೇಕರ್ ಇನ್ ಫೋಕಸ್’ ವಿಭಾಗದ ಪ್ರಮುಖ ಆಕರ್ಷಣೆಯಾಗಿದೆ.

5. ಸಂಧ್ಯಾ ರಾಗ
ರಾತ್ರಿ 07:20, ವಿಐಪಿ ಸ್ಕ್ರೀನ್ 2
ವಿಶೇಷತೆ: ಡಾ. ರಾಜ್‌ಕುಮಾರ್ ನಟನೆಯ ಈ ಸಂಗೀತಮಯ ಕ್ಲಾಸಿಕ್ ಚಿತ್ರವನ್ನು ಸಂರಕ್ಷಿತ ಚಿತ್ರಗಳ ವಿಭಾಗದಲ್ಲಿ ಪ್ರದರ್ಶಿಸಲಾಗುತ್ತಿದೆ.

6. ಲಿಟಲ್ ಟ್ರಬಲ್ ಗರ್ಲ್ಸ್
ರಾತ್ರಿ 07:30, ಸ್ಕ್ರೀನ್ 4
ವಿಶೇಷತೆ: ಸ್ಲೊವೇನಿಯಾದ ಈ ಸಮಕಾಲೀನ ಚಿತ್ರವು ಕೇನ್ಸ್ ಚಲನಚಿತ್ರೋತ್ಸವದ ‘ಕ್ರಿಟಿಕ್ಸ್ ವೀಕ್’ನಲ್ಲಿ ಪ್ರದರ್ಶನ ಕಂಡು ವಿಮರ್ಶಕರ ಮೆಚ್ಚುಗೆ ಗಳಿಸಿದೆ.

7. ಭಕ್ತ ಕನಕದಾಸ
ಮಧ್ಯಾಹ್ನ 12:00, ಸ್ಕ್ರೀನ್ 6
ವಿಶೇಷತೆ: 1960ರ ದಶಕದ ಈ ಐತಿಹಾಸಿಕ ಕನ್ನಡ ಚಿತ್ರವು ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಜಾಗತಿಕ ಮಟ್ಟದಲ್ಲಿ ಪ್ರಸ್ತುತಪಡಿಸುತ್ತದೆ.

8. ಇನ್ನೋಸೆಂಟ್ ಸೊರ್ಸೆರರ್ಸ್
ಮಧ್ಯಾಹ್ನ 01:10, ಸ್ಕ್ರೀನ್ 1
ವಿಶೇಷತೆ: ಆಂಡ್ರೆಜ್ ವಾಜ್ದಾ ಅವರ ಈ ಚಿತ್ರವು 1960ರ ದಶಕದ ಪೋಲೆಂಡ್‌ನ ಯುವಜನತೆಯ ಬದುಕಿನ ಮೇಲೆ ಬೆಳಕು ಚೆಲ್ಲುತ್ತದೆ.

9. ಆನ್ ದಿ ಸಿಲ್ವರ್ ಗ್ಲೋಬ್
ಬೆಳಿಗ್ಗೆ 09:50, ವಿಐಪಿ ಸ್ಕ್ರೀನ್ 3
ವಿಶೇಷತೆ: ಆಂಡ್ರೆಜ್ ಜುಲಾವ್ಸ್ಕಿ ಅವರ ಈ ಸೈನ್ಸ್ ಫಿಕ್ಷನ್ ಚಿತ್ರವು ತನ್ನ ದೃಶ್ಯ ವೈಭವ ಮತ್ತು ತಾತ್ವಿಕ ಚಿಂತನೆಗಳಿಗೆ ಜಾಗತಿಕವಾಗಿ ಪ್ರಸಿದ್ಧವಾಗಿದೆ.

10. ದಿ ಗ್ರೇಟ್ ಆರ್ಚ್
ಬೆಳಿಗ್ಗೆ 10:00, ಸ್ಕ್ರೀನ್ 7
ವಿಶೇಷತೆ: ಸ್ಟೀಫನ್ ಡೆಮೌಸ್ಟಿಯರ್ ನಿರ್ದೇಶನದ ಈ ಫ್ರೆಂಚ್ ಚಿತ್ರವು ಯುರೋಪಿನ ಸಮಕಾಲೀನ ಚಿತ್ರಗಳ ವಿಭಾಗದಲ್ಲಿದೆ.

Continue Reading

Trending

error: Content is protected !!