Connect with us

Chikmagalur

ಮೆಸ್ಕಾಂ ಸಬ್‌ಸ್ಟೇಷನ್‌ನಿಂದ ₹31 ಲಕ್ಷ ಮೌಲ್ಯದ ಟ್ರಾನ್ಸ್‌ಫಾರ್ಮರ್ ಆಯಿಲ್ ಕಳವು

Published

on

ಚಿಕ್ಕಮಗಳೂರು: ಹೊಸದಾಗಿ ನಿರ್ಮಿಸಲಾಗಿದ್ದ 66/11 ಕೆ.ವಿ. ವಿದ್ಯುತ್ ಉಪಕೇಂದ್ರದಲ್ಲಿನ ಟ್ರಾನ್ಸ್‌ಫಾರ್ಮರ್‌ಗೆ ತುಂಬಿಸಲಾಗಿದ್ದ ಸುಮಾರು 12,400 ಲೀಟರ್, ₹31 ಲಕ್ಷ ಮೌಲ್ಯದ ಟ್ರಾನ್ಸ್‌ಫಾರ್ಮರ್ ಆಯಿಲ್ ಕಳವಾಗಿರುವ ಘಟನೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಗಾಣದಾಳು ಗ್ರಾಮದಲ್ಲಿ ನಡೆದಿದೆ.

ಈ ಕುರಿತು ಗಾಣದಾಳು 66/11 ಕೆ.ವಿ. ಸಬ್‌ಸ್ಟೇಷನ್‌ನ ಸೈಟ್ ಇಂಜಿನಿಯರ್ ಪ್ರಜ್ವಲ್ ಪಿ. ಅವರು ಸೆ.30ರಂದು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಲಕ್ಯಾ ಹೋಬಳಿಯ ಗಾಣದಾಳು ಗ್ರಾಮದಲ್ಲಿ ಹೊಸ 66/11 ಕೆ.ವಿ. ಸಬ್‌ಸ್ಟೇಷನ್ ನಿರ್ಮಾಣ ಕಾಮಗಾರಿಯನ್ನು 2023ರ ಡಿಸೆಂಬರ್‌ನಿಂದ ಕೈಗೆತ್ತಿಕೊಳ್ಳಲಾಗಿತ್ತು. ಆಗಸ್ಟ್ 2026ರ ಮೊದಲ ವಾರದಲ್ಲಿ ಕಾಮಗಾರಿ ಪೂರ್ಣಗೊಂಡಿದ್ದು, ಉಪಕೇಂದ್ರದಲ್ಲಿ ಎರಡು ಟ್ರಾನ್ಸ್‌ಫಾರ್ಮರ್‌ಗಳನ್ನು ಅಳವಡಿಸಿ, ತಲಾ 12,400 ಲೀಟರ್ ಆಯಿಲ್ ತುಂಬಿಸಲಾಗಿತ್ತು. ಆ.16ರಂದು ಪರಿಶೀಲಿಸಿದಾಗ ಎರಡೂ ಟ್ರಾನ್ಸ್‌ಫಾರ್ಮರ್‌ಗಳಲ್ಲಿ ಆಯಿಲ್ ಇರುವುದು ದೃಢಪಟ್ಟಿತ್ತು.
ಸೆ.30ರಂದು ಸಬ್‌ಸ್ಟೇಷನ್ ಉದ್ಘಾಟನೆ ಹಿನ್ನೆಲೆಯಲ್ಲಿ ಸೈಟ್ ಇಂಜಿನಿಯರ್, ಟ್ರಾನ್ಸ್‌ಫಾರ್ಮರ್ ತಯಾರಿಕಾ ಕಂಪನಿಯ ತಂತ್ರಜ್ಞರು ಹಾಗೂ ಇತರರು ಬೆಳಗ್ಗೆ 9.30ರ ಸುಮಾರಿಗೆ ಟ್ರಾನ್ಸ್‌ಫಾರ್ಮರ್‌ಗಳನ್ನು ಪರಿಶೀಲಿಸಿದಾಗ, ಒಂದು ಟ್ರಾನ್ಸ್‌ಫಾರ್ಮರ್‌ನಲ್ಲಿದ್ದ ಆಯಿಲ್ ಸಂಪೂರ್ಣವಾಗಿ ಕಾಣೆಯಾಗಿರುವುದು ಬೆಳಕಿಗೆ ಬಂದಿದೆ.

ಕೆಲಸದಿಂದ ವಜಾಗೊಂಡಿದ್ದ ವ್ಯಕ್ತಿಯ ಮೇಲೆ ಅನುಮಾನ
ದೂರುದಾರರ ಕಂಪನಿಯಲ್ಲಿ ಕಳೆದ ಒಂದೂವರೆ ವರ್ಷದಿಂದ ಕೆಲಸ ಮಾಡುತ್ತಿದ್ದ ಹಾಸನ ಜಿಲ್ಲೆ ಬೇಲೂರು ತಾಲೂಕಿನ ರಾಜನಸಿರಿಯೂರು ಗ್ರಾಮದ ಆಕಾಶ್ ಎಂಬಾತ ಹಾಸನದ ಆಲೂರು 66/11 ಕೆ.ವಿ. ಹಳೆಯ ಸಬ್‌ಸ್ಟೇಷನ್‌ನಲ್ಲಿ ಟವರ್ ಸೈಟ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ಗಾಣದಾಳು ಸಬ್‌ಸ್ಟೇಷನ್‌ಗೂ ಆಗಾಗ್ಗೆ ಬಂದು ಹೋಗುತ್ತಿದ್ದ ಈತನನ್ನು ಕೆಲಸಕ್ಕೆ ಸರಿಯಾಗಿ ಹಾಜರಾಗುತ್ತಿಲ್ಲ ಎಂಬ ಕಾರಣಕ್ಕೆ ಸೆ.8ರಂದು ಕೆಲಸದಿಂದ ತೆಗೆದುಹಾಕಲಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸೆ.21ರಂದು ಆಕಾಶ್ ತನ್ನ ಮೊಬೈಲ್‌ನಿಂದ ಕರೆ ಮಾಡಿ, ಸ್ನೇಹಿತನಿಗೆ ಟ್ರಾನ್ಸ್‌ಫಾರ್ಮರ್ ಆಯಿಲ್ ಬೇಕಾಗಿದೆ, ಕೊಡಬಹುದೇ ಎಂದು ಕೇಳಿದ್ದ. ಆದರೆ ತಾನು ಆಯಿಲ್ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿ ಕರೆ ಕಡಿತಗೊಳಿಸಿದ್ದಾಗಿ ಪ್ರಜ್ವಲ್ ದೂರಿನಲ್ಲಿ ತಿಳಿಸಿದ್ದಾರೆ.

ಕೆಲಸದಿಂದ ತೆಗೆದುಹಾಕಿದ ಹಿನ್ನೆಲೆಯಲ್ಲಿ ಆಯಿಲ್ ಅನ್ನು ಬೇರೆಯವರಿಗೆ ಮಾರಾಟ ಮಾಡುವ ಉದ್ದೇಶದಿಂದ ಆಕಾಶ್ ಕಳ್ಳತನ ಮಾಡಿರಬಹುದು ಎಂಬ ಅನುಮಾನವಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಆ.17ರಿಂದ ಸೆ.30ರ ನಡುವಿನ ಅವಧಿಯಲ್ಲಿ ಕಳ್ಳತನ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ₹31 ಲಕ್ಷ ಮೌಲ್ಯದ 12,400 ಲೀಟರ್ ಟ್ರಾನ್ಸ್‌ಫಾರ್ಮರ್ ಆಯಿಲ್ ನಾಪತ್ತೆಯಾಗಿದೆ. ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Continue Reading

Chikmagalur

ಫೇಸ್‌ಬುಕ್‌ನ ‘ಕೇರಳ ಲಾಟರಿ’ ಜಾಹೀರಾತು ನಂಬಿ ₹4.30 ಲಕ್ಷ ಕಳೆದುಕೊಂಡ ವ್ಯಕ್ತಿ

Published

on

ಚಿಕ್ಕಮಗಳೂರು: ಫೇಸ್‌ಬುಕ್‌ನಲ್ಲಿ ಕಾಣಿಸಿಕೊಂಡ ‘ಕೇರಳ ಲಾಟರಿ’ ಜಾಹೀರಾತಿನ ಲಿಂಕ್ ಕ್ಲಿಕ್ ಮಾಡಿ, ಲಾಟರಿ ಗೆದ್ದಿರುವುದಾಗಿ ನಂಬಿ ಹಂತ ಹಂತವಾಗಿ ವಿವಿಧ ಶುಲ್ಕಗಳ ಹೆಸರಿನಲ್ಲಿ ಹಣ ಪಾವತಿಸಿದ ವ್ಯಕ್ತಿಯೊಬ್ಬರು ₹4.30 ಲಕ್ಷ ಕಳೆದುಕೊಂಡಿರುವ ಘಟನೆ ನಡೆದಿದೆ.
ಈ ಕುರಿತು ಗಿರಿನಗರ, ರಾಮನಹಳ್ಳಿ ನಿವಾಸಿ, ರೈಟರ್ ಕೆಲಸ ಮಾಡುತ್ತಿರುವ 46 ವರ್ಷದ ಸುಂದರ್ ಅವರು ಚಿಕ್ಕಮಗಳೂರು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಸೆ.10ರಂದು ಬೆಳಗ್ಗೆ ಫೇಸ್‌ಬುಕ್ ವೀಕ್ಷಿಸುತ್ತಿದ್ದ ವೇಳೆ ‘Kerala Lottery’ ಎಂಬ ಜಾಹೀರಾತು ಕಂಡು ಅದರಲ್ಲಿದ್ದ ಲಿಂಕ್ ಕ್ಲಿಕ್ ಮಾಡಿದ್ದರು. ಬಳಿಕ ಅಪರಿಚಿತ ವ್ಯಕ್ತಿಯೊಬ್ಬರು ಕರೆ ಮಾಡಿ ಲಾಟರಿ ಟಿಕೆಟ್ ಖರೀದಿಸುವಂತೆ ತಿಳಿಸಿದ್ದು, ಕೆಲ ಟಿಕೆಟ್ ಸಂಖ್ಯೆಗಳನ್ನು ವಾಟ್ಸಾಪ್ ಮೂಲಕ ಕಳುಹಿಸಿದ್ದರು. ಅವುಗಳಲ್ಲಿ ಒಂದು ಸಂಖ್ಯೆಯನ್ನು ಆಯ್ಕೆ ಮಾಡಿದ ಸುಂದರ್ ಅವರು ₹149 ಪಾವತಿಸಿದ್ದರು.
ಅದೇ ದಿನ ಮಧ್ಯಾಹ್ನ ಲಾಟರಿಯಲ್ಲಿ ₹12 ಲಕ್ಷ ಬಹುಮಾನ ಗೆದ್ದಿರುವುದಾಗಿ ತಿಳಿಸಿ, ಗೆಲುವಿನ ಪ್ರಮಾಣಪತ್ರವೊಂದನ್ನು ಕಳುಹಿಸಲಾಗಿತ್ತು. ಬಳಿಕ ಬ್ಯಾಂಕ್ ಖಾತೆ ವಿವರ ಹಾಗೂ ಆಧಾರ್‌ಕಾರ್ಡ್ ಕಳುಹಿಸುವಂತೆ ಸೂಚಿಸಲಾಗಿತ್ತು.

ನಂತರ ಬಹುಮಾನದ ಹಣ ಪಡೆಯಲು ವೆರಿಫಿಕೇಷನ್ ಚಾರ್ಜ್, ಜಿಎಸ್‌ಟಿ, ಬ್ಯಾಂಕ್ ಟ್ರಾನ್ಸ್‌ಫರ್ ಚಾರ್ಜ್ ಸೇರಿದಂತೆ ವಿವಿಧ ಶುಲ್ಕಗಳನ್ನು ಪಾವತಿಸಬೇಕೆಂದು ಹೇಳಿ ಆರೋಪಿಗಳು ಹಣ ಪಡೆದುಕೊಂಡಿದ್ದಾರೆ. ಸೆ.10ರಿಂದ ಸೆ.20ರವರೆಗೆ ವಿವಿಧ ಮೊಬೈಲ್ ಸಂಖ್ಯೆಗಳು, ಸ್ಕ್ಯಾನರ್‌ಗಳು ಹಾಗೂ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡಿದ್ದು, ಒಟ್ಟು ₹4,30,000 ಪಾವತಿಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಬಹುಮಾನದ ಹಣ ನೀಡದೆ ಮತ್ತಷ್ಟು ಹಣಕ್ಕೆ ಬೇಡಿಕೆ ಬಂದ ಹಿನ್ನೆಲೆಯಲ್ಲಿ ತಾನು ವಂಚನೆಗೊಳಗಾಗಿರುವುದು ಅರಿವಾಗಿ ಸುಂದರ್ ಅವರು ಸೈಬರ್ ಸಹಾಯವಾಣಿ 1930ಕ್ಕೆ ಕರೆ ಮಾಡಿ ದೂರು ದಾಖಲಿಸಿದ್ದಾರೆ.

ಈ ಸಂಬಂಧ ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಹಣ ವರ್ಗಾವಣೆಯಾದ ಖಾತೆಗಳು ಹಾಗೂ ಮೊಬೈಲ್ ಸಂಖ್ಯೆಗಳ ಆಧಾರದ ಮೇಲೆ ಆರೋಪಿಗಳ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.

Continue Reading

Chikmagalur

ಕಡೂರಿನಲ್ಲಿ ಮನೆ ಬೀಗ ಮುರಿದು ₹7.06 ಲಕ್ಷ ಮೌಲ್ಯದ ನಗದು, ಚಿನ್ನಾಭರಣ ಕಳವು

Published

on

ಕಡೂರು: ಮನೆಯವರು ಕಣ್ಣಿನ ಚಿಕಿತ್ಸೆಗಾಗಿ ಹೊರಗಡೆ ತೆರಳಿದ್ದ ಸಂದರ್ಭದಲ್ಲಿ ಮನೆಯ ಬೀಗ ಮುರಿದು ಒಳನುಗ್ಗಿದ ಕಳ್ಳರು ₹90 ಸಾವಿರ ನಗದು ಹಾಗೂ 77 ಗ್ರಾಂ ತೂಕದ ಚಿನ್ನಾಭರಣ ಸೇರಿದಂತೆ ಒಟ್ಟು ₹7.06 ಲಕ್ಷ ಮೌಲ್ಯದ ವಸ್ತುಗಳನ್ನು ಕಳವು ಮಾಡಿರುವ ಘಟನೆ ಕಡೂರು ಪಟ್ಟಣದಲ್ಲಿ ನಡೆದಿದೆ.
ಕಡೂರು ಪಟ್ಟಣದ ವೈಎಂಸಿ ಕಾಲೇಜು ಸಮೀಪದ ನಿವಾಸಿ ಬಿ.ಎಸ್. ತಿಮ್ಮಪ್ಪ ಅವರು ಈ ಕುರಿತು ಕಡೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದೂರುದಾರ ತಿಮ್ಮಪ್ಪ ಅವರು ಪತ್ನಿ ಶಿವಮ್ಮ ಅವರೊಂದಿಗೆ ಕಣ್ಣಿನ ಶಸ್ತ್ರಚಿಕಿತ್ಸೆಗಾಗಿ ಸೆ.26ರಂದು ಬೆಳಗ್ಗೆ 6.30ಕ್ಕೆ ದಾವಣಗೆರೆಗೆ ತೆರಳಿದ್ದರು. ಮನೆಗೆ ಇಂಟರ್‌ಲಾಕ್ ಹಾಗೂ ಮತ್ತೊಂದು ಬೀಗ ಹಾಕಿ, ಪಕ್ಕದ ಮನೆಯಲ್ಲಿದ್ದ ಪುತ್ರಿ ಯಶೋಧ ಅವರಿಗೆ ಮನೆ ನೋಡಿಕೊಳ್ಳುವಂತೆ ತಿಳಿಸಿದ್ದರು. ದಾವಣಗೆರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ದಂಪತಿ ಚಿತ್ರದುರ್ಗದಲ್ಲಿರುವ ಪುತ್ರನ ಮನೆಗೆ ತೆರಳಿದ್ದರು.

ಸೆ.29ರಂದು ರಾತ್ರಿ 11 ಗಂಟೆ ಸುಮಾರಿಗೆ ಯಶೋಧ ಅವರು ಮನೆ ನೋಡಿದಾಗ ಬೀಗ ಸರಿಯಾಗಿತ್ತು. ಆದರೆ ಸೆ.30ರಂದು ಬೆಳಗ್ಗೆ 6.30ಕ್ಕೆ ನೋಡಿದಾಗ ಮನೆಯ ಮುಂಭಾಗದ ಬೀಗ ಮುರಿದಿದ್ದು, ಬಾಗಿಲನ್ನು ಆಯುಧದಿಂದ ಮೀಟಿ ಒಳನುಗ್ಗಿರುವುದು ಕಂಡುಬಂದಿದೆ. ಕೂಡಲೇ ಅವರು ತಂದೆಗೆ ಮಾಹಿತಿ ನೀಡಿದ್ದಾರೆ.
ತಿಮ್ಮಪ್ಪ ಅವರು ಚಿತ್ರದುರ್ಗದಿಂದ ಕಡೂರಿಗೆ ಬಂದು ಪರಿಶೀಲಿಸಿದಾಗ, ಮನೆಯ ಎರಡು ಕೊಠಡಿಗಳಲ್ಲಿದ್ದ ಕಬೋರ್ಡ್‌ಗಳನ್ನು ಮೀಟಿ ಬಟ್ಟೆಗಳನ್ನು ಚೆಲ್ಲಾಪಿಲ್ಲಿ ಮಾಡಲಾಗಿತ್ತು. ಕಳ್ಳರು ಒಂದು ಕಬೋರ್ಡ್‌ನಲ್ಲಿದ್ದ ₹90 ಸಾವಿರ ನಗದು ಹಾಗೂ ವಿವಿಧ ಚಿನ್ನಾಭರಣಗಳು, ಮತ್ತೊಂದು ಕೊಠಡಿಯಲ್ಲಿದ್ದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ.

ಒಟ್ಟು 77 ಗ್ರಾಂ ತೂಕದ ಚಿನ್ನಾಭರಣಗಳ ಅಂದಾಜು ಮೌಲ್ಯ ₹6.16 ಲಕ್ಷ ಹಾಗೂ ನಗದು ₹90 ಸಾವಿರ ಸೇರಿ ₹7.06 ಲಕ್ಷ ಮೌಲ್ಯದ ವಸ್ತುಗಳು ಕಳವಾಗಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸೆ.29ರ ರಾತ್ರಿ 11 ಗಂಟೆಯಿಂದ ಸೆ.30ರ ಬೆಳಗ್ಗೆ 6.30ರ ನಡುವಿನ ಅವಧಿಯಲ್ಲಿ ಕಳ್ಳತನ ನಡೆದಿರುವ ಸಾಧ್ಯತೆಯಿದ್ದು, ಕಡೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಕಳ್ಳರ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ.

Continue Reading

Chikmagalur

ಸರ್ಕಲ್ ನ ಅಗಲಿಕರಣಕ್ಕೆ ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕ ರಾಜೇಗೌಡ ಶಂಕುಸ್ಥಾಪನೆ

Published

on

ಜಯಪುರ : ಸಾರ್ವಜನಿಕರ ಬಹುದಿನಗಳ ಬೇಡಿಕೆ ನಗರದಲ್ಲಿರುವ ಮುಖ್ಯ ಸರ್ಕಲ್ ನ ಅಗಲಿಕರಣಕ್ಕೆ ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕ, ಕರ್ನಾಟಕ ನವೀಕರಿಸಬಹುದಾದ ಇಂಧನ ನಿಗಮದ ಅಧ್ಯಕ್ಷರಾದ ಟಿ ಡಿ ರಾಜೇಗೌಡ ಶಂಕುಸ್ಥಾಪನೆಯನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಹೆಚ್ಎಂ ಸತೀಶ್, ಮೇಗುಂದ ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ್ ಜಾಳ್ಮರ, ಇಸ್ಮಾಯಿಲ್, ರವಿಚಂದ್ರ, ಫಣಿರಾಜ್ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.

ವರದಿ :- ಎಂ.ಪಿ.ಪ್ರದೀಪ್ ಹೆಬ್ಬಾರ್, ಜಯಪುರ.

Continue Reading

Trending

error: Content is protected !!