Connect with us

Kodagu

ವಿದ್ಯಾರ್ಥಿಗಳಲ್ಲಿ ಕನಸು ಇದ್ದು, ಉತ್ತಮ ಸಾಧನೆ ಮಾಡುವತ್ತ ಮನಸ್ಸು ಮಾಡಬೇಕು: ಡಾ.ಮಂತರ್ ಗೌಡ

Published

on

ಮಡಿಕೇರಿ : ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳುವಲ್ಲಿ ಕನಸು ಕಟ್ಟಿಕೊಳ್ಳಬೇಕು. ಆ ದಿಸೆಯಲ್ಲಿ ಆಸಕ್ತಿ ಇರುವ ಕ್ಷೇತ್ರದಲ್ಲಿ ಒಳ್ಳೆಯ ಸಾಧನೆ ಮಾಡುವತ್ತ ಗಮನ ಹರಿಸಬೇಕು ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಅವರು ಕರೆ ನೀಡಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ಕಾನೂನು ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಕೀಲರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ 2026ನೇ ಸಾಲಿನ ಯುವ ಸಂಸತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಗತ್ತು ವೇಗವಾಗಿ ಬೆಳೆಯುತ್ತಿದ್ದು, ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಪರಿಣತಿ ಹಾಗೂ ಕೌಶಲ್ಯಗಳನ್ನು ಬೆಳೆಸಿಕೊಂಡರೆ ಉದ್ಯೋಗಾವಕಾಶಗಳನ್ನು ಪಡೆದುಕೊಳ್ಳಬಹುದು. ಈ ನಿಟ್ಟಿನಲ್ಲಿ ನಿರಂತರ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.
ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಯಾವುದೇ ಕ್ಷೇತ್ರದಲ್ಲಿ ತೊಡಗಿಸಿಕೊಂಡರೂ ಸಮಾಜಮುಖಿ ಚಿಂತನೆ ಬೆಳೆಸಿಕೊಳ್ಳಬೇಕು. ನಮ್ಮ ಸುತ್ತಮುತ್ತಲಿನ ಪರಿಸರದ ಸ್ವಚ್ಛತೆ, ಮೂಲಸೌಕರ್ಯಗಳ ಅಭಿವೃದ್ಧಿ ಹಾಗೂ ಸಹೋದರತ್ವಕ್ಕೆ ಆದ್ಯತೆ ನೀಡಬೇಕು ಎಂದರು.

ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಮಹತ್ವ ಮತ್ತು ಸಂವಿಧಾನದ ಅರಿವು ಮೂಡಿಸುವ ಉದ್ದೇಶದಿಂದ ಸರ್ಕಾರ ಯುವ ಸಂಸತ್ ಕಾರ್ಯಕ್ರಮ ಆಯೋಜಿಸಿದೆ. ಶಾಸಕಾಂಗ ಮತ್ತು ಕಾರ್ಯಾಂಗದ ಕಾರ್ಯನಿರ್ವಹಣೆ, ವಿಧಾನಸಭಾಧ್ಯಕ್ಷರು, ಉಪಾಧ್ಯಕ್ಷರು, ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕರು, ಸಚಿವರು ಹಾಗೂ ವಿಧಾನಸಭೆ ಮತ್ತು ವಿಧಾನ ಪರಿಷತ್ ಸದಸ್ಯರ ಜವಾಬ್ದಾರಿಗಳನ್ನು ವಿದ್ಯಾರ್ಥಿಗಳು ಅರಿತುಕೊಳ್ಳುವ ಜೊತೆಗೆ, ಸಂಸತ್ತಿನ ಮಾದರಿಯಲ್ಲಿ ಕಲಾಪಗಳಲ್ಲಿ ಭಾಗವಹಿಸಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಾಜದ ಅಭಿವೃದ್ಧಿ ಕೇವಲ ಸರ್ಕಾರ ಅಥವಾ ಜನಪ್ರತಿನಿಧಿಗಳ ಜವಾಬ್ದಾರಿಯಲ್ಲ. ಪ್ರತಿಯೊಬ್ಬರೂ ತಮ್ಮ ವೃತ್ತಿಯ ಜೊತೆಗೆ ಸಮಾಜದ ಹಾಗೂ ಸುತ್ತಮುತ್ತಲಿನ ಪ್ರದೇಶದ ಅಭಿವೃದ್ಧಿಯ ಬಗ್ಗೆಯೂ ಕಾಳಜಿ ವಹಿಸಬೇಕು. ದೊಡ್ಡ ಮಟ್ಟದ ಸೇವೆ ಮಾಡಲು ಸಾಧ್ಯವಾಗದಿದ್ದರೂ, ತಮ್ಮ ಕೈಲಾದಷ್ಟು ಕೊಡುಗೆ ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಎಂಬ ಮೂರು ಪ್ರಮುಖ ಅಂಗಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿದಾಗ ಮಾತ್ರ ದೇಶ ಅಭಿವೃದ್ಧಿಯತ್ತ ಸಾಗಲು ಸಾಧ್ಯ. ಶಾಸಕಾಂಗ ಉತ್ತಮ ಕಾನೂನುಗಳನ್ನು ರೂಪಿಸಿದರೂ, ಕಾಯಾರ್ಂಗ ಅವುಗಳನ್ನು ಸಮರ್ಪಕವಾಗಿ ಅನುಷ್ಟಾನ ಗೊಳಿಸದಿದ್ದರೆ ನಿರೀಕ್ಷಿತ ಫಲಿತಾಂಶ ದೊರೆಯುವುದಿಲ್ಲ. ಆದ್ದರಿಂದ ಮೂರು ಅಂಗಗಳ ನಡುವೆ ಸಮನ್ವಯ ಅತ್ಯಗತ್ಯ ಎಂದರು.
ಸಮಾಜದ ಪ್ರತಿಯೊಂದು ಸಮಸ್ಯೆಯನ್ನೂ ಬೇರೆಯವರ ಜವಾಬ್ದಾರಿ ಎಂದು ಭಾವಿಸುವ ಮನೋಭಾವ ಬದಲಾಗಬೇಕು. ಎಲ್ಲರೂ ವಿದ್ಯಾವಂತರಾಗಬೇಕು. ಬುದ್ಧಿವಂತಿಕೆ ಮತ್ತು ವಿದ್ಯಾಭ್ಯಾಸ ಎರಡೂ ವಿಭಿನ್ನವಾಗಿದ್ದು, ಶಿಕ್ಷಣವು ವ್ಯಕ್ತಿಯ ಆಲೋಚನೆ ಹಾಗೂ ಸಮಾಜದ ಕುರಿತಾದ ದೃಷ್ಟಿಕೋನವನ್ನು ವಿಸ್ತರಿಸುತ್ತದೆ. ಮುಂದಿನ ದಿನಗಳಲ್ಲಿ ಉನ್ನತ ಶೈಕ್ಷಣಿಕ ಅರ್ಹತೆ ಹೊಂದಿರುವವರು ಜನಪ್ರತಿನಿಧಿಗಳಾಗಿ ಆಯ್ಕೆಯಾಗುವಂತಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಶೇಖರ್ ಅವರು ಮಾತನಾಡಿ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುವ ಉದ್ದೇಶದಿಂದ ಸರ್ಕಾರ ಯುವ ಸಂಸತ್ ಕಾರ್ಯಕ್ರಮವನ್ನು ಆಯೋಜಿಸಿದೆ. ಜಿಲ್ಲೆಯ ಮೂರು ತಾಲೂಕುಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಅಧ್ಯಕ್ಷ ಮಂದ್ರೀರ ಮೋಹನ್ ದಾಸ್, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಗಣಪತಿ, ಮೀನುಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಿಲನ ಭರತ್, ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಮುಖ್ಯೋಪಾಧ್ಯಾಯರು, ಅಧಿಕಾರಿಗಳು ಹಾಗೂ ಶಿಕ್ಷಕರು ಇದ್ದರು. ತಾಲೂಕು ಸಮಾಜ ಕಲ್ಯಾಣಾಧಿಕಾರಿ ಬಾಲಕೃಷ್ಣ ರೈ ಸ್ವಾಗತಿಸಿದರು. ಪವನ್ ಕುಮಾರ್ ನಿರೂಪಿಸಿದರು.
ವಿದ್ಯಾರ್ಥಿಗಳಿಂದ ಸಂಸತ್ ಕಲಾಪ: ಯುವ ಸಂಸತ್ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪ್ರಜಾಪ್ರಭುತ್ವ ವ್ಯವಸ್ಥೆಯ ಚುನಾವಣಾ ಪ್ರಕ್ರಿಯೆ, ಜನಪ್ರತಿನಿಧಿಗಳ ಆಯ್ಕೆ, ಸದನದ ಕಲಾಪಗಳ ನಿರ್ವಹಣೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಕುರಿತು ಚರ್ಚೆ ನಡೆಸುವ ವಿಧಾನವನ್ನು ಅಣಕು ಸಂಸತ್ ಕಲಾಪದ ಮೂಲಕ ಪ್ರಸ್ತುತಪಡಿಸಿ ಗಮನ ಸೆಳೆದರು.

ಪ್ರೌಢಶಾಲೆ, ಪದವಿಪೂರ್ವ, ಪದವಿ, ವೈದ್ಯಕೀಯ, ತಾಂತ್ರಿಕ ಹಾಗೂ ಸ್ನಾತಕೋತ್ತರ ಪದವಿ ಸೇರಿದಂತೆ ವಿವಿಧ ಹಂತಗಳ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರಾಗಿ ಭಾಗವಹಿಸಿ, ಕೊಡಗು ಜಿಲ್ಲೆಯಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚಿಸಿದರು.
ಸಭೆಯ ಆರಂಭದಲ್ಲಿ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕರು ಸಭಾಧ್ಯಕ್ಷರನ್ನು ಸಭಾಧ್ಯಕ್ಷರ ಪೀಠದವರೆಗೆ ಕರೆತಂದರು. ಬಳಿಕ ಸಭಾಧ್ಯಕ್ಷರು ತಮ್ಮ ಆಸನದಲ್ಲಿ ಕುಳಿತು ಕಲಾಪ ಆರಂಭಿಸಲು ಅನುಮತಿ ನೀಡಿದರು. ನಾಡಗೀತೆ ಹಾಗೂ ವಂದೇ ಮಾತರಂ ಗೀತೆಯೊಂದಿಗೆ ಯುವ ಸಂಸತ್ ಕಲಾಪ ಆರಂಭಗೊಂಡಿತು. ಸಂಸತ್ ಅಧಿವೇಶನದ ಮಾದರಿಯಲ್ಲಿ ವಿದ್ಯಾರ್ಥಿಗಳು ಸಭಾಧ್ಯಕ್ಷರು, ಪ್ರಧಾನಮಂತ್ರಿ, ವಿವಿಧ ಖಾತೆಗಳ ಸಚಿವರು ಹಾಗೂ ವಿರೋಧ ಪಕ್ಷದ ನಾಯಕರ ಪಾತ್ರಗಳನ್ನು ನಿರ್ವಹಿಸಿದರು. ಕಲಾಪದ ಆರಂಭದಲ್ಲಿ ಸಂವಿಧಾನದ ಪೀಠಿಕೆಯನ್ನು ಓದಲಾಯಿತು.

ಸಭಾಧ್ಯಕ್ಷರ ಪಾತ್ರ ನಿರ್ವಹಿಸಿದ ಮುತ್ತಪ್ಪ ಬೋರಪ್ಪ ಮೊಕಾಶಿ ಮಾತನಾಡಿ, ಪ್ರಜಾಪ್ರಭುತ್ವದ ಶಕ್ತಿ ಜನರ ಧ್ವನಿಯಲ್ಲಿದೆ. ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಎಲ್ಲರ ಆಶಯವಾಗಬೇಕು. ಈ ನಿಟ್ಟಿನಲ್ಲಿ ಸಮಾಜಮುಖಿ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಬೇಕು ಎಂದು ಹೇಳಿದರು.
ಮುಖ್ಯಮಂತ್ರಿ ಪಾತ್ರ ನಿರ್ವಹಿಸಿದ ಮನೀಶ್ ಪ್ರಭಾಕರ್ ಅವರು ಸಚಿವರನ್ನು ಸದನಕ್ಕೆ ಪರಿಚಯಿಸಿದರು. ಈ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ಗಣ್ಯರಿಗೆ ಸಂತಾಪ ಸೂಚಿಸಲಾಯಿತು.

ಬಳಿಕ ನಡೆದ ಪ್ರಶ್ನೋತ್ತರ ವೇಳೆಯಲ್ಲಿ ವಿರೋಧ ಪಕ್ಷದ ಸದಸ್ಯರು ವಿದ್ಯುತ್ ಸಮಸ್ಯೆ, ಬರಗಾಲ, ಕುಡಿಯುವ ನೀರಿನ ಕೊರತೆ, ಮಳೆ, ಅರಣ್ಯ ನಾಶ, ಬಾಲಕಾರ್ಮಿಕ ಪದ್ಧತಿ, ಸಾರಿಗೆ ಸಮಸ್ಯೆ, ಜಾನುವಾರುಗಳಿಗೆ ಮೇವಿನ ಕೊರತೆ, ಶಿಕ್ಷಣದ ಗುಣಮಟ್ಟ, ಪರಿಸರ ಸಂರಕ್ಷಣೆ, ಮೂಲಸೌಕರ್ಯಗಳ ಕೊರತೆ ಹಾಗೂ ತಂತ್ರಜ್ಞಾನದ ಸದ್ಬಳಕೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಆಡಳಿತ ಪಕ್ಷದ ಸಚಿವರನ್ನು ಪ್ರಶ್ನಿಸಿದರು.
ಇದಕ್ಕೆ ಆಡಳಿತ ಪಕ್ಷದ ಸಚಿವರು ಅಂಕಿ-ಅಂಶಗಳ ಸಹಿತ ಉತ್ತರ ನೀಡುವ ಮೂಲಕ ಸದನದ ಗಮನ ಸೆಳೆದರು. ಪ್ರಮುಖ ವಿಷಯಗಳ ಕುರಿತು ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ನಡೆದ ಆರೋಗ್ಯಕರ ಚರ್ಚೆ ಹಾಗೂ ವಾಗ್ವಾದಗಳು ನೈಜ ಸಂಸತ್ ಕಲಾಪವನ್ನು ನೆನಪಿಸುವಂತಿದ್ದವು.
ಸಂಸ್ಥೆಯ ಪ್ರಾಂಶುಪಾಲರು ಹಾಗೂ ಶಿಕ್ಷಕ ವೃಂದದ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿದ್ದರು. ಯುವ ಸಂಸತ್ ಕಲಾಪದ ನಿರ್ವಹಣೆಯಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಎನ್‍ಸಿಸಿ ಕೆಡೆಟ್‍ಗಳು ಸಹಕರಿಸಿದರು.

Continue Reading

Kodagu

ಮಡಿಕೇರಿ ಸೇರಿದಂತೆ ವಿವಿಧೆಡೆ ನ.18 ಮತ್ತು 19 ರಂದು ವಿದ್ಯುತ್ ವ್ಯತ್ಯಯ

Published

on

ಮಡಿಕೇರಿ : ಮೈಸೂರಿನ ಕಡಕೋಳದಲ್ಲಿ ನೂತನವಾಗಿ ನಿರ್ಮಿಸುತ್ತಿರುವ 2*500 ಎಂವಿಎ, 400 ಕೆವಿ ವಿದ್ಯುತ್ ಉಪಕೇಂದ್ರ ಮತ್ತು ಸಂಬಂಧಿತ 400 ಕೆ.ವಿ. ವಿದ್ಯುತ್ ಉಪಕೇಂದ್ರ ಮತ್ತು ಸಂಬಂಧಿತ 400 ಕೆ.ವಿ. ಮಾರ್ಗದ ಕಾಮಗಾರಿಯ ಪ್ರಯುಕ್ತ ಹಾಲಿ ಇರುವ 220 ಕೆ.ವಿ. ಬಸ್ತಿಪುರ, ತಮಡಹಳ್ಳಿ (ಹುಣಸೂರು) ವಿದ್ಯುತ್ ಮಾರ್ಗಕ್ಕೆ ತಂತಿ ಎಳೆಯುವ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ 220 ಕೆ.ವಿ. ಕುಶಾಲನಗರ ವಿದ್ಯುತ್ ಉಪಕೇಂದ್ರದಿಂದ ಸರಬರಾಜಾಗುವ ವಿದ್ಯುತ್ ಮಾರ್ಗವನ್ನು ಸ್ಥಗಿತಗೊಳಿಸಬೇಕಾಗಿರುವುದರಿಂದ ಇದರ ವ್ಯಾಪ್ತಿಗೆ ಬರುವ 66/11 ಕೆ.ವಿ. ಮಡಿಕೇರಿ ವಿದ್ಯುತ್ ಉಪಕೇಂದ್ರ ಹಾಗೂ ವಿರಾಜಪೇಟೆ ಉಪಕೇಂದ್ರದಿಂದ ಸರಬರಾಜಾಗುವ 33/11 ಕೆ.ವಿ. ಮೂರ್ನಾಡು ಫೀಡರ್ ಮಾರ್ಗಗಳಲ್ಲಿ ನವೆಂಬರ್, 18 ಮತ್ತು 19 ರಂದು ಬೆಳಗ್ಗೆ 10 ರಿಂದ ಸಂಜೆ 05 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಈ ಮಾರ್ಗದಿಂದ ವಿದ್ಯುತ್ ಸರಬರಾಜಾಗುವ ಮಡಿಕೇರಿ ನಗರ, ರಾಜಾಸೀಟ್, ಗದ್ದಿಗೆ, ಕೋಟೆ, ಕುಂಡಾಮೇಸ್ತ್ರಿ, ಓಂಕಾರೇಶ್ವರ, ಜಿ.ಟಿ.ರಸ್ತೆ, ಕೆ.ಎಸ್.ಆರ್.ಟಿ.ಸಿ., ಮೇಕೇರಿ, ಭಾಗಮಂಡಲ, ಬೋಯಿಕೇರಿ, ಸಂಪಾಜೆ, ಗಾಳಿಬೀಡು, ಮಕ್ಕಂದೂರು, ಹೆಬ್ಬೆಟ್ಟಗೇರಿ, ಕೆ. ಬಾಡಗ, ತಾಳತ್ತಮನೆ, ಬೆಟ್ಟಗೇರಿ, ಚೆಟ್ಟಿಮಾನಿ, ಚೇರಂಬಾಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು ಹಾಗೂ 33 ಕೆ.ವಿ. ಮೂರ್ನಾಡು, ಮರಗೋಡು, ಕುಂಜಿಲ, ಎಮ್ಮೆಮಾಡು, ಬಲ್ಲಮಾವಟಿ, ಹಾಕತ್ತೂರು, ಹೊಸ್ಕೇರಿ, ಹೊದ್ದೂರು, ನರಿಯಂದಡ, ನಾಪೋಕ್ಲು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಕೋರಿದೆ.

ಹಾಗೆಯೇ 220/66/11 ಕೆ.ವಿ. ವಿದ್ಯುತ್ ಸ್ವೀಕರಣಾ ಕೇಂದ್ರ ಕುಶಾಲನಗರ ಮತ್ತು 66/11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರ ಸುಂಟಿಕೊಪ್ಪ ಮತ್ತು ಮಾದಾಪುರದಿಂದ ಹೊರಹೊಮ್ಮುವ ಮಾರ್ಗಗಳಲ್ಲಿ ಮೂರನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ನಡೆಸಬೇಕಾಗಿರುವುದರಿಂದ ನವೆಂಬರ್, 18 ಮತ್ತು 19 ರಂದು ಬೆಳಗ್ಗೆ 10 ರಿಂದ ಸಂಜೆ 05.00 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಈ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಕುಶಾಲನಗರ ಟೌನ್, ನಂಜರಾಯಪಟ್ಟಣ, ಗುಡ್ಡೆಹೊಸೂರು, ಹೆಬ್ಬಾಲೆ, ಕಣಿವೆ, ಮಲ್ಲೇನಹಳ್ಳಿ, ಭುವನಗಿರಿ, ಇಂಡಸ್ಟ್ರಿಯಲ್ ಏರಿಯಾ, ಕೂಡಿಗೆ, ಕೂಡುಮಂಗಳೂರು, ಶಿರಂಗಾಲ, ಕಾನ್‍ಬೈಲು, ಅಂದಗೋವೆ, ನಾಕೂರು, ಹಾದ್ರೆ ಹಿರೂರು, ಹಟ್ಟಿಹೊಳೆ, ಗರ್ವಾಲೆ, ಗರಗಂದೂರು, ಕಾಂಡನಕೊಲ್ಲಿ, ಕುಂಬೂರು, ಮಾದಾಪುರ, ಪನ್ಯ, ಚೆಟ್ಟಳ್ಳಿ, ನಾಕೂರು ಶಿರಂಗಾಲ, ವಾಲ್ನೂರು ತ್ಯಾಗತ್ತೂರು, ಪೊನ್ನತ್‍ಮೊಟ್ಟೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಕೋರಿದೆ.

ಹಾಗೆಯೇ ಗೋಣಿಕೊಪ್ಪ ವಿದ್ಯುತ್ ವಿತರಣಾ ಉಪಕೇಂದ್ರದಿಂದ ಹೊರಹೊಮ್ಮುವ ಈ5 ಕೆ. ಬಾಡಗ ಫೀಡರ್‍ನಲ್ಲಿ ತುರ್ತು ನಿರ್ವಹಣಾ ಕಾಮಗಾರಿ ನಡೆಸಬೇಕಾಗಿರುವುದರಿಂದ ನವೆಂಬರ್, 18 ರಂದು ಬೆಳಗ್ಗೆ 10 ರಿಂದ ಸಂಜೆ 05 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಈ ಮಾರ್ಗದಿಂದ ವಿದ್ಯುತ್ ಸರಬರಾಜಾಗುವ ಕೆ.ಬಾಡಗ, ಆಲಂದೋಡು, ಹೆರ್ಮಾಡು, ಕುಮಟೂರು, ನಾಲ್ಕೇರಿ, ಕೆ.ಎಂ.ಕೊಲ್ಲಿ, ಪಲ್ಲೇರಿ ಹಾಗೂ ಎಫ್15 ಬೆಕ್ಕೆಸೊಡ್ಲೂರು ಫೀಡರ್‍ನಲ್ಲಿ ತುರ್ತು ನಿರ್ವಹಣಾ ಕಾಮಗಾರಿ ನಡೆಸಬೇಕಾಗಿರುವುದರಿಂದ ನವೆಂಬರ್, 19 ರಂದು ಬೆಳಗ್ಗೆ 10 ರಿಂದ ಸಂಜೆ 05 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು, ಈ ಮಾರ್ಗದಿಂದ ವಿದ್ಯುತ್ ಸರಬರಾಜಾಗುವ ಕಾನೂರು, ಬೆಕ್ಕೆಸೊಡ್ಲೂರು, ಕೋತೂರು, ಬಲ್ಯಮಂಡೂರು, ವಡ್ಡರಮಾಡು, ನಿಡುಗುಂಬ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಕೋರಿದೆ.

ಹಾಗೆಯೇ ಸೋಮವಾರಪೇಟೆ ಉಪವಿಭಾಗದ 66 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೊಮ್ಮುವ ಮಾರ್ಗಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ನಡೆಸಬೇಕಾಗಿರುವುದರಿಂದ ನವೆಂಬರ್, 18 ಮತ್ತು 19 ರಂದು ಬೆಳಗ್ಗೆ 06 ರಿಂದ ಸಂಜೆ 06 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು, ಈ ಮಾರ್ಗದಿಂದ ವಿದ್ಯುತ್ ಸರಬರಾಜಾಗುವ ಎಫ್4 ಸೋಮವಾರಪೇಟೆ ಟೌನ್ ಫೀಡರ್, ಎಫ್6 ಅಬ್ಬೂರುಕಟ್ಟೆ ಫೀಡರ್–ಅಬ್ಬೂರುಕಟ್ಟೆ, ನೇರುಗಳಲೆ, ತಣ್ಣೀರುಹಳ್ಳಿ, ಅರೆಯೂರು,ಹೊಸಳ್ಳಿ, ಎಫ್3 ಐಗೂರು- ಐಗೂರು, ಒಳಗುಂದ, ಹೊಸತೋಟ, ಗರಗಂದೂರು, ಎಫ್5 ಕಾರ್ಕಳ್ಳಿ, ಎಫ್2 ಶಾಂತಳ್ಳಿ ಫೀಡರ್, ಎಫ್1 ದೊಡ್ಡಮಳ್ತೆ ಫೀಡರ್, ದೊಡ್ಡಮಳ್ತೆ, ಹಣಕೋಡು, ಗೆಜ್ಜೆಹಣಕೋಡು, ಚಿಕ್ಕತೋಳೂರು, ಕೂಗೆಕೋಡಿ, ಯಡೂರು, ತಾಕೇರಿ, ಕಿರಗಂದೂರು, ಸೋಮವಾರಪೇಟೆ ಪಟ್ಟಣ, ಹಾನಗಲ್ಲು, ನಗರೂರು,ದುದ್ದುಗಲ್ಲು, ಗಾಂಧೀನಗರ, ಐಗೂರು,ಸಜ್ಜಳ್ಳಿ, ಹೊಸತೋಟ, ಗರಗಂದೂರು,ಕಾಜೂರು, ನೆಗಳ್ಳಿ-ಕಾರ್ಕಳ್ಳಿ, ನೇರುಗಳಲೆ, ಯಲಕನೂರು, ಹೊಸಳ್ಳಿ, ಎಂ.ಜಿ.ರಸ್ತೆ, ಬಾಣಾವಾರ ರಸ್ತೆ, ಬೀದಳ್ಳಿ, ಜಕ್ನಳ್ಳಿ, ಕುಡಿಗಾಣ, ಕೊತ್ನಳ್ಳಿ, ಕುಸುಜೂರು, ಕಾರೆಕೊಪ್ಪ, ಹೊಸತೋಟ, ಎಫ್2 ಆಲೂರು ಸಿದ್ಧಾಪುರ ಫೀಡರ್, ಎಫ್1 ಗೋಣಿಮಾರೂರು ಫೀಡರ್, ಎಫ್3 ಮಾಲಂಬಿ ಫೀಡರ್, ಎಫ್5 ಅಂಕನಹಳ್ಳಿ ಫೀಡರ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಕೋರಿದೆ.

ವಿರಾಜಪೇಟೆ ಉಪವಿಭಾಗದ 220 ಕೆ.ವಿ. ಎಂಯುಎಸ್‍ಎಸ್ ಕುಶಾಲನಗರ ಇಲ್ಲಿ ತುರ್ತು ನಿರ್ವಹಣಾ ಕಾಮಗಾರಿ ನಡೆಸಬೇಕಾಗಿರುವುದರಿಂದ, ನವೆಂಬರ್, 18 ಮತ್ತು 19 ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು, ಈ ಮಾರ್ಗದಿಂದ ವಿದ್ಯುತ್ ಸರಬರಾಜಾಗುವ ವಿರಾಜಪೇಟೆ, ಸಿದ್ಧಾಪುರ, ಅಮ್ಮತ್ತಿ ಮತ್ತು ಪಾಲಿಬೆಟ್ಟ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.

Continue Reading

Kodagu

ಜಿಲ್ಲಾಮಟ್ಟದ ರಸಪ್ರಶ್ನೆ ಸ್ಪರ್ಧೆ -ನಾಪೋಕ್ಲು ಕೆಪಿಎಸ್ ಶಾಲೆ ವಿದ್ಯಾರ್ಥಿಗಳ ತಂಡ ರಾಜ್ಯಮಟ್ಟಕ್ಕೆ ಆಯ್ಕೆ

Published

on

ನಾಪೋಕ್ಲು: ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಮಡಿಕೇರಿಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಭಾಂಗಣದಲ್ಲಿ ಗುರುವಾರ ಜಿಲ್ಲಾಮಟ್ಟದ ಹೆಚ್ಐವಿ ಏಡ್ಸ್ ಅರಿವಿನ ಮಾಸಾಚರಣೆ 2026ರ ಅಂಗವಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ರಸಪ್ರಶ್ನೆ ಸ್ಪರ್ಧೆಯಲ್ಲಿ ನಾಪೊಕ್ಲುವಿನ ಕೆಪಿಎಸ್ ಶಾಲೆಯ ವಿದ್ಯಾರ್ಥಿಗಳ ತಂಡ ಪ್ರಥಮ ಬಹುಮಾನಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ನಾಪೋಕ್ಲು ಕೆಪಿಎಸ್ ಶಾಲೆಯ ವಿದ್ಯಾರ್ಥಿಗಳಾದ ಫಾತಿಮತುಲ್ ಬಿ.ಜೆ. ಅಫ್ರಿನಾ ಮತ್ತು ಸಿ.ಎಚ್. ಸಿಯಾನ ತಂಡ 37 ಅಂಕ ಗಳಿಸಿ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನಗಳಿಸಿದರು. ವಿಜೇತ ತಂಡಕ್ಕೆ ರೂಪಾಯಿ 6,000 ನಗದು ಹಾಗೂ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಮಡಿಕೇರಿಯ ಜನರಲ್ ತಿಮ್ಮಯ್ಯ ವಿದ್ಯಾರ್ಥಿಗಳ ತಂಡ ದ್ವಿತೀಯ ಸ್ಥಾನ ಗಳಿಸಿತು.ಶಾಲೆಯ ವಿದ್ಯಾರ್ಥಿಗಳಾದ ಎನ್‌.ಸಿ ಕಾವೇರಪ್ಪ ಹಾಗೂ ರಿಷಿತ್ ಕೆ .ಎಸ್ ತಂಡ 27 ಅಂಕಗಳಿಸಿ ದ್ವಿತೀಯ ಬಹುಮಾನ 5000 ರೂ ಹಾಗೂ ಪ್ರಮಾಣ ಪತ್ರಗಳನ್ನು ಸ್ವೀಕರಿಸಿದರು. ತೃತೀಯ ಸ್ಥಾನ ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಗಳಿಸಿದರು.26 ಅಂಕಗಳಿಸಿದ ಸಿಂಚನ ಪಿ ಎಸ್ ಮತ್ತು ಪ್ರಾರ್ಥನಾ ಪೊನ್ನಮ್ಮ ವಿದ್ಯಾರ್ಥಿಗಳ ತಂಡ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ರಸಪ್ರಶ್ನೆ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ಪ್ರೌಢಶಾಲೆಗಳ 12 ತಂಡಗಳು ಪಾಲ್ಗೊಂಡಿದ್ದವು.

ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿ ಡಾ. ಸನತ್ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಯುವ ಜನರಲ್ಲಿ ಹೆಚ್ಐವಿ ಏಡ್ಸ್ ಕುರಿತಾದ ಅರಿವನ್ನು ಮೂಡಿಸುವ ಉದ್ದೇಶದಿಂದ ರಸಪ್ರಶ್ನೆ ಸ್ಪರ್ಧೆಯನ್ನು ರಾಜ್ಯದ ಎಲ್ಲಾ ಭಾಗಗಳಲ್ಲಿ ಆಯೋಜಿಸಲಾಗುತ್ತಿದೆ. ವಿದ್ಯಾರ್ಥಿಗಳು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತಿ ಅಗತ್ಯ. ಯುವ ಆರೋಗ್ಯವಂತ ಯುವ ಸಮುದಾಯದಿಂದ ಸುಭದ್ರ ದೇಶ ನಿರ್ಮಾಣ ಸಾಧ್ಯ ಎಂದರು.

ರಸಪ್ರಶ್ನೆ ಸ್ಪರ್ಧೆಯಲ್ಲಿ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಜಿಲ್ಲಾ ಮೇಲ್ವಿಚಾರಕರಾದ ಸುನಿತಾ ಮುತ್ತಣ್ಣ ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಿಪಿಓ ಮಲ್ಲೇಶ್, ಮಡಿಕೇರಿ ಜಿಲ್ಲಾ ಆಸ್ಪತ್ರೆಯ ಆಪ್ತ ಸಮಾಲೋಚಕರಾದ ಅಶ್ವಿತಾ,ಯಮುನಾ, ಅರುಣ್ ಕುಮಾರ್, ಸಂಯೋಜಕ ಟೈನಿ ಪಾಲ್ಗೊಂಡಿದ್ದರು. ರಸಪ್ರಶ್ನೆ ಸ್ಪರ್ಧೆಯನ್ನು ಸಿ.ಎಸ್. ಸುರೇಶ್ ನಡೆಸಿಕೊಟ್ಟರು.

ವರದಿ :ಝಕರಿಯ ನಾಪೋಕ್ಲು

Continue Reading

Kodagu

ನೂತನ ಅಧ್ಯಕ್ಷರಾಗಿ ಕೆ.ಕೆ. ಲೀಲಾವತಿ ಆಯ್ಕೆ

Published

on

ಗುಡ್ಡೆ ಹೊಸೂರು : ಸಮೀಪದ ನಂಜರಾಯಪಟ್ಟಣ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕೆ.ಕೆ. ಲೀಲಾವತಿ ಅವರು ಅವಿರೋಧವಾಗಿ ಆಯ್ಕೆಯಾದರು.


ಈ ಸಂದರ್ಭದಲ್ಲಿ ಚುನಾವಣಾಧಿಕಾರಿಯಾಗಿ ಬಿ.ಜಿ. ಸಂದೀಪ್ ಅವರು ಹಾಜರಿದ್ದರು.ಸಭೆಯಲ್ಲಿ ಉಪಾಧ್ಯಕ್ಷರಾದ ಬಿ.ಎನ್. ಕಾಶಿ, ನಿರ್ದೇಶಕರುಗಳಾದ ಡಿ.ಎಲ್. ಮಹೇಶ್ ಚಂದ್ರ, ಎಸ್.ಎಸ್.ಬಿ. ಅನಿತಾ, ಕೆ.ಡಿ. ದಾದಪ್ಪ, ಎಸ್.ಎಸ್. ಕಾರ್ಯಪ್ಪ, ಟಿ.ಕೆ. ಉದಯಕುಮಾರ್, ಎನ್.ಸಿ. ಪಂಚಾಕ್ಷರಿ, ಆರ್.ಕೆ. ಚಂದ್ರ ಮುಂತಾದವರು ಹಾಜರಿದ್ದರು.

Continue Reading

Trending

error: Content is protected !!