National
ಮೈಕ್ರೋಸಾಫ್ಟ್ ಸೇವೆಗಳಲ್ಲಿ ಜಾಗತಿಕ ವ್ಯತ್ಯಯ: 74 ದೇಶಗಳ ಬಳಕೆದಾರರಿಗೆ ತೊಂದರೆ
ನವದೆಹಲಿ: ಜಗತ್ತಿನ ಪ್ರಮುಖ ತಂತ್ರಜ್ಞಾನ ಕಂಪನಿಯಾದ ಮೈಕ್ರೋಸಾಫ್ಟ್‌ನ ವಿವಿಧ ಆನ್‌ಲೈನ್ ಸೇವೆಗಳಲ್ಲಿ ಉಂಟಾಗಿರುವ ತಾಂತ್ರಿಕ ವೈಫಲ್ಯದಿಂದ ಭಾರತ ಸೇರಿದಂತೆ 74 ದೇಶಗಳ ಬಳಕೆದಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ನವೆಂಬರ್ 12ರ ಮಧ್ಯರಾತ್ರಿಯಿಂದ ಆರಂಭವಾದ ಈ ಸಮಸ್ಯೆಯಿಂದ ಮೈಕ್ರೋಸಾಫ್ಟ್ ಔಟ್‌ಲುಕ್, ಟೀಮ್ಸ್, ಮೈಕ್ರೋಸಾಫ್ಟ್ 365, ಶೇರ್‌ಪಾಯಿಂಟ್ ಹಾಗೂ ಕೋಪೈಲಟ್ ಸೇರಿದಂತೆ ಹಲವು ಸೇವೆಗಳು ವ್ಯತ್ಯಯಗೊಂಡಿವೆ. ಇ-ಮೇಲ್ ಕಳುಹಿಸುವುದು ಮತ್ತು ಸ್ವೀಕರಿಸುವುದು, ಆನ್‌ಲೈನ್ ಸಭೆಗಳಲ್ಲಿ ಭಾಗವಹಿಸುವುದು ಸೇರಿದಂತೆ ಹಲವು ಡಿಜಿಟಲ್ ಚಟುವಟಿಕೆಗಳಿಗೆ ಅಡ್ಡಿಯಾಗಿದೆ.

ಇದು ಸೈಬರ್ ದಾಳಿಯ ಪರಿಣಾಮವಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ. ಸರ್ವರ್‌ಗಳ ಮೇಲಿನ ಅತಿಯಾದ ಒತ್ತಡ ಹಾಗೂ ಸಂರಚನಾ ದೋಷದಿಂದ ತಾಂತ್ರಿಕ ಸಮಸ್ಯೆ ಉಂಟಾಗಿದೆ. ಪರಿಣಾಮವಾಗಿ ಕೆಲವು ಸರ್ವರ್‌ಗಳು ಸ್ಥಗಿತಗೊಂಡಿವೆ ಎಂದು ತಿಳಿಸಿದೆ. ಸಮಸ್ಯೆ ಸಂಪೂರ್ಣವಾಗಿ ಬಗೆಹರಿಸಲು ಇನ್ನೂ 48 ಗಂಟೆಗಳ ಕಾಲಾವಕಾಶ ಬೇಕಾಗಬಹುದು ಎಂದು ಕಂಪನಿ ಹೇಳಿದ್ದು, ಬಳಕೆದಾರರಿಗೆ ಉಂಟಾದ ಅನಾನುಕೂಲಕ್ಕೆ ವಿಷಾದ ವ್ಯಕ್ತಪಡಿಸಿದೆ.
ಜಾಗತಿಕ ಮಟ್ಟದಲ್ಲಿ ಲಕ್ಷಾಂತರ ಬಳಕೆದಾರರು ಡೌನ್‌ಡಿಟೆಕ್ಟರ್ ಸೇರಿದಂತೆ ವಿವಿಧ ವೇದಿಕೆಗಳಲ್ಲಿ ಸೇವೆಗಳ ವ್ಯತ್ಯಯದ ಕುರಿತು ದೂರು ದಾಖಲಿಸಿದ್ದಾರೆ. ಹಲವರಿಗೆ ಇ-ಮೇಲ್ ತೆರೆಯಲು ಹಾಗೂ ಕಳುಹಿಸಲು ಸಾಧ್ಯವಾಗದೆ ಕೆಲಸ ಕಾರ್ಯಗಳಿಗೆ ಅಡಚಣೆಯಾಗಿದೆ.
ಈ ತಾಂತ್ರಿಕ ವೈಫಲ್ಯದ ಪರಿಣಾಮ ವಿಮಾನಯಾನ ಸೇವೆಗಳ ಮೇಲೂ ಬೀರಿದೆ. ದೆಹಲಿಯಿಂದ ಸ್ಪೈಸ್‌ಜೆಟ್‌ನ ಮೂರು ವಿಮಾನಗಳನ್ನು ರದ್ದುಗೊಳಿಸಲಾಗಿದೆ. ದೆಹಲಿ ವಿಮಾನ ನಿಲ್ದಾಣವು ಪ್ರಯಾಣಿಕರಿಗೆ ವಿಮಾನ ನಿಲ್ದಾಣಕ್ಕೆ ತೆರಳುವ ಮುನ್ನ ತಮ್ಮ ವಿಮಾನದ ಸ್ಥಿತಿಗತಿಯನ್ನು ಪರಿಶೀಲಿಸುವಂತೆ ಸೂಚಿಸಿದೆ. ಇಂಡಿಗೋ ಮತ್ತು ಆಕಾಶ ಏರ್ ಸಂಸ್ಥೆಗಳೂ ಪ್ರಯಾಣಿಕರಿಗೆ ಮುನ್ನೆಚ್ಚರಿಕೆ ನೀಡಿವೆ.
ಮೈಕ್ರೋಸಾಫ್ಟ್‌ನ ಪ್ರಮುಖ ಸೇವೆಗಳೇ ಏಕಕಾಲದಲ್ಲಿ ವ್ಯತ್ಯಯಗೊಂಡಿರುವುದು ಜಾಗತಿಕ ಡಿಜಿಟಲ್ ವ್ಯವಸ್ಥೆಯ ಅವಲಂಬನೆ ಹಾಗೂ ಅದರ ಮೇಲಿನ ಪರಿಣಾಮಗಳ ಬಗ್ಗೆ ಮತ್ತೆ ಗಮನ ಸೆಳೆದಿದೆ.
National
ಮೋದಿಗೆ ರಾಹುಲ್ ಗಾಂಧಿ ಬಹಿರಂಗ ಚರ್ಚೆಯ ಸವಾಲು
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನಡುವಿನ ರಾಜಕೀಯ ವಾಕ್ಸಮರ ಮತ್ತಷ್ಟು ತೀವ್ರಗೊಂಡಿದೆ. ಮುಕ್ತ ವೇದಿಕೆಯಲ್ಲಿ ನೇರ ಚರ್ಚೆಗೆ ಬರುವಂತೆ ರಾಹುಲ್ ಗಾಂಧಿ ಅವರು ಪ್ರಧಾನಿಯವರಿಗೆ ಮತ್ತೊಮ್ಮೆ ಬಹಿರಂಗ ಸವಾಲು ಹಾಕಿದ್ದಾರೆ.
ಕಳೆದ 12 ದಿನಗಳಲ್ಲಿ ಏಳನೇ ಬಾರಿ ಪ್ರಧಾನಿ ಮೋದಿಗೆ ಸವಾಲು ಹಾಕಿರುವ ರಾಹುಲ್ ಗಾಂಧಿ, ತಮ್ಮೊಂದಿಗೆ ನೇರ ಚರ್ಚೆ ನಡೆಸಿದ ಬಳಿಕ ಮೋದಿಯವರ ಪ್ರಧಾನಿ ಸ್ಥಾನ ಉಳಿಯುವುದಿಲ್ಲ ಹಾಗೂ ಅವರ ರಾಜಕೀಯ ಜೀವನವೇ ಅಂತ್ಯಗೊಳ್ಳಲಿದೆ ಎಂದು ಹೇಳಿದ್ದಾರೆ.
ಸಂಸದೀಯ ಚರ್ಚೆಯೇ ಸೂಕ್ತ ವೇದಿಕೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಆದರೆ, ಸಂಸತ್ತಿನಲ್ಲಿ ರೈತರ ಮಸೂದೆ, ಮತಗಳ್ಳತನ, ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್), ಚೀನಾ ವಿಚಾರ ಹಾಗೂ ಎಪ್ಸ್ಟೀನ್ ಪ್ರಕರಣ ಸೇರಿದಂತೆ ಹಲವು ವಿಷಯಗಳ ಕುರಿತು ಮಾತನಾಡಲು ತಮಗೆ ಅವಕಾಶ ನೀಡುತ್ತಿಲ್ಲ. ತಮ್ಮ ಮೈಕ್ ಸ್ಥಗಿತಗೊಳಿಸಲಾಗುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಹೀಗಾಗಿ ಮುಕ್ತ ವೇದಿಕೆಯಲ್ಲಿ ಮುಖಾಮುಖಿ ಚರ್ಚೆ ನಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ಚರ್ಚೆಗೆ ಬರುವಾಗ ಪ್ರಧಾನಿ ಮೋದಿ ಬೇಕಿದ್ದರೆ ಟೆಲಿಪ್ರಾಂಪ್ಟರ್‌ನ್ನೂ ತರಬಹುದು. ಚರ್ಚೆಯ ತೀರ್ಪುಗಾರರನ್ನು ಅವರೇ ಆಯ್ಕೆ ಮಾಡಿಕೊಳ್ಳಲಿ. ಗೌತಮ್ ಅದಾನಿ ಅಥವಾ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನೇ ತೀರ್ಪುಗಾರರನ್ನಾಗಿ ನೇಮಿಸಿಕೊಳ್ಳಬಹುದು ಎಂದು ರಾಹುಲ್ ವ್ಯಂಗ್ಯವಾಡಿದ್ದಾರೆ. ನಿಜವಾದ ದೇಶದ್ರೋಹಿ ಯಾರು ಎಂಬುದು ಚರ್ಚೆಯಿಂದ ದೇಶದ ಜನರಿಗೆ ತಿಳಿಯಲಿದೆ ಎಂದು ಸವಾಲು ಹಾಕಿದ್ದಾರೆ.
ರಾಜಕೀಯ ವಿಷಯಗಳ ಜತೆಗೆ ದೆಹಲಿಯ ವಾಯುಮಾಲಿನ್ಯದ ಬಗ್ಗೆಯೂ ಚರ್ಚೆಗೆ ಸಿದ್ಧವಿರುವುದಾಗಿ ತಿಳಿಸಿರುವ ಅವರು, ಪ್ರಧಾನಿ ತಮ್ಮ ‘ಏರ್ ಚೇಂಬರ್’ನಿಂದ ಹೊರಬಂದು ಸಾಮಾನ್ಯ ನಾಗರಿಕರಂತೆ ಉಸಿರಾಡಬೇಕಾಗುತ್ತದೆ ಎಂದು ಟೀಕಿಸಿದ್ದಾರೆ.
ಸಂಸತ್ತೇ ಸೂಕ್ತ ವೇದಿಕೆ: ನಿರ್ಮಲಾ ತಿರುಗೇಟು
ರಾಹುಲ್ ಗಾಂಧಿ ಅವರ ಬಹಿರಂಗ ಚರ್ಚೆಯ ಸವಾಲಿಗೆ ಬಿಜೆಪಿ ನಾಯಕರು ತಿರುಗೇಟು ನೀಡಿದ್ದಾರೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿಕ್ರಿಯಿಸಿ, ರಾಹುಲ್ ಗಾಂಧಿ ಅವರು ಸಂಸತ್ತಿನಲ್ಲಿ ನಡೆಯುವ ಚರ್ಚೆಗಳಿಗೆ ಹಾಜರಾಗದೆ ಪದೇಪದೇ ದೂರ ಉಳಿಯುತ್ತಾರೆ ಎಂದು ಟೀಕಿಸಿದ್ದಾರೆ.
ಸಂಸತ್ತಿನಲ್ಲೇ ಚರ್ಚೆಗೆ ಸೂಕ್ತ ವೇದಿಕೆ ಇರುವಾಗ ಪ್ರಧಾನಿ ಪ್ರತ್ಯೇಕ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ರಾಹುಲ್ ಗಾಂಧಿ ಏಕೆ ಒತ್ತಾಯಿಸುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿರುವ ರಾಹುಲ್ ಗಾಂಧಿ ಅವರು ತಮ್ಮ ಸಾಂವಿಧಾನಿಕ ಜವಾಬ್ದಾರಿಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಮೂಲಕ ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ ನಡುವಿನ ಬಹಿರಂಗ ಚರ್ಚೆಯ ಸವಾಲು ರಾಜಕೀಯ ವಲಯದಲ್ಲಿ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.
National
ಅಸ್ಸಾಂನಲ್ಲಿ ಘೋರ ಅಪಘಾತ-ಕರ್ನಾಟಕ ನೋಂದಣಿಯ ಕಂಟೈನರ್‌ಗೆ ಟೆಂಪೋ ಡಿಕ್ಕಿ: 23 ಸಾ*ವು
ದಿಸ್ಪುರ್: ಅಸ್ಸಾಂನ ಕಾಜಿರಂಗದಲ್ಲಿ ಕರ್ನಾಟಕ ನೋಂದಣಿಯ ಕಂಟೈನರ್‌ಗೆ ಟೆಂಪೋ ಟ್ರಾವೆಲರ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ 23 ಮಂದಿ ಮೃತಪಟ್ಟಿರುವ ದುರಂತ ಸಂಭವಿಸಿದೆ. ಅಪಘಾತದಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.
ಬೊಕಾಖಾಟ್‌ನಿಂದ ನಗಾಂವ್ ಕಡೆಗೆ ತೆರಳುತ್ತಿದ್ದ ಟೆಂಪೋ ಟ್ರಾವೆಲರ್ ಹಾಗೂ ಕಂಟೈನರ್ ನಡುವೆ ಈ ಅಪಘಾತ ಸಂಭವಿಸಿದೆ. ಡಿಕ್ಕಿಯ ತೀವ್ರತೆಗೆ ಟೆಂಪೋ ಟ್ರಾವೆಲರ್ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಅದರೊಳಗೆ ಸಿಲುಕಿದ್ದವರನ್ನು ಹೊರತೆಗೆಯಲು ರಕ್ಷಣಾ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ.

ಘಟನೆ ನಡೆದ ತಕ್ಷಣ ಸ್ಥಳೀಯ ನಿವಾಸಿಗಳು ಹಾಗೂ ಪೊಲೀಸರು ರಕ್ಷಣಾ ಕಾರ್ಯಕ್ಕೆ ಧಾವಿಸಿದ್ದಾರೆ. ಗಾಯಾಳುಗಳನ್ನು ಪ್ರಾಥಮಿಕ ಚಿಕಿತ್ಸೆಗಾಗಿ ಕೊಹೊರಾ ಮಾದರಿ ಆಸ್ಪತ್ರೆಗೆ ಕರೆದೊಯ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಜೋರ್ಹತ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ.
ಈ ಕುರಿತು ಮಾಹಿತಿ ನೀಡಿದ ಗೋಲಾಘಾಟ್ ಜಿಲ್ಲೆಯ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸ್ವಪ್ನನೀಲ್ ದೇಕಾ, ಅಪಘಾತದಲ್ಲಿ 23 ಮಂದಿ ಮೃತಪಟ್ಟಿರುವ ಬಗ್ಗೆ ಪ್ರಾಥಮಿಕ ವರದಿಗಳು ಬಂದಿವೆ. ನಜ್ಜುಗುಜ್ಜಾದ ವಾಹನದಿಂದ ಮೃತದೇಹಗಳನ್ನು ಹೊರತೆಗೆಯುವ ಕಾರ್ಯ ನಡೆಯುತ್ತಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.
ಅಸ್ಸಾಂ ಪಂಚಾಯತ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಅತುಲ್ ಬೋರಾ ಅವರು ಅಪಘಾತ ಸ್ಥಳಕ್ಕೆ ಭೇಟಿ ನೀಡಿ ರಕ್ಷಣಾ ಹಾಗೂ ಪರಿಹಾರ ಕಾರ್ಯಗಳ ಮೇಲ್ವಿಚಾರಣೆ ನಡೆಸಿದ್ದಾರೆ. ಟೆಂಪೋ ಟ್ರಾವೆಲರ್ ಅತಿವೇಗವಾಗಿ ಚಲಿಸುತ್ತಿತ್ತು ಹಾಗೂ ಉದ್ಯಾನವನದ ಸಮೀಪ ವಿಧಿಸಲಾಗಿದ್ದ ಸಂಚಾರ ನಿರ್ಬಂಧಗಳನ್ನು ಉಲ್ಲಂಘಿಸಿತ್ತು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಘಟನೆಯಿಂದ ಕಾಜಿರಂಗ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಅಪಘಾತದ ಸಂಪೂರ್ಣ ವಿವರ ಹಾಗೂ ಮೃತರ ಗುರುತು ಪತ್ತೆ ಕಾರ್ಯ ಮುಂದುವರಿದಿದೆ.
National
ಮೋದಿ ನನ್ನ ಫೋನ್ ಕದ್ದಾಲಿಕೆ ಮಾಡುತ್ತಿದ್ದಾರೆ: ರಾಹುಲ್ ಗಾಂಧಿ ಆರೋಪ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಫೋನ್ ಕದ್ದಾಲಿಕೆ ಮಾಡಿಸುತ್ತಿದ್ದಾರೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ. ತಾವು ಮಾಡಿರುವ ಎಲ್ಲ ಆರೋಪಗಳಿಗೆ ಪೂರಕವಾದ ಸಾಕ್ಷ್ಯಗಳು ತಮ್ಮ ಫೋನ್‌ನಲ್ಲೇ ಇವೆ ಎಂದು ಹೇಳಿರುವ ಅವರು, ಪ್ರಧಾನಿಯವರಿಗೆ ಬಹಿರಂಗ ಚರ್ಚೆಗೆ ಮತ್ತೊಮ್ಮೆ ಸವಾಲು ಹಾಕಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ರಾಹುಲ್ ಗಾಂಧಿ, ನಾನು ಮಾಡಿರುವ ಆರೋಪಗಳಿಗೆ ಸಂಬಂಧಿಸಿದ ಸಾಕ್ಷ್ಯಗಳು ಇದೇ ಫೋನ್‌ನಲ್ಲಿವೆ. ಪ್ರಧಾನಿಯವರು ನನ್ನ ಫೋನ್ ಕದ್ದಾಲಿಕೆ ಮಾಡಿಸುತ್ತಿರುವುದರಿಂದ ಅವರಿಗೆ ಈ ವಿಚಾರ ತಿಳಿದಿದೆ. ನನ್ನೊಂದಿಗೆ ನೇರ ಚರ್ಚೆಗೆ ಬಂದರೆ ಯಾರು ವಿದೇಶಿ ಶಕ್ತಿಗಳ ಕೈಗೊಂಬೆಯಾಗಿದ್ದಾರೆ, ಯಾರು ನಿಜವಾದ ದೇಶವಿರೋಧಿ ಎಂಬ ಸತ್ಯ ಜನರಿಗೆ ತಿಳಿಯಲಿದೆ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಅವರು ದೀರ್ಘ ಭಾಷಣ ಮಾಡುವ ಬದಲು ತಮ್ಮೊಂದಿಗೆ ಮುಖಾಮುಖಿಯಾಗಿ ಕುಳಿತು ವಿಷಯಗಳ ಕುರಿತು ಚರ್ಚಿಸಲಿ. ಪರಸ್ಪರ ಆರೋಪಗಳಿಗೆ ನೇರವಾಗಿ ಉತ್ತರ ನೀಡುವ ಇಂತಹ ಚರ್ಚೆ ನಡೆದರೆ ಮೋದಿ ಪ್ರಧಾನಿಯಾಗಿ ಮುಂದುವರಿಯಲು ಸಾಧ್ಯವಾಗುವುದಿಲ್ಲ ಎಂಬ ವಿಶ್ವಾಸವಿದೆ ಎಂದು ಸವಾಲು ಹಾಕಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ನಡೆದ ‘ಆಸ್ಕ್ ಮಿ’ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿಯೂ ಸಂಸತ್ತಿನಲ್ಲಿ ತಮ್ಮ ವಿಚಾರಗಳನ್ನು ಮಂಡಿಸಲು ಅವಕಾಶ ನೀಡುತ್ತಿಲ್ಲ ಎಂದು ರಾಹುಲ್ ಆರೋಪಿಸಿದ್ದಾರೆ. ತಮ್ಮ ಮೈಕ್ರೊಫೋನ್ ಸ್ಥಗಿತಗೊಳಿಸಲಾಗುತ್ತಿದೆ. ಕೃಷಿ ಕಾಯ್ದೆಗಳು, ಮತಗಳ್ಳತನದ ಆರೋಪ, ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್), ಚೀನಾ ವಿಚಾರ, ಜನರಲ್ ನರಾವಣೆ ಅವರ ಪುಸ್ತಕ ಹಾಗೂ ಎಪ್ಸ್ಟೀನ್ ಪ್ರಕರಣ ಸೇರಿದಂತೆ ಹಲವು ವಿಷಯಗಳ ಬಗ್ಗೆ ಸಂಸತ್ತಿನಲ್ಲಿ ಮಾತನಾಡಲು ಅವಕಾಶ ನಿರಾಕರಿಸಲಾಗಿದೆ ಎಂದು ದೂರಿದ್ದಾರೆ.
ಪ್ರಧಾನಿ ಮೋದಿ ಅವರೊಂದಿಗೆ ನಡೆಯುವ ಬಹಿರಂಗ ಚರ್ಚೆಗೆ ತೀರ್ಪುಗಾರರನ್ನಾಗಿ ಉದ್ಯಮಿ ಗೌತಮ್ ಅದಾನಿ ಅಥವಾ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ನೇಮಿಸಿದರೂ ತಮ್ಮ ಅಭ್ಯಂತರವಿಲ್ಲ ಎಂದು ತಿಳಿಸಿದ್ದಾರೆ.
ಈ ಹಿಂದೆ ಕೂಡ ರಾಹುಲ್ ಗಾಂಧಿ ಪ್ರಧಾನಿ ಮೋದಿಗೆ ಬಹಿರಂಗ ಚರ್ಚೆಯ ಸವಾಲು ಹಾಕಿದ್ದರು. ಆದರೆ, ಸಂಸತ್ತೇ ಚರ್ಚೆಗೆ ಸೂಕ್ತ ವೇದಿಕೆ ಎಂದು ಹೇಳಿದ್ದ ಬಿಜೆಪಿ ನಾಯಕರು ಈ ಸವಾಲನ್ನು ತಿರಸ್ಕರಿಸಿದ್ದರು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಸಂಸತ್ತಿನಲ್ಲೇ ಚರ್ಚೆ ನಡೆಸುವಂತೆ ರಾಹುಲ್ ಗಾಂಧಿಗೆ ತಿರುಗೇಟು ನೀಡಿದ್ದರು.
-
Kodagu21 hours agoಅಂಗಾಂಗ ದಾನ ಮಾಡಿದ ಯುವಕ ಯೋಗೇಶ್ ಅವರ ಮನೆಗೆ ಶಾಸಕ ಡಾ. ಮಂತರ್ ಗೌಡ ಭೇಟಿ – ಪೋಷಕರಿಗೆ ಸಾಂತ್ವನ.
-
Chamarajanagar24 hours agoಬೈಕ್ ಕಳ್ಳನ ಬಂಧನ: 12 ಲಕ್ಷ ಮೌಲ್ಯದ 19 ಬೈಕ್ ವಶ
-
Mandya12 hours agoಫೋನ್ ನೀಡಿದ್ದ ಅಮಾಯಕನಿಗೆ 2.5 ವರ್ಷ ಜೈ*ಲುವಾಸ : ಪ್ರತ್ಯಕ್ಷಗೊಂಡ ಕೊಲೆಯಾಗಿದ್ದಾಳೆಂದು ಭಾವಿಸಿದ್ದ ಮಹಿಳೆ..!
-
State4 hours agoಮೆಟ್ರೋ ಅನುದಾನ ತಾರತಮ್ಯ ಆರೋಪಕ್ಕೆ ಪ್ರಧಾನಿ ತಿರುಗೇಟು
-
State5 hours agoಅರಿಶಿನಕ್ಕೆ ವಿಶ್ವಮಟ್ಟದಲ್ಲಿ ಹೆಚ್ಚಿದ ಬೇಡಿಕೆ: 28 ರಾಷ್ಟ್ರಗಳೊಂದಿಗೆ ಆಯುರ್ವೇದ ಒಪ್ಪಂದ
-
Special23 hours agoಅಂಡರ್-19 ಏಷ್ಯಾಕಪ್ ಫೈನಲ್ಗೆ ಭಾರತ ಲಗ್ಗೆ: ಪಾಕ್ ವಿರುದ್ಧ ಮಹಾ ಕದನ!
-
National3 hours agoಮೋದಿ ನನ್ನ ಫೋನ್ ಕದ್ದಾಲಿಕೆ ಮಾಡುತ್ತಿದ್ದಾರೆ: ರಾಹುಲ್ ಗಾಂಧಿ ಆರೋಪ
-
State8 hours agoಬೆಂಗಳೂರಿಗರ ಪ್ರಯಾಣಕ್ಕೆ ಇನ್ಮುಂದೆ ಡಿಜಿಟಲ್ ಸ್ಪರ್ಶ: BMTC 2.0 ಆ್ಯಪ್ ಪರಿಚಯ!!
