Connect with us

Hassan

ಆಶಾ ಕಾರ್ಯಕರ್ತೆಯರಿಗೆ ₹15 ಸಾವಿರ ಮಾಸಿಕ ಗೌರವಧನಕ್ಕೆ ಆಗ್ರಹ: ನ.17ರಿಂದ ಬೆಂಗಳೂರಿನಲ್ಲಿ ಅನಿರ್ದಿಷ್ಟ ಹೋರಾಟ

Published

on

ಹಾಸನ: ಆಶಾ ಕಾರ್ಯಕರ್ತೆಯರಿಗೆ ಮಾಸಿಕ ₹15 ಸಾವಿರ ನಿಗದಿತ ಗೌರವಧನ ನೀಡುವುದು ಸೇರಿದಂತೆ ವಿವಿಧ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ವತಿಯಿಂದ ನ.17ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ರಾಜ್ಯಮಟ್ಟದ ಅನಿರ್ದಿಷ್ಟ ಅಹೋರಾತ್ರಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಹನುಮೇಶ್ ಅವರು ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 17-18 ವರ್ಷಗಳಿಂದ ಗ್ರಾಮೀಣ ಪ್ರದೇಶಗಳು ಹಾಗೂ ನಗರಗಳ ಕೊಳಚೆ ಪ್ರದೇಶಗಳಲ್ಲಿ ಮನೆಮನೆಗೆ ತೆರಳಿ ಜನರಿಗೆ ಆರೋಗ್ಯ ಸೇವೆ ತಲುಪಿಸುವ ಮಹತ್ತರ ಜವಾಬ್ದಾರಿಯನ್ನು ಆಶಾ ಕಾರ್ಯಕರ್ತೆಯರು ನಿರ್ವಹಿಸುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಮುಂಚೂಣಿ ಕಾರ್ಯಕರ್ತೆಯರಾಗಿ ಹಗಲಿರುಳು ಶ್ರಮಿಸಿದ್ದು, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಆದರೆ ಅವರ ಸೇವೆಗೆ ತಕ್ಕ ಗೌರವಧನ ದೊರೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.


ಆಶಾ ಕಾರ್ಯಕರ್ತೆಯರಿಗೆ ಕೆಲಸದ ಸಮಯದ ಮಿತಿಯಿಲ್ಲದೆ, ರಜೆ ಹಾಗೂ ಹಬ್ಬದ ದಿನಗಳಲ್ಲಿಯೂ ಕರ್ತವ್ಯ ನಿರ್ವಹಿಸಬೇಕಾದ ಪರಿಸ್ಥಿತಿಯಿದೆ. ಆದರೆ ಪ್ರೋತ್ಸಾಹಧನ ಮಾತ್ರ ಮೂರು-ನಾಲ್ಕು ತಿಂಗಳಿಗೊಮ್ಮೆ ಅನಿಯಮಿತವಾಗಿ ಪಾವತಿಯಾಗುತ್ತಿದೆ. ಹಲವು ಕೆಲಸಗಳ ಪ್ರೋತ್ಸಾಹಧನವೂ ಬಾಕಿ ಉಳಿದಿದ್ದು, ಇದರಿಂದ ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ. ಕಳೆದ ಒಂಬತ್ತು ವರ್ಷಗಳಲ್ಲಿ ರಾಜ್ಯ ಸರ್ಕಾರ ಗೌರವಧನವನ್ನು ಕೇವಲ ₹1,500 ಮಾತ್ರ ಹೆಚ್ಚಿಸಿದೆ. ಕೆಲಸದ ಹೊರೆ ಹೆಚ್ಚುತ್ತಿದ್ದರೂ ಗೌರವಧನ ಹೆಚ್ಚಳಕ್ಕೆ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ ಎಂದು ಆರೋಪಿಸಿದರು.
ಕೇರಳ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಹಾಗೂ ಹರಿಯಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ ಆಶಾ ಕಾರ್ಯಕರ್ತೆಯರಿಗೆ ಸುಮಾರು ₹12 ಸಾವಿರ ನಿಗದಿತ ಗೌರವಧನ ನೀಡಲಾಗುತ್ತಿದೆ. ಕೇಂದ್ರದ ಪ್ರೋತ್ಸಾಹಧನ ಸೇರಿ ತಿಂಗಳಿಗೆ ₹16 ಸಾವಿರದಿಂದ ₹20 ಸಾವಿರದವರೆಗೆ ಪಡೆಯುತ್ತಿರುವ ಉದಾಹರಣೆಗಳಿವೆ. ಕರ್ನಾಟಕದಲ್ಲಿಯೂ ಕನಿಷ್ಠ ₹15 ಸಾವಿರ ಮಾಸಿಕ ಗೌರವಧನ ನಿಗದಿಪಡಿಸಬೇಕು ಎಂಬುದು ಸಂಘದ ಪ್ರಮುಖ ಬೇಡಿಕೆಯಾಗಿದೆ ಎಂದರು.
ಹಲವು ಬಾರಿ ಪ್ರತಿಭಟನೆ, ಮನವಿ ಹಾಗೂ ಸರ್ಕಾರದ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿದ್ದರೂ ಬೇಡಿಕೆಗಳು ಈಡೇರಿಲ್ಲ. ಹಿಂದಿನ ಮುಖ್ಯಮಂತ್ರಿ ₹10 ಸಾವಿರ ಗೌರವಧನ ನಿಗದಿಪಡಿಸುವುದಾಗಿ ಘೋಷಿಸಿದ್ದರೂ ಅದು ಇನ್ನೂ ಜಾರಿಯಾಗಿಲ್ಲ. ಗ್ಯಾರಂಟಿ ಯೋಜನೆಯಡಿ ಮಹಿಳೆಯರಿಗೆ ನೀಡುವ ಹಣವನ್ನು ಆಶಾ ಕಾರ್ಯಕರ್ತೆಯರ ಗೌರವಧನದ ಭಾಗವೆಂದು ಪರಿಗಣಿಸುವುದು ಸರಿಯಲ್ಲ. ಗ್ಯಾರಂಟಿ ಯೋಜನೆ ಎಲ್ಲ ಅರ್ಹ ಮಹಿಳೆಯರಿಗೆ ನೀಡುವ ಸಾಮಾನ್ಯ ಸೌಲಭ್ಯವಾಗಿದ್ದು, ಆಶಾ ಕಾರ್ಯಕರ್ತೆಯರ ದುಡಿಮೆಗೆ ಪ್ರತ್ಯೇಕ ಗೌರವಧನ ನೀಡುವುದು ಸರ್ಕಾರದ ಕರ್ತವ್ಯ ಎಂದು ಒತ್ತಾಯಿಸಿದರು.

ಪ್ರಮುಖ ಬೇಡಿಕೆಗಳು:
ಆಶಾ ಕಾರ್ಯಕರ್ತೆಯರಿಗೆ ಮಾಸಿಕ ₹15 ಸಾವಿರ ನಿಗದಿತ ಗೌರವಧನ ನೀಡಬೇಕು. ಸಮಸ್ತ ಆ್ಯಪ್ ಮೂಲಕ ಮೊಬೈಲ್ ಕೆಲಸಗಳನ್ನು ಕಡ್ಡಾಯಗೊಳಿಸುವುದನ್ನು ಕೈಬಿಡಬೇಕು ಅಥವಾ ಮೊಬೈಲ್, ಪ್ರತ್ಯೇಕ ಪ್ರೋತ್ಸಾಹಧನ ಒದಗಿಸಬೇಕು. ನಿವೃತ್ತ ಆಶಾ ಕಾರ್ಯಕರ್ತೆಯರಿಗೆ ಬಾಕಿ ಇರುವ ಇಡಿಗಂಟು ಬಿಡುಗಡೆ ಮಾಡಬೇಕು. ಕೇಂದ್ರದ ಪ್ರೋತ್ಸಾಹಧನದ ಬಾಕಿ ಮೊತ್ತವನ್ನು ತಕ್ಷಣ ಪಾವತಿಸಬೇಕು. 2025ರ ಫೆಬ್ರವರಿ 25ರಂದು ಹಿಂಪಡೆದ ಸುಗಮಕಾರರ ಸೇವೆಯನ್ನು ಸೂಕ್ತ ವೇತನದೊಂದಿಗೆ ಮುಂದುವರಿಸಬೇಕು. 2024-25ನೇ ಸಾಲಿನಲ್ಲಿ ಅನುಮೋದನೆಯಾದ ಮಾಸಿಕ ₹1,500 ಹೆಚ್ಚಳದ ಒಂದು ವರ್ಷದ ಬಾಕಿ ಹಣ ಬಿಡುಗಡೆ ಮಾಡಬೇಕು. ಸೇವಾ ನಿವೃತ್ತಿ ಪಡೆಯುವ ಆಶಾ ಕಾರ್ಯಕರ್ತೆಯರಿಗೆ ಪಶ್ಚಿಮ ಬಂಗಾಳ ಮಾದರಿಯಲ್ಲಿ ₹5 ಲಕ್ಷ ಇಡಿಗಂಟು ನೀಡಬೇಕು ಎಂದು ಆಗ್ರಹಿಸಿದರು.
ನ.17ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯಲಿರುವ ಅನಿರ್ದಿಷ್ಟ ಹೋರಾಟಕ್ಕೆ ಸಾರ್ವಜನಿಕರು ಬೆಂಬಲ ನೀಡಬೇಕು. ಜನರ ಮನೆಬಾಗಿಲಿಗೆ ಆರೋಗ್ಯ ಸೇವೆ ತಲುಪಿಸುವ ಆಶಾ ಕಾರ್ಯಕರ್ತೆಯರ ನ್ಯಾಯಯುತ ಹೋರಾಟಕ್ಕೆ ಧ್ವನಿಗೂಡಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಹನುಮೇಶ್, ರೆಹಮತ್, ಕುಮಾರಿ, ಮಮತ, ಶಿವಮ್ಮ, ತಾಹಿರಾ, ಪದ್ಮ ಸೇರಿದಂತೆ ಇತರರು ಉಪಸ್ಥಿತರಿದ್ದರು.

Continue Reading

Hassan

ಶ್ರವಣಬೆಳಗೊಳಕ್ಕೆ ವಂದೇ ಭಾರತ್ ರೈಲು ಸಂಭ್ರಮದ ಸ್ವಾಗತ – ಯಾತ್ರಾರ್ಥಿಗಳು, ಪ್ರವಾಸಿಗರಿಗೆ ಹೆಚ್ಚಿನ ಅನುಕೂಲ: ಚಾರುಶ್ರೀ

Published

on

ಶ್ರವಣಬೆಳಗೊಳ: ಬೆಂಗಳೂರು–ಶ್ರವಣಬೆಳಗೊಳ–ಮಂಗಳೂರು ಮಾರ್ಗವಾಗಿ ಗೋವಾದ ಮಡಗಾಂವ್‌ಗೆ ಸಂಪರ್ಕ ಕಲ್ಪಿಸುವ ನೂತನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಗೆ ಶುಕ್ರವಾರ ಶ್ರವಣಬೆಳಗೊಳ ರೈಲು ನಿಲ್ದಾಣದಲ್ಲಿ ಅದ್ದೂರಿ ಸ್ವಾಗತ ನೀಡಲಾಯಿತು.

ಕ್ಷೇತ್ರದ ಪೀಠಾಧಿಪತಿ ಸ್ವಸ್ತಿಶ್ರೀ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಭಟ್ಟಾರಕ ಸ್ವಾಮೀಜಿ ಹಾಗೂ ಶಾಸಕ ಸಿ.ಎನ್.ಬಾಲಕೃಷ್ಣ ಅವರು ರೈಲಿಗೆ ಪೂರ್ಣಕುಂಭ ಸ್ವಾಗತ ನೀಡಿ, ಪುಷ್ಪಾರ್ಚನೆ ಹಾಗೂ ಮಂಗಳಾರತಿ ನೆರವೇರಿಸಿ ಬರಮಾಡಿಕೊಂಡರು. ರೈಲಿಗೆ ಈಡುಗಾಯಿ ಒಡೆದು, ಪುಷ್ಪವೃಷ್ಟಿ ಮಾಡುವ ಮೂಲಕ ಸಂಭ್ರಮಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ನೂತನ ವಂದೇ ಭಾರತ್ ರೈಲು ಸೇವೆಯಿಂದ ಶ್ರೀಕ್ಷೇತ್ರ ಶ್ರವಣಬೆಳಗೊಳಕ್ಕೆ ದೇಶದ ವಿವಿಧ ಭಾಗಗಳಿಂದ ಆಗಮಿಸುವ ಭಕ್ತರು, ಯಾತ್ರಾರ್ಥಿಗಳು ಹಾಗೂ ಪ್ರವಾಸಿಗರಿಗೆ ಹೆಚ್ಚಿನ ಅನುಕೂಲವಾಗಲಿದೆ. ಉತ್ತರ ಭಾರತದ ಪ್ರವಾಸಿಗರು ದಕ್ಷಿಣ ಭಾರತದ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳನ್ನು ಸುಲಭವಾಗಿ ವೀಕ್ಷಿಸಲು ಇಂತಹ ಆಧುನಿಕ ರೈಲು ಸೇವೆಗಳು ಸಹಕಾರಿಯಾಗಲಿವೆ. ಇದರಿಂದ ಕ್ಷೇತ್ರದ ಪ್ರವಾಸೋದ್ಯಮ ಅಭಿವೃದ್ಧಿಗೂ ಮತ್ತಷ್ಟು ವೇಗ ದೊರೆಯಲಿದೆ ಎಂದರು.

ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ಬೆಂಗಳೂರು–ಹಾಸನ ರೈಲು ಮಾರ್ಗ ನಿರ್ಮಾಣಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ನೀಡಿದ ಕೊಡುಗೆ ಸ್ಮರಣೀಯ. ಅವರ ದೂರದೃಷ್ಟಿ ಹಾಗೂ ರೈಲ್ವೆ ಸಂಪರ್ಕ ಅಭಿವೃದ್ಧಿಗೆ ತೋರಿದ ಕಾಳಜಿಯಿಂದಾಗಿ ಇಂದು ಈ ಭಾಗದಲ್ಲಿ ಆಧುನಿಕ ರೈಲುಗಳ ಸಂಚಾರಕ್ಕೆ ಉತ್ತಮ ಅವಕಾಶ ದೊರೆತಿದೆ ಎಂದು ಸ್ಮರಿಸಿದರು.

ನೂತನ ರೈಲು ಸೇವೆಯು ವಿದ್ಯಾರ್ಥಿಗಳು, ಉದ್ಯಮಿಗಳು, ವ್ಯಾಪಾರಸ್ಥರು, ಯಾತ್ರಾರ್ಥಿಗಳು ಹಾಗೂ ಪ್ರವಾಸಿಗರಿಗೆ ಅನುಕೂಲ ಕಲ್ಪಿಸುವುದರ ಜತೆಗೆ ಈ ಭಾಗದ ವಾಣಿಜ್ಯ ಮತ್ತು ಪ್ರವಾಸೋದ್ಯಮ ಚಟುವಟಿಕೆಗಳಿಗೆ ಉತ್ತೇಜನ ನೀಡಲಿದೆ. ವಾರದಲ್ಲಿ ಆರು ದಿನ ಸಂಚರಿಸಲಿರುವ ಈ ರೈಲು ಸೇವೆಯಿಂದ ಸಾರ್ವಜನಿಕರಿಗೆ ವೇಗದ ಹಾಗೂ ಆರಾಮದಾಯಕ ಪ್ರಯಾಣದ ಅವಕಾಶ ದೊರೆಯಲಿದೆ. ರೈಲು ಸೇವೆಗೆ ಸಹಕಾರ ನೀಡಿದ ಪ್ರಧಾನಿ ನರೇಂದ್ರ ಮೋದಿ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರಾಜ್ಯ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ ಅವರನ್ನು ಅಭಿನಂದಿಸಿದರು.

ಕಾರ್ಯಕ್ರಮದ ಅಂಗವಾಗಿ ರೈಲ್ವೆ ನಿಲ್ದಾಣವನ್ನು ಪುಷ್ಪಗಳಿಂದ ಸುಂದರವಾಗಿ ಅಲಂಕರಿಸಲಾಗಿತ್ತು. ರೈಲು ಆಗಮಿಸುತ್ತಿದ್ದಂತೆ ನೆರೆದಿದ್ದ ಸಾರ್ವಜನಿಕರು ಜಯಘೋಷ ಮೊಳಗಿಸಿ ಸಂಭ್ರಮಿಸಿದರು. ರೈಲ್ವೆ ಇಲಾಖೆಯ ವತಿಯಿಂದ ಸ್ವಾಮೀಜಿ ಹಾಗೂ ಶಾಸಕರನ್ನು ಗೌರವಿಸಲಾಯಿತು. ಇದೇ ವೇಳೆ ವಿದ್ಯಾರ್ಥಿಗಳಿಗೆ ರೈಲ್ವೆ ಇಲಾಖೆಯ ಕುರಿತು ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ, ವಿಜೇತರಿಗೆ ಸ್ವಾಮೀಜಿ ಬಹುಮಾನ ವಿತರಿಸಿದರು.

ಕಾರ್ಯಕ್ರಮದಲ್ಲಿ ರೈಲ್ವೆ ವಿಭಾಗೀಯ ಮುಖ್ಯ ವ್ಯವಸ್ಥಾಪಕ ಸಂಚಿತ್ ಶ್ರೀವಾತ್ಸವ್, ಎಸಿಎಂ ಉಮೇಶ್ ನಾಯಕ್, ಇನ್ಸ್‌ಪೆಕ್ಟರ್ ವಿನೋದ್, ಕಸ್ಟಮರ್ ಸೀನಿಯರ್ ಆಫೀಸರ್ ಪುನೀತ್ ರಾವ್, ಸ್ಥಳೀಯ ಮುಖಂಡರಾದ ಅಬ್ದುಲ್ ಅಫೀಜ್, ಎಸ್.ಎಂ.ಲಕ್ಷ್ಮಣ್, ಎಸ್.ಬಿ.ಜಗದೀಶ್, ಲೋಕೇಶ್, ಶರತ್ ಕುಮಾರ್, ಗಣೇಶ್ ಗೌಡ, ಎಸ್.ಬಿ.ಯಶಸ್, ಪ್ರವೀಣ್, ಸಾಗರ್ ಗೌಡ ಸೇರಿದಂತೆ ಹಲವು ಜೆಡಿಎಸ್ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ವರದಿ : ದಯಾನಂದ ಶೆಟ್ಟಿಹಳ್ಳಿ

Continue Reading

Hassan

ಕುಂಭೇನಹಳ್ಳಿ ಗ್ರಾಮದಲ್ಲಿ 35 ವರ್ಷಗಳಿಂದ ಕನ್ನಡ ರಾಜ್ಯೋತ್ಸವ ಆಚರಣೆ

Published

on

ಶ್ರವಣಬೆಳಗೊಳ: ಕನ್ನಡ ನಾಡು ಉದಯವಾಗಿ 71 ವಸಂತಗಳನ್ನು ಪೂರೈಸಿರುವ ಅಂಗವಾಗಿ, ಕನ್ನಡ ಭಾಷೆ, ನಾಡು-ನುಡಿ ಮತ್ತು ಸಂಸ್ಕೃತಿಯ ಮೇಲಿನ ಅಭಿಮಾನವನ್ನು ಮುಂದಿನ ಪೀಳಿಗೆಗೆ ಉಳಿಸುವ ಉದ್ದೇಶದಿಂದ ಗ್ರಾಮಸ್ಥರೆಲ್ಲರೂ ಒಗ್ಗಟ್ಟಿನಿಂದ ಈ ಆಚರಣೆಯನ್ನು ಮುಂದುವರಿಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದು ಕುಂಭೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ರಾಘು ಕದಂಬ ಹೇಳಿದರು.

ಚನ್ನರಾಯಪಟ್ಟಣ ತಾಲ್ಲೂಕಿನ ಶ್ರವಣಬೆಳಗೊಳ ಹೋಬಳಿಯ ಕುಂಭೇನಹಳ್ಳಿ ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ಶ್ರೀ ಸಂಜೀವಿನಿ ಆಂಜನೇಯ ಸ್ವಾಮಿ ಓಕುಳಿ ಕಾರ್ಯಕ್ರಮದ ಅಂಗವಾಗಿ ಸಂಪ್ರದಾಯದಂತೆ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವವನ್ನು ಕಾರ್ಯಕ್ರಮದಲ್ಲಿ ಮಾತನಾಡಿದರು.


ಕಳೆದ 35 ವರ್ಷಗಳಿಂದ ನಿರಂತರವಾಗಿ ಗ್ರಾಮದ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಿಸಿಕೊಂಡು ಬರುತ್ತಿರುವುದು ವಿಶೇಷವಾಗಿದ್ದು, ತಾಲ್ಲೂಕಿನಲ್ಲಿ ಕಾಂತರಾಜಪುರ ಗ್ರಾಮವನ್ನು ಹೊರತುಪಡಿಸಿದರೆ, ಕುಂಭೇನಹಳ್ಳಿ ಗ್ರಾಮದಲ್ಲಿ ಕಳೆದ 35 ವರ್ಷಗಳಿಂದ ಗ್ರಾಮಸ್ಥರೆಲ್ಲ ಸೇರಿ ಕನ್ನಡ ರಾಜ್ಯೋತ್ಸವ ಆಚರಿಸಿಕೊಂಡು ಬರುತ್ತಿರುವುದು ಗ್ರಾಮದ ಕನ್ನಡಾಭಿಮಾನಕ್ಕೆ ಸಾಕ್ಷಿಯಾಗಿದೆ ಎಂದರು.

ಗ್ರಾಮದ ನಿವೃತ್ತ ಶಿಕ್ಷಕ ದೇವರಾಜ್ ಹಾಗೂ ಇತ್ತೀಚೆಗೆ ಸೇವೆಯಿಂದ ನಿವೃತ್ತರಾದ ಮಾಯಣ್ಣ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಇಬ್ಬರಿಗೂ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖಂಡರು, ಗ್ರಾಮಸ್ಥರು, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು ಹಾಗೂ ನಿರ್ದೇಶಕರು ಭಾಗವಹಿಸಿದ್ದರು.

ವರದಿ ನಾಗೇಂದ್ರ ರಾಯ

Continue Reading

Hassan

ಗೊಲ್ಲರ ಹೊಸಹಳ್ಳಿಯಲ್ಲಿ ಆನಂದಗೌಡ(ಎಜಿ) ಕಪ್ ಕ್ರಿಕೆಟ್ ಪಂದ್ಯಾವಳಿಗೆ ಶಾಸಕ ಬಾಲಕೃಷ್ಣ ಚಾಲನೆ

Published

on

ಚನ್ನರಾಯಪಟ್ಟಣ : ಯುವಕರು ದುಶ್ಚಟಗಳಿಗೆ ಬಲಿಯಾಗದೆ ಶಿಸ್ತುಬದ್ಧ ಜೀವನ ನಡೆಸಬೇಕೆಂದು ಶಾಸಕ ಸಿ‌.ಎನ್. ಬಾಲಕೃಷ್ಣ ತಿಳಿಸಿದರು.

ಕಸಬಾ ಹೋಬಳಿಯ ಗೊಲ್ಲರಹೊಸಹಳ್ಳಿ ಗ್ರಾಮದಲ್ಲಿ ಗುರುವಾರದಂದು ಸಮಾಜ ಸೇವಕ ಹಾಗೂ”ಅವಾ ಸಲ್ಯೂಷನ್ಸ್ ” ನ ಮ್ಯಾನೇಜಿಂಗ್ ಡೈರೆಕ್ಟರ್ ಆದ ಆನಂದ್ ಗೌಡ ರವರು ಆಯೋಜಿಸಿದ್ದ ಎಜೆ ಕಪ್ ಕ್ರಿಕೆಟ್ ಪಂದ್ಯಾವಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಸತ್ಪ್ರಜೆಗಳಾದ ಯುವಕರು ಮಾದಕ ವ್ಯಸನಕ್ಕೆ ಬಲಿಯಾಗಬಾರದು.

ಯುವಕರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿನಿತ್ಯ ಕನಿಷ್ಠ ಒಂದು ಗಂಟೆಯಾದರೂ ವ್ಯಾಯಾಮ ಮಾಡಬೇಕು, ಶಿಸ್ತು ಬದ್ಧ ಜೀವನ ರೂಡಿಸಿಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು.


ತಾಲೂಕಿನ ಕಸಬಾ ಹೋಬಳಿಯ ನಾಲ್ಕು ಗ್ರಾಮ ಪಂಚಾಯಿತಿಗಳಾದ ದಿಂಡಗೂರು, ಕಲ್ಕೆರೆ, ಗುಲಸಿಂದ ಮತ್ತು ಬ್ಯಾಡರಹಳ್ಳಿ ಪಂಚಾಯಿತಿ ವ್ಯಾಪ್ತಿಗೆ ಬರುವ ಎಲ್ಲಾ ಕ್ರೀಡಾಪಟುಗಳಿಗೆ ಈ ಒಂದು ಕ್ರಿಕೆಟ್ ಪಂದ್ಯಾವಳಿ ತುಂಬಾ ಸಹಕಾರಿಯಾಗಿದೆ ಈ ಭಾಗದ ಕ್ರೀಡಾಪಟುಗಳು ಉತ್ತಮವಾಗಿ ಆಟವಾಡಿ ಮುಂದಿನ ಹೆಚ್ಚು ಅವಕಾಶಗಳು ಸಿಗುವಂತಾಗಲಿ ಎಂದು ಶುಭ ಹಾರೈಸಿದರು.
ತಾಲೂಕಿನ ಬಹುತೇಕ ಎಲ್ಲಾ ಗ್ರಾಮಗಳಿಗೂ ರಸ್ತೆ ಅಭಿವೃದ್ಧಿಪಡಿಸಿದ್ದು ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಲಾಗುವುದು.

ಉದ್ಯಮಿ ಆನಂದ ಗೌಡ ಮಾತನಾಡಿ ಕಸಬಾ ಹೋಬಳಿಯ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉತ್ತಮ ಕ್ರೀಡಾಪಟುಗಳು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಲಿ ಎನ್ನುವ ಕಾರಣಕ್ಕಾಗಿ ಈ ಪಂದ್ಯಾವಳಿಯನ್ನು ಆ ಯೋಜನೆ ಮಾಡಿ ಸದ್ಯ ನಾಲ್ಕು ಪಂಚಾಯಿತಿಯ ವ್ಯಾಪ್ತಿಯ ಕ್ರೀಡಾಪಟುಗಳಿಗಾಗಿ ಈ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜನೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಹೋಬಳಿ ಎಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಕ್ರಿಕೆಟ್ ಮತ್ತು ಕಬ್ಬಡ್ಡಿ ಸಂಬಂಧಿಸಿದ ಕ್ರೀಡಾಪಟುಗಳಿಗಾಗಿ ಕ್ರೀಡಾಪಂದ್ಯಗಳನ್ನು ಆಯೋಜನೆ ಮಾಡಿ ಪ್ರೋತ್ಸಾಹಿಸಲಾಗುವುದು ಎಂದರು.

ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ ಒಟ್ಟು ಒಂಬತ್ತು ತಂಡಗಳು ಭಾಗವಹಿಸಿದ್ದು ಇಂದಿನಿಂದ ಮೂರು ದಿನಗಳವರೆಗೆ ನಡೆಯುತ್ತದೆ ಭಾನುವಾರದಂದು ಸೆಮಿ ಫೈನಲ್ ಮತ್ತು ಫೈನಲ್ ಪಂದ್ಯ ನಡೆಯಲಿದೆ ಪ್ರತಿ ಪಂದ್ಯ ಆರು ಓವರ್ ಗಳಿಗೆ ಸೀಮಿತವಾಗಿರುತ್ತದೆ 9 ತಂಡದ ಆಟಗಾರರು ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಮುಬಾರಕ್ ಪಠಾಣ್
ಕಸಬಾ ಸೊಸೈಟಿ ಅಧ್ಯಕ್ಷ ಶ್ರೀನಿವಾಸ
ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ನಾಗೇಶ್, ಮುಖಂಡರಾದ ಗಂಗಾಧರ ,ಕೆಂಬಾಳ್ ಚಂದ್ರು ರಾಜಣ್ಣ, ಗೌಸ್, ನಾಲ್ಕು ಪಂಚಾಯಿತಿ ವ್ಯಾಪ್ತಿಗಳಿಂದ ಆಗಮಿಸಿದ್ದ 9 ತಂಡದ ಕ್ರಿಕೆಟ್ ಕ್ರೀಡಾಪಟುಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ವರದಿ ದಯಾನಂದ ಶೆಟ್ಟಿಹಳ್ಳಿ

Continue Reading

Trending

error: Content is protected !!