Connect with us

Manglore

ಹಿರಿಯೂರು ಗೊಂದಲ ಇಲ್ಲ; ಒಮ್ಮತ ಅಭ್ಯರ್ಥಿಯನ್ನೇ ಕಣಕ್ಕಿಳಿಸುತ್ತೇವೆ ಎಂದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

Published

on

ಕೊಲ್ಲೂರು : ಹಿರಿಯೂರು ವಿಧಾನಸಭೆ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಮಾಡುವ ವಿಚಾರದಲ್ಲಿ ರಾಜ್ಯದ ಎನ್ಡಿಎ ಮೈತ್ರಿಕೂಟದಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಕೇಂದ್ರ ಸಚಿವ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಅವರು ಸ್ಪಷ್ಟಪಡಿಸಿದರು.

ಶ್ರೀ ಕ್ಷೇತ್ರ ಕೊಲ್ಲೂರಿನಲ್ಲಿ ತಾಯಿ ಮೂಕಾಂಬಿಕೆ ದರ್ಶನ ಪಡೆದ ನಂತರ ಕೇಂದ್ರ ಸಚಿವರು ಮಾಧ್ಯಮಗಳ ಜತೆ ಮಾತನಾಡಿದರು.

ರಾಜ್ಯ ಸರ್ಕಾರದ ಭ್ರಷ್ಟಾಚಾರ ಹಾಗೂ ಜನವಿರೋಧಿ ನೀತಿಗಳ ವಿರುದ್ಧ ಹೋರಾಡುವ ವಿಚಾರದಲ್ಲಿ ನಮ್ಮ ಮೈತ್ರಿಕೂಟದಲ್ಲಿ ಯಾವುದೇ ಬಗೆಯ ಭಿನ್ನ ನಿಲುವು ಇಲ್ಲ. ಅದೇ ರೀತಿ ಹಿರಿಯೂರು ಕ್ಷೇತ್ರದಲ್ಲಿಯೂ ಭ್ರಷ್ಟ ಕಾಂಗ್ರೆಸ ಪಕ್ಷವನ್ನು ನಾವು ಒಗ್ಗಟ್ಟಾಗಿಯೇ ಎದುರಿಸುತ್ತೇವೆ ಎಂದರು.

“ಜೆಡಿಎಸ್ ಹಾಗೂ ಬಿಜೆಪಿ ನಡುವೆ ಅತ್ಯುತ್ತಮ ಸಮನ್ವಯವಿದೆ. ಕಾಂಗ್ರೆಸ್ ನಾಯಕರು ನಮ್ಮ ಮೈತ್ರಿಯಲ್ಲಿ ಬಿರುಕು ಮೂಡಿಸುವ ಹಗಲುಗನಸು ಕಾಣುತ್ತಿದ್ದಾರೆ. ಆದರೆ, ರಾಜ್ಯದ ಹಿತದೃಷ್ಟಿಯಿಂದ ನಾವು ಒಟ್ಟಾಗಿ, ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುತ್ತಿದ್ದೇವೆ. ರಾಜ್ಯ ಸರ್ಕಾರದ ವೈಫಲ್ಯಗಳನ್ನು ಮತ್ತು ಹಗರಣಗಳನ್ನು ಜನರೆದುರು ಬಯಲು ಮಾಡಲು ಮುಂದಿನ ದಿನಗಳಲ್ಲಿ ಎರಡೂ ಪಕ್ಷಗಳ ನಾಯಕರು ಸೇರಿ ಜಂಟಿಯಾಗಿ ಇನ್ನಷ್ಟು ತೀವ್ರ ಸ್ವರೂಪದ ಹೋರಾಟಗಳನ್ನು ರೂಪಿಸುತ್ತೇವೆ” ಎಂದು ಅವರು ಅವರು ತಿಳಿಸಿದರು.


ಹಿರಿಯೂರು ಕ್ಷೇತ್ರಕ್ಕೆ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ವಿಚಾರದಲ್ಲಿ ಪರಸ್ಪರ ಚರ್ಚೆ ನಡೆಸಿ ತೀರ್ಮಾನಕ್ಕೆ ಬರುತ್ತೇವೆ. ಒಳ್ಳೆಯ ಅಭ್ಯರ್ಥಿಯನ್ನು ನಾವು ಕಣಕ್ಕೆ ಇಳಿಸುತ್ತೇವೆ ಎಂದು ಸಚಿವರು ಪ್ರಶ್ನೆ ಒಂದಕ್ಕೆ ಉತ್ತರ ನೀಡಿದರು.

ರಾಜ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಯನ್ನು ಬಿಟ್ಟು ವ್ಯಾಪಕ ಭ್ರಷ್ಟಾಚಾರದಲ್ಲಿ ನಿರತವಾಗಿದೆ. ಪ್ರತಿದಿನವೂ ಸರ್ಕಾರದ ಅಕ್ರಮಗಳ ಬಗ್ಗೆ ವರದಿಗಳು ಬರುತ್ತವೆ. ಜನರ ನಿರೀಕ್ಷೆಯನ್ನು ಸುಳ್ಳು ಮಾಡಿರುವುದರಿಂದ ಈ ಸರ್ಕಾರದ ವಿರುದ್ಧ ಈಗಾಗಲೇ ಜನ ವಿರೋಧಿ ಅಲೆ, ದೊಡ್ಡ ಮಟ್ಟದಲ್ಲಿ ಎದ್ದಿದೆ ಎಂದು ಅವರು ಹೇಳಿದರು.

ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯ, ಸ್ಟಿಂಗ್ ಆಪರೇಷನ್ ವಿಚಾರದಲ್ಲಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಸಚಿವ ಕುಮಾರಸ್ವಾಮಿ ಅವರು; ಬರೀ ಗ್ಯಾರಂಟಿಗಳನ್ನು ಕೊಟ್ಟು ಅಭಿವೃದ್ಧಿ ಮಾಡಿದ್ದೇವೆ ಎಂದು ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ರಾಜ್ಯದ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಹಾಗೂ ಕೇಂದ್ರದ ಸರ್ಕಾರದ ಮೇಲೆ ವಿನಾಕಾರಣ ಗೂಬೆ ಕೂರಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗ್ಯಾರಂಟಿಗಳಿಂದ ಆರ್ಥಿಕ ದಿವಾಳಿತನ:

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಕಳೆದ ಮೂರೂವರೆ ವರ್ಷಗಳಲ್ಲಿ ರಾಜ್ಯದ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ. ‘ಐದು ಗ್ಯಾರಂಟಿ’ಗಳನ್ನು ನೀಡುತ್ತಿರುವುದಾಗಿ ಹೇಳಿಕೊಳ್ಳುವ ಸರ್ಕಾರಕ್ಕೆ ಹಣ ಎಲ್ಲಿಂದ ಬರುತ್ತಿದೆ? ಮುಖ್ಯಮಂತ್ರಿ ಅಥವಾ ಮಂತ್ರಿಗಳು ತಮ್ಮ ಜೇಬಿನಿಂದ ಕೊಡುತ್ತಿದ್ದಾರೆಯೇ? ಎಂದು ಕೇಂದ್ರ ಸಚಿವರು ಖಾರವಾಗಿ ಪ್ರಶ್ನಿಸಿದರು.

ಮುದ್ರಾಂಕ ಶುಲ್ಕ, ಮೋಟಾರು ವಾಹನ ತೆರಿಗೆ ಹಾಗೂ ಅಬಕಾರಿ ಸುಂಕವನ್ನು ಮನಬಂದಂತೆ ಹೆಚ್ಚಿಸಿ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಲಾಗುತ್ತಿದೆ. ಮಂಗಳೂರಿನಲ್ಲಿ ಸಂಪುಟ ಸಭೆ ನಡೆಸಿ ₹32,000 ಕೋಟಿ ಯೋಜನೆಗಳನ್ನು ಘೋಷಣೆ ಮಾಡಿದ್ದರೂ, ಬೊಕ್ಕಸದಲ್ಲಿ ಹಣವಿಲ್ಲದಿರುವಾಗ ಇದೆಲ್ಲ ಕೇವಲ ಕಣ್ಣೊರೆಸುವ ತಂತ್ರವಲ್ಲದೆ ಇನ್ನೇನು? ಅಷ್ಟು ಹಣವನ್ನು ಎಲ್ಲಿಂದ ತರುತ್ತಾರೆ? ಅವರು ಪ್ರಶ್ನಿಸಿದರು.

ಬರಗಾಲದ ನಿರ್ವಹಣೆ ಹಾಗೂ ರೈತರಿಗೆ ಪರಿಹಾರ ಒದಗಿಸುವ ವಿಚಾರದಲ್ಲಿ ಕೇಂದ್ರ ಸರ್ಕಾರದ ಬಗ್ಗೆ ರಾಜ್ಯ ಸರ್ಕಾರ ದ್ವಂದ್ವ ನಿಲುವು ಹೊಂದಿದೆ. ಕೇಂದ್ರದ ಮುಂದೆ ಎನ್ ಡಿ ಆರ್ ಎಫ್ (NDRF) ನಿಯಮಗಳ ಅಡಿಯಲ್ಲಿ ಪರಿಹಾರದ ಬೇಡಿಕೆಯನ್ನು ರಾಜ್ಯ ಸರ್ಕಾರ ಸರಿಯಾದ ರೀತಿಯಲ್ಲಿ ಕೇಳುತ್ತಿಲ್ಲ. ಪದೇಪದೇ ನನ್ನ ಅಭಿಪ್ರಾಯವನ್ನು ಬದಲಿಸುತ್ತಿದೆ. ಮೊದಲು ಕೇವಲ ₹3,000 ಕೋಟಿ ಕೇಳಿದ್ದ ಕಂದಾಯ ಸಚಿವರು, ನಂತರ ಅದನ್ನು ₹7,500 ಕೋಟಿಗೆ, ಬಳಿಕ ₹11,000 ಕೋಟಿಗೆ ಹಾಗೂ ಈಗ ಬರೋಬ್ಬರಿ ₹22,000 ಕೋಟಿಗೆ ಏರಿಸಿದ್ದಾರೆ. ಪ್ರಧಾನಮಂತ್ರಿಗಳ ಮುಂದೆಯೇ ₹62,000 ಕೋಟಿ ಕೃಷಿ ನಷ್ಟವಾಗಿದೆ ಎಂದು ಮುಖ್ಯಮಂತ್ರಿ ಹೇಳಿ, ಯಾವುದೇ ಸ್ಪಷ್ಟ ಲೆಕ್ಕಾಚಾರವಿಲ್ಲದೆ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಯತ್ನವನ್ನು ಮಾಡುತ್ತಿದ್ದಾರೆ ಎಂದು ಸಚಿವರು ತರಾಟೆಗೆ ತೆಗೆದುಕೊಂಡರು.

ರೈತರು ಎಕರೆಗೆ ₹15,000-20,000. ಖರ್ಚು ಮಾಡಿದ್ದರೆ, ರಾಜ್ಯ ಸರ್ಕಾರ ಕೇವಲ ₹2,000 ಅಲ್ಪ ಪರಿಹಾರ ನೀಡಿ ಕೇಂದ್ರದತ್ತ ಬೊಟ್ಟು ಮಾಡುತ್ತಿದೆ ಎಂದು ಅವರು ವಾಗ್ದಾಳಿ ನಡೆಸಿದರು.

ಕಾರ್ಮಿಕರ ಹಣ ಹಾಗೂ ದೇಗುಲಗಳ ಹುಂಡಿ ಹಣದ ಮೇಲೆ ಕಣ್ಣು:

ಕಾಂಗ್ರೆಸ್ ಸರ್ಕಾರ ಬಿದ್ದ ಮತ್ತೊಂದು ಗಂಭೀರ ಆರೋಪ ಮಾಡಿದೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರು; ಕಾರ್ಮಿಕರ ಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದ ₹40,000 ಕೋಟಿ ಸೆಸ್ ಹಣವನ್ನು ಬೇರೆ ಉದ್ದೇಶಗಳಿಗೆ ಬಳಸಲಾಗುತ್ತಿದೆ ಎಂದರು.

ಇಷ್ಟು ಬೃಹತ್ ಮೊತ್ತದ ಹಣವನ್ನು ರಾಜ್ಯ ಸರ್ಕಾರ ಅನ್ಯ ಉದ್ದೇಶಕ್ಕೆ ಬಳಕೆ ಮಾಡುತ್ತಿದೆಯಾ ಅಥವಾ ಲೂಟಿ ಮಾಡಲಾಗುತ್ತಿದೆಯಾ? ಎಂದು ಪ್ರಶ್ನಿಸಿದ ಸಚಿವರು; ಸರ್ಕಾರಿ ಶಾಲೆಗಳ ನಿರ್ವಹಣೆಗೂ ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ ಸಾಲ ಹಾಗೂ ಸಿಎಸ್ಆರ್ ನಿಧಿಯನ್ನು ನೆಚ್ಚಿಕೊಳ್ಳುವ ದುಸ್ಥಿತಿ ಬಂದಿದೆ ಎಂದರು.

ಇತ್ತೀಚೆಗೆ ಹಾಸನಾಂಬ ದೇವಸ್ಥಾನದಲ್ಲಿ ದಾಖಲೆಯ ₹29 ಕೋಟಿ ಆದಾಯ ಸಂಗ್ರಹವಾಗಿದ್ದು, ಸರ್ಕಾರದ ಕಣ್ಣು ಈಗ ಇಂತಹ ಧಾರ್ಮಿಕ ಕೇಂದ್ರಗಳ ಹುಂಡಿ ಹಣದ ಮೇಲೂ ಬಿದ್ದಿದೆ. ದೇವಸ್ಥಾನಗಳ ಅಭಿವೃದ್ಧಿಗೆ ಬಳಸಬೇಕಾದ ಹಣವನ್ನು ಬೇರೆಡೆಗೆ ತಿರುಗಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಕೇಂದ್ರ ಸಚಿವರು ತೀವ್ರ ಕಳವಳ ವ್ಯಕ್ತಪಡಿಸಿದರು.

ಸ್ಟಿಂಗ್ ಪ್ರಕರಣ, ಪೊಲೀಸ್ ಕಮಿಷನರ್ ವಿರುದ್ಧ ವಾಗ್ದಾಳಿ:

ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ಸ್ಟಿಂಗ್ ಆಪರೇಷನ್ ಪ್ರಕರಣದ ಬಗ್ಗೆಯೂ ಸಚಿವ ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ತಮ್ಮ ದೆಹಲಿ ನಿವಾಸದಲ್ಲಿಯೇ ಪ್ರಕರಣದ ಆರೋಪಿಗೆ ಮೊಬೈಲ್ ಹಸ್ತಾಂತರವಾಗಿದೆ ಎಂಬ ಬೆಂಗಳೂರು ಪೊಲೀಸ್ ಕಮಿಷನರ್ ಹೇಳಿಕೆಯನ್ನು ಕಟುವಾಗಿ ಟೀಕಿಸಿದ ಅವರು, “ಕಮಿಷನರ್ ಒಬ್ಬ ಹೆಡ್ ಕ್ಲರ್ಕ್ ಗಿಂತ ಕಡೆಯಾಗಿ ಹೇಳಿಕೆ ನೀಡಿದ್ದಾರೆ, ತಮ್ಮ ಜಾಗ ಉಳಿಸಿಕೊಳ್ಳಲು ಅವರು ಯಾರ ಹಂಗಿನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ” ಎಂದು ಹರಿಹಾಯ್ದರು.

ಈ ಸರ್ಕಾರ ಮತ್ತು ಅಧಿಕಾರಿಗಳಿಂದ ಕುಮಾರಸ್ವಾಮಿಯನ್ನು ಅಷ್ಟು ಸುಲಭವಾಗಿ ಎದುರಿಸಲು ಅಥವಾ ಟಚ್ ಮಾಡಲು ಸಾಧ್ಯವಿಲ್ಲ ಎಂದ ಅವರು, ಸ್ಟಿಂಗ್ ಆಪರೇಷನ್ ಯಾರಿಗೆ ತಿರುಗುಬಾಣವಾಗಲಿದೆ ಎಂಬುದನ್ನು ಶೀಘ್ರದಲ್ಲೇ ಬಯಲು ಮಾಡುವುದಾಗಿ ಎಚ್ಚರಿಸಿದರು.

ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ‘ಇದು ಕೇವಲ ಟ್ರೇಲರ್’ ಎಂಬ ಹೇಳಿಕೆಗೆ ತಿರುಗೇಟು ನೀಡಿದ ಅವರು; ನಾನು ಸಿನಿಮಾ ಮಾಡಿದವನು, ಇವರು ಈಗ ಸಿನಿಮಾ ಮಾಡಲು ಶುರು ಮಾಡಿದ್ದಾರೆ, ಇವರ ಸಿನಿಮಾದ ಬಗ್ಗೆಯೂ ಮುಂದಿನ ದಿನಗಳಲ್ಲಿ ವಿವರವಾಗಿ ಹೇಳುತ್ತೇನೆ ಎಂದು ಕಿಡಿಕಾರಿದರು.

ಕ್ಷೇತ್ರ ದರ್ಶನಗಳ ಬಗ್ಗೆ ಹೇಳಿದ ಸಚಿವರು:

ನಮ್ಮದು ದೈವದಲ್ಲಿ ನಂಬಿಕೆ ಇರಿಸಿರುವ ಕುಟುಂಬವಾಗಿದೆ. ಬಹಳ ದಿನಗಳಿಂದ ಈ ಕ್ಷೇತ್ರಗಳಿಗೆ ಬರಬೇಕು ಎಂದು ಅಂದುಕೊಂಡಿದ್ದೆ. ಕೊಲ್ಲೂರು ಶ್ರೀ ಮೂಕಾಂಬಿಕೆ ಹಾಗೂ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ನಾಡಿಗೆ ಎದುರಾಗಿರುವ ಪ್ರಕೃತಿ ವಿಕೋಪ ಹಾಗೂ ಆಡಳಿತ ವೈಫಲ್ಯದ ಸಂಕಷ್ಟಗಳು ದೂರವಾಗಲಿ ಎಂದು ಪ್ರಾರ್ಥಿಸಲು ಬಂದಿದ್ದೇನೆ. ಕೊಲ್ಲೂರು ತಾಯಿಯಲ್ಲೂ ಕೂಡ ಇದನ್ನೇ ಕೇಳಿಕೊಂಡಿದ್ದೇನೆ ಎಂದು ಸಚಿವರು ಹೇಳಿದರು.

ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ವಿಧಾನ ಪರಿಷತ್ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಸ್.ಎಲ್.ಭೋಜೇಗೌಡ ಸೇರಿದಂತೆ ಅನೇಕ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕುಟುಂಬ ಸಮೇತ ಮೂಕಾಂಬಿಕೆ ದರ್ಶನ ಪಡೆದ ಹೆಚ್ಡಿಕೆ:

ಇದಕ್ಕೂ ಮೊದಲು ಕೇಂದ್ರ ಸಚಿವ ಕುಮಾರಸ್ವಾಮಿ ಅವರು ತಮ್ಮ ಪತ್ನಿ ಶ್ರೀಮತಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್ ಕುಮಾರಸ್ವಾಮಿ, ಸೊಸೆ ಶ್ರೀಮತಿ ರೇವತಿ ನಿಖಿಲ್ ಹಾಗೂ ಮೊಮ್ಮಗ ಅವ್ಯಾನ್ ದೇವ್ ಅವರೊಂದಿಗೆ ತಾಯಿ ಮೂಕಾಂಬಿಕೆಯ ದರ್ಶನ ಪಡೆದುಕೊಂಡರು.

Continue Reading

Manglore

ಕಾಪು ಮಾರಿಯಮ್ಮ ದೇವಸ್ಥಾನಕ್ಕೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಭೇಟಿ

Published

on

ಉಡುಪಿ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಉಡುಪಿ ಜಿಲ್ಲೆಯ ಪ್ರಸಿದ್ಧ ಕಾಪು ಮಾರಿಯಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದರು.

ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್ ಕುಮಾರಸ್ವಾಮಿ ಹಾಗೂ ಸೊಸೆಯೊಂದಿಗೆ ದೇವಸ್ಥಾನಕ್ಕೆ ಆಗಮಿಸಿದ ಕುಮಾರಸ್ವಾಮಿ ಅವರು ಕಾಪು ಮಾರಿಯಮ್ಮ ಹಾಗೂ ಉಚ್ಚಂಗಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.


ಈ ವೇಳೆ ಅವರು ಕುಟುಂಬ ಸದಸ್ಯರೊಂದಿಗೆ ದೇವಸ್ಥಾನದ ಸಂಪ್ರದಾಯದಂತೆ ದೇವಸ್ಥಾನದ ವಿಶೇಷ ಸೇವೆ ಬೃಹತ್ ಗಂಟೆ ಭಾರಿಸುವ ಸೇವೆಯಲ್ಲೂ ಭಾಗವಹಿಸಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಭೋಜೇಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ, ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಶಾಸಕ ಮೊಯ್ದಿನ್ ಬಾವ, ಕಾಪು ಮಾರಿಗುಡಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಾಸುದೇವ ಶೆಟ್ಟಿ ಸೇರಿದಂತೆ ಹಲವು ಗಣ್ಯರು, ಮುಖಂಡರು ಹಾಗೂ ಭಕ್ತರು ಉಪಸ್ಥಿತರಿದ್ದರು.

Continue Reading

Manglore

ಗೋವಾ ಕರಾವಳಿ ರಕ್ಷಣಾ ಪಡೆಯಿಂದ ಕರ್ನಾಟಕದ ಮೀನುಗಾರರಿಗೆ ಕಿರುಕುಳ ಆರೋಪ- ಮಂಗಳೂರಿನ ಮೀನುಗಾರರ ಆಕ್ರೋಶ

Published

on

ಮಂಗಳೂರು: ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳುವ ಕರ್ನಾಟಕದ ಮೀನುಗಾರರಿಗೆ ಇದೀಗ ಗೋವಾ ಗಡಿಯಲ್ಲಿಯೂ ಸಂಕಷ್ಟ ಎದುರಾಗಿದೆ. ಕೇರಳದ ಬಳಿಕ ಈಗ ಗೋವಾ ಕರಾವಳಿ ರಕ್ಷಣಾ ಪಡೆಯ ಪೊಲೀಸರು ಕರ್ನಾಟಕದ ಮೀನುಗಾರಿಕಾ ಬೋಟ್‌ಗಳನ್ನು ಗುರಿಯಾಗಿಸಿಕೊಂಡು ನಿರಂತರ ಕಿರುಕುಳ ನೀಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಕರ್ನಾಟಕದ ಮೀನುಗಾರಿಕಾ ಬೋಟ್‌ಗಳು ನಿಯಮದಂತೆ 12 ನಾಟಿಕಲ್ ಮೈಲು ವ್ಯಾಪ್ತಿಯನ್ನು ದಾಟಿ ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದರೂ, ಗೋವಾ ಗಡಿ ಪ್ರವೇಶಿಸಿದ ತಕ್ಷಣ ಗೋವಾ ಕರಾವಳಿ ರಕ್ಷಣಾ ಪಡೆಯ (CSP) ಅಧಿಕಾರಿಗಳು ಬೋಟ್‌ಗಳನ್ನು ತಡೆದು ಭಾರೀ ಪ್ರಮಾಣದ ದಂಡ ವಿಧಿಸುತ್ತಿದ್ದಾರೆ ಎನ್ನಲಾಗಿದೆ.

ಲಕ್ಷಾಂತರ ರೂಪಾಯಿ ದಂಡ ವಿಧಿಸುವುದಲ್ಲದೆ, ಮೀನುಗಾರರು ಹಿಡಿದ ಮೀನುಗಳನ್ನೂ ವಶಕ್ಕೆ ಪಡೆಯಲಾಗುತ್ತಿದೆ. ಕರ್ನಾಟಕದ ಮೀನುಗಾರಿಕಾ ಬೋಟ್‌ಗಳಿಂದ ಮೀನುಗಳನ್ನು ಸುಲಿಗೆ ಮಾಡಲಾಗುತ್ತಿದೆ ಎಂದು ಮೀನುಗಾರರು ಆರೋಪಿಸಿದ್ದಾರೆ. ಈ ಕಾರ್ಯಾಚರಣೆಗೆ ಗೋವಾ ಪೊಲೀಸರಿಗೆ ಕೇರಳದ ಮೀನುಗಾರಿಕಾ ಇಲಾಖೆಯ ಅಧಿಕಾರಿಗಳೂ ಸಾಥ್ ನೀಡುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.

ಗೋವಾ ಅಧಿಕಾರಿಗಳ ಈ ಕ್ರಮದಿಂದ ಮಂಗಳೂರಿನ ಮೀನುಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಕೇರಳದ ಗಡಿಯಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಕರ್ನಾಟಕದ ಮೀನುಗಾರರಿಗೆ ಇದೀಗ ಗೋವಾ ಕರಾವಳಿಯಲ್ಲಿಯೂ ನೆಮ್ಮದಿಯಿಂದ ಮೀನುಗಾರಿಕೆ ನಡೆಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.

ರಾಜ್ಯದ ಮೀನುಗಾರರ ಸಮಸ್ಯೆಗಳ ಬಗ್ಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ ಎಂಬ ಅಸಮಾಧಾನವೂ ವ್ಯಕ್ತವಾಗಿದೆ. ಮೀನುಗಾರಿಕಾ ಸಚಿವರು ಈ ವಿಚಾರದಲ್ಲಿ ಮೌನ ವಹಿಸಿರುವುದಕ್ಕೆ ಮೀನುಗಾರರು ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಸರ್ಕಾರ ಮಧ್ಯಪ್ರವೇಶಿಸಿ ಗೋವಾ ಅಧಿಕಾರಿಗಳ ಕಿರುಕುಳಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದ್ದಾರೆ.

Continue Reading

Manglore

ಡಾ. ಮೋಹನ ಆಳ್ವರಿಗೆ 75ರ ಸಂಭ್ರಮ: ಫೆ.13ಕ್ಕೆ ‘ಅಮೃತ ಮೋಹನೋತ್ಸವ’; ಸಮಾಜಮುಖಿ ಕಾರ್ಯಗಳಿಗೆ ₹15 ಕೋಟಿ ನಿಧಿ ಸಮರ್ಪಣೆ!

Published

on

ಮಂಗಳೂರು: ಶಿಕ್ಷಣ, ಆರೋಗ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸುದೀರ್ಘ ಸೇವೆ ಸಲ್ಲಿಸಿರುವ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ ಆಳ್ವ ಅವರಿಗೆ 75 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ, 2027ರ ಫೆಬ್ರವರಿ 13 ರಂದು ಮೂಡುಬಿದಿರೆಯ ಆಳ್ವಾಸ್ ವಿರಾಸತ್ ಮೈದಾನದಲ್ಲಿ ‘ಅಮೃತ ಮೋಹನೋತ್ಸವ’ವನ್ನು ಅದ್ದೂರಿಯಾಗಿ ಹಾಗೂ ಶಿಸ್ತುಬದ್ಧವಾಗಿ ಆಯೋಜಿಸಲು ನಿರ್ಧರಿಸಲಾಗಿದೆ. ಪಿಲಿಕುಳ ನಿಸರ್ಗಧಾಮದ ಸ್ಕೌಟ್ಸ್ ಮತ್ತು ಗೈಡ್ಸ್ ಸಭಾಭವನದಲ್ಲಿ ಶನಿವಾರ ಸಂಜೆ ಅಮೃತ ಮಹೋತ್ಸವ ಸಮಿತಿ-2027ರ ಡಾ. ಪ್ರಕಾಶ್ ಶೆಟ್ಟಿ ಬಂಜಾರ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಸಮಿತಿಯ ಕಾರ್ಯಾಧ್ಯಕ್ಷ ಶಶಿಧರ ಶೆಟ್ಟಿ ಬರೋಡ ಈ ಕುರಿತು ಮಾಹಿತಿ ನೀಡಿದರು. ಫೆ.13 ರಂದು ಸಂಜೆ 4 ರಿಂದ ರಾತ್ರಿ 9 ಗಂಟೆಯವರೆಗೆ ನಡೆಯಲಿರುವ ಸಮಾರಂಭದಲ್ಲಿ ಸಮಾಜದ ವತಿಯಿಂದ ಡಾ. ಆಳ್ವರಿಗೆ ₹15 ಕೋಟಿ ನಿಧಿಯನ್ನು ಸಮರ್ಪಿಸಲಾಗುವುದು. ಈ ಮೊತ್ತವನ್ನು ಜೀವನದ ಸಂಧ್ಯಾಕಾಲದಲ್ಲಿರುವವರಿಗೆ ಸುಖಮಯ ವಾತಾವರಣ ಕಲ್ಪಿಸುವ ಬೃಹತ್ ಆಸ್ಪತ್ರೆ ನಿರ್ಮಾಣ ಹಾಗೂ ಉಚಿತ ಡಯಾಲಿಸಿಸ್‌ನಂತಹ ಸೇವಾ ಕಾರ್ಯಗಳಿಗೆ ಬಳಸಲಾಗುವುದು ಎಂದು ಅವರು ತಿಳಿಸಿದರು.

ಇದೇ ವೇಳೆ ಡಾ. ಆಳ್ವರ ಏಳು ದಶಕಗಳ ಬದುಕು-ಸಾಧನೆಯನ್ನು ಬಿಂಬಿಸುವ ಅಭಿನಂದನಾ ಗ್ರಂಥವನ್ನು ಲೋಕಾರ್ಪಣೆಗೊಳಿಸಲಾಗುವುದು. ಆಳ್ವಾಸ್ ಹಳೆ ವಿದ್ಯಾರ್ಥಿಗಳಿಂದ ‘ಗುರುದಕ್ಷಿಣೆ’ ರೂಪದಲ್ಲಿ ಹಾಗೂ ಸಾರ್ವಜನಿಕರಿಂದ ನಿಧಿ ಸಂಗ್ರಹಿಸಲು ಪ್ರತ್ಯೇಕ ಟ್ರಸ್ಟ್ ರಚಿಸಲಾಗುತ್ತಿದ್ದು, ಡಾ. ಆಳ್ವರ ಜನ್ಮದಿನವಾದ ಮೇ 30 ರಂದು ಕೂಡ ವಿಶೇಷ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಸಂಘಟನೆಗಾಗಿ 75 ವಲಯ ಸಮಿತಿಗಳನ್ನು ರಚಿಸಲಾಗುತ್ತಿದ್ದು, ಆಯಾ ವಲಯಗಳಿಗೆ ಸೀಮಿತವಾಗಿ ಮಾತ್ರ ಪ್ರಚಾರ ಹಾಗೂ ಫ್ಲೆಕ್ಸ್‌ಗಳಿಗೆ ಅವಕಾಶವಿರುತ್ತದೆ. ಎಲ್ಲೆಂದರಲ್ಲಿ ಬ್ಯಾನರ್ ಹಾಕುವುದನ್ನು ನಿರ್ಬಂಧಿಸಲಾಗಿದ್ದು, ವೇದಿಕೆಯಲ್ಲಿ ವೈಯಕ್ತಿಕ ಹೂಹಾರ ಹಾಗೂ ಸನ್ಮಾನಗಳಿಗೆ ಅವಕಾಶವಿರುವುದಿಲ್ಲ ಎಂದು ಶಶಿಧರ ಶೆಟ್ಟಿ ಸ್ಪಷ್ಟಪಡಿಸಿದರು. ಸಮಿತಿಯ ಗೌರವಾಧ್ಯಕ್ಷರಾದ ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮಾತನಾಡಿ, “ಸಂಸಾರಕ್ಕಿಂತ ಸಮಾಜಕ್ಕೆ ಹೆಚ್ಚಿನ ಆದ್ಯತೆ ನೀಡಿದ ಡಾ. ಮೋಹನ ಆಳ್ವರ ಆದರ್ಶಗಳು ಇತರರಿಗೆ ಪ್ರೇರಣೆಯಾಗಬೇಕು” ಎಂದು ಆಶೀರ್ವದಿಸಿ, ಮಠದ ವತಿಯಿಂದ ₹1 ಲಕ್ಷ ನಿಧಿ ಘೋಷಿಸಿದರು.


ಅಮೃತ ಮೋಹನೋತ್ಸವದ ಸಮಿತಿಯ ಅಧ್ಯಕ್ಷ ಡಾ. ಪ್ರಕಾಶ್ ಶೆಟ್ಟಿ ಬಂಜಾರ ಮಾತನಾಡಿ, “ಸದಾ ಹಸನ್ಮುಖಿ ಹಾಗೂ ಸರಳ ವ್ಯಕ್ತಿತ್ವದ ಡಾ. ಆಳ್ವರು ಸಾಧನೆಗಳ ಸರದಾರ. 2019 ರಲ್ಲಿ ನನ್ನ 60 ರ ಸಂಭ್ರಮದ ನೇತೃತ್ವ ವಹಿಸಿದ್ದ ಅವರ ಪ್ರೇರಣೆಯಿಂದಲೇ ನಾನು ಪ್ರತಿವರ್ಷ ಸಮಾಜಕ್ಕೆ ಕೋಟ್ಯಂತರ ರೂಪಾಯಿ ನೆರವು ನೀಡುತ್ತಿದ್ದೇನೆ. ಕಳೆದ ವರ್ಷ 5 ಸಾವಿರ ಹಿಂದುಳಿದ ಕುಟುಂಬಗಳಿಗೆ ₹10 ಕೋಟಿ ಆರ್ಥಿಕ ನೆರವು ನೀಡಿದ್ದು, ಈಗ ಅವರ 75ರ ಸಂಭ್ರಮದ ನೇತೃತ್ವ ವಹಿಸಲು ಹೆಮ್ಮೆಯಾಗುತ್ತಿದೆ” ಎಂದರು.
ಸಭೆಯಲ್ಲಿ ಕಟೀಲು ದೇವಸ್ಥಾನದ ಅನುವಂಶಿಕ ಮೊಕ್ತೇಸರ ಲಕ್ಷ್ಮೀನಾರಾಯಣ ಅಸ್ರಣ್ಣ, ಮಾಜಿ ಸಚಿವರಾದ ರಮಾನಾಥ ರೈ, ಕೃಷ್ಣ ಜೆ. ಪಾಲೇಮಾರ್, ಅಭಯಚಂದ್ರ ಜೈನ್, ಶಾಸಕರಾದ ವೇದವ್ಯಾಸ್ ಕಾಮತ್, ಡಾ. ಭರತ್ ಶೆಟ್ಟಿ, ಹರೀಶ್ ಪೂಂಜಾ, ರಾಜೇಶ್ ನಾಯ್ಕ್, ಮಾಜಿ ಶಾಸಕ ಮೊಯ್ದಿನ್ ಬಾವಾ, ಮೂಡಾ ಅಧ್ಯಕ್ಷ ಸಂತೋಷ್ ಕುಮಾರ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಡಾ. ಸುಧಾಕರ ಶೆಟ್ಟಿ, ದೇವದಾಸ್ ಕಾಪಿಕಾಡ್, ಸವಣೂರು ಸೀತಾರಾಮ ರೈ, ಪೂರನ್ ವರ್ಮಾ, ಕಾವು ಹೇಮನಾಥ ಶೆಟ್ಟಿ, ಹರಿಕೃಷ್ಣ ಬಂಟ್ವಾಳ್, ಶಶಿಧರ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು. ಚಂದ್ರಹಾಸ ಶೆಟ್ಟಿ ಸ್ವಾಗತಿಸಿದರು.

ಬಾಕ್ಸ್
ವೈಯಕ್ತಿಕ ವೈಭವೀಕರಣ ಬೇಡ, ಸಮಾಜಮುಖಿ ಕಾರ್ಯಗಳಿಗೆ ಒತ್ತು : ಡಾ. ಮೋಹನ ಆಳ್ವ
ನನಗೆ 50, 60 ಹಾಗೂ 70 ವರ್ಷ ತುಂಬಿದಾಗಲೂ ಸನ್ಮಾನಕ್ಕೆ ಒಪ್ಪಿರಲಿಲ್ಲ. ಈ ಅಮೃತ ಮಹೋತ್ಸವದಲ್ಲೂ ನನ್ನ ವೈಯಕ್ತಿಕ ವೈಭವೀಕರಣಕ್ಕೆ ಅವಕಾಶವಿಲ್ಲ; ಬದಲಾಗಿ ಸಮಾಜಮುಖಿ ಕೆಲಸಗಳು ಸಮಾಜಕ್ಕೆ ತಲುಪಬೇಕು. ನನ್ನ ಬದುಕನ್ನು ಮೂರು ಹಂತಗಳಾಗಿ ವಿಂಗಡಿಸಿಕೊಂಡಿದ್ದೇನೆ—ಮೊದಲ 25 ವರ್ಷಗಳ ಸುಮಧುರ ಜೀವನ, 25 ರಿಂದ 50 ರವರೆಗಿನ ಸುಂದರ ಜೀವನ ಮತ್ತು 50 ರಿಂದ 70 ರವರೆಗಿನ ಸಾರ್ಥಕ ಜೀವನದಲ್ಲಿ ಶಿಕ್ಷಣ ಹಾಗೂ ಆರೋಗ್ಯಕ್ಕೆ ಒತ್ತು ನೀಡಿದ್ದೇನೆ. ರಾಜಕೀಯವನ್ನು ನಾನು ದ್ವೇಷಿಸುವುದಿಲ್ಲ, ಇಷ್ಟಪಡುವುದೂ ಇಲ್ಲ; ಸದಾ ಸಕಾರಾತ್ಮಕ ಚಿಂತನೆ ಹಾಗೂ ಸಾಮರಸ್ಯದ ಬದುಕನ್ನು ನಂಬಿದ್ದೇನೆ ಎಂದು ಡಾ. ಮೋಹನ ಆಳ್ವ ತಮ್ಮ ಅನಿಸಿಕೆ ಹಂಚಿಕೊಂಡರು.

Continue Reading

Trending

error: Content is protected !!