Hassan
ಹಾಸನ ಸಂಸದರ ಬೇಡಿಕೆಗೆ ಕೇಂದ್ರದ ನಿರಾಶಾದಾಯಕ ಉತ್ತರ : ತೆಂಗು ರೈತರಿಗೆ ಪರಿಹಾರ ರಾಜ್ಯದ ಹೊಣೆ ಎಂದು ಕೇಂದ್ರ ಕೃಷಿ ಮಂತ್ರಿ
ನವದೆಹಲಿ: ಹಾಸನ ಜಿಲ್ಲೆಯಲ್ಲಿ ಬೆಳೆದಿರುವ ಲಕ್ಷಾಂತರ ಹೆಕ್ಟೇರ್ ತೆಂಗು ಬೆಳೆ ನಾಶವಾಗಿ ತೀವ್ರ ಸಂಕಷ್ಟದಲ್ಲಿರುವ ಹಾಸನ ಜಿಲ್ಲೆಯ ತೆಂಗು ಬೆಳೆಗಾರರಿಗೆ ಕೇಂದ್ರ ಸರ್ಕಾರ ತಕ್ಷಣವೇ ‘ವಿಶೇಷ ಪರಿಹಾರ’ ನೀಡಬೇಕೆಂದು ಹಾಸನ ಸಂಸದ ಶ್ರೇಯಸ್ ಎಂ. ಪಟೇಲ್ ಅವರು ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗೆ ಕೇಂದ್ರ ಸರ್ಕಾರ ನೇರ ಉತ್ತರ ನೀಡಿದ್ದು, ಕೃಷಿ ನಷ್ಟಕ್ಕೆ ಪರಿಹಾರ ನೀಡುವುದು ರಾಜ್ಯಗಳ ಜವಾಬ್ದಾರಿ ಎಂದು ಹೇಳುವ ಮೂಲಕ ಕೈತೊಳೆದುಕೊಂಡಿದೆ.

ಮಂಗಳವಾರ ಲೋಕಸಭೆಯಲ್ಲಿ ರೈತ ಪರ ದನಿ ಎತ್ತಿದ ಸಂಸದ ಶ್ರೇಯಸ್ ಪಟೇಲ್ ಅವರು ಜಿಲ್ಲೆಯ ಪ್ರಮುಖ ತೆಂಗು ಬೆಳೆಯುವ ಅರಸೀಕೆರೆ, ಚನ್ನರಾಯಪಟ್ಟಣ ಸೇರಿದಂತೆ ಒಟ್ಟು 1.18 ಲಕ್ಷ ಹೆಕ್ಟೇರ್ ಪ್ರದೇಶವು ರುಗೋಸ್ ವೈಟ್‌ಫ್ಲೈ ಮತ್ತು ಇತರ ರೋಗಗಳಿಂದ ತೀವ್ರ ಹಾನಿಗೊಳಗಾಗಿದೆ ಎಂಬುದನ್ನು ಸದನದ ಗಮನಕ್ಕೆ ತಂದರು. ಈ ನಷ್ಟದಿಂದ ರೈತರು ಬದುಕು ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ, ಕೇಂದ್ರ ಸರ್ಕಾರದಿಂದ ವಿಶೇಷ ಹಣಕಾಸಿನ ನೆರವು ನೀಡಬೇಕಿದೆ ಎಂದು ಅವರು ಒತ್ತಾಯಿಸಿದರು.
ಸಂಸದರ ಈ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್, ಕೃಷಿ ಕ್ಷೇತ್ರ ಮತ್ತು ಬೆಳೆ ನಷ್ಟಕ್ಕೆ ಪರಿಹಾರ ನೀಡುವುದು ರಾಜ್ಯ ಸರ್ಕಾರದ ಪ್ರಾಥಮಿಕ ಜವಾಬ್ದಾರಿ ಎಂದು ಸ್ಪಷ್ಟಪಡಿಸಿದರು.

ರಾಜ್ಯ ಸರ್ಕಾರವು ತನ್ನಲ್ಲಿ ಲಭ್ಯವಿರುವ ಎಸ್.ಡಿ.ಆರ್.ಎಫ್. (ರಾಜ್ಯ ವಿಪತ್ತು ಪರಿಹಾರ ನಿಧಿ) ಹಣವನ್ನೇ ಬಳಸಿ ಮೊದಲು ರೈತರಿಗೆ ನೆರವಾಗಬೇಕು. ನಷ್ಟವು ಅತಿ ದೊಡ್ಡದಾಗಿದ್ದರೆ, ಅದನ್ನು ‘ತೀವ್ರ ಸ್ವರೂಪದ ವಿಪತ್ತು’ ಎಂದು ಪರಿಗಣಿಸಿ ಎನ್.ಡಿ.ಆರ್.ಎಫ್. (ರಾಷ್ಟ್ರೀಯ ವಿಪತ್ತು ನಿಧಿ) ಅಡಿಯಲ್ಲಿ ಸಹಾಯ ಕೋರಿ ರಾಜ್ಯವೇ ಕೇಂದ್ರಕ್ಕೆ ಸರಿಯಾದ ಪ್ರಸ್ತಾವನೆಯನ್ನು ಕಳುಹಿಸಬೇಕು. ಅಂತಹ ಪ್ರಸ್ತಾವನೆ ಬಂದಾಗ ಮಾತ್ರ ಕೇಂದ್ರ ಸರ್ಕಾರವು ಸಹಾಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಸಚಿವರು ತಿಳಿಸಿದರು.

ಸಂಸದ ಶ್ರೇಯಸ್ ಪಟೇಲ್ ಅವರ ಪ್ರಯತ್ನದ ನಡುವೆಯೂ, ಕೇಂದ್ರ ಸರ್ಕಾರವು ನೇರವಾಗಿ ‘ವಿಶೇಷ ಪರಿಹಾರ’ ಘೋಷಣೆ ಮಾಡಲು ನಿರಾಕರಿಸಿದ ಕಾರಣ, ತಕ್ಷಣದ ಆರ್ಥಿಕ ನೆರವಿನ ನಿರೀಕ್ಷೆಯಲ್ಲಿದ್ದ ಹಾಸನದ ತೆಂಗು ಬೆಳೆಗಾರರಿಗೆ ಕೇಂದ್ರದ ಈ ಉತ್ತರದಿಂದ ನಿರಾಸೆಯಾಗಿದೆ. ಪರಿಹಾರ ಸಿಗಬೇಕಾದರೆ, ರಾಜ್ಯ ಸರ್ಕಾರವು ತುರ್ತಾಗಿ ಸೂಕ್ತ ಪ್ರಸ್ತಾವನೆ ಕಳುಹಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಒಟ್ಟಿನಲ್ಲಿ ಹಾಸನ ಜಿಲ್ಲೆಯ ಅನ್ನದಾತರ ಬಗ್ಗೆ ಕೇಂದ್ರದ ಗಮನ ಸೆಳೆದ ಸಂಸದ ಶ್ರೇಯಸ್ ಪಟೇಲ್ ಅವರ ಬದ್ಧತೆಯನ್ನು ಜಿಲ್ಲೆಯ ರೈತರು ಹಾಗೂ ಸಾರ್ವಜನಿಕರು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.
Hassan
ತಿರುಪತಿಹಳ್ಳಿ ಬೆಟ್ಟದಲ್ಲಿ ಉಲ್ಕಾಪಾತ ವೀಕ್ಷಣೆ — ಸಾರ್ವಜನಿಕರಿಗೆ ವಿಶೇಷ ವ್ಯವಸ್ಥೆ
ಹಾಸನ: ಜೆಮಿನಿಡ್ ಉಲ್ಕಾಪಾತ ವೀಕ್ಷಣೆಯ ನಿಮಿತ್ತ, ಭಾರತ ಜ್ಞಾನ ವಿಜ್ಞಾನ ಸಮಿತಿ ಹಾಸನ ಜಿಲ್ಲೆ, ನಿಟ್ಟೂರು ಗ್ರಾಮ ಪಂಚಾಯಿತಿ ಹಾಗೂ ಸ್ಥಳೀಯ ಗ್ರಾಮಸ್ಥರ ಸಹಭಾಗಿತ್ವದಲ್ಲಿ ಡಿಸೆಂಬರ್ 13ರ ರಾತ್ರಿ ಮತ್ತು 14ರ ಮುಂಜಾನೆ ವೀಕ್ಷಣಾ ಕಾರ್ಯಕ್ರಮವನ್ನು ತಿರುಪತಿಹಳ್ಳಿ ಬೆಟ್ಟದಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಕಾರ್ಯದರ್ಶಿ ಚಿನ್ನೇನಹಳ್ಳಿ ಸ್ವಾಮಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪ್ರತಿ ವರ್ಷದಂತೆ ಡಿಸೆಂಬರ್ ತಿಂಗಳಲ್ಲಿ ಜೆಮಿನಿ ನಕ್ಷತ್ರಪುಂಜದ ದಿಕ್ಕಿನಿಂದ ಬೀಳುವ ಜೆಮಿನಿಡ್ ಉಲ್ಕಾಪಾತ ಈ ಬಾರಿ ಡಿಸೆಂಬರ್ 13ರ ಮಧ್ಯರಾತ್ರಿ 12 ಗಂಟೆಯಿಂದ ಬೆಳಿಗ್ಗೆ 4 ಗಂಟೆಯವರೆಗೆ ಹೆಚ್ಚು ಗೋಚರಿಸಲಿದೆ. ನಗರ ಪ್ರದೇಶಗಳಲ್ಲಿ ಬೆಳಕು ಹೆಚ್ಚು ಇರುವುದರಿಂದ ವೀಕ್ಷಣೆ ಅಸಾಧ್ಯವಾಗುವ ಕಾರಣ, ಹಾಸನದಿಂದ 20 ಕಿಮೀ ದೂರದಲ್ಲಿರುವ ತಿರುಪತಿಹಳ್ಳಿ ಬೆಟ್ಟವನ್ನು ವೀಕ್ಷಣಾ ಸ್ಥಳವಾಗಿ ಗುರುತಿಸಲಾಗಿದೆ.

ಕಾರ್ಯಕ್ರಮದಲ್ಲಿ ಆಕಾಶಶಾಸ್ತ್ರ ಹಾಗೂ ಸೌರವ್ಯೂಹದ ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಕೆ.ಎಸ್. ರವಿಕುಮಾರ್, ಕೆ.ವಿ. ಕವಿತ, ರವಿ ಶಂಕರ್, ಅಖಿಲೇಶ್ ಪಾಟೀಲ್, ಅಹಮದ್ ಹಗರೆ ಸೇರಿದಂತೆ ಹಲವರು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಟೆಲಿಸ್ಕೋಪ್ ಸಹಾಯದಿಂದ ಗ್ರಹ–ಉಪಗ್ರಹಗಳು, ಗೆಲಾಕ್ಸಿ, ನಕ್ಷತ್ರಗಳು ಹಾಗೂ ರಾಶಿಚಕ್ರಗಳನ್ನು ಪರಿಚಯಿಸಲಿದ್ದಾರೆ. ಸಾಂಸ್ಕೃತಿಕ ಚಟುವಟಿಕೆಗಳನ್ನೂ ಆಯೋಜಿಸಲಾಗಿದೆ ಎಂದು ತಿಳಿಸಿದರು.
ನಿಟ್ಟೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ನಟರಾಜ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮಾಜಿ ಅಧ್ಯಕ್ಷ ಚಂದ್ರಶೇಖರ್, ಪಿಡಿಒ ಅಶ್ವತ್ಥನಾರಾಯಣ ಹಾಗೂ ಇತರ ಗಣ್ಯರು ಭಾಗವಹಿಸಲಿದ್ದಾರೆ.
ಹಾಸನದಿಂದ ಭಾಗವಹಿಸುವ ನೋಂದಾಯಿತರಿಗೆ ಪ್ರಯಾಣ, ಲಘು ಉಪಹಾರ ಮತ್ತು ಅಗತ್ಯ ಸಾಮಗ್ರಿಗಳ ವ್ಯವಸ್ಥೆ ಕಲ್ಪಿಸಲಾಗಿದೆ.
ಬೆಟ್ಟ ಪ್ರದೇಶವಾದುದರಿಂದ ಮೊತ್ತಮೊದಲ 100 ಜನರಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.
ಆಸಕ್ತರು ಹೆಚ್ಚಿನ ಮಾಹಿತಿಗೆ ಈ ಸಂಖ್ಯೆಗಳಿಗೆ ಸಂಪರ್ಕಿಸಬಹುದು: 9900735212, 6363907441, 944890018.
ಸುದ್ದಿಗೋಷ್ಠಿಯಲ್ಲಿ ಅಹಮದ್ ಅಗರೇ, ಜಾನಕಿ, ಮೋನಿಕಾ ಇತರರು ಹಾಜರಿದ್ದರು.
Hassan
ಗೋರಕ್ಷಣೆಗೆ ಒತ್ತಾಯ – ಜಾನುವಾರು ಹತ್ಯೆ ಪ್ರತಿಬಂಧಕ ಕಾಯಿದೆ ತಿದ್ದುಪಡಿ ವಿರೋಧಿಸಿ ಹಿಂದೂ ಸಂಘಟನೆಗಳ ಪ್ರತಿಭಟನೆ
ಹಾಸನ: ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯಿದೆ 2020ರ ಸೆಕ್ಷನ್ 8(4)ಕ್ಕೆ ತಿದ್ದುಪಡಿ ಮಾಡುವ ರಾಜ್ಯ ಸರ್ಕಾರದ ಪ್ರಸ್ತಾವನೆ ವಿರುದ್ಧವಾಗಿ, ನಗರದಲ್ಲಿ ಇಂದು ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿದರು.
ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಪ್ರತಿಭಟನಾ ಮೇರವಣಿಗೆ ಸಾಗಿದ ವಿವಿಧ ಹಿಂದೂ ಸಂಘಟನೆಗಳ ಮುಖಂಡರು ಏನ್ ಆರ್ ವೃತ್ತದ ಮೂಲಕ ಸಾಗಿ ಜಿಲ್ಲಾಧಿಕಾರಿ ಕಚೇರಿ ಆವರಣ ತಲುಪಿ ಜಿಲ್ಲಾಡಳಿತಕ್ಕೆ ಗೋರಕ್ಷಣೆಯನ್ನು ಬಲಪಡಿಸುವಂತೆ ಆಗ್ರಹಿಸಿ ಮನವಿ ಸಲ್ಲಿದರು.
ಜಿಲ್ಲಾ ಬಿಜೆಪಿ ಸಿದ್ದೇಶ್ ನಾಗೇಂದ್ರ ಮಾತನಾಡಿ ಸರ್ಕಾರವು ವಶಪಡಿಸಿಕೊಳ್ಳಲಾದ ವಾಹನಗಳನ್ನು ಬ್ಯಾಂಕ್ ಗ್ಯಾರಂಟಿ ಇಲ್ಲದೇ ತಾತ್ಕಾಲಿಕ ಹಸ್ತಾಂತರಿಸಲು ಅವಕಾಶ ಕಲ್ಪಿಸುವ ತಿದ್ದುಪಡಿಯನ್ನು ಮುಂದಿರಿಸಿರುವುದು ಅಕ್ರಮ ಗೋಸಾಗಾಟಗಾರರು ಮತ್ತು ಗೋಹಂತಕರಿಗೆ ನಿರ್ಭಯತೆಯನ್ನು ನೀಡುವಂತಿದೆ.
ಇದರ ಪರಿಣಾಮವಾಗಿ ಗೋವುಗಳ ಮೇಲಿನ ಕ್ರೂರತೆ ಹಾಗೂ ಅಕ್ರಮ ಸಾಗಾಟ ಹೆಚ್ಚುವ ಅಪಾಯವಿದೆ ಎಂದರು.

ರಾಜ್ಯದಲ್ಲಿ ಹಿಂದೆ ಗೋವುಗಳನ್ನು ನಿಗದಿತ ಸಂಖ್ಯೆಗೆ ಮೀರಿ ಒಂದೇ ವಾಹನದಲ್ಲಿ ತುಂಬಿ ಕ್ರೂರವಾಗಿ ಸಾಗಿಸುವ ಘಟನೆಗಳು ಹೆಚ್ಚಾಗಿದ್ದವು.
2021ರಲ್ಲಿ ಕಾಯಿದೆ ಜಾರಿಯಾದ ನಂತರ ಈ ಕ್ರೂರತೆ ಒಂದಷ್ಟು ನಿಯಂತ್ರಣಕ್ಕೆ ಬಂದರೂ, ಕಾಯಿದೆ ಜಾರಿ ಸೂಕ್ತವಾಗಿ ನಡೆಯದ ಕಾರಣ ಕೆಲವು ಪ್ರದೇಶಗಳಲ್ಲಿ ಇನ್ನೂ ದುರ್ಬಳಕೆ ಮುಂದುವರೆದಿದೆ ಎಂದು ಶಂಕೆ ವ್ಯಕ್ತಪಡಿಸಿದರು.
ಈ ಕಾಯಿದೆ ಕೇವಲ ಜಾನುವಾರು ವಧೆ ನಿಷೇಧಿಸುವುದಕ್ಕಲ್ಲ; ಜಾನುವಾರುಗಳ ಸುರಕ್ಷಿತ ಸಾಗಾಟ, ಸಂರಕ್ಷಣೆ ಮತ್ತು ಕ್ರೂರತೆಯಿಂದ ರಕ್ಷಿಸುವ ಉದ್ದೇಶವೂ ಇದರಲ್ಲಿ ಅಡಕವಾಗಿದೆ. ಈಗ ಗೋರಕ್ಷಣೆ ದುರ್ಬಲಗೊಳಿಸುವ ಪ್ರಯತ್ನ ನಡೆಯುತ್ತಿರುವುದು ಸಂವಿಧಾನದ ಮೂಲಭೂತ ಆಶಯಕ್ಕೂ ವಿರುದ್ಧ,” ಎಂದು ತಿಳಿಸಿದರು.
ವಿಶ್ವ ಹಿಂದೂ ಪರಿಷತ್ ನ ಲೋಕೇಶ್ ಮಾತನಾಡಿ, ಸಂವಿಧಾನದ ಆರ್ಟಿಕಲ್ 51A ಉಲ್ಲೇಖಿಸಿ, ಜೀವಿಗಳಿಗೆ ಕರುಣೆ ತೋರಿಸುವುದು ಪ್ರತಿಯೊಬ್ಬ ಭಾರತೀಯನ ಮೂಲಭೂತ ಕರ್ತವ್ಯ ಆಗಿದ್ದು ರಾಜ್ಯ ಸರ್ಕಾರವೂ ಈ ಕರ್ತವ್ಯದ ಪಾಲನೆಯಿಂದ ಹಿಂದೆ ಸರಿಯಬಾರದು ಎಂದು ಒತ್ತಾಯಿಸಲಾಯಿತು.
ತಿದ್ದುಪಡಿ ಜಾರಿಯಾದರೆ ಇದು ಹಿಂದುಗಳ ಭಾವನೆಗಳಿಗೆ ಧಕ್ಕೆ ತರುವುದಲ್ಲದೆ, ರಾಜ್ಯದಲ್ಲಿ ಅಶಾಂತಿಯ ಸ್ಥಿತಿ ಉಂಟಾಗುವ ಸಾಧ್ಯತೆ ಇದೆ ಎಂದು ಸಂಘಟನೆಗಳು ಎಚ್ಚರಿಕೆ ನೀಡಿವೆ.
ಕೊನೆಯಲ್ಲಿ, ಪ್ರತಿಭಟನಾಕಾರರು ತಿದ್ದುಪಡಿಯನ್ನು ವಿಧಾನಸಭೆಯಲ್ಲಿ ಮಂಡಿಸದಂತೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಮನವಿ ಮಾಡಿದರು.
“ಗೋವುಗಳ ರಕ್ಷಣೆಯು ನಮ್ಮ ಧರ್ಮ, ಸಂಸ್ಕೃತಿ ಮತ್ತು ಸಂವಿಧಾನದ ಕರ್ತವ್ಯ. ಸರ್ಕಾರವೂ ಈ ಹೊಣೆಗಾರಿಕೆಯನ್ನು ಗಂಭೀರವಾಗಿ ಪಾಲಿಸಬೇಕು” ಎಂದು ಅವರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಐ ನೆಟ್ ವಿಜಯ್ ಕುಮಾರ್, ಬಿಜೆಪಿ ಮುಖಂಡರಾದ ವೇದಾವತಿ ಮೋಹನ್, ಹಾಗೂ ವಿಶ್ವ ಹಿಂದೂ ಪರಿಷದ್ ನ ಮಹಿಪಾಲ್ ಲೋಕೇಶ್, ಭಜರಂಗದಳದ ಸಂಯೋಜಕ ಅಭಿಷೇಕ ಗೋರಕ್ಷಕ ವಿಕಾಸ್ ಮಂಜು, ಅನು ಲೋಕೇಶ್ ಇತರರು ಹಾಜರಿದ್ದರು.
Hassan
ಕಾಡನೆಗಳ ತೀವ್ರಹಾವಳಿ: ಕಣಗುಪ್ಪೆ ಗ್ರಾಮಸ್ಥರಿಂದ ಉಗ್ರ ಹೋರಾಟದ ಎಚ್ಚರಿಕೆ
ಬೇಲೂರು: ಸುಮಾರು 15 ದಿನಗಳಿಂದ 50ಕ್ಕೆ ಹೆಚ್ಚು ಕಾಡಾನೆಗಳು ಕಣಗುಪ್ಪೆ ಗ್ರಾಮದಲ್ಲಿ ಬೀಡು ಬಿಟ್ಟಿದ್ದು ರೈತರ ಭತ್ತದ ಗದ್ದೆಗಳು ಕಾಫಿ ತೋಟ ಅಡಿಕೆ ತೋಟಗಳನ್ನು ಸಂಪೂರ್ಣವಾಗಿ ನಾಶ ಮಾಡಿದ್ದು ರೈತರ ಗೋಳನ್ನು ಕೇಳುವಲ್ಲಿ ಸರ್ಕಾರ ಹಾಗೂ ಅರಣ್ಯ ಇಲಾಖೆ ಸಂಪೂರ್ಣವಾಗಿ ವಿಫಲಗೊಂಡಿದೆ.
ನಮ್ಮ ಗ್ರಾಮಗಳ ಸುತ್ತಮುತ್ತಲ ರೈತರು ಬೆಳೆದ ಭತ್ತ, ಬಾಳೆ ಹಣ್ಣು, ಕಬ್ಬು, ಕಾಫಿ, ಕಾಳುಮೆಣಸು ಬೆಳೆಗಳು ಪದೇ ಪದೇ ಆನೆಗಳ ದಾಳಿಯಿಂದ ಸಂಪೂರ್ಣವಾಗಿ ನಾಶವಾಗುತ್ತಿವೆ ಮತ್ತು ಗ್ರಾಮಸ್ಥರು ನಿರಂತರ ಭಯದ ವಾತಾವರಣದಲ್ಲಿ ಬದುಕುವಂತಾಗಿದೆ.

ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮತ್ತು ಸಂಬಂಧಪಟ್ಟವರಿಗೆ ಹಲವು ಬಾರಿ ಮನವಿ ಸಲ್ಲಿಸಿದರು ಯಾವುದೇ ಶಾಶ್ವತ ಪರಿಹಾರ ಕ್ರಮಗಳನ್ನು ಕೈಗೊಂಡಿಲ್ಲ . ಸರ್ಕಾರ ಮತ್ತು ಅರಣ್ಯ ಇಲಾಖೆ ನಿರ್ಲಕ್ಷದಿಂದಾಗಿ ಅನಿವಾರ್ಯವಾಗಿ ನಾವು ನ್ಯಾಯಯುತ ಮುಷ್ಕರ ನಡೆಸಲು ನಿರ್ಧರಿಸಿದ್ದೇವೆ.
ತಕ್ಷಣವೇ ಆನೆಗಳನ್ನು ಸುರಕ್ಷಿತವಾಗಿ ಕಾಡಿನೊಳಗೆ ಇಟ್ಟಲು ಶಾಶ್ವತ ಪರಿಹಾರ ಕ್ರಮಗಳನ್ನು ಗಟ್ಟಿಮುಟ್ಟಾದ ತಡೆಗೋಡೆ,ಬೇಲಿ ಮುಂತಾದವು ಅಳವಡಿಸಬೇಕು ಆನೆಗಳ ದಾಳಿಯಿಂದ ಬೆಳೆ ಕಳೆದುಕೊಂಡಿರುವ ಎಲ್ಲಾ ರೈತರಿಗೆ ಸರಿಯಾದ ಮತ್ತು ತ್ವರಿತ ಪರಿಹಾರ ಧನವನ್ನು ತಕ್ಷಣ ಬಿಡುಗಡೆ ಮಾಡಬೇಕು , ಸಮಸ್ಯೆ ಬಗ್ಗೆ ಪ್ರದೇಶದಲ್ಲಿ ಅರಣ್ಯ ಇಲಾಖೆ ಗಸ್ತು ಹೆಚ್ಚಿಸಬೇಕು.
ಈ ಬಗ್ಗೆ ಅರಣ್ಯ ಇಲಾಖೆ ಗಮನ ಸೆಳೆಯುವ ಸಲುವಾಗಿ ನಾಳೆ ಬೆಳಗ್ಗೆ 10 ಗಂಟೆಗೆ ಸರಿಯಾಗಿ ಕಣಗುಪ್ಪೆ ಗ್ರಾಮಸ್ಥರಿಂದ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು .
ಈ ವೇಳೆ ಗ್ರಾಮಸ್ಥರಾದ ತಾಲೂಕು ಮಾಜಿ ಟಿಎಪಿಸಿಎಂಎಸ್ ಅಧ್ಯಕ್ಷರಾದ ಕೆ ಜಿ ಕುಮಾರ್ ಅನುಘಟ್ಟ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ವೀರಭದ್ರ ಶೆಟ್ಟಿ, ಬಸವರಾಜ್, ಚಂದ್ರಶೇಖರ್ .ಪುಟ್ಟ ಶೆಟ್ಟಿ ,ಶಿವಶಂಕರಯ್ಯ, ಮೋಹನ್ ಕುಮಾರ್, ಪ್ರಸನ್ನ ಕುಮಾರ್ ,ಚಂದ್ರಶೇಖರ್ ,ಕೆ ಎಮ್ ರವಿ, ನಂದ ,ಪುಟ್ಟರಾಜು, ಇಂದ್ರೇಶ್ ,ಮೋಹನ್ ,ಶರತ್, ಸತೀಶ್, ಸುನಿಲ್, ಯತೀಶ್, ಕುಮಾರ್, ದೇವರಾಜ್ ಗೋಪಾಲ ,ತಿಮ್ಮೇಗೌಡ, ಮಂಜುನಾಥ್, ಸಣ್ಣಪ್ಪ ಶೆಟ್ಟಿ ಮುಂತಾದವರು ಹಾಜರಿದ್ದರು.
-
Mandya20 hours agoಡಿ.17ಕ್ಕೆ ಮಳವಳ್ಳಿಗೆ ರಾಷ್ಟ್ರಪತಿ ಆಗಮನ : ಜಿಲ್ಲಾಧಿಕಾರಿಗಳಿಂದ ಸ್ಧಳ ಪರಿಶೀಲನೆ
-
Mysore18 hours agoಮೈಸೂರು ದಸರಾ: ಮಹಿಳಾ ಉದ್ಯಮಿ ಉಪಸಮಿತಿಗೆ ಎಸ್. ರಂಗನಾಥ ಸಂಚಾಲಕರಾಗಿ ನೇಮಕ
-
Hassan22 hours agoಜಿಲ್ಲಾ ಮಟ್ಟದ ಅಂತರಶಾಲಾ ಚೆಸ್ ಸ್ಪರ್ಧೆ ಯಶಸ್ವಿ
-
Kodagu24 hours agoಸಂವಿಧಾನದ ರಕ್ಷಣೆ ನಮ್ಮೆಲ್ಲರ ಹೊಣೆ : ಗಾಯತ್ರಿ ನರಸಿಂಹ
-
Hassan22 hours agoಎಂಸಿಇ ಕಾಲೇಜಿನ ಸಿವಿಲ್ ವಿಭಾಗದಲ್ಲಿ ಸ್ಪೋರ್ಟ್ಸ್ ವಿಜೇತರಿಗೆ ಸನ್ಮಾನ
-
Kodagu22 hours agoಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಕರ್ತರಿಗೆ ವಿಮೆ ಸೌಲಭ್ಯ
-
Hassan19 hours agoಭಾರಿ ಹೊಂಡದಲ್ಲಿ ಸಿಲುಕಿದ ಲಾರಿ: ಒಂದು ಗಂಟೆ ಕಾಲ NH-75 ಬಂದ್
-
Kodagu22 hours agoಶನಿವಾರಸಂತೆ – ಡಿ.10ಕ್ಕೆ ವಿದ್ಯುತ್ ವ್ಯತ್ಯಯ
