ಗದಗದಲ್ಲಿ ಇಂದು ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಧರ್ಮಸ್ಥಳದ ವಿಚಾರ ವಿಧಾನಸಭೆ ಒಳಗೆ ಚರ್ಚೆಗೆ ಬಂದಿದೆ. ಗೃಹ ಸಚಿವರು ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಅನಾಮಿಕ ವ್ಯಕ್ತಿ ನ್ಯಾಯಾಲಯದಲ್ಲಿ ಸಿಆರ್‌ಪಿಸಿ ಸೆಕ್ಷನ್ 164ರ ಅಡಿ ಹೇಳಿಕೆ ನೀಡಿದ್ದ. ಅದರ ಬಗ್ಗೆ ನ್ಯಾಯಯುತವಾಗಿ ತನಿಖೆ ನಡೆಯಬೇಕಾಗಿತ್ತು. ಆ ತನಿಖೆ ನಡೆದಿದೆ. ತನಿಖೆಯು ಯಾವ ಹಂತದಲ್ಲಿದೆ ಎಂಬ ಕೆಲವು ಭಾಗ ಮಾಧ್ಯಮಗಳ ಮೂಲಕ ಗೊತ್ತಾಗಿದೆ. ಈ ಬಗ್ಗೆ ಬಹುಶಃ ಸೋಮವಾರ ಇನ್ನು ಹೆಚ್ಚಿನ ಮಾಹಿತಿಯನ್ನು ಗೃಹ ಸಚಿವರು ನೀಡುತ್ತಾರೆ ಎಂದಿದ್ದಾರೆ ಎಂದು ಹೇಳಿದರು.
ಶಾಸನ ಸಭೆಯಲ್ಲಿ ಚರ್ಚೆ ಮಾಡಿದ್ದರಿಂದ ಸೋಮವಾರ ಸರ್ಕಾರ ತನ್ನ ಉತ್ತರ ನೀಡಲಿದೆ. ನಾವು ಧರ್ಮಸ್ಥಳ ಮಂಜುನಾಥನ ಸನ್ನಿಧಾನ ಬಗ್ಗೆ ವಿಶೇಷ ಭಕ್ತಿ, ಗೌರವ, ಅಭಿಮಾನ ಹೊಂದಿದವರು. ಆದ್ದರಿಂದ ಸರ್ಕಾರದ ಬಗ್ಗೆ ಯಾರು ಅನುಮಾನದ ಮಾತುಗಳನ್ನಾಡುತ್ತಿದ್ದಾರೆ. ಅವರು ಕೇವಲ ರಾಜಕೀಯಕ್ಕಾಗಿ ಮಾತನಾಡುತ್ತಿದ್ದಾರೆ. ಇವತ್ತು ಮಾತನಾಡುವವರು 10 ದಿನಗಳ ಹಿಂದೆ ಯಾಕೆ ಮಾತನಾಡಲಿಲ್ಲ? ಸಮಯದ ಉಪಯೋಗ ಮಾಡಿಕೊಂಡು ಏನಾದ್ರು ಮಾಡುವ ಪ್ರಯತ್ನಿಸಿದರೆ ಅದರಿಂದ ಏನು ಲಾಭ ಆಗುವುದಿಲ್ಲ ಎಂದು ಧರ್ಮಸ್ಥಳ ಪ್ರಕರಣ ರಾಜಕೀಯಕ್ಕೆ ಬಳಸಿಕೊಳ್ಳುವವರಿಗೆ ಖಡಕ್ ಎಚ್ಚರಿಕೆ ನೀಡಿದರು.
ಇದೇ ಸಂದರ್ಭದಲ್ಲಿ ಒಳಮೀಸಲಾತಿ ಬಗ್ಗೆ ಮಾತನಾಡಿದ ಅವರು, ಒಳಮೀಸಲಾತಿಗೆ ಸಂಬಂಧಪಟ್ಟಂತೆ ಆ.16 ರಂದು ವಿಶೇಷ ಸಚಿವ ಸಂಪುಟ ಕರೆಯಲಾಗಿತ್ತು. ಆದರೆ ಈ ಬಗ್ಗೆ ಕೆಲವು ಸಚಿವರು, ಸಿಎಂ ಅವರನ್ನು ಭೇಟಿಯಾಗಿ ಕೆಲವು ವಿಚಾರಗಳನ್ನು ಚರ್ಚೆ ಮಾಡ್ತಿದ್ದಾರೆ. ಅದಕ್ಕೆ ಒಂದೆರಡು ದಿನ ಹೆಚ್ಚಿಗೆ ಸಮಯ ತೆಗೆದುಕೊಂಡಿದ್ದಾರೆ. ಆದ್ದರಿಂದ ಆ.19ರಂದು ಸಚಿವ ಸಂಪುಟದ ಸಭೆಯನ್ನು ಕರೆಯಲಾಗಿದೆ. ಅದರೊಳಗೆ ನಾಗಮೋಹನ್‌ದಾಸ್ ವರದಿ ಬಗ್ಗೆ ಅಂತಿಮವಾಗಿ ಚರ್ಚೆ ಹಾಗೂ ನಿರ್ಣಯ ಆಗುತ್ತದೆ ಎಂದು ಹೇಳಿದರು.