Kodagu
ನಾಪೋಕ್ಲು ಬಳಿಯ ಹಳೆತಾಲೂಕು ಅಂಗನವಾಡಿ ಕೇಂದ್ರದಲ್ಲಿ ಯಶಸ್ವಿಯಾಗಿ ನಡೆದ ಪೋಷಣ್ ಮಾಸಾಚರಣೆ ಕಾರ್ಯಕ್ರಮ
ನಾಪೋಕ್ಲು :ನಾಪೋಕ್ಲು ಬಳಿಯ ಹಳೆತಾಲೂಕು ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಅಭಿಯಾನ ಮಾಸಾಚರಣೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಸ್ಥಳದಾನಿಗಳು ಹಾಗೂ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕುಲ್ಲೇಟಿರ ಅರುಣ್ ಬೇಬ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಜಿಲ್ಲಾ ಮಟ್ಟದ ಉಪನಿರ್ದೇಶಕಿ ಸುಮಂಗಲ ಜಿ.ಹಿರೇಮನಿ ಉದ್ಘಾಟಿಸಿ ಮಾತನಾಡಿ ಪೋಷಣ್ ಅಭಿಯಾನದ ಉದ್ದೇಶ ಹಾಗೂ ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ಪೌಷ್ಟಿಕ ಆಹಾರದ ಮಹತ್ವದ ಕುರಿತು ಮಾಹಿತಿ ನೀಡಿದರು.
ನಿರೂಪಣಾಧಿಕಾರಿ ಪ್ರಸನ್ನ ಕುಮಾರ್ ಮಾತನಾಡಿ, ಮಕ್ಕಳು, ಗರ್ಭಿಣಿಯರು ಹಾಗೂ ಬಾಣಂತಿಯರಲ್ಲಿ ಅಪೌಷ್ಟಿಕತೆ ಮತ್ತು ರಕ್ತಹೀನತೆ ತಡೆಗಟ್ಟುವುದರ ಜೊತೆಗೆ ಶಿಶು ಮರಣ ಪ್ರಮಾಣವನ್ನು ಕಡಿಮೆ ಮಾಡುವ ಉದ್ದೇಶದಿಂದ ಪೋಷಣ್ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಶಿಶುಅಭಿವೃದ್ಧಿ ಯೋಜನಾಧಿಕಾರಿ ಮಹೇಶ್ ಡಿ.ಎಚ್.ಮಾತನಾಡಿ, ಪೋಷಣ್ ಮಾಸಾಚರಣೆಯನ್ನು 2018ರಿಂದ ಆಚರಿಸಲಾಗುತ್ತಿದ್ದು, ಆರೋಗ್ಯಕರ ಆಹಾರ ಸೇವನೆಯಿಂದ ಆರೋಗ್ಯ ವೃದ್ಧಿಯಾಗುತ್ತದೆ ಎಂದು ತಿಳಿಸಿದರು.
ಕೋ-ಆಪರೇಟಿವ್ ಮಹಿಳಾ ಸಮಾಜದ ಅಧ್ಯಕ್ಷೆ ಬಿದ್ದಾಟಂಡ ಮೇರಿ ಚಿಟ್ಯಪ್ಪ, ತಾಲೂಕು ಗ್ಯಾರಂಟಿ ಸಮಿತಿ ಸದಸ್ಯ ಪಿ. ಎಂ.ಆರಫಾತ್, ಆರೋಗ್ಯ ಇಲಾಖೆಯ ವೇದಾವತಿ ಹಾಗೂ ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಸೋನಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಪೋಷಣ್ ಅಭಿನಂದನಾ ಪತ್ರಗಳನ್ನು ಗಣ್ಯರು ವಿತರಿಸಿದರು. ಅಂಗನವಾಡಿ ವ್ಯಾಪ್ತಿಯ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮವನ್ನು ಕೂಡ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಗರ್ಭಿಣಿಯರು, ಬಾಣಂತಿಯರು, ಕಿಶೋರಿಯರು, ಸಂಘದ ಸದಸ್ಯರು, ತಾಯಂದಿರು, ಭಗವತಿ ಮಹಿಳಾ ಸಮಾಜದ ಆಡಳಿತ ಮಂಡಳಿ ಸದಸ್ಯರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೀತಾಲಕ್ಷ್ಮಿ ಸ್ವಾಗತಿಸಿದರು. ಅಂಗನವಾಡಿ ಕೇಂದ್ರದ ಮೇಲ್ವಿಚಾರಕಿ ಶೀಲಾ ಅಶೋಕ್ ವಂದಿಸಿದರು.
ವರದಿ :ಝಕರಿಯ ನಾಪೋಕ್ಲು
Kodagu
ಪ್ರಜಾಪ್ರಭುತ್ವದ ಆಶಯ ಅರಿಯಲು ಯುವಸಂಸತ್ತು ಸಹಕಾರಿ
ಕುಶಾಲನಗರ : ಪ್ರಜಾಪ್ರಭುತ್ವ ವ್ಯವಸ್ಥೆಯ ಆಶಯ, ಸಂಸದೀಯ ಕಾರ್ಯವಿಧಾನ ಹಾಗೂ ಜನಪ್ರತಿನಿಧಿಗಳ ಜವಾಬ್ದಾರಿಯನ್ನು ಯುವಜನರು ಅರಿತುಕೊಳ್ಳಲು ಯುವಸಂಸತ್ತು ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಅಶೋಕ ಸಂಗಪ್ಪ ಆಲೂರ ಅಭಿಪ್ರಾಯಪಟ್ಟರು.

ಕೊಡಗು ವಿಶ್ವವಿದ್ಯಾಲಯದ ಜ್ಞಾನ ಕಾವೇರಿ ಆವರಣದಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉನ್ನತ ಶಿಕ್ಷಣ ಇಲಾಖೆ ಹಾಗೂ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ, ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕುಗಳ ಸಂಯುಕ್ತ ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ 2026ನೇ ಸಾಲಿನ ಯುವಸಂಸತ್ತು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯುವಸಂಸತ್ತಿನಲ್ಲಿ ವಿದ್ಯಾರ್ಥಿಗಳು ಸಂಸದೀಯ ಕಲಾಪದ ಮಾದರಿಯಲ್ಲಿ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಪ್ರಶ್ನೋತ್ತರ, ಚರ್ಚೆ, ವಿಚಾರ ಮಂಡನೆ ಹಾಗೂ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಗಳ ಮೂಲಕ ಸಂಸದೀಯ ಪ್ರಜಾಪ್ರಭುತ್ವದ ಕಾರ್ಯವೈಖರಿಯನ್ನು ವಿದ್ಯಾರ್ಥಿಗಳು ಅರಿತುಕೊಂಡರು.
ಯುವಜನರಲ್ಲಿ ನಾಯಕತ್ವ ಗುಣ, ಸಂವಹನ ಕೌಶಲ, ಆತ್ಮವಿಶ್ವಾಸ ಹಾಗೂ ಸಾಮಾಜಿಕ ಮತ್ತು ರಾಜಕೀಯ ಜವಾಬ್ದಾರಿಯನ್ನು ಬೆಳೆಸುವಲ್ಲಿ ಇಂತಹ ಕಾರ್ಯಕ್ರಮಗಳು ಮಹತ್ವದ ಪಾತ್ರ ವಹಿಸುತ್ತವೆ. ಸಂವಿಧಾನದ ಆಶಯಗಳು, ಪ್ರಜಾಪ್ರಭುತ್ವದ ಮೌಲ್ಯಗಳು, ಹಕ್ಕುಗಳು ಮತ್ತು ಕರ್ತವ್ಯಗಳ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಕೊಡಗು ವಿಶ್ವವಿದ್ಯಾಲಯದ ಕುಲಸಚಿವರು ಮೌಲ್ಯಮಾಪನ ಡಾ. ಸುರೇಶ್ ಎಂ., ತಾಲೂಕು ಮಟ್ಟದ ಯುವಸಂಸತ್ತು ಸಮಿತಿ, ಸೋಮವಾರಪೇಟೆಯ ಸಂಚಾಲಕ ಹಾಗೂ ತಹಶೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ, ಸಮಿತಿಯ ಕಾರ್ಯದರ್ಶಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ ಎಂ., ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಹಾಗೂ ಸಮಿತಿ ಸದಸ್ಯ ಸಿದ್ದೇಗೌಡ, ತಾಲೂಕು ವಕೀಲರ ಸಂಘದ ಅಧ್ಯಕ್ಷರು ಹಾಗೂ ಸಮಿತಿ ಸದಸ್ಯರು ಸೇರಿದಂತೆ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಪತ್ರಕರ್ತ ಚಂದ್ರಮೋಹನ್, ಪ್ರಾಧ್ಯಾಪಕಿ ಡಾ. ನಿರ್ಮಲ ಹಾಗೂ ವಕೀಲ ಯತೀಶ್ ಅವರು ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. ವಿದ್ಯಾರ್ಥಿಗಳ ವಿಷಯ ಮಂಡನೆ, ಸಂಸದೀಯ ನಡವಳಿಕೆ, ವಿಷಯದ ಅರಿವು, ಭಾಷಾ ಬಳಕೆ, ಸಮಯಪಾಲನೆ ಹಾಗೂ ಚರ್ಚೆಯಲ್ಲಿ ಪಾಲ್ಗೊಂಡ ರೀತಿಯನ್ನು ಆಧರಿಸಿ ಮೌಲ್ಯಮಾಪನ ಮಾಡಲಾಯಿತು.
ಯುವ ಸಂಸತ್ತಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಲ್ಲಿ ಕುಶಾಲನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಲೋಹಿತ್ ಪ್ರಥಮ ಸ್ಥಾನ, ಕೊಡಗು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮೋಹನ್ ಹೆಚ್.ಎಂ. ದ್ವಿತೀಯ ಸ್ಥಾನ ಮತ್ತು ಸೋಮವಾರಪೇಟೆಯಲ್ಲಿನ ಸೆಂಟ್ ಜೋಸೆಫ್ ಪ್ರಥಮ ದರ್ಜೆ ಕಾಲೇಜಿನ ಮೋಹನ್ ಮತ್ತು ಜ್ಞಾನ ಕಾವೇರಿ ಆವರಣದ ಕನ್ನಡ ವಿಭಾಗ ಪ್ರೀತ ಸಿ., ಅವರು ಜಂಟಿಯಾಗಿ ತೃತೀಯ ಸ್ಥಾನ ಪಡೆದುಕೊಂಡರು. ಇದೇ ಸಂದರ್ಭದಲ್ಲಿ ಜಿಲ್ಲಾಮಟ್ಟಕ್ಕೂ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಯಿತು
ಕಾರ್ಯಕ್ರಮದಲ್ಲಿ ಕೊಡಗು ವಿಶ್ವವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು, ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು, ಮಾಧ್ಯಮ ವೃಂದದವರು, ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು, ಯುವಸಂಸತ್ತು ಸಮಿತಿಯ ಸದಸ್ಯರು, ಪೋಷಕರು, ಪಾಲಕರು ಹಾಗೂ ಮತ್ತಿತರರು ಭಾಗವಹಿಸಿದ್ದರು.
ಬಿಆರ್ಸಿ ಮಂಜೇಶ್ ನಿರೂಪಿಸಿದರು, ಕೊಡಗು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಉಪನ್ಯಾಸಕ ಡಾ. ಜಮೀರ್ ಅಹ್ಮದ್ ಸ್ವಾಗತಿಸಿದರು.
Kodagu
ಶಿಕ್ಷಣಕ್ಕಿಂತ ಸಂಸ್ಕಾರ ಬಹು ಮುಖ್ಯ – ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ
ವಿರಾಜಪೇಟೆ: ಜೀವನದಲ್ಲಿ ಶಿಕ್ಷಣ ಪಡೆಯುವುದು ಬಹಳ ಮಹತ್ವದಲ್ಲ. ಶಿಕ್ಷಣಕ್ಕಿಂತ ಸಂಸ್ಕಾರ ಪಡೆದುಕೊಳ್ಳುವುದು ಬಹು ಮುಖ್ಯ. ಜಾತಿ,ಮತ,ಬೇದ, ಧರ್ಮ, ಪಂಕ್ತಿ ಮರೆತು ಸೇವೆ ಮಾಡುತ್ತಿರುವ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಅವರ ಕಾರ್ಯ ಶ್ಲಾಘನೀಯ ಹಾಗು ಪ್ರಶಂಸನೀಯ ಎಂದು ವಿರಾಜಪೇಟೆ ಅರಮೇರಿ ಕಳಂಚೇರಿ ಮಠಾಧೀಶ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

ವಿರಾಜಪೇಟೆ ತಾಲೂಕಿನ ರಾಮನಗರ ಹೆಗ್ಗಳದ ಶ್ರೀ ಪುದುಪಾಡಿ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಸಭಾಂಗಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.), ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿರಾಜಪೇಟೆ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ ಹಾಗೂ ಕೊಡಗು ಜಿಲ್ಲೆ, ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನ ಮುಕ್ತಿ ಮತ್ತು ಸಂಶೋಧನಾ ಕೇಂದ್ರ ಹಾಗೂ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳ ಬೆಂಗಳೂರು ಇವರ ನೇತೃತ್ವ, ಇದರೊಂದಿಗೆ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ವಿರಾಜಪೇಟೆ ಮತ್ತು ಅಮತ್ತಿ ವಲಯ, ಗ್ರಾಮ ಪಂಚಾಯಿತಿ ಬೇಟೋಳಿ, ಸಮುದಾಯ ಆರೋಗ್ಯ ಕೇಂದ್ರ ವಿರಾಜಪೇಟೆ, ನಗರ ಆರಕ್ಷಕ ಠಾಣೆ ವಿರಾಜಪೇಟೆ, ನವಜೀವನ ಸಮಿತಿ ವಿರಾಜಪೇಟೆ ತಾಲೂಕು, ಶ್ರೀ ಕ್ಷೇತ್ರ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕ ವಿರಾಜಪೇಟೆ ತಾಲೂಕು ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳು ಮತ್ತು ಊರಿನ ದಾನಿಗಳ ಸಹಕಾರದೊಂದಿಗೆ ಆಯೋಜಿಸಲಾಗಿದ್ದ ಮದ್ಯವ್ಯರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ ಮನುಷ್ಯನಿಗೆ ಮನಸ್ಸೆ ಶ್ರೇಷ್ಠ.
ಮದ್ಯವರ್ಜನ ಶಿಬಿರಗಳಿಂದ ನಾವು ಪರಿವರ್ತನೆ ಆದರೆ ಸಾಲದು ನಮ್ಮ ಪರಿಸರದ ಸುತ್ತಮುತ್ತಲಿರುವ ಜನರನ್ನು ಪರಿವರ್ತನೆ ಆಗುವ ರೀತಿಯಲ್ಲಿ ಮಾಡಬೇಕು. ನಮ್ಮ ಇಂದ್ರಿಯಗಳನ್ನು ಹತೋಟಿಯಲ್ಲಿ ಇಟ್ಟುಕೊಂಡರೆ ನಮ್ಮ ವ್ಯಕ್ತಿತ್ವವನ್ನು ನಾವೇ ರೂಪಿಸಿ ಕೊಳ್ಳಬಹುದಾಗಿದೆ. ಕಣಜ ಹುಳು ಇನ್ನಾವುದೋ ಹುಳುವನ್ನು ತಂದು ನನ್ನಂತೆ ಮಾಡಿಕೊಳ್ಳಬೇಕಾದರೆ ಪರಿಸರದಲ್ಲಿ ಎಲ್ಲಾ ವ್ಯವಸ್ಥೆ ಸಿಗುವ ಮನುಷ್ಯನಿಗೆ ಪರಿವರ್ತನೆ ಯಾಕೆ ಸಾಧ್ಯವಿಲ್ಲ. ನಮ್ಮಲ್ಲಿರುವ ಇಚ್ಚಾಶಕ್ತಿ ಕೊರೆತೆಯಿಂದ ನಾವು ಎಲ್ಲಾವನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ಹೇಳಿದರು.
ಜಿಲ್ಲಾ ಜನ ಜಾಗೃತಿ ವೇದಿಕೆ ಸ್ಥಾಪಕ ಅಧ್ಯಕ್ಷ ಮಾಳೇಟಿರ ಅಭಿಮನ್ಯು ಕುಮಾರ್ ಮಾತನಾಡಿ ಮದ್ಯಪಾನದಿಂದಾಗಿ ತಾಯಂದಿರು ಹಾಗು ಹೆಣ್ಣುಮಕ್ಕಳು ಅನುಭವಿಸುತ್ತಿರುವ ನರಕಯಾತನೆ, ಮದ್ಯ ವ್ಯಸನಿಗಳಿಗೆ ಗೌರವ ಶೂನ್ಯ, ಕುಟುಂಬ ನಿರ್ವಹಣೆ ಕಷ್ಟ ಸಾದ್ಯ, ಸಮಾಜದಲ್ಲಿ ನಡೆಸುತ್ತಿರುವ ಕಳಂಕಿತ ಜೀವನವನ್ನು ಅರಿತು ಮದ್ಯದಿಂದ ಆಗುವ ದುಷ್ಪರಿಣಾಮಗಳನ್ನು ಇಡಿ ಜಗತ್ತಿಗೆ ಸಾರಿ ಹೇಳುವ ಉದ್ದೇಶದಿಂದ ಮದ್ಯವರ್ಜನ ಶಿಬಿರಗಳ ಅಭಿಯಾನವನ್ನು ಆರಂಭಿಸಿ ಲಕ್ಷಾಂತರ ಮದ್ಯ ವ್ಯಸನಿಗಳಿಗೆ ನವಜೀವನವನ್ನು ನೀಡಿದ್ದಾರೆ. ಕುಡಿದು ಹಾಳಾಗುವುದನ್ನು ಮನಗಂಡ ಧರ್ಮಸ್ಥಳದ ಧರ್ಮಧಿಕಾರಿ ವೀರೇಂದ್ರ ಹೆಗ್ಗಡೆಯವರು ಮದ್ಯವರ್ಜನ ಶಿಬಿರಗಳನ್ನು ಆಯೋಜಿಸಿ ಯಶ ಸಾಧಿಸಿದ್ದಾರೆ. ೭೪ ಶಿಬಿರಾರ್ಥಿಗಳು ಮದ್ಯವನ್ನು ತ್ಯಜಿಸಿ ನವಜೀವನವನ್ನು ಪ್ರಾರಂಭಿಸುತ್ತಿರುವುದು ಹರ್ಷದಾಯಕ ಎಂದು ಹೇಳಿದರು.
ಜಿಲ್ಲಾ ನಿರ್ಧೇಶಕ ವಿಠಲ್ ಸಾಲಿಯಾನ್ ಮಾತನಾಡಿ ೨೧೩೧ ನೇ ಶಿಬಿರವು ಯಶಸ್ವಿಯಾಗಿ ತಲುಪಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದ ಅವರು, ಕುಡಿತದ ಬಲೆಯಿಂದ ಹೊರಬರಲು ಬಯಸುವವರಿಗೆ ಇಲ್ಲಿ ಸಂಪೂರ್ಣ ವೈಜ್ಞಾನಿಕ ಆಪ್ತಸಮಾಲೋಚನೆ ಹಾಗೂ ಪುನರ್ಜನ್ಮ ನೀಡುವ ವಾತಾವರಣ ಕಲ್ಪಿಸಲಾಗುತ್ತದೆ. ಕೇವಲ ಕುಡಿತದಿಂದ ವಿಮುಕ್ತಿ ಹೊಂದಿದರೆ ಸಾಲದು. ತಂಬಾಕು ಸೇವನೆಗಳಿಂದ ಹೊರ ಬರಬೇಕು. ಕುಡಿತದಿಂದ ಉದರದಲ್ಲಿ ಆಗುವ ತೊಂದರೆಗಳಿಂದ ಮುಕ್ತಿ ಪಡೆಯಲಾಗುತ್ತದೆ. ತಂಬಾಕಿನಿಂದ ಆಗುವ ಸಮಸ್ಯೆಗಳನ್ನು ನೀವಾಗಿಯೇ ಸರಿ ಪಡಿಸಿ ಕೊಳ್ಳಬೇಕು. ಕುಡಿತ ಮುಕ್ತರಾಗಿ ನವ ಜೀವನ ಸಾಗಿಸುವ ನಿಮಗೆ ಶುಭವಾಗಲಿ ಎಂದು ಹೇಳಿದರು.
ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ನಿಕಟ ಪೂರ್ವ ಅಧ್ಯಕ್ಷ ಬಾನಂಗಡ ಅರುಣ್ ಕುಮಾರ್ ಮಾತನಾಡಿ ಕುಡಿತದಿಂದ ಕೇವಲ ವ್ಯಕ್ತಿಯ ಆರೋಗ್ಯವಷ್ಟೇ ಅಲ್ಲದೆ, ಇಡೀ ಕುಟುಂಬವೇ ಆರ್ಥಿಕ ಹಾಗೂ ಮಾನಸಿಕವಾಗಿ ಬೀದಿಪಾಲಾಗಲು ಮದ್ಯವೇ ಮೂಲ ಕಾರಣವಾಗುತ್ತಿದೆ ಎಂದು ಹೇಳಿದರು.
ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ.ವಿ. ಜೇಮ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಎಂಟು ದಿನಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ಯಾವುದೇ ಕುಂದು ಕೊರತೆ ಬಾರದ ರೀತಿಯಲ್ಲಿ ಸಹಕಾರ ನೀಡಿದ ಶಿಭಿರಾರ್ಥಿಗಳು ಸೇರಿದಂತೆ ಎಲ್ಲಾರನ್ನು ಸ್ಮರಿಸಿದರು.
ವೇದಿಕೆಯಲ್ಲಿ ಉಡುಪಿ ಪ್ರಾದೇಶಿಕ ಕಚೇರಿ ಜನಜಾಗೃತಿ ಯೋಜನಾಧಿಕಾರಿ ಗಣೇಶ್ ಆಚಾರ್ಯ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಕೋಳೆರ ದಯಾ ಚಂಗಪ್ಪ, ಪಳೆಯಂಡ ಪಾರ್ಥ ಚಿಣ್ಣಪ್ಪ, ವಿ.ಎಂ ಸುಬ್ರಮಣಿ, ವಿರಾಜಪೇಟೆ ತಾಲೂಕು ಯೋಜನಾಧಿಕಾರಿ ಹರೀಶ್, ಕೃಷಿ ಮೇಲ್ವಿಚಾರಕರಾದ ವಸಂತ್, ಧನೆಶ್, ಜ್ಞಾನ ವಿಕಾಸ ಕೆಂದ್ರದ ಸಮನ್ವಯಾಧಿಕಾರಿ ಉಷಾರಾಣಿ, ಪುದುಪಾಡಿ ಅಯ್ಯಪ್ಪ ಸ್ವಾಮಿ ದೇವಸ್ಥಾನ ಸಮಿತಿ ಅಧ್ಯಕ್ಷ ಬಿ.ಪಿ. ಸಂತೋಷ್, ಮದ್ಯವ್ಯರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿಯ ಗೌರವಾಧ್ಯಕ್ಷರಾದ ಲಕ್ಷ್ಮಿ ಶಶಿಕಾಂತ್ ಸುಮನ ಪ್ರವೀಣ್ ಉಪಸ್ಥಿತರಿದ್ದರು.
Kodagu
ನಾಟಕದ ಮೂಲಕ ಸಾಮಾಜಿಕ ಭದ್ರತೆ, ಸೈಬರ್ ವಂಚನೆ ಬಗ್ಗೆ ಅರಿವು
ಮಡಿಕೇರಿ: ಸಾಮಾಜಿಕ ಭದ್ರತಾ ಯೋಜನೆಗಳ ಸೌಲಭ್ಯಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಹಾಗೂ ಸೈಬರ್ ವಂಚನೆಗಳಿಂದ ಗ್ರಾಹಕರನ್ನು ರಕ್ಷಿಸುವ ಉದ್ದೇಶದಿಂದ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ಮಡಿಕೇರಿ ಪ್ರಾದೇಶಿಕ ಕಚೇರಿವತಿಯಿಂದ ಮೇಕೆರಿ ಗ್ರಾಮದ ಶಾಲಾವರಣದಲ್ಲಿ ಶುಕ್ರವಾರ ನಾಟಕದ ಮೂಲಕ ವಿಶೇಷ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಯಿತು.

ಬ್ಯಾಂಕಿನ ಪ್ರಾದೇಶಿಕ ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ನಾಟಕದ ಮೂಲಕ ಸಾರ್ವಜನಿಕರಿಗೆ ಸಾಮಾಜಿಕ ಭದ್ರತೆ, ಸುರಕ್ಷಿತ ಜೀವನ ಹಾಗೂ ಬ್ಯಾಂಕಿಂಗ್ ವ್ಯವಹಾರಗಳಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆಗಳ ಕುರಿತು ಅರಿವು ಮೂಡಿಸಿದರು. ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (ಪಿಎಂಜೆಜೆಬಿವೈ), ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪಿಎಂಎಸ್‌ಬಿವೈ), ಅಟಲ್ ಪಿಂಚಣಿ ಯೋಜನೆ (ಎಪಿವೈ) ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಕುರಿತು ಮಾಹಿತಿ ನೀಡಲಾಯಿತು. ಸೌಲಭ್ಯಗಳು ಹಾಗೂ ಭವಿಷ್ಯದ ಆರ್ಥಿಕ ಭದ್ರತೆಗೆ ಅವುಗಳ ಮಹತ್ವವನ್ನು ತಿಳಿಸಲಾಯಿತು.
ಇದೇ ವೇಳೆ, ಸೈಬರ್ ವಂಚನೆಗಳ ಮೂಲಕ ಹಣ ಕಳೆದುಕೊಳ್ಳುವ ಪ್ರಕರಣಗಳು, ಅಪರಿಚಿತ ಲಿಂಕ್‌ಗಳನ್ನು ತೆರೆಯುವುದು, ಅನಧಿಕೃತ ಅಪ್ಲಿಕೇಶನ್‌ಗಳನ್ನು ಮೊಬೈಲ್‌ನಲ್ಲಿ ಇನ್‌ಸ್ಟಾಲ್ ಮಾಡಿಕೊಳ್ಳುವುದು ಹಾಗೂ ಬ್ಯಾಂಕಿಂಗ್ ಮಾಹಿತಿಯನ್ನು ಅಪರಿಚಿತರೊಂದಿಗೆ ಹಂಚಿಕೊಳ್ಳುವುದರಿಂದ ಉಂಟಾಗಬಹುದಾದ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು. ಡಿಜಿಟಲ್ ವಹಿವಾಟು ನಡೆಸುವಾಗ ಎಚ್ಚರಿಕೆ ವಹಿಸುವುದು, ಒಟಿಪಿ ಹಾಗೂ ಬ್ಯಾಂಕ್ ಖಾತೆಯ ಗೌಪ್ಯ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳದಿರುವುದು ಸೇರಿದಂತೆ ಸುರಕ್ಷಿತ ಬ್ಯಾಂಕಿಂಗ್ ಕ್ರಮಗಳನ್ನು ವಿವರಿಸಲಾಯಿತು.
ಪ್ರಾದೇಶಿಕ ವ್ಯವಸ್ಥಾಪಕರಾದ ಉದಯಕುಮಾರ್ ಮಾತನಾಡಿ, ಇಂದಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಆರ್ಥಿಕ ಭದ್ರತೆ ಹಾಗೂ ಬ್ಯಾಂಕಿಂಗ್ ವ್ಯವಹಾರಗಳ ಕುರಿತು ಸಮರ್ಪಕ ಅರಿವು ಅಗತ್ಯವಾಗಿದೆ. ಕೇಂದ್ರ ಸರ್ಕಾರದ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳು ಸಾಮಾನ್ಯ ಜನರಿಗೆ ವಿಮಾ ರಕ್ಷಣೆ ಮತ್ತು ಭವಿಷ್ಯದ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶ ಹೊಂದಿವೆ. ಅರ್ಹ ಗ್ರಾಹಕರು ಈ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬೇಕು. ಅನಿರೀಕ್ಷಿತ ಸಂದರ್ಭಗಳಲ್ಲಿ ವಿಮಾ ಯೋಜನೆಗಳು ಕುಟುಂಬಗಳಿಗೆ ಆರ್ಥಿಕ ನೆರವಾಗಬಲ್ಲವು ಎಂದರು.
ಸೈಬರ್ ವಂಚನೆಗಳ ಕುರಿತು ಮಾತನಾಡಿದ ಅವರು, ತಂತ್ರಜ್ಞಾನದ ಬಳಕೆ ಹೆಚ್ಚಾದಂತೆ ಆನ್‌ಲೈನ್ ವಂಚನೆಗಳ ಬಗ್ಗೆಯೂ ಎಚ್ಚರಿಕೆ ಅಗತ್ಯವಾಗಿದೆ. ಅಪರಿಚಿತ ವ್ಯಕ್ತಿಗಳಿಂದ ಬರುವ ಕರೆಗಳು, ಸಂದೇಶಗಳು ಹಾಗೂ ಲಿಂಕ್‌ಗಳಿಗೆ ಪ್ರತಿಕ್ರಿಯಿಸುವಾಗ ಜಾಗರೂಕರಾಗಿರಬೇಕು. ಬ್ಯಾಂಕ್ ಅಧಿಕಾರಿಗಳೆಂದು ಹೇಳಿಕೊಂಡು ಕರೆ ಮಾಡುವವರಿಗೆ ಒಟಿಪಿ, ಪಿನ್ ಅಥವಾ ಖಾತೆಯ ಗೌಪ್ಯ ಮಾಹಿತಿಯನ್ನು ನೀಡಬಾರದು. ಅನುಮಾನಾಸ್ಪದ ವಹಿವಾಟು ಕಂಡುಬಂದಲ್ಲಿ ತಕ್ಷಣ ಬ್ಯಾಂಕಿನ ಗಮನಕ್ಕೆ ತರಬೇಕು. ಸಾರ್ವಜನಿಕರಲ್ಲಿ ಇಂತಹ ವಿಚಾರಗಳ ಕುರಿತು ಜಾಗೃತಿ ಮೂಡಿಸುವಲ್ಲಿ ನಾಟಕದಂತಹ ಸರಳ ಮತ್ತು ಪರಿಣಾಮಕಾರಿ ಮಾಧ್ಯಮಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬ್ಯಾಂಕಿನ ಪ್ರಾದೇಶಿಕ ಕಚೇರಿಯ ಅಧಿಕಾರಿಗಳು, ಸಿಬ್ಬಂದಿ, ಗ್ರಾಮಸ್ಥರು ಹಾಗೂ ಗ್ರಾಹಕರು ಉಪಸ್ಥಿತರಿದ್ದರು.
-
Mysore24 hours agoನಂಜನಗೂಡು ದೇಬೂರು ಸರ್ಕಾರಿ ಕಾಲೇಜಿನ ಆವ್ಯವಸ್ಥೆ ಬಯಲು : ಮಾಜಿ ಶಾಸಕ ಬಿ.ಹರ್ಷವರ್ಧನ್ ಖುದ್ದು ಭೇಟಿ
-
Chikmagalur22 hours agoಉಪ ವಲಯ ಅರಣ್ಯಾಧಿಕಾರಿ ರವಿಕುಮಾರ್ ಅಮಾನತು
-
National23 hours agoಜಿಎಸ್ಟಿ ಅಡಿಯಲ್ಲಿ ಬಂಧನ ಅಧಿಕಾರ ರದ್ದು ಪ್ರಸ್ತಾವನೆ: ವಿಚಾರಣಾ ಮಿತಿ ₹5 ಕೋಟಿಗೆ ಹೆಚ್ಚಳ
-
National6 hours agoಇಸ್ರೇಲ್ನಿಂದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ಗೆ ಶೌರ್ಯ ಪ್ರಶಸ್ತಿ ಘೋಷಣೆ
-
Manglore4 hours agoಕೊರಿಯರ್ನಲ್ಲಿ ಎಂಡಿಎಂಎ ಸಾಗಿಸುತ್ತಿದ್ದ ಜಾಲಕ್ಕೆ ಪೊಲೀಸ್ ಬಲೆ- ಮೂವರು ಅರೆಸ್ಟ್, 1.58 ಕೋಟಿ ಮಾದಕದ್ರವ್ಯ ವಶಕ್ಕೆ
-
Mandya6 hours agoಯುವ ಸಂಭ್ರಮ, ದಸರಾ ಕಾರ್ಯಕ್ರಮಗಳ ಸಿದ್ಧತೆ ಪೂರ್ಣಗೊಳಿಸಲು ಶಾಸಕ ರಮೇಶ್ ಬಂಡಿಸಿದ್ದೇಗೌಡ ಸೂಚನೆ
-
Chamarajanagar6 hours agoಭಾರಿ ಯಂತ್ರ ಸಾಗಿಸುತ್ತಿದ್ದ ಲಾರಿಯಿಂದ ವಿದ್ಯುತ್ ಅವಘಡ – 7 ಕಂಬಗಳು ಧರೆಗೆ!
-
Chikmagalur4 hours agoಮಳೆ ಇಲ್ಲ, ಬೆಳೆ ಇಲ್ಲ, ಸಾಲದ ಹೊರೆ: ಕಡೂರಿನಲ್ಲಿ ಮೂರು ದಿನಗಳ ಅಂತರದಲ್ಲಿ ಇಬ್ಬರು ರೈತರ ಆ*ತ್ಮಹ*ತ್ಯೆ
